Connect with us

ಬಹಿರಂಗ

ಕೂಲಿ ತಾಯಂದಿರ ಪರವಾಗಿ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರುಗಳಿಗೆ ತುರ್ತು ಬಹಿರಂಗ ಪತ್ರ

Published

on

ಮಾನ್ಯ ಮುಖ್ಯಮಂತ್ರಿಗಳಿಗೆ ದೇವನೂರ ಮಹಾದೇವ ಮತ್ತು ಎಸ್.ಆರ್. ಹಿರೇಮಠರ ಪತ್ರ

ಮಾನ್ಯ ಮುಖ್ಯಮಂತ್ರಿ ಶ್ರೀ ಎಚ್.ಡಿ.ಕುಮಾರಸ್ವಾಮಿಯವರೇ,
ತುರ್ತು ಸಾಮಾಜಿಕ ಅಳಲೊಂದನ್ನು ತಮ್ಮ ಗಮನಕ್ಕೆ ತರಲೇಬೇಕಿರುವುದರಿಂದ ನಾವು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ತಾಯಂದಿರು ಬರಿಗಾಲಲ್ಲಿ ಅಥವಾ ಹರಿದ ಚಪ್ಪಲಿಗಳಲ್ಲಿ, “ಮಧ್ಯಪಾನವನ್ನು ನಿಷೇಧಿಸಿ – ನಮ್ಮ ಸಂಸಾರಗಳನ್ನು ಉಳಿಸಿ” ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ನಿಮ್ಮನ್ನು ಕಾಣಲು ಬೆಂಗಳೂರಿನತ್ತ ನಡೆದು ಬರುತ್ತಿದ್ದಾರೆ. ಅವರು ನಡೆಯಲು ಪ್ರಾರಂಭಿಸಿ ಇಂದಿಗೆ 5 ದಿನಗಳಾದುವು.

ಇದೇ 19ರಂದು ಚಿತ್ರದುರ್ಗದಿಂದ ಅವರು ಪಾದಯಾತ್ರೆ ಹೊರಟಾಗ ಅನೇಕ ಸ್ವಾಮೀಜಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳುಗಳು, ರಾಜ್ಯದ ಬೇರೆ ಬೇರೆ ಮೂಲೆಗಳಿಂದ ಬಂದಿದ್ದ ಆ ತಾಯಂದಿರ ದಿಟ್ಟತನವನ್ನು ಶ್ಲಾಘಿಸಿ, ಅವರ ಹೋರಾಟಕ್ಕೆ ಶುಭ ಹಾರೈಸಿ ಬೀಳ್ಕೊಟ್ಟಿದ್ದರು. ಎಲ್ಲಾ ಪತ್ರಿಕೆಗಳಲ್ಲೂ ಇದು ದೊಡ್ಡ ಸುದ್ದಿಯೇ ಆಗಿತ್ತು. ಇದು ತಮ್ಮ ಗಮನಕ್ಕೆ ಬಂದಿರಲೇಬೇಕಿತ್ತು. ಸರ್ಕಾರ ಪ್ರತಿಕ್ರಿಯಿಸಬಹುದೆಂಬ ನಿರೀಕ್ಷೆಯೂ ಹಲವರಿಗಿತ್ತು. ಆದರೆ ಅಂತಹುದೇನೂ ಆಗದಿರುವುದು ಅಚ್ಚರಿ ಮೂಡಿಸಿದೆ. ಅದೇ ದಿನಗಳಲ್ಲಿ ಶಾಸಕರಿಬ್ಬರು ರೆಸಾರ್ಟ್‍ನಲ್ಲಿ ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡರೆಂಬ ಸುದ್ದಿ ನಮಗೆ ಆಘಾತವನ್ನುಂಟು ಮಾಡಿದೆ.

ವಿಶ್ವಾಸವನ್ನು ಸೆರಗಲ್ಲಿ ಕಟ್ಟಿಕೊಂಡು, ನಿರೀಕ್ಷೆಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ನಡೆಯುತ್ತಿರುವ ಈ ತಾಯಂದಿರ ಕುರಿತು ಒಂದಷ್ಟು ಮಾಹಿತಿಯನ್ನು ತಮ್ಮ ಗಮನಕ್ಕೆ ತರಲೇಬೇಕಿದೆ. ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವವರೆಲ್ಲಾ ಬಹುತೇಕ ಕೂಲಿ ಮಾಡುವ ಹೆಣ್ಣು ಮಕ್ಕಳು. ಇವರು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ, ಯಾವುದೋ ಸಂಘಟನೆಯ ಪ್ರಲೋಭನೆಯ ಮೇರೆಗೆ ಬೀದಿಗಿಳಿದವರಲ್ಲ. ಮಿತಿಮೀರಿ ಹೋಗಿರುವ ಕುಡಿತದ ಹಾವಳಿಯಿಂದ ನಲುಗಿ, ಕಣ್ಣೀರಿಟ್ಟು, ಕೈ ಸೋತು, ಕೊನೆಗೆ ಕೊನೆ ಆಸೆಯಾಗಿ ಹೋರಾಟಕ್ಕೆ ಇಳಿದವರು. ಮೂರು ವರ್ಷಗಳ ಹಿಂದೆ ರಾಯಚೂರಿನಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ 40 ಸಾವಿರ ಮಹಿಳೆಯರು ಸಮಾವೇಶಗೊಂಡು ನಮ್ಮೆಲ್ಲರನ್ನೂ ಚಕಿತಗೊಳಿಸಿದ್ದರು. ಆಗ ಸರ್ಕಾರ ಪ್ರತಿಕ್ರಿಯಿಸಲಿಲ್ಲ. ಆದರೆ ಈ ತಾಯಂದಿರು ವಿಶ್ವಾಸ ಕಳೆದುಕೊಳ್ಳಲಿಲ್ಲ. ಸರ್ಕಾರ ಮತ್ತೆ ಕಿವಿಗೊಡಲಿಲ್ಲ.

ಇವರೂ ಹಟ ಬಿಡಲಿಲ್ಲ.
ಕಳೆದ ಚುನಾವಣೆ ಸಂದರ್ಭದಲ್ಲಿ ಬರೋಬ್ಬರಿ 70 ದಿನ ಧರಣಿ ನಡೆಸಿದರು. ಓಟು ಕೇಳಲು ಬಂದ ರಾಜಕೀಯ ನಾಯಕರುಗಳ ಕಾರುಗಳನ್ನೆಲ್ಲಾ ಅಡ್ಡಗಟ್ಟಿದರು. ತಮ್ಮನ್ನೂ ಸಹ ಅವರು ಬೀದಿಯಲ್ಲಿ ಎದುರಾಗಿದ್ದರು. ‘ಖಂಡಿತ ಏನಾದರೂ ಮಾಡೋಣ’ ಎಂದು ನೀವೂ ಮಾತುಕೊಟ್ಟಿದ್ದಿರಿ. ಹೊಸ ಸರ್ಕಾರವೂ ಬಂತು, ಆದರೆ ಅವರ ಬದುಕಿನಲ್ಲಿ ನೆಮ್ಮದಿ ಮೂಡಲಿಲ್ಲ. ತಮ್ಮ ಸಂಸಾರಗಳನ್ನು ಉಳಿಸಿಕೊಳ್ಳುವ ದೃಢ ಸಂಕಲ್ಪ ಮಾಡಿರುವ ಈ ತಾಯಂದಿರು ಕೈ ಚೆಲ್ಲಲು ಸಿದ್ಧರಿಲ್ಲ. ಸರ್ಕಾರಕ್ಕೆ ನಮ್ಮ ಅಳಲು ಕೇಳಿಸುವಂತೆ ಮಾಡೇಮಾಡುತ್ತೇವೆ ಎಂಬ ದೃಢತೆಯೊಂದಿಗೆ ಅವರು ನಡಿಗೆ ಆರಂಭಿಸಿದ್ದಾರೆ. ಇವರೆಲ್ಲಾ ಯಾರೋ ಟೆಂಪೋ ಹತ್ತಿಸಿಕೊಂಡು ಬಂದ ಜನರಲ್ಲ ಅಥವ ಯಾರದೋ ಪ್ರಲೋಭನೆಯ ಮಾತಿಗೆ ಮರುಳಾಗಿರುವ ಮಹಿಳೆಯರಲ್ಲ.

ಬದಲಿಗೆ ಸಂಸಾರಗಳನ್ನು ಉಳಿಸಿಕೊಳ್ಳಲು ಬೀದಿಗಿಳಿದಿರುವ ನಮ್ಮ ರಾಜ್ಯದ ಹೆಮ್ಮೆಯ ಬಡ ತಾಯಂದಿರು ಎಂಬುದನ್ನು ಮತ್ತೊಮ್ಮೆ ಒತ್ತಿ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಅಧಿಕಾರದಲ್ಲಿ ಕೂತವರ ಇಕ್ಕಟ್ಟುಗಳೂ ನಮಗೆ ಅರ್ಥವಾಗುತ್ತವೆ. ಕುಡುಕರು ಕುಡಿತದ ಚಟಕ್ಕೆ ಬಲಿಯಾಗಿರುವಂತೆ, ಈ ದೇಶದ ಸರ್ಕಾರಗಳು ಹೆಂಡದ ತೆರಿಗೆಯ ಚಟಕ್ಕೆ ಬಲಿಯಾಗಿವೆ. ಹೆಂಡ ಮಾರಿದ ಹಣ ಇಲ್ಲವೆಂದರೆ ಸರ್ಕಾರದ ಕೈಕಾಲುಗಳು ನಡುಗುತ್ತವೆ. ಹಾಗಂತ ಮದ್ಯದ ವ್ಯಸನದ ದಾಸ್ಯದಲ್ಲೇ ಸರ್ಕಾರ ಇರಲು ಸಾಧ್ಯವಿಲ್ಲ. ತಕ್ಷಣವೇ ಪರಿಪೂರ್ಣ ಪರಿಹಾರ ಲಭ್ಯವಿಲ್ಲವಾದರೂ ಆ ನಿಟ್ಟಿನಲ್ಲಿ ನಿಷ್ಠುರ ಹೆಜ್ಜೆ ಇಡಬೇಕಿರುವುದು ಜನ ಒಳಿತನ್ನು ಬಯಸುವ ಎಲ್ಲಾ ಸರ್ಕಾರಗಳ ಕರ್ತವ್ಯ. ಕನಿಷ್ಟ ಮದ್ಯಪಾನ ನಿಯಂತ್ರಣವಾಗಬೇಕು, ಕುಡುಕರ ಸಂಖ್ಯೆ ತಗ್ಗುವಂತೆ ಮಾಡಲು ಕ್ರಮಕೈಗೊಳ್ಳಬೇಕು.

ತಮ್ಮ ಹಳ್ಳಿಯಲ್ಲಿ ಮದ್ಯ ಮಾರಾಟ ಆಗಬೇಕೋ ಬೇಡವೋ ಎಂಬುದನ್ನು ತೀರ್ಮಾನ ಮಾಡುವ ಹಕ್ಕು ಗ್ರಾಮ ಸಭೆಗಳಿಗೆ ಇರಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗಲು, ಸರ್ಕಾರವೇ ಮದ್ಯ ಮಾರಾಟದ ಟಾರ್ಗೆಟ್ ಹಿಗ್ಗಿಸುತ್ತಿರುವುದೇ ಕಾರಣ ಎಂಬುದಕ್ಕೆ ಆಧಾರಗಳಿವೆ.
ಜನರು ನಮ್ಮ ಊರಿಗೆ ‘ಹೆಂಡ’ ಬೇಡ ಎಂದು ತೀರ್ಮಾನಿಸಿದರೂ ಮಾರುತ್ತೇವೆ ಎಂಬುದು ಯಾವ ನ್ಯಾಯ? ಪ್ರತಿ ವರ್ಷ ಕುಡಿತದ ಟಾರ್ಗೆಟ್ ಹೆಚ್ಚಿಸಿ ಮದ್ಯಪಾನವನ್ನು ಪ್ರಚೋದಿಸುತ್ತಿರುವ ಅಬಕಾರಿ ಇಲಾಖೆಯ ಧೋರಣೆಯನ್ನು ಏನೆನ್ನಬೇಕು? ಬಡಜನರ ದುಡಿಮೆಯೆಲ್ಲಾ ಬಾಚಿಹೋಗುತ್ತಿದ್ದರೂ, ಕುಟುಂಬಗಳ ಗೌರವ ಗಟಾರದ ಪಾಲಾಗುತ್ತಿದ್ದರೂ, ಮನೆಯ ನೆಮ್ಮದಿ ಬೀದಿಪಾಲಾಗುತ್ತಿದ್ದರೂ ‘ನಾವೇನು ಮಾಡಲಾಗುತ್ತದೆ?’ ಎನ್ನುವ ಜನ ಪ್ರತಿನಿಧಿಗಳು ಜನರ ಪ್ರತಿನಿಧಿಗಳು ಹೇಗಾದಾರು? ಕುಡಿತ ಒಂದು ಪಿಡುಗಾಗಿ ಸಮಾಜದ ಆರೋಗ್ಯವನ್ನು ನಾಶ ಮಾಡುತ್ತಿರುವುದು ಕಣ್ಣಿಗೆ ರಾಚುತ್ತಿರುವಾಗ ಸುಮ್ಮನಿರುವುದು ಜನಪರ ಸರ್ಕಾರದ ಲಕ್ಷಣವಲ್ಲ. ಸುಮ್ಮನಿದ್ದರೆ ಅದು ಜನಪರ ಸರ್ಕಾರವೇ ಅಲ್ಲ.

ನಾವು ತಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೆ – ಮೊದಲು ಹಗಲಿರುಳೆನ್ನದೆ ನಡೆಯುತ್ತಿರುವ ಆ ತಾಯಂದಿರ ಬಳಿ ಹೋಗಿ, ಅವರ ಛಿದ್ರಗೊಂಡ ಬದುಕಿನ ವೇದನೆಗೆ ಕಿವಿಗೊಡಿ, ಅವರ ಜೊತೆ ಕೂತು ಪರಿಹಾರದ ಮಾರ್ಗಗಳ ಕುರಿತು ಚರ್ಚಿಸಿ, ಅನುಭವಿ ಸಾಮಾಜಿಕ ಕಾರ್ಯಕರ್ತರ, ತಜ್ಞರ ಸಲಹೆಗಳನ್ನು ಪಡೆದುಕೊಳ್ಳಿ, ಎಲ್ಲರ ನೆರವಿನೊಂದಿಗೆ ಈ ಪಿಡುಗಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ಒಳ್ಳೆಯ ಹೆಜ್ಜೆಯನ್ನಿಕ್ಕಿ. ಸರ್ಕಾರದ ಇಕ್ಕಟ್ಟುಗಳು ಏನೇ ಇರಲಿ ಮೊದಲು ದುಡಿದ ತಾಯಂದಿರ ಕಾಲುಗಳನ್ನು ಮತ್ತಷ್ಟು ದಣಿಸದಿರಿ, ಬೆಂದಿರುವ ತಾಯಂದಿರ ಮನಸುಗಳನ್ನು ಮತ್ತಷ್ಟು ಬಳಲಿಸದಿರಿ. ಮೊದಲು ಅವರ ಜೊತೆ ಕೂತು ಮಾತನಾಡಿ ಎಂಬುದು ನಮ್ಮ ಮನವಿ. ಇದುವರೆಗಿನ ಸರ್ಕಾರಗಳು ಮಾಡಿದಂತೆಯೇ ನೀವೂ ದಿವ್ಯ ಮೌನದ ಮೊರೆ ಹೋಗುವುದಿಲ್ಲ ಎಂಬ ವಿಶ್ವಾಸದೊಂದಿಗೆ,

ನಿಮ್ಮ ವಿಶ್ವಾಸಿಗಳು

-ಎಸ್.ಆರ್. ಹಿರೇಮಠ
-ದೇವನೂರು ಮಹಾದೇವ

(ಜನಾಂದೋಲನಗಳ ಮಹಾಮೈತ್ರಿಯ ಹಾಗೂ ಈ ನಾಡಿನ ಪ್ರಜ್ಞಾವಂತ ನಾಗರಿಕರ ಪರವಾಗಿ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಸಂವಿಧಾನ ರಚನೆಗೆ ಅವಕಾಶ ದೊರೆತಾಗ..!

Published

on

  • ರಘೋತ್ತಮ ಹೊ.ಬ

1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ ದಿನ ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡ ಒಂದು ನಿರ್ಣಯವನ್ನು ಮಂಡಿಸಿದರು.

ಆ ನಿರ್ಣಯದ ಮೇಲೆ ಚರ್ಚೆಯೂ ಪ್ರಾರಂಭವಾಯಿತು. ಹಾಗೆ ಚರ್ಚೆಯು ನಡೆಯುತ್ತಿರಬೇಕಾದರೆ ಡಿಸೆಂಬರ್ 16 ರಂದು ಸದಸ್ಯರಾದ ಎಂ.ಆರ್.ಜಯಕರ್ ಎಂಬುವವರು ಸಂವಿಧಾನದ ಈ ನಿರ್ಣಯದ ಮೇಲಿನ ಚರ್ಚೆಯನ್ನು ಸಭೆಯನ್ನು ಬಹಿಷ್ಕರಿಸಿದ್ದ ಮುಸ್ಲಿಂ ಲೀಗ್ ಪಾಲ್ಗೊಳ್ಳುವವರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು ಮತ್ತು ಜಯಕರ್ ರವರು ಹೀಗೆ ಹೇಳುತ್ತಲೇ ಇಡೀ ಸಂವಿಧಾನ ಸಭೆಯೇ ಗೊಂದಲಕ್ಕೆ ದೂಡಲ್ಪಟ್ಟಿತು. ಒಂದರ್ಥದಲ್ಲಿ ಕೋಲಾಹಲವುಂಟಾಗಿ ಒಟ್ಟಾರೆ ಸಂವಿಧಾನ ರಚನಾ ಪ್ರಕ್ರಿಯೆಯೇ ನೆನೆಗುದಿಗೆ ಬೀಳುತ್ತದೆಯೇನೋ ಎಂಬ ಆತಂಕ ಸದಸ್ಯರನ್ನು ಕಾಡಿತು.

ಆದರೆ ಮಾರನೇ ದಿನ ಅಂದರೆ ಡಿಸೆಂಬರ್ 17 ರಂದು ಸಭೆ ಸೇರುತ್ತಲೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ರವರು ಅಂಬೇಡ್ಕರರನ್ನು ಮಾತನಾಡಲು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ರಾಜೇಂದ್ರ ಪ್ರಸಾದ್ ರ ಈ ಆಹ್ವಾನ ಸ್ವತಃ ಅಂಬೇಡ್ಕರರಿಗೂ ಅಚ್ಚರಿ ತಂದಿತ್ತು.

ಏಕೆಂದರೆ ಸಭೆಯಲ್ಲಿ ಅವರಿಗಿಂತಲೂ ಹಿರಿಯ ಇನ್ನೂ 20 ರಿಂದ 22 ಮಂದಿ ಸರದಿಯಲ್ಲಿ ಬಹಳ ಮುಂದಿದ್ದರು. ಅವರ ನಂತರವೇ ನನಗೆ ಅವಕಾಶ ಬರುವುದೆಂದು ಅಂಬೇಡ್ಕರರು ಅಂದುಕೊಂಡಿದ್ದರು. ಆದರೆ ಹೀಗೆ ದಿಢೀರನೆ ಮಾತನಾಡಲು ಕರೆದಾಗ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪಾತ್ರವಹಿಸಲು ಆಹ್ವಾನವಿತ್ತಾಗ ಅಂಬೇಡ್ಕರರು ಜಯಕರ್ ರಿಂದ ಉಂಟಾಗಿದ್ದ ಗೊಂದಲವನ್ನು ತಮ್ಮ ಅದ್ಭುತ ವಾಗ್ಝರಿಯ ಮೂಲಕ ತಹಬಂದಿಗೆ ತಂದರು. ಒಂದು ಸ್ಪಷ್ಟ ದಿಕ್ಕಿನಲ್ಲಿ ಇಡೀ ಸಂವಿಧಾನ ರಚನೆ ಸಾಗುವಂತೆ ಮಾರ್ಗ ತೋರಿದರು. In fact ತಾವೇ ಆ ಸಂವಿಧಾನದ ಶಿಲ್ಪಿಯೂ ಆದರು!

ಯಾಕೆ ಈ ಘಟನೆಯನ್ನು ಉಲ್ಲೇಖಿಸಬೇಕಾಯಿತೆಂದರೆ ಅವಕಾಶಗಳು ನಮಗೆ ದಿಢೀರ್ ಎಂದು ದೊರೆಯಬಹುದು, ಹೇಗಾದರೂ ಸಿಗಬಹುದು. ಆದರೆ ಅದನ್ನು ಅಂಬೇಡ್ಕರರಂತೆ ಬಳಸಿಕೊಳ್ಳುವುದಿದೆಯಲ್ಲ ಅದು ಟ್ಯಾಲೆಂಟ್‌. ಈ ನಿಟ್ಟಿನಲ್ಲಿ ಅಂಬೇಡ್ಕರರ ಬದುಕಿನ ಅವಕಾಶದ ಈ ಘಟನೆ ಮತ್ತು ಅದನ್ನು ಅವರು ಉಪಯೋಗಿಸಿಕೊಂಡ ರೀತಿ ಆದರ್ಶನೀಯ, ಪ್ರತಿಯೊಬ್ಬರೂ ಅರಿಯಬೇಕಾದುದು ನೋಡಿ ಕಲಿಯಬೇಕಾದುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಯಾರು ನೀನು? ನಿನ್ನ ಜಾತಿ ಯಾವುದು? : ಡಾ. ಬಿ.ಆರ್.ಅಂಬೇಡ್ಕರ್

Published

on

  • ಡಾ.ಬಿ.ಆರ್.ಅಂಬೇಡ್ಕರ್

ಭಾರತದಲ್ಲಿ ಒಬ್ಬ ಮುಸ್ಲಿಮನನ್ನೋ, ಸಿಖ್ಖನನ್ನೋ ನೀನು ಯಾರು? ಎಂದು ಕೇಳಿನೋಡಿ. ತಕ್ಷಣವೇ ಅವರು ತಾನು ಮುಸ್ಲಿಮನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ಅಲ್ಲಿಗದು ಮುಗಿದು ಹೋಗುತ್ತದೆ. ತನಗೆ ಒಳಜಾತಿಯೊಂದಿದ್ದರೂ ಯಾವ ಮುಸಲ್ಮಾನನು ಅದನ್ನು ತಿಳಿಸುವುದಿಲ್ಲ.

ತಾನು ಮುಸ್ಲಿಮನೆಂದು ಅವನು ಹೇಳಿದರೆ, “ನೀನು ಶಿಯಾ ಅಥವಾ ಸುನ್ನಿ, ಶೇಖ್ ಅಥವಾ ಸೈಯದ್, ಖಟಕ್ ಅಥವಾ ಪಿಂಜಾರ…. ಇವುಗಳಲ್ಲಿ ಯಾವುದಕ್ಕೆ ಸೇರಿದವನು?” ಎಂದು ಯಾರೊಬ್ಬರು ಯಾವ ಮುಸಲ್ಮಾನನಿಗೂ ಕೇಳುವುದಿಲ್ಲ. ಅದೇ ರೀತಿ ಒಬ್ಬ ಸಿಖ್ಖನಿಗೆ “ಜಾಟ್, ರೋಡ್, ಮಜಬಿ, ರಾಮದಾಸಿ… ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು?” ಎಂದು ಯಾರೊಬ್ಬರೂ ಕೇಳುವುದಿಲ್ಲ.

ಆದರೆ…
ಒಬ್ಬನು ತಾನು ‘ಹಿಂದೂ’ ಧರ್ಮಕ್ಕೆ ಸೇರಿದವನು ಎಂದು ಹೇಳಿದ ಮಾತ್ರಕ್ಕೆ ಯಾವ ಹಿಂದೂವು ಸುಮ್ಮನಾಗುವುದಿಲ್ಲ. ಅವನ ಎರಡನೇ ಪ್ರಶ್ನೆ ಸಿದ್ಧಗೊಂಡಿರುತ್ತದೆ: “ನಿನ್ನ ಜಾತಿ ಯಾವುದು?” ಹಾಗೇ ನೋಡಿದರೆ ಈ ಎರಡನೇ ಪ್ರಶ್ನೆಯೇ ಹಿಂದೂ ಒಬ್ಬನ ನಿಜವಾದ ಪ್ರಶ್ನೆ. ನೀವು ‘ಹಿಂದೂ’ ಧರ್ಮಕ್ಕೆ ಸೇರಿದವರು ಎಂದಷ್ಟೇ ಹೇಳಿದರೆ ಸಾಲದು, ಜಾತಿ ಉಪಜಾತಿಗಳೆಲ್ಲ ತಿಳಿಸಲೇಬೇಕು. ಈ ಜಾತಿ ಉಪಜಾತಿಗಳೇ ಹಿಂದೂ ಧರ್ಮದಲ್ಲಿ ನಿಮ್ಮ ಸ್ಥಾನ ಏನು ಎಂಬುದನ್ನು ನಿರ್ಧರಿಸುವುದು.

ಮುಸ್ಲಿಮರಲ್ಲಿಲ್ಲದ, ಸಿಖ್ಖರಲ್ಲಿಲ್ಲದ, ಕ್ರೈಸ್ತರಲ್ಲಿಲ್ಲದ ಈ ಜಾತಿ ಹಿಂದೂಗಳಿಗೇಕೆ ಇಷ್ಟು ಮುಖ್ಯವಾಯಿತು?

(ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-1, ಭಾರತದಲ್ಲಿ ಜಾತಿಗಳು, ಜಾತಿ ಪದ್ಧತಿಯ ಒಂದು ಸಮರ್ಥನೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ : ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ‘ದೇವಿಂದರ್ ಸಿಂಗ್’ ಕಳಿಸಿದ ಆ ವ್ಯಕ್ತಿಯೂ ಇದ್ದ..!

Published

on

Kashmir DSP Devindar singh
  • ಹರ್ಷಕುಮಾರ ಕುಗ್ವೆ

2001 ರಲ್ಲಿ ಸಂಸತ್ ಭವನದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಒಬ್ಬ ಶನಿವಾರ ಜಮ್ಮು ಪೊಲೀಸರಿಗೆ ಇನ್ನೂ ಮೂವರು ಹಿಜ್ಬುಲ್ ಭಯೋತ್ಪಾದಕರ ಜೊತೆಯಲ್ಲಿ ಸಿಕ್ಕಿಬಿದ್ದಿದ್ದಾ‌ನೆ.‌ ಅವನ ಹೆಸರು ದೇವಿಂದರ್ ಸಿಂಗ್. ಈತ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಹಾಲಿ DYSPಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ.

ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೆ ಏರಿಸಲಾಗಿರುವ ಅಫ್ಜಲ್ ಗುರು 2004 ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಕುರಿತು ವಿವರವಾಗಿ ತಿಳಿಸಿದ್ದ. ಅಫ್ಜಲ್ ಗುರು ಪ್ರಕಾರ 2001ರಲ್ಲಿ ಸಂಸತ್ತಿನ ಮೇಲೆ ನಡೆಸಿದ ದಾಳಿಗೆ ಮೊದಲು ಅಫ್ಜಲ್ ಗುರುವನ್ನು ಬಂಧಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿಲಾಗಿತ್ತು.

ಹಾಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಆಫೀಸರುಗಳಲ್ಲಿ ದೇವಿಂದರ್ ಸಿಂಗ್ ಕೂಡಾ ಇದ್ದ. ಮಾತ್ರವಲ್ಲ ಅಫ್ಜಲ್ ಗುರುವನ್ನು ಬಿಡುವುದಾದರೆ 10 ಲಕ್ಷ ರೂಪಾಯಿ ಕೊಡಬೇಕು ಎಂದು ತಾಕೀತು ಮಾಡಿದ್ದರು. ತನ್ನ ಹೆಂಡತಿಯ ಬಂಗಾರವನ್ನು ಮಾರಿ ಅಫ್ಜಲ್ ಗುರು 8 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದ. ಕೆಲವೇ ದಿನಗಳ ಹಿಂದೆ ಕೊಂಡಿದ್ದ 24 ಸಾವಿರ ರೂಪಾಯಿಯ ಬೈಕನ್ನುವಶಪಡಿಸಿಕೊಂಡಿದ್ದರು.

ಕೊನೆಗೆ ಮತ್ತೊಬ್ಬ ಪೊಲೀಸ್ ಅಫೀಸರನ ಬಾವನಾದ ಅಲ್ತಾಫ್ ಹುಸೇನನ ಮಕ್ಕಳಿಗೆ ಟ್ಯೂಶನ್ ಹೇಳಿಕೊಡುವಂತೆ ಅಫ್ಜಲ್ ಗುರುವಿಗೆ ಹೇಳಲಾಗಿತ್ತು. ಕೊನೆಗೆ 2001 ರಲ್ಲಿ ಅದೇ ಅಲ್ತಾಫನೇ ಅಫ್ಜಲ್ ಗುರುವನ್ನು ದೇವಿಂದರ್ ಸಿಂಗ್ ಬಳಿಗೆ ಕೊಂಡೊಯ್ದಿದ್ದ. ಅಗ ದೇವಿಂದರ್ ಸಿಂಗ್ ಅಫ್ಜಲ್ ಗುರುವಿಗೆ ತನಗೆ ಒಂದು ಸಣ್ಣ ಸಹಾಯ ಮಾಡಲು ಕೇಳಿಕೊಂಡ.

ಒಬ್ಬ ವ್ಯಕ್ತಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವನಿಗೆ ಕೆಲ ದಿನಗಳ ಕಾಲ ಊಟ, ವಸತಿ ವ್ಯವಸ್ಥೆ ಮಾಡಲು ಹೇಳಿದ್ದ. ಅಫ್ಜಲ್ ಗುರು ಅದೇ ರೀತಿ ಮಾಡಿದ್ದ. ಆದರೆ ಆತ ಯಾರು, ದೇವಿಂದರ್ ಸಿಂಗ್ ಅವನನ್ನು ಯಾಕೆ ತನ್ನ ಬಳಿ ಬಿಟ್ಟಿದ್ದಾನೆ ಎಂದು ಅಫ್ಜಲ್ ಗುರುಗೆ ಗೊತ್ತಿರಲಿಲ್ಲ. ಅವನಾಡುವ ಭಾಷೆ ನೋಡಿದಾಗ ಅವನು ಕಾಶ್ಮೀರಿಯೂ ಆಗಿರಲಿಲ್ಲ.‌ 2001 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ ನಡೆದು ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ದೇವಿಂದರ್ ಸಿಂಗ್ ಕಳಿಸಿದ ಆ ವ್ಯಕ್ತಿಯೂ ಇದ್ದ..!

ಅಫ್ಜಲ್ ಗುರು ಹೇಳಿದ್ದ ವಿಷಯಗಳ ಕುರಿತಾಗಿ 2006 ರಲ್ಲಿ ದೇವಿಂದರ್ ಸಿಂಗ್ ನನ್ನು ಪರ್ವೆಝ್ ಬುಕಾರಿ ಎಂಬ ಪತ್ರಕರ್ತ ಪ್ರಶ್ನಿಸಿದಾಗ ದೇವಿಂದರ್ ಸಿಂಗ್ ತಾನು ಅಫ್ಜಲ್ ಗುರುನನ್ನು ಹಿಂಸಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದ.

ಈಗ ಅದೇ ದೇವಿಂದರ್ ಸಿಂಗ್ ಹಿಜ್ಬುಲ್ ಮುಜಾಹಿದೀನ್ ನ ಮೂವರು ಉಗ್ರರನ್ನು ತನ್ನದೇ ಪೊಲೀಸ್ ಇಲಾಖೆಯ ಕಣ್ತಪ್ಪಿಸಿ ವೇಗವಾಗಿ ಕಾರಿನಲ್ಲಿ‌ ಸಾಗಿಸುತ್ತಿರುವಾಗ ಡೆಪ್ಯುಟಿ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಜನರಲ್ ಅತುಲ್ ಗೋಯೆಲ್ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.‌ ಉಗ್ರರು ಹೋಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ. ಉಗ್ರರನ್ನು ಸಾಗಿಸುತ್ತಿದ್ದ DySP ದೇವಿಂದರ್ ಸಿಂಗ್ ನನ್ನು ನೋಡಿದ್ದೇ ಅತುಲ್ ಗೋಯೆಲ್ ಅವನ ಕಪಾಳಕ್ಕೆ ಎರಡು ಬಿಟ್ಟಿದ್ದಾರೆ…‌

ಈಗ RAW, CIBಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೊನ್ನೆ ಭಾನುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪೊಲೀಸ್ ಅಧಿಕಾರಿಗಳು ದೇವಿಂದರ್ ಸಿಂಗ್ ನನ್ನು ಉಗ್ರರಲ್ಲಿ ಒಬ್ಬ ಎಂದು ಪರಿಗಣಿಸಿಯೇ ತನಿಖೆ ನಡೆಸಲಾಗುವುದು ಎಂದಿದ್ದಾರೆ.

1990ರ ದಶಕದಿಂದ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಇರುವ ದೇವಿಂದರ್ ಸಿಂಗ್ ಗೂ ಸಂಸತ್ ಮೇಲಿನ ದಾಳಿಗೂ ಏನು ಸಂಬಂಧ?

ಚುನಾವಣಾ ಸಮಯದಲ್ಲಿ ನಡೆದ ಪುಲ್ವಾಮಾ ದಾಳಿಗೂ ದೇವಿಂದರ್ ಸಿಂಗ್‌ಗೂ ಏನಾದರೂ ಸಂಬಂಧ ಇತ್ತೇ?

ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡ ದೆಹಲಿಯ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿಯವರನ್ನು ಸಂಸತ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿ ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ಆದರೆ ಕೊನೆಗೆ ನ್ಯಾಯಾಲಯದ ವಿಚಾರಣೆ ನಂತರದಲ್ಲಿ ಗಿಲಾನಿಯವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದರು.

ಅವರು ಅಫ್ಜಲ್ ಗುರುವಿನ ಮುಗ್ಧತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುನನ್ನು ಸಿಕ್ಕಿಸಲಾಗಿದೆ ಎಂದು ಗಿಲಾನಿ ಹೇಳಿದ್ದರು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಗಿಲಾನಿಯವರ ಮಾತು ಮಹತ್ವ ಪಡೆಯುತ್ತಿದೆ.

2013 ರಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡುವಾಗ ಸುಪ್ರೀಂ ಕೋರ್ಟು “Public Conscience” ತೃಪ್ತಿಪಡಿಸುವ ದೃಷ್ಟಿಯಿಂದ ಅಫ್ಜಲ್ ಗುರು ಗೆ ಮರಣ ದಂಡನೆ ನೀಡಬೇಕು ಎಂದು ತೀರ್ಪು ನೀಡಿತ್ತೇ ವಿನಃ ತನಿಖಾ ಸಂಸ್ಥೆಗಳು ಸೂಕ್ತ ಸಾಕ್ಷಾಧಾರ ನೀಡಲು ವಿಫಲವಾಗಿದ್ದವು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಅಫ್ಜಲ್ ಗುರು ಎಸಗಿದ್ದ ಅಪರಾಧವನ್ನು ಸಾಬೀತು ಮಾಡುವ ಸೂಕ್ತ ಸಾಕ್ಷ್ಯ ದೊರೆಯಬಹುದು. ಸಿಗಲಿ ಎಂದು ಆಶಿಸೋಣ.

ದೇವಿಂದರ್ ಸಿಂಗ್ ನಂತಹ ಹಿರಿಯ ಪೊಲೀಸ್ ಅಧಿಕಾರಿಯೇ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಕೈಗೂಡಿಸಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿರುವಾಗ ನಮ್ಮ ದೇಶ ಎಷ್ಟು ಸುರಕ್ಷಿತವಾಗಿರಲು ಸಾಧ್ಯ?

ಗಡಿಯಲ್ಲಿ ನಿಂತು ಪ್ರಾಣ ಕೊಡುತ್ತಿರುವ ನಮ್ಮ ಸಹೋದರರಿಗೆ ದ್ರೋಹ ಎಸಗುತ್ತಿರುವ ಇಂತಹ ಅಧಿಕಾರಿಗಳ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಇಂಚಿಂಚೂ ತನಿಖೆಯಾಗಲಿ… ಸತ್ಯ ಹೊರಬರಲಿ.

ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ

https://www.indiatimes.com/amp/news/india/what-is-parliament-attack-convict-afzal-gurus-connection-with-kashmir-dsp-davinder-singh-504265.html

https://thewire.in/security/ajit-doval-davinder-singh-terrorism/amp/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending