Connect with us

ಬಹಿರಂಗ

ಅಸಹನೆಯಿಂದ ಕಂಗೆಟ್ಟರುವ ಪಾಕಿಸ್ತಾನ ಮತ್ತು ಅದರ ಮುಖ್ಯಸ್ಥ ಇಮ್ರಾನ್ ಖಾನ್

Published

on

ಒಂದು ನಿಮಿಷ, ಇದಕ್ಕಾಗಿ ಯಾರೂ ಸಂಭ್ರಮಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಹತಾಶ ಮನಸ್ಥಿತಿಯ ಮತ್ತೊಂದು ಮುಂದುವರಿದ ಭಾಗವೇ ಅಪಾಯಕಾರಿ ಚಟುವಟಿಕೆ. ಭಾರತದ ಬೃಹತ್ ಸೈನಿಕ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಕಡಿಮೆ ಎಂಬುದು ನಿಜ. ಆದರೆ ಯುದ್ಧ ಎಂಬ ವಿನಾಶಕಾರಿ ಆಟದಲ್ಲಿ ಶಕ್ತಿಯ ಜೊತೆಗೆ ದುಷ್ಟತನ ಸಹ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕಿದೆ.

ಒಂದು ಹಂತದವರೆಗೆ ಹೊಡೆದಾಟ ಬಡಿದಾಟ ಎಲ್ಲವೂ ನಡೆಯುತ್ತದೆ. ಆದರೆ ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ಅಥವಾ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದೇ ಆದರೆ ಮೊದಲು ಪ್ರಯೋಗಸಿದ ದೇಶವನ್ನು ಇಡೀ ವಿಶ್ವದ ಮಾನವ ಸಂಕುಲ ಕ್ಷಮಿಸುವುದಿಲ್ಲ ಎಂಬುದನ್ನು ಮರೆಯದಿರೋಣ.

ಜಪಾನಿನ ಹಿರೋಷಿಮಾ ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣು ಬಾಂಬ್ ಪ್ರಯೋಗಿಸಿ ಈಗಲೂ ಬಲಾಡ್ಯವಾಗಿ ಉಳಿದಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.ಹೌದು, ಅಮೆರಿಕ ಪರ್ಲ್ ಹಾರ್ಬರ್ ದ್ವೀಪದ ಮೇಲೆ ಜಪಾನಿನ ದಾಳಿಗೆ ವಿರುದ್ದವಾಗಿ ಹಿರೋಷಿಮಾ ಮತ್ತು ನಾಗಸಾಕಿ ನಗರಗಳಲ್ಲಿ ಅತ್ಯಂತ ಅಮಾನವೀಯ ಕೃತ್ಯವನ್ನು ಎಸಗಿಯೂ ಅದನ್ನು ಸಮರ್ಥಿಸಿಕೊಂಡು ಯಶಸ್ವಿಯಾಗಿದೆ. ಅದಕ್ಕೆ ಕಾರಣ ಅಮೆರಿಕಾದ Extraordinary ಎಂದು ಹೇಳಬಹುದಾದ ಆರ್ಥಿಕ ಮತ್ತು ಸೈನಿಕ ಶಕ್ತಿ. ಅಷ್ಟು ಶಕ್ತಿ ಅಥವಾ ಆ ಉದಾಹರಣೆಯನ್ನುಭಾರತ ಪಾಕಿಸ್ತಾನದ ವಿಷಯದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಲ್ಲ.

ನೀವೇ ಯೋಚಿಸಿ ನೋಡಿ. ಭಾರತ ಪಾಕಿಸ್ತಾನದ ಮೇಲೆ ಅಣು ಬಾಬ್ ಹಾಕಿದರೆ ಬಹುಶಃ 10 ಲಕ್ಷ ಜನ ನೇರವಾಗಿ ಇನ್ನೊಂದು ಹತ್ತು ಲಕ್ಷ ಜನ ಪರೋಕ್ಷವಾಗಿ ಸಾಯುತ್ತಾರೆ. ಕೆಲವು ಚದರ ಕಿಲೋಮೀಟರ್ ಗಳಷ್ಟು ಭೂಮಿ ವಾಸಿಸಲು ಅಯೋಗ್ಯವಾಗುತ್ತದೆ.
ಅದೇರೀತಿ ಭಾರತದ ಮೇಲೆ ಪಾಕಿಸ್ತಾನ ಬಾಂಬ್ ಹಾಕಿದರು ಪರಿಣಾಮ ಅಷ್ಟೇ ತೀವ್ರವಾಗಿ ಇರುತ್ತದೆ.

ಇದು ಬೇಕೆ ? ತಡೆಯುವ ಮಾರ್ಗಗಳು ಇಲ್ಲವೇ ? ಭಾರತ ಮತ್ತು ಪಾಕಿಸ್ತಾನದಲ್ಲಿ ಒಳ್ಳೆಯ, ಹೃದಯವಂತ, ಬುದ್ದಿವಂತ ಜನರಾರು ಇಲ್ಲವೇ ? ಎಲ್ಲರೂ ಸತ್ತು ಹೋಗಿದ್ದಾರೆಯೇ ? ಯಾರೋ ಕೆಲವು ಮೂಲಭೂತವಾದಿ ಭಯೋತ್ಪಾದಕರ ಹುಚ್ಚಾಟಕ್ಕೆ ಅಮಾಯಕ 20 ಲಕ್ಷ ಜನ ಸಾಯಬೇಕೆ ?

ಭಾರತದ ಸರ್ವೋಚ್ಚ ನಾಯಕ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಸರ್ವೋಚ್ಚ ನಾಯಕ ಇಮ್ರಾನ್ ಖಾನ್ ಗೆ ಇದು ತಿಳಿದಿಲ್ಲವೇ ? ಇಬ್ಬರ ನಡುವೆ ಸಣ್ಣ ಪ್ರದೇಶ ಕಾಶ್ಮೀರದ ಬಗ್ಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವಷ್ಟು ಇಬ್ಬರಿಗೂ ಸಾಮರ್ಥ್ಯ ಇಲ್ಲವೇ ?

ಹಾಗಾದರೆ ಸರ್ವೋತ್ಕೃಷ್ಟ ಶಾಂತಿ ಸಹನೆ ಪ್ರೀತಿ ಹೇಳುತ್ತದೆ ಎನ್ನುವ ನಂಬಿಕೆಯ ಹಿಂದೂ ಮತ್ತು ಇಸ್ಲಾಂ ಧರ್ಮದ ತಿರುಳುಗಳು ಸುಳ್ಳೆ ? ಧರ್ಮ ಇರುವುದು ಕೇವಲ ಭೋದಿಸಲು ಮಾತ್ರ ಅನುಸರಿಸಲು ಅಲ್ಲ ಎಂದು ಭಾವಿಸೋಣವೇ ? ನಿಮ್ಮ ನಿಮ್ಮ ದೇವರು ಧರ್ಮಗಳು ಕೇವಲ ಒಂದು ಸಣ್ಣ ಜಾಗದ ವಿಷಯ ಪರಿಹರಿಸುವಷ್ಟು ತಿಳಿವಳಿಕೆ, ಸಹನೆ, ತ್ಯಾಗ ಕಲಿಸುವುದಿಲ್ಲ ಅದಕ್ಕಾಗಿ ದಶಕಗಳ ಕಾಲ ರಕ್ತಪಾತ ನಡೆಸಬೇಕು ಎನ್ನುವುದಾದರೆ ಧರ್ಮ ದೇವರುಗಳ ಅವಶ್ಯಕತೆ ಇದೆಯೇ ?

ಚಿಕ್ಕ ಮಕ್ಕಳು ಗೋಲಿ ಆಡುವಾಗ ನಿನ್ನದು ತಪ್ಪು ನನ್ನದು ಸರಿ ಎನ್ನುವ ಬಾಲಿಶ ವರ್ತನೆ ಒಂದು ದೇಶದ ಮುಖ್ಯಸ್ಥರಿಗೆ ಇದ್ದರೆ ಹೇಗೆ ? ಸಮಸ್ಯೆ ಇರುವುದು ನಿಜ. ಕಾರಣ ಏನೇ ಇರಲಿ ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಎಲ್ಲಾ ಪ್ರವಚನ, ಭೋದನೆ, ಮಂದಿರ, ಮಸೀದಿ ಗ್ರಂಥಗಳನ್ನು ಕಟ್ಟಿ ಮೂಲೆಗೆ ಬಿಸಾಕಿ.
” ಬಲವೇ ನ್ಯಾಯ ” ಎಂಬುದನ್ನು ಜ‌ನರಿಗೆ ಹೇಳಿ.‌ತಾಖತ್ತು ಇದ್ದವರು ಉಳಿಯಲಿ ದುರ್ಬಲರು ಸಾಯಲಿ. ಇದೇ ಕಾಡಿನ ನ್ಯಾಯ.ಇದು ಖಂಡಿತ ಆದರ್ಶದ ಮಾತಲ್ಲ. ಈಗಲೂ ಕಾಶ್ಮೀರದ ಸಮಸ್ಯೆಗೆ ಒಂದು ಪರಿಹಾರವಿದೆ.

ಮುಖ್ಯವಾಗಿ ಈ 6 ಜನ 15 ದಿನಕ್ಕೆ ಒಮ್ಮೆ 10 ಬಾರಿ 3 ಗಂಟೆಯಷ್ಟು ಪ್ರತಿಸಲ ಕುಳಿತು ಚರ್ಚಿಸಿದರೆ ಖಂಡಿತ ಭಯೋತ್ಪಾದನೆ ಹೊರತುಪಡಿಸಿದ ಎಲ್ಲಾ ಸಮಸ್ಯೆಗಳು ಪರಿಹಾರಗುತ್ತದೆ. ಅದರ ನಂತರ ಒಮ್ಮೆ ವಿಶ್ವಾಸ ಮೂಡಿದರೆ ಭಯೋತ್ಪಾದನೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಜಂಟಿ ಕಾರ್ಯಾಚರಣೆ ಪ್ರಾರಂಭ ಮಾಡಬಹುದು.

ಆ 6 ಜನರೆಂದರೆ

  1. ಭಾರತದ ಪ್ರಧಾನಿ ನರೇಂದ್ರ ಮೋದಿ.
  2. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್
  3. ಭಾರತ ಸೈನ್ಯದ ಮುಖ್ಯಸ್ಥ.
  4. ಪಾಕಿಸ್ತಾನ ಸೈನ್ಯದ ಮುಖ್ಯಸ್ಥ.
  5. ಈ ಕ್ಷಣದ ಭಾರತದ ಬಹು ದೊಡ್ಡ ಸಂಘಟನೆ ಮತ್ತು ಪಾಕಿಸ್ತಾನದ ಕಡು ವಿರೋಧಿ ಹಾಗೂ ಕಾಶ್ಮೀರದ ಬಗ್ಗೆ ಕಠಿಣ ನಿಲುವು ತಳೆದಿರುವ RSS ಮುಖ್ಯಸ್ಥ.
  6. ಪಾಕಿಸ್ತಾನದ ಇಸ್ಲಾಂ ಧರ್ಮದ ಅತ್ಯಂತ ಹೆಚ್ಚು ಪ್ರಭಾವಿ ನಾಯಕ.

ಇವರ ಜೊತೆಗೆ ಸರ್ಕಾರಗಳ ಉನ್ನತ ಮಟ್ಟದ ಅಧಿಕಾರಿ ವರ್ಗ. ಈ ಚರ್ಚೆಯನ್ನು ಎರಡೂ ದೇಶದ ಎಲ್ಲಾ ರೀತಿಯ ಮಾಧ್ಯಮಗಳು ಯಾವುದೇ ಎಡಿಟಿಂಗ್ ಮಾಡದೆ ನೇರ ಪ್ರಸಾರ ಮಾಡಬೇಕು. ಆಗ ಜನರಿಗೆ ಯಾವ ದೇಶ ಕೆಟ್ಟ ವರ್ತನೆ ತೋರುತ್ತಿದೆ, ಯಾವ ದೇಶ ನಿಜವಾಗಿಯೂ ಸಮಸ್ಯೆಯನ್ನು ಹುಟ್ಟು ಹಾಕುತ್ತಿದೆ ಎಂದು ತಿಳಿಯುತ್ತದೆ.

ಈ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಮಾಡಲು ಯಾವುದೇ ಮಾಧ್ಯಮಗಳಿಗೆ ಅವಕಾಶ ನೀಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ ಈ ಮಾಧ್ಯಮಗಳು ಕೊಡು ಕೊಳ್ಳುವಿಕೆಯ ಸಣ್ಣ ‌ವಿಷಯವನ್ನು ದೊಡ್ಡದು ಮಾಡಿ ಜನರಲ್ಲಿ ‌ತಪ್ಪು‌ ಅಭಿಪ್ರಾಯ ಮೂಡಿಸಿ ಜನರನ್ನು ರೊಚ್ಚಿಗೆಬ್ಬಿಸುವ ಸಾಧ್ಯತೆ ಇದೆ.

ಮೇಲೆ ಹೇಳಿದ ಆರು ಜನರ ಟೀಮ್ ಸೇರಿ ಒಂದು ತೀರ್ಮಾನಕ್ಕೆ ಬಂದು ಜಂಟಿ ಒಪ್ಪಂದ ಘೋಷಿಸಿದರೆ ಒಂದಷ್ಟು ವಿರೋಧದ ನಡುವೆಯೂ ಎರಡೂ ದೇಶದ ಬಹುತೇಕ ಜನ ಒಪ್ಪಬಹುದು.

ಏಕೆಂದರೆ ಸಾಮಾನ್ಯ ಜನರಿಗೆ ಯುದ್ಧ ಬೇಕಿಲ್ಲ. ಮೇಲೆ ಹೇಳಿದ ನಾಯಕರು ಮತ್ತು ಅವರ ಸಂಘಟನೆಗಳೇ ಈ ಘರ್ಷಣೆಯ ಮೂಲ ಪ್ರೇರೇಪಿತರು. ಅವರೇ ಒಂದು ನಿರ್ಧಾರ ಕೈಗೊಂಡರೆ ಹೆಚ್ಚಿನ ಪ್ರತಿರೋಧ ಇರುವುದಿಲ್ಲ.

ಯುದ್ದೋತ್ಸಾಹಿ ಜನರೇ ದಯವಿಟ್ಟು ಅರ್ಥಮಾಡಿಕೊಳ್ಳಿ ,
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಪಾಕಿಸ್ತಾನ ಸೋಲು ಖಚಿತ. ಆ ಭಯದಲ್ಲಿ ಅವರೇ ಮೊದಲು ಅಣು ಬಾಂಬ್ ಪ್ರಯೋಗಿಸುತ್ತಾರೆ. ನಾವು ನಂತರ ಪ್ರಯೋಗಿಸಬಹುದು. ಆದರೆ ಏನೂ ಇಲ್ಲದ ಪಾಕಿಸ್ತಾನಕ್ಕಿಂತ ಹೆಚ್ಚು ಇರುವ ನಾವೇ ಕಳೆದುಕೊಳ್ಳುವುದು ಜಾಸ್ತಿ.

ಅಲ್ಲದೆ ಈ ಯುದ್ಧದ ಸಂದರ್ಭಕ್ಕಾಗಿ ಕಾಯುತ್ತಿರುವ ಚೀನಾ ಕೆಲವೇ ದಿನಗಳಲ್ಲಿ ನಮ್ಮ ಅರುಣಾಚಲ ಪ್ರದೇಶವನ್ನು ಆಕ್ರಮಿಸುವ ಸಾಧ್ಯತೆ ಇದೆ. ಶಾಂತಿ ಸಮಯದಲ್ಲಿಯೇ ದೋಖ್ಲಾಂ ಪ್ರವೇಶಿಸುವ ಚೀನಾ ಅನುಕೂಲಕರ ವಾತಾವರಣದಲ್ಲಿ ಸುಮ್ಮನಿರುವುದಿಲ್ಲ.

ಜೊತೆಗೆ ಒಂದು ನೆನಪಿಡಿ. ಅದು ಯಾವ ದೇಶವೇ ಆಗಿರಲಿ, ವ್ಯಕ್ತಿಯೇ ಆಗಿರಲಿ, ಅಮೆರಿಕ ಚೀನಾ ಪಾಕಿಸ್ತಾನ ಭಾರತ ಆಫ್ರಿಕಾವೇ ಆಗಿರಲಿ ಯುದ್ಧದ ಬಗ್ಗೆ ಭಯವಿರುತ್ತದೆ ನಿಜ. ಆದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಯಾವ ಹಂತಕ್ಕೆ ಹೋಗಲು ಸಿದ್ದವಾಗುತ್ತಾರೆ. ಪಾಕಿಸ್ತಾನ ಸಹ ಮಿತಿಮೀರಿದಾಗ ಯಾವ ಹಂತಕ್ಕೆ ಹೋಗಲೂ ಹೇಸುವುದಿಲ್ಲ.ಇದು ಬೇಕೆ ? ” ಗೆದ್ದವನು ಸೋತ ಸೋತವನು‌ ಸತ್ತ ” ಎಂಬುದು ತಿಳಿದಿದ್ದರೂ ದುರಹಂಕಾರ ಒಳ್ಳೆಯದಲ್ಲ.

ಇದು ನನ್ನ ಅಭಿಪ್ರಾಯ. ಇದಕ್ಕಿಂತ ಉತ್ತಮ ಅಭಿಪ್ರಾಯ ದೇಶದ ಹಿತದೃಷ್ಟಿಯಿಂದ ನಿಮ್ಮದಾಗಿದ್ದರೆ ಸಂತೋಷ ಮತ್ತು ಸ್ವಾಗತಾರ್ಹ.ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಜಾನಪದ, ಪುರಾಣ, ಇತಿಹಾಸದಲ್ಲಾಗಲಿ ಯಾರಿಗೆ ಒಲಿದಿದ್ದಾನೆ ಶಿವ..?

Published

on

  • ಪರಶುರಾಮ್. ಎ

ಶಿವರಾತ್ರಿ ಹಬ್ಬ ಬಂತು ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಭಕ್ತಿಯಿಂದ ಶಿವನ ಆರಾಧನೆ ಮಾಡಿ ಕೊಂಡಾಡುತ್ತಾರೆ. ಶಿವ ನಮಗೆ ಒಲಿಯಲಿ, ನಮಗೆ ಒಲಿಯಲಿ ಎಂದು ನಾನ ವಿಧದ ಪೂಜೆ, ಅರ್ಚನೆ. ಅಭಿಷೇಕ ಎಲ್ಲವನ್ನೂ ಕೈಗೊಳ್ಳುತ್ತಾರೆ. ಆದರೆ ಈ ಶಿವ ನಿಜವಾಗಿಯೂ ಯಾರಿಗೆ ಹೆಚ್ಚು ಒಲಿದಿದ್ದಾನೆ ಎಂದು ಪುರಾಣ ಕಥೆಗಳು ಹಾಗೂ ಶೈವ ಕತೆಗಳನ್ನು ಗಮನಿಸೊದಾದರೆ ಶಿವ ಬಹಳ ಮಂದಿಗೆ ಒಲಿದಿರುವುದ ಕಾಣಬಹುದು.

ಈ ಬಹಳ ಮಂದಿಯೆಂದರೆ ಬಹುಜನರಿಗೂ ಎಂಬ ಕಲ್ಪನೆ ಹೊಂದಬಹುದು. ಯಾರು ಈ ಬಹು ಜನ? ಇದನ್ನು ಮೊದಲು ತಿಳಿಯೊಣ. ಶಿವ ತನ್ನ ಭಕ್ತರು ಯಾವುದೇ ನೀರು ಆಹಾರ ಅಭಿಷೇಕ ಪೂಜೆ ಕೊಡದಿದ್ದರು ಸಹ ನಿರ್ಮಲ ಭಕ್ತಿಯೊಂದಕ್ಕೆ ಸೋಲುವಂತಹ ಜಾಯಾಮಾನದವನು ಇದಕ್ಕೆ ಉದಾಹರಣೆ ರಾವಣನೇ ಸಾಕ್ಷಿ.

ರಾವಣ, ತನ್ನ ತಾಯಿಯ ಲಿಂಗ ಪೂಜೆ ಕೈಗೊಳ್ಳಲು ಶಿವನ ಆತ್ಮಲಿಂಗವನ್ನೆ ಹೊತ್ತು ತಂದ. ‌ಅದು ಕೇವಲ ತನ್ನ ಹಿಮಾಲಯ ರೂಪದ ಶಿವನ ನಾಮ ಜಪದಿಂದ ಮಾತ್ರ. ಬೇಡರ ದಿಣ್ಣನಿಗೆ ಶಿವ ಒಲಿದ ಬಗೆಯನ್ನು ಒಮ್ಮೆ ಗಮನಿಸಿ ಹಸಿದ ಹೊಟ್ಟೆಗೆ ಬೇಡಿದ ಮಾತ್ರಕ್ಕೆ ಬೇಟೆ ನೀಡಿದ.‌ ಶಿವನು ಈ ಬೇಡರ ದಿಣ್ಣನಿಗೆ ಒಲಿದು ಅವನನ್ನು “ಬೇಡರ ಕಣ್ಣಪ್ಪ” ಎಂದಾಗಿಸಿದ.

ಶರಣರ ಯುಗದಲ್ಲಿ ಕಾಯಕವೇ ಕೈಲಾಸ ಎಂದು ನಂಬಿದ್ದ ಅದೆಷ್ಟೋ ಮಹನೀಯರುಗಳಿಗೆ. ಅಷ್ಟೇ ಯಾಕೆ ಶರಣ ಯುಗದ ಕಾಲದಲ್ಲಿ ಶಿವಶರಣರಿಗೂ ಶಿವನು ಒಲಿದ ಸಾವಿರಾರು ಕತೆಗಳು ನಮಗೆ ಸಾಕ್ಷಿ ರೂಪದಲ್ಲಿ ಸಿಗುತ್ತವೆ. ಶರಣರು ಇಡೀ ಮುನ್ನೂರು ಮುಕ್ಕೋಟಿ ದೇವರುಗಳಲ್ಲಿ ಶಿವನನ್ನೆ ಆಯ್ದು ಕೊಂಡದ್ದಾದರೂ ಏಕೆ? “ಶಿವ ಮೂಲತಃ ದ್ರಾವಿಡರ ಮೂಲನಿವಾಸಿಗಳ ಆರಾಧ್ಯದೈವ”.

ಹೊರೆಯಾಲ ದೊರೈಸ್ವಾಮಿ ತಮ್ಮ ‘ಗೊಂಚಲು’ ಪುಸ್ತಕದಲ್ಲಿ ‘ಶಿವ ಮಹಿಮೆ’ಯೆಂಬ ಲೇಖನವೊಂದರಲ್ಲಿ “ಶಿವನು ದ್ರಾವಿಡರ ನಾಯಕ(ದೇವರು) ಆಗಿದ್ದನೆಂಬುದಕ್ಕೆ ಬೇರೆ ಬೇರೆ ಆಚರಣೆ ಕಥೆಗಳು ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ದ್ರಾವಿಡರ ಒಂದು ಗುಂಪಾದ ಕನ್ನಡಿಗರನ್ನೆ ತೆಗೆದುಕೊಳ್ಳಿ, ಕನ್ನಡಿಗರಲ್ಲಿ ತರಾವರಿ ಜಾತಿಗಳು ಇದ್ದೇ ಇವೆಯಲ್ಲ? ತರಾವರಿ ಜಾತಿಯ ಜನರು (ಬಹುಪಾಲು) ಇಂದಿಗೂ ಶಿವನ ಆರಾಧಕರೇ ಅಲ್ಲವೇ? ಅದೇ ವಿಷ್ಣು ಆರಾಧಕರು ಯಾವ ಪ್ರಮಾಣದಲ್ಲಿ ಇದ್ದಾರೆ?

ಇನ್ನೂ ಕೊಂಚ ಬಿಡಿಸಿ ಹೇಳುವುದಾದರೆ ಕನ್ನಡಿಗರಲ್ಲಿ ವಿಭೂತಿಯ ಲಾಂಛನವನ್ನು ಬಳಸುವವರು ಹೆಚ್ಚೊ ಅಥವಾ ನಾಮ,ಮುದ್ರೆಗಳನ್ನು ಬಳಸುವವವರು ಹೆಚ್ಚೊ? ಇನ್ನೂ ಜನಪದ ಕಥೆಗಳನ್ನು ತೆಗೆದುಕೊಳ್ಳಿ. ಅಲ್ಲೆಲ್ಲ ಕಾಣಿಸಿಕೊಳ್ಳುವ ದೇವರು ಯಾರು ?ದ್ರಾವಿಡರ ಶಿವ ಪಾರ್ವತಿ ಅಲ್ಲವೇ? ಹಾಗೆಯೇ ಪುರಾಣೇತಿಹಾಸಗಳನ್ನು ತೆಗೆದುಕೊಳ್ಳಿ. ಅಲ್ಲೆಲ್ಲ ರಾಕ್ಷಸ ಪಾತ್ರಧಾರಿಯಾದ ದ್ರಾವಿಡರು ಪೂಜಿಸುವುದು ಯಾರನ್ನು? ಅವರ ದೇವರಾದ ಶಿವನನ್ನೇ ತಾನೇ!!!!! ಹೀಗೆ ಹಲವು ಬಗೆಯಿಂದ ಪರೀಕ್ಷಿಸಿ ನೋಡಿದರೂ ದ್ರಾವಿಡರ ನಾಯಕನಾಗಿ(ದೇವರಾಗಿ) ಶಿವ ಕಾಣುತ್ತಾನೆ. ಹೀಗೆ ಶಿವನು ಒಲಿದ ಭಕ್ತರ ಒಬ್ಬೊಬ್ಬರನ್ನೆ ಹೆಸರಿಸಿದರು ಅದು ನೂರಾರು ಹೆಸರುಗಳನ್ನು ಒದಗಿಸಬಹುದು”.

ಉದಾಹರಣೆಗೆ ಗಮನಿಸೊಣ ರಾವಣ. ಬೇಡರ ಕಣ್ಣಪ್ಪ. ‌ಬಸವಣ್ಣ. ಒಕ್ಕಲಿಗರ ಮುದ್ದಪ್ಪ.ಕುಂಬಾರ ಗುಂಡಣ್ಣ. ಅಡಪದ ಅಪ್ಪಯ್ಯ.ಮಡಿವಾಳ ಮಾಚಯ್ಯ. ಕುರುಬರ ಬೀರಪ್ಪ.ಹೊಲೆಯರ ಹೊನ್ನಯ್ಯ. ಮಾದಿಗರ ಹರಳಯ್ಯ.ಮಾದಾರ ಚೆನ್ನಯ್ಯ.(ಜಾನಪದ ಗೀತೆಯೊಂದಿದೆ ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ ಎಂದು ಅದನ್ನೇ ಒಮ್ಮೆ ಕೇಳಿ ಶಿವ ಇದುವರೆಗೆ ಒಲಿದ ಶರಣರುಗಳು ಯಾರ್ಯಾರು ಎಂದು ನಿಮಗೆ ತಿಳಿಯುತ್ತದೆ.ಇದು ಜಾನಪದದಿಂದ ಹಿಡಿದು ಪುರಾಣಗಳವರೆಗೆ ಸಾಕ್ಷಿ ನೀಡುತ್ತದೆ.

ಯಾವುದೇ ವಿಧ ವಿಧದ ಪೂಜೆ ಇತ್ಯಾದಿ ಮಾಡದೆ ಒಲಿದ ಶಿವ ಇದುವರೆಗೆ ಹೇಳಿದ ವ್ಯಕ್ತಿಗಳೆಲ್ಲರೂ ತಳಸಮುದಾಯಕ್ಕೆ ಸೇರಿದವರೆ. ಯಾರು ಉತ್ತಮ ಎಂದು ಹೇಳಿ ಕೊಳ್ಳುವ ಬ್ರಾಹ್ಮಣ ಜಾತಿಗೆ ಸೇರಿದವರಲ್ಲ. ಇಂದು ಅದೆಷ್ಟೋ ಶಿವಾಲಯ ನಾವು ಕಾಣಬಹುದು ಅಲ್ಲಿ ಪೂಜೆ,ಅರ್ಚನೆ, ಅಭಿಷೇಕ ಮಾಡಿದರೆನೆ ಶಿವ ನಮಗೆ ಒಲಿಯುವುದು ಎಂಬ ಭ್ರಮೆ ನಮಗೆ ಒಂದು ವಲಯವು ಅದನ್ನು ಸೃಷ್ಟಿಸಿದೆ. ಆ ವಲಯವೇ ಬ್ರಾಹ್ಮಣ್ಯ ವಲಯ.

ಇದುವರೆಗೆ ನಾ ಹೇಳಿದ ಸಾಕ್ಷಿಯನ್ನೆಲ್ಲ ಗಮನಿಸಿದ ನೀವುಗಳು ಅವರ ಸಾಲಿನಲ್ಲಿ ನಿಲ್ಲಬಹುದಾದ ಶಿವನು ಬ್ರಾಹ್ಮಣರಿಗೆ ಒಲಿದ ಅಥವಾ ಬ್ರಾಹ್ಮಣರು ಶಿವನ ಒಲಿಸಿಕೊಂಡ ಸಾಕ್ಷಿ ಒದಗಿಸಿ ನೋಡುವ!?. ಉಹೂಂ ಒಬ್ಬರು ನಮಗೆ ಕಾಣಲಾರರು! ಪೂಜೆ, ಅಭಿಷೇಕ, ಅರ್ಚನೆ ಇವು ಯಾವುದು ಶಿವ ಮೆಚ್ಚಲಾರ! ಆತನಿಗೆ ಬೇಕಾದ್ದು ಪ್ರದರ್ಶನದ ಅಹಂ,ಆಡಂವರ,ಡಾಂಭಿಕ ಭಕ್ತಿಯಲ್ಲ.‌ ನಿರ್ಮಲ ಮನಸ್ಸಿನ ನಿರ್ಲಿಪ್ತ ಭಕ್ತಿಯೊಂದೆ. ಶಿವನು ಹೀಗೆ ಕೇಳಲಾರರ ಆದರೆ ತನ್ನ ಭಕ್ತರಿಂದ ಬಯಸುವುದೊಂದೆ ನಿರ್ಲಿಪ್ತ ಭಕ್ತಿ. ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ತನ್ನ ಕಾಣಿರೊ ಎಂಬ ವಚನದಂತೆ. ಕಾಯಕವೇ ಕೈಲಾಸ ಎಂದು ನಂಬಿದ್ದ ಶರಣರಿಗೆ ಶಿವ ಒಲಿದಿರುವುದು.

(1-ರಾವಣ ಒಬ್ಬ ಅಸಾಮಾನ್ಯ ಶಿವಭಕ್ತ. ಆತ ದ್ರಾವಿಡ ರಾಜ.
2-ಹೆಸರುಗಳ ತಿಳಿಯಲು ಲಕ್ಷ್ಮಣ್ ರವರ ಶರಣರ ಪವಾಡಗಳು ಪುಸ್ತಕ ಓದಿ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಜಾತಿ ನಿರ್ಮೂಲನೆಯ ಉಪಾಯವೆಂದರೆ ‘ಅಂತರ್ಜಾತಿ ವಿವಾಹ’ : ಡಾ. ಬಿ.ಆರ್. ಅಂಬೇಡ್ಕರ್

Published

on

ಅಂತರ್ಜಾತಿ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ. ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶಕೊಡುವಂತಹ ಜಾತಿಗಳು ಅನೇಕ ಇವೆ. ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ ಭಾವನೆಯೇನೂ ನಷ್ಟವಾಗಿಲ್ಲ, ಜಾತಿಪ್ರಜ್ಞೆಯೂ ಅಳಿದಿಲ್ಲ .

ಅಂತರ್ಜಾತೀಯ ವಿವಾಹವೇ ಸರಿಯಾದ ಉಪಾಯವೆಂದು ನನಗೆ ಮನವರಿಕೆಯಾಗಿದೆ .ತಾವು ತಮ್ಮವರೆಂಬ ಆತ್ಮೀಯ ಭಾವನೆ ರಕ್ತ ಸಂಬಂಧದಿಂದಲೇ ಬರಬಲ್ಲದು . ಈ ಆತ್ಮೀಯತೆಯ ಮಮತೆಯ ಭಾವನೆ ಹುಟ್ಟದೆಹೋದರೆ ಜಾತಿಪದ್ಧತಿಯಿಂದ ಬೆಳೆದುಬಂದ ಪ್ರತ್ಯೇಕತಾಭಾವನೆ ಅಳಿಯಲಾರದು . ಹಿಂದೂಗಳಲ್ಲದವರ ಜೀವನದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಅಷ್ಟು ಮಹತ್ವವಿರಲಿಕ್ಕಿಲ್ಲ . ಹಿಂದೂಗಳಲ್ಲಿ ಮಾತ್ರ ಅದು ನಿಶ್ಚಿತವಾಗಿ ಮಹತ್ವದ ಘಟಕವಾಗುತ್ತದೆ.

ಇತರ ಸಂಬಂಧಗಳಿಂದ ಸಮಾಜ ಸುಸಂಘಟಿತವಾಗಿರುವಾಗ ಮದುವೆಯೆಂಬುದು ಜೀವನದಲ್ಲಿ ಒಂದು ಸಾಮಾನ್ಯ ಘಟನೆಯೆನ್ನಿಸುತ್ತದೆ . ಆದರೆ ಸಮಾಜ ಛಿನ್ನವಿಚ್ಛಿನ್ನವಾಗಿದ್ದಾಗ ಸಂಯೋಜಕ ಶಕ್ತಿಯಾಗಿ ಬರುವ ವಿವಾಹ ಸಂಬಂಧ ಅಗತ್ಯದ ವಿಷಯವಾಗುತ್ತದೆ . ಜಾತಿ ನಿರ್ಮೂಲನೆಯ ಉಪಾಯವೆಂದರೆ ಅಂತರ್ಜಾತಿಯ ವಿವಾಹವೇ. ಬೇರೆ ಯಾವುದರಿಂದಲೂ ಜಾತಿ ಸಮಸ್ಯೆ ಪರಿಹಾರವಾಗುವುದಿಲ್ಲ .

(ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಜೈ ಭೀಮ್ ಯುವ ಬ್ರಿಗೇಡ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ದ್ರಾವಿಡರ ಮಹಾ ಹಿರೀಕ ಈ ‘ಶಿವ’..!

Published

on

  • ಹರ್ಷಕುಮಾರ್ ಕುಗ್ವೆ

ಭಾರತದ ಶ್ರೀಮಂತ ಸಂಸ್ಕೃತಿಯ ಒಡಲಿನಲ್ಲಿ ಹುದುಗಿರುವ ಈ ಪ್ರತಿಪುರಾಣದ ಕತೆಯನ್ನು ಓದಿ.

ದೇಶದಾದ್ಯಂತ ಜನಸಮುದಾಯಗಳಿಂದ ಅದರಲ್ಲೂ ವಿಶೇಷವಾಗಿ ದ್ರಾವಿಡ ಸಮುದಾಯಗಳಿಂದ ಪೂಜಿಸಲ್ಪಡುವ ಶಿವ ದ್ರಾವಿಡರ ಮಹಾ ಹಿರೀಕ ಅಥವಾ ಪೂರ್ವಿಕ ಪಿತೃ. ಮೂರೂವರೆ ಸಾವಿರ ವರ್ಷಗಳ ಹಿಂದೆ ಈ ನೆಲಕ್ಕೆ ವೈದಿಕ ಆರ್ಯರು ಎಂಟ್ರಿ ಕೊಡುವಷ್ಟರಲ್ಲಿ ಇಲ್ಲಿನ ನೆಲದ ಸಂಸ್ಕೃತಿ ಪರಂಪರೆಯಲ್ಲಿ, ಜನರ ಬದುಕಿನಲ್ಲಿ ‘ಶಿವ’ ಹಾಸುಹೊಕ್ಕಾಗಿಬಿಟ್ಟಿದ್ದ. ಆರ್ಯರು ಬರುವ ಮೊದಲಿನ ಸುಮಾರು 7000 ವರ್ಷಗಳ ಸಮೃದ್ಧ ದ್ರಾವಿಡ ಸಂಸ್ಕೃತಿಯಲ್ಲಿ ಶಿವ ಅಜರಾಮರನಾಗಿದ್ದ.

ಜಗತ್ತಿನ ಪ್ರಾಚೀನ ಮತ್ತು ಅತಿದೊಡ್ಡ ನಾಗರಿಕತೆಯಾದ ಹರಪ್ಪ ನಾಗರಿಕತೆಯಲ್ಲೇ ಶಿವನ ಗುರುತುಗಳನ್ನು ಕಾಣಬಹುದು. ವೈದಿಕರು ಇಲ್ಲಿಗೆ ಬರುವ ಹೊತ್ತಿಗಾಗಲೇ ಕಾಕಸಸ್ ಪರ್ವತ ತಪ್ಪಲಿನಲ್ಲಿ ಮತ್ತು ಅಫ್ಘಾನಿಸ್ತಾನದ ದಾರಿಯಲ್ಲಿ ಋಗ್ವೇದದ ಕೆಲವು ಭಾಗಗಳನ್ನು ಬರೆದುಕೊಂಡು ಬಂದಿದ್ದರು. ಇಲ್ಲಿಗೆ ಬಂದ ನಂತರ ಕೆಲವು ಭಾಗಗಳನ್ನು ಬರೆದರು. ಮತ್ತಷ್ಟು ವೇದಗಳನ್ನು ಬರೆದರು. ಅತ್ಯಂತ ಪ್ರಾಚೀನ ವೈದಿಕ ಪಠ್ಯವಾದ ಋಗ್ವೇದದಲ್ಲಿ ಎಲ್ಲೂ ‘ಶಿವ’ ಎಂಬ ಎರಡಕ್ಷರ ಇರಲಿಲ್ಲ.

ಕೊನೆಗೆ ಇಲ್ಲಿನ ನೆಲದ ಶಿವಸಂಸ್ಕೃತಿಯ ಮೇಲೆ ಹತೋಟಿ ಸಾಧಿಸಲೆಂದೇ ಋಗ್ವೇದದ ರುದ್ರನನ್ನು ಶಿವನೊಂದಿಗೆ ಸಮೀಕರಿಸುವ ಪ್ರಯತ್ನ ನಡೆಯಿತು. ಭಾಷಿಕವಾಗಿ ಸಹ ‘ಶಿವ’ ಎಂಬ ಪದ ದ್ರಾವಿಡ ಮೂಲದ ಪದವೇ ಹೊರತು ಇಂಡೋ ಯೂರೋಪಿಯನ್ ಭಾಷೆಯಯಾದ ಸಂಸ್ಕೃತ ಮೂಲದ ಪದವಲ್ಲ ಎಂದು ಭಾಷಾ ವಿದ್ವಾಂಸರು ನಿರೂಪಿಸಿದ್ದಾರೆ.ಇದು ನಮ್ಮ ಸಂಸ್ಕೃತಿ ಇತಿಹಾಸದ ಒಂದು ಭಾಗ. ಈಗ ಮತ್ತೊಂದು ವಿಷಯಕ್ಕೆ ಬರೋಣ.

ವೈದಿಕರು ತಮ್ಮ ವೈದಿಕ ಸಂಸ್ಕೃತಿಯನ್ನು ಭಾರತೀಯರ ಮೇಲೆ ಹೇರಲು ಪುರಾಣಗಳನ್ನು ರಚಿಸಿದರು. ಇಲ್ಲಿನ ವೈದಿಕ ಪೂರ್ವ ‘ಮುಂಡಾ’ ಆದಿವಾಸಿಗಳಲ್ಲಿದ್ದ ದಶಾವತಾರದ ಪರಿಕಲ್ಪನೆಯನ್ನು ಅನಾಮತ್ತಾಗಿ ಹೈಜಾಕ್ ಮಾಡಿ ತಮ್ಮ ಹಿತಾಸಕ್ತಿಯ ದಶಾವತಾರಗಳನ್ನು ಸೃಷ್ಟಿಸಿದರು. ದ್ರಾವಿಡ ಶಿವನ ಪ್ರಭಾವವನ್ನು ಕುಗ್ಗಿಸುವ ದುರುದ್ದೇಶದಿಂದ ವಿಷ್ಣುವನ್ನು ಅವತಾರಿಯಾಗಿಸಿದರು. ಶಿವಭಕ್ತರನ್ನು ಅಸುರರು ಎಂದು ಕರೆದು ಅವರನ್ನೆಲ್ಲ ಕೊಲೆ ಮಾಡುವ ಕತೆಗಳನ್ನೇ ಪುರಾಣಗಳಾಗಿಸಿದರು. ದಶಾವತಾರಗಳಲ್ಲಿ ಬಹಳ ಪ್ರಸಿದ್ದವಾದ ಒಂದು ಪುರಾಣ ನರಸಿಂಹಾವತಾರ.

ನಿಮಗೆಲ್ಲಾ ಹರಿಭಕ್ತ ಪ್ರಹ್ಲಾದ ಮತ್ತು ಅವನಪ್ಪ ಶಿವಭಕ್ತ ಹಿರಣ್ಯಕಶಿಪುವಿನ ಕತೆ ತಿಳಿದಿರುವುದೇ. ಹಿರಣ್ಯ ಕಶಿಪು ಘೋರ ತಪಸ್ಸಿನಿಂದ ಪಡೆದುಕೊಂಡ ವರವನ್ನು ನಿಸ್ತೇಜಗೊಳಿಸಿ ಅವನನ್ನು ಕೊಲೆ ಮಾಡಲು ಹರಿ ಅಂದರೆ ವಿಷ್ಣು ನರಸಿಂಹನ ಅವತಾರ ತಳೆದು ಅವನ ಕರುಳು ಬಗೆದು ಹೀನಸ್ ಮರ್ಡರ್ ಮಾಡುತ್ತಾನೆ.
ತಮಾಷೆ ಇರೋದೇ ಇಲ್ಲಿ. ಅತ್ತ ನರನೂ ಅಲ್ಲದ ಸಿಂಹನೂ ಅಲ್ಲದ ಈ ನರಸಿಂಹನ ಕಲ್ಪನೆ ಎಲ್ಲಿಯದು? ವೈದಿಕ ಪುರಾಣ ಬರೆದವರಿಗೆ ಈ ನರಸಿಂಹನ ಕಲ್ಪನೆ ಸಿಕ್ಕಿದ್ದೇ ರೋಮ್ ಮತ್ತು ಯೂರೋಪಿನ ಬಹುಭಾಗಗಳಲ್ಲಿ ಕ್ರಿಸ್ತಪೂರ್ವದಲ್ಲಿ ಪ್ರಚಲಿತದಲ್ಲಿದ್ದ ಮಿತ್ರ ಪಂಥದ ನಂಬಿಕೆ ಆಚರಣೆಗಳಿಂದ.

ರಹಸ್ಯ ಮಿತ್ರ ಪಂಥದಲ್ಲಿ ಆರಾಧಿಸಲ್ಪಡುತ್ತಿದ್ದ ಒಂದು ದೇವತೆ ಈ ನರಸಿಂಹ. ಅರಿಯಾನಿಸ್, ಅಯಾನ್, ಅಹ್ರಿಮನ್ ಮೊದಲಾದ ಹೆಸರುಗಳಿಂದ ‘ನರಸಿಂಹ’ನ ಖ್ಯಾತಿ ಪಡೆದಿದ್ದ. ಯೂರೋಪಿನ ಹಲವು ಕಡೆಗಳಲ್ಲಿ ಈ ಮಿತ್ರಪಂಥದ ನರಸಿಂಹನ ಸಾವಿರಾರು ಅತಿ ಪ್ರಾಚೀನ ವಿಗ್ರಹಗಳು ದೊರೆತಿರುವುದೇ ಇದಕ್ಕೆ ಸಾಕ್ಷಿ. ಕೊನೆಗೆ ಇದನ್ನೇ ಭಾರತದ ವೈದಿಕರು ಕಾಪಿ ಮಾಡಿಕೊಂಡು ತಮ್ಮ ಪುರಾಣ ಕತೆಗೆ ಒಗ್ಗಿಸಿಕೊಂಡರು.

ಅದಿರಲಿ ನಂತರ ಈ ವೈದಿಕರ ನರಸಿಂಹನಿಗೆ ಏನಾಗುತ್ತದೆ ಎಂದು ಬಹಳ ಜನಕ್ಕೆ ತಿಳಿದೇ ಇಲ್ಲ. ಯಾಕೆಂದರೆ ಅದನ್ನು ಪ್ರಧಾನ ಪುರಾಣಗಳು ಹೇಳುವುದಿಲ್ಲ. ಇದರ ಕುರಿತಾಗಿ ನಂತರದಲ್ಲಿ ಮತ್ತೊಂದು ಪ್ರತಿಪುರಾಣ ಸೃಷ್ಟಿಯಾಯಿತು.

ಅದರ ಪ್ರಕಾರ….
ಹಿರಣ್ಯ ಕಶಿಪುವನ್ನು ಮರ್ಡರ್ ಮಾಡಿದ ‘ನರಸಿಂಹ’ ಸಿಕ್ಕಾಪಟ್ಟೆ ಉಪಟಳ ನೀಡತೊಡಗುತ್ತಾನೆ. ಇಡೀ ಬ್ರಹ್ಮಾಂಡವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯತೊಡಗುತ್ತಾನೆ.

ಇವನ ಕಾಟ ತಡೆಯದ ದೇವತೆಗಳೆಲ್ಲಾ ಶಿವನ ಮೊರೆ ಹೋಗುತ್ತಾರೆ. ಇಲ್ನೋಡು ಶಿವಾ ನಿನ್ನ ಭಕ್ತನನ್ನು ಮರ್ಡರ್ ಮಾಡಿದ್ದೇ ಅಲ್ಲದೇ ಈ ವೈದಿಕರ ನರಸಿಂಹ ಈಗ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡುತ್ತಿದ್ದಾನೆ. ಹೋಗಿ ಅವನನ್ನು ಕತಂ ಮಾಡು ಎಂದು ಅಲವತ್ತುಕೊಳ್ಳುತ್ತಾರೆ. ಆಗ ಶಿವ ವೀರಭದ್ರನ ಅವತಾರದಲ್ಲಿ ಬಂದು ನರಸಿಂಹನ ಬಳಿ ಕುಳಿತು ಬುದ್ದಿ ಹೇಳುತ್ತಾನೆ. “ನೋಡಪ್ಪ ಹರಿ ಆಲಿಯಾಸ್ ನರಸಿಂಹ, ಹಿರಣ್ಯ ಕಶಿಪುವನ್ನ ಕೊಲೆ ಮಾಡಿ ನಿನ್ನಾಸೆ ತೀರಿಸಿಕೊಂಡಿದ್ದೀಯ ಈಗ ಸೈಲೆಂಟಾಗಿರು” ಎಂದರೆ ಅದಕ್ಕೆ ನರಸಿಂಹ ಸೊಪ್ಪು ಹಾಕೋದಿಲ್ಲ. ವೀರಭದ್ರನಿಗೇ ಆವಾಜ್ ಹಾಕುತ್ತಾನೆ.

ಮೊದಲೇ ಕೋಪಗೊಂಡು ಕುಳಿತಿದ್ದ ಶಿವ ಆಗ ಒಂದು ಭಯಾನಕ ಅವತಾರ ತಳೆಯುತ್ತಾನೆ. ಅದೇ ಶರಭಾವತಾರ. ಇದು ಸ್ವರೂಪದಲ್ಲಿ ನರಮಿಕಹಕ್ಕಿಯ ಸ್ವರೂಪ ಅಂದರೆ ಮನುಷ್ಯ, ಮೃಗ ಮತ್ತು ಪಕ್ಷಿಯ ವಿಚಿತ್ರ ಸ್ವರೂಪ. . ಹತ್ತಾರು ಕೈಗಳು, ಚೂಪಾದ ಪಂಜಾಗಳು, ನಾಲ್ಕೋ ಐದೋ ಕಾಲುಗಳು …ಅಬ್ಬಬ್ಬ ನೆನೆಸಿಕೊಂಡರೇ ಭಯವಾಗುತ್ತದೆ ಅಂತಹ ಉಗ್ರಸ್ವರೂಪ ಶರಭಾವತಾರದ ಶಿವನದು. ಅದಕ್ಕೆ ರೆಕ್ಕೆಗಳೂ ಇರುತ್ತವೆ. ಅದರ ಧ್ವನಿ ಕೇಳಿದರೇನೇ ನಡುಕ ಹುಟ್ಟಬೇಕು. ಅದಕ್ಕೆ ಕೆಂಡದುಂಡೆಗಳಂತ ಮೂರು ಕಣ್ಣುಗಳು.

ಶರಭಾವತಾರ

ಹೀಗೆ ಶರಭಾವತಾರವನ್ನೆತ್ತಿದ ಶಿವ ಹಿಮವತ್ ಪರ್ವತದಲ್ಲಿ ನರಸಿಂಹನನ್ನು ತಡವಿಕೊಳ್ಳುತ್ತಾನೆ. ನರಸಿಂಹನೇ ಉಗ್ರ ಸ್ವರೂಪಿಯಾದರೆ ಈಗ ಶರಭ ಅದರಪ್ಪನಂತ ಅತ್ಯುಗ್ರ ಸ್ವರೂಪಿ. ತನ್ನ ಬಾಲದಿಂದಲೇ ಅನಾಮತ್ತಾಗಿ ನರಸಿಂಹನನ್ನು ಎತ್ತಿ ಹಿಡಿದು ಕೆಡವಿ ತನ್ನ ಪಂಜಾದಲ್ಲಿ ನರಸಿಂಹನ ಹೊಟ್ಟೆ ಬಗೆಯುದು ಕೊಲ್ಲುತ್ತಾನೆ. ಕೊನೆಗೆ ನರಸಿಂಹನಿಗೆ ‘ಬಿಡುಗಡೆ’ಯ ಭಾಗ್ಯ ಸಿಗುವಂತೆ ಮಾಡುತ್ತಾನೆ.

ಯಾವಾಗ ವೈದಿಕರು ದ್ರಾವಿಡ ಶಿವನ ಸಂಸ್ಕೃತಿಯನ್ನು ವಿನಾಶ ಮಾಡಲು ಸಂಚು ಹೂಡಿ ಪುರಾಣಗಳನ್ನು ರಚಿಸಿದರೋ ಆಗಲೇ ದ್ರಾವಿಡರೂ ಪ್ರತಿಪುರಾಣಗಳನ್ನೂ ರಚಿಸಿದರು. ಇದರಲ್ಲಿ ಪ್ರಸಿದ್ಧ ಶಿವಪುರಾಣವೂ ಒಂದು. ಶಿವಪುರಾಣದಲ್ಲಿ ಬರುವ ಶಿವನ 18 ಅವತಾರಗಳಲ್ಲಿ ಶರಭಾವತಾರವೂ ಒಂದು. ವೈದಿಕರ ದಶಾವತಾರದ ಹೀರೋನನ್ನೇ ವಿಲನ್ ಆಗಿಸಿ ಶಿವನನ್ನು ಹೀರೋ ಮಾಡಿದ ಶ್ರೇಯಸ್ಸು ಈ ಶಿವಪುರಾಣಕ್ಕೆ ಸಲ್ಲುತ್ತದೆ. ಅಂದಹಾಗೆ ಶಿವಪುರಾಣ ರಚಿಸಿದ ಪುರಾಣಕರ್ತ ಸೂತ ಜಾತಿಯಲ್ಲಿ ಜನಿಸಿದ ರೋಮಹರ್ಶಣ ಋಷಿ ಎಂದು ಹೇಳಲಾಗಿದೆ.

ಈ ಮಹಾಋಷಿ ರೋಮಹರ್ಶಣ ದಲಿತನಾಗಿದ್ದೂ ವೇದಪಾರಂಗತನಾಗಿದ್ದ. ಯಾವ ಬ್ರಾಹ್ಮಣ ಪಂಡಿತರಿಗೂ ಸವಾಲು ಹಾಕಿ ಬಾಯಿ ಮುಚ್ಚಿಸಬಲ್ಲ ಪಾಂಡಿತ್ಯ ಇವನಾದಿತ್ತು.. ದ್ವಿಜರಾದವರಿಗೆ ಇದು ಬಹಳ ಹೊಟ್ಟೆ ಉರಿ ತರಿಸಿತ್ತು. ತಮ್ಮಂತೆ ಹುಟ್ಟಿನಿಂದ ಬ್ರಾಹ್ಮಣನಲ್ಲದವನು ನಮ್ಮೆದುರು ಸರಿಸಾಟಿಯಾಗಿ ನಿಲ್ಲುವುದೇ? ಛೇ ಛೇ ಇದು ಸಲ್ಲದು ಎಂಬುದು ಅವರ ವಾದ. ಕೊನೆಗೆ ಈ ರೋಮರ್ಶಣ ಮಹಾರುಶಿಯನ್ನು ಬ್ರಾಹ್ಮಣರು ಸಂಚು ನಡೆಸಿ ಕೊಲೆ ಮಾಡುತ್ತಾರೆ. ಈ ಕೊಲೆಗೆ ದೈವಿಕ ಸಮರ್ಥನೆ ನೀಡಲು ಮಾರ್ಕಂಡೇಯ ಪುರಾಣದಲ್ಲಿ ಸಾಕ್ಷಾತ್ ಬಲರಾಮನೇ ಬಂದು ರೋಮಹರ್ಶಣನನ್ನು ಕೊಲೆ ಮಾಡುವಂತೆ ಮತ್ತೊಂದು ಪುರಾಣ ಕಟ್ಟಿದ್ದಾರೆ.

ಶಿವಪುರಾಣವು ನಂತರದ ಕಾಲಘಟ್ಟದಲ್ಲಿ ಹಲವಾರು ಪರಿಷ್ಕರಣೆಗಳನ್ನು ಕಂಡಿದೆ. ಶಿವಪುರಾಣವನ್ನು ವೈದಿಕರು ತಮಗೆ ಬೇಕಾದಂತೆ ತಿರುಚಿಕೊಂಡಿದ್ದು ಸಹ ಒಂದು ರಾಜಕಾರಣವೇ.

ಹಿಂದೂ ಧರ್ಮವನ್ನು ‘ಹಿಂದುತ್ವ’ದ ಹೆಸರಿನಲ್ಲಿ ಏಕರೂಪಿಯಾಗಿ ಬಿಂಬಿಸಲು ಹೊರಟವರಿಗೆ ಭಾರತದ ಮಹಾನ್ ಸಂಸ್ಕೃತಿಯನ್ನು, ಇಲ್ಲಿನ ಶ್ರೇಷ್ಟ ಪರಂಪರೆಯನ್ನು ಮುಖಕ್ಕೆ ಹಿಡಿಯಬೇಕಾದ ತುರ್ತು ಇಂದು ನಮಗಿದೆ.

ಎಲ್ಲರಿಗೂ ಮತ್ತೊಮ್ಮೆ ಮಹಾಶಿವರಾತ್ರಿಯ ಶುಭಾಶಯಗಳು.

(ಶಿವ ಮತ್ತು ಶರಭಾವತಾರದ ವಿಗ್ರಹಗಳ ಚಿತ್ರಗಳನ್ನು ಅಂತರ್ಜಾಲದಿಂದ ಪಡೆಯಲಾಗಿದೆ. ಈ ಬರೆಹಕ್ಕೆ ‘ಹರಪ್ಪ: ಡಿ ಎನ್ ಎ ನುಡಿದ ಸತ್ಯಗಳು’ ಎಂಬ ಪುಸ್ತಕದಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಬರೆದ ಲೇಖನದದಲ್ಲಿ ತಿಳಿಸಲಾಗಿರುವ ಕೆಲವು ಹೊಳಹುಗಳನ್ನು ಬಳಸಿಕೊಳ್ಳಲಾಗಿದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending