Connect with us

ಬಹಿರಂಗ

ಆರ್ಥಿಕ ಸಂಕಟಗಳ ಜತೆ ಈಗ ಬೆಲೆಯೇರಿಕೆಯ ಹೊರೆ

Published

on

  • ನವ-ಉದಾರವಾದಿ ಧೋರಣೆಗಳಿಂದ ಉಂಟಾಗಿರುವ ಕೆಟ್ಟಪರಿಸ್ಥಿತಿ ನೋಟುರದ್ಧತಿ ಮತ್ತು ಕೆಟ್ಟದಾಗಿ ರೂಪಿಸಿ, ಜಾರಿಗೊಳಿಸಿದ ಜಿಎಸ್‌ಟಿಯಿಂದಾಗಿ ಮತ್ತಷ್ಟು ಉಲ್ಬಣಗೊಂಡು ಆರ್ಥಿಕ ಬೆಳವಣಿಗೆ ಕುಸಿಯುವಂತೆ ಮಾಡಿದೆ. ಈಗ ಅದಕ್ಕೆ ಜೀವನಾವಶ್ಯಕ ಸಾಮಗ್ರಿಗಳಲ್ಲಿ ತೀವ್ರ ಹಣದುಬ್ಬರದ ಸಮಸ್ಯೆಯೂ ಸೇರಿಕೊಂಡಿದೆ. ಜನಸಾಮಾನ್ಯರು ಒಂದೆಡೆಯಲ್ಲಿ, ಇಳಿಯುತ್ತಿರುವ ಕೂಲಿ-ಸಂಬಳಗಳು ಮತ್ತು ಏರುತ್ತಿರುವ ನಿರುದ್ಯೋಗ, ಇನ್ನೊಂದೆಡೆಯಲ್ಲಿ ಆಹಾರ ಸಾಮಗ್ರಿಗಳು ಮತ್ತು ಇತರ ಆವಶ್ಯಕ ಸರಕುಗಳ ಬೆಲೆಯೇರಿಕೆಗಳ ಎರಡೆರಡು ಹೊರೆಗಳನ್ನು ಹೊರಬೇಕಾಗಿ ಬಂದಿದೆ. ಮೋದಿ ಸರಕಾರದ ಹಾನಿಕಾರಕ ಧೋರಣೆಗಳಿಗೆ ಜನಗಳ ಪ್ರತಿರೋಧವನ್ನು ಕಟ್ಟಿ ಬೆಳೆಸುವುದು ಮತ್ತು ವರ್ಗ ಹಾಗೂ ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವುದಲ್ಲದೆ ಈಗ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ.

-ಪ್ರಕಾಶ ಕಾರಟ್

ಭಾರತೀಯ ಅರ್ಥವ್ಯವಸ್ಥೆ ಭೀಷಣ ಇಕ್ಕಟ್ಟಿನಲ್ಲಿ ಸಿಲುಕಿದೆ. ಸರಕಾರ 2019-20ರಲ್ಲಿ ಜಿಡಿಪಿ ಬೆಳವಣಿಗೆ ದರ 5% ಇರಬಹುದು ಎಂದು ಲೆಕ್ಕ ಹಾಕಿ ಹೇಳಿದೆ. ಇದು ಜುಲೈ 2019ರಲ್ಲಿ ಮಂಡಿಸಿದ ಬಜೆಟಿನಲ್ಲಿ ಅಂದಾಜು ಮಾಡಿದ್ದ ದರಕ್ಕಿಂತ ಪೂರ್ಣ 2%ದಷ್ಟು ಕಡಿಮೆ. ಬಹುಶಃ ವಾಸ್ತವ ಜಿಡಿಪಿ ದರ ಇನ್ನೂ ಕೆಟ್ಟದಾಗಿರಬಹುದು, ಏಕೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಬೆಳವಣಿಗೆ ದರ 4.6% ಇರಬಹುದು ಎಂಬ ಅಂದಾಜಿಗೆ ಬಂದಿದೆ. ಆದರೆ ಆರ್ಥಿಕ ರಂಗದಲ್ಲಿನ ಮೋದಿ ಅನಾಹುತದ ಕತೆ ಇಲ್ಲಿಗೇ ಮುಗಿಯುವುದಿಲ್ಲ.

ಇತ್ತೀಚಿನ ಸುದ್ದಿ ಎಂದರೆ ಹಣದುಬ್ಬರ ದರ ಡಿಸೆಂಬರ್ 2019ರಲ್ಲಿ 7.35%ಕ್ಕೆ ಏರಿದೆ. ಇದು ಜುಲೈ 2014ರ ನಂತರದ ಅತಿ ಹೆಚ್ಚಿನ ಹಣದುಬ್ಬರ ದರ. ಬಳಕೆದಾರ ಸೂಚ್ಯಂಕ ಈ ದರದಲ್ಲಿ ಏರಿದ್ದರೆ, ಆಹಾರ ಸಾಮಗ್ರಿಗಳ ಸೂಚ್ಯಂಕ ಇನ್ನೂ ಹೆಚ್ಚು, 14.12% ದಷ್ಟು. ಈರುಳ್ಳಿ, ಆಲೂಗಡ್ಡೆ, ತರಕಾರಿಗಳು ಹಾಗೂ ಬೇಳೆಕಾಳುಗಳ ಬೆಲೆಗಳಲ್ಲಿ ತೀವ್ರ ಏರಿಕೆ ಉಂಟಾಗಿದೆ. ಸಗಟು ಬೆಲೆ ಸೂಚ್ಯಂಕ ಡಿಸೆಂಬರ್‌ನಲ್ಲಿ 2.6%ಕ್ಕೇರಿದೆ.

ಇದು ಕೂಡ ಕಳೆದ ಏಳು ತಿಂಗಳಲ್ಲೇ ಅತಿ ಹೆಚ್ಚಿನ ದರ. ಪೆಟ್ರೋಲ್ ಮತ್ತು ಡಿಸೆಲ್ ದರಗಳು 2019ರ ಇಡೀ ವರ್ಷದಲ್ಲಿ ಸತತವಾಗಿ ಏರುತ್ತ ಬಂದಿವೆ, ಡೀಸೆಲ್ ಬೆಲೆಯಲ್ಲಿ ಲೀಟರಿಗೆ ರೂ.5.10 ಮತ್ತು ಪೆಟ್ರೋಲ್ ಬೆಲೆಗಳಲ್ಲಿ ರೂ.6.30 ಏರಿಕೆಯಾಗಿದೆ. ಇದು ಹಣದುಬ್ಬರವನ್ನು ಹೆಚ್ಚಿಸಿದೆ. ಮಧ್ಯ-ಪ್ರಾಚ್ಯ ಪ್ರದೇಶದಲ್ಲಿ ಇರಾನ್ ಬಗ್ಗೆ ಅಮೆರಿಕಾದ ಆಕ್ರಮಣಕಾರೀ ನಿಲುವಿನಿಂದಾಗಿ ಉಂಟಾಗಿರುವ ಸೆಳೆತಗಳನ್ನು ನೋಡಿದರೆ, ಈ ವಿಷಯದಲ್ಲಿಯೂ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳು ಕಾಣುತ್ತಿಲ್ಲ.

ಭಾರತೀಯ ಅರ್ಥವ್ಯವಸ್ಥೆ ಒಂದು ಸ್ಥಗಿತತೆಯತ್ತ ಜಾರುತ್ತಿದೆಯಷ್ಟೇ ಅಲ್ಲ, ಅದೇ ವೇಳೆಗೆ ಹಣದುಬ್ಬರವನ್ನೂ ಎದುರಿಸುತ್ತಿದೆ ಎಂದು ಹಲವು ಆರ್ಥಿಕ ತಜ್ಞರು ಗಮನಿಸಿದ್ದಾರೆ. ಅಂದರೆ, ಭಾರತದ ಅರ್ಥವ್ಯವಸ್ಥೆ ಈಗ ಸ್ಥಗಿತುಬ್ಬರ(ಸ್ಟಾಗ್‌ಫ್ಲೇಶನ್)ವನ್ನು ಅನುಭವಿಸುತ್ತಿದೆ- ಬೆಲೆಗಳು ಏರುತ್ತಿವೆ ಮತ್ತು ಉತ್ಪಾದನೆಯ ಬೆಳವಣಿಗೆ ನಿಧಾನಗೊಳ್ಳುತ್ತಿದೆ.

ಹಣಕಾಸು ಮಂತ್ರಿಗಳು ಜುಲೈ 2019ರಲ್ಲಿ ಮಂಡಿಸಿದ ಬಜೆಟ್ ಚಿಂದಿಯಾಗಿ ಬಿಟ್ಟಿದೆ. ಅದರಲ್ಲಿ ಪ್ರಸ್ತುತ ಪಡಿಸಿದ ಅಂಕೆ-ಸಂಖ್ಯೆಗಳೆಲ್ಲವೂ ಸಂಪೂರ್ಣವಾಗಿ ಏರುಪೇರಾಗಿವೆ- ಅಲ್ಲಿ ಹೇಳಿರುವ ಮೊತ್ತಕ್ಕೂ ಈಗ ಕಾಣುತ್ತಿರುವ ಮೊತ್ತಕ್ಕೂ ಅಪಾರ ಅಂತರ ಉಂಟಾಗಿದೆ. ಸರಕಾರ, ಅರ್ಥವ್ಯವಸ್ಥೆ ನಿಧಾನಗೊಳ್ಳುತ್ತಿದೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳದಿದ್ದರೂ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲಿಕ್ಕೆಂದು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳುತ್ತಿದೆ.

ಆದರೆ ಅವೆಲ್ಲವೂ ಭಾರತೀಯ ದೊಡ್ಡ ಬಂಡವಳಿಗರು ಮತ್ತು ವಿದೇಶಿ ಹಣಕಾಸು ಬಂಡವಾಳಕ್ಕೆ ಅಪಾರ ತೆರಿಗೆ ರಿಯಾಯ್ತಿಗಳನ್ನು ಒದಗಿಸುವ ಕ್ರಮಗಳಷ್ಟೇ. ಅದು ಕೈಗೊಂಡ ಮೊದಲ ಕ್ರಮವೆಂದರೆ ಬಜೆಟಿನಲ್ಲಿ ವಿಧಿಸಿದ್ದ ಬಂಡವಾಳ ಗಳಿಕೆ ತೆರಿಗೆಯ ಮೇಲಿನ ಸರ್ಚಾರ್ಜನ್ನು ತೆಗೆದು ವಿದೇಶಿ ಹೂಡಿಕೆದಾರರನ್ನು ಸಮಾಧಾನಗೊಳಿಸುವುದು. ನಂತರ, ರಫ್ತುಗಳಿಗೆ 50,000ಕೋಟಿ ರೂ.ಗಳ ಮತ್ತು ರಿಯಲ್ ಎಸ್ಟೇಟ್ ಮತ್ತು ವಸತಿ ವಲಯಕ್ಕೆ 20,000 ಕೋಟಿ ರೂ.ಗಳ ಸಬ್ಸಿಡಿಗಳ ಪ್ರಕಟಣೆ ಮಾಡಲಾಯಿತು.

ಅರ್ಥವ್ಯವಸ್ಥೆ ಏನೇನೂ ಉತ್ತಮಗೊಳ್ಳದಿದ್ದಾಗ, ಕಾರ್ಪೊರೇಟ್ ತೆರಿಗೆ ದರವನ್ನು 22%ಕ್ಕೆ ಇಳಿಸಿ ಕಾರ್ಪೊರೇಟ್ ವಲಯಕ್ಕೆ 1.45 ಲಕ್ಷ ಕೋಟಿ ರೂ.ಗಳ ಭಾರೀ ಕೊಡುಗೆಯನ್ನು ನೀಡಲಾಯಿತು. ಇದಕ್ಕೆ ಮೊದಲು 400 ಕೋಟಿ ರೂ,ಗಳಿಗಿಂತ ಹೆಚ್ಚಿನ ವಹಿವಾಟು ಇದ್ದ ಕಂಪನಿಗಳಿಗೆ 30% ಮತ್ತು ಇತರೆಲ್ಲ ಕಂಪನಿಗಳಿಗೆ 25% ಕಾರ್ಪೊರೇಟ್ ತೆರಿಗೆ ಇತ್ತು. ಇದರ ಫಲಿತಾಂಶವೆಂದರೆ, ರಿಝರ್ವ್ ಬ್ಯಾಂಕ್‌ನ್ನು ದಬಾಯಿಸಿ ಅದರ ಗಳಿಕೆಯ 1.76ಲಕ್ಷ ಕೋಟಿ ರೂ.ಗಳನ್ನು ಪಡೆದುಕೊಂಡ ನಂತರವೂ ಸರಕಾರದ ಹಣಕಾಸು ಕೊರತೆ ಮತ್ತಷ್ಟು ಹೆಚ್ಚುವಂತಾಗಿದೆ.

ಅರ್ಥವ್ಯವಸ್ಥೆ ನಿಧಾನಗೊಳ್ಳುತ್ತಿರುವುದರಿಮದಾಗಿ ತೆರಿಗೆ ಸಂಗ್ರಹಗಳೂ ಬಜೆಟಿನಲ್ಲಿ ಅಂದಾಜು ಮಾಡಿದ್ದಕ್ಕಿಂತ ಬಹಳ ಕೆಳಮಟ್ಟದಲ್ಲಿವೆ. ಇದು ಮುಖ್ಯವಾಗಿ ರಾಜ್ಯಗಳನ್ನು ಬಾಧಿಸಿದೆ, ಏಕೆಂದರೆ ಇದರಿಂದಾಗಿ ಅವುಗಳಿಗೆ ಕೇಂದ್ರ ಸರಕಾರ ತಾನು ಕೊಡಬೇಕಾಗಿರುವ ಜಿಎಸ್‌ಟಿ ಪರಿಹಾರ ಪಾವತಿಗಳನ್ನು ಮುಂದೂಡಿದೆ. ಸರಕಾರದ ಕ್ರಮಗಳು ಅರ್ಥವ್ಯವಸ್ಥೆಯಲ್ಲಿನ ಬೇಡಿಕೆಯ ಬಿಕ್ಕಟ್ಟನ್ನು ನಿಭಾಯಿಸಲು ಏನೂ ಮಾಡಲಿಲ್ಲ, ಆದರೆ ಸರಕಾರದ ಆದಾಯಗಳನ್ನು ಮಾತ್ರ ಇಳಿಸಿತು.

ಮನರೇಗ ಯೋಜನೆಗೆ ಹಣಕಾಸು ನೀಡಿಕೆಯನ್ನು ವಿಸ್ತರಿಸುವುದು, ಕೃಷಿ, ಗ್ರಾಮೀಣ ಮೂಲರಚನೆ ಮತ್ತು ಸಾಮಾಜಿಕ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವುದು ಮತ್ತು ನಗರಪ್ರದೇಶಗಳಲ್ಲೂ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವುದು ಮುಂತಾದ ಜನಗಳ ಕೈಗಳಲ್ಲಿ ಹಣವನ್ನು ಇಡಬಹುದಾಗಿದ್ದ ಕ್ರಮಗಳನ್ನು ಅನುಸರಿಸುವ ಬದಲು, ಆಮೂಲಕ ಕೃಷಿಯ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಬದಲು, ಸರಕಾರ ಈ ಎಲ್ಲ ವಲಯಗಳಲ್ಲೂ ಹಣನೀಡಿಕೆಯಲ್ಲಿ ಕಡಿತ ಮಾಡುತ್ತಿದೆ.

ಮುಂದಿನ ಆರು ವರ್ಷಗಳಲ್ಲಿ ಮೂಲರಚನೆಯಲ್ಲಿ 102 ಲಕ್ಷ ಕೋಟಿ ರೂ.ಗಳನ್ನು ಹೂಡಲಾಗುವುದು ಎಂದು ಬಹಳಷ್ಟು ಪ್ರಚಾರ ಮಾಡಲಾಯಿತು. ಆದರೆ ಐದು ವರ್ಷಗಳಲ್ಲಿ ಹಾಗೆ ಮಾಡುವ ವಚನ ದುರ್ಬಲಗೊಂಡಿದೆ, ಮಾತ್ರವಲ್ಲ, ಅದು ಪ್ರಚಾರ ಮಾಡಿದ ಪ್ರಮಾಣದ ಹತ್ತಿರವೂ ಬರುವಂತೆ ಕಾಣುತ್ತಿಲ್ಲ. ಇದಕ್ಕೆ 39% ಮಾತ್ರ ಭಾರತ ಸರಕಾರದಿಂದ ಬರುತ್ತದೆ, 39% ಎಲ್ಲ ರಾಜ್ಯಗಳಿಂದ ಬರುತ್ತದೆ ಮತ್ತು ಉಳಿದ 22% ಖಾಸಗಿ ವಲಯದಿಂದ ಬರುತ್ತದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.

ಆದರೆ ಈಗ ನೋಟುರದ್ಧತಿ, ಜಿಎಸ್‌ಟಿಯ ಒಡ್ಡೊಡ್ಡಾದ ಜಾರಿ ಮತ್ತು ಕಾರ್ಪೊರೇಟ್‌ಗಳಿಗೆ ಕೇಂದ್ರ ಸರಕಾರದ ತೆರಿಗೆ ಬಕ್ಷೀಸುಗಳು ರಾಜ್ಯಗಳ ಹಣಕಾಸು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬಿಗಡಾಯಿಸಿರುವಾಗ, ಮತ್ತು ಆರ್ಥಿಕ ಸ್ಥಗಿತತೆಯ ಅಂಚಿನಲ್ಲಿ ಬಂದು ನಿಂತಿರುವಾಗ ಹಾಗೂ ಸ್ಥಗಿತುಬ್ಬರವನ್ನು ಅನುಭವಿಸುತ್ತಿರುವಾಗ, ಈ ದೊಡ್ಡ ಯೋಜನೆಯ ಪ್ರಕಟಣೆ ಬಹುಮಟ್ಟಿಗೆ ಟೊಳ್ಳು ಬಡಾಯಿಯೇ ಆಗಿದೆ.

ಸರಕಾರ ಈಗ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ತನ್ನ ಪಾಲನ್ನು ಬೃಹತ್ ಪ್ರಮಾಣದಲ್ಲಿ ಮತ್ತು ಅತ್ಯಂತ ಕಡಿಮೆ ಬೆಲೆಗಳಲ್ಲಿ ಮಾರಿಕೊಳ್ಳಲು ಮುಂದಾಗಿದೆ. ಹಲವು ಲಾಭದಾಯಕ ಉದ್ದಿಮೆಗಳನ್ನು ಕಡಿದು ಹಾಕಿ ದೇಶಕ್ಕೆ ಸದ್ಯದಲ್ಲೂ ಮತ್ತು ಭವಿಷ್ಯದಲ್ಲೂ ಅಪಾರ ಹಾನಿಗಳನ್ನು ತರುತ್ತಿದೆ. ಇದನ್ನು ಯಾವ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಸರಕಾರದ ಮಾಹಿತಿಗಳೇ ಬೃಹತ್ ಪ್ರಮಾಣದ ನಿರುದ್ಯೋಗ ಇದೆ, ಕೃಷಿ ಸಂಕಟ ಮುಂದುವರೆಯುತ್ತಿದೆ ಮತ್ತು ತಲಾಬಳಕೆ ಖರ್ಚು ಇಳಿಮುಖಗೊಂಡಿದೆ, ಗ್ರಾಮೀಣ ಭಾರತದಲ್ಲಿ 2011-12ರಿಂದ 2017-18ರ ನಡುವೆ 8.8% ದಷ್ಟು ಇಳಿದಿದೆ ಎಂದು ತೋರಿಸುತ್ತಿವೆ. ಪ್ರಥಮತಃ ನವ-ಉದಾರವಾದಿ ಧೋರಣೆಗಳಿಂದ ಉಂಟಾಗಿರುವ ಇಂತಹ ಕೆಟ್ಟಪರಿಸ್ಥಿತಿ ನೋಟುರದ್ಧತಿ ಮತ್ತು ಕೆಟ್ಟದಾಗಿ ರೂಪಿಸಿ, ಜಾರಿಗೊಳಿಸಿದ ಜಿಎಸ್‌ಟಿಯಿಂದಾಗಿ ಮತ್ತಷ್ಟು ಉಲ್ಬಣಗೊಂಡು ಆರ್ಥಿಕ ಬೆಳವಣಿಗೆ ಕುಸಿಯುವಂತೆ ಮಾಡಿದೆ.

ಈಗ ಅದಕ್ಕೆ ಜೀವನಾವಶ್ಯಕ ಸಾಮಗ್ರಿಗಳಲ್ಲಿ ತೀವ್ರ ಹಣದುಬ್ಬರದ ಸಮಸ್ಯೆಯೂ ಸೇರಿಕೊಂಡಿದೆ. ಈ ಸರಕಾರ ತನ್ನ ಸ್ವಭಾವದಿಂದಾಗಿ, ಇಂತಹ ಧೋರಣೆಗಳನ್ನು ಕೈಬಿಟ್ಟು, ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಸ್ಫುರಿಸುವ ಹಾಗೂ ಬೃಹತ್‌ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಗಳ ಮೂಲಕ ಪೂರೈಕೆಯ ಮೂಲರಚನೆಗಳನ್ನು ಉತ್ತಮ ಪಡಿಸಬೇಕು ಎನ್ನುವ ಸಲಹೆಗಳಿಗೆ ಕಿವಿಗೊಡುವುದಿಲ್ಲ. ತದ್ವಿರುದ್ಧವಾಗಿ ಅದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೇಶೀ ಗುತ್ತೇದಾರಿ ಬಂಡವಾಳದ ಆಗ್ರಹದಂತೆ ಶ್ರಮ ಮಾರುಕಟ್ಟೆ ಹಾಗೂ ಭೂಮಿ ಮಾರುಕಟ್ಟೆಯನ್ನು ಮತ್ತಷ್ಟು ಉದಾರೀಕರಿಸುವ ಪ್ರಯತ್ನವನ್ನೇ ಮಾಡುತ್ತದೆ.

ಜನಸಾಮಾನ್ಯರು ಒಂದೆಡೆಯಲ್ಲಿ, ಇಳಿಯುತ್ತಿರುವ ಕೂಲಿ-ಸಂಬಳಗಳು ಮತ್ತು ಏರುತ್ತಿರುವ ನಿರುದ್ಯೋಗ, ಇನ್ನೊಂದೆಡೆಯಲ್ಲಿ ಆಹಾರ ಸಾಮಗ್ರಿಗಳು ಮತ್ತು ಇತರ ಆವಶ್ಯಕ ಸರಕುಗಳ ಬೆಲೆಯೇರಿಕೆಗಳ ಎರಡೆರಡು ಹೊರೆಗಳನ್ನು ಹೊರಬೇಕಾಗಿ ಬಂದಿದೆ.

ಮೋದಿ ಸರಕಾರದ ಹಾನಿಕಾರಕ ಧೋರಣೆಗಳಿಗೆ ಜನಗಳ ಪ್ರತಿರೋಧವನ್ನು ಕಟ್ಟಿ ಬೆಳೆಸುವುದು ಮತ್ತು ವರ್ಗ ಹಾಗೂ ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವುದಲ್ಲದೆ ಈಗ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಆಷಾಢ ಪೂರ್ಣಿಮೆ ಮತ್ತು ಧಮ್ಮಚಕ್ಕಪವತ್ತನದಿನ

Published

on

ಜುಲೈ 05 ಆಷಾಢ ಪೂರ್ಣಿಮೆಯ ಪ್ರಯುಕ್ತ

  • ಶಿವಸ್ವಾಮಿ

ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಶಬ್ದವೇ “ಗುರು

ಗೌತಮ ಬುದ್ಧ

ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ, ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು, ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು, ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಭಯದ ಉತ್ಪಾಧಕರೆನಿಸಿಕೊಂಡವರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮೂಲನಿವಾಸಿಗಳ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರಬರದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ಮದುವೆ ಮುಂಜಿ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಾರೆ.

ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ, ಆಷಾಢ ಮಾಸ ಅಶುಭವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಅಂತ ಬಂಧುಗಳೇ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ನಿಜವಾದ ಭಾರತೀಯಾರಾದ ನಾವು ಇತಿಹಾಸವನ್ನು ತಿಳಿದುಕೊಳ್ಳೋಣ.

ಎಲ್ಲಾ ತಿಂಗಳುಗಳಂತೆಯೇ ಆಷಾಡ ಮಾಸದಲ್ಲಿ ಸೂರ್ಯ ಚಂದ್ರರು ಬೆಳಗುತ್ತಾರೆ, ಮಳೆ ಸುರಿಯುತ್ತದೆ, ಗಿಡಮರಗಳು ಚಿಗುರುತ್ತವೆ, ಗಾಳಿ ಬೀಸುತ್ತದೆ, ಹೂವುಗಳು ಮೊಗ್ಗಾಗಿ ಅರಳಿ ಪರಿಮಳವನ್ನು ಬೀರುತ್ತ ಪ್ರಕೃತಿ ಎಂದಿನಂತೆ ತನ್ನ ಕೆಲಸದಲ್ಲಿ ನಿರತವಾಗಿರುತ್ತದೆ.

ಆದರೆ ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆಂದು ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು ದಿಂಡರುಗಳ ಹೆಸರಲ್ಲಿ ಭಯದ ಉತ್ಪಾಧಕರೆನಿಸಿಕೊಂಡ ವೈದಿಕ ಮಹಾಶೆಯರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮುಗ್ಧ ಜನರ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರ ಬರಲಾಗದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ತಮ್ಮ ಮದುವೆ ಮುಂಜಿ ಇನ್ನಿತರ ಶುಭ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಹೊರೆಯಾಗದಂತೆ ಮಾಡಿಕೊಳ್ಳುತ್ತಾರೆ.ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ.

ಆಷಾಢ ಮಾಸದಲ್ಲಿ ಧೋ..ಎಂದು ಸುರಿಯುವ ಜಿಟಿ ಜಿಟಿ ಮಳೆರಾಯನ ಹರ್ಷಕೆ ಇಳೆ ತಂಪಾಗಿ ಹಚ್ಚ ಹಸಿರಿನ ಸೀರೆಯನುಟ್ಟು ಭೂತಾಯಿ ಕಂಗೊಳಿಸುತ್ತಿರುವ ಆಷಾಡ ಮಾಸವನ್ನು ವಿಪ್ರರೆತಕೆ ಅನಿಷ್ಟ ಅಶುಭವೆಂದರು.. !?

ಬುದ್ಧ ಪೂರ್ವದಲ್ಲಿ ಶತಶತಮಾನಗಳಿಂದ ಇಡೀ ವ್ಯವಸ್ಥೆಯನ್ನೇ ತಮ್ಮ ಧಾರ್ಮಿಕ ಕಪಿಮುಸ್ಷ್ಠಿಯಲ್ಲಿ ಮೌಢ್ಯವನ್ನೇ ಬಿತ್ತುತ್ತಾ ಜಾತಿ ಧರ್ಮ, ಮರ್ಮ ಕರ್ಮ, ಸ್ವರ್ಗ ನರಕವೆಂಬ ಕಾಣದ ಕಲ್ಪನೆಯ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮುಗ್ಧ ಜನರನ್ನು ಬಂಧಿಸಿ ತಾವು ಮಾತ್ರ ಶ್ರೇಷ್ಠ ಇತರರು ಕನಿಷ್ಠವೆಂದು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರಿಗೆ ಸೆಡ್ಡು ಹೊಡೆದ ಸಿದ್ಧಾರ್ಥ ಗೌತಮರು ಈ ಆಷಾಢ ಪೂರ್ಣಿಮೆಯಂದೇ ಜ್ಞಾನೋದಯವಾಗಿ ಬೋಧಿಯನ್ನು ಪಡೆದು ಬುದ್ಧರಾಗುತ್ತಾರೆ.

ನಂತರ ತಾವು ಪಡೆದು ಅನುಭವಿಸಿದ ಅಂತಿಮ ಸತ್ಯದ ಧಮ್ಮಮಾರ್ಗವನ್ನು ಇತರರಿಗೂ ಹಂಚಬೇಕೆಂದು ನಿಶ್ಚಯಿಸಿ ಯಾರಿಗೆ ಮೊದಲು ಧಮ್ಮವನ್ನು ಬೋಧಿಸಬೇಕೆಂದು ಯೋಚಿಸುವಾಗ ತಾನು ಕಠಿಣ ತಪಸ್ಸನ್ನು ಮಾಡುವಾಗ ತನ್ನೊಂದಿಗಿದ್ದ ಐದು ಜನ ಸಮಣ ಭಿಕ್ಕುಗಳು ನೆನಪಿಗೆ ಬಂದು ಅವರನ್ನು ಹುಡುಕುತ್ತಾ ಸಾರಾನಾಥದ ಇಸಿಪತನದ ಜಿಂಕೆವನಕ್ಕೆ ಬಂದು ತಮ್ಮ ಪ್ರಥಮ ಧಮ್ಮೋಪದೇಶವನ್ನು ನೀಡುವುದರ ಮೂಲಕ ಧಮ್ಮ ಪ್ರಸಾರದ ಚಕ್ರವನ್ನು ಉರುಳಿ ಬಿಡುತ್ತಾರೆ ಇದನ್ನು ಧಮ್ಮ ಚಕ್ಕ ಪವತ್ತನ ಸುತ್ತ ಎಂದೂ…ಇದೇ ದಿನವನ್ನು ಧಮ್ಮ ಚಕ್ಕ ಪವತ್ತನ ದಿನವೆಂದು ಕರೆಯುತ್ತಾರೆ.

ಧಮ್ಮಚಕ್ಕಪವತ್ತನ(ಸುತ್ತ) ದಿನ

ಗೌತಮರು ಭೋಧಿ ಪಡೆದು ಬುದ್ಧರಾದ ಮೇಲೆ ತಮ್ಮ ಮೊದಲ ಧಮ್ಮೋಪದೇಶವನ್ನು (ಧಮ್ಮಚಕ್ಕ ಪವತ್ತನ ಸುತ್ತ )ತನ್ನ ಶಿಷ್ಯರಾದ ಕೊಂಡಣ್ಣ, ಭದ್ದಿಯಾ, ವಪ್ಪ, ಮಹಾನಾಮ, ಅಸ್ಸಜ್ಜಿ, ಎಂಬ ಐದು ಜನ ಭಿಕ್ಕುಗಳಿಗೆ ಬೋಧಿಸಿದರು ಇದು ಧಮ್ಮ ಚಕ್ಕ ಪವತ್ತನ ಸುತ್ತವೆಂದೇ ಪ್ರಸಿದ್ದಿ ಪಡೆದು ಇಲ್ಲಿಂದಲೇ ಬುದ್ಧರ ಧಮ್ಮ ಚಕ್ರವು ಉರುಳಲಾರಂಭಿಸಿತು, ಬುದ್ಧರ ಹೃದಯದಲ್ಲಿ ಮಿಂಚಿದ ಜ್ಞಾನದ ಧರ್ಶನವೇ ಈ ಸುತ್ತದ ಸಾರವಾಗಿದೆ ಇದನ್ನು ಚತುರಾರ್ಯ ಸತ್ಯಗಳು ಅಥವಾ ನಾಲ್ಕು ಆರ್ಯ ಸತ್ಯಗಳೆಂದು ಕರೆಯುತ್ತಾರೆ.

ಪಾಳಿಯಲ್ಲಿ “ಚರಿತ ಭಿಕ್ಖವೇ ಚಾರಿಕಂ ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಅತ್ತಾಯ ಹಿತಾಯ ಸುಖಾಯ ದೇವಾ ಮನಸ್ಸಂ” ಕನ್ನಡದಲ್ಲಿ ನಾನೊಂದು ಧಮ್ಮ ಚಕ್ರ, ಮಾನವ ಚಕ್ರ, ಸಂಸಾರವೆಂಬ ಚಕ್ರವನ್ನು ಉರುಳಿಬಿಟ್ಟಿದ್ದೇನೆ, ಅದು ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕದ ಮೇಲೆ ಕರುಣೆ ನೆಲೆಗೊಳಿಸುವುದಾಗಿದೆ.
ಅದು ತನ್ನ ಹಿತಸುಖಕ್ಕಾಗಿ ದೇವಾ ಮಾನವರ ಹಿತಸುಖಕ್ಕಾಗಿ ಉರುಳಿಬಿಡಲಾಗಿದೆ.

4 ಆರ್ಯ ಸತ್ಯಗಳು

01. ದುಃಖ್ಖ ಸತ್ಯ

ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ.ದೈಹಿಕ ಮತ್ತು ಮಾನಸಿಕ ನೋವು ಯಾತನೆ ಕೊರಗು ಇದೆಲ್ಲವೂ ದುಖ್ಖವೇ.

02. ದುಃಖ್ಖಕ್ಕೆ ಕಾರಣ ಸತ್ಯ

ದುರಾಸೆ ಅಥವಾ ತೃಷ್ಣೆ
ಮೂರು ವಿಧವಾದ ತೃಷ್ಣೆಗಳಿವೆ

  • ಕಾಮ ತೃಷ್ಣೆ

ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮತೃಷ್ಣೆ

  • ಭಾವತೃಷ್ಣೆ

ನಾನು ಶಾಶ್ವತವಾಗಿ ಜೀವಿಸಬೇಕೆಂಬುದು ಮತ್ತು ನಾನು ಶ್ರೀಮಂತನಾಗಿ ಸದಾ ಭೋಗಜೀವನದಲ್ಲಿರಬೇಕೆಂಬುದೇ ಆಗಿದೆ

  • ವಿಭವ ತೃಷ್ಣೆ

ನಾನು ಈ ಪ್ರಪಂಚದಲ್ಲಿ ನಾನು ಇರಲೇಬಾರದೆಂಬ ಹತಾಶೆಯ ಮನಸ್ಥಿತಿ.

03. ದುಃಖ್ಖ ನಿರೋಧ ಸತ್ಯ

ಈ ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ಎಂದಮೇಲೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಖ್ಖವೂ ದೂರವಾಗುತ್ತದೆ.

04. ದುಃಖ್ಖ ನಿರೋಧ ಗಾಮಿನಿ ಪಟಿಪದ
(ದುಃಖ್ಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ)

ನಾಲ್ಕನೇ ಸತ್ಯವಾದ ದುಃಖ್ಖ ನಿರೋಧ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ ಅಥವಾ ಮಧ್ಯಮ ಮಾರ್ಗ,ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗಿರುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ಅಥವಾ ದೇಹ ದಂಡನೆ ಎಂಬ ಎರಡು ಅತಿರೇಖಾ ಮಾರ್ಗಗಳನ್ನು ಬುದ್ಧ ಕೈ ಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಸತ್ಯದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಬುದ್ಧರ ಮಧ್ಯಮ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ.

ಅಷ್ಟಾಂಗ ಮಾರ್ಗ

ಬುದ್ಧರ ಧಮ್ಮ ಚಕ್ರದ 8 ಅಂಶಗಳು ದುಃಖ್ಖ ನಿವಾರಣೆಗಾಗಿ ಇರುವ ಮಧ್ಯಮ ಮಾರ್ಗವಾಗಿದೆ

1.ಸರಿಯಾದ ದೃಷ್ಟಿ

2.ಸರಿಯಾದ ಯೋಚನೆ

3.ಸರಿಯಾದ ಮಾತು

4.ಸರಿಯಾದ ಕೆಲಸ

5.ಸರಿಯಾದ ಜೀವನೋಪಾಯ

6.ಸರಿಯಾದ ಪ್ರಯತ್ನ

7.ಸರಿಯಾದ ಎಚ್ಚರಿಕೆ

8.ಸರಿಯಾದ ಏಕಾಗ್ರತೆ

ನಿಮಗೆ ನೀವೇ ಬೆಳಕಾಗಿ, ನಿಮಗೆ ನೀವೇ ಶ್ರಮಿಸಬೇಕು‌. ತಥಾಗತರು ಕೇವಲ ಮಾರ್ಗದಾತರಷ್ಟೇ, ಬುದ್ಧರ ಅಷ್ಟಾಂಗ ಮಾರ್ಗದ ಉಪದೇಶವು ಇಲ್ಲಿಯೇ ಈಗಲೇ ಪರಮಸುಖವನ್ನು ಪಡೆಯಲು ದಾರಿದೀಪವಾಗಿದೆ ಜಾತಿ ಮತ ಧರ್ಮಗಳ ಬೇಧವಿಲ್ಲದೆ ಸರ್ವರು ಈ ಮಾರ್ಗದಲ್ಲಿ ನಡೆದು ಬುದ್ಧರ ಬೋಧನೆಯಂತೆ ದುಃಖ್ಖದಿಂದ ಮುಕ್ತರಾಗಬಹುದು.

ನಾಲ್ಕು ಆರ್ಯ ಸತ್ಯಗಳನ್ನು ವಿಶ್ಲೇಷಿಸಿದಾಗ 24 ಅಂಶಗಳು ಕಂಡು ಬರುತ್ತವೆ ಆದ್ದರಿಂದ ಬುದ್ಧರು ಬೋಧಿಸಿದ ಈ ಸ್ಥಳದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯು ಸ್ಟಂಭವನ್ನು ಸ್ಥಾಪಿಸಿ ಅದರ ಮೇಲೆ 4 ದಿಕ್ಕುಗಳಲ್ಲಿ ಸತ್ಯದ ಧಮ್ಮದ ಸಂದೇಶಗಳು ಸಿಂಹಗರ್ಜನೆಯಂತೆ ಹರಡಲಿ ಎಂದು 4 ಸಿಂಹ ಮತ್ತು 24 ಅರೆಗಳುಳ್ಳ ಧಮ್ಮಚಕ್ರವನ್ನು ಕೆತ್ತಿಸಿದರು ಅವುಗಳೇ ನಮ್ಮ ರಾಷ್ಟ್ರ ಲಾಂಛನವಾಗಿ ಸ್ವತಂತ್ರ ಸಮಾನತೆ ನ್ಯಾಯ ಸಹೋದರತೆಯ ಸಂಕೇತವಾಗಿ ಸದಾ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.

ಹೀಗೆ ಭಗವಾನ್ ಬುದ್ಧರು ಧಮ್ಮಚಕ್ಕ ಪವತ್ತನ ಸುತ್ತವನ್ನು ಬೋಧಿಸುತ್ತಾರೆ, ಈ ದಿನವೂ ಜುಲೈ ತಿಂಗಳು ಆಷಾಡ ಮಾಸದ ಪೂರ್ಣಿಮೆಯಂದೇ ಬರುವುದರಿಂದ ಜಗತ್ತಿನಲ್ಲೆಡೆ ಇರುವ ಬೌದ್ಧರು ಧಮ್ಮ ಚಕ್ಕ ಪವತ್ತನಾ ದಿನವೆಂದು ತಮ್ಮ ತಮ್ಮ ಮನ ಮನೆಗಳಲ್ಲಿ ದೊಡ್ಡ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಿ ಸರ್ವ ಜೀವಿಗಳಿಗೂ ಗುರುವಾಗಿ ಧಮ್ಮೋಪದೇಶ ನೀಡಿದ ಬುದ್ಧ ಗುರುವಿಗೆ ವಂದಿಸುತ್ತಾರೆ.

ಅದೇ ದಿನ ಮಹಾಮಾಯೆಯು ಗರ್ಭ ಧರಿಸಿದ ದಿನ, ಅದೇ ದಿನ ಸಿದ್ಧಾರ್ಥ ಗೌತಮರು ಗೃಹತ್ಯಾಗ ಮಾಡಿದ ದಿನ, ಅದೇ ದಿನ ಬೌದ್ಧ ಭಿಕ್ಕುಗಳಿಗೆ ವರ್ಷ ವಾಸ ಪ್ರಾರಂಭದ ದಿನ ಅಂದರೆ ಬೌದ್ಧ ಭಿಕ್ಕುಗಳು ಮಳೆಗಾಲದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ಉಳಿದುಕೊಂಡು ಧಮ್ಮ ಶಮಣ ಮಾಡುವರು.

ಭಾರತದಲ್ಲಿ ಮಾತ್ರ ವೈದಿಕ ಮನುವಾದಿಗಳು ಗುರುಪೂರ್ಣಿಮೆಯೆಂದು ಆಚರಿಕೊಂಡು ಬರುತ್ತಲೇ ಇದ್ದಾರೆ ವೈದಿಕ ಪುರೋಹಿತರೆನಿಸಿಕೊಂಡವರು ಮಾತ್ರ ಶುಭ ಕಾರ್ಯಗಳನ್ನು ಮಾಡಬಹುದು, ಇತರೇ ಸಮುದಾಯಗಳು ಶುಭಕಾರ್ಯಗಳನ್ನು ಮಾಡಿದರೆ ಅವರಿಗೆ ಅನಿಷ್ಟ ಅಶುಭವಾಗುತ್ತದೆ ಹೇಗಿದೆ ನೋಡಿ ಮನುವಾದಿಗಳ ಆಷಾಡ ಮಾಸದ ಆಷಾಡ ಭೂತಿತನದ ಒಳಮರ್ಮ!?

ಬೌದ್ಧರಿಗೆ ಪ್ರತಿ ಹುಣ್ಣಿಮೆಯು ಶುಭಸೂಚಕವಾದರೆ, ಇತರರಿಗೆ ಹೇಗೆ ಅಶುಭವಾಗುತ್ತದೆ? ಆಷಾಢವು ಅಶುಭ ಮಾಸವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಷ್ಠಿಸಲಾರರು”ಅಂತ ಆದರೆ ಆಷಾಡ ಮಾಸವು ಸಮಸ್ತ ಭಾರತೀಯರಿಗೆ ಜ್ಞಾನದ ಭಾಗಿಲನ್ನು ತೆರೆದ ತಿಂಗಳು, ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ಭಾರತೀಯರಾದ ನಾವುಗಳು ಬಹುಜನರಿಗೆ ನಿಜವಾದ ಇತಿಹಾಸವನ್ನು ತಿಳಿಸೋಣ.

ವೈದಿಕರಿಂದ ಸೃಷ್ಟಿಯಾದ ಅಸಮಾನತೆಯ ಕತ್ತಲ ಕೂಪದ ಈ ನೆಲದಲ್ಲಿ ಮಹಾ ಕಾರುಣಿಕನ ಮಾನವೀಯ ಲೋಕದ ಧಮ್ಮಚಕ್ರವು ಉರುಳಿ ಸಾಮಾನ್ಯರಿಂದಿಡಿದು ಸಾಮ್ರಾಟ್ ಅಶೋಕರಂತಹ ಆಳರಸರ ಮನಕ್ಕೆ ಬುದ್ಧತ್ವವು ಹೊಕ್ಕಿ ಮಾನವೀಯ ಮನುಷ್ಯರಾಗುತ್ತಾರೆ, ಇದರಿಂದ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರು ನಿರುದ್ಯೋಗಿಗಳಾಗುತ್ತಾರೆ ತಮ್ಮ ನಿರುದ್ಯೋಗಕ್ಕೆ ಕಾರಣವಾದ ಆಷಾಡ ಮಾಸವು ಅನಿಷ್ಟ ಅಶುಭವೆಂದು ಜನರು ತಿರಸ್ಕರಿಸುವಂತೆ ಮಾಡಿ ಯಶಸ್ವಿಯಾಗುತ್ತಾರೆ.

ಬುದ್ಧರೆಂಬ ಅರಿವಿನ ಹಣತೆಯಿಂದ ಆಷಾಢಮಾಸದ ತಿಂಗಳು ಸಕಲ ಜೀವರಾಶಿಗಳಿಗೂ ಶ್ರೇಶ್ಟವಾದರೆ ವೈದಿಕ ಪುರೋಹಿತರ ದೃಷ್ಟಿಯಲ್ಲಿ ಮಾತ್ರ ಕನಿಷ್ಠವಾಗುತ್ತದೆ ಕುಟಿಲತೆಯಿಂದ ಅಧಿಕಾರವನ್ನು ಕಸಿದುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿ ಬುದ್ಧ ಧಮ್ಮವನ್ನು ಈ ನೆಲದಿಂದಲೇ ಓಡಿಸಿದ ವೈದಿಕರು ತಾವು ಬರೆದುದೆಲ್ಲವನ್ನು ಕಾನೂನನ್ನಾಗಿಸಿ ಇದರ ವಿರುದ್ಧ ಯಾರು ಪ್ರಶ್ನಿಸಬಾರದೆಂದು ಇಲ್ಲಿನ ಮೂಲನಿವಾಸಿಗಳ ಮೇಲೆ ಧಾರ್ಮಿಕ ಗುಲಾಮಗಿರಿಯನ್ನೇರಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಿರುವುದು ಈ ದೇಶದ ದುರಂತವೇ ಸರಿ.

ಸರ್ವರೂ ಕತ್ತಲೆಯಿಂದ ಬೆಳಕಿನ ಕಡೆ ಬರುವಂತಾಗಲಿ ಇಡೀ ವಿಶ್ವವು ಎಲ್ಲಾ ರೋಗ ರುಜಿನಗಳಿಂದ ಮುಕ್ತವಾಗಿ ಸುಖದಿಂದ ಜೀವಿಸುವಂತಾಗಲಿ

ಸರ್ವರಿಗೂ ಬುದ್ಧಗುರು ಮೊದಲ ಧಮ್ಮೋಪದೇಶ ನೀಡಿದ ದಿನವಾದ ಆಷಾಡ ಮಾಸದ ಹುಣ್ಣಿಮೆಯ ಧಮ್ಮ ಚಕ್ರ ಪರಿವರ್ತನಾ ದಿನದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನುಡಿಯ ಒಡಲು -04 | ಭಾಷಾ ವೈವಿಧ್ಯತೆಯನ್ನು ಕಾಪಾಡುವುದೆಂದರೇನು?

Published

on

Art : Sunny LA
  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ -02

ಭಾಷೆಯನ್ನು ಮನುಷ್ಯನ ಅಂತಸ್ಥ ಸ್ವಭಾವದ ಅಭಿವ್ಯಕ್ತಿಯನ್ನಾಗಿ ನೋಡುವ ತಾತ್ವಿಕತೆ ಇವತ್ತು ಪ್ರಬಲವಾಗಿದೆ. ಇದು ಭಾಷೆಯ ಗುಣವನ್ನು ಹೇಳುತ್ತದೆ ಹೊರತು ಯಾವುದೇ ನಿರ್ದಿಷ್ಟ ಭಾಷೆಗೆ ಮಾತ್ರ ಇದನ್ನು ಅನ್ವಯಿಸಿ ಹೇಳಿಲ್ಲ. ಎಲ್ಲ ಮಾನವ ಸಹಜ ಭಾಷೆಗಳು ವೈಶ್ವಿಕ ವ್ಯಾಕರಣವನ್ನೇ (ಯುನಿವರ್ಸಲ್ ಗ್ರ್ಯಾಮರ್) ನೆಲೆಯಾಗಿಸಿಕೊಂಡಿರುತ್ತವೆ. ಈ ಸಾಮಾನ್ಯ ಗ್ರಹಿಕೆಯನ್ನು ಭಾಷಿಕ ಪರಿಕಲ್ಪನೆಗಳು ಮತ್ತು ಭಾಷೆಯ ರಾಚನಿಕ ಸಂಕೀರ್ಣತೆಯ ಪ್ರಮಾಣವನ್ನಾಗಿ ನೋಡಲಾಗುತ್ತದೆ.

ಹಾಗಾದರೆ, ಭಾಷೆಯ ತಳಹದಿಯೇ ವಿಶ್ವಾತ್ಮಕತೆಯಾದರೆ, ಚಿಂತನೆಯ ತಳಹದಿಯೂ ವಿಶ್ವಾತ್ಮಕವೇ? ಎಂಬ ಸಹಜ ಪ್ರಶ್ನೆಯೊಂದು ಇಲ್ಲಿ ಎದುರಾಗುತ್ತದೆ. ಏಕೆಂದರೆ, ನಮ್ಮ ಚಿಂತನಾಧಾರೆಯನ್ನು ನಮ್ಮ ತಾಯ್ನುಡಿ ರೂಪಿಸುತ್ತದೆ ಎಂದು ಬಲವಾಗಿ ವಾದಿಸಲಾಗಿದೆ. ‘ಮನುಷ್ಯರೆಲ್ಲರೂ ಒಂದೇ ಬಗೆಯಲ್ಲಿ ಯೋಚಿಸಬಲ್ಲರು’ ಎನ್ನುವ ತಾತ್ವಿಕ ಅಭಿಪ್ರಾಯಕ್ಕೆ ವಿರುದ್ಧವಾದ ನಂಬಿಕೆ ಇದಾಗಿದೆ. ಇದಕ್ಕೆ ಕಾರಣವೇನೆಂದರೆ ಸಾಂಸ್ಕ್ರುತಿಕ ವ್ಯತ್ಯಾಸಗಳು ಅತ್ಯಂತ ಆಳವಾಗಿ ಭಾಷೆಯೊಳಗೆ ನೆಲೆಗೊಂಡಿರುತ್ತವೆ ಎನ್ನುವುದಾಗಿದೆ. ಈ ದೇಶಿ ರಾಜಕಾರಣವನ್ನು ನಮ್ಮ ಇಡೀ ಭಾಷಿಕ ಪರಿಸರದೊಳಗೆ ಹೇಗೆ ಒಂದು ಮಾರ್ಗಸೂಚಿಯನ್ನಾಗಿ ಅಳವಡಿಸಲಾಗುತ್ತದೇ? ಎನ್ನುವುದೇ ಈ ವಾದದ ಹಿಂದಿನ ಸವಾಲು.

ಲೋಕವನ್ನು ಅರಿಯುವ, ಗ್ರಹಿಸುವ ಹಾಗೂ ಲೋಕದ ಕುರಿತು ಚಿಂತಿಸುವ ಬಗೆಗಳ ಮೇಲೆ ಭಾಷೆ ತನ್ನ ಪ್ರಭಾವವನ್ನು ಬೀರುತ್ತದೆ ಎನ್ನುವ ವಾದವನ್ನೂ ಇದು ಬಲಪಡಿಸುತ್ತದೆ. ಈ ಮೂಲಕ ಭಾಷೆ, ಸಂಸ್ಕ್ರುತಿ ಮತ್ತು ಚಿಂತನೆಗಳ ನಡುವೆ ಮಹತ್ವದ ನಂಟಸ್ತಿಕೆಯನ್ನು ಏರ್ಪಡಿಸಲಾಗಿದೆ. ಏಕೆಂದರೆ ಸಂಸ್ಕ್ರುತಿ ಪ್ರತಿದಿನದ ಬದುಕು ಎಂದಾದರೆ, ಭಾಷೆ ಪ್ರತಿದಿನದ ಮಾತು ಆಗಿರುತ್ತದೆ.

ಹಾಗಾಗಿ ಒಂದನ್ನೊಂದು ಪರಸ್ಪರ ಪ್ರಭಾವಿಸುವ ವಿನ್ಯಾಸವೊಂದು ರೂಪುಗೊಳ್ಳುತ್ತದೆ. ಆದರೆ ಸಾಂಸ್ಕ್ರುತಿಕ ಪ್ರಭಾವಗಳು ಅತ್ಯಂತ ಗಾಢವಾಗಿ ಎದ್ದು ಕಾಣುವುದು ಸಂಗೀತ ಅಭಿರುಚಿ, ಲೈಂಗಿಕತೆಯ ಬಗೆಗಿನ ಸಂವೇದನೆಗಳು ( ಮೋರ್ಸ್), ಉಡಿಗೆ ತೊಡಿಗೆಯ ವಿನ್ಯಾಸಗಳು ಎಂಬಿತ್ಯಾದಿ ಹೊರಮೈ ವಿನ್ಯಾಸಗಳಲ್ಲಿ ಮಾತ್ರ ನೋಡಲಾಗುತ್ತದೆ. ನುಡಿಯನ್ನೂ ಈ ವಿನ್ಯಾಸಗಳಲ್ಲಿ ಒಂದನ್ನಾಗಿ ಪರಿಗಣಿಸಬಹುದೇ? ಇಲ್ಲವೇ ನುಡಿಯನ್ನು ಇಡೀ ಸಂಸ್ಕ್ರುತಿಯ ನಿರ್ಮಿತಿಯನ್ನಾಗಿ (ಆರ್ಟಿಫ್ಯಾಕ್ಟ್) ನೋಡಬಹುದೇ? ಅಥವಾ ಇದೊಂದು ನಿಸರ್ಗದತ್ತವಾದ ನೆಲೆಯೇ? ಎಂಬ ಪ್ರಶ್ನೆಗಳೂ ಇಲ್ಲಿ ತಲೆಯೆತ್ತುತ್ತವೆ.

ಏಕೆಂದರೆ ‘ಜನಾಂಗೀಯ ಪ್ರಜ್ಞೆ’ (ಎತ್ನೋಗ್ರಾಫಿಕ್ ಸೆನ್ಸ್)ಯನ್ನು ರೂಪಿಸಲು ನುಡಿ ಮತ್ತು ಸಂಸ್ಕ್ರುತಿಯನ್ನು ಬಳಸಲಾಗುತ್ತದೆ. ಬಹುತೇಕ ಸನ್ನಿವೇಶದಲ್ಲಿ ಹೀಗೆ ಪ್ರಶ್ನಿಸುವ ಬಗೆಯೇ ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಏಕೆಂದರೆ ಭಾಷೆ ಸಾಂಸ್ಕ್ರುತಿಕ ಆಚರಣೆಯೇ ಹೊರತು ಅದು ಸಾಂಸ್ಕ್ರುತಿಕ ಹುಸಿತನವಲ್ಲ ಎನ್ನುವ ನಂಬಿಕೆ ಬಲವಾಗಿರುತ್ತದೆ. ಇಲ್ಲಿ ಮತ್ತೊಂದು ಮಹತ್ವದ ಸಂಗತಿಯನ್ನು ನೋಡಬಹುದು ಅದೇನೆಂದರೆ, ಒಂದು ವೇಳೆ ಭಾಷೆಯನ್ನು ಮನಸ್ಸಿನ ಬಿಂಬವಾಗಿಯೇ ಪರಿಗಣಿಸಿದರೆ, ಅದರಲ್ಲಿ ನಾವು ಯಾವ ಪ್ರತಿಫಲನವನ್ನು ಕಾಣುತ್ತೇವೆ. ಅಂದರೆ ಮಾನವ ಸ್ವಭಾವವೋ? ಇಲ್ಲವೇ ನಮ್ಮ ಸಮೂಹಗಳ ಸಾಂಸ್ಕ್ರುತಿಕ ಆಚರಣೆಯೋ?

ದಿಟ, ಜಗತ್ತಿನಾದ್ಯಂತ ಭಾಷೆಗಳು ಭಿನ್ನಪ್ರಭೇದಗಳಿಂದ ಕೂಡಿರುತ್ತವೆ. ಹಾಗಂತ ಪ್ರತಿಯೊಂದು ಮಗುವೂ ಆಯಾ ಭಾಷೆಗೆ ಅನುಗುಣವಾದ ಕಸುವನ್ನು ಹೊಂದಿರಲಾರದು. ಪ್ರತೀ ಮಗು ಆಕಸ್ಮತ್ತಾಗಿ ಆಯಾ ಸಮುದಾಯದ ನುಡಿಯನ್ನು ಪಡೆದುಕೊಳ್ಳುತ್ತದೆ/ಕಲಿಯುತ್ತದಯೇ ಹೊರತು ಆಯಾ ನುಡಿ ಸಮುದಾಯದ ವಂಶವಾಹಿನಿಯನ್ನು ಅದು ಹುಟ್ಟಿನಿಂದ ಪಡೆದಿರುವುದಿಲ್ಲ. ಮಗುವಿನಲ್ಲಿ ಜೈವಿಕವಾಗಿ ಅಂತಸ್ಥವಾಗಿರುವುದು ನುಡಿ ಕಸುವು ಮಾತ್ರ. ಅದು ಯಾವುದೇ ನಿರ್ದಿಷ್ಟ ನುಡಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ.

ಹಾಗಾಗಿ ವೈಶ್ವಿಕ ವ್ಯಾಕರಣ ಎನ್ನುವುದು ಸಾರ್ವತ್ರಿಕ ಕಲ್ಪನೆಯಾಗಿದೆ. ಇದಕ್ಕೆ ಪ್ರಾದೇಶಿಕತೆ ಪ್ರಾಪ್ತವಾಗುವುದು ಭಾಷಿಕ ಭಿನ್ನಪ್ರಭೇದಗಳಿಂದ ಮಾತ್ರ. ಭಾಷೆಗಳ ನಡುವಣ ವ್ಯತ್ಯಾಸಗಳು ಎರಡು ನೆಲೆಯಲ್ಲಿ ಏರ್ಪಡುತ್ತವೆ. ಒಂದು ಬಳಕೆಗೆ ಸಂಬಂಧಿಸಿದರೆ, ಮತ್ತೊಂದು ರಚನೆಗೆ ಸಂಬಂಧಿಸಿದ ಬಗೆಯಾಗಿದೆ. ನುಡಿಗಳ ನಡುವಣ ರಾಚನಿಕ ಭಿನ್ನತೆಗಳನ್ನು ವಿಕಲ್ಪಗಳೆಂದು ಮತ್ತು ಬಳಕೆಗೆ ಸಂಬಂಧಿಸಿದ ಸಂಗತಿಗಳು ಸಾಂಸ್ಕ್ರುತಿಕವೂ ಹಾಗೂ ಪ್ರ್ಯಾಗ್ಮಾಟಿಕ್ ಆಯಾಮದಿಂದಲೂ ಕೂಡಿರುತ್ತವೆ.

ಹಾಗಾಗಿ ಪರಿಕಲ್ಪನೆಗಳಿಗೆ ಭಿನ್ನ ಹೆಸರು, ಸೂಚಕಗಳನ್ನು ಆಯಾ ಭಾಷಿಕರು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನೇ, ನುಡಿಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನಾಗಿ ಗುರುತಿಸಲಾಗುತ್ತದೆ. ಈ ಒಂದೊಂದು ಸೂಚಕ ಇಲ್ಲವೇ ಹೆಸರು ಆಯಾ ಸಾಂಸ್ಕ್ರುತಿಕ ಅನಕೂಲತೆಗಳಿಗೆ ಹೊರತಾದ ಯಾವುದೇ ಬಗೆಯ ಕ್ಲೇಮ್ ಈ ಇಡೀ ಭಾಷಿಕ ಪ್ರಕ್ರಿಯೆಯೊಳಗೆ ಇರುವುದಿಲ್ಲ. ಮೇಲಾಗಿ ಈ ಯಾವುದೇ ಸೂಚಕ ಇಲ್ಲವೇ ಹೆಸರು ಆಯಾ ಸಂಸ್ಕ್ರುತಿಯೊಳಗೆಯೇ ನಿಚ್ಚಳವಾಗಿ ರೂಪುಗೊಂಡಿರುತ್ತದೆ ಹೊರತು, ಆಯಾ ವಸ್ತುವಿನ ಸ್ವರೂಪ/ಸ್ವಭಾವವನ್ನು ಯಥೇಚ್ಛವಾಗಿ ಸೂಚಿಸುವುದಿಲ್ಲ. ವಸ್ತುಗಳು ದಿಟದಲ್ಲಿ ಒಂದೇ ಬಗೆಯಲ್ಲಿರುತ್ತವೆ. ಕೊನೆಪಕ್ಷ, ಆಯಾ ವಾಸ್ತವದ ಗ್ರಹಿಕೆಯಲ್ಲಾದರೂ ಒಂದೇ ಬಗೆಯಲ್ಲಿರುತ್ತವೆ.

ಪ್ರತಿಯೊಂದು ಸಂಸ್ಕ್ರುತಿಯು ತಾನು ಬಯಸಿದಂತೆ, ತನ್ನದೇ ನುಡಿಯೊಳಗೆ ಪರಿಕಲ್ಪನೆಗಳನ್ನು ನೆಲೆಗೊಳಿಸಿಕೊಳ್ಳಲು ಮುಕ್ತವಾಗಿರುತ್ತದೆ. ಆದರೆ ಈ ಪರಿಕಲ್ಪನೆಗಳನ್ನು ರೂಪಿಸಿದ ಸೂಚಕಗಳ ಹಿಂದೆ ಅವುಗಳನ್ನು ರೂಪಿಸಿದವರ ಧೋರಣೆಗಳಿರುತ್ತವೆ. ಉದಾ.ಗೆ ಸಾಮಾಜಿಕ ತಾರತಮ್ಯವನ್ನು ಸೂಚಿಸುವ ಎಷ್ಟೊಂದು ಪದಗಳು ನಮ್ಮ ನುಡಿಯೊಳಗೆ ನೆಲೆನಿಂತಿವೆ. ಇದಕ್ಕೆ ಹೊರತಾಗಿಯೂ, ಒಂದೊಂದು ನುಡಿಯಲ್ಲಿಯೂ ತನ್ನದೇ ವಿಶೇಷ ಪದಕೋಶ ಮತ್ತು ಪದಸೂಚಕಗಳು ಇರುತ್ತವೆ.

ಉದಾ.ಗೆ ಜರ್ಮನ್ ಮತ್ತು ಫ್ರೆಂಚ್ ನುಡಿಗಳಲ್ಲಿ ಇಂಗ್ಲಿಶಿನ ‘ಮೈಂಡ್’ ಎಂಬ ಪದಕ್ಕೆ ಸಾಟಿಯಾದ ಪದವಿಲ್ಲ. ಹಾಗಂತ ಈ ಪರಿಕಲ್ಪನೆಯೇ ಈ ನುಡಿಗಳಲ್ಲಿ ಇಲ್ಲವೆಂದಲ್ಲ. ಹಾಗೂ ಝೆಫ್ಟಿಶ್ ಎನ್ನುವ ನುಡಿಯಲ್ಲಿ ಇಂಗ್ಲಿಶಿನ ಬಹುವಚನ ಸರ್ವನಾಮ ‘ವೀ’ ಎಂಬುದಕ್ಕೆ ಸಮನಾದ ಸರ್ವನಾಮವಿಲ್ಲ. ಆದರೆ ಈ ಕಲ್ಪನೆಯನ್ನು ಸೂಚಿಸುವ ವಿಭಿನ್ನ ಸರ್ವನಾಮ ರೂಪಗಳು ಈ ನುಡಿಯಲ್ಲಿವೆ. ‘ವೀ’ಗೆ ಸಂವಾದಿಯಾಗಿ ‘ಕಿತ’ (ಟು ಆಫ್ ಅಸ್ ಎಂದು ಅರ್ಥ. ಅಂದರೆ, ಮೀ ಆ್ಯಂಡ್ ಯು ಎಂದು), ‘ಕಿಮಿ’ (ಮೀ ಆ್ಯಂಡ್ ಸಮ್‍ಒನ್‍ಎಲ್ಸ್ ಬಟ್ ನಾಟ್ ಯು ಎಂದು ಅರ್ಥ) ಹಾಗೂ ‘ಟಯೋ’ (ಮೀ ಆ್ಯಂಡ್ ಯು ಆ್ಯಂಡ್ ಸಮ್‍ಒನ್‍ಎಲ್ಸ್ ಎಂದು ಅರ್ಥ) ಎಂಬ ಮೂರು ಭಿನ್ನ ರೂಪಗಳಿವೆ. ಈ ‘ವೀ’ ಎಂಬ ಸರ್ವನಾಮಕ್ಕೆ ತಮಿಳಿನಲ್ಲಿ ‘ನಮ್ಮ್’ ಮತ್ತು ‘ನಾಂಗ್’ ಎನ್ನುವ ಎರಡು ರೂಪಗಳಿವೆ. ಆದರೆ ಕನ್ನಡದಲ್ಲಿ ‘ನಾವು’ ಎನ್ನುವ ಒಂದೇ ರೂಪ ಇವತ್ತು ಬಳಕೆಯಲ್ಲಿದೆ.

ಸಮುದಾಯಗಳ ಸಂಸ್ಕ್ರುತಿಯ ಮೂಲಭೂತ ವಿನ್ಯಾಸಗಳನ್ನಾಗಿ ಇಂತಹ ಕೆಲವು ಕೋರ್ ವ್ಯಾಲ್ಯೂಗಳನ್ನು ಗುರುತಿಸಲಾಗುತ್ತದೆ. ಈ ಮೌಲ್ಯಗಳನ್ನು ಪ್ರತೀ ಸಮುದಾಯದ ಸಂಸ್ಕ್ರುತಿಯನ್ನು ಬಿಂಬಿಸುವ ಮೂಲಭೂತ ಅಂಶಗಳಲ್ಲಿ ಒಂದೆಂದು ಮಾನ್ಯಮಾಡಲಾಗುತ್ತದೆ.

ಮತ್ತು ಆಯಾ ಸಮೂಹಗಳ ಸಾಂಕೇತಿಕ ಪ್ರಾತಿನಿಧ್ಯತೆ ಹಾಗೂ ಸದಸ್ಯತ್ವವನ್ನು ಪಡೆದುಕೊಳ್ಳಲೂ ಈ ಮೌಲ್ಯಗಳನ್ನು ಪರಿಗಣಿಸಲಾಗುತ್ತದೆ (ಸ್ಮೋಲಿಕ್ಜ್ ಜೆ, 1981:76). ಏಕೆಂದರೆ, ಈ ಕೋರ್ ಮೌಲ್ಯಗಳ ಸಿದ್ಧಾಂತವು ಸಮೂಹಗಳನ್ನು ವಿಶಷ್ಟ, ಜನಾಂಗೀಯ, ಧಾರ್ಮಿಕ, ಸಾಂಸ್ಕ್ರುತಿಕ ಸಮುದಾಯಗಳನ್ನಾಗಿ ಬಲಪಡಿಸಲು ಒತ್ತಾಸೆಯಾಗುತ್ತದೆ ಎಂಬ ವಾದವನ್ನು ಸಮಾಜಶಾಸ್ತ್ರಜ್ಞ ಸೋಲ್ಮಿಕ್ಜ್. ಜೆ (1999) ಅತ್ಯಂತ ಬಲವಾಗಿ ಮಂಡಿಸುತ್ತಾನೆ. ಸಮೂಹಗಳ ಅಸ್ಮಿತೆಯನ್ನು ಗುರುತಿಸುವಲ್ಲಿ ಸಾಂಸ್ಕ್ರುತಿಕ ವಿನ್ಯಾಸಗಳು ಅತ್ಯಂತ ನಿರ್ಣಾಯಕ ಮತ್ತು ವಿಶಿಷ್ಟವೆಂದು ಪರಿಗಣಿಸಿದಾಗಲೆಲ್ಲಾ ಈ ವಾದವು ನೆರವಾಗುತ್ತದೆ.

ನುಡಿ ಮತ್ತು ಜನಾಂಗಗಳ ನಡುವಿನ ನಂಟಸ್ತಿಕೆಯನ್ನು ವಿವರಿಸಲು ಸ್ಮೋಲಿಕ್ಜ್ ವಿಭಿನ್ನ ಜನಾಂಗಗಳ ಮಾದರಿಗಳನ್ನು ಉಲ್ಲೇಖಿಸುತ್ತಾನೆ (1981:76-81). ಯಾವುದೇ ಜನಾಂಗೀಯತೆಯ ಸಾಮಾಜಿಕ ಅಂತಸ್ತನ್ನು ಸೂಚಿಸಲು ಈ ಕೋರ್ ಮೌಲ್ಯವನ್ನು ಸಂಸ್ಕ್ರುತಿಯ ಅತ್ಯಂತ ಮಹತ್ವದ ಗುಣವೆಂದು ಬಣ್ಣಿಸಲಾಗುತ್ತದೆ. ಮುಖ್ಯವಾಗಿ ತಾಯ್ನುಡಿಯ ಪರಿಕಲ್ಪನೆಯನ್ನು ಬಲಪಡಿಸುವಲ್ಲಿ ಇಂತಹ ತಾತ್ವಿಕ ಚೌಕಟ್ಟುಗಳು ಪುಷ್ಟಿ ನೀಡುತ್ತವೆ.

ಅಂದರೆ, ಸಂಸ್ಕ್ರುತಿಯನ್ನು ನುಡಿಯೊಂದರ ಸಾಂಕೇತಿಕ ವಿನ್ಯಾಸವನ್ನಾಗಿ ಇದನ್ನು ಮುಂಚೂಣೆಗೆ ತರಲಾಗುತ್ತದೆ. ನುಡಿಕೇಂದ್ರಿತ ಆರಾಧನೆಯ ಮಾದರಿಯನ್ನು ಇಲ್ಲಿ ನಿಚ್ಚಳವಾಗಿ ಕಾಣುತ್ತೇವೆ. ನುಡಿಯೊಂದನ್ನು ಜ್ಞಾನ ಪ್ರಸಾರಣದ ನೆಲೆಯನ್ನಾಗಿ ರೂಪಿಸುವ ಬದಲು ಭಾವನಾತ್ಮಕ ವಿದ್ಯಮಾನವಾಗಿ ಕಲ್ಪಿಸಲಾಗುತ್ತದೆ. ನುಡಿ ಬೆಳವಣಿಗೆ ಎಂಬುದು ಆಯಾ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ರೂಪಿಸಲು ಹೇಗೆ ಮತ್ತು ಎಷ್ಟು ನೆರವಾಗುತ್ತದೆ ಅನ್ನುವುದನ್ನು ಆಧರಿಸುತ್ತದೆ.

ಹಾಗಾಗಿ ಅಸ್ಮಿತೆ ಎನ್ನುವುದು ಕೇವಲ ಸಂವಹನ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಅದು ನಮ್ಮ ಬದುಕಿನ ಅನುಭವಗಳು, ನಮ್ಮ ಹಾಗೂ ಮುಂದಿನ ತಲೆಮಾರುಗಳ ಸ್ವಾಯತ್ತ ಬದುಕಿನ ದಾರಿಗಳನ್ನು ರೂಪಿಸುವ ಬಗೆಯೂ ಆಗಿರುತ್ತದೆ. ಈ ಚಹರೆಗಳು ಮತ್ತು ತಿಳಿವಿನ ವಿನ್ಯಾಸಗಳು ಆಯಾ ಸಮುದಾಯದ ನುಡಿಯೊಡನೆ ಬೆರೆತುಗೊಂಡಿರುತ್ತವೆ. ಇವುಗಳು ಆಯಾ ನುಡಿಯಲ್ಲಿಯೇ ಅಂತಸ್ಥವಾಗಿರುತ್ತವೆ ಎಂದು ನಾನು ಹೇಳಲಾರೆ.

ಆದರೆ ಸಮೂಹಗಳ ವಿಮೋಚನೆ, ನಿಯಂತ್ರಣ ಹಾಗೂ ಸ್ವಾಯತ್ತತೆಯ ರಚನೆಗಳು ಆಯಾ ನುಡಿಯಲ್ಲಿ ನೆಲೆಗೊಂಡಿರುತ್ತವೆ. ಆದ್ದರಿಂದ ನುಡಿ ಒಂದು ಹಕ್ಕಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾಯತ್ತತೆಯನ್ನು ಪಡೆದಿರುತ್ತದೆ. ಸಬಾಳ್ವೆಯನ್ನು ವಿರೋಧಿಸುವ, ಪ್ರತಿಪಾದಿಸುವ ಮತ್ತು ಕಂಡರಿಸುವ ವಿದ್ಯಮಾನವಾಗಿರುತ್ತದೆ. ಕನ್ನಡ ಸಮುದಾಯಗಳಲ್ಲಿ ಶೋಷಣೆಗೆ ಒಳಗಾಗಿರುವ ಸಮೂಹಗಳು ಬೇರೊಂದು ನುಡಿಯ ಮೂಲಕ ತಮ್ಮ ಸರ್ವಸ್ವತಂತ್ರ ಅಸ್ಮಿತೆಯನ್ನು ಪಡೆಯಲು ಹೇಗೆ ಸಾಧ್ಯ? ಇಂತಹದೊಂದು ವಿದ್ಯಮಾನ ಇದುವರೆಗೂ ಜರಿಗಿರುವುದಿಲ್ಲ. ಮಾನವರ ಅದಮ್ಯ ಚೈತನ್ಯ ಒಂದು ಪ್ರತ್ಯೇಕ ನೆಲೆಯಲ್ಲ.

ದಿಟ, ಬದುಕಿನ ಆಚರಣೆಗಳಿಗೂ ನುಡಿಗೂ ಯಾವುದೇ ಸಾವಯವ ನಂಟಸ್ತಿಕೆ ಇಲ್ಲವಾದರೂ ಅವುಗಳು ಒಂದು ಮತ್ತೊಂದನ್ನು ನೆಮ್ಮಿಕೊಂಡಿರುತ್ತದೆ. ಹಾಗಾಗಿ ನುಡಿಯೊಳಗಿನ ಬಹುತ್ವ ಅದು ಸಾಂಸ್ಕ್ರುತಿಕ ಬಹುತ್ವವಾಗಿ ತೋರುತ್ತದೆ. ನುಡಿ ಚೈತನ್ಯ, ನುಡಿ ಮಾನ್ಯತೆ ಮತ್ತು ನುಡಿ ಅಸ್ಮಿತೆಗಳು ಏರ್ಪಡುವುದು ಕೇವಲ ಸಮೂಹಗಳ ಚೈತನ್ಯವಾಗಿ ಮೈದಾಳುತ್ತವೆ. ಒಂದುವೇಳೆ, ಇಂತಹ ಸಮುದಾಯ ತನ್ನದೇ ನುಡಿ ಜಾಯಮಾನಗಳಿಂದ ಕಳಚಿಕೊಂಡು, ಬೆರೊಂದು ನುಡಿ ಸಮುದಾಯದಲ್ಲಿ ಐಕ್ಯವಾದರೆ, ಆ ಸಮುದಾಯದ ಅಸ್ಮಿತೆಯ ರಚನೆಗಳು ಯಾವವು? ಏಕೆಂದರೆ, ಆ ಸಮುದಾಯದ ಸಾಂಸ್ಕ್ರುತಿಕ ಕುರುಹುಗಳು ಇಲ್ಲವೇ ಆಚರಣೆಗಳು, ಈಗಾಗಲೇ ಇದು ಐಕ್ಯಗೊಂಡ ನುಡಿಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲು ಸಾಧ್ಯವಿಲ್ಲ.

ಸಾಮಾಜಿಕ ಆಚರಣೆಗಳು ಮತ್ತು ಸಂವಹನ ಮಾದರಿಗಳು ಪ್ರತ್ಯೇಕವಾಗಿ ವ್ಯವಹರಿಸುತ್ತವೆಯೇ? ಅಂದರೆ ಸಮುದಾಯಗಳ ನೆನಪು ಹಾಗೂ ಲೋಕಗ್ರಹಿಕೆಗಳು ಅವರ ತಿಳಿವಿನ ಮಾದರಿಗಳಾಗದೇ ಹೋದರೆ, ಆ ಸಮೂಹಗಳ ಅಸ್ತಿತ್ವ, ಅಸ್ಮಿತೆ, ಪ್ರಜ್ಞೆಯ ಚಹರೆಗಳು ಹೇಗೆ ಮೈಪಡೆಯುತ್ತವೆ? ಜನಾಂಗಗಳಿಗೆ ತಮ್ಮ ಬೇರುಗಳನ್ನು ನೆಲೆಗೊಳಿಸುವುದಕ್ಕೆ ತಮ್ಮದೇ ನುಡಿಯ ಅವಶ್ಯಕತೆ ಇರುತ್ತದೆ. ಸಮುದಾಯವೊಂದು ನುಡಿರಹಿತ ಅಸ್ತಿತ್ವವನ್ನು ಹೊಂದಿದ ಕಡೆಯಲ್ಲ ಪರಾಧೀನವಾಗಿರುತ್ತದೆ.

ಚರಿತ್ರೆ, ರಾಷ್ಟ್ರೀಯತೆ ಹಾಗೂ ರಾಜಕೀಯ ಅಧಿಕಾರದಂತಹ ನಿಲುವುಗಳನ್ನು ಕುರಿತು ನಾನು ಮಾತ್ನಾಡುತ್ತಿಲ್ಲ. ಬದಲಾಗಿ ಬದುಕಿನ ಅರಿವು-ತಿಳಿವುಗಳನ್ನು ಪ್ರಮಾಣಗೊಳಿಸುವ ಮಾನದಂಡಗಳನ್ನು ನಮ್ಮದೇ ನುಡಿಯ ಮೂಲಕ ಪಡೆಯಲು ಸಾಧ್ಯವೇ ಹೊರತು ಈ ವಿನ್ಯಾಸಗಳನ್ನು, ಬೇರೊಂದು ನುಡಿಯಲ್ಲಿ ಸಂಚಿತವಾಗಿರುವ ತಿಳಿವಿನಿಂದಲ್ಲ. ಪದಗಳ ಎರವಲು ಇಲ್ಲವೇ ಅನುಭವಗಳ ಅನುವಾದದಿಂದ ನುಡಿಯೊಂದು ಬೆಳೆಯುತ್ತದೆ ಎನ್ನುವ ಕಲ್ಪನೆಯೇ ಅತ್ಯಂತ ಸಂಕುಚಿತ ಕಣ್ನೋಟದಿಂದ ಕೂಡಿದೆ.

ಹೌದು, ಇಂಗ್ಲಿಶು ನುಡಿ ಮುನ್ನೂರ ಅರವತ್ತಕ್ಕೂ ಹೆಚ್ಚು ನುಡಿಗಳಿಂದ ಪದಗಳನ್ನು ಎರವಲು ಪಡೆದಿದೆ. ಹಾಗಂತ, ಅದು ತನ್ನ ಜಾಯಮಾನವನ್ನೇ ಕಳಿಚಿಕೊಂಡು, ಈ ಎಲ್ಲ ನುಡಿಗಳ ಜಾಯಮಾನಕ್ಕೆ ಒಗ್ಗಿಕೊಂಡಿದೆ ಎಂದಲ್ಲ. ಬೇರೆ ನುಡಿಗಳ ತಾತ್ವಿಕ ಮತ್ತು ಜ್ಞಾನ ಮೀಮಾಂಸೆಗಳನ್ನು ಇಂಗ್ಲಿಶಿಗೆ ಅನುವಾದ ಮಾಡುವುದರ ಹಿಂದಿನ ಉದ್ದೇಶ ಕೇವಲ ಆ ನುಡಿಯ ಬೆಳವಣಿಗೆಗೆ ಸೀಮಿತವಾಗಿಲ್ಲ.

ಇದು ಜಿಯೋ-ಪಾಲಿಟಿಕ್ಸ್‍ಗೆ ಸಂಬಂಧಿಸಿದ ಇಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ವಿಧಾನ ಮಾತ್ರ. ಅಂತರ್ರಾಷ್ಟ್ರೀಯ ಸಂವಹನ ಮಾಧ್ಯಮವಾಗಿ ಇಂಗ್ಲಿಶು ವ್ಯವಹರಿಸುವುದರಿಂದ ಈ ಎರವಲು ಮತ್ತು ಅನುವಾದ ಪ್ರಕ್ರಿಯೆಗಳು ಯಥೇಚ್ಛವಾಗಿ ನಡೆಯುತ್ತವೆ.

ಇದನ್ನು ಸಾರಸಗಟಾಗಿ ಕನ್ನಡ ನುಡಿಯ ಪ್ರಗತಿ ಮತ್ತು ಜ್ಞಾನ ಮೀಮಾಂಸೆಗಳ ಬೆಳವಣಿಗೆಯ ಸೂಚಕವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಗ್ರೀಕ್, ಸಂಸ್ಕ್ರುತ, ಪರ್ಶಿಯನ್ ಮೊದಲಾದ ನುಡಿಗಳಲ್ಲಿ ಮೈದಾಳಿದ ಪುರಾಣ, ಶಾಸ್ತ್ರಗಳು ಮತ್ತು ಮೀಮಾಂಸೆಗಳನ್ನು ಎಲ್ಲಿಂದ ಎರವಲು ಪಡೆಯಲಾಯಿತು ಮತ್ತು ಯಾವ ನುಡಿಗಳಿಂದ ಅನುವಾದ ಮಾಡಲಾಯಿತು ಎಂಬುದೆಲ್ಲ ವಿಸ್ಮಯವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬಣ್ಣ, ರುಚಿ ಮತ್ತು ಶಕ್ತಿ

Published

on

  • ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರ,ಉಜಿರೆ

ಬರಹದ ಶೀರ್ಷಿಕೆಯ ಮೂರೂ ಪದಗಳು ಹಲವರ ನೆನಪಿನ ಪುಟಗಳಲ್ಲಿ ದಾಖಲಾಗಿರಬಹುದು. ಚಹಾಪುಡಿಯನ್ನು ಜನಜನಿತವಾಗಿಸಲು ಟಿ.ವಿ ಮೂಲಕ ತಲುಪಿಕೊಳ್ಳುತ್ತಿದ್ದ ಜಾಹಿರಾತು ಈ ಪದಗಳನ್ನು ನಮ್ಮ ನೆನಪಿನ ಕೋಶದೊಂದಿಗೆ ಬೆರೆಸುವಲ್ಲಿ ಯಶಸ್ವಿಯಾಗಿತ್ತು. ಅದಷ್ಟೇ ಆಗಿದ್ದಿದ್ದರೆ ಈ ಪದಗಳನ್ನು ಪ್ರಸ್ತಾಪಿಸುವುದರ ಮೂಲಕ ಈ ಲೇಖನವನ್ನು ಪ್ರಾರಂಭಿಸುವ ಪ್ರಮೇಯವೇ ಬರುತ್ತಿರಲಿಲ್ಲ.

ವರ್ತಮಾನದ ಸುದ್ದಿಯ ಟ್ರೆಂಡ್ ಮತ್ತು ಆ ಮೂಲಕ ವಿಜೃಂಭಿಸುತ್ತಿರುವ ವಿಕೃತಿಗಳ ಸ್ವರೂಪ ಅರಿತುಕೊಳ್ಳುವುದಕ್ಕೆ ಸಹಾಯಕ ಪದಗಳಾಗಿ ಇವು ನನಗೆ ಮುಖ್ಯವೆನ್ನಿಸುತ್ತಿವೆ. ಸುದ್ದಿ ಮಾಧ್ಯಮದವರು ತಾವು ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯ ಕಟ್ಟಾ ವಾರಸುದಾರರು ಎಂದು ಬೀಗಿಕೊಂಡು ಅಹಂಕಾರದ ಬೃಹತ್ ರೂಪ ತಾಳಿರುವಾಗ ಈ ಮೂರೂ ಪದಗಳ ಒಳಗೇ ಅಣಕವಾಡುವ ಬಹುದೊಡ್ಡ ಅರ್ಥವಿನ್ಯಾಸ ಅಡಗಿದೆಯೇನೋ ಎಂದೆನ್ನಿಸುತ್ತದೆ.

ಈಗಾಗಲೇ ಅಗಿಹೋದ ದಶಕಗಳಲ್ಲಿನ ಜನಬದುಕಿನಲ್ಲಿ ಆದ್ಯತೆ ಪಡೆದುಕೊಂಡ ಉತ್ಪನ್ನವೊಂದು ಅನಿವಾರ್ಯ ಅವಿಭಾಜ್ಯ ಅಂಶವಾಗಿ ಮಾರ್ಪಟ್ಟಿದ್ದಷ್ಟೇ ಅಲ್ಲದೇ ಪ್ರತಿಷ್ಠೆಯ ಮಾಪಕವಾಗಿಯೂ ಬಳಕೆಯಾದ ಕ್ರಮಾನುಗತ ಇತಿಹಾಸದ ವಿವರಗಳನ್ನೂ ಈ ಮೂರೂ ಪದಗಳು ಅನಾವರಣಗೊಳಿಸುತ್ತವೆ. ಮನೆಗೆ ಬಂದವರಿಗೆ ನೀರು, ನಿಂಬೆಹಣ್ಣಿನ ಪಾನಕ ಅಥವಾ ಮಜ್ಜಿಗೆಯನ್ನು ನೀಡುತ್ತಿದ್ದ ಆತಿಥ್ಯದ ಪರಿಕಲ್ಪನೆಗೆ ಈ ಮೂರು ಪದಗಳೊಂದಿಗೆ ಬಿಂಬಿತವಾದ ಚಹಾಪುಡಿ ಉತ್ಪನ್ನದ ಜಾಹಿರಾತು ಸವಾಲೆಸೆದಿತ್ತು. ಇದರೊಂದಿಗೆ ಇದೇ ತೆರನಾದ ಪಾನೀಯ ಉತ್ಪನ್ನದ ಜಾಹಿರಾತುಗಳು ದೇಶೀ ಆತಿಥ್ಯದಲ್ಲಿ ಪ್ರಾಮುಖ್ಯತೆ ವಹಿಸಿದ್ದ ಪಾನೀಯಗಳನ್ನು ಹಿನ್ನೆಲೆಗೆ ಸರಿಸಿದ್ದವು.

ತದನಂತರದ ತರಹೇವಾರಿ ಜಾಹಿರಾತುಗಳು ನಮ್ಮದಲ್ಲದ ಜೀವನಶೈಲಿಯ ಉತ್ಪನ್ನಗಳ ಬಗೆಗಿನ ವ್ಯಾಮೋಹವನ್ನು ಹಂತಹಂತವಾಗಿ ಹೆಚ್ಚಿಸುತ್ತಲೇ ಬಂದವು. ದೇಶೀಯ ಪಾನೀಯಗಳಿಗೆ ಬಣ್ಣವೂ ಇತ್ತು. ರುಚಿಯೂ ಇತ್ತು. ಶಕ್ತಿಯೂ ಇತ್ತು. ಅವೆಲ್ಲವನ್ನೂ ಅಲ್ಲಗಳೆದು ಹೊಸ ಉತ್ಪನ್ನದ ಕಡೆಗೆ ಆಕರ್ಷಣೆಯಾದದ್ದಕ್ಕೆ ಟೆಲಿವಿಷನ್ ಮಾಧ್ಯಮದ ಪ್ರಭಾವ ಕಾರಣವಾಗಿತ್ತು.

ಇದೇ ಬಗೆಯ ಮಾಧ್ಯಮ ಪ್ರಭಾವವೇ ಈಗ ಜನಜೀವನದ ಕ್ರಮಗಳನ್ನು, ಆಲೋಚನೆಯ ಧಾಟಿಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಈಗಿನ ನವಮಾಧ್ಯಮಗಳ ಪ್ರಭಾವಳಿಯಂತೂ ಜನರಿಂದ ವಿವೇಚನೆಯನ್ನು ಕಸಿದುಕೊಂಡು ಬಣ್ಣ, ರುಚಿ ಮತ್ತು ಶಕ್ತಿಯ ಕುರಿತ ಅಪವ್ಯಾಖ್ಯಾನಗಳನ್ನು ಮುನ್ನೆಲೆಗೆ ತಂದಿದ್ದಲ್ಲದೇ ಅವೇ ಅಂತಿಮ ಎಂಬ ಭ್ರಮೆಯನ್ನೂ ಬಿತ್ತಿದೆ.

ಬಣ್ಣ, ರುಚಿ ಮತ್ತು ಶಕ್ತಿ ಎಂಬ ಪದಗಳು ಸ್ವತಃ ತಾವೇ ಮುಜುಗರಕ್ಕೊಳಗಾಗುವಂತೆ ಅವುಗಳನ್ನು ಸತ್ವಹೀನ ಸರಕುಗಳಿಗೆ ಅನ್ವಯಿಸುವ ಜಾಯಮಾನ ವ್ಯಾಪಕವಾಗಿದೆ. ಈ ವ್ಯಾಪ್ತಿಯಲ್ಲಿಯೇ ನಾವು ‘ಸುದ್ದಿ’ಯನ್ನಿಟ್ಟು ನೋಡಬೇಕು. ಸುದ್ದಿ ಮಾಧ್ಯಮಗಳನ್ನು ಗ್ರಹಿಸಬೇಕು.

ಈಗ ಸುದ್ದಿಯು ಬರೀ ಸುದ್ದಿಯಾಗಷ್ಟೇ ಉಳಿದಿಲ್ಲ. ಇದಕ್ಕೀಗ ಬಣ್ಣಗಳ ಹಂಗು ಹೆಚ್ಚಾಗಿದೆ. ಸದಭಿರುಚಿಯ ಮನಸ್ಥಿತಿಯನ್ನು ಹಿಂಸೆ, ಸಂಕುಚಿತತೆ ಮತ್ತು ದ್ವೇಷದ ವಿಕೃತಿಗಳ ಕಡೆಗೆ ತಿರುಗಿಸುವ ಅಪಾಯಕಾರಿ ರುಚಿಯ ವ್ಯಾಮೋಹವನ್ನು ಮೂಡಿಸುತ್ತಿದೆ. ಇವೆರಡರೊಂದಿಗೇ ಗುರುತಿಸಿಕೊಳ್ಳುವ ಹಾಗೆಯೇ ನೋಡಿಕೊಂಡು ಅದೇ ವ್ಯಕ್ತಿಯ ನಿಜವಾದ ಶಕ್ತಿ ಎಂಬುದನ್ನು ಭಾವುಕ ವಿಜೃಂಭಣೆಯಲ್ಲಿ ಮಿನುಗಿಸುತ್ತಿದೆ.

ಮಾಹಿತಿ ನೀಡುವ ಮೂಲಕ ಸುಶಿಕ್ಷಿತ ಪರಂಪರೆಗೆ ಕೊಡುಗೆ ನೀಡಿ ರಂಜನೆಗೆ ವಿವೇಚನಾತ್ಮಕ ಆಯಾಮ ನೀಡುತ್ತಿದ್ದ ಸುದ್ದಿಯ ಪಾತ್ರವು ಇದೀಗ ವಿಷದ ಸೋಂಕಿಗೀಡಾಗಿದೆ.‌ ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನ ಅವಧಿಯಲ್ಲಿ ಚರ್ಚಿತವಾದ ಅಮೆರಿಕ ಪೊಲೀಸರ ದ್ವೇಷಕ್ಕೆ ಬಲಿಯಾದ ಜಾರ್ಜ್ ಫ್ಲಾಯ್ಡ್‍ನ ಕುರಿತ ಸುದ್ದಿ ವ್ಯಕ್ತವಾದಾಗ ಖಂಡನೆಯ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಡಿತ್ತು.

ಬಣ್ಣದ ಕಾರಣಕ್ಕಾಗಿಯೇ ನಿರ್ಲಕ್ಷಿತರಾಗುಳಿದು ಆಗಾಗ ಶೋಷಣೆಗೆ ಒಳಗಾಗುತ್ತಲೇ ದುಃಖದುಮ್ಮಾನಗಳನ್ನೆಲ್ಲಾ ಒಡಲೊಳಗಿರಿಸಿಕೊಂಡೇ ಬದುಕು ದೂಡುವ ಜನರ ನಿತ್ಯ ಯಾತನೆಯ ಸುದ್ದಿಬಿಂಬಗಳು ತಾರ್ಕಿಕ ಪರಿಹಾರದ ನಿರೀಕ್ಷೆಯ ಬದ್ಧತೆಯ ಬೆಂಬಲದ ಸ್ಪರ್ಶದೊಂದಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬಿಂಬಿತವಾದರೂ ಅನುಕಂಪ ಹುಟ್ಟಿಸುವ ಮತ್ತು ಬದಲಾವಣೆ ಆಗಬೇಕು ಎಂಬ ನಿಲುವುಗಳನ್ನು ಕೃತಕವಾಗಿ ದಾಖಲಿಸಿಬಿಡುವ ಭಾವಗಳನ್ನಷ್ಟೇ ಬಿತ್ತುವುದಕ್ಕಷ್ಟೇ ಸೀಮಿತವಾಗುತ್ತವೆ.

ನನ್ನದೇ ಮನೆಯ ಪಕ್ಕದ ಅಥವಾ ಸಮೀಪದ ಗುಡಿಸಿಲಿನವರನ್ನು ಇನ್ನುಮೇಲೆಯಾದರೂ ಮನುಷ್ಯರನ್ನಾಗಿ ನೋಡಬೇಕು ಎಂಬ ದೃಷ್ಟಿಕೋನವನ್ನು ಬಿತ್ತುವಲ್ಲಿ ಇವು ಸೋಲುತ್ತವೆ. ಅಲ್ಲಿಗೇ ಬಣ್ಣದ ನೆಲೆಯಲ್ಲಿಯೇ ರೂಪುಗೊಳ್ಳುವ ಅಸಮಾನತೆಯ ಜಗತ್ತಿನ ವಿಕೃತ ಸ್ವರೂಪದ ಬೇರು ಇನ್ನಷ್ಟು ಗಟ್ಟಿಯಾಗಿಯೇ ಉಳಿದುಕೊಂಡುಬಿಡುವ ಲಕ್ಷಣಗಳು ದಟ್ಟವಾಗಿಬಿಡುತ್ತವೆ.

ರೈತನ ಆತ್ಮಹತ್ಯೆಗೆ ಸುದ್ದಿ ಮಾಧ್ಯಮಗಳು ಬಳಿಯುವ ಬಣ್ಣ ಕೃತಕವಾದುದು. ಮುದ್ರಿತ ದಿನಪತ್ರಿಕೆಗಳ ಪುಟಗಳ ಬ್ಲಾಕ್ ಆ್ಯಂಡ್ ವೈಟ್ ಬಣ್ಣದಲ್ಲಿ ಕಾಣಿಸಿಕೊಳ್ಳುವ ಸುದ್ದಿ ಓದುಗನಲ್ಲಿ ಆ ಕ್ಷಣಕ್ಕೆ ಅಯ್ಯೋ ಎಂಬ ಭಾವವನ್ನು ಮೂಡಿಸುತ್ತದೆ. ಇತ್ತೀಚೆಗೆ ಕೆಲವು ಪತ್ರಿಕೆಗಳು ಇದೇ ತರಹದ ಸುದ್ದಿಯನ್ನು ವರ್ಣಮುದ್ರಣದೊಂದಿಗೆ ಕಟ್ಟಿಕೊಟ್ಟಾಗ ಅಯ್ಯೋ ಎನ್ನುವ ಆಂತರಿಕ ಭಾವ ಇನ್ನಷ್ಟು ತೀವ್ರಗೊಳಿಸಬಹುದು ಎಂಬ ನಿರೀಕ್ಷೆಯಿರಿಸಿಕೊಂಡಿರುತ್ತವೆ. ‘ದಿ ಹಿಂದೂ’ ಸೇರಿದಂತೆ ಕೆಲವೇ ಕೆಲವು ಪತ್ರಿಕೆಗಳು ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಸ್ತವಿಕವಾದ ಯಥಾವತ್ ವಿವರಗಳನ್ನು ಯಾವುದೇ ಬಗೆಯ ವರ್ಣರಂಜಿತ ನಿರೂಪಣೆ ಇಲ್ಲದೇ ನಮ್ಮ ವಿವೇಚನೆಯ ಅಂತರಿಕ ಶಕ್ತಿಯನ್ನು ವಿಸ್ತರಿಸುವ ರೀತಿಯಲ್ಲಿ ಪ್ರಸ್ತಾಪಿಸುತ್ತವೆ. ಇದೇ ಸುದ್ದಿ ಟೆಲಿವಿಷನ್ ಮಾಧ್ಯಮದ ಮೂಲಕ ಬಂದರೆ ಮಣಭಾರದ ಮೇಕಪ್ ಹೊರೆ ಹೊತ್ತುಕೊಂಡ ಆ್ಯಂಕರ್‍ಗಳ ಧ್ವನಿಯಲ್ಲಿ ಕೃತಕತೆಯನ್ನು ಪಡೆದುಕೊಂಡುಬಿಡುತ್ತದೆ.

ಹಿಂಸೆ, ಸೆಕ್ಸ್, ರಾಜಕೀಯ ವೈಚಿತ್ರ್ಯಗಳನ್ನು ಬಿಂಬಿಸುವಾಗ ಬಳಸುವ ಧ್ವನಿಶೈಲಿಯನ್ನೇ ರೈತನ ಆತ್ಮಹತ್ಯೆ, ನೈಸರ್ಗಿಕ ವಿಕೋಪ ಸಂದರ್ಭದ ಸಾವು-ನೋವುಗಳನ್ನು ಬಿಂಬಿಸುವಾಗ ಬಳಸುತ್ತಾರೆ. ಅನೇಕ ಅತಿಥಿ ಉಪನ್ಯಾಸಕರು ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೊಂದರೆಗೀಡಾಗಿದ್ದಾರೆ. ಕೆಲವರು ಆತ್ಮಹತ್ಯೆಯನ್ನೇ ಪರಿಹಾರವಾಗಿಸಿಕೊಂಡರು.

ಈ ಬಿಂಬಗಳು ರೋಚಕ ರೀತಿಯಲ್ಲಿಯೇ ಇರುತ್ತವೆ. ಪತ್ರಿಕೆಗಳಲ್ಲಿ ಕಂಡುಬರುವ ವೈಚಾರಿಕ ನೋಟಗಳೊಂದಿಗಿನ ವಿಶ್ಲೇಷಣೆಯ ಮಾದರಿ ದೃಶ್ಯಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಕಾಣಿಸುವ ಇರಾದೆಯೂ ಸುದ್ದಿ ಚಾನಲ್‍ಗಳವರಿಗೆ ಇರುವುದಿಲ್ಲ. ಆತ್ಮಹತ್ಯೆ ಮತ್ತು ಸಾವು ಕೂಡಾ ಅವರಿಗೆ ಉತ್ಪನ್ನಗಳ ಹಾಗೆಯೇ ಮಾರಾಟ ಮಾಡಬಹುದಾದ ಅಂಶಗಳು. ಹಾಗಾಗಿಯೇ ಸುದ್ದಿಬಿಂಬಿಸುವಿಕೆಯ ವೇಳೆ ಕೃತಕತೆಯ ಬಣ್ಣ ಆವರಿಸಿಕೊಂಡುಬಿಡುತ್ತದೆ. ಈ ರೀತಿಯ ವರ್ಣರಂಜಿತ ಸುದ್ದಿಬಿಂಬಗಳು ಪ್ರಭುತ್ವವನ್ನು ಎಚ್ಚರಿಸುವುದು ಒತ್ತಟ್ಟಿಗಿರಲಿ, ಜನರೊಳಗೆ ಪ್ರತಿರೋಧದ ಯಾವ ಆಲೋಚನೆಯನ್ನೂ ನೆಲೆಗೊಳಿಸುವುದಿಲ್ಲ.

ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತಾರೆ, ಅಮಾಯಕರೊಬ್ಬರು ಅತ್ಯಾಚಾರಕ್ಕೀಡಾಗುತ್ತಾರೆ, ಯಾರದೋ ಮನೆಯ ಕೋಟಿಗಟ್ಟಲೆ ಹಣ ದೋಚಲ್ಪಡುತ್ತದೆ, ವಿಕೃತನೊಬ್ಬ ಹಲವರನ್ನು ಕೊಲೆಗೈದು ಅಟ್ಟಹಾಸಗೈಯ್ಯುತ್ತಾನೆ, ಯಾರೋ ಮತ್ತಿನ್ಯಾರಿಗೂ ಕಿರುಕುಳವನ್ನು ನೀಡುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಕೊಲೆಗೈಯ್ಯುವ ಧಮ್ಕಿ ಹಾಕುತ್ತಾರೆ, ಇನ್ನೂ ಅದ್ಭುತ ಭವಿಷ್ಯವಿರುವ ಖ್ಯಾತ ನಟ ಅಕಾಲಿಕ ಮರಣಕ್ಕೀಡಾಗುತ್ತಾನೆ, ಕೊರೊನಾ ವೈರಸ್ ಜಗತ್ತನ್ನು ಸ್ತಬ್ದಗೊಳಿಸಿ ಜನಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ – ಇವೆಲ್ಲ ಸಂದರ್ಭಗಳಲ್ಲಿ ಅತ್ಯಂತ ಸಂಯಮದ ಧಾಟಿಯಲ್ಲಿ ಸುದ್ದಿ ನಿರೂಪಣೆ ಇರಬೇಕಾಗುತ್ತದೆ. ಆದರೆ, ಸುದ್ದಿ ಮಾಧ್ಯಮಗಳು ಅದರ ಬದಲು ಸುದ್ದಿಗಿರುವ ಸದಭಿರುಚಿಯ ಸ್ವರೂಪಕ್ಕೆ ಕೊಡಲಿಪೆಟ್ಟು ನೀಡುವ ಹಾಗೆ ನಡೆದುಕೊಳ್ಳುತ್ತವೆ.

ಇದನ್ನು ದೃಢಪಡಿಸುವಂತೆಯೇ ಸುದ್ದಿ ಚಾನಲ್‍ಗಳು ಕೋವಿಡ್-19 ಬಿಕ್ಕಟ್ಟು ತೀವ್ರವಾಗಿದ್ದ ದಿನಗಳಲ್ಲಿ ನಡೆದುಕೊಂಡಿವೆ. ಈಗಲೂ ಅವುಗಳದ್ದು ಅದೇ ಧಾಟಿ. ಹೀಗಾಗಿಯೇ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಚಾನಲ್‍ಗಳ ವಿಚಿತ್ರ ನಡಾವಳಿಗಳನ್ನು ವ್ಯಂಗ್ಯಕ್ಕೀಡು ಮಾಡುವ ಮಾತು, ಚರ್ಚೆಗಳು ವ್ಯಕ್ತವಾಗುತ್ತಲೇ ಇವೆ. ವೈರಸ್‍ವೊಂದು ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ಮನುಷ್ಯಸಹಜ ವಿಕೃತಿಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ನಾವಿರುವ ದೇಶ, ಇಲ್ಲಿಯ ಧರ್ಮ, ಧರ್ಮವನ್ನು ಅಪಭ್ರಂಶಗೊಳಿಸಿದ ಶಕ್ತಿಗಳು, ಅವುಗಳ ನೆರವಿನೊಂದಿಗೇ ಪ್ರಭುತ್ವವನ್ನು ಪ್ರತಿನಿಧಿಸುವ ವರ್ಗ, ಸಮಾನತೆಯ ಸದಾಶಯಗಳನ್ನೇ ನೆಚ್ಚಿಕೊಂಡು ಅಧಿಕಾರಕ್ಕೆ ಬಂದವರ ವಲಯ – ಎಲ್ಲರೂ ಅವರವರ ಮೂಗಿನ ನೇರಕ್ಕೆ ಯೋಚಿಸುತ್ತಾ ವಿತಂಡವಾದಗಳನ್ನು ಮಂಡಿಸುವ ಉತ್ಸಾಹ ವ್ಯಕ್ತಪಡಿಸುತ್ತಾರೆ.

ಅವರ ಈ ವಿಚಿತ್ರ ಉತ್ಸಾಹವನ್ನು ಹೆಚ್ಚಿಸುವ ಹಾಗೆ ಸುದ್ದಿಯ ಕಂಟೆಂಟ್ ಪ್ರಸ್ತುತಪಡಿಸಲ್ಪಟ್ಟರೆ ಪ್ರಯೋಜನವಿಲ್ಲ ಎಂದು ಸುದ್ದಿಮಾಧ್ಯಮಗಳು ಯೋಚಿಸುವ ಆಶಾದಾಯಕ ವಾತಾವರಣ ಈಗಿಲ್ಲ ಎಂಬುದೇ ಆತಂಕಕಾರಿ ಸಂಗತಿ. ಇದರ ಮಧ್ಯೆ ಕೆಲವರಾದರೂ ಅಗತ್ಯವಿದ್ದವರಿಗೆ ಚಾನಲ್‍ನ ವೇದಿಕೆಯ ಮೂಲಕ ನೆರವಾದರು ಎಂಬ ಸಮಾಧಾನವಿದ್ದರೂ ಅದೇ ತೆರನಾದ ಸಹಾಯಕ ಪಾತ್ರ ಬಹುಸಂಖ್ಯಾತ ಸುದ್ದಿಮಾಧ್ಯಮಗಳಿಂದ ಏಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಮತ್ತದೇ ಬಣ್ಣ-ರುಚಿಯ ಕುರಿತದ ಅಪವ್ಯಾಖ್ಯಾನದ ವ್ಯಾಮೋಹದ ಕಾರಣವೇ ಉತ್ತರವಾಗುತ್ತದೆ.

ಮಾಹಿತಿ ಮತ್ತು ಶಿಕ್ಷಣ ಇವೆರಡೂ ಜನಬದುಕಿಗೆ ಹೊಸ ಹೊಳಪು ನೀಡುವ, ಹೊಸ ಬಗೆಯ ಅಭಿರುಚಿಯನ್ನು ನೆಲೆಗೊಳಿಸುವಂಥವು. ಬದಲಾವಣೆಗೆ ಕಾರಣವಾಗುವಂಥವು. ಹೀಗೆಯೇ ಅವುಗಳು ಸುದ್ದಿಯಲ್ಲಿ ಪ್ರತಿಫಲನಗೊಳ್ಳಬೇಕಿತ್ತು. ಅದೇ ಆಧಾರದಲ್ಲಿಯೇ ಸುದ್ದಿಯು ಜೀವಪರವಾಗಿ ಯೋಚಿಸುವ ಶಕ್ತಿಯಾಗಿ ಪರಿವರ್ತಿತವಾಗಬೇಕಿತ್ತು.

ಆದರೆ, ಭ್ರಮೆಗಳನ್ನು ಬಿತ್ತುವ ಕೃತಕತೆಯ ಬಣ್ಣ, ದೇಹ-ಮನಸ್ಸನ್ನು ಕಲುಷಿತಗೊಳಿಸಿ ಅಪಾಯಕಾರಿಯಾಗುವ ರುಚಿ ಮತ್ತು ಬಲವೇ ಇಲ್ಲದ ನಿಶ್ಯಕ್ತ ತಾತ್ಪೂರ್ತಿಕ ಶಕ್ತಿಯನ್ನೇ ಮುಖ್ಯ ಎಂದು ಬಿಂಬಿಸುವ ಸರಕು ವಿಕೃತಿಯ ಜಾಡ್ಯ ಸುದ್ದಿಗೂ ಅಂಟಿಕೊಂಡಿರುವುದು ಅಪಾಯಕಾರಿ ಎಂದೆನ್ನಿಸುತ್ತದೆ.

ಓದುಗ, ನೋಡುಗ ಮತ್ತು ಕೇಳುಗ ಸಮೂಹಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಬಣ್ಣ, ರುಚಿ ಮತ್ತು ಶಕ್ತಿಯಲ್ಲದ ಶಕ್ತಿಯ ಹುಸಿಬಿಂಬಗಳಿಗೆ ಮಾರುಹೋಗದೇ ಇರುವುದು. ಹಾಗೆ ಮಾರುಹೋಗದೇ ನಮ್ಮನ್ನು ದಾರಿತಪ್ಪಿಸುವ ಹುನ್ನಾರಗಳನ್ನು ಬಹುಬೇಗ ಅರ್ಥೈಸಿಕೊಳ್ಳುವುದು. ಸದ್ಯಕ್ಕೆ ಮತ್ತು ಭವಿಷ್ಯಕ್ಕೆ ಬೇಕಾಗುವ ಬದಲಾವಣೆಯನ್ನು ತಂದುಕೊಳ್ಳುವುದು ಹೇಗೆ ಎಂದು ರಚನಾತ್ಮಕವಾಗಿ ಯೋಚಿಸುವುದು.

ಈ ದಾರಿಯಲ್ಲಿ ಇಡೀ ಜನಸಮೂಹ ನಡೆದರೆ ಸುದ್ದಿ ಮಾಧ್ಯಮಗಳ ಮೇಲೆ ಸಕಾರಾತ್ಮಕ ಒತ್ತಡ ಬೀಳುತ್ತದೆ. ಅಂತರಂಗದ ವಿವೇಚನಾತ್ಮಕ ಹೊಂಬಣ್ಣವನ್ನು ಹೆಚ್ಚಿಸಿಕೊಳ್ಳುವ, ಬೌದ್ಧಿಕ ಸದಭಿರುಚಿಯನ್ನು ನೆಲೆಗೊಳಿಸಿಕೊಳ್ಳುವ ಮತ್ತು ಆ ಕಾರಣಕ್ಕಾಗಿಯೇ ನಮ್ಮ ಕಾಲವನ್ನು ಎಲ್ಲ ತಲ್ಲಣಗಳಿಂದ ವಿಮುಕ್ತಗೊಳಿಸುವ ಸ್ವಯಂಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಮನೆಮದ್ದಾಗಿ ಸುದ್ದಿ ರೂಪುಗೊಳ್ಳುತ್ತದೆ ಎಂದು ನಿರೀಕ್ಷಿಸುವ ಆಶಾಭಾವ ಚಿಗುರೊಡೆಯುತ್ತದೆ. ಬಣ್ಣ, ರುಚಿ ಮತ್ತು ಶಕ್ತಿಯ ಅಪವ್ಯಾಖ್ಯಾನ ತಪ್ಪುತ್ತದೆ. ಪ್ರತಿವರ್ಷವೂ ಆಚರಿಸಲ್ಪಡುವ ‘ಪತ್ರಿಕಾ ದಿನಾಚರಣೆ’ಯು ಹಳೆಯದ್ದರ ಆರಾಧನಾ ಮಹೋತ್ಸವವಾಗದೇ ಅರ್ಥಪೂರ್ಣತೆ ದಕ್ಕಿಸಿಕೊಳ್ಳುತ್ತದೆ.

ತಂತ್ರಜ್ಞಾನವೊಂದು ಆವಿಷ್ಕøತವಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಯೋಗಶೀಲರೊಬ್ಬರು ಹೊಸದೊಂದನ್ನು ಪ್ರತಿಷ್ಠಾಪಿಸುತ್ತಾರೆ. ಆ ಪ್ರತಿಷ್ಠಾಪನೆಯ ಸುಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳುವ ಮತ್ತು ಆಯಾ ಕಾಲದಲ್ಲಿ ಹೊಸ ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮುದ್ರಣ ತಂತ್ರಜ್ಞಾನ ಭಾರತಕ್ಕೆ ಕಾಲಿಟ್ಟ ನಂತರ ಕನ್ನಡದ್ದೇ ಆದ ಸುದ್ದಿ ಪರಂಪರೆ ಶುರುವಾದ ಐತಿಹಾಸಿಕತೆಯ ಮೆಲುಕಿನ ಸಂದರ್ಭವಾಗಿ ಮಾತ್ರ ಪತ್ರಿಕಾ ದಿನಾಚರಣೆ ಗ್ರಹಿಸಲ್ಪಡಬಾರದು.

ಬದಲಾಗಿ ಸದ್ಯದ ಬಿಕ್ಕಟ್ಟು, ಭವಿಷ್ಯದ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ಕನ್ನಡದ ಸುದ್ದಿ ಮಾಧ್ಯಮಗಳು ರೂಢಿಸಿಕೊಳ್ಳಬಹುದಾದ ಸದಭಿರುಚಿಯ ಸಾಧ್ಯತೆಗಳ ಅನ್ವೇಷಣೆಯೊಂದಿಗೆ ಸ್ವಯಂಮೌಲ್ಯಮಾಪನದ ಮಹತ್ವದ ಅವಕಾಶವಾಗಿ ಪ್ರೇರಣೆಯಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending