Connect with us

ಭಾಮಿನಿ

ಬದುಕಿ ಬಿಡಬೇಕು ನಮಗಲ್ಲವಾದರೂ ನಮ್ಮವರಿಗೋಸ್ಕರ..!

Published

on

ನಮ್ಮನ್ನೇ ಹಚ್ಚಿಕೊಂಡ- ನೆಚ್ಚಿಕೊಂಡ ನಮ್ಮದೇ ಕಂದಮ್ಮಗಳಿಗಾಗಿ

ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು ಕಾಲ್ ಮಾಡಿದ್ದಳು.”ವಿಷಯ ಗೊತ್ತಾಯ್ತಾ ನಯನಾಳ ಅಪ್ಪ ಸೂಸೈಡ್ ಮಾಡಿಕೊಂಡ್ರು ಅಂದ್ಲು” ದುಃಖದಿಂದ. ಒಂದು ಕ್ಷಣ ದಿಗ್ಭ್ರಾಂತಳಾದೆ. ನಯನಾ ಇನ್ನು ಪಿಯುಸಿ ಓದುತ್ತಿರುವ ಹೂ ಮೃದು ಮನಸ್ಸಿನ 16 ರ ಬಾಲೆ. ಈ ಆಘಾತವನ್ನು ಅವಳು ಹೇಗೆ ಅರಗಿಸಿಕೊಂಡಿರಬಹುದು. ಒಂದು ಕ್ಷಣ ಅದನ್ನು ನೆನೆದು ಕಣ್ಣಲ್ಲಿ ನೀರಾಡಿತು.

ತಂದೆ ಎಂಬುದು ಬರೀ ಎರಡಕ್ಷರದ ಪದವಲ್ಲ, ಒಬ್ಬ ಸಾಧಾರಣ ವ್ಯಕ್ತಿಯಾಗಿ ತನ್ನವರ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಸಂಸಾರದ ನೌಕೆಯನ್ನು ಸಾಗಿಸಬೇಕಾಗಿರುವ ಅಸಾಧಾರಣ ಧೀರ. ತನಗಿಂತ ತನ್ನ ಮಕ್ಕಳ ಯಶಸ್ಸಿಗೆ ಸದಾ ತುಡಿಯಬೇಕಿರುವ ಮಹಾಪುರುಷ. ಪ್ರತೀ ಮನೆಯ ಕಥಾ ನಾಯಕ. ಪ್ರತೀ ಮಗುವಿಗೂ ತಾಯಿ ಮೊದಲ ಗುರುವಾದರೆ, ತಂದೆ ಮೊದಲ ಹೀರೋ. ಮಕ್ಕಳಿಗೆ ಹೆತ್ತ ತಂದೆ-ತಾಯಿ ಯೇ ಸರ್ವಸ್ವ. ಅವರ ಹೊರತಾಗಿ ಪ್ರಪಂಚದಲ್ಲಿ ಯಾರೂ ಮುಖ್ಯರಲ್ಲ. ಜೀವನದಲ್ಲಿ ಯಾರೇ ಬಂದರೂ ಹೆತ್ತವರ ಜಾಗ ತುಂಬಲು ಎಂದಿಗೂ ಸಾಧ್ಯವಿಲ್ಲ. ಮಕ್ಕಳನ್ನು ಹುಟ್ಟಿಸಿ ,ಸಾಕಿ ಬೆಳೆಸಿ ,ರಕ್ಷಣೆ ಕೊಡುವುದರಿಂದ ಹಿಡಿದು ಕಡೆಗಾಲದವರೆಗೂ ಮಕ್ಕಳಿಗೆ ಹಾರೈಸಿ, ಹರಸ ಬೇಕಿರುವ ತಂದೆಯೇ ಯಾವುದೋ ಕಾರಣಕ್ಕೆ ನಡು ನೀರಲ್ಲಿ ಮಕ್ಕಳನ್ನು ತಬ್ಬಲಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದು, ಮಕ್ಕಳಿಗೆ ನಿತ್ಯ ನರಕದ ಬಾಗಿಲ್ಲನ್ನು ಹೆತ್ತ ತಂದೆಯೇ ತೆರೆಯುವುದು ಎಷ್ಟು ಸರಿ..?

ಅದೇಕೋ ಜವಾಬ್ದಾರಿ ಸ್ಥಾನದಲ್ಲಿ ಮೊದಲು ಎನಿಸಿರುವ ತಂದೆಯೇ ಆತ್ಮಹತ್ಯೆ ಸರತಿ ಸಾಲಿನಲ್ಲಿ ಮೊದಲು ನಿಲ್ಲುತ್ತಿರುವುದು ಚಿಂತೆಗೀಡು ಮಾಡುತ್ತದೆ. ಏಕೆಂದರೆ ಜವಾಬ್ದಾರಿ ಎಂದಾಕ್ಷಣ ಮೊದಲು ನೆನಪಾಗುವುದು ತಂದೆಯೇ. ಅಂತಹ ಜವಾಬ್ದಾರಿಯುತ ವ್ಯಕ್ತಿಯೇ ಆತ್ಮಹತ್ಯೆ ಎಂಬ ದುರುಳನ ಅತಿಥಿಯಾದರೆ. ತಂದೆಯನ್ನೇ ನೆಚ್ಚಿಕೊಂಡ ಹಚ್ಚಿಕೊಂಡ ಮಕ್ಕಳ-ಮಡದಿಯ ಪಾಡೇನು..?ಅಪಘಾತ, ಅನಾರೋಗ್ಯ ಮೊದಲಾದ ಆಕಸ್ಮಿಕ ಸಾವುಗಳು ನಮ್ಮ ಕೈಲಿಲ್ಲ ಒಪ್ಪಿಕೊಳ್ಳೋಣ. ಅವುಗಳು ವಿಧಿಲಿಖಿತ. ಈ ತರಹದ ಸಾವಿಗೆ ನಾವು ಹೊಣೆಗಾರರಲ್ಲ. ಆದರೆ ಆತ್ಮಹತ್ಯೆ ನಮ್ಮ ಕೈಗೊಂಬೆ ಅಲ್ಲವಾ…?

ಬದುಕಿನ ಸಂಕಷ್ಟಗಳಿಗೆ ಹೆದರಿ ಸಾಯುವ ಮೂಲಕ ಭಾವ-ಬಂಧನಗಳ ಕೊಂಡಿ ಕಳಚಿಕೊಳ್ಳುವುದು ಸರಿಯಲ್ಲ. ಜಯಿಸಬೇಕು ಇಲ್ಲೇ ಇದ್ದು, ಬದುಕಿದ್ದು. ಸಾಯುವ ಮುನ್ನ ಒಂದು ಬಾರಿ ನಿಮ್ಮನೇ ಹಚ್ಚಿಕೊಂಡ ನೆಚ್ಚಿಕೊಂಡ ನಿಮ್ಮದೇ ಕಂದಮ್ಮಗಳ ಬಗ್ಗೆ ಯೋಚಿಸಿ ನೋಡಿ, ನೀವಿಲ್ಲದ ಆ ಘನಘೋರವಾದ ನಿಮ್ಮದೇ ಮಕ್ಕಳ ಜೀವನವನ್ನು ಕಲ್ಪಿಸಿಕೊಳ್ಳಿ,ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೇನಾಗಿದೆ, ನಿಮ್ಮವರನ್ನೆಲ್ಲಾ ಬಿಟ್ಟು ಹೋಗುವಷ್ಟು ಕಠೋರ ನಿರ್ಧಾರ ತೆಗೆದುಕೊಳ್ಳುವಷ್ಟು ಮಟ್ಟಿಗೆ. ಅಷ್ಟಕ್ಕೂ ಪ್ರಪಂಚದಲ್ಲಿ ಯಾರೂ ಅನುಭವಿಸಲಾರದ ನೋವನ್ನು ನೀವು ಅನುಭವಿಸಿದ್ದೀರ..? ಮರಕ್ಕಿಂತ ಮರ ದೊಡ್ಡದೆಂಬಂತೆ ನಮಗಿಂತ ದೊಡ್ಡ ದೊಡ್ಡ ಕಷ್ಟಗಳನ್ನು ಎದುರಿಸುತ್ತಿರುವವರು ಸಾಕಷ್ಟಿದ್ದಾರೆ. ಹಾಗೆಂದು ಎಲ್ಲರೂ ಹೀಗೆ ಆತ್ಮಹತ್ಯೆ ಮಾಡಿಕೊಳ್ತಾರಾ..? ಇಲ್ಲ.. ಖಂಡಿತಾ ಇಲ್ಲ.

ಎಲ್ಲಾ ಕಷ್ಟಗಳ ಜಾಗವನ್ನು ಸುಖಗಳು ಬಂದು ಆಕ್ರಮಿಸುವ ದಿವ್ಯಘಳಿಗೆ ಬಂದೇ ಬರುತ್ತದೆ. ಬದುಕುವ ವಿಶ್ವಾಸ ,ತಾಳ್ಮೆಇರಬೇಕಷ್ಟೇ. ಗಂಡು ದಿಕ್ಕಿಲ್ಲದ ಅದೆಷ್ಟೋ ಮನೆಗಳಿಗೆ ತಂದೆಯೇ ಆಧಾರಸ್ತಂಭ. ಹೀಗಾಗಿ ಪಿತೃವಿಯೋಗ ಎಂಬುದು ಆ ಮಕ್ಕಳ ಪಾಲಿಗೆ ನರಕಕ್ಕಿಂತ ಮಿಗಿಲು. ತಂದೆಯ ರಕ್ಷಣಾ ಬೇಲಿಯಲ್ಲೇ ಹೂವಾಗಿ ಅರಳಬೇಕಾದ ಮಕ್ಕಳು ತಂದೆಯ ಆತ್ಮಹತ್ಯೆಯಿಂದ ಅರಳುವ ಮುನ್ನವೇ ಬಾಡಿ ಹೋಗಬಾರದು.

ಇಂದಿನ ಅನ್ನದ ಮಕ್ಕಳೇ ನಾಳೆಯ ಚಿನ್ನದ ಮಕ್ಕಳು ಎಂಬ ಮಾತೊಂದಿದೆ. ಅದು ಅಕ್ಷರಶಃ ಸತ್ಯ. ಹೀಗಾಗಿ ಆತ್ಮಹತ್ಯೆಯಂಥ ಕ್ರೂರ, ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ ನಿಮ್ಮ ಪ್ರೀತಿಯ ಮಡದಿ- ಮಕ್ಕಳ ಬಗ್ಗೆ. ಕಷ್ಟಗಳು, ಕೆಲವೊಂದು ಪರಿಸ್ಥಿತಿಗಳು ನಮ್ಮನ್ನ ಸಾಯುವಂತೆ ಕೈ ಬೀಸಿ ಕರೆಯಬಹುದು. ಆದರೆ ದೂರಾಲೋಚನೆ ಮಾಡಿ ನೋಡಿ ನಾಳೆ ನಿಮ್ಮ ಮಗನೋ-ಮಗಳೋ ಯಾವುದೋ ಕ್ಷೇತ್ರದಲ್ಲಿ ಸಾಧನೆ ಮಾಡಿ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಆ ಹೆಮ್ಮೆಯ ಪಟ್ಟ ನಿಮಗೆ ಬೇಡಬೇ..? ಆ ಸುಘಳಿಗೆಯನ್ನು ನೀವು ಕಣ್ತುಂಬಿಕೊಳ್ಳುವ ಸಲುವಾಗಿಯಾದರೂ ಬದುಕಿರಬೇಡವಾ…? ನಿಮ್ಮ ಕೈ ಯಿಂದ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ ನಿಮ್ಮ ಪ್ರೀತಿ, ಆಶೀರ್ವಾದ ಕೊಡಿ ಸಾಕು. ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಬದುಕಲೇ ಬೇಕು. ನಮಗಲ್ಲವಾದರೂ ನಮ್ಮವರಿಗೋಸ್ಕರ….

( -ಆಕಾಶಪ್ರಿಯ, ಪತ್ರಕರ್ತೆ, ಬೆಂಗಳೂರು)

ಭಾಮಿನಿ

ವರದಕ್ಷಿಣೆ ಹೆಸರಲ್ಲಿ ಹೆಣ್ಣಿನ ವ್ಯಾಪಾರ ; ಕೊನೆ ಎಂದು ?

Published

on

ಕೆ ಬಸ್ಸಿನಲ್ಲಿ ಕುಳಿತು ಫೋನಿನಲ್ಲಿ ಯಾರೊಂದಿಗೊ ಮಾತನಾಡುತ್ತಾ ತುಂಬಾ ಅಳುತ್ತಿದ್ದಳು. ದೇವರಿಗೆ ಶಾಪ ಹಾಕುತ್ತಿದ್ದಳು. ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಕೇಳಿಯೇ ಬಿಟ್ಟ. ಏನಮ್ಮಾ ನಿಂದು. ಇದು ಪಬ್ಲಿಕ್ ಬಸ್ ಎಲ್ಲರಿಗೂ ಡಿಸ್ಟರ್ಬ್ ಆಗ್ತಿದೆ ನೀನ್ ಮಾತಾಡ್ತಿರೋದು ಎಂದು ರೇಗಿದ. ಅದಕ್ಕೆಆಕೆ ನಿಮಗೇನು ಗೊತ್ತು ಸ್ವಾಮಿ ಹೆಣ್ಣೆತ್ತವರ ಸಂಕಟ ! ಎಂದಳು. ಅಷ್ಕಕ್ಕೂ ಆಕೆ ಮಾತನಾಡುತ್ತಿದ್ದಿದ್ದು ತನ್ನ ಅಳಿಯನೊಂದಿಗೆ. ನನ್ನ ಮಗಳಿಗೆ ಏನೂ ಮಾಡ್ಬೇಡ. ಹೇಗಾದ್ರೂ ಮಾಡಿ ನಿನ್ ಕೇಳಿದಷ್ಟು ದುಡ್ಡುಕೊಡ್ತೀನಿ ಅಂತಿದ್ಲು.

ಇದು ಆಕೆಯೊಬ್ಬಳ ಗೋಳಲ್ಲ. ಎಷ್ಟೋ ಹೆತ್ತ ಕರುಳಗಳ ನೋವಿನ ಕೂಗು. ಈಕೆ ಆ ಕೂಗಿಗೆ ದನಿಯಾದಳು ಅಷ್ಟೇ. ಹೌದು ಸಂಪ್ರದಾಯಸ್ಥ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮದುವೆ ಎಂಬುದು ಒಂದು ಮಹತ್ವಪೂರ್ಣ ಆಚರಣೆ. ಸಂಸ್ಕೃತಿ- ಸಂಸ್ಕಾರ , ಶಾಸ್ತ್ರ- ಸಂಪ್ರದಾಯಗಳ ನೆಲೆಗಟ್ಟಿನಲ್ಲಿ ಹೆಣ್ಣುಗಂಡಿನ ಸಂಬಂಧಗಳನ್ನು ಗಟ್ಟಿಗೊಳಿಸುವ, ಆರೋಗ್ಯಪೂರ್ಣ ಚೌಕಟ್ಟಿನೊಳಗೆ ಹೆಣ್ಣು-ಗಂಡುಗಳನ್ನು ಒಂದಾಗಿಸುವ ಒಂದು ಭಾವನಾತ್ಮಕ ನಂಟು. ಆದರೆ ಅಂದಿನಿಂದ ಇಂದಿನವರೆಗೂ ವರದಕ್ಷಿಣೆ ಎಂಬ ಪೆಡಂಭೂತದ ಸುಳಿಗೆ ಸಿಲುಕಿ ಈ ಆಚರಣೆ ಅರ್ಥ ಕಳೆದುಕೊಳ್ಳುತ್ತಿದೆಯಾ..! ಅವಸರದ ಮದುವೆಗಳಿಂದ ಹಿಡಿದು ಆಡಂಬರದ ಮದುವೆಗಳವರೆಗೂ ಎಲ್ಲರೂ ಮದುವೆ ಎಂದರೆ ಸಂಭ್ರಮಿಸುವವರೇ… ಆದರೆ ಈ ಸಂಭ್ರಮದ ಹಿಂದಿನ ಹೆತ್ತ ಕರುಳಿನ ನೋವು, ದುಡಿವ ಕೈಗಳ ಬೆವರ ಹನಿ ಯಾರ ಕಣ್ಣಿಗೂ ಕಾಣುತ್ತಿಲ್ಲ, ಅಥವಾ ಕಂಡರೂ ಈ ಸಮಾಜ ಕಣ್ಣಿದ್ದೂ ಕುರುಡಾದಂತಿದೆ.

ಅಷ್ಟಕ್ಕೂ ಈ ವರದಕ್ಷಿಣೆ ಎಂದರೇನು? ಮದುವೆ ಸಮಯದಲ್ಲಿ ವಧುವಿನ ಕಡೆಯವರು ವರನ ಕಡೆಯವರಿಗೆ ಉಡುಗೊರೆ ರೂಪದಲ್ಲಿ ನೀಡುವ ಹಣ,ಒಡವೆ. ವಾಹನ ಇತ್ಯಾದಿ ವಸ್ತುಗಳು.ಆದರೆ ಇವು ಪ್ರೀತಿಯಿಂದ ನೀಡುತ್ತಿದ್ದ ಉಡುಗೊರೆಗಳಾಗಿ ಉಳಿದಿಲ್ಲ, ಬದಲಾಗಿ ವಸೂಲಿ ಮಾಡುವ ಮಾರ್ಗಗಳಾಗಿವೆ.ಈ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳ ಹಿಂದಿನಿಂದಲೂ ಹೆಣ್ಣನ್ನು ಶೋಷಿಸುತ್ತಾ ಬರಲಾಗ್ತಿದೆ. ಈ ಹಾದಿಯಲ್ಲಿ ವರದಕ್ಷಿಣೆ ಎಂಬುದು ಹೆಣ್ಣನ್ನು ಶೋಷಿಸುತ್ತಿರುವ ರಾಜಮಾರ್ಗ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ವರದಕ್ಷಿಣೆಗಾಗಿ ಹೆಣ್ಣು ಮಕ್ಕಳನ್ನು ಬಲಿ ಕೊಡುತ್ತಿರುವ ಈ ಸಮಾಜವನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ತಾಯಿ, ತಂಗಿ, ಮಡದಿ ಅಂತೆಲ್ಲಾ ಹಾಡಿ ಹೊಗಳುವ ಈ ಸಮಾಜವೇ ದುಡ್ಡಿಗಾಗಿ ಅವಳನ್ನು ಮಾನಸಿಕವಾಗಿ ದೈಹಿಕವಾಗಿ ಹಿಂಸಿಸುತ್ತಿರುವುದು ದುರಂತವೇ ಸರಿ. ವಿಷಾದದ ಸಂಗತಿಯೆಂದರೆ ಅನ್ನದಾತ ಕೂಡ ಈ ವರದಕ್ಷಿಯ ಸಾಮಾಜಿಕ ಪಿಡುಗಿಗೆ ಪರೋಕ್ಷವಾಗಿ ಬಲಿಯಾಗುತ್ತಿರುವುದು. ಮಗಳ ಮದುವೆಗೆಂದು ಸಾಲ ಮಾಡಿ, ಕೊನೆಗೆ ಸಾಲದ ಹೊರೆ ಹೊರಲಾಗದೇ ತಾನೇ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತದೆ.

ಭಾರತದಲ್ಲಿ ಪ್ರತೀ ಗಂಟೆಗೆ ಒಂದು ಹೆಣ್ಣು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪುತ್ತಿದ್ದಾಳೆ. ಅಲ್ಲದೇ ದೇಶಾದ್ಯಂತ ಪ್ರತಿದಿನ 21 ಮಹಿಳೆಯರು ವರದಕ್ಷಿಣೆಗೆ ಬಲಿಯಾಗುತ್ತಿದ್ದಾರೆ.2009 ರಲ್ಲಿ ASIAN WOMEN’S HUMAN RIGHTS COUNCIL ನೀಡಿದ ವರದಿಯಲ್ಲಿ 15 ರಿಂದ 34 ವರ್ಷ ವಯಸ್ಸಿನ ಒಟ್ಟು 25,000 ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ ಎಂದು ತಿಳಿಸಿತ್ತು National crime records Bureau [ NCRB] ತನ್ನ ವರದಿಯಲ್ಲಿ 2012 ರಲ್ಲಿ ಸುಮಾರು 8,233 ಮಹಿಳೆಯರು ವರದಕ್ಷಿಣೆ ಗೆ ಬಲಿಯಾಗಿದ್ದಾರೆ ಎಂದು ತಿಳಿಸಿತ್ತು…. ಇನ್ನು ಇದೇ ವರ್ಷ ಗಂಡ ಹಾಗೂ ಆತನ ಮನೆಯವರ ವಿರುದ್ಧ ದಾಖಲಾದ ಕುಟುಂಬ ಕಿರುಕುಳ ಪ್ರಕರಣಗಳು 1,06,527 ಇತ್ತು. [ 2011 ರಲ್ಲಿ ಒಟ್ಟು 99,135 ಪ್ರಕರಣಗಳು ದಾಖಲಾಗಿದ್ದವು ] NCRB 2015 ರಲ್ಲಿ ವರದಕ್ಷಿಣೆ ಬಗ್ಗೆ ಬಿಡುಗಡೆ ಮಾಡಿದ ವರದಿಯಲ್ಲಿ ಸುಮಾರು 7,634 ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳನ್ನು ನೀಡಿತ್ತು.. 2017 ರ ಮಾರ್ಚ್ ವರೆಗೆ ಅಂದರೆ ಕೇವಲ ಮೂರು ತಿಂಗಳಲ್ಲಿ ದೆಹಲಿಯೊಂದರಲ್ಲೇ 31 ಮಹಿಳೆಯರು ಸಾವನ್ನಪ್ಪಿದ್ದರು ಎಂದು ಪೊಲೀಸ್ ಆಧಿಕಾರಿಯೊಬ್ಬರು ಹೇಳುತ್ತಾರೆ.. ಅಲ್ಲದೇ ಕಳೆದ 5 ವರ್ಷಗಳಲ್ಲಿ ರಾಜಧಾನಿ ದೆಹಲಿಯೊಂದರಲ್ಲೇ ಒಟ್ಟು 715 ವರದಕ್ಷಿಣೆ ಕೇಸ್ ಗಳು ದಾಖಲಾಗಿವೆ… 2016 ರಲ್ಲಿ ಗಂಡನ ವಿರುದ್ಧ ದಾಖಲಾದ ಕಿರುಕುಳಗಳ ಸಂಖ್ಯೆ 3,887…. ದುರಂತ ಎಂದರೆ ವರದಕ್ಷಿಣೆ ಸೇರಿದಂತೆ ದಾಖಲಾದ ಕಿರುಕುಳ ಕೇಸ್ ಗಳು ಶೇ. 93.7 % ಆದರೆ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಶೇ.34.7 % ರಷ್ಟು ಮಾತ್ರ. ಇದು ನಮ್ಮ ಕಾನೂನು ಮತ್ತು ನ್ಯಾಯಾಂಗದ ಕಾರ್ಯಗತಿಯ ವೇಗವನ್ನು ಬಿಂಬಿಸುತ್ತೆ ಅಲ್ಲವೇ… ಎಲ್ಲ ಆರೋಪಿಗಳಿಗೂ ಶಿಕ್ಷೆಯಾಗಲು ಇನ್ನು ಅದೆಷ್ಟೋ ಹೆಣ್ಣು ಮಕ್ಕಳು ಜೀವ ತೆರಬೇಕೋ ಏನೋ..!

ವರದಕ್ಷಿಣೆ ವಿರುದ್ಧದ ಕಾನೂನುಗಳನ್ನು ನೊಡುತ್ತಾ ಹೋದರೆ ಈ ಪಿಡುಗನ್ನು ಶಾಸನಾತ್ಮಕವಾಗಿ ನಿವಾರಣೆ ಮಾಡಲು ಭಾರತ ಸರ್ಕಾರ 1961 ರಲ್ಲಿ ವರದಕ್ಷಿಣೆ ನಿಷೇಧ ಕಾನೂನನ್ನು ಜಾರಿಗೊಳಿಸಿತು. ಈ ಕಾಯ್ದೆ ಉಲ್ಲಂಘಿಸಿದರೆ 5000 ರೂ ಗಳ ದಂಡ ಇಲ್ಲವೇ 6 ತಿಂಗಳ ಸೆರೆವಾಸ ಇಲ್ಲವೇ ಎರಡನ್ನೂ ಒಟ್ಟಿಗೆ ವಿಧಿಸಬಹುದಾಗಿದೆ.. ಅಲ್ಲದೇ ಈ ಕಾಯ್ದೆಯನ್ನು 1986 ರಲ್ಲಿ ತಿದ್ದುಪಡಿ ಮಾಡಿ ಮತ್ತಷ್ಟು ಕಠಿಣಗೊಳಿಸಲಾಗಿದೆ. ಈ ತಿದ್ದುಪಡಿಯಾದ ಕಾಯ್ದೆ ಪ್ರಕಾರ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಹಾಗೂ ಕೊಡುವಂತೆ ಒತ್ತಾಯಿಸುವ ವ್ಯಕ್ತಿಗಳಿಗೆ 5 ವರ್ಷಗಳಿಗೂ ಕಡಿಮೆ ಇರದ ಜೈಲು ಶಿಕ್ಷೆ ಮತ್ತು 15000 ರೂ ಗಳಿಗೆ ಕಡಿಮೆ ಇರದ ಹಣವನ್ನು ದಂಡವಾಗಿ ವಿಧಿಸಬಹುದು… ವರದಕ್ಷಿಣೆ ಸಾವು ಪ್ರಕರಣವನ್ನು ಭಾರತ ದಂಡ ಸಂಹಿತೆ [INDIAN PENAL CODE] ಹಾಗೂ ಭಾರತ ಅಪರಾಧ ವಿಚಾರಣಾ ಸಂಹಿತೆಗೆ [ CRIMINAL PROCEDURE CODE] ಸೇರ್ಪಡೆಗೊಳಿಸಲಾಗಿದೆ.ಇವು ಕೇವಲ ಕಾನೂನುಗಳಲ್ಲ. ಆಚರಿಸಿದರೆ ಅಸ್ತ್ರಗಳು.

ಆಧುನಿಕ ಸಮಾಜದಲ್ಲಿ ಬಹುಹಿಂದಿನ ಸಾಮಾಜಿಕ ಸಮಸ್ಯೆಗಳು ಅಂದರೆ ಬಾಲ್ಯ ವಿವಾಹ, ಸತೀ ಸಹಗಮನ, ಮುಂತಾದ ಆಚರಣೆಗಳ ಪ್ರಮಾಣ ಗಣನೀಯವಾಗಿ ಕುಗ್ಗುತ್ತಿದೆ.. ಆದರೆ ವರದಕ್ಷಿಣೆ ಮಾತ್ರ ಇನ್ನು ಅಸ್ತಿತ್ವದಲ್ಲಿರುವುದು, ಅಲ್ಲದೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರಂತವೇ ಸರಿ .ಪ್ರಜ್ಞಾವಂತ ಹಾಗೂ ನಾಗರಿಕ ಸಮಾಜ ಕೂಡ ಈ ಪಿಡುಗನ್ನು ಪೋಷಿಸುತ್ತಿರುವುದು ದುರದೃಷ್ಟಕರ. ಎಲ್ಲಿಯವರೆಗೆ ನಾವು ಅದನ್ನು ಪೋಷಿಸುತ್ತಾ ಹೋಗುತ್ತೇಯೋ ಅಲ್ಲಿಯವರೆಗು ಅದು ಬೆಳೆದು ಹೆಮ್ಮರವಾಗಿ ಬಿಡುತ್ತದೆ. ಈ ಸಾಮಾಜಿಕ ಸಮಸ್ಯೆಯನ್ನು ಕೇವಲ ಕಾನೂನು ಮೂಲಕವಲ್ಲದೇ ಜನಜಾಗೃತಿ ಆಧುನಿಕ ಪಚಾರ ಮಾಧ್ಯಮಗಳು,ಸ್ವಯಂ ಸೇವಾ ಸಂಘಟನೆಗಳು ಮತ್ತು ವರದಕ್ಷಿಣೆ ವಿರೋಧಿ ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಈ ವರದಕ್ಷಿಣೆ ಪಿಡುಗನ್ನು ತೊಲಗಿಸಬಹುದು.. ಇನ್ನು ವರದಕ್ಷಿಣೆ ಪಡೆದು ಹೆಚ್ಚಾಗಿರುವುದು ಎಷ್ಟೋ ನಿಜವೋ ಕೊಟ್ಟು ಕೊಟ್ಟು ಹೆಚ್ಚಾಗಿರುವುದು ಅಷ್ಟೇ ನಿಜ. ಹಾಗಾಗಿ ವರದಕ್ಷಿಣೆಯನ್ನು ಕೊಡುವುದನ್ನು ಮೊದಲು ನಿಲ್ಲಿಸಬೇಕು. ಆಗ ಅದಾಗೇ ಈ ವರದಕ್ಷಿಣೆ ಪಿಡುಗು ತೊಲಗುತ್ತದೆ..

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಭಾಮಿನಿ

ಮರ ಮುಪ್ಪಾದರೂ ಹುಳಿ ಮುಪ್ಪೆ…?

Published

on

ಇಂದಿಗೂ ಕಾಡುತ್ತಾಳೆ ಆ ಬೆಣ್ಣೆ ಅಜ್ಜಿ..!

ಯಸ್ಸು 70 ರ ಗಡಿ ದಾಟಿ ಬಹಳ ವರ್ಷಗಳೇ ಆಗಿದ್ದವು. ಆದರೂ ಕುಗ್ಗದ ಉತ್ಸಾಹ, ಬತ್ತದ ಹುರುಪಿನ ಹೊಳೆ .ದುಡಿದು ತಿನ್ನಬೇಕೆಂಬ ಆರೋಗ್ಯಪೂರ್ಣ ಸ್ವಾರ್ಥ.. ಯಾರ ಹಂಗಲ್ಲೂ ಬದುಕಲ್ಲ ಎಂಬ ಅನುಕರಣೀಯ ಅಹಂಕಾರ..! ಹೌದು ನಾನೀಗ ಹೇಳ ಹೊರಟಿರುವುದು ಮುಪ್ಪಿಗೆ ಸವಾಲೆಸಿದು ಬದುಕಿದ, ಬದುಕುತ್ತಿರುವ ಅಜ್ಜಿಯರ ಬಗ್ಗೆ . ಈ ಅಜ್ಜಿಯರ ಬಗ್ಗೆ ಬರೆಯ ಹೊರಟಾಗ ನನಗೆ ಮೊದಲು ನೆನಪಾಗಿದ್ದು, ನನ್ನ ಪ್ರೀತಿಯ ಬೆಣ್ಣೆ ಅಜ್ಜಿ. ಅವಳು ಬದುಕಿರುವರೆಗೂ ನನ್ನನ್ನು ಪ್ರೀತಿಯಿಂದ ಬೆಣ್ಣೆ ಎಂದು ಕರೆಯುತ್ತಿದ್ದಳು. ನನಗೂ ಆವಳನ್ನು ಬೆಣ್ಣೆ ಅಜ್ಜಿ ಎನ್ನುವುದೇ ಇಷ್ಟ. ಹಾಗಂತ ಅವಳು ಬೆಣ್ಣೆಯಷ್ಟು ಮೃದು ಸ್ವಭಾವದವಳಲ್ಲ. ಘಾಟಿ ಮುದುಕಿ, ಸುಖಾಸುಮ್ಮನೆ ಯಾರೊಂದಿಗೂ ವಾದಕ್ಕಿಳಿಯುತ್ತಿರಲಿಲ್ಲ. ಆದರೆ ಅವಳ ಸುದ್ದಿಗೆ ಬಂದರೆ ಮಾತ್ರ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡುಬಿಡುತ್ತಿದ್ದಳು. ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನುದಾಟಿ ಬಂದವಳು. ಸ್ವಂತ ಕಾಲಿನಲ್ಲಿ ನಿಂತು ಇತರರಿಗೆ ಮಾದರಿಯಾದವಳು.

ಹೌದು ಆ ನನ್ನ ಬೆಣ್ಣೆ ಅಜ್ಜಿ ಇದ್ದಿದ್ದು, ನನ್ನ ಹಳೆಯ ಆಫೀಸಿನ ಎದುರು ಚಿಕ್ಕದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಳು. ಎಂದೂ ಯಾರನ್ನು ದಮ್ಮಯ್ಯ ದತ್ತಯ್ಯ ಎನ್ನದ ಸ್ವಾಭಿಮಾನಿ ಅವಳು. 10 ಮೆಟ್ಟಿಲುಗಳನ್ನು ಹತ್ತಲು ಸುಸ್ತು ಎನ್ನುವ ಈಗಿನ ಕಾಲದ ಹರೆಯದ ಹುಡುಗಿಯರನ್ನು ನಾಚಿಸುವ ರೀತಿ ಮೆಟ್ಟಿಲುಗಳನ್ನು ಹತ್ತಿ ಅಷ್ಟೇ ಹುಮ್ಮಸ್ಸಿನಿಂದ ಕೆಳಗಿಳಿಯುತ್ತಿದ್ದ ಅವಳು ನಿಜಕ್ಕೂ ಆಶ್ಚರ್ಯ ಅನಿಸುತ್ತಿದ್ದಳು. ಸುಮಾರು 20 ವರ್ಷಗಳಿಂದ ಆ ಪುಟ್ಟ ಗೂಡಿನ ಅಂಗಡಿಯಲ್ಲೇ ಜೀವನಾಧಾರ ಕಂಡುಕೊಂಡ ಅವಳು ಆ ರೋಡಿನಲ್ಲಿ ಓಡಾಡುತ್ತಿದ್ದ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲರೂ ಆಕೆಯ ಧೈರ್ಯವನ್ನು ಕೊಂಡಾಡುತ್ತಿದ್ದವರೇ. ಹೋಗುವಾಗ ಬರುವಾಗ ದಾರಿಯಲ್ಲಿ ಆಕೆಯನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ.. ಈ ಅಜ್ಜಿ ಕೈ ಲಾಗದ ಮತ್ತೊಂದು ಅಜ್ಜಿಗೆ ದಿನ ಊಟ ನೀಡುತ್ತಿದ್ದಳು. ಅವಳ ನೋವಿಗೆ ದನಿಯಾಗಿ ಸಾಂತ್ವನ ಹೇಳುತ್ತಿದ್ದಳು. ತಲೆ ತಗ್ಗಿಸಿ ಬದುಕುವುದನ್ನೇ ಕರಗತ ಮಾಡಿಕೊಂಡಿದ್ದ ಅವಳ ಕಾಲದವರ ನಡುವೆ ಗಂಡಸಿನಂತೆ ತಲೆ ಎತ್ತಿ ಬದುಕಿದವಳು ನಿಜಕ್ಕೂ ಒಳಗೆ ಕರುಣಾಮಯಿ. ಅದು ಅವಳನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಗೊತ್ತು.

ಆ ಅಜ್ಜಿಯೇನು ಶೋಕಿಗೆ ವ್ಯಾಪಾರಕ್ಕೆ ಇಳಿದವಳಲ್ಲ. ಜೀವನ ಆಕೆಗೆ ತುಂಬಾ ಪಾಠ ಕಲಿಸಿತ್ತು. ಆ ಸಿಟಿಯಲ್ಲಿ ಅಂಗಡಿ ಇಟ್ಟುಕೊಂಡು 20 ವರ್ಷಗಳ ಕಾಲ ಮುನ್ನಡೆಸುವುದೆಂದರೆ ಅದು ಸುಲಭದ ಮಾತಲ್ಲ. ದುಡ್ಡಿಗಾಗಿ ಹಪಹಪಿಸುವ ಬಕ ಪಕ್ಷಿಗಳ ಮಧ್ಯೆ…! ಇತ್ತ ಮನೆಯಲ್ಲೂ ಆಕೆಗೆ ನೆಮ್ಮದಿ ಇರಲಿಲ್ಲ. ದಾಂಡಿಗನಂಥ ಮೊಮ್ಮಗ ಯಾವಾಗ್ಲೂ ಅಜ್ಜಿಗೆ ದುಡ್ಡು ಕೊಡುವಂತೆ ಪೀಡಿಸುತ್ತಿದ್ದ. ಆದರೂ ಅಜ್ಜಿ ಎದೆಗುಂದಲಿಲ್ಲ. ಬದುಕಿನುದ್ದಕ್ಕೂ ಹೋರಾಟ ಮಾಡಿ ಸತ್ತಳು. ನನ್ನ ಪ್ರೀತಿಯ ಬೆಣ್ಣೆ ಅಜ್ಜಿ.. ಅದೇಕೋ ನನ್ನ ಕಂಡರೆ ಅವಳಿಗೆ ಅಚ್ಚುಮೆಚ್ಚು. ಆಫೀಸಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಳು, ತಲೆ ಸವರಿ ಗುಲಾಬಿ ಹೂ ಕೊಡುತ್ತಿದ್ದಳು. ದೇವಸ್ಥಾನಕ್ಕೆ ಹೋದಾಗ ಮರೆಯದೇ ನಮ್ಮ ಆಫೀಸಿನವರೆಗೆ ಪ್ರಸಾದ ತಂದುಕೊಡುತ್ತಿದ್ದಳು. ಎಲ್ಲೇ ಕಂಡರೂ ಬೆಣ್ಣೆ ಎಂದು ಕೂಗಿ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಆ ಸೊಕ್ಕು ಮುಖದಲ್ಲೂ ಮೂಡುತ್ತಿದ್ದ ಆ ಸುಂದರ ನಗು ಇಂದಿಗೂ ಕಾಡುತ್ತದೆ. ಜೇವನದ ಕುರಿತು ಜಿಗುಪ್ಸೆ ಆವರಿಸಿದಾಗ ಅವಳು ನೆನಪಾಗಿ ಕಾಡುತ್ತಾಳೆ. ಅವಳ ಧೈರ್ಯ, ಎದೆಗಾರಿಕೆ ರಪ್ಪನೆ ಮುಖಕ್ಕೆ ರಾಚುತ್ತದೆ. ಬದುಕಲು ಸ್ಫೂರ್ತಿ ತುಂಬುತ್ತದೆ. ಹೌದು ಕೆಲವರೂ ಸತ್ತರೂ ಬದುಕಿರುತ್ತಾರೆ ನಮ್ಮೊಳಗೆ. ಅಂತಹವರ ಲಿಸ್ಟ್ ನಲ್ಲಿ ನನ್ನ ಬೆಣ್ಣೆ ಅಜ್ಜಿಗೆ ಮೊದಲ ಸ್ಥಾನ.

ಇನ್ನು ತಾಯವ್ವ ನನ್ನ ಅಜ್ಜಿ. ನನ್ನ ಸಾಕಿ ಬೆಳೆಸಿದವಳು, ಕೇವಲ ನನ್ನನ್ನಷ್ಟೇ ಅಲ್ಲ. ನಮ್ಮೂರಿನ ಅದೆಷ್ಟೋ ಮಕ್ಕಳಿಗೆ ಕೈ ತುತ್ತು ನೀಡಿದವಳು. ಅಂಗನವಾಡಿ ಸಹಾಯಕಿಯಾಗಿದ್ದ ನನ್ನ ಅಜ್ಜಿ, ನನ್ನ ಜೀವನದ ಮೊದಲ ಸ್ಫೂರ್ತಿ. ಎಂತಹ ಸಮಯ ಸಂದರ್ಭವನ್ನು ಜಾಗರೂಕತೆಯಿಂದ ನಿಭಾಯಿಸಬಲ್ಲ ಅವಳು ನಿಜಕ್ಕೂ ಅನುಕರಣೀಯ. ನಮ್ಮೂರಿನ ಅದೆಷ್ಟೋ ಮಕ್ಕಳಿಗೆ ತನ್ನ ಮಡಿಲಲ್ಲಿ ಸ್ನಾನ ಮಾಡಿಸಿ , ಹಾರೈಸಿ ಹರಸಿದವಳು.. ಮನೆಯ ನಾಲ್ಕು ಜನ ಮೊಮ್ಮಕ್ಕಳು, ಪದೇ ಪದೇ ಹಾಸಿಗೆ ಹಿಡಿಯುತ್ತಿದ್ದ ಪತಿ, ಬಂಧು – ಬಳಗ, ಅಂಗನವಾಡಿ ಕರ್ತವ್ಯ ಎಲ್ಲವನ್ನೂ ಅದೇಗೆ ನಿಭಾಯಿಸುತ್ತಿದ್ದಳೋ. ಹಳ್ಳಿಯಲ್ಲಿ ಸಂಸಾರವನ್ನು ಸರಿದೂಗಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ನನ್ನ ಅಜ್ಜಿ ಸಂಸಾರ ತಕ್ಕಡಿಯನ್ನು ಸಮವಾಗಿ ತೂಗಿಸಿದವಳು.. ಬದುಕಿನಲ್ಲಿ ಹತ್ತಿರದವರನ್ನು ಕಳೆದುಕೊಂಡು, ನೋವಿನಲ್ಲಿದ್ದಾಗ ಅಜ್ಜಿ ಹೇಳುತ್ತಿದ್ದ ಧೈರ್ಯದ ಮಾತುಗಳು, ತುಂಬುತ್ತಿದ್ದ ಉತ್ಸಾಹ, ಬದುಕನ್ನು ಕುಗ್ಗಿಸದಂತೆ ನೋಡಿಕೊಂಡಿವೆ. ಎಷ್ಟೇ ನೋವಿನಲ್ಲಿದ್ದರೂ ಅವಳೊಂದಿಗೆ ಐದು ನಿಮಿಷ ಮಾತನಾಡಿದರೆ ಸಾಕು ಅವಳು ಆಡುವ ಮಾತುಗಳು ಬದುಕಲ್ಲಿ ಮತ್ತೆ ಛಲ ಹುಟ್ಟಿಸುತ್ತದೆ. ಭರವಸೆಯ ಚಿಲುಮೆ ಚಿಮ್ಮಿಸುತ್ತದೆ. ನನ್ನ ಅಜ್ಜಿ ಎಂದೂ ತಾಳ್ಮೆ ಕಳೆದುಕೊಂಡವಳಲ್ಲ. ಬದುಕಿನಲ್ಲಿ ಅವಳಿಂದ ಕಲಿತ ದೊಡ್ಡ ಪಾಠ ತಾಳ್ಮೆ ಮತ್ತು ಧೈರ್ಯ.

ಮಕ್ಕಳು-ಸೊಸೆಯರು ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಮಕ್ಕಳ ಮೇಲೆ ಹಾರಾಡುವ ಕೂಗಾಡುವ ಅದೆಷ್ಟೋ ಅಜ್ಜಿಯರ ನಡುವೆ , ಸೊಸೆಯರೂ ನಮ್ಮ ಮಕ್ಕಳಂತೆ, ಮಕ್ಕಳಿಗೆ ನಾವೇಕೆ ಭಾರವಾಗಬೇಕು. ನಾವು ದುಡಿದು ತಿನ್ನಬೇಕು ಎನ್ನುವ ಮನಸ್ಥಿತಿಯ ಅಜ್ಜಿಯರು ನಿಜ್ಕಕ್ಕೂ ವಿಶೇಷವಾಗಿ ಕಾಣುತ್ತಾರೆ. ಎಂತಹ ಸಮಯದಲ್ಲಿಯೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡದ ಅವರು ಕಣ್ಣ ಮುಂದೆ ಮಾದರಿಯಾಗಿ ನಿಲ್ಲುತ್ತಾರೆ. ಹುಡುಕುತ್ತಾ ಹೋದರೆ ವಯಸ್ಸಿಗೆ ಸವಾಲೆಸೆದು ಬದುಕುತ್ತಿರುವ ಇಂಥ ಸಾವಿರ ಅಜ್ಜಿಯರು ಉದಾಹರಣೆಗಳಾಗಿ ಸಿಗುತ್ತಾರೆ.. ಮಾರ್ಕೆಟ್ ನಲ್ಲಿ ಸೊಪ್ಪು-ತರಕಾರಿ ಮಾರುವ ಅಜ್ಜಿಯರೂ ಬೆಳಗ್ಗೆಯೇ ಎದ್ದು, ಮನೆಯವರನೆಲ್ಲಾ ಸಂಭಾಳಿಸಿ, ನೈ ಟ್ ಆಲ್ಟ್ ಬಸ್ ಹತ್ತಿ, ಸೂರ್ಯ ಹುಟ್ಟುವ ಮೊದಲೇ ಮಾರುಕಟ್ಟೆಗೆ ಬಂದು ವ್ಯಾಪಾರ ಆರಂಭಿಸುತ್ತಾರೆ. ಹಣ ಸಂಪಾದಿಸಿ, ಯಾರೂ ತಮ್ಮ ಕಡೆ ಬೊಟ್ಟು ಮಾಡಿ ತೋರಿಸದಂತೆ ಬದುಕುತ್ತಿರುವ ಅವರು ನಿಜಕ್ಕೂ ಆದರ್ಶನೀಯ. 7 ಗಂಟೆಗೆ ಎದ್ದರೂ ಬೇಗ ಎದ್ದೆವೆಂದು ಕುಣಿದಾಡುವ ನಮ್ಮೆದುರು 5 ಗಂಟೆಗೆ ಎದ್ದರೂ ಲೇಟಾಗಿ ಎದ್ದೆವಲ್ಲಾ ಎಂಬ ನಮ್ಮಈ ಅಜ್ಜಿಯರು ನಿಜಕ್ಕೂ ವೀರ ವನಿತೆಯರು. ದೊಡ್ಡ – ದೊಡ್ಡ ಸಾಧನೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವ ನಾವು, ಇವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಬದುಕಲ್ಲಿ ಸಣ್ಣ –ಸಣ್ಣ ವಿಷಯಗಳಲ್ಲೇ ಎಲ್ಲವೂ ಅಡಕವಾಗಿರುವುದು.ನಿಜವಾದ ಜೀವನದ ಅರ್ಥ ಅಡಕವಾಗಿರುವುದೇ ಇಲ್ಲಿಯೇ..

ನಾನು ಮೇಲೆ ಹೇಳಿದ ಯಾವ ಅಜ್ಜಿಯರೂ ಹೆಚ್ಚು ಕಲಿತವರಲ್ಲ, ಆದರೂ ಜೀವನವೆಂಬ ಸಾಗರವನ್ನು ಯಶಸ್ವಿಯಾಗಿ ಈಜಿ ದಡ ಸೇರಿದವರು.. ಬದುಕಲ್ಲಿ ಕಳೆದುಕೊಂಡಿರುವುದರ ಬಗ್ಗೆಯೇ ಚಿಂತೆ ಮಾಡುತ್ತಾ ನಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುವ ನಮಗೆ ಇವರ ಬದುಕು ಆದರ್ಶಪ್ರಿಯವೆನಿಸುತ್ತದೆ. ಕೆಲವೊಂದು ಅನಿಶ್ಚಿತ ಆಘಾತಗಳು ಎದುರಾದಾಗ ಎಲ್ಲ ಮುಗಿದೇ ಹೋಯಿತು ಎಂದು ಜೀವನ , ಜೀವ ಎರಡನ್ನೂ ಕಳೆದುಕೊಳ್ಳುವ ಯುವಜನತೆಗೆ ಈ ಅಜ್ಜಿಯರ ಧೈರ್ಯ, ಜೀವನ ಅನುಭವ,ಅವರು ಬದುಕಿದ ರೀತಿ ಎಲ್ಲವನ್ನು ಕಂಡಾಗ ಎಲ್ಲೋ ಒಂದು ಕಡೆ ಬದುಕುವ ಉತ್ಸಾಹ ಬರದೇ ಇರದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಭಾಮಿನಿ

ಹೆಂಡ್ತಿ ಮನೇಲಿ ನೀವ್ ಕ್ಲಿಕ್ ಆಗಬೇಕೆಂದ್ರೆ ಹೀಗೆ ಮಾಡಿ

Published

on

ಹೊಸದಾಗಿ ಮದುವೆಯಾದ ಗಂಡ- ಹೆಂಡಿರ ನಡುವೆ ಅಂತರ ದೂರವಾಗಲು ಸ್ವಲ್ಪ ಸಮಯಬೇಕು. ಆ ಸಮಯ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ, ಸ್ವಲ್ಪ ಆಯಾ ತಪ್ಪಿದರೂ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಹಾಗಾಗಿ ಪತಿಯಾದವನು ತನ್ನ ಪತ್ನಿ ಹಾಗೂ ಅವರ ಮನೆಯವರ ಬಗ್ಗೆ ಹೆಚ್ಚು ಕಾಳಜಿ, ಅನುಕಂಪ, ಸಹಾನುಭೂತಿ, ಸಹಾಯ ಮಾಡುವ ಗುಣ ಹೊಂದಿರಬೇಕು. ಇದು ನಿಮಗೆ ನಿಮ್ಮ ಪತ್ನಿಯ ಮನೆಯಲ್ಲಿ ಕ್ಲಿಕ್ ಮಾಡುತ್ತದೆ. ನೀವು ಹೀರೋ ಆಗಲು ನೆರವಾಗುತ್ತದೆ.

ಮದುವೆಯಾದ ಆರಂಭದಲ್ಲಿ ವಧು ವರನೊಂದಿಗೆ ರೋಮ್ಯಾನ್ಸ್ ಮಾಡಿದಷ್ಟು ಸುಲಭವಾಗಿ ಪರ್ಸನಲ್ ವಿಚಾರಗಳನ್ನು ಹೆಂಡತಿಯಾದವಳು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾಳೆ. ಹೊಸದಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳಿಗೆ ಪತಿ ಹಾಗೂ ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ವೇಳೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತನ್ನ ಗಂಡನೊಂದಿಗೆ ಹಂಚಿಕೊಳ್ಳುವುದು ಕಷ್ಟವಾಗುತ್ತದೆ. ಇದನ್ನು ಅರಿತು ಪತಿಯಾದವನು ನೆರವಾದರೆ ಪತ್ನಿಯೊಂದಿಗೆ ಸಂಸಾರ ಸುಖ ಪರೋಚ್ಛ ಸ್ಥಾನಕ್ಕೆ ಹೋಗುತ್ತದೆ.

ಅವಳು ತಪ್ಪು ಮಾಡಿದಾಗ ಮನವರಿಕೆ ಮಾಡಿ

ಅದಿನ್ನು ಹೊಸ ಲೋಕಕ್ಕೆ ಬಂದ ಹೆಣ್ಣು ಮಕ್ಕಳಿಗೆ ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟದ ಸಂಗತಿ. ಅವಳ ಅಭಿರುಚಿ, ಅಭಿಪ್ರಾಯ, ಆಲೋಚನೆಗಳು ಸ್ವಲ್ಪ ಭಿನ್ನವಾಗಿ ಇರುತ್ತವೆ. ಹಾಗಾಗಿ ಕೆಲವೊಂದು ಕೆಲಸ, ಕಾರ್ಯಗಳಲ್ಲಿ ತಪ್ಪು ಮಾಡುವುದು ಸಾಮಾನ್ಯವಾಗುತ್ತದೆ. ಆಗ ಅವಳಿಗೆ ಕೂರಿಸಿಕೊಂಡು ಸಮಾಧಾನದಿಂದ ತಿಳಿ ಹೇಳಬೇಕು. ಆಗ ಅವಳು ತಿಳಿದುಕೊಂಡು ತಪ್ಪುಗಳಾಗದಂತೆ ಎಚ್ಚರ ವಹಿಸುತ್ತಾಳೆ. ಈ ವಿಚಾರದಲ್ಲಿ ಗಂಡನಾದವನು ಎಡವಿದರೆ ಮುನಿಸು ಉಂಟಾಗಿ ನಾನೊಂದು ನೀನೊಂದು ತೀರ ಅಗಬೇಕಾಗುತ್ತದೆ‌.

ಉಡುಗೊರೆ ಕೊಟ್ಟು ಹಮ್ಮೀರನಾಗಿ

ಮದುವೆಯಾದ ಖರ್ಚು ವೆಚ್ಚುಗಳು ಹೆಚ್ಚಾಗುವುದು ಸರ್ವೇ ಸಾಮಾನ್ಯವಾದ ಸಂಗತಿ. ಖರ್ಚುಗಳು ಹೆಚ್ಚಾದವು ಅಂತಾ ಉಳಿತಾಯ ಮಾಡುವ ಅವಸರದಲ್ಲಿ ಹೆಂಡತಿ, ಅವಳ ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಹಬ್ಬ, ಹುಣ್ಣಿಮೆಗಳಿಗೆ ಹೋಗುವುದು ಕಡಿಮೆ ಮಾಡಿದರೆ ನೀವು ಸಂಸಾರದ ಪರೀಕ್ಷೆಯಲ್ಲಿ ಡುಮ್ಕಿ ಹೋಡಿಯೋದು ಗ್ಯಾರಂಟಿ. ನಿಮ್ಮ ಬಳಿ ಇರುವ ಹಣದಲ್ಲೇ ಸ್ವಲ್ಪ ಭಾಗವನ್ನು ಅವಳಿಗಾಗಿ ತೆಗೆದಿಟ್ಟುಕೊಂಡು ಅವಳಿಗಾಗಿ ಖರ್ಚು ಮಾಡಬೇಕು. ಅವಳ ಬರ್ಥಡೇ ಗಿಫ್ಟ್ ಕೋಡೋದು, ಅವಳ ಮನೆಗೆ ಹೋಗುವಾಗ ಏನಾದರೊಂದು ಉಡುಗೊರೆ ತೆಗೆದುಕೊಂಡು ಹೋಗುವುದು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಆಪತ್ಕಾಲದಲ್ಲಿ ನೆರವಿಗೆ ಬರಲಿದೆ‌‌.

ಆಗಾಗ ಪಿಕ್ನಿಕ್ ಹೋಗೋ ಪ್ಲ್ಯಾನ್ ಮಾಡಿ

ಹೊಸ ಮನೆ, ಹೊಸ ವಾತಾವರಣಕ್ಕೆ ಬಂದ ಹೆಣ್ಣು ಮಕ್ಕಳೊಬ್ಬಳು ಅಲ್ಲಿಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿರುತ್ತದೆ. ನೀವು ನಿಮ್ಮ ಪಾಡಿಗೆ ಕೆಲಸ ಹೋದ ನಂತರ ಮನೆಯಲ್ಲಿ ಅವಳಿಗೆ ಒಂಟಿತನ ಕಾಡುತ್ತದೆ. ಇದು ಅವಳಿಗೆ ಬೇಸರ ಉಂಟು ಮಾಡಿ ಅನ್ಯ ಅಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಗಂಡನಾದವನು ಅವಕಾಶ ಮಾಡಿಕೊಡಬಾರದು. ಸ್ವಲ್ಪ ಯಾಮಾರಿದರೆ ನಿಮ್ಮ ಜೀವನ ಸುಖಸಾಗರವಾಗದೇ ದುಃಖದ ಕಾರ್ಮೋಡ ಕವಿಯುತ್ತದೆ. ಆದ್ದರಿಂದ ಗಂಡನಾದವನು ಆಗಾಗ ಪಿಕ್ನಿಕ್ ಹೋಗಿ ಅವಳ ಬೇಸರವನ್ನು ದೂರ ಮಾಡಬೇಕು. ಇದೇ ಖುಷಿಯಲ್ಲಿ ಅವಳು ನಿಮ್ಮ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸ ಮೂಡಿಸುವಂತೆ ಮಾಡುತ್ತದೆ. ಅಲ್ಲದೇ ಅವಳ ಮನೆಯಲ್ಲಿ ನಿಮಗೆ ವಿಶೇಷ ಆತಿಥ್ಯವೇ ಸಿಗುವಂಥ ವಾತಾವರಣ ನಿರ್ಮಿಸಲು ನೆರವಾಗುತ್ತದೆ.

ಅವಳ ತವರು ಮನೆಗೆ ಆರ್ಥಿಕವಾಗಿ ನೆರವಾಗಿ

ಮದಿವೆಯಾದ ನಂತರ ಮನೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಳ್ಳ ಬೇಕಾಗುತ್ತದೆ. ಅಂಥದರಲ್ಲಿ ಹೆಂಡತಿ ಮನೆಗೆ ಹಣಕಾಸಿನ ವಿಚಾದಲ್ಲಿ ನೆರವಾಗುವುದೆಂದರೆ ಸುಲಭವೇನು, ಕಷ್ಟವೇ ಆಗಿದೆ. ಆದರೂ ಗಂಡನಾದವನು ನೆರವಾಗಲೇ ಬೇಕು. ಅವಳ ಮನೆಯಲ್ಲಿ ಕಷ್ಟ ಬಂದಾಗ ಸ್ವತಃ ನೀವೇ ಮುಂದಾಗಿ ಬಗೆಹರಿಸಿದರೆ ಆ ಮನೆಗೆ, ಈ ನೀವೇ ಹೀರೋ ಆಗುತ್ತೀರಿ. ಇಂಥ ವಿಚಾರಗಳನ್ನು ಸ್ವಲ್ಪ ಎಚ್ಚರಿಕೆಯಿಂದಲೇ ನಿಭಾಯಿಸಬೇಕು.

Wife husband love tricks

Continue Reading
Advertisement

Trending