Connect with us

ಬಹಿರಂಗ

ನಕಲಿ ಆದಿವಾಸಿಗಳ ಚಿನ್ನಾಟ : ಅಸಲಿ ಆದಿವಾಸಿಗಳ ಪ್ರಾಣ ಸಂಕಟ

Published

on

ನನ್ನ ಮಾತನ್ನು ಅವನೇಕೆ, ಅವರಪ್ಪನೂ ಕೇಳಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂದೆಯಾದ ಮಾಜಿ ಪ್ರಧಾನಿ ದೇವೇಗೌಡರನ್ನು ಕುರಿತು, ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬ ಸ್ವಾಮಿ ಒದರಿದ್ದು ಇಡೀ ಕರ್ನಾಟಕ ರಾಜ್ಯವೇ ಕೇಳಿದೆ. ಈ ಸ್ವಾಮಿ ಸಾಂಸ್ಕøತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪಾಲಿಸುವ ಬೆಳೆಸುವ ಬದಲು, ರಾಜಕೀಯದಲ್ಲಿ ತನ್ನ ಬಾಲ ಆಡಿಸುವುದೇ ಈತನ ಕಸುಬು. ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠವೆಂಬುದು ಸಂಸ್ಕøತಿ ಮತ್ತು ಧರ್ಮವನ್ನು ಕಾಪಾಡುವ ಮಠವಲ್ಲ, ಇದು ಒಂದು ರಾಜಕಾಣಿಗಳ ಕೂಟ. ನಕಲಿ ಬುಡಕಟ್ಟು ಜನರ, ಅಸಲಿ ಬಣ್ಣ ಮುಚ್ಚುವ ಕವಚ. ನಿಜವಾಗಿ ಪರಿಶಿಷ್ಟ ಪಂಗಡದ ಮೀಲಾತಿಗೆ ಅರ್ಹರಿರುವ ‘ನಾಯಕ ಬುಡಕಟ್ಟಿನ ಜನರಿಗೆ’ ಹಾಕಿರುವ ಬಲೆ.

1991ರಲ್ಲಿ ಶ್ರೀ ಚಂದ್ರಶೇಖರ್‍ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಆಗಿನ ಚಳ್ಳಕೆರೆಯ ಮಾಜಿ ಮಂತ್ರಿಗಳಾದ ದಿ. ಶ್ರೀ ತಿಪ್ಪೇಸ್ವಾಮಿಯವರು ಹೆಚ್.ಡಿ ದೇವೇಗೌಡರಿಂದ ಪ್ರದಾನಿಯಾದ ಚಂದ್ರಶೇಖರವರಿಗೆ ಹೇಳಿಸಿ ‘ವಾಲ್ಮೀಕಿ, ನಾಯ್ಕ, ನಾಯಕ್, ಬೇಡ, ಬೇಡರ್,’ ಎಂಬ ಪದಗಳನ್ನು ‘ನಾಯಕ’ ಬುಡಕಟ್ಟಿನ ಸಮನಾರ್ಥಪದಗಳೆಂದು ಎಸ್.ಟಿ ಪಟ್ಟಿಯಲ್ಲಿ ಸೇರಿಸಲಾಯಿತು. ಇದರಲ್ಲಿ ದೇವೇಗೌಡರ ಪರಿಶ್ರಮವು ಸಹ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಮ್ಯಾಸ ನಾಯಕರು ತಮ್ಮ ಪಂಗಡದ ಹೆಸರನ್ನು ‘ವಾಲ್ಮೀಕಿ’ ಎಂದು ದಾಖಲೆಗಳಲ್ಲಿ ನಮೂದಿಸಿಕೊಂಡಿದ್ದರು ಮತ್ತು ನಮೂದಿಸಿಕೊಳ್ಳುತ್ತಿದ್ದರು. ಇದನ್ನು ಮೂಲವಾಗಿ ಪ್ರಸ್ತಾವನೆಯನ್ನು ಚಳ್ಳಕೆರೆಯ ಮಾಜಿಮಂತ್ರಿಗಳಾದ ತಿಪ್ಪೇಸ್ವಾಮಿಯವರ ಮೂಲಕ ಬಳ್ಳಾರಿ ಜಿಲ್ಲೆಯವರಿಗೆ ಅನುಕೂಲವಾಗಲೆಂದು ಕೇಳಿಕೊಂಡ ಕಮಲಾಪುರದ ಡಾ. ಪಾಪಯ್ಯನವರಿಗೆ ನೀಡಿದ ಕಾಣಿಕೆಯಂತೆ ಈ ಕೆಲಸ ಮಾಡಿಸಲಾಯಿತು.

ಆದ್ದರಿಂದ ಎಸ್.ಟಿ ಸೌಲಭ್ಯ ಈ ಬುಡಕಟ್ಟು ಜನಾಂಗಕ್ಕೆ ಸೇರಲೆಂದು ಡಾ. ಪಾಪಯ್ಯನವರ ಶ್ರಮವಾಗಿದೆ. ಈ ‘ವಾಲ್ಮೀಕಿ’ ಎಂಬ ಪದವೇ ತಳವಾರದವರಿಗೆ ಎಸ್ ಟಿ ಮೀಸಲಾತಿ ಕದಿಯಲು ಅನುಕೂಲವಾದ ಪದ. ಮತ್ತು ಈ ಡಾ. ಪಾಪಯ್ಯನವರೇ ಈಗ ಮ್ಯಾಸ ನಾಯಕ (ಮ್ಯಾಸ ಬೇಡ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ (ರಿ)ನ ಅಧ್ಯಕ್ಷರಾಗಿದ್ದಾರೆ ಮತ್ತು ತಳವಾರ ಪರವಾರದವರಿಂದ ಮ್ಯಾಸ ಬೇಡರ ಮುಕ್ತಿಗಾಗಿ ಹೋರಾಡುತ್ತಿದ್ದಾರೆ. 1996 ರಲ್ಲಿ ವಾಲ್ಮೀಕಿ ಮಠ ಸ್ಥಾಪನೆ ಮಾಡಲು ದಿ. ತಿಪ್ಪೇಸ್ವಾಮಿಯವರಿಗೆ ದೇವೇಗೌಡರು ಬೆಂಬಲ ವ್ಯಕ್ತಿಪಡಿಸಿದ್ದರು. ಅಂದು ದೇವೇಗೌಡರು ಸಹಾಯ ಮಾಡದಿದ್ದರೆ ಇಂದು ವಾಲ್ಮೀಕಿ ಗುರು ಪೀಠ ಮತ್ತು ಈ ಪ್ರಸನ್ನಾನಂದ ಪುರಿ ಸ್ವಾಮಿಯೇ ಇರುತ್ತಿರಲಿಲ್ಲ. ಇಂದು ವಾಲ್ಮೀಕಿ ಮಠ ಮತ್ತು ಪೀಠಾಧಿಪತಿ ಎಂದು ಹೇಳಿಕೊಳ್ಳುವುದು ಇದೆ ಎಂದರೆ ಅದರಲ್ಲಿ ದೇವೇಗೌಡರ ಪರಿಶ್ರಮವು ಇದೆ. ಮಠ ಅಭಿವೃದ್ಧಿ ಆದ ಮೇಲೆ ದಿ.ತಿಪ್ಪೇಸ್ವಾಮಿಯವರನ್ನು ಮೂಲೆಗುಂಪು ಮಾಡಿದರು. ಮಠದಲ್ಲಿ ಇಂದು ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಮಠದ ಲೇಟರ್ ಪ್ಯಾಡ್‍ನಲ್ಲಿ ಶಿಫಾರಸ್ಸು ಮಾಡಲಾಗುತ್ತದೆ. ಈ ನಕಲಿ ಎಸ್ ಟಿ ಗಳಿಗೇನು ಗೊತ್ತು, ಅಸಲಿ ಇತಿಹಾಸ.

ನವ ದೆಹಲಿಯ ರಿಜಿಸ್ಟರ್ ಜನರಲ್ ಆಫ್ ಇಂಡಿಯಾವು 1993 ಮತ್ತು 2004ರ ತನ್ನ ವರದಿಯಲ್ಲಿ ಹೀಗೆ ಹೇಳಿರುತ್ತದೆ: ಕರ್ನಾಟಕದಲ್ಲಿ ಎರಡು ವಿಧದ’ ‘ನಾಯಕ’ ’ಜನಾಂಗ ವಿದೆ. ಒಂದು ಆದಿವಾಸಿ ‘ನಾಯಕ’ ಜನಾಂಗವಾಗಿದ್ದು ಇದು ಮಧ್ಯ ಪ್ರದೇಶದ ‘ಬಿಲ್’’’ಜನಾಂಗವನ್ನು ಹೋಲುತ್ತದೆ. ಮತ್ತು ಈ ಬುಡಕಟ್ಟು ಜನರನ್ನು ಈಗಾಗಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲಾಗಿದೆ (ಇದೇ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡ ಜನಾಂಗ). ಮತ್ತು ಇನ್ನೊಂದು ‘ನಾಯಕ’ ಜಾತಿ ಎಂದು ಹೇಳಿಕೊಳ್ಳುತ್ತಿದ್ದು, ಅದು ಬೇಂಡರ್, ಬೇರಡ್, ತಳವಾರ ಜಾತಿಯವರು ಸಹ ತಮ್ಮ ಜಾತಿಯನ್ನು ‘ನಾಯಕ’ ಎಂದು ಹೇಳಿಕೊಳ್ಳುತ್ತಾರೆ. ಈ ಜಾತಿಯವರಿಗೆ ಯಾವುದೇ ಬುಡಕಟ್ಟು ಲಕ್ಷಣಗಳು ಇಲ್ಲ ಎಂದು ಹೇಳಿದ್ದಾರೆ. ವಾಸ್ತವ ಹೀಗಿದ್ದರೆ, ಈಗ ನಡೆಯುತ್ತಿರುವ ಎಸ್ ಟಿ ಮೀಸಲಾತಿಯನ್ನು 3%ನಿಂದ 7.5% ಹೆಚ್ಚಿಸಿ ಎಂದು ರಾಜನಹಳ್ಳಿ ಸ್ವಾಮಿ ಮಾಡುತ್ತಿರುವ ಗಲಾಟೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನರು ಯಾರೆಂದು ಮುಚ್ಚಿಟ್ಟು, ಈ ತಳವಾರ ಸ್ವಾಮೀನ ಮುಂದಿಟ್ಟು, ಗೋಕಾಕಿನ ಅರ್ಯಾಕ್ ದೊರೆಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಾ.

ನಿಜ ಹೇಳಬೇಕೆಂದರೆ, ಕರ್ನಾಟಕದಲ್ಲಿ ಎರಡು ವಿಧದ ‘ನಾಯಕ’ ಜನಾಂಗವಿದೆ. ಒಂದು ‘ನಾಯಕ ಬುಡಕಟ್ಟು’, ಇದರ ಪರ್ಯಾಯ ಹೆಸರುಗಳು ‘ಮ್ಯಾಸ ನಾಯಕ’, ‘ಮ್ಯಾಸ ಬೇಡ’, ‘ವಾಲ್ಮೀಕಿ’ ಬೇಡ, ಬೇಡರ, ‘ನಾಯ್ಕ’ ನಾಯಕ್ ಇತ್ಯಾದಿಗಳು. ಇವರು ಮೂರ್ತಿ ಪೂಜಕರಾಗಿರದೆ ಪಶು ಪೂಜಕರಾಗಿರುತ್ತಾರೆ. ವೈದಿಕ ಧರ್ಮದ ಸಂಪ್ರದಾಯಗಳನ್ನು ಆಚರಿಸುವುದಿಲ್ಲ. ತೆಲಗು ಉಪಭಾಷೆಯಂತಿರುವ ಇವರದೇ ಪ್ರತ್ಯೇಕ ಭಾಷೆ ಇದೆ. ಈ ಬುಡಕಟ್ಟು ಜನರ ಸಾಂಸ್ಕøತಿಕ ಉಡುಗೆಗಳು ಬಿಳಿ ಚಲ್ಲಣ, ಹೆಗಲ ಮೇಲೆ ಕರಿ ಕಂಬಳಿ, ಕೈಯಲ್ಲಿ ಸುಮಾರು 7 ಅಡಿ ಉದ್ದದ ಬಿದಿರು ಕೋಲು. ಇವರು ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ ಮತ್ತು ಇವರ ವಾಸ ಸ್ಥಳಗಳನ್ನು ‘ಮ್ಯಾಸರಟ್ಟಿ’ ಎಂದು ಕರೆಯುತ್ತಾರೆ.

ಇವರು ಕುರಿ, ಮೇಕೆ, ಕಾಡುಹಂದಿ, ಕೌಜವನ್ನು ತಿನ್ನುವುದರೊಂದಿಗೆ, ಕೋಣವನ್ನೂ ಸಮಾನ್ಯಾಗಿ ತಿನ್ನುತ್ತಾರೆ. ಆದರೆ ಸಾಕುವ ಕೋಳಿ ತಿನ್ನುವುದಿಲ್ಲ. ಈಚಲ ಚಾಪೆಯನ್ನು ಬಳಸುವುದಿಲ್ಲ. ಚಿತ್ರದುರ್ಗದ ಪಾಳೆಗಾರರು ಈ ಬುಡಕಟ್ಟಿಗೆ ಸೇರಿದವರಾಗಿದ್ದು, ‘ಕಾಮಗೇತಿ’ ಬೆಡಗಿನವರು. ಮ್ಯಾಸ ಬೇಡರು ‘ಮ್ಯಾಸ ಮಂಡಲ’ ವೆಂಬ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿರುವ ತಮ್ಮ ಸಾಂಸ್ಕøತಿಕ ರಾಜ್ಯದಲ್ಲಿ ವಾಸಿಸುತ್ತಾರೆ. ಈ ‘ಮ್ಯಾಸ ನಾಯಕರು’ ಹನ್ನೆರಡು ಗುಡಿಕಟ್ಟೆಗಳಲ್ಲಿ ಒಂದೊಂದು ಬೆಡಗಿನ ದೇವರು ಮತ್ತು ಆಯಾ ಗುಡಿಕಟ್ಟೆಗೆ ಸೇರಿದವರೆಂದು ವಿಭಸಿಕೊಂಡಿದ್ದಾರೆ. ಒಂದೊಂದು ಗುಡಿಕಟ್ಟೆಗಳಿಗೆ ಸೇರಿದ ಹತ್ತಾರು ಉಪ ಬೆಡಗುಗಳಿದ್ದು, ಇವರುಗಳನ್ನು ಒಂದು ‘ಮೀಸಲು ಹಡಿಗೆ ಅಥವಾ ಪುಟ್ಟಿಯವರು’ ಎಂದು ವಿಭಜಿಸಲಾಗಿದೆ. ಒಂದೊಂದು ಮೀಸಲು ಪುಟ್ಟಿಗೆ ಐದಾರು ಮನೆತನಗಳು ಸೇರಿರುತ್ತವೆ. ಇವರು ಸಾಮಾನ್ಯವಾಗಿ ಬೇಟೆ, ಪಶುಪಾಲನೆ, ಬೇಸಾಯ, ಕೂಲಿಗಳಾಗಿ ದುಡಿದು ಜೀವನ ಸಾಗಿಸುತ್ತಾರೆ. ಇವರೆಲ್ಲ ಬಡವರಾಗಿದ್ದು, ಇವರಲ್ಲಿ ವಿದ್ಯೆ ಕಡಿಮೆ. ಇವರನ್ನು ಸಮಾಜದಲ್ಲಿ ಅಸ್ಪøಶ್ಯರೆಂದು ಪರಿಗಣಿಸಲಾಗಿದೆ.

ಇನ್ನೊಂದು ‘ನಾಯಕ ಜಾತಿ’ ಎಂದು ಕರೆಯಲಾಗುತ್ತದೆ. ಇವರು ವಿಜಯನಗರ ಕಾಲದಲ್ಲಿ ಅಮರಂ ನಾಯಕತನ ಪದ್ದತಿಯಲ್ಲಿ ನಾಯಕ ಎಂದು ಬಿರುದು ಪಡೆದುಕೊಂಡವರು ಈ ‘ನಾಯಕ’ ಜಾತಿಯನ್ನು ತಳವಾರ, ಪರಿವಾರ, ಊರು ನಾಯಕ ಎಂದು ಕರೆಯುತ್ತಾರೆ. ಇವರೆಲ್ಲ ಮೂಲತಃ ಗಂಗಮತ ಮತ್ತು ಬೆಸ್ತ ಜಾತಿಯ ಮೂಲದವರಾಗಿದ್ದು, ಸಮಾಜದ ಮುಖ್ಯವಾಹಿಯಲ್ಲಿ ಬೆರೆತು ಊರುಗಳಲ್ಲಿ ಬದುಕುತ್ತಾರೆ. ವಿಜಯನಗರ ಕಾಲದಲ್ಲಿನ ಆಯಗಾರ ಪದ್ಧತಿಯಲ್ಲಿ ಒಂದಾದ, ತಳವಾರಿಕೆ ಇವರು ವೃತ್ತಿಯಾಗಿತ್ತು. ಇವರು ವೈದಿಕ ಸಂಪ್ರದಾಯದ ದೇವರುಗಳನ್ನೇ ಆರಾದಿಸುತ್ತಾರೆ. ಇವರು ಮ್ಯಾಸ ನಾಯಕರಿಗಿಂತ ಸಾಮಾಜಿ, ರಾಜಕೀಯದಲ್ಲಿ ಉನ್ನತ ಸ್ಥಾನಗಳಿಸುರುತ್ತಾರೆ. ಇವರಲ್ಲಿ ಉನ್ನತ ವಿದ್ಯಾವಂತರೂ ದನಿಕರೂ ಇದ್ದಾರೆ. ಈ ಜಾತಿ ನಾಯಕರೇ, ಬುಡಕಟ್ಟು ನಾಯಕರು, ವಾಲ್ಮೀಕಿ ಜನಾಂಗದವರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೆರೆಯುತ್ತಿರುವುದು.

ಎಲ್ಲಾ ನಾಯಕರೂ ಒಂದೇ ಎಂದು ಹೇಳುತ್ತಾ ಬುಡಕಟ್ಟು ಜನರಾದ ಮ್ಯಾಸ ನಾಯಕರಿಗೆಲ್ಲದೇ ದೇಶದ ಇಡೀ ಬುಡಕಟ್ಟು ಜನರಿಗೆ ಪಂಗನಾಮ ಹಾಕಿರುವುದು. ಮ್ಯಾಸ ನಾಯಕ ರಾಜಕಾರಣಿಗಳಿಂದಲೇ ರಾಜನಹಳ್ಳಿಯಲ್ಲಿ ಶ್ರೀ ವಾಲ್ಮೀಕಿ ಗುರು ಪೀಠ ಮಾಡಿಸಿ, ತಳವಾರ ಪರಿವಾರದವರೇ ಇದರ ಆಡಳಿತವನ್ನು ಕಿತ್ತುಕೊಂಡು, ಬೆಸ್ತರ ತಳವಾರ ಜಾತಿಯ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಯೇ ಎಡಬಿಡಂಗಿ ಕಥಾನಾಯಕ. ಜಾರಕಿಹೊಳೆ ಸಹೋದರರ, ಬಳ್ಳಾರಿಯ ಬೋಯಾ ಶ್ರೀರಾಮುಲು ಸಂಬಂಧಿಕರ ತಾಳಕ್ಕೆ ಕುಣಿಯುತ್ತಿರುವ ಆಸಾಮಿ ಈ ರಾಜನಹಳ್ಳಿ ಸ್ವಾಮಿ. ಈ ಸ್ವಾಮಿಗೆ ಮ್ಯಾಸ ಮಂಡಲದಲ್ಲಿ ಕಿಂಚಿತ್ತೂ ಮರ್ಯಾದೆ ಕೊಡುವುದಿಲ್ಲ.

ಮ್ಯಾಸ ಬೇಡರ ಸಂಸ್ಕøತಿಯಲ್ಲಿ ದೇವರ ಎತ್ತು ಕಾಯುವ ಕಿಲಾರಿಗಳನ್ನು ‘ಪದಿ ಪೂಜಾರಿ’ ಎಂದು ಕರೆಯುತ್ತಾರೆ. ಮ್ಯಾಸ ಬೇಡರು ಇವರನ್ನು ದೇವರ ಸ್ವರೂಪವೆಂದು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಇವರನ್ನು ವಿಶೇಷ ಮರ್ಯಾದೆಯಿಂದ ಕಾಣುತ್ತಾರೆ ಮತ್ತು ಉನ್ನತ ಸ್ಥಾನದಲ್ಲಿ ಕುಳ್ಳಿರಿಸುತ್ತಾರೆ. ಇಂತಹ, ಮ್ಯಾಸ ಬೇಡರ ಸಾಂಸ್ಕøತಿಕ ಉಡುಪು ಧರಿಸಿದ್ದ ಕಿಲಾರಿಗಳಿಗೆ ಆಮಿಷತೋರಿಸಿ, ಕಳ್ಳತನದಿಂದ ಕರೆಯಿಸಿ, ಅವರ ಜೊತೆಯಲ್ಲಿ ಅವರ ಮಧ್ಯೆ ಕುಳಿತು ಈ ಸ್ವಾಮಿಗಳು ಫೋಟೋ ತೆಗಸಿಕೊಳ್ಳುತ್ತಿದ್ದಾರೆ. ಇದು ಮ್ಯಾಸ ಬೇಡರ ಬುಡಕಟ್ಟು ಲಕ್ಷಣಗಳನ್ನು ಕದಿಯುವ ಪ್ರಯತ್ನವಾಗಿದೆ. ಇದು ನಮ್ಮ ‘ನಾಯಕ’ ಬುಡಕಟ್ಟಿಗೆ ಅಷ್ಟೇ ಅಲ್ಲದೆ, ಇಡೀ ಭಾರತ ದೇಶದ ಆದಿವಾಸಿಗಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?

‘ನಾಯಕ’ ಬುಡಕಟ್ಟಿಗೆ ಸೇರಿದವರಲ್ಲದವರೂ ಸಹ ತಮ್ಮ ನಿಜ ಜಾತಿಗಳನ್ನು ಬರೆಸದೆ, ಜನಗಣತಿ ಮಾಡುವವರಿಗೆ ಸುಳ್ಳು ಮಾಹಿತಿ ನೀಡಿ ‘ನಾಯಕ, ವಾಲ್ಮೀಕಿ’ ಎಂದು ಮಾಹಿತಿ ಬರೆಯಿಸುತ್ತಿರುವುದರಿಂದ ನಿಜವಾದ, ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳ ಜನಸಂಖ್ಯೆಯೇ ಲಭ್ಯವಿಲ್ಲ. ಕರ್ನಾಟಕದಲ್ಲಿ ಎಸ್. ಟಿ. ಮೀಸಲಾತಿಯನ್ನು ಈಗಿನ 3%ನಿಂದ 7.5%ಗೆ ಹೆಚ್ಚಿಸು ಎಂದು ಕೇಳುವುದು ಎಷ್ಟರ ಮಟ್ಟಿಗೆ ಸರಿ? ಈ ಸ್ವಾಮಿ ‘ಎಮ್ಮೆಯನ್ನು ನೀರಲ್ಲಿ ಮಲಗಿಸಿ, ಆ ಎಮ್ಮೆ ವ್ಯಾಪಾರ ಹೇಳುತ್ತಿದ್ದೀದ್ದಾರೆ’. ಈ ಸ್ವಾಮಿ ಈಗ ಮಾಡಿರುವ ಪಾದ ಯಾತ್ರೆಯು ಸರ್ಕಾರಕ್ಕೆ ತಮ್ಮ ಜನಸಂಖ್ಯಾ ಪ್ರಾಭಲ್ಯ, ರಾಜಕೀಯ ಬಲ ತೋರಿಸುವುದು, ಮತ್ತು ರಾಜ್ಯ ಸಭೆಯಲ್ಲಿ ‘ತಳವಾರ ಮತ್ತು ಪರಿವಾರ’’ಜಾತಿಯ ಹೆಸರುಗಳನ್ನು, ಇವು ‘ನಾಯಕ’ ಬುಡಕಟ್ಟಿನ ಸಮಾನಾರ್ಥ ಪದಗಳೆಂದು ಸುಳ್ಳು ವರದಿಗಳ ಮೇಲೆ ತಯಾರಿಸಿರುವ ಮತ್ತು ಈಗ ಸಂಸತ್ತಿನ ರಾಜ್ಯಸಭೆಯಲ್ಲಿರುವ ಬಿಲ್ಲನ್ನು ಪಾಸುಮಾಡಿಸುವುದು ಆಗಿದೆ.

ಈ ಬಿಲ್ಲು ಏನಾದರೂ ಪಾಸಾದರೆ, ಅದು ಮ್ಯಾಸ ನಾಯಕರಿಗೆ ಮತ್ತು ಇತರೆ ಬುಡಕಟ್ಟು ಜನಾಂಗಕ್ಕೆ ಮರಣ ಶಾಸನವಾಗಲಿದೆ. ಏಕೆಂದರೆ ಕಾನೂನು ಬಾಹಿರವಾಗಿ ಮ್ಯಾಸ ನಾಯಕ ಎಂಬ ಪದವನ್ನು ರಾಜ್ಯದ ಜಾತಿ ಪಟ್ಟಿಯಲ್ಲಿ ಕೆಟಗರಿ-1ರಲ್ಲಿ ಮತ್ತು ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಆದ್ದರಿಂದ ಆ ಬಿಲ್ಲು ಪಾಸಾದರೆ, ತಳವಾರ ಮತ್ತು ಪರಿವಾರದವರೇ ನಿಜವಾದ ಪರಿಶಿಷ್ಟ ಪಂಗಡದ ‘ನಾಯಕ’ ಎಂದು ಹೇಳಿ, ಮ್ಯಾಸ ಬೇಡರಿಗೆ ಎಸ್ ಟಿ ಮೀಸಲಾತಿ ಬಾಗಿಲು ಬಂದ್ ಮಾಡಿಸುತ್ತಾರೆ. ಆದ್ದರಿಂದ, 7.5% ಎಸ್ ಟಿ ಮೀಸಲಾತಿ ಎಂಬ ಮಂಕುಬೂದಿ ಎರಚಿ, ಮ್ಯಾಸ ಬೇಡರ ಅಸ್ಥಿತ್ವವನ್ನು ನಾಶಮಾಡುವುದು, ಮತ್ತು ಅವರ ಬುಡಕಟ್ಟು ಲಕ್ಷಣಗಳನ್ನು ಅಪಹರಿಸುವುದು, ಸಂಸ್ಕøತಿ ಕದಿಯುವುದು ಇದರ ಒಳಗುಟ್ಟು.

ಈ ತಳವಾರ ಪರಿವಾರದವರ ಗುರುವಾದ ಶ್ರೀ ಪ್ರಸನ್ನಾನಂದ ಸ್ವಾಮಿಗೆ ಬೆಂಬಲವಾಗಿ, ಆಧಿಕಾರದ ಲಾಲಸೆಯಿಂದ ರಾಜಕೀಯದಲ್ಲಿ ಬೇಳೆ ಬೇಯಿಸಿ ಕೊಳ್ಳಲು, ಸ್ವಜನರ ಭವಿಷ್ಯವನ್ನು ಒತ್ತೆಹಿಡಲು ಹೊರಟಿರುವ ಕೆಲವು ಮ್ಯಾಸ ಬೇಡ ರಾಜಕಾರಣಿಗಳು ಇದ್ದಾರೆ. ತಮ್ಮ ಮೂಲ ಸಂಸ್ಕøತಿಯನ್ನು ಬಿಡುವುದೇ ನಾಗರೀಕತೆ ಎಂದು ತಿಳಿದು, ತಳವಾರ ಮತ್ತು ಪರಿವಾರದವರೊಡನೆ ವೈವಾಹಿಕ ಸಂಬಂಧ ಬೆಳೆಸಿರುವ ಅಲ್ಪ ವಿದ್ಯೆ ಕಲಿತ ಅವಿವೇಕಿ ಕೆಲವು ಮ್ಯಾಸ ನಾಯಕರುಗಳು ಏನೂ ಗೊತ್ತಿಲ್ಲದ ಮಳ್ಳರಂತೆ ಸ್ವಾಮಿ ಪಾದ ನೆಕ್ಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕದೆ, ತಳವಾರ ಮತ್ತು ಪರಿವಾರದವರು ಕೊಡುವ ಎಂಜಲು ಕಾಸಿಗಾಗಿ ಬಾಯಿತೆರೆದು ಕುಳಿತಿರುವ ನಾಚಿಕೆ ಇಲ್ಲದ ಕೆಲವು ಮ್ಯಾಸ ನಾಯಕರು. ತಳವಾರ, ಪರಿವಾರ, ಎಲ್ಲಾ ನಾಯಕರೂ ಒಂದೇ ಎಂದು ಕಳಪೆ ಇತಿಹಾಸ ಮತ್ತು ಸಾಹಿತ್ಯ ಬರೆದಿರುವ, ಮತ್ತು ತಾವು ಮಾಡಿರುವ ತಪ್ಪೇ ಸರಿಯೆಂದು ವಿತಂಡವಾದಕ್ಕೆ ನಿಂತಿರುವ, ಅಪ್ರಭುದ್ಧ ಕೆಲವು ಮ್ಯಾಸ ಬೇಡ ಜನಾಂಗದ ಸಾಹಿತಿಗಳು ಬರಹಗಾರರು, ಮುಖ ತೋರಿಸಲಾಗದೆ ತಲೆಬಗ್ಗಿಸಿ ಸ್ವಾಮಿ ಹಿಂದೆ ಹೆಜ್ಜೆ ಹಾಕುತ್ತಿದ್ದಾರೆ.

Empty vessel make loud noise’ ಎಂಬುದನ್ನು ಇಲ್ಲಿ ನೆನಪುಮಾಡಿಕೊಳ್ಳ ಬಹುದು. ಈ ಸ್ವಾಮಿಯ ಅನುಯಾಯಿಗಳು ಎಸ್ ಟಿ ಮೀಸಲಾತಿಗೆ ಹಕ್ಕುದಾರರೇ ಅಲ್ಲ. ತಳವಾರ ಮತ್ತು ಪರಿವಾರದವರನ್ನು ಸೇರಿಸಿಕೊಂಡು ಸುಳ್ಳನ್ನೇ ನಿಜವೆಂದು ಒದರಿ, ಸತ್ಯವೆಂದು ಸಾಬೀತು ಪಡಿಸಲು ಹೊರಟಿರುವ ದುಸ್ಸಾಹಸಿ. ಬೆದರಿಸಿ ಪಡೆಯುವುದು ಹಕ್ಕನಲ್ಲ, ಪರರ ಸೊತ್ತನ್ನು. ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು, ಬೀಳಿಸುತ್ತೇವೆಂದು ಹೆದರಿಸುವುದು ಇವರಿಗೆ ಪ್ರಜಾಭುತ್ವದ ಬಗ್ಗೆ ಇರುವ ಅಗೌರವನ್ನು ತೋರಿಸುತ್ತಿದೆ.

ದೊಡ್ಡಮನಿ ಪ್ರಸಾದ್
ವಕೀಲರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಅಸ್ಪೃಶ್ಯ ಸಮುದಾಯಗಳೂ ಕ್ಷೌರದ ಅಂಗಡಿಗಳನ್ನು ತೆರೆಯಲಿ

Published

on

ಕ್ಷೌರ, ಅಸ್ಪೃಶ್ಯತೆ ಆಚರಿಸಲ್ಪಡುವ ಬಹು ದೊಡ್ಡ ಕ್ಷೇತ್ರ ಇದು. ದೊಡ್ಡ ಕ್ಷೇತ್ರ, ಯಾಕೆಂದರೆ ಕ್ಷೌರ ಮಾಡಲು ಮುಟ್ಟಲೇ ಬೇಕಲ್ಲವೆ? ಮುಟ್ಟದೆ, ಸ್ಪರ್ಶ ಮಾಡದೆ ಕ್ಷೌರ ಮಾಡಲು ಸಾಧ್ಯವೆ? ಇಲ್ಲ. ಸ್ಪರ್ಶ ಮಾಡುವ ಕಾರಣಕ್ಕಾಗಿ ಅಲ್ಲಿ ಅಸ್ಪೃಶ್ಯತೆ ಸಹಜ. ಹಾಗಿದ್ದರೆ ಏನು ಮಾಡಬೇಕು? ಬೇಡಬೇಕೆ ಕ್ಷೌರದ ಅಂಗಡಿ ಮುಂದೆ ನಿಂತು? ಅಥವ ಕ್ಷೌರ ಮಾಡಿಸಿಕೊಡಿ ಎಂದು ಸವರ್ಣೀಯರನ್ನು ಕಾಡಿ ಪೀಡಿಸಬೇಕೆ? Never. ಹಾಗಿದ್ದರೆ ಪರಿಹಾರ? ದಲಿತರೆ ಕ್ಷೌರದ ಅಂಗಡಿಗಳನ್ನು ತೆರೆಯುವುದು.

ಉದಾಹರಣೆಗೆ ನಾನು ಚಿಕ್ಕವನಿದ್ದಾಗ ದಲಿತನೇ ಆದ ನಮ್ಮ ಪಕ್ಕದ ಊರಿನ ಸಿದ್ದಣ್ಣ ಒಂದು ಕಬ್ಬಿಣದ ಪೆಟ್ಟಿಗೆ ಜೊತೆಗೊಂದಿಷ್ಟು ಬ್ಲೇಡ್ ಕ್ಷೌರ ಮಾಡಲು ರೇಜರ್ ತರುತ್ತಿದ್ದರು. ಭಾನುವಾರ ಆಯಿತೆಂದರೆ ಸಿದ್ದಣ್ಣ ನಮ್ಮೂರಿಗೆ ಹಾಜರ್ ಮುದುಕರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಸಿದ್ದಣ್ಣನ ಮುಂದೆ ಕ್ಯೂ. ನಮ್ಮದೆ ಕೆನ್ನೆಯನ್ನು ನಮ್ಮದೆ ಸಹೋದರನೊಬ್ಬ ಅಸ್ಪೃಶ್ಯತೆಯ ಸೋಂಕಿನ ಲವಲೇಶವೂ ಇಲ್ಲದೆ ಮುಟ್ಟುತ್ತ ಶೇವಿಂಗ್ ಮಾಡುತ್ತಿದ್ದರೆ… ಕಟಿಂಗ್ ಮಾಡುತ್ತಿದ್ದರೆ… ಆಹಾ, ಅದರ ಮಜಾನೇ ಬೇರೆ! ಬಹುಶಃ ಈಗಲೂ ಕೂಡ ಅಂತಹ ಆತ್ಮೀಯ ಕಟಿಂಗ್ ನಾನು ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ನಾವು ಕಾಣದ್ದೆಂದರೆ ಹೇರ್ ಕಟಿಂಗ್ ನಲ್ಲಿ ಅಸ್ಪೃಶ್ಯತೆ. ಆದರೆ ಇಂತಹ ಅಸ್ಪೃಶ್ಯತೆಯನ್ನು ಈಗ ಕೆಲ ಊರುಗಳಲ್ಲಿ ಈಗಲೂ ಇರುವುದನ್ನು ಕೇಳಿದಾಗ ನನಗೆ ನಮ್ಮ ಬಾಲ್ಯದ ಸಿದ್ದಣ್ಣ ಜ್ಞಾಪಕಕ್ಕೆ ಬಂದ. ಮತ್ತೆ ಹೇಳುತ್ತೇನೆ ದಲಿತರಲ್ಲೂ ನಮ್ಮೂರ ಸಿದ್ದಣ್ಣಂದಿರು ಹುಟ್ಟಿಕೊಂಡರೆ? ದಲಿತರಿಗೆ ಕ್ಷೌರದಂಗಡಿಯ ಅಸ್ಪೃಶ್ಯತೆಯ ಕಾಟ ಇರೊಲ್ಲ ಹಾಗೆ ಆರ್ಥಿಕವಾಗಿಯೂ ಸಂಪಾದನೆಯ ದಾರಿಯೊಂದು ಕಾಣುತ್ತದೆ.

ಮೊನ್ನೆ ಪತ್ರಿಕೆಯೊಂದರಲ್ಲಿ ಬಳ್ಳಾರಿಯ ಗ್ರಾಮವೊಂದರಲ್ಲಿ ದಲಿತರಿಗೆ ಕ್ಷೌರ ಮಾಡೊಲ್ಲ ನೀರು ಕೊಡೊಲ್ಲ ಎಂಬ ಸುದ್ದಿ ಓದಿದಾಗ ದಲಿತರಲ್ಲೂ ಕ್ಷೌರಿಕರು ಯಾಕೆ ಹುಟ್ಟಿಕೊಳ್ಳಬಾರದು ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಒಂದು ತಿಳಿಯಿರಿ ನಮ್ಮೆಲ್ಲ ಸಮಸ್ಯೆಗಳಿಗೂ ಸವರ್ಣೀಯರತ್ತ ದೂರುವುದು ಥರವಲ್ಲ. ನಮ್ಮ ಸಮಸ್ಯೆಗಳ ನಿವಾರಣೆಗಾಗಿ ನಾವೂ ಕೂಡ ಒಂದಷ್ಪು ಪರ್ಯಾಯ ದಾರಿ ಏನೇನು ಕಾಣಬಹುದು ಎಂಬುದಿಲ್ಲಿ ಮುಖ್ಯ. ಎಲ್ಲಾ ಸಮಸ್ಯೆಗಳಿಗೂ ಅಟ್ರಾಸಿಟಿ ಕೇಸ್ ಮುಖ್ಯವಾಗೊಲ್ಲ. ಆದ ಕಾರಣ ಅಸ್ಪೃಶ್ಯತೆ ಆಚರಿಸಲ್ಪಡುವ ಅದು ಕ್ಷೌರವಿರಬಹುದು, ಹೊಟೆಲ್ ಇರಬಹುದು ದಲಿತರು ಪರ್ಯಾಯ ದಾರಿ ನೋಡಲೆ ಬೇಕಾಗುತ್ತದೆ. ನಿಜ ಇದರಿಂದ ತತಕ್ಷಣಕ್ಕೆ ಆರ್ಥಿಕ ನಷ್ಟವಾಗಬಹುದು ಆದರೆ ಅಸ್ಪೃಶ್ಯತೆಯಂತಹ ಸಾಮಾಜಿಕ ನಷ್ಟ ತುಂಬಬಹುದು. ಹಾಗೆಯೇ ದೂರಗಾಮಿ ನೆಲೆಯಲ್ಲಿ ಆರ್ಥಿಕವಾಗಿಯೂ ಕೂಡ ಅದು ನಿರುದ್ಯೋಗ ಓಡಿಸುತ್ತದೆ ಲಾಭ ತಂದುಕೊಡುತ್ತದೆ. ಈ ಹಿನ್ನೆಲೆಯಲ್ಲಿ ಇತ್ತ ಯೋಚಿಸಲಿ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ

Published

on

ಸಾಂದರ್ಭಿಕ ಚಿತ್ರ

ತ್ತೀಚೆಗೆ ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ. ಅದಕ್ಕೆ ಕಾರಣಗಳು ಹತ್ತಾರು ಇರಬಹುದು.

ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ನಾನು ಸರ್ಕಾರಿ ದಂತವೈದ್ಯಕೀಯ ಕಾಲೇಜಿಗೆ ಸೇರಿದ್ದ ಆ ದಿನಗಳು. (ಅದನ್ನು ಪೂರ್ಣಗೊಳಿಸದೆ ಮುಂದೆ ನನ್ನ ದಾರಿ ನಾ ಹಿಡಿದೆ ಎಂಬುದು ನಂತರದ ಮಾತು). ಮೊದಲ ಎರಡು ವರ್ಷಗಳಲ್ಲಿ ಕೆಲವೊಂದು ಮೂಲಭೂತ ವೈದ್ಯಕೀಯ ವಿಷಯಗಳನ್ನೂ ಕಲಿಸಿಕೊಡಲಾಗುತ್ತದೆ. ಹೀಗೆ ನಾವು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ಮೂರ್ನಾಲ್ಕು ವಿಷಯಗಳನ್ನು ಮೊದಲ ವರ್ಷದಲ್ಲಿ ಕಲಿಯಬೇಕಿತ್ತು.

ಆಗ ಒಬ್ಬ ಪ್ರಾಧ್ಯಾಪಕ ತರಗತಿಯಲ್ಲಿ ಅದೆಷ್ಟು ಕೆಟ್ಟದಾಗಿ ಹೀಯಾಳಿಸಿ ಮಾತನಾಡುತ್ತಿದ್ದನೆಂದರೆ, ಆತನ ಮಾತುಗಳು ನನಗೆ ಎಂದೂ ಸಲ್ಲುತ್ತಿರಲಿಲ್ಲವಾದರೂ ಸಹ ನನ್ನಂತಹವರಿಗೆ ಬೇಸರ ತರುತ್ತಿದ್ದುದು ಮತ್ತು ಕೋಪ ಬರಿಸುತ್ತಿದ್ದುದು ನಿಜ. ನಾನು ಯಾರನ್ನೂ ಜಾತಿಯಿಂದ ಕಂಡಿಲ್ಲ, ಆದರೆ ಆತನ ವರ್ತನೆ ಮಾತ್ರ ನನಗೆ ಅವನ ಜಾತಿ ಹುಡುಕುವಂತೆ ಮಾಡಿತ್ತು. ಆತ ಬ್ರಾಹ್ಮಣರಲ್ಲೊಬ್ಬ ಮಹಾ ಬ್ರಾಹ್ಮಣ. ಅಷ್ಟೇ ಅಲ್ಲ, ಆನಂತರ ನನಗೆ ತಿಳಿದಿದ್ದು ಅವನೊಬ್ಬ ಮಹಾನ್ ಚಡ್ಡಿ ಎಂದೂ ಸಹ! ಯಾರಾದರೂ ವಿದ್ಯಾರ್ಥಿ ಅವನ ಪ್ರಶ್ನೆಗೆ ಉತ್ತರಿಸಲಿಲ್ಲವಾದರೆ, “ನಿನ್ನ ಹೆಸರೇನು? ಕೋಟಾದಲ್ಲಿ ಬಂದುಬಿಡ್ತಾರೆ, ಇಲ್ಲಿ ಏನೂ ಗೊತ್ತಿರೋದಿಲ್ಲ. ಪಿಯುಸಿಲಿ ಎಷ್ಟು ನಿನ್ನ ಪರ್ಸೆಂಟೇಜು?” ಎಂದು ಆತ ತರಗತಿಯಲ್ಲಿ ತೀರಾ ಕೆಟ್ಟ ದನಿಯಲ್ಲಿ ವ್ಯಂಗ್ಯವಾಗಿ ಛೇಡಿಸುತ್ತಿದ್ದ. ಏನೇನೋ ತನ್ನ ಕತೆ ಪುರಾಣಗಳನ್ನ ಬಡಬಡಿಸುತ್ತಿದ್ದ. ನಿಜಕ್ಕೂ ನನ್ನಂತಹವರಿಗೇ ಅವನ ನಡವಳಿಕೆ ಜಿಗುಪ್ಸೆ ಮೂಡಿಸುತ್ತಿತ್ತು. ಆದರೆ ನಾವು ಅಸಹಾಯಕರಾಗಿದ್ದೆವು. ಸಂಘಟನೆ ಏನೊಂದೂ ಇರಲಿಲ್ಲ. ಮೇಲಾಗಿ ವೃತ್ತಿ ಕೋರ್ಸ್ ನ (ಇಂಟರ್ನಲ್ಸ್, ಪ್ರಾಕ್ಟಿಕಲ್, ಹಾಳೂಮೂಳು) ಭಯ ಎಲ್ಲರಿಗೂ! ಸಂತ್ರಸ್ತರೂ ಸಹ ಒಂದೇ ಒಂದು ಸಲವೂ ಇದರ ವಿರುದ್ಧ ಸಂಘಟಿತರಾಗಿದ್ದನ್ನು ನಾ ಕಂಡಿಲ್ಲ. (ಅದಕ್ಕೆ ಕಾರಣಗಳೂ ಇಲ್ಲದಿಲ್ಲ).

ಈ ವ್ಯಕ್ತಿ ಎಷ್ಟು ಜಾತೀವಾದಿ ಎಂದರೆ, ನನಗೊಮ್ಮೆ ತೀವ್ರ ಅನಾರೋಗ್ಯದಿಂದಾಗಿ ಇಂಟರ್ನಲ್ ಪರೀಕ್ಷೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆತ ನನ್ನ ಹೆಸರನ್ನು ಪೂರ್ಣವಾಗಿ ಓದಿಕೊಂಡು, ನನ್ನ ಜಾತಿ ತಿಳಿದುಕೊಂಡು ಪುನಃ ಪರೀಕ್ಷೆ ಕೊಟ್ಟಾಗ ತಾನೇ ಕುಳಿತಿದ್ದ. ಆಗ ನನಗೆ, “ನೀನೇನು ಹೆದರಬೇಡ, ನಮ್ಮವಳೇ ನೀನು…..” ಇತ್ಯಾದಿಗಳನ್ನು ಹೇಳಿ ಸಮಾಧಾನಪಡಿಸಿದ್ದಲ್ಲದೆ ನನ್ನ ತಾಯಿಗೂ ಅಭಯ ನೀಡಿದ್ದನಂತೆ! ಇಂತಹ ಜಾತಿ ಆಧಾರಿತ ನಡವಳಿಕೆಯನ್ನು ಪ್ರಾಧ್ಯಾಪಕರಿಂದ ಎಂದೂ ನಿರೀಕ್ಷಿಸದಿದ್ದ ನಾನು ಒಂದು ರೀತಿ ಬೆಚ್ಚಿಬಿದ್ದಿದ್ದೆ. ಮರು ಉತ್ತರಿಸುವ ಮನಸ್ಸು ಇದ್ದರೂ ಅಷ್ಟು ಧೈರ್ಯ ಆಗ ನನ್ನಲ್ಲಿರಲಿಲ್ಲವೋ ಏನೋ. ಮೌನವಾಗಿ ಮನದೊಳಗೇ ನೊಂದು ಹಿಂದಿರುಗಿದ್ದೆ. ಸಾಕಷ್ಟು ಪರಿತಪಿಸಿದ್ದೆ. ಕಾಲೇಜಿನೊಳಗೆ ಜಾತಿ ಹುಡುಕಿ ಕೇಳದಿದ್ದರೂ ಫೇವರ್ ಮಾಡುವುದನ್ನು ಕಂಡು ಗಾಬರಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಯಾವ ಸಂಘಟನೆಯಲ್ಲೂ ತೊಡಗಿಕೊಂಡಿರಲಿಲ್ಲ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಮಟ್ಟದಲ್ಲಿ ಕುಳಿತವರ ಇಂತಹ ದುರ್ವರ್ತನೆಗಳು, ಜಾತಿವಾದಿ ಧೋರಣೆಗಳು ತಳ ಸಮುದಾಯಗಳ ವಿದ್ಯಾರ್ಥಿಗಳಿಗೆ ಅದೆಷ್ಟು ನೋವುಂಟು ಮಾಡಬೇಡ!? ಮಾನವೀಯತೆ ಕಲಿಸಬೇಕಾದ ವೈದ್ಯಕೀಯ ಕಾಲೇಜಿನಲ್ಲಿ ಜಾತಿ ತಾರತಮ್ಯದ ಪಾಠ ಹೇಳಿಕೊಟ್ಟು ಅಂತಹ ಕ್ರೂರ ವ್ಯವಸ್ಥೆಯನ್ನು ಪೋಷಿಸುವ ಮುಠ್ಠಾಳ ಪ್ರಾಧ್ಯಾಪಕರು! ರೋಹಿತ್ ವೇಮುಲ ಘಟನೆ ಇರಬಹುದು‌ ತದನಂತರದ ಇನ್ನಾವುದೇ ಪ್ರಕರಣವಿರಬಹುದು, ಅವುಗಳನ್ನು ಕಂಡಾಗೆಲ್ಲಾ ನನಗೆ ನನ್ನ ಅನುಭವ ನೆನಪಿಗೆ ಬಂದುಬಿಡುತ್ತದೆ. ನನ್ನ ಜಾತಿಯ ಕಾರಣದಿಂದಾಗಿಯೇ ನನಗೆ ನೆರವಾಗಲು ಆ ಪ್ರಾಧ್ಯಾಪಕ ಮುಂದಾಗಿದ್ದ, ನನಗದು ಖಂಡಿತಾ ಬೇಡವಾಗಿತ್ತು. ಇದೇ ಜಾತಿಯ ಕಾರ್ಡನ್ನು ಬಳಸಿ ತನ್ನ ವೃತ್ತಿಜೀವನದಲ್ಲಿ ಇನ್ನೆಷ್ಟು ಬ್ರಾಹ್ಮಣೇತರರನ್ನು ಆತ ಬಲಿ ಮಾಡಿರಲಿಕ್ಕಿಲ್ಲ?! ಮಿದುಳೊಳಗೆಲ್ಲಾ ಜನಿವಾರ ಸುತ್ತಿಕೊಂಡವರು, ಅಥವಾ ಇಂತಹ ಜಾತೀವಾದಿಗಳು (ಅವರವರ ಜಾತಿಗೆ ಆದ್ಯತೆ ನೀಡುವವರು) ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಈಗ ಇನ್ನೆಷ್ಟು ಸಂಖ್ಯೆಯಲ್ಲಿ ಹೆಚ್ಚಿರಬಹುದು? ಊಹಿಸಿಕೊಳ್ಳಲೂ ಭಯವಾಗುತ್ತದೆ.

ಜ್ಯೋತಿ ಅನಂತ ಸುಬ್ಬರಾವ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬುದ್ಧರ ಪ್ರಕಾರ ದಾನ ರೂಪದಲ್ಲಿ ಬಂದರೆ ಭಿಕ್ಕುಗಳೂ ಕೂಡ ಮಾಂಸ ತಿನ್ನಬಹುದು

Published

on

ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ನೀಡುತ್ತಾರೆ.

ಅಂಬೇಡ್ಕರರ ಪ್ರಕಾರ ಬುದ್ಧ ಎಂದು ಕೂಡ ಎಲ್ಲಿಯೂ ಕೂಡ ಅಹಿಂಸೆಗೆ ವ್ಯಾಖ್ಯೆ ನೀಡಿಲ್ಲ. ಅಪರೂಪಕ್ಕೆ ಅದೂ ಸಾಂದರ್ಭಿಕವಾಗಿ ಅದರ ಬಗ್ಗೆ ಬುದ್ಧ ಹೇಳುತ್ತಾರೆ ಅಷ್ಟೇ. ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ತಿಳಿಯಬರುವುದೇನೆಂದರೆ “ದಾನದ ಭಾಗವಾಗಿ ಮಾಂಸಾಹಾರ ನೀಡಿದರೆ ಬುದ್ಧ ಅದನ್ನು ಎಂದೂ ಕೂಡ ತಿರಸ್ಕರಿಸಲಿಲ್ಲ” ಎಂಬುದು. ಈ ಹಿನ್ನೆಲೆಯಲ್ಲಿ ಭಿಕ್ಕುಗಳೂ ಕೂಡ ಮಾಂಸಾಹಾರ ಸೇವಿಸಬಹುದು. ಆದರೆ ಒಂದು ಸಣ್ಣ ಕಂಡೀಷನ್ ಎಂದರೆ‌ ಅವರು ಆ ಪ್ರಾಣಿಯ ಹತ್ಯೆಯಲ್ಲಿ ಪಾಲುದಾರ ರಾಗಿರಬಾರದು ಅಷ್ಟೇ. (ನಿಜ ಹೇಳಬೇಕೆಂದರೆ, ನಮ್ಮ ಕಾರ್ಯಕ್ರಮಕ್ಕೆ ಅಂದು ಆಗಮಿಸಿದ್ದ ಇಬ್ಬರು ಬೌದ್ಧ ಭಿಕ್ಕುಗಳು
ಮಾಂಸಹಾರವನ್ನೆ ಸೇವಿಸಿದುದು). ಮತ್ತೂ ಒಂದು ವಾಸ್ತವವೆಂದರೆ ಭಿಕ್ಕುಗಳು ದಾನದ ರೂಪದಲ್ಲಿ ಬಂದ ಮಾಂಸಾಹಾರವನ್ನೂ ಸೇವಿಸಬಾರದು ಎಂದು ದೇವದತ್ತ ವಿರೋಧ ವ್ಯಕ್ತಪಡಿಸಿದಾಗ ಬುದ್ಧರು ದೇವದತ್ತನ ಆ ನಿಲುವನ್ನೇ ವಿರೋಧಿಸುತ್ತಾರೆ. ಆ ಮೂಲಕ ದಾನದ ರೂಪದಲ್ಲಿ ಮಾಂಸಾಹಾರ ಬಂದರೆ ಭಿಕ್ಕುಗಳು ಅದನ್ನು ಸೇವಿಸಬಹುದು ಎಂಬ ಅಂಶಕ್ಕೆ ಬುದ್ಧರು ಒಪ್ಪುಗೆಯ ಮುದ್ರೆ ಒತ್ತುತ್ತಾರೆ. ಅಂದಹಾಗೆ ಇದನ್ನು ಹೇಳುತ್ತಾ ಅಂಬೇಡ್ಕರರು “ಅಹಿಂಸೋ ಪರಮ ಧರ್ಮ” ಎಂಬುದು ಅತಿರೇಕದ ಸಿದ್ಧಾಂತವಾಗಿದೆ ಮತ್ತು ಅದು ಜೈನ ಧರ್ಮಕ್ಕೆ ಸೇರಿದ್ದೇ ಹೊರತು ಬೌದ್ಧ ಧರ್ಮಕ್ಕಲ್ಲ. ಬೌದ್ಧ ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪದಗಳಲ್ಲಿ ಹೇಳುತ್ತಾರೆ.

ಹಾಗಿದ್ದರೆ ಅಹಿಂಸೆ? ಅರ್ಥಾತ್ ಕೊಲ್ಲುವುದು ಅಥವಾ ಕೊಲ್ಲದಿರುವುದು? ಯಾಕೆಂದರೆ ಕೆಲವು ಕಾರಣಗಳಿಗಾಗಿಯೂ ಮನುಷ್ಯ ಮತ್ತೊಬ್ಬರನ್ನು ಕೊಲ್ಲುವ ಸಂದರ್ಭ ಬರುತ್ತದೆ. ಇದಕ್ಕೆ ಬುದ್ಧರು ನೇರ ಮಾತುಗಳಲ್ಲಿ ಹೇಳುವುದು “ಎಲ್ಲರನ್ನೂ ಪ್ರೀತಿಸು ಹೇಗೆಂದರೆ ಅವರನ್ನು ಕೊಲ್ಲುವ ಆಸೆಯೇ ನಿನಗೆ ಬರಬಾರದು” ಎಂದು! ಇದನ್ನು ಉಲ್ಲೇಖಿಸುತ್ತ ಬಾಬಾಸಾಹೇಬರು “ಇದು ಅಹಿಂಸೆಯ ಧನಾತ್ಮಕ ವ್ಯಾಖ್ಯೆಯಾಗಿದೆ” ಎನ್ನುತ್ತಾರೆ.

ಮುಂದುವರೆದು ಅಂಬೇಡ್ಕರರು ಹೇಳುವುದು, ಬುದ್ಧರು “ಕೊಲ್ಲುವುದಕ್ಕಾಗಿ ಕೊಲ್ಲು, ಅಗತ್ಯ ಇರುವುದರಿಂದ ಕೊಲ್ಲು” ಇವೆರಡರ ನಡುವಿನ ವ್ಯತ್ಯಾಸ ತಿಳಿಸಬಯಸಿದ್ದರು ಎಂದು. ಇದರರ್ಥ ಬುದ್ಧರು ಎಂದು ಕೂಡ “ಅಗತ್ಯ ಇರುವುದರಿಂದ ಕೊಲ್ಲುವುದನ್ನು ನಿಷೇಧಿಸಲಿಲ್ಲ”. ಹಾಗಿದ್ದರೆ ನಿಷೇಧಿಸಿದ್ದು? “ಕೊಲ್ಲುವುದಕ್ಕಾಗಿ ಕೊಲ್ಲು” ಎಂಬುದನ್ನು. ಇದನ್ನು ಬ್ರಾಹ್ಮಣಧರ್ಮ ಮತ್ತು ಜೈನ ಧರ್ಮಗಳಿಗೆ ಹೋಲಿಸುತ್ತ ಅಂಬೇಡ್ಕರರು ಹೇಳುವುದು “ಬ್ರಾಹ್ಮಣ ಧರ್ಮ ತನ್ನಲ್ಲಿ ‘ಕೊಲ್ಲುವುದಕ್ಕಾಗಿ ಕೊಲ್ಲು’ ಎಂಬ ಸಿದ್ಧಾಂತ ಹೊಂದಿದ್ದರೆ, ಜೈನಧರ್ಮ ‘ಕೊಲ್ಲಲೇಬಾರದು’ ಎಂಬ ಸಿದ್ಧಾಂತ ಹೊಂದಿದೆ. ಆದರೆ ಬೌದ್ಧ ಧರ್ಮ ಇವೆರಡರ ನಡುವಿನ ಮಧ್ಯಮ ಮಾರ್ಗ ಹೊಂದಿದೆ” ಎಂದು. ಈ ದಿಸೆಯಲ್ಲಿ ಬೌದ್ಧ ಧರ್ಮ ಪ್ರತಿಪಾದಿಸುವುದು “ಅಗತ್ಯ ಇರುವುದರಿಂದ ಕೊಲ್ಲು” ಸಿದ್ಧಾಂತವನ್ನು.

ಹಾಗಿದ್ದರೆ ಕೊಲ್ಲುವ ಅಗತ್ಯ ಎಲ್ಲಿದೆ? ಎಲ್ಲಾ ಕಡೆಯೂ ಇರುತ್ತದಲ್ಲವೆ? ಎಂದು ಯಾರಾದರೂ ಪ್ರಶ್ನಿಸಬಹುದು. ಅದಕ್ಕೆ ಬುದ್ಧ ಹೇಳುವುದು “ಅಂತಹ ಕೊಲ್ಲುವ ಅಗತ್ಯತೆಯನ್ನು ಸಂಬಂಧಿಸಿದ ವ್ಯಕ್ತಿ ನಿರ್ಧರಿಸಬೇಕು. ಏಕೆಂದರೆ ಮನುಷ್ಯನಿಗೆ ಪ್ರಜ್ಞೆ ಎಂಬುದೊಂದಿದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ, ಅಂದರೆ ಕೊಲ್ಲುವ ಅಗತ್ಯತೆಯ ಸಂದರ್ಭದಲ್ಲಿ ಆತ ಅದನ್ನು ನಿರ್ಧರಿಸಲು ತನ್ನ ಪ್ರಜ್ಞೆಯನ್ನು ಬಳಸಬೇಕು” ಎಂದು.

ಒಟ್ಟಾರೆ ಬುದ್ಧರ ಈ ಬೋಧನೆಗಳನ್ನೆಲ್ಲ ಉಲ್ಲೇಖಿಸುತ್ತ ಬಾಬಾಸಾಹೇಬರು ಹೇಳುವುದು, “ಬುದ್ಧ ಅಹಿಂಸೆಯನ್ನು ಮದ್ಯಮ ಮಾರ್ಗದಲ್ಲಿ ಇಟ್ಟರು.ಇದರರ್ಥ ಬುದ್ಧ ಅಹಿಂಸೆಯನ್ನು ಒಂದು ಕಾನೂನಾಗಿ ಇಡಲಿಲ್ಲ, ಬದಲಿಗೆ ಒಂದು ತತ್ವವಾಗಿ ಇಟ್ಟರು. ಅಂದಹಾಗೆ ತತ್ವವನ್ನು ವ್ಯಕ್ತಿಯೊಬ್ಬ ಸ್ವತಂತ್ರವಾಗಿ ಅಚರಿಸಬಹುದು. ಅದರಲ್ಲಿ ಕಟ್ಟುಪಾಡಿಲ್ಲ. ಆದರೆ ಕಾನೂನು ಹಾಗಲ್ಲ ಅದನ್ನು ಉಲ್ಲಂಘಿಸಲೇಬಾರದು. ಈ ನಿಟ್ಟಿನಲ್ಲಿ ಬುದ್ಧ ಅಹಿಂಸೆಯನ್ನು ಕಾನೂನಾಗಿ ಇಡದೆ ತತ್ವವಾಗಿ ಇಟ್ಟಿರುವುದರಿಂದ ಅನುಯಾಯಿಗಳು ಅದನ್ನು ಆಚರಿಸಲು ಸರ್ವ ಸ್ವತಂತ್ರರು ಮತ್ತು ಅದರಲ್ಲಿ ಅಂತಹ ನಿರ್ಬಂಧವೇನಿಲ್ಲ”.

ಒಂದಂತು ಸ್ಪಷ್ಟ, ಬುದ್ಧನೇ ಅಂತಹ ನಿರ್ಬಂಧಗಳನ್ನು ಹೇರಿಲ್ಲದಿರುವುದರಿಂದ ನಾವ್ಯಾಕೆ ಹೇರಿಕೊಳ್ಳಬೇಕು ಮಾಂಸ ತಿನ್ನಬಾರದು ಅದು ಮಾಡಬಾರದು ಇದು ಮಾಡಬಾರದು ಎಂದು? In fact ದಾನದ ರೂಪದಲ್ಲಿ ಬಂದರೆ ಭಿಕ್ಕುಗಳು ಮಾಂಸ ತಿನ್ನುವುದಕ್ಕೂ ಬುದ್ಧ ನಿಷೇಧ ಹೇರಿಲ್ಲ. ಹೀಗಿರುವಾಗ ಸಾಮಾನ್ಯ ಅನುಯಾಯಿಗಳಿಗೆ? ಆದ್ದರಿಂದ ಬೌದ್ಧ ಧರ್ಮ ಪ್ರಚಾರ ಮಾಡುವಾಗ ಮಾಂಸ ತಿನ್ನಬಾರದು, ಮದ್ಯಪಾನ ಮಾಡಬಾರದು ಎಂದು ಅನವಶ್ಯಕವಾಗಿ ಹೇಳುವುದು ಬೇಡ. ಬದಲಿಗೆ ಅದನ್ನು ಅನುಯಾಯಿಗಳಿಗೆ ಬಿಟ್ಟು ಬಿಡಬೇಕು. ಒಂದು ಕಾನೂನಾಗಿ ಅದನ್ನು ಅನುಯಾಯಿಗಳ ಮೇಲೆ ಹೇರಲು ಹೋಗಬಾರದು. ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿ ಓದದೆ, ಬುದ್ಧರ ಈ ಮಧ್ಯಮ ಮಾರ್ಗವನ್ನು ಅರ್ಥಮಾಡಿಕೊಳ್ಳದೆ ಇನ್ನೊಬ್ಬರ ಮೇಲೆ “ಮಾಂಸ ತಿನ್ನಬೇಡ, ಮದ್ಯಪಾನ ಮಾಡಬೇಡ” ಎಂದು ಕಾನೂನಿನ ರೀತಿ ಬಲವಂತ ಪಡಿಸಿದರೆ ಖಂಡಿತ ಅದು ಬೌದ್ಧ ಧರ್ಮದ ಬೆಳವಣಿಗೆಗೆ ಮಾರಕವಾಗಲಿದೆ.

ರಘೋತ್ತಮ ಹೊ.ಬ

(ಈ ಲೇಖನಕ್ಕೆ ಆಧಾರ: Buddha and his Dhamma by Babasaheb Ambedkar, Pp.346& 347)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending