Connect with us

ಬಹಿರಂಗ

ಏಪ್ರಿಲ್ 1 | ಆರ್.ಬಿ.ಐ ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್ : ಮಿಸ್ ಮಾಡ್ದೆ ಓದಿ

Published

on

ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb.ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI ನ ಅರ್ಥಶಾಸ್ತ್ರಕ್ಕೂ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯ RBIಗೂ ಅಂಬೇಡ್ಕರ್ ಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೇಳುವುದಾದರೆ…

ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ 1913ರಲ್ಲಿ ಅಂಬೇಡ್ಕರರು ಮುಂಬಯಿನ ಎಲ್ಫಿನ್ ಸ್ಟೋನ್ ಕಾಲೇಜ್ ನಲ್ಲಿ ಬಿ.ಎ ಪದವಿ ಪಡೆದರು. ವಿಷಯ: ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ. ಮುಂದುವರೆದು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಅದೇ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ತದನಂತರ 1917ರಲ್ಲಿ ಅಂಬೇಡ್ಕರರು ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದರಾದರೂ ಅರ್ಥಶಾಸ್ತ್ರದ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟು ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 1921ರಲ್ಲಿ “ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ” ಎಂಬ ಪ್ರೌಢ ಪ್ರಬಂಧ (thesis) ಮಂಡಿಸಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು. ಗಮನಿಸಿ, ಅಂಬೇಡ್ಕರರ ಪ್ರಬಂಧದ ಈ ವಿಷಯವನ್ನು ಆ ಮೂಲಕ ಭಾರತೀಯ ಹಣಕಾಸು ವ್ಯವಸ್ಥೆಗೆ ಒಂದು ರೂಪ ಕೊಡುವಲ್ಲಿ ಅವರ ಮೆದುಳಿನಲ್ಲಿ ಹುಟ್ಟಿದ ಆ ವಿಷಯವನ್ನು. ಅಂದರೆ “ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ”, ಅರ್ಥಾತ್ ಹಣಕಾಸಿನ ಚಲಾವಣೆಯನ್ನು ವಿಕೇಂದ್ರೀಕರಿಸುವುದು.

ಮುಂದುವರೆದು ಇದೇ ವಿಷಯದ ಸಂಶೋಧನೆ ಮುಂದುವರೆಸಿದ ಅಂಬೇಡ್ಕರರು 1923ರಲ್ಲಿ ” ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ. ಭಾರತೀಯ ಕರೆನ್ಸಿ ಮತ್ತು ಬ್ಯಾಂಕಿಂಗ್ ನ ಇತಿಹಾಸ ” ಎಂಬ ಮತ್ತೊಂದು ಪ್ರೌಢ ಪ್ರಬಂಧ ಮಂಡಿಸಿದರು. ಅಂದಹಾಗೆ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಬೇಡ್ಕರರ ಈ ಅದ್ಭುತ ಕೃತಿಗೆ “ಡಾಕ್ಟರ್ ಆಫ್ ಸೈನ್ಸ್ (D.Sc)” ಪದವಿ ಇತ್ತು ಗೌರವಿಸಿತು ಮತ್ತು ಅಂಬೇಡ್ಕರರ ಈ D.Sc ಪದವಿ ಪುರಸ್ಕೃತ ಈ ಕೃತಿಯನ್ನು ಲಂಡನ್ ನ “ಪಿ.ಎಸ್.ಕಿಂಗ್ ಅಂಡ್ ಕಂಪನಿ” ಪ್ರಕಾಶನ ಸಂಸ್ಥೆಯು “Problem of Rupee” ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಅದೇ ವರ್ಷ ಅಂದರೆ 1923 ರಲ್ಲಿ ಪ್ರಕಟಿಸಿತು.

ಹೀಗೆ ಅಂಬೇಡ್ಕರರ ಅರ್ಥಶಾಸ್ತ್ರದ ಚಿಂತನೆ, ಭಾರತದ ಹಣಕಾಸು ವ್ಯವಸ್ಥೆಯ ಸಮಸ್ಯೆ ಕುರಿತ ಈ ಸಂಶೋಧನೆ ಲಂಡನ್ ನಲ್ಲೇ ಬ್ರಿಟಿಷ್ ಆಡಳಿತಗಾರರ ಕೈಸೇರುತ್ತಲೇ ಅಂಬೇಡ್ಕರರು “ರೂಪಾಯಿಯ ಸಮಸ್ಯೆ , ಅದರ ಮೂಲ ಮತ್ತು ಪರಿಹಾರ” ಎಂದು ಹೇಳಿದ್ದರಲ್ಲ, ಅದರ ಪರಿಹಾರಾರ್ಥವಾಗಿ ಬ್ರಿಟಿಷ್ ಸರ್ಕಾರ 1926ರಲ್ಲಿ ಹಿಲ್ಟನ್ ಯಂಗ್ ರವರ ನೇತೃತ್ವದಲ್ಲಿ Royal Commission on Indian Currency and Finance ಎಂಬ ಆಯೋಗ ನೇಮಿಸಿತು. ಈ ವಿಷಯ ದಾಖಲಿಸುತ್ತ ಅಂಬೇಡ್ಕರ್ ವಾದಿ ಲೇಖಕ ಕ್ರಿಸ್ಟೋಫರ್ ಜೆಫರ್ಲೆಟ್”ಹಾಗೆ ಭೇಟಿಕೊಟ್ಟ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಕೂಡ ಆಕರ ಗ್ರಂಥವಾಗಿ (reference book) ಅಂಬೇಡ್ಕರರು ಪ್ರಕಟಿಸಿದ್ದ “ಪ್ರಾಬ್ಲಂ ಆಫ್ ರುಪೀ” ಎಂಬ ಆ ಕೃತಿ ಇತ್ತು” ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ಆ ಆಯೋಗ ಅಂಬೇಡ್ಕರರು ಎತ್ತಿದ್ದ ಸಮಸ್ಯೆಯ ಈ ಎಳೆ ಹಿಡಿದು ಭಾರತದಲ್ಲಿ ದೇಶದಾದ್ಯಂತ ಸಂಚರಿಸಿ ಅನೇಕರಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿತು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರು ಕೂಡ ಆ ಆಯೋಗದ ಮುಂದೆ ಖುದ್ದು ಹಾಜರಾಗಿ ಸಾಕ್ಷಿ ನುಡಿದರು, ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಮಂಡಿಸಿದರು. (ಅಂಬೇಡ್ಕರರ ಆ ಲಿಖಿತ ಸಾಕ್ಷಿ ಕೂಡ ಭಾರತ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರರ ಬರಹಗಳು ಭಾಷಣಗಳು ಸಂಪುಟಗಳ ಸರಣಿಯಲ್ಲಿದೆ.)

ಹಾಗಿದ್ದರೆ ಕರೆನ್ಸಿ ಕುರಿತು ಅಂಬೇಡ್ಕರ್
ಏನು ಪ್ರತಿಪಾದಿಸಿದರು? ಈ ಬಗ್ಗೆ ಹೇಳುವ ಅವರ “ಕರೆನ್ಸಿ ನಿಯಂತ್ರಣ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದು ಅಪಾಯಕಾರಿ. ಯಾಕೆಂದರೆ ಕರೆನ್ಸಿ ಪೂರೈಕೆಯನ್ನು ವಾಣಿಜ್ಯದ ಅಗತ್ಯಕ್ಕೆ ತಕ್ಕಂತೆ
ಹೆಚ್ಚಿಸಬೇಕು ಅಥವಾ ಕಡಿಮೆಗೊಳಿಸಬೇಕು. ಆದರೆ ಆತಂಕದ ವಿಷಯವೆಂದರೆ ಸರ್ಕಾರ ಕೆಲವೊಮ್ಮೆ ಯಾವುದೇ ಪಶ್ಚಾತ್ತಾಪ ಪಡದೆ ಅನಿಯಂತ್ರಿತವಾಗಿ ಕರೆನ್ಸಿ ಉತ್ಪಾದಿಸಬಹುದು. ಇದು ಇಡೀ ಕರೆನ್ಸಿ ವ್ಯವಸ್ಥೆಯನ್ನೇ ನಾಶಗೊಳಿಸಲಿದೆ. ಈ ನಿಟ್ಟಿನಲ್ಲಿ ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ”
ಆದ್ದರಿಂದ ಹಿಲ್ಟನ್ ಯಂಗ್ ಆಯೋಗದ ಮುಂದೆ ಅಂಬೇಡ್ಕರರು ಹೇಳುವುದು ಕರೆನ್ಸಿ ಪೂರೈಕೆ ಮತ್ತು ನಿಯಂತ್ರಣವನ್ನು ಸರ್ಕಾರಕ್ಕೆ ವಹಿಸುವ ಬದಲು ಕೇಂದ್ರೀಯ ಬ್ಯಾಂಕ್ ಒಂದನ್ನು ಸ್ಥಾಪಿಸಿ ಅದಕ್ಕೆ ವಹಿಸಬೇಕು ಎಂದು.

ಅಂದಹಾಗೆ ಇಂತಹ ಸಾಕ್ಷಿ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಹಿಲ್ಟನ್ ಯಂಗ್ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುತ್ತಲೇ ಕೇಂದ್ರೀಯ ಅಸೆಂಬ್ಲಿಯು 1934ರಲ್ಲಿ RBI ಕಾಯಿದೆಯನ್ನು ಅಂಗೀಕರಿಸಿತು. ಪರಿಣಾಮ 1935 ಏಪ್ರಿಲ್ 1 ರಂದು RBI ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಕುರಿತು ಮಾಹಿತಿ ದಾಖಲಿಸುವ ವಿಕಿಪೀಡಿಯ RBI was conceptualized as per the guidelines, working style and outlook presented by Bhimrao Ramji Ambedkar ಎನ್ನುತ್ತದೆ.

ಪ್ರಶ್ನೆ ಎಂದರೆ ಈ ಮಾಹಿತಿ ಭಾರತೀಯರಿಗೆ ಎಷ್ಟು ತಿಳಿದಿದೆ? ಎಂಬುದು. ಏಕೆಂದರೆ ಜನಸಾಮಾನ್ಯರು ಸುಮ್ಮನೆ ನೋಟು ಎಣಿಸಿಕೊಳ್ಳುತ್ತಾರೆ, ಅಲ್ಲಿ ಕಾಣುವ Reserve Bank of India ಎಂಬ ಮುದ್ರಣ ಕಣ್ತುಂಬಿಕೊಳ್ಳುತ್ತಾರೆ. ಆದರೆ ಅದರ ಸ್ಥಾಪನೆ ಹಿಂದಿರುವ ಚಿಂತನೆ? ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಓರ್ವ ವಿದ್ಯಾರ್ಥಿ ತನ್ನ ಬಿಎ ಪದವಿಯಿಂದ ಹಿಡಿದು ಡಿಎಸ್ಸಿ ಪದವಿವರೆಗೆ ಅದನ್ನು ಪ್ರತಿಪಾದಿಸಿದ ರೀತಿ? ಪ್ರತಿಪಾದಿಸಿ ಸ್ವತಃ ಅದರ ಸ್ಥಾಪನೆಗೆ ಸಾಕ್ಷಿ ನುಡಿದ ರೀತಿ? ನಿಜ, ಬಾಬಾಸಾಹೇಬ್ ಅಂಬೇಡ್ಕರರೇನು ತನ್ನನ್ನು RBI ಸ್ಥಾಪಕ ಎಂದು ಹೇಳಲಿ ಅಥವಾ ಜನಸಾಮಾನ್ಯರು ಹಾಗೆ ಗುರುತಿಸಲಿ ಎಂದು ಈ ಸಾಧನೆ ಮಾಡಿರಲಿಕ್ಕಿಲ್ಲ. ಅರ್ಥಶಾಸ್ತ್ರದ ಓರ್ವ ಸಂಶೋಧನಾರ್ಥಿಯಾಗಿ ತಮ್ಮ ಸಂಶೋಧನೆ ಮೂಲಕ ಆ ಕಾಲದಲ್ಲಿ ರೂಪಾಯಿ ಎದುರಿಸುತ್ತಿದ್ದ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಅವರು ಕಂಡುಹಿಡಿದರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಅಂತಹ RBI ಸ್ಥಾಪನೆಯ ಸಾಧನೆಯನ್ನು ನಾವು ಅಂದರೆ ಜನಸಾಮಾನ್ಯರು ಗುರುತಿಸಬೇಕು, ಇತಿಹಾಸದಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಬಳಸುವ ಹಣಕ್ಕೆ ಮೌಲ್ಯ ಇರುವುದಿಲ್ಲ. ಏಕೆಂದರೆ ಅಂಬೇಡ್ಕರರು ಅದಕ್ಕೊಂದು ರೂಪ ಕೊಟ್ಟು ಇಂದು ನಮ್ಮ ಕೈಗೆ ಅದು ಸಿಗುವಂತೆ ಮಾಡದಿದ್ದರೆ ಅದು ಅದ್ಯಾವ ಶ್ರೀಮಂತನ ತಿಜೋರಿ ಸೇರುತ್ತಿತ್ತೋ! ಹಣ ಎಂದರೆ ಹೆಣವಿರಲಿ ನಾವೇ ಬಾಯಿ ಬಾಯಿ ಬಿಡಬೇಕಿತ್ತಷ್ಟೆ!!

-ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

“ಸುರರು ಮತ್ತು ಅಸುರರು ಇಬ್ಬರೂ ಒಂದೇ ತಂದೆಯ ಮಕ್ಕಳು” : ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ ಕಶ್ಯಪ ಎಂಬ ಒಬ್ಬನೇ ಸಾಮಾನ್ಯ ತಂದೆಯ ವಂಶಜರು. ಇದರ ಹಿಂದಿರುವ ಕತೆ ಎಂದರೆ, ದಕ್ಷ ಪ್ರಜಾಪತಿಗೆ 60 ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ 13 ಮಂದಿಯನ್ನು ಕಷ್ಯಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಷ್ಯಪನ ಆ 13 ಮಂದಿ ಹೆಂಡತಿಯರಲ್ಲಿ ದಿತಿ ಮತ್ತು ಅದಿತಿ ಕೂಡ ಇಬ್ಬರಾಗಿದ್ದರು. ದಿತಿಗೆ ಹುಟ್ಟಿದ ಮಕ್ಕಳನ್ನು ಅಸುರರು ಎಂದು ಕರೆಯಲಾಗುತ್ತಿತ್ತು. ಅದಿತಿಗೆ ಹುಟ್ಟಿದ ಮಕ್ಕಳನ್ನು ಸುರರು ಅಥವಾ ದೇವಾ(Devas)ರುಗಳು ಎಂದು ಕರೆಯಲಾಗುತ್ತಿತ್ತು. ಅಂದಹಾಗೆ ಈ ಇಬ್ಬರೂ (ಸುರರು ಮತ್ತು ಅಸುರರು) ಈ ಪ್ರಪಂಚದ ಸಾರ್ವಭೌಮತ್ವಕ್ಕಾಗಿ ಬಹಳ ದೀರ್ಘ ಮತ್ತು ರಕ್ತಪಾತದ ಯುದ್ಧ ನಡೆಸಿದರು. ಅನುಮಾನವೇ ಬೇಡ ಇದು ಪುರಾಣ. ಈ ಪುರಾಣವನ್ನು ಇತಿಹಾಸ ಎನ್ನುವುದು ಅತಿಶಯೋಕ್ತಿಯೆನಿಸಿದರೂ ಆಗಲೂ ಇದು ಇತಿಹಾಸವಾಗಿದೆ”. (ಬಾಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.419)

ಅಂಬೇಡ್ಕರರು ಪ್ರಸ್ತಾಪಿಸುವ ಈ ಪುರಾಣ ಕಂ ಇತಿಹಾಸದ ಪ್ರಕಾರ ಅಸುರರು ಮತ್ತು ಸುರರು ಇಬ್ಬರೂ ಒಂದೇ ತಂದೆಯ ಆದರೆ ಇಬ್ಬರು ಬೇರೆ ಬೇರೆ ತಾಯಿಯ ಮಕ್ಕಳು. ಅರ್ಥಾತ್‌ ಇಬ್ಬರೂ ಅಣ್ಣ ತಮ್ಮಂದಿರು. ಹೀಗಿರುವಾಗ ಇಲ್ಲಿ ಸುರರ ಸ್ವಂತ ಸೋದರರಾದ ಅಸುರರನ್ನು ಶೋಷಿತ ಸಮುದಾಯಗಳು ಆದರ್ಶವಾಗಿ ತೆಗೆದುಕೊಳ್ಳುವುದು ಹೇಗೆ? ಈ ಕಾರಣಕ್ಕಾಗಿ ಈ ಅಸುರರು ಮತ್ತು ಸುರರ ಗೋಜಲಾದರೂ ನಮಗೆ ಏಕೆ? ಸುಮ್ಮನೆ ಗೌತಮ ಬುದ್ಧರ ಬಳಿ ತೆರಳಿದರೆ ಸಾಕಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು

Published

on

  • ಹ.ರಾ.ಮಹಿಶ

ಸೇಫ್ ಝೋನ್ ನಲ್ಲಿ ದೂರದಿಂದ ನಿಂತು‌ ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ‌ ಮೈ ಹೊಳಪು, ಮತ್ತು‌ ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!

ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು‌ ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!

ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!

“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!

ಛೆ…

ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ‌ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು‌ ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….

ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ‌ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?

ಮತ್ತು 1955 ರಲ್ಲಿ‌ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?

ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…

ಅಕಸ್ಮಾತ್ ‌ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.

ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending