Connect with us
http://www.suddidina.com/category/political-news

ಬಹಿರಂಗ

ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು : ಮರೆಯದೆ ಓದಿರಿ ಡಾ. ಬಿ.ಆರ್.ಅಂಬೇಡ್ಕರ್ ಈ ಬರಹ

Published

on

ನಾಗರಿಕ ಬುಡಕಟ್ಟಿನವರನ್ನು ಉದ್ಧರಿಸುವ ಮಾನವೀಯ ಕಾವ್ಯಕ್ಕೆ ಹಿಂದೂಗಳು ಪ್ರಯತ್ನಿಸಲಿಲ್ಲವೆಂಬುದಷ್ಟೇ ಅಲ್ಲ, ಹಿಂದೂಗಳಲ್ಲಿ ಮೇಲು ಜಾತಿಯೆನಿಸಿಕೊಂಡವರು ತಮ್ಮಲ್ಲಿಯೇ ಇರುವ ಕೆಳಜಾತಿಯವನನ್ನು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರಗೊಡಲಿಲ್ಲ ನಾನು ಇದಕ್ಕೆ ಎರಡು ನಿದರ್ಶನಗಳನ್ನು ಕೊಡುತ್ತೇನೆ. ಒಂದು ಸೋನಾರರದ್ದು, ಇನ್ನೊಂದು ಪಠರೇ ಪ್ರಭುಗಳದ್ದು. ಇವೆರಡು ಮಹಾರಾಷ್ಟ್ರದಲ್ಲಿ ಸುಪರಿಚಿತವಾದ ಎರಡು ಜಾತಿಗಳು, ತಮ್ಮ ದರ್ಜೆಯನ್ನು ಎತ್ತರಿಸಿಕೊಳ್ಳಬೇಕೆಂದು ಇತರ ಜಾತಿಗಳಂತೆ ಈ ಎರಡು ಜಾತಿಗಳೂ ಅದೇ ಪ್ರಯತ್ನದಲ್ಲಿ ಬ್ರಾಹ್ಮಣರ ಕೆಲ ಪದ್ಧತಿಗಳನ್ನು ಒಂದೊಮ್ಮೆ ಆಚರಿಸಲು ಪ್ರಯತ್ನಿಸುತ್ತಿದ್ದವು. ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಂಡು ಬ್ರಾಹ್ಮಣರಂತೆ ನೆರಿಗೆ ಹಾಕಿ ಧೋತ್ರ ಉಡತೊಡಗಿದರು. ಹಾಗೂ ನಮಸ್ಕಾರ ಎಂದು ಒಬ್ಬರನ್ನೊಬ್ಬರು ಗೌರವಿಸತೊಡಗಿದರು. ನೆರಿಗೆಯ ಧೋತ್ರ ಹಾಗೂ ನಮಸ್ಕಾರವೆಂಬ ಮಾತು ಎರಡೂ ಬ್ರಾಹ್ಮಣರಿಗೆ ವಿಶಿಷ್ಟವಾದವು .

ಸೋನಾರರು ಹೀಗೆ ತಮ್ಮನ್ನು ಅನುಕರಿಸುವುದು ಅಥವಾ ಸರಿಗಟ್ಟುವುದು ಬ್ರಾಹ್ಮಣರಿಗೆ ಸೇರಲಿಲ್ಲ . ಪೇಳ್ವೆಯವರ ಆಡಳಿತದಲ್ಲಿ ಬ್ರಾಹ್ಮಣರೇ ಸೋನಾರರ ಈ ಪ್ರಯತ್ನವನ್ನು ಬಗ್ಗುಬಡಿದುಬಿಟ್ಟರು. ಮುಂಬಯಿಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತಾಧಿಕಾರಿಗಳಿಂದ ಕೂಡ ಮುಂಬಯಿ ನಿವಾಸಿಗಳಾದ ಸೋನಾರರಿಗೆ ಅಂತಹದೊಂದು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರು. ಒಂದು ಕಾಲದಲ್ಲಿ ಪಠರೇ ಪ್ರಭುಗಳ ಜಾತಿಯಲ್ಲಿ ಪುನರ್ವಿವಾಹ ಒಂದು ಸಮ್ಮತ ಸಂಪ್ರದಾಯವಾಗಿತ್ತು. ಬ್ರಾಹ್ಮಣರಲ್ಲಿ ಇದು ಇಲ್ಲವೆಂಬುದನ್ನು ಕಂಡು ಕೆಲವರು ಇದನ್ನು ಕಳಂಕಪ್ರಾಯವೆಂದು ಭಾವಿಸಿದರೆ, ತಮ್ಮ ಜಾತಿಯ ದರ್ಜೆಯನ್ನು ಉತ್ತಮಪಡಿಸಿಕೊಳ್ಳುವ ದೃಷ್ಟಿಯಿಂದ ಪಠಾರೇ ಪ್ರಭುಗಳಲ್ಲಿ ಕೆಲವರು ಪುನರ್ವಿವಾಹ ಪದ್ಧತಿಯನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಪುನರ್ವಿವಾಹಕ್ಕೆ ಪರ ಹಾಗೂ ವಿರೋಧಿಗಳಾದ ಎರಡು ಬಣಗಳುಂಟಾದವು. ಪೇಶ್ನೆಗಳು ಪರಂಪರಾವಾದಿಗಳ ಪಕ್ಷವನ್ನೇ ಎತ್ತಿಹಿಡಿದರು.ಹೀಗೆ ಬ್ರಾಹ್ಮಣರನ್ನು ಅನುಕರಿಸ ಹೊರಟವರನ್ನು ನಿರ್ಬಂಧಿಸಿದರು .

ಮುಸಲ್ಮಾನರು ಖಡ್ಡಬಲದಿಂದ ತಮ್ಮ ಧರ್ಮವನ್ನು ವಿಸ್ತರಿಸಿಕೊಂಡರೆಂದು ಹಿಂದೂಗಳು ಟೀಕಿಸುವುದುಂಟು. ಕ್ರಿಸ್ತಮತವನ್ನು ಅವರು ಹೀಗೆಯೇ ಹಳಿಯುತ್ತಾರೆ. ಮಹಮ್ಮದೀಯರೇ ಆಗಲಿ, ಕ್ರೈಸ್ತರೇ ಆಗಲಿ ಆತ್ರೋದ್ದಾರಕ್ಕೆ ಅವಶ್ಯಕವಾದುದೆಂದು ತಾವು ಯಾವುದನ್ನು ನಂಬಿದ್ದರೋ ಅದನ್ನು ಒಪ್ಪದೇ ಇರುವವರ ಗಂಟಲಲಿ ತುರುಕಿದಾಗ ಹಿಂದೂಗಳು ಏನು ಮಾಡಿದರು? ತಮ್ಮ ಜ್ಞಾನವನ್ನು ಇತರರಿಗೆ ಕೊಡಲೊಪ್ಪಲಿಲ್ಲ, ಇತರರನ್ನು ಅಜ್ಞಾನದಲ್ಲಿಯೇ ಇರಿಸಲು ಪ್ರಯತ್ನಿಸಿದರು. ತಮ್ಮ ಬೌದ್ಧಿಕ ಹಾಗೂ ಸಾಮಾಜಿಕ ಸಂಪತ್ತನ್ನು ಪಡೆಯಲು ಸಿದ್ಧರಾದ ಇತರರೊಡನೆ ಹಂಚಿಕೊಳ್ಳಲು ಒಪ್ಪಲಿಲ್ಲ.ಹೀಗಿರುವಾಗ ಈ ಮೂವರಲ್ಲಿ ನಮಗೆ ಹೆಚ್ಚು ಗೌರವಾಸದರು ಯಾರು ? ಅನುಮಾನವಿಲ್ಲದೆ ನಾನು – ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದೂವು ನೀಚನಾಗಿದ್ದಾನೆ. ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಯಾನ

Published

on

ಚಿತ್ರಕಲೆ : ಹಾದಿಮನಿ

ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ. 1.ಹೀನಯಾನ 2.ಮಹಾಯಾನ. ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ. ಆದರೆ ಶೋಷಿತರು ಹಳೆಯ ಬೌದ್ಧರು. ಯಾಕೆಂದರೆ ಅಂಬೇಡ್ಕರರೇ ಒಂದೆಡೆ ಹೇಳಿದ್ದಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು” ಎಂದು. ಈ ದಿಸೆಯಲ್ಲಿ ಸದ್ಯ “ಯಾನ” ಎಂದರೇನು? ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.

“ಯಾನ” ಎಂದರೆ ಪಯಣ ಎಂದರ್ಥ. ಅಂದರೆ ಬೌದ್ಧ ಪಯಣ ಎಂದರ್ಥ. Its way of life ಎನ್ನಬಹುದು. ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕರಿಸಿದಾಗ ಆಗ ಅಸ್ತಿತ್ವದಲ್ಲಿದ್ದ ಬೌದ್ಧ ಧರ್ಮವನ್ನು ಯಥಾವತ್ ಸ್ವೀಕರಿಸಿದರೆ? ಊಹ್ಞೂಂ. ನಿಜ ಹೇಳಬೇಕೆಂದರೆ ಬುದ್ಧ ಅರಮನೆ ತೊರೆದು ಪರಿವ್ರಾಜಕನಾಗಲು ಸಂಬಂಧಿಸಿದ ಮೂಲ ಕತೆಯಾದ, ಪ್ರಸಿದ್ಧ ಕತೆಯಾದ ಆತ ರೋಗಿಯೊಬ್ಬನನ್ನು ನೋಡಿದ, ವೃದ್ಧನೊಬ್ಬನನ್ನು ನೋಡಿದ, ಸತ್ತ ಮನುಷ್ಯನೊಬ್ಬನನ್ನು ನೋಡಿದ ಎಂಬ ಆ very basic ಸಾಂಪ್ರದಾಯಿಕ ಕತೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಇದಕ್ಕೆ ಅವರು ಕೊಡುವ ಕಾರಣ “ಪರಿವ್ರಾಜಕ(ಸನ್ಯಾಸ)ವನ್ನು ಬುದ್ಧ ಸ್ವೀಕರಿಸಿದ್ದು ಆತನ 29ನೇ ವಯಸ್ಸಿನಲ್ಲಿ. ಆ ಮೂರು ದೃಶ್ಯಗಳನ್ನು(ರೋಗಿ, ವೃದ್ಧ, ಸತ್ತ ಮನುಷ್ಯ) ನೋಡಿ ಆತ ಸನ್ಯಾಸ ಸ್ವೀಕರಿಸಿದನೆನ್ನುವುದಾದರೆ ಅದಕ್ಕೂ ಮೊದಲು ಅಂದರೆ ಆತನ 29ನೇ ವಯಸ್ಸಿಗೂ ಮೊದಲು ಆ ಮೂರು ದೃಶ್ಯಗಳನ್ನು ಅತ ನೋಡಿಯೇ ಇರಲಿಲ್ಲ ಎನ್ನುವುದು ಅದು ಹೇಗೆ ಸಾಧ್ಯ?” ಎಂದು (Buddha and his Dhamma, by Ambedkar. Introduction page). ಮುಂದುವರೆದು ಅವರು “ಮುಪ್ಪು, ರೋಗ, ಸಾವು ಇವು ದಿನಾಲೂ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ.

ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರು ಏನು?” ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಒಟ್ಟಾರೆ ಅರ್ಥವಾಗುವುದು ಬುದ್ಧ ರೋಗಿಯೊಬ್ಬನನ್ನು, ವೃದ್ಧನೊಬ್ಬನನ್ನು, ಸತ್ತ ವ್ಯಕ್ತಿಯೊಬ್ಬನನ್ನು ನೋಡಿ ಅರಮನೆ ತೊರೆದ ಎಂಬ ಮೂಲ ಕತೆಯನ್ನೇ ಅಂಬೇಡ್ಕರ್ ರು ಒಪ್ಪಲಿಲ್ಲ. ಅದನ್ನು ಸಕಾರಣದ ಮೂಲಕ ಪ್ರಶ್ನಿಸಿ ಬೇರೆ ವಿವರಣೆ ಇರಬಹುದಾ ಎಂದು ಹುಡುಕಿದರು ಎಂಬುದು. ಇದಕ್ಕಾಗಿ ಅಂಬೇಡ್ಕರರು ಕಂಡುಕೊಂಡ ಉತ್ತರ, ಆ ಕಾಲದಲ್ಲಿ “ಶಾಕ್ಯರು ಮತ್ತು ಕೋಲೀಯ ಎಂಬ ರಾಜ್ಯಗಳ ನಡುವೆ ರೋಹಿಣಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸಂಘರ್ಷ ನಡೆಯುತ್ತದೆ. ಆ ಸಂಘರ್ಷದಲ್ಲಿ ಬುದ್ಧ ಪ್ರತಿನಿಧಿಸುವ ಶಾಕ್ಯನ್ನರ ಶಾಕ್ಯ ಸಂಘ ಕೋಲೀಯರ ಮೇಲೆ ಯುದ್ಧ ಸಾರುವ ಬಹುಮತದ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸಂಘಧ ಸದಸ್ಯನಾದ ರಾಜಕುಮಾರ ಸಿದ್ಧಾರ್ಥ(ಬುದ್ಧ) ಹಿಂಸೆಯ ಅಂಶ ಮುದ್ದೊಡ್ಡಿ ಸಂಘ ಕೈಗೊಂಡ ಈ ಯುದ್ಧದ ತೀರ್ಮಾನವನ್ನು ವಿರೋಧಿಸುತ್ತಾನೆ. ಪರಿಣಾಮ ಸಂಘದ ನಿಯಮ ಉಲ್ಲಂಘಿಸಿದ ರಾಜಕುಮಾರ ಸಿದ್ಧಾರ್ಥ ಶಾಕ್ಯ ಸಂಘದ ನಿಯಮದಂತೆ ಸಂಘದಿಂದ ಶಿಕ್ಷೆಗೊಳಗಾಗುವ ಎಚ್ಚರಿಕೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಕೂಡ. ಇದರಂತೆ ಸಿದ್ಧಾರ್ಥನಿಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.

 1. ಶಾಕ್ಯ ಸಂಘದ ನಿಯಮವನ್ನು ಕಡೆ ಗಳಿಗೆಯಲ್ಲಾದರೂ ಒಪ್ಪಿ ಕೋಲೀಯರ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದು.
 2. ಶಿಕ್ಷೆ ಅನುಭವಿಸಲು ಒಪ್ಪಿ ನೇಣು ಅಥವಾ ದೇಶಭ್ರಷ್ಟನಾಗಿ ಗಡಿಪಾರು ಶಿಕ್ಷೆ ಅನುಭವಿಸುವುದು.
 3. ಆತನ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲು ಮತ್ತು ‌ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಘಕ್ಕೆ ಅನುಮತಿ ನೀಡುವುದು.

ಅಂದಹಾಗೆ ಶಾಂತಿ ಧೂತ ಬುದ್ಧ ಮೊದಲನೆಯ ತೀರ್ಮಾನ ಅಂದರೆ ಖಡಾಖಂಡಿತವಾಗಿ ಕೋಲೀಯರ ವಿರುದ್ಧ ಯುದ್ಧದಲ್ಲಿ
ಭಾಗವಹಿಸಲು ನಿರಾಕರಿಸುತ್ತಾನೆ. ಮೂರನೆಯ ತೀರ್ಮಾನ ಅಂದರೆ ತನ್ನ ಕುಟುಂಬದ ಸದಸ್ಯರಿಗೆ ತನ್ನಿಂದ ತೊಂದರೆಯಾಗುವುದನ್ನು ಆತ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ತಪ್ಪು ತನ್ನದಾಗಿರುವುದರಿಂದ ಶಿಕ್ಷೆ ತನಗೆ ಮಾತ್ರ ಸಲ್ಲಬೇಕು ಎಂದು ನೇಣು ಶಿಕ್ಷೆಗೆ ಅಥವಾ ರಾಜ್ಯದಿಂದ ಗಡಿಪಾರು ಶಿಕ್ಷೆಗೆ ತನ್ನನ್ನು ಒಳಪಡಿಸಬಹುದು ಎಂದು ಆತ ಶಾಕ್ಯ ಸಂಘಕ್ಕೆ ಹೇಳುತ್ತಾನೆ. ಅದರಂತೆ ಶಾಕ್ಯಸಂಘ ರಾಜಕುಮಾರ ಸಿದ್ಧಾರ್ಥನಿಗೆ ಗಡಿಪಾರು ಶಿಕ್ಷೆ ವಿಧಿಸುತ್ತದೆ, ಸಿದ್ಧಾರ್ಥ ರಾಜ್ಯ ತೊರೆಯುತ್ತಾನೆ.

ಅಂಬೇಡ್ಕರ್ ರು ಕೊಡುವ ಈ ವಿವರಣೆಯಲ್ಲಿ ಖಂಡಿತ ಅವಾಸ್ತವಿಕವಾದ ಅಂಶ ಕಿಂಚಿತ್ತು ಇಲ್ಲ. ನಿಜ, ಇಲ್ಲಿ ರೋಚಕತೆ ಇಲ್ಲದಿರಬಹುದು ಆದರೆ ರಾಜ್ಯ ತೊರೆಯಲು ಪ್ರಮುಖ ಕಾರಣವಂತು ಇದೇ ಆಗುತ್ತದೆ ಮತ್ತು ಇದನ್ನು ಯಾರೂ ಕೂಡ ಪ್ರಶ್ನಿಸಲಾರರು. ಹಾಗಿದ್ದರೆ ಇದಕ್ಕೆ ಆಕರ ಗ್ರಂಥವಾಗಿ ಅಂಬೇಡ್ಕರ್ ರು ಯಾವ ಗ್ರಂಥ ಬಳಸುತ್ತಾರೆ? ಅದಕ್ಕೂ ಕೂಡ ಉತ್ತರ ಇದೆ. ಅದೆಂದರೆ ಅಂಬೇಡ್ಕರ್ ರವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದಾಗ ಸನ್ಮಾನ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ತಾವೇ ಬರೆದ ಗೌತಮ ಬುದ್ಧರ ಜೀವನ ಚರಿತ್ರೆಯ ಪುಸ್ತಕವನ್ನು ಬಾಲಕ ಅಂಬೇಡ್ಕರ್ ಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು. ಮರಾಠಿಯಲ್ಲಿ ಬುದ್ಧನ ಆ ಜೀವನ ಚರಿತ್ರೆ ಬರೆದು(ಬರೆದ ವರ್ಷ 1898) ಬಾಲಕ ಅಂಬೇಡ್ಕರರಿಗೆ ಕೊಡುಗೆ ಇತ್ತವರು ಅಂದಿನ ಸಮಾಜ ಸುಧಾರಕರಾದ ಬಾಂಬೆಯ ವಿಲ್ಸನ್ ಹೈಸ್ಕೂಲ್ ನ ಮಾಜಿ ಪ್ರಾಂಶುಪಾಲರಾದ ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್ ರವರು. ಈ ನಿಟ್ಟಿನಲ್ಲಿ ರೋಹಿಣಿ ನದಿಯ ನೀರಿನ ವಿಚಾರವಾಗಿ ಸಿದ್ಧಾರ್ಥನು ರಾಜ್ಯ ತೊರೆದ ಪ್ರಸಂಗವನ್ನು ಅಂಬೇಡ್ಕರರು ತಾವು ಪಡೆದದ್ದು ಕೆಲೂಸ್ಕರ್ ರ ಆ ಕೃತಿಯಲ್ಲೇ!

ನಾಲ್ಕು ಆರ್ಯ ಸತ್ಯಗಳನ್ನು ಒಪ್ಪದ ಅಂಬೇಡ್ಕರರು

ಬೌದ್ಧ ಧರ್ಮದಲ್ಲಿ ನಾಲ್ಕು ಆರ್ಯ ಸತ್ಯಗಳು ಎಂಬ ಪ್ರಮುಖ ಅಂಶ ಬರುತ್ತದೆ. ಸಾಮಾನ್ಯವಾಗಿ ಮಹಾಬೋಧಿ ಸೊಸೈಟಿ ಪ್ರಕಟಿಸುವ ಕೃತಿಗಳನ್ನು ಓದಿದ ಬೌದ್ಧರಿಗೆ ಅವು ಯಾವುವು ಎಂದು ತಿಳಿದಿರುತ್ತವೆ. ಅವುಗಳೆಂದರೆ 1.ದುಃಖ ಸತ್ಯ. 2.ದುಃಖಕ್ಕೆ ಮೂಲ ಇದೆ ಎಂಬ ಸತ್ಯ. 3.ದುಃಖವನ್ನು ಕೊನೆಗಾಣಿಸಬಹುದು ಎಂಬ ಸತ್ಯ. 4.ಆ ದುಃಖವನ್ನು ಕೊನೆಗಾಣಿಸುವ ಮಾರ್ಗ ಯಾವುದೆಂಬ ಸತ್ಯ.

ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಈ ನಾಲ್ಕು ಆರ್ಯ ಸತ್ಯಗಳನ್ನು ಒಪ್ಪುವುದಿಲ್ಲ. ಅವರು ಹೇಳುವುದು “ಈ ಆರ್ಯ ಸತ್ಯಗಳ ಸೂತ್ರ ಬೌದ್ಧ ಧರ್ಮದ ಮೂಲ ಬೇರನ್ನೇ ಕತ್ತರಿಸುತ್ತದೆ” ಎಂದು. ಏಕೆಂದರೆ ಅವರು ಹೇಳುವುದು “ಆರ್ಯ ಸತ್ಯಗಳ ಪ್ರಕಾರ ಈ ಜೀವನ ದುಃಖ, ಸಾವು ಕೂಡ ದುಃಖ, ಪುನರ್ಜನ್ಮ ಕೂಡ ದುಃಖ, ಆದ್ದರಿಂದ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ ಎಂದಾದರೆ ತತ್ವಜ್ಞಾನವಿರಲಿ ಅಥವಾ ಧರ್ಮವಿರಲಿ ಯಾವುದೂ ಕೂಡ ಈ ಪ್ರಪಂಚದಲ್ಲಿ ಮನುಷ್ಯ ಸಂತಸದಿಂದಿರಲು ಸಹಾಯ ಮಾಡುವುದಿಲ್ಲ. ಏಕೆಂದರೆ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದಾದರೆ ಜೀವನದಲ್ಲಿ ಸಹಜವಾಗಿ ಅಂತರ್ಗತವಾಗಿರುವ ಆ ದುಃಖದಿಂದ ಮನುಷ್ಯನನ್ನು ತಪ್ಪಿಸಲು ಬುದ್ಧನಾದರೂ ಏನು ಮಾಡಲು ಸಾಧ್ಯ? ಧರ್ಮವಾದರೂ ಏನು ಮಾಡಲು ಸಾಧ್ಯ?

ಆದ್ದರಿಂದ ನಾಲ್ಕು ಆರ್ಯ ಸತ್ಯಗಳು ಮನುಷ್ಯನಿಗೆ ಭರವಸೆಯನ್ನು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಆ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಗಳನ್ನು ನಿರಾಶವಾದದ ಬೋಧನೆಗಳನ್ನಾಗಿ ಮಾಡುತ್ತವೆ” ಎನ್ನುತ್ತಾರೆ. ಅದರಲ್ಲೂ ಅವರು ಹೇಳುವುದು “ಬೌದ್ಧರಲ್ಲದವರಿಗೆ ಬೌದ್ಧ ಧರ್ಮದ ಬೋಧನೆಗಳನ್ನು ಒಪ್ಪಲು ಈ ನಾಲ್ಕು ಆರ್ಯಸತ್ಯಗಳು ಬಹುದೊಡ್ಡ ತಡೆಯಾಗಿವೆ” ಎಂದು. ಈ ಹಿನ್ನೆಲೆಯಲ್ಲಿ ಅವರು ಅನುಮಾನ ವ್ಯಕ್ತಪಡಿಸುವುದು ಇವು ಈ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಯ ಮೂಲ ತಿರುಳಾಗಿತ್ತೇ ಅಥವಾ ಇವು ಭಿಕ್ಕುಗಳು ನಂತರ ಸೇರಿಸಿದ ಅಂಶಗಳಾಗಿರಬಹುದೇ ಎಂದು.

ಮುಂದುವರಿದು ಅಂಬೇಡ್ಕರರು “ಭಿಕ್ಕುಗಳನ್ನು ಬುದ್ಧ ಸೃಷ್ಟಿಸಿದ್ದೇತಕೆ?” ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಅದಕ್ಕೆ ಅವರು ಹೇಳುವುದು “ಬುದ್ಧ, ಭಿಕ್ಕು ಗಣವನ್ನು ಅವರು ಪರಿಪೂರ್ಣ ಮನುಷ್ಯರಾಗಲಿ ಎಂದು ಸೃಷ್ಟಿಸಿದನೇ ಅಥವಾ ಸಮಾಜ ಸೇವಕರಾಗಿ ಜನತೆಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಜನರಿಗಾಗಿ ತಮ್ಮ ಜೀವನ ಮುಡಿಪಿಡಲಿ ಎಂದು ಸೃಷ್ಟಿಸಿದನೇ? ಈ ದಿಸೆಯಲ್ಲಿ ಭಿಕ್ಕು ಪರಿಪೂರ್ಣ ಮನುಷ್ಯನಾದರೆ ಧಮ್ಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಆತ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಮನುಷ್ಯ ಪರಿಪೂರ್ಣನಾದರೂ ಆತ ಸ್ವಾರ್ಥಿಯಾಗಿರುತ್ತಾನೆ. ಆದರೆ ಭಿಕ್ಕು ಸಮಾಜ ಸೇವಕನಾದರೆ ಖಂಡಿತ ಬೌದ್ಧ ಧರ್ಮಕ್ಕೆ ಆತ ಬಹು ದೊಡ್ಡ ಭರವಸೆಯಾಗುತ್ತಾನೆ” ಎನ್ನುತ್ತಾರೆ.(ಆಧಾರ: Buddha and His Dhamma, Ambedkar writings and speeches, Vol.11, introduction part).

ಖಂಡಿತ, ಬುದ್ಧ ಪರಿವ್ರಾಜಕ(ಸನ್ಯಾಸ) ಸ್ವೀಕರಿಸಲು ಬಾಬಾಸಾಹೇಬ್ ಅಂಬೇಡ್ಕರ್ ರವರು ಹೇಳುವ ಈ ಕತೆ, ನಾಲ್ಕು ಆರ್ಯ ಸತ್ಯಗಳನ್ನು ಅವರು ಒಪ್ಪದಿರುವುದು, ಹಾಗೆ ಭಿಕ್ಕುಗಳನ್ನು ಸಮಾಜ ಸೇವಕರು ಎನ್ನುವ ಅವರ ವ್ಯಾಖ್ಯೆ ಅಕ್ಷರಶಃ ಬೌದ್ಧ ಧರ್ಮಕ್ಕೆ ಹೊಸ ರೂಪ ಕೊಡುತ್ತದೆ. ಈ ನಿಟ್ಟಿನಲ್ಲಿ ಆ ರೂಪವನ್ನು ನಾವು ನಿಸ್ಸಂಶಯವಾಗಿ ಅಂಬೇಡ್ಕರ್ ಹಾದಿ ಎನ್ನಬಹುದು, ಹೀನಯಾನ ಮತ್ತು ಮಹಾಯಾನದಂತೆ “ಅಂಬೇಡ್ಕರ್ ಯಾನ” ಎನ್ನಬಹುದು. ಬುದ್ಧನ ಹಾದಿಯಲ್ಲಿಂದು ಕೋಟ್ಯಂತರ ಜನರು ಸಾಗುತ್ತಿದ್ದಾರೆ. ಅದರಲ್ಲೂ ಶೋಷಿತ ಸಮುದಾಯಗಳ ಬಂಧುಗಳು ಬುದ್ಧನೆಡೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಖಂಡಿತ, ಅಂತಹವರೆಲ್ಲರಿಗೆ ಅಂಬೇಡ್ಕರ್ ಯಾನ ಹೊಸ ಮಾರ್ಗ ಆಗಲಿದೆ ಹೊಸ ಬೆಳಕು ಆಗಲಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

‘ಸ್ವಾಭಿಮಾನ’ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ..!

Published

on

 

ರಘೋತ್ತಮ ಹೊ.ಬ

ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ ಬಗ್ಗೆ ಅಂಬೇಡ್ಕರರು ತಲೆಕೆಡಿಸಿಕೊಂಡಷ್ಟು ಈ ವಿಶ್ವದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅದರಲ್ಲೂ ದಲಿತರ ಸ್ವಾಭಿಮಾನದ ಪ್ರಶ್ನೆ? ಹಾಗೆಯೇ ದಲಿತ ಮಹಿಳೆಯ ಸ್ವಾಭಿಮಾನದ ಪ್ರಶ್ನೆ? ಇಂತಹ ಪ್ರಶ್ನೆಗಳಿಗೆ ಉತ್ತರ  ಹುಡುಕುವುದರಲ್ಲಿಯೇ, ಶೋಷಿತರಿಗೆ ಸ್ವಾಭಿಮಾನದ ಪಾಠ ಕಲಿಸುವುದರಲ್ಲಿಯೇ, ಆತ್ಮಗೌರವ ತಂದುಕೊಡುವುದರಲ್ಲಿಯೇ ಅಂಬೇಡ್ಕರ್‍ರವರು ತಮ್ಮ ಜೀವನವಿಡೀ ಶ್ರಮಿಸಿದರು. ಒಂದರ್ಥದಲ್ಲಿ ಅವರು ಸ್ವಾಭಿಮಾನದ ಕಿಡಿ.

ಕಿಡಿ ಅಥವಾ ಕೋಪ, ಹಾಗೆಂದಾಕ್ಷಣ ಅಂಬೇಡ್ಕರರು ಇದ್ದಕ್ಕಿದ್ದ ಹಾಗೆಯೇ ದಲಿತರ ಸ್ವಾಭಿಮಾನದ ಬಗ್ಗೆ ಈ ಪರಿ ತಲೆಕೆಡಿಸಿಕೊಂಡರೆ ಅಥವಾ  ಯಾರದೋ  ಮೇಲಿನ ದ್ವೇಷಕ್ಕೆ  ಹಾಗೆ  ನಿರ್ಧಾರಕ್ಕೆ ಬಂದರೆ? ಖಂಡಿತ ಇಲ್ಲ. ಹಾಗಿದ್ದರೆ? 1935 ಅಕ್ಟೋಬರ್ 13ರಂದು ನಾಸಿಕ್‍ನ ಈಯೋಲಾ ಎಂಬಲ್ಲಿ ಅಂಬೇಡ್ಕರರು  ಕೇಳುವ ಪ್ರಶ್ನೆಗಳನ್ನು ನೋಡಿ.

 1. ಈ ಭಾರತದಲ್ಲಿ ನೀವೊಬ್ಬರೇ(ದಲಿತರು) ಯಾಕೆ ಶೋಷಣೆಗೊಳಗಾಗುತ್ತಿದ್ದೀರಿ?
 2. ಹಿಂದೂ ಧರ್ಮ ನಿಮಗೆ ಕರುಣೆ ತೋರಿಸುತ್ತಿಲ್ಲವೇಕೆ?
 3. ಹಿಂದುತ್ವದಲ್ಲಿ ನಿಮಗೆ ಸಮಾನತೆ ಇದೆಯೇ?
 4. ಹಿಂದುತ್ವದಲ್ಲಿ ನಿಮಗೆ ಸ್ವಾತಂತ್ರ್ಯವಿದೆಯೇ?

ಬಹುಶಃ ಈ ಪ್ರಶ್ನೆಗಳು ಹಿಂದೂಗಳಿಗೆ ಎಲ್‍ಕೆಜಿ ಮಕ್ಕಳ ಪ್ರಶ್ನೆಗಳ ಹಾಗೆ  ಕಾಣಬಹುದು. ಆದರೆ ಶೋಷಿತರಿಗೆ? ಅವು ಅಂಬೇಡ್ಕರರ ಸ್ವಾಭಿಮಾನದ ಕಿಡಿಯ ಸಣ್ಣ ಕಣಗಳಂತೆ ಕಂಡರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ  ಅಂಬೇಡ್ಕರರಿಂದ ಇಂತಹ ಪ್ರಶ್ನೆಗಳನ್ನು ಎದುರಿಸಿದ  ಯಾವುದೇ ದಲಿತನಾದರೂ “ತನ್ನೊಬ್ಬನ ಮೇಲೆ  ಯಾಕೆ  ದೌರ್ಜನ್ಯ ನಡೆಯುತ್ತಿದೆ? ಯಾಕೆಂದರೆ  ನಾನು ಕೀಳು ಜಾತಿಯವನು. ಹಿಂದೂಗಳೆಲ್ಲ ನಮಗೆ ಕರುಣೆ  ತೋರಿಸುತ್ತಿಲ್ಲ, ಯಾಕೆಂದರೆ ನಾವು ಕರುಣೆಗೆ ಅರ್ಹರಲ್ಲ.  ಹಿಂದೂಗಳೆಲ್ಲ ನಮಗೆ ಸಮಾನತೆ ನೀಡುತ್ತಿಲ್ಲ, ಯಾಕೆಂದರೆ ನಾವು ಸಮಾನತೆಗೆ ಅರ್ಹರಲ್ಲ.  ಹಿಂದುತ್ವದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ, ಯಾಕೆಂದರೆ ನಾವು ಸ್ವಾತಂತ್ರ್ಯಕ್ಕೂ ಕೂಡ ಅರ್ಹರಲ್ಲ” ಎಂದುಕೊಳ್ಳುತ್ತಾನೆಯೇ? ಖಂಡಿತ ಇಲ್ಲ. ಬದಲಿಗೆ ಆತ  ಅಂಬೇಡ್ಕರರ ಪ್ರಶ್ನೆಗಳ ಬಗ್ಗೆ ಗಹನವಾಗಿ ಚಿಂತಿಸುತ್ತಾನೆ. ನಾನು ಯಾರು? ನಾನೇಕೆ ಹೀಗಾದೆ? ನನ್ನ ಹೀನಾಯ ಸ್ಥಿತಿಗೆ ಕಾರಣರಾರು? ಎಂದು ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಒಮ್ಮೆ ಆತ ಪ್ರಶ್ನಿಸಿಕೊಳ್ಳಲು  ಪ್ರಾರಂಭಿಸಿದನೆಂದರೆ  ಮುಗಿಯಿತು ಆತ ಸ್ವಾಭಿಮಾನಿಯಾದನೆಂದೇ ಅರ್ಥ. ಅಂದಹಾಗೆ ಅಂಬೇಡ್ಕರರು ಬಯಸಿದ್ದು ಇದನ್ನೆ!

ಹಾಗೆ ಹೇಳುವುದಾದರೆ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಅವರ ಆತ್ಮಕತೆಯ ಪುಟಗಳತ್ತ ಚಿತ್ತಹರಿಸುವುದಾದರೆ, ಅಂಬೇಡ್ಕರರು  1936 ಮೇ 17ರಂದು ಥಾಣೆ ಜಿಲ್ಲೆಯ ಕಲ್ಯಾಣ್ ಎಂಬಲ್ಲಿ ತನ್ನ  ಸ್ವಾಭಿಮಾನವನ್ನು ಕೆಣಕಿದ ಬಾಲ್ಯದ ಕೆಟ್ಟ ಘಟನೆಯನ್ನು ಹೀಗೆ ವಿವರಿಸುತ್ತಾರೆ2 “ನಾನು ಇಂಧೋರ್ ಸಮೀಪದ ಮಹೌ ಎಂಬಲ್ಲಿ ಹುಟ್ಟಿದೆ. ನನ್ನ ತಂದೆ ಮಹೌನಲ್ಲಿ ಸೇನೆಯ ಸುಬೇದಾರ್ ಹುದ್ದೆಯಲ್ಲಿದ್ದರು. ನಾವು ಅಲ್ಲಿದ್ದಷ್ಟು ದಿನ ಅಂದರೆ ಸೇನೆಯ ಕ್ವಾರ್ಟರ್ಸ್‍ನ ಕಾರ್ಯಸ್ಥಾನದಲ್ಲಿಷ್ಟೂ ದಿನ ನಮಗೆ ಅಸ್ಪøಶ್ಯತೆಯ  ಗಂಧ ಗಾಳಿಯು ತಿಳಿದಿರಲಿಲ್ಲ. ಆದರೆ  ನನ್ನ ತಂದೆ  ಸೇನೆಯಿಂದ ನಿವೃತ್ತರಾಗಿ ಸತಾರಕ್ಕೆ ಬಂದಾಗ ನನಗೆ ಅಸ್ಪøಶ್ಯತೆಯ ಪ್ರಥಮ ಅನುಭವವಾಯಿತು.

ಮುಖ್ಯವಾಗಿ ಅದು ಕ್ಷೌರಕ್ಕೆ ಸಂಬಂಧಪಟ್ಟಂತೆ. ಯಾಕೆಂದರೆ  ಸತಾರದಲ್ಲಿ  ಅಷ್ಟೊಂದು ಕ್ಷೌರಿಕರಿದ್ದರೂ ಯಾವುದೇ ಕ್ಷೌರಿಕನೂ ನಮ್ಮ ತಲೆಕೂದಲು ಕತ್ತರಿಸಲು ಮುಂದೆ ಬರುತ್ತಿರಲಿಲ್ಲ.  ಈ ಕಾರಣಕ್ಕಾಗಿ ದುರಂತವೆಂದರೆ ನಮ್ಮ ಹಿರಿಯ ಅಕ್ಕನೇ  ನಮ್ಮನ್ನು ಮನೆಯ  ಹೊರಗಡೆ ಕೂರಿಸಿ  ನಮ್ಮ ತಲೆಗೂದಲನ್ನು ಕತ್ತರಿಸಬೇಕಾಗುತ್ತಿತ್ತು! ಒಂದರ್ಥದಲಿ ಇದು ನನ್ನನ್ನು ವಿಚಲಿತಗೊಳಿಸಿತು. ಯಾಕೆ ಹೀಗೆ ಇಷ್ಟೊಂದು ಕ್ಷೌರಿಕರಿದ್ದರೂ ನಮ್ಮ ಕೂದಲನ್ನು ಕತ್ತರಿಸಲು ಅವರು ಮುಂದೆ ಬರುತ್ತಿಲ್ಲವೇಕೆ? ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು”.

ಮತ್ತೊಂದು ಘಟನೆ : “ನಮ್ಮ ತಂದೆ ಗೋರೆಗಾಂವ್‍ನಲ್ಲಿರಬೇಕಾದರೆ ಅವರು ಒಮ್ಮೆ ನಮ್ಮನ್ನು  ಗೋರೆಗಾಂವ್‍ಗೆ ಬನ್ನಿ ಎಂದು ಕರೆದರು. ಹಾಗೆಯೇ ಪ್ರಯಾಣದ ಖರ್ಚಿಗೆ  ಎಂದು ಅವರು ಸ್ವಲ್ಪ ಹಣವನ್ನೂ ಕಳುಹಿಸಿದ್ದರು. ಆ ಹಣದಿಂದ  ಹೊಸಬಟ್ಟೆ ಖರೀದಿಸಿ, ರೈಲಿನಲ್ಲಿ ಪಯಣಿಸುವ ಕನಸು ಕಾಣುತ್ತಾ  ಖುಷಿಯಿಂದ ನಾನು, ನನ್ನ ಸಹೋದರ ಮತ್ತು  ನನ್ನ ಅಕ್ಕನ ಮಗಳು ಮೂವರು ಗೋರೆಗಾಂವ್‍ನತ್ತ ಹೊರಟೆವು.  ಹಾಗೆಯೇ ನಾವು ಬರುವುದಾಗಿ ಅದಾಗಲೇ ನಮ್ಮ ತಂದೆಯವರಿಗೆ ಪತ್ರವೊಂದನ್ನು ಸಹ ಕಳುಹಿಸಿದ್ದೆವು. ಆದರೆ ಅದು ಅವರಿಗೆ  ತಲುಪಿರಲಿಲ್ಲ.

ಆ ಕಾರಣಕ್ಕಾಗಿ ನಾವು ಗೋರೆಗಾಂವ್ ತಲುಪಿದಾಗ  ನಮ್ಮ ತಂದೆಯವರು ಕಳುಹಿಸಿರಬಹುದೆನ್ನುವ ಸೇವಕನಿಗಾಗಿ ನಾವು ಹುಡುಕಿದರೂ ಆತ ನಮಗೆ ಕಾಣಲಿಲ್ಲ. ವಿಧಿಯಿಲ್ಲದೆ  ಮುಕ್ಕಾಲು ಗಂಟೆ ನಾವು ಸ್ಟೇಷನ್‍ನಲ್ಲಿಯೇ ಕಳೆದೆವು. ಯಾರಾದರೂ ಬರಬಹುದು ನಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ  ಕುಳಿತೆವು. ಅದೇ ಸಮಯಕ್ಕೆ ಅಲ್ಲಿಗೆ ಬಂದ  ಸ್ಟೇಷನ್ ಮಾಸ್ಟರ್ ’ನೀವು ಯಾರಿಗಾಗಿ ಕಾಯುತ್ತಿದ್ದೀರಿ? ಯಾವ ಜಾತಿ? ಎಲ್ಲಿಗೆ ಹೋಗಬೇಕು?’ ಎಂದೆಲ್ಲ ಕೇಳಿದ. ನಾನು ಅವನಿಗೆ ‘ನಾವು ಮಹಾರ್ ಜಾತಿಗೆ ಸೇರಿದವರು’ ಎಂದು ನೇರವಾಗಿಯೇ ಹೇಳಿದೆ. ನಾನು ಹಾಗೆನ್ನುತ್ತಲೇ ಆತ ಆಘಾತಕ್ಕೊಳಗಾದ! ತಕ್ಷಣ ನಮ್ಮಿಂದ ಐದು ಹೆಜ್ಜೆ ಹಿಂದೆ ಸರಿದ! ಆದರೆ ನಾವು ಉತ್ತಮವಾಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ಉತ್ತಮ ಕುಲಕ್ಕೆ ಸೇರಿದವರಿರಬಹುದೆಂದುಕೊಂಡು ಎತ್ತಿನಗಾಡಿಯೊಂದನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ.

ಆದರೆ ನಾವು ಮಹಾರ್ ಜಾತಿಯವರಾಗಿದ್ದರಿಂದ ಯಾವುದೇ ಎತ್ತಿನಗಾಡಿಯವನು ನಮ್ಮನ್ನು ಕೂರಿಸಿಕೊಂಡು ಹೋಗಲು ಮುಂದೆ ಬರಲಿಲ್ಲ. ಕಡೆಗೂ ಒಬ್ಬ ಒಪ್ಪಿಕೊಂಡನಾದರೂ  ಆತನ ಕಂಡೀಷನ್ ಏನೆಂದರೆ ‘ನಾನು ಗಾಡಿ ಚಲಾಯಿಸುವುದಿಲ್ಲ. ನಿಮ್ಮಲ್ಲೆ ಯಾರಾದರೊಬ್ಬರು ಗಾಡಿ  ಚಲಾಯಿಸಿ. ನಾನು ನಿಮ್ಮ ಜೊತೆ ಬರುತ್ತೇನೆ’ ಎಂಬುದಾಗಿತ್ತು! ಅಂದಹಾಗೆ ಆತ ಹಾಗೆ ಬರುತ್ತೇನೆ ಎಂದಾಗ ಸಮಯ ಸಂಜೆ ಏಳು ಗಂಟೆಯಾಗಿತ್ತು. ಹಾಗೆಯೇ ಮಿಲಿಟರಿ  ಏರಿಯಾದವನಾದ್ದರಿಂದ ನನಗೆ ಗಾಡಿ ಚಲಾಯಿಸುವುದು  ಕಷ್ಟವೇನಿರಲಿಲ್ಲ. ಅವನ ಕಂಡೀಷನ್‍ಗೆ ಒಪ್ಪಿಕೊಂಡು  ನಾನು ಮತ್ತು ಉಳಿದ ಮಕ್ಕಳೆಲ್ಲ ಗಾಡಿಯಲ್ಲಿ ಗೋರೆಗಾಂವ್ ಕಡೆ ಹೊರಟೆವು”.

“ಸ್ವಲ್ಪ ದೂರ ಹೋದನಂತರ ಒಂದು ಊರಿನ ಹೊರಗಡೆ ಒಂದು ಕೊಳ ಕಂಡೆವು. ‘ಮುಂದೆ ಎಲ್ಲಿಯೂ ನಿಮಗೆ ನೀರು ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ನೀವು ಇಲ್ಲಿಯೇ ನಿಮ್ಮ ಊಟವನ್ನು ಮಾಡಬಹುದು’ ಎಂದು  ಗಾಡಿಯವನು ನಮಗೆ ಸೂಚಿಸಿದ. ಅವನು ಹೇಳಿದ ಹಾಗೆ ಗಾಡಿಯಿಂದ ಇಳಿದ ನಾವು, ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ತಿಂದು ಕೆಸರು ಕೆಸರಾದ ಗಬ್ಬುನಾರುತ್ತಿದ್ದ ಆ ಕೊಳದ ನೀರನ್ನೆ ಕುಡಿದೆವು. ಗಾಡಿಯವ ಗ್ರಾಮದ ಒಳಕ್ಕೆ ಹೋಗಿ ಅಚ್ಚುಕಟ್ಟಾಗಿ ತನ್ನ ಊಟ ಮುಗಿಸಿ ಮತ್ತೆ  ನಮ್ಮ ಬಳಿ ಬಂದ”!

“ಇತ್ತ ನಮ್ಮ ಪ್ರಯಾಣ ಮುಂದುವರಿದ ಹಾಗೇ  ಕತ್ತಲು ಹೆಚ್ಚಾಗತೊಡಗಿತ್ತು. ಯಾವುದೇ ಬೀದಿ ದೀಪವಾಗಲೀ ಬೆಳಕಿನ ಸಣ್ಣ ತುಣುಕಾಗಲೀ ನಮಗೆ ಕಾಣಲಿಲ್ಲ. ಈ ಕಾರಣಕ್ಕಾಗಿ  ಭಯಗೊಂಡ ನಾವು ಕತ್ತಲೆ ಮತ್ತು ಒಂಟಿತನದಿಂದಾಗಿ ಹೆದರಿ ಜೋರಾಗಿ ಅಳಲಾರಂಭಿಸಿದೆವು. ಅಷ್ಟೊತ್ತಿಗಾಗಲೇ ಅರ್ಧರಾತ್ರಿಯಾಗಿತ್ತು. ಆ ಸಂದರ್ಭದಲ್ಲಿ  ನಾವು ಎಂತಹ ಸ್ಥಿತಿ ತಲುಪಿದ್ದೆವೆಂದರೆ ‘ನಾವು, ನಮ್ಮಪ್ಪರಾಣೆಗೂ ಗೋರೆಗಾಂವ್ ತಲುಪುವುದಿಲ್ಲ’ ಎಂದು ಹತಾಶೆಗೊಂಡೆವು. ಹಾಗೆ ಮುನ್ನಡೆಯುತ್ತಲೇ ನಾವು ಒಂದು ಚೆಕ್‍ಪೋಸ್ಟ್ ತಲುಪಿದೆವು. ಚೆಕ್‍ಪೋಸ್ಟ್‍ನ ಕಾವಲುಗಾರನನ್ನು ನಾನು ‘ಇಲ್ಲಿ ಎಲ್ಲಾದರೂ, ತಿನ್ನಲು ಏನಾದರೂ ಸಿಗುತ್ತದೆಯಾ?’ ಎಂದು ಕೇಳಿದೆ. ಕಾವಲುಗಾರ ಪರ್ಷಿಯನ್ ಭಾಷೆ ಮಾತನಾಡುತ್ತಿದ್ದನಾದ್ದರಿಂದ ಅವನ ಜೊತೆ ಪರ್ಷಿಯನ್ ಭಾಷೆಯಲ್ಲಿಯೇ ಮಾತನಾಡಿದೆ. ನಮ್ಮ ಹಿನ್ನೆಲೆ ತಿಳಿದ ಆತ ಕೂಡ ಅಷ್ಟೆ, ಅಷ್ಟೆ ಕ್ರೂರವಾಗಿ ಉತ್ತರಿಸಿದ ಹಾಗೂ ಸಮೀಪದಲ್ಲಿ ಬೆಟ್ಟವೊಂದಿದೆ ಅಲ್ಲಿ ನಿಮಗೆ ಏನಾದರೂ ಸಿಗುತ್ತದೆಂಬಂತೆ ಸಮೀಪದಲ್ಲೇ ಇದ್ದ ಬೆಟ್ಟದತ್ತ ಕೈತೋರಿಸಿದ.

ವಿಧಿಯಿಲ್ಲದೆ ಹೇಗೋ ಆ ರಾತ್ರಿಯನ್ನು ನಾವು ಅಲ್ಲೇ ಆ ಬೆಟ್ಟದ ಪಕ್ಕದಲ್ಲಿಯೇ ಇದ್ದ ಕೊರಕಲೊಂದರಲ್ಲಿ ಕಳೆದೆವು! ಹಾಗೆಯೇ ಬೆಳಿಗ್ಗೆಯಾದದ್ದೆ ತಡ ಗೋರೆಗಾಂವ್‍ನತ್ತ ಮತ್ತೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಹೀಗೆ ಸಾಗಿದ ನಮ್ಮ ಪ್ರಯಾಣ ಕೊನೆಗೊಂಡದ್ದು ಮಧ್ಯಾಹ್ನಕ್ಕೆ. ಏಕೆಂದರೆ ಆ ದಿನ ನಾವು ಗೋರೆಗಾಂವ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಅದೂ ವಿಪರೀತ ಸುಸ್ತಾಗಿದ್ದೆವು. ಒಂದರ್ಥದಲ್ಲಿ ಅರ್ಧ ಸತ್ತಿದ್ದೆವು ಎಂದರೆ ಅತಿಶಯೋಕ್ತಿಯೆನಲ್ಲ”!”

ಮರದಡಿಯಲ್ಲಿ ಗಳಗಳನೆ ಅತ್ತದ್ದು4! “ಮೂರನೆಯ ಘಟನೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅದು ನಾನು ಬರೋಡ ರಾಜ್ಯದಲ್ಲಿ ಹುದ್ದೆಯಲ್ಲಿದ್ದ ಸಂದರ್ಭ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವಾಗ ಬರೋಡ ರಾಜ್ಯದಿಂದ ನಾನು ವಿದ್ಯಾರ್ಥಿ ವೇತನ ಪಡೆದಿದ್ದೆ. ಆ ಸಂಧರ್ಭದಲ್ಲಿ ಆದ ಒಪ್ಪಂದದಂತೆ ಇಂಗ್ಲೆಂಡಿನಿಂದ ಹಿಂದಿರುಗಿ ಬಂದಾಗ ಒಪ್ಪಂದದಂತೆ ಬರೋಡ ಸಂಸ್ಥಾನದಲ್ಲಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿಕೊಂಡೆ. ದುರಂತವೆಂದರೆ ಆ ಸಂದರ್ಭದಲ್ಲಿ ಬರೋಡದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಕೂಡ ಸಿಗಲಿಲ್ಲ. ಬರೋಡದಂಥ ಆ ಮಹಾನಗರದಲ್ಲಿ ಒಬ್ಬ ಹಿಂದೂವಿರಬಹುದು, ಮುಸಲ್ಮಾನನಿರಬಹುದು ಯಾರೊಬ್ಬರೂ ನನಗೆ ಬಾಡಿಗೆಗೆ ಮನೆ ಕೊಡಲು ಮುಂದೆಬರಲಿಲ್ಲ. ಕಡೆಗೆ ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆ.ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಹಿಂದಿರುಗಿ ಬಂದಿದ್ದವನಾದ್ದರಿಂದ ನನ್ನ ಮೈ ಬಣ್ಣ ಸುಂದರವಾಗಿತ್ತು! ಹಾಗೆಯೇ ಆಕರ್ಷಕ ವ್ಯಕ್ತಿತ್ವ ಕೂಡ ನನ್ನದಾಗಿತ್ತು. ಆ ಕಾರಣಕ್ಕಾಗಿ ನನಗೆ ನಾನೇ ಒಂದು ಪಾರ್ಸಿ ಹೆಸರನ್ನು ಇಟ್ಟುಕೊಂಡು ಆ ಧರ್ಮಛತ್ರದಲ್ಲಿ ವಾಸಿಸಲು ಪ್ರಾರಂಭಿಸಿದೆ!

ಅಂದಹಾಗೆ ಆಗ ನಾನು ಇಟ್ಟುಕೊಂಡ ಹೆಸರು ‘ಅಡಲ್ಜಿ ಸೊರಾಬ್ಜಿ’ ಎಂಬುದಾಗಿತ್ತು! ನನ್ನನ್ನು ಪಾರ್ಸಿ ಎಂದು ನಂಬಿದ  ಆ ಧರ್ಮಛತ್ರದ  ಪಾರ್ಸಿ ಜನಾಂಗದ ಮ್ಯಾನೇಜರ್  ನನಗೆ ದಿನವೊಂದಕ್ಕೆ 2ರೂ ಬಾಡಿಗೆಯಂತೆ ಮನೆ ನೀಡಿದ. ಆದರೆ ಸತ್ಯ ಗೊತ್ತಾಗಲೇಬೇಕಲ್ಲವೆ? ಯಾಕೆಂದÀರೆ ಬರೋಡದ ರಾಜಶ್ರೇಷ್ಠ ಗಾಯಕವಾಡ ಮಹಾರಾಜರು ತನ್ನ ಆಸ್ಥಾನದಲ್ಲಿ ಮಹಾರ್ ಹುಡುಗನೊಬ್ಬನನ್ನು ಅಧಿಕಾರಿಯಾಗಿ ನೇಮಿಸಿಕೊಂಡಿರುವ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು! ಮತ್ತು ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಸುಳ್ಳು ಹೆಸರಿನಲ್ಲಿ ಉಳಿದುಕೊಂಡಿದ್ದು  ಕೂಡ ಅನುಮಾನಕ್ಕೆ ಕಾರಣವಾಗಿತ್ತು. ಕಡೆಗೂ ನನ್ನ ಗುಟ್ಟು ಹೊರಬಿತ್ತು”.

“ಏಕೆಂದರೆ ಅಲ್ಲಿ ನಾನು ಉಳಿದುಕೊಂಡಿದÀ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳಲು  ಪ್ರಾರಂಭಿಸುತ್ತಿದ್ದಂತೆ ದೊಣ್ಣೆಗಳನ್ನು ಹಿಡಿದಿದ್ದ ಹದಿನೈದರಿಂದ ಇಪ್ಪತ್ತು ಜನರಷ್ಟಿದ್ದ ಪಾರ್ಸಿ ಜನರ ಗುಂಪೊಂದು ನನ್ನ ಮೇಲೆ ಧಾಳಿ ಮಾಡಿತು. ನನ್ನನ್ನು ಕೊಲ್ಲುವುದಾಗಿ ಕೂಗಾಡಿದ ಆ ಗುಂಪು ನಾನು ಯಾರೆಂದು ಪ್ರಶ್ನಿಸಿತು.  ನಾನು ಸಾವಧಾನವಾಗಿ ’ನಾನೊಬ್ಬ ಹಿಂದೂ’ ಎಂದು ಉತ್ತರಿಸಿದೆ. ಆದರೆ ನನ್ನ ಉತ್ತರದಿಂದ ತೃಪ್ತರಾಗದ ಉದ್ರಿಕ್ತ ಆ ಗುಂಪು ನನ್ನ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿತು ಮತ್ತು ನನ್ನನ್ನು ತಕ್ಷಣವೇ ಕೊಠಡಿ ಖಾಲಿ ಮಾಡುವಂತೆ ಆ ಗುಂಪು ಕೂಗಿ ಹೇಳಿತು. ನಿಜಕ್ಕೂ ಹೇಳುವುದಾದರೆ ನನ್ನ ದೃಢಮನಸ್ಸು ಮತ್ತು ನಾನು ಗಳಿಸಿದ ಜ್ಞಾನ ಆ ಸಂದರ್ಭವನ್ನು ನಾನು ಧೈರ್ಯದಿಂದ ಎದುರಿಸಲು ನನಗೆ ಬಲ ನೀಡಿತು ಎನ್ನಬಹುದು.

ಏಕೆಂದರೆ ನಮ್ರತೆಯಿಂದ ಆ ಗುಂಪನ್ನು ನಾನು ನನಗೆ ಎಂಟು ಗಂಟೆಗಳ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡೆ.  ಹಾಗೆಯೇ ಆ ದಿನ ಪೂರ್ತಿ ನಾನು ಉಳಿದುಕೊಳ್ಳಲು ಮನೆಯೊಂದನ್ನು ಹುಡುಕುವಲ್ಲಿಯೇ ಕಳೆದೆ. ಆದರೆ ‘ನನ್ನ ತಲೆಯನ್ನು ಅಡಗಿಸಿಕೊಳ್ಳಲು’’ಸ್ಥಳವೊಂದನ್ನು ಪಡೆಯುವಲ್ಲಿ ಕಡೆಗೂ ನಾನು ವಿಫಲನಾದೆ! ನನ್ನ ಬಹುತೇಕ ಸ್ನೇಹಿತರನ್ನು ಈ ಸಂದರ್ಭದಲ್ಲಿ ನಾನು ಸಂಪರ್ಕಿಸಿದೆ. ಆದರೆ ಅವರೆಲ್ಲರೂ ನನ್ನ ಬೇಡಿಕೆಗೆ ನಕಾರಾತ್ಮಕವಾಗಿ ಉತ್ತರ ನೀಡಿದರು. ನನಗೆ ವಸತಿ  ಒದಗಿಸಿಕೊಡುವಲ್ಲಿ  ತಮ್ಮ ಅಸಹಾಯಕತೆಯನ್ನು ಅವರು ಪ್ರದರ್ಶಿಸಿದರು. ನಾನು ತೀವ್ರವಾಗಿ ನಿರಾಶಗೊಂಡೆ ಮತ್ತು ಒಂದರ್ಥದಲಿ ಹತಾಶನಾದೆ.

ಮುಂದೇನು ಮಾಡಲಿ? ನನಗೆ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ನಿರಾಶ ಮತ್ತು ಹತಾಶ ಮನಸ್ಥಿತಿಯಲ್ಲಿ  ಒಂದೆಡೆ  ಮರದ ನೆರಳಲ್ಲಿ ಕುಳಿತೆ. ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ದುಖಃ ತಡೆಯಲಾರದೆ ಗಳಗಳನೆ ಅತ್ತೆ. ಕಡೆಗೆ ಮನೆ ದೊರೆಯುವ ಯಾವ  ಭರವಸೆಯೂ ಇಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕೆಲಸ ಬಿಡಲು ನಿರ್ಧರಿಸಿದೆ ಮತ್ತು ನನ್ನ ಹುದ್ದೆಗೆ ರಾಜೀನಾಮೆ ಇತ್ತು ಆ ರಾತ್ರಿಯೇ ರೈಲಿನಲ್ಲಿ ವಾಪಸ್ ಮುಂಬೈಗೆ ಪ್ರಯಾಣ ಬೆಳೆಸಿದೆ”.

ಪರಮಶ್ರೇಷ್ಠ, ಅಪ್ಪಟ ಸ್ವಾಭಿಮಾನಿ ಎದುರಿಸಿದ  ಘೋರ ಕ್ಷಣಗಳಿವು. ಯಾವ ಜ್ಞಾನಿ ವಿದೇಶಗಳಿಂದ ಸಾಲು ಸಾಲು ಪದವಿಗಳಿಸಿ  ಜ್ಞಾನದ ಹೊರೆಯನ್ನೇ ಹೊತ್ತುತಂದನೋ  ಅಂತಹ  ವಿಶ್ವಜ್ಞಾನಿಗೆ  ಭಾರತದಲ್ಲಿ ಸಂದ ಮರ್ಯಾದೆಯಿದು! ಹಾಗೆಯೇ ಜಾತಿಯ ಕೂಪಕ್ಕೆ ಸಿಕ್ಕು ಸಮಾಜ ತಲುಪಿರುವ ದಯನೀಯ  ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇದು. ಅಂಬೇಡ್ಕರ್‍ರಂತಹ ಮಹಾನ್ ಜ್ಞಾನಿಗೇ  ಈ ಸಮಾಜ ಮನೆ ಕೊಡಲು ನಿರಾಕರಿಸಿತೆಂದರೆ ಇನ್ನು ನಮ್ಮಂತಹ ಸಾಮಾನ್ಯ ಅಸ್ಪøಶ್ಯರ ಪಾಡೇನಾಗಬೇಡ! ಅದೂ ಅಂಬೇಡ್ಕರರು  ಈ ಜಾತಿವಾದಿಗಳಿಗೋಸ್ಕರ  ತಮ್ಮ  ಹೆಸರನ್ನು ’ಅಡಲ್ಜಿ ಸೊರಾಬ್ಜಿ’ ಎಂದು ಸುಳ್ಳು ಕೂಡ ಹೇಳಬೇಕಾಯ್ತು!

ಅಂದಹಾಗೆ ಈಗ ಬೇರೆ ಏನು? ದಲಿತರಿಗೆ ಮೇಲ್ಜಾತಿಗಳವರು ಮನೆಕೊಡುತ್ತಾರೆಯೇ?  ಖಂಡಿತ ಇಲ್ಲ. ಅದೂ ಕೊಟ್ಟರೂ  ದಲಿತರು ಸುಳ್ಳು ಜಾತಿ ಹೇಳಬೇಕಷ್ಟೆ. ಮಹದೇವಯ್ಯ ಎಂಬ ತಮ್ಮ ಹೆಸರನ್ನು  ಮಹದೇವೇಗೌಡ, ಮಹದೇವಪ್ಪ, ಮಹದೇವಾಚಾರ್, ಮಹದೇವ ಶೆಟ್ಟಿ ಹೀಗೆ ಬದಲಿಸಿಕೊಂಡು ಸುಳ್ಳು ಹೇಳಬೇಕಷ್ಟೆ! ಅಕಸ್ಮಾತ್  ಮೇಲ್ಜಾತಿ ಜನರಿಗೆ  ಇವರ ಒರಿಜಿನಲ್ ಜಾತಿ ಗೊತ್ತಾದರೆ? ಇವರ ಪರಿಸ್ಥಿತಿ ಅಂಬೇಡ್ಕರರಿಗಿಂತೇನು ಭಿನ್ನವಾಗಿರಲಿಕ್ಕಿಲ್ಲ. ಒಂದಂತು ನಿಜ, ಸ್ವಾಭಿಮಾನದ ಜ್ಯೋತಿ ಎದುರಿಸಿದ ಕಷ್ಟದ ಕ್ಷಣಗಳವು.

ಗೋರೆಗಾಂವ್‍ಗೆ ಹೋಗುವಾಗ ಆ ಕಾಡುಗತ್ತಲಲ್ಲಿ  ಬಾಬಾಸಾಹೇಬರ  ಆ ಸುಂದರ ದೇಹ, ಮಗುವಿನ ಮನಸ್ಸು ಅದೆಷ್ಟು ನೊಂದಿರಬೇಡ? ನೀರು ಆಹಾರ ಇಲ್ಲದೆ ಅದೆಷ್ಟು ದಣಿದಿರಬೇಡ? ಹಿಂದೂ ಜಾತಿವ್ಯವಸ್ಥೆ ಕಂಡರೆ  ಸಿಟ್ಟು ಬರುವುದು  ಈ ಕಾರಣಕ್ಕೆ.  ಮೇಲು-ಕೀಳು ವ್ಯವಸ್ಥೆ  ಸೃಷ್ಟಿಸಿ, ಸ್ಪøಶ್ಯ-ಅಸ್ಪøಶ್ಯ ಎಂಬ ಅಂತರ ಸೃಷ್ಟಿಸಿ  ತಮ್ಮೊಳಗೇ ಇರುವ  ಕೆಲವರನ್ನು  ಪ್ರಾಣಿಗಳಿಗಿಂತ ಹೀನಾಯವಾಗಿ  ಕಂಡು ನಿರಂತರ ದೌರ್ಜನ್ಯ  ಎಸಗುತ್ತಿರುವ ಅಮಾನವೀಯ ಸಂಸ್ಕøತಿಯದು. ಇಂತಹ ಅಮಾನವೀಯ ಸಂಸ್ಕøತಿಯು ಮಾನವೀಯತೆಯ  ಸಾಕಾರದಂತಿರುವ ಅಂಬೇಡ್ಕರರ ವಿರುದ್ಧ  ನಡೆಸಿರುವ ದೌರ್ಜನ್ಯವಿದೆಯಲ್ಲಾ ಅದು ಎಂದೂ ಕ್ಷಮಿಸಲಾರದಂಥದ್ದು. ಶೋಷಿತ ಸಮುದಾಯ, ತನ್ನ ನಾಯಕನಿಗೆ  ಅಪಮಾನ  ಎಸಗಿರುವ ಆ ಅನಾಗರೀಕ ಸಮಾಜವನ್ನು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮಿಸಲೂ ಬಾರದು.

ಹಾಗಿದ್ದರೆ ಆ ಅನಾಗರೀಕ ಸಮಾಜಕ್ಕೆ,  ಅದು ಎಸಗಿರುವ ಪಾಪಕ್ಕೆ ಶಿಕ್ಷೆ? ಶೋಷಿತರು ಸ್ವಾಭಿಮಾನಿಗಳಾಗುವುದು. ಅಂಬೇಡ್ಕರರ  ಮಾರ್ಗದಲ್ಲಿ ಉತ್ತಮ ಶಿಕ್ಷಣ ಪಡೆದು  ಶೋಷಿತ ಸಮುದಾಯಗಳು  ಸ್ವಾಭಿಮಾನದ  ಮೇರು ಪರ್ವತಗಳಾಗುವುದು. ಯಾಕೆಂದರೆ ನಮ್ಮನ್ನು ಕಂಡರೆ ಆಗದವರ ಎದುರಲ್ಲಿ ನಾವು ಇನ್ನೂ ಉತ್ತಮ ಮಟ್ಟದಲ್ಲಿ  ಬದುಕುವುದಿದೆಯಲ್ಲಾ, ಅವರಿಗಿಂತ ಎಲ್ಲದರಲ್ಲೂ ಒಂದು ಕೈ ಮೇಲೆನಿಸಿಕೊಳ್ಳುವುದಿದೆಯಲ್ಲಾ ದೌರ್ಜನ್ಯಕೋರರನ್ನು ಅದಕ್ಕಿಂತ ಮಾನಸಿಕವಾಗಿ ಕುಗ್ಗಿಸುವ ಅಂಶ ಬೇರೊಂದಿರಲಿಕ್ಕಿಲ್ಲ. ಅವರು ಕುಗ್ಗಿದರೆಂದರೆ ಅಂಬೇಡ್ಕರ್ ಗೆದ್ದರೆಂದೇ ಅರ್ಥ. ಈ ನಿಟ್ಟಿನಲಿ ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳಲಿ. ತನ್ನ ಎದೆಯಲ್ಲಿ ಅಂಬೇಡ್ಕರರ ಸ್ವಾಭಿಮಾನದ ಕೆಚ್ಚನ್ನು ತುಂಬಿಕೊಳ್ಳಲಿ. ತನ್ಮೂಲಕ  ದೌರ್ಜನ್ಯಕೋರರಿಗೆ ತಕ್ಕ ಉತ್ತರ ನೀಡಲಿ.

ಆಕರ ಗ್ರಂಥಗಳು

 1. Dr.Babasaheb Ambedkar writings and speeches (vol.17. part III, P.120,123,124,127)
 2. Ibid,P.108 
 3. Ibid,P.108 
 4. Ibid,P.109, 110

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಚುನಾವಣಾ ಅಕ್ರಮದ ಮೂಲಕ ಸೋಲಿಸಲ್ಪಟ್ಟ ‘ಪ್ರಜಾಪ್ರಭುತ್ವದ ಪಿತ’

Published

on

1951-52 ಡಿಸೆಂಬರ್-ಜನವರಿ ತಿಂಗಳಲ್ಲಿ ಈ ದೇಶದಲ್ಲಿ ಫ್ರಥಮ ಲೋಕಸಭಾ ಚುನಾವಣೆ ನಡೆಯಿತು. 1952ರ ಜನವರಿ 3 ರಂದು ಮತದಾನ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರರು ಬಾಂಬೆ(ಇಂದಿನ ಮುಂಬೈ) ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಾಂಬೆ ನಗರ ಉತ್ತರ ಕ್ಷೇತ್ರ, ಅಂದಿನ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅಂದರೆ ಆ ಕ್ಷೇತ್ರದಿಂದ ಓರ್ವ ಸಾಮಾನ್ಯ ವರ್ಗದ ಸದಸ್ಯ ಮತÀ್ತು ಓರ್ವ ಪರಿಶಿಷ್ಟಜಾತಿಯ ಸದಸ್ಯ ಹೀಗೆ ಇಬ್ಬರೂ ಆಯ್ಕೆಯಾಗಬೇಕಿತ್ತು.

ಈ ಪ್ರಕಾರ ಅಲ್ಲಿ ಚುನಾವಣೆ ಘೋಷಣೆಯಾಗಿ 11ಜನ ನಾಮಪತ್ರ ಸಲ್ಲಿಸಿ ಮೂವರು ನಾಮಪತ್ರ ವಾಪಸ್ ಪಡೆದು ಕಣದಲ್ಲಿ 8ಜನ ಅಭ್ಯರ್ಥಿಗಳು ಉಳಿದರು. ಅಂದಹಾಗೆ ಆ 8ಜನ ಅಭ್ಯರ್ಥಿಗಳಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳೂ ಇದ್ದರು ಮತ್ತು ಸಾಮಾನ್ಯ ಅಭ್ಯರ್ಥಿಗಳೂ ಇದ್ದರು ಮತ್ತು ಯಾಕೆ ಹೀಗೆ ಇಬ್ಬರನ್ನೂ ಒಟ್ಟಿಗೆ ಮಾಡಲಾಗಿತ್ತೆಂದರೆ ಪರಿಶಿಷ್ಟರು, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಲು ಅವರೂ ಅರ್ಹರಾದುದರಿಂದ ಸಾಮಾನ್ಯ ಕ್ಷೇತ್ರ ಮತ್ತು ಪರಿಶಿಷ್ಟರ ಕ್ಷೇತ್ರ ಹೀಗೆ ಎರಡನ್ನೂ ಒಟ್ಟಿಗೆ ಮಿಶ್ರ ಮಾಡಲಾಗಿತ್ತು. ಅಂದಹಾಗೆ ಈ ಮಿಶ್ರ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಯೇ ಪಡೆದಿದ್ದರೆ ಸಾಮಾನ್ಯ ಅಭ್ಯರ್ಥಿಯಾಗಿ ಪರಿಶಿಷ್ಟಜಾತಿಯ ಅಭ್ಯರ್ಥಿಯೇ ಆಯ್ಕೆಯಾಗಬಹುದಿತ್ತು ಮತ್ತು ಯಥಾಪ್ರಕಾರ ಮೀಸಲು ಕ್ಷೇತ್ರದಿಂದಲೂ ಮತ್ತೋರ್ವ ಪರಿಶಿಷ್ಟ ಆಯ್ಕೆಯಾಗುತ್ತಿದ್ದ. ಅಕಸ್ಮಾತ್ ಮೊದಲ ಸ್ಥಾನದಲ್ಲಿ ಸಾಮಾನ್ಯ ಅಭ್ಯರ್ಥಿಯೇ ಇದ್ದರೆ ಸಹಜವಾಗಿ ಆತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದ ಮತ್ತು ಉಳಿದ ಪರಿಶಿಷ್ಟಜಾತಿಯ ಸ್ಥಾನಕ್ಕೆ ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು ಆಯ್ಕೆಯಾಗುತ್ತಿದ್ದರು. ಒಟ್ಟಾರೆ ದ್ವಿಸದಸ್ಯ ಸ್ಥಾನದ ಆಯ್ಕೆಯ ಈ ಪ್ರಕ್ರಿಯೆ ಗೊಂದಲಮಯವಾಗೇನು ಇರಲಿಲ್ಲ.

ದ್ವಿಸದಸ್ಯ ಈ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಹೇಗಿತ್ತೆಂದರೆ ಕಣದಲ್ಲಿ ಅಭ್ಯರ್ಥಿಗಳು 8 ಮಂದಿ ಇದ್ದುದರಿಂದ ಪ್ರತೀ ಮತದಾನ ಕೇಂದ್ರದಲ್ಲಿಯೂ ಪ್ರತೀ ಅಭ್ಯರ್ಥಿಗೆ ಒಂದರಂತೆ 8 ಮತ ಪಟ್ಟಿಗೆಗಳನ್ನು(ಬೂತ್‍ಗಳನ್ನು) ಇಡಲಾಗಿತ್ತು. ಮತದಾರನಿಗೆ ಸಾಮಾನ್ಯ ಕ್ಷೇತ್ರಕ್ಕೊಂದು ಮತ್ತು ಮೀಸಲು ಕ್ಷೇತ್ರಕ್ಕೊಂದು ಹೀಗೆ ಎರಡು ಬೇರೆ ಬೇರೆ ಬಣ್ಣದ ಮತ ಪತ್ರಗಳನ್ನು ನೀಡಲಾಗಿತ್ತು. ಸಾಮಾನ್ಯ ಕ್ಷೇತ್ರದ ಮತಪತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲಾ ಎಂಟು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿದ್ದವು. ಪರಿಶಿಷ್ಟರ ಮೀಸಲಿನ ಮತಪತ್ರದಲ್ಲಿ ಕೇವಲ ಪರಿಶಿಷ್ಟ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮಾತ್ರ ಇದ್ದವು. ಮತದಾರ ಆ ಎರಡೂ ಮತಪತ್ರಗಳನ್ನು ಪಡೆದು ಎರಡರಲ್ಲೂ ತನಗೆ ಇಷ್ಟವಾದ ಅಭ್ಯರ್ಥಿಗಳ ಚಿಹ್ನೆಗಳಿಗೆ ಮುದ್ರೆಯೊತ್ತಿ ಸಹಿ ಮಾಡಿ ಸಂಬಂಧಿಸಿದ ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಮಾತ್ರ ಹಾಕಬೇಕಿತ್ತು.

ಈ ಹಿನ್ನೆಲೆಯಲ್ಲಿ ಮತದಾರನೋರ್ವ ಅಭ್ಯರ್ಥಿಯೊಬ್ಬರಿಗೆ ತಾನು ನೀಡಿದ ಮತವನ್ನು, ಸಂಬಂಧಿತ ಮತಪತ್ರವನ್ನು ಅದೇ ಅಭ್ಯರ್ಥಿಯ ಮತಪೆಟ್ಟಿಗೆಯಲ್ಲಿ ಹಾಕದೆ ಬೇರೆ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೆ ಅದು ಕುಲಗೆಟ್ಟ ಮತವಾಗುತ್ತಿತ್ತು. ಗಮನಾರ್ಹವೆಂದರೆ ಮತದಾರ ತನಗೆ ನೀಡಲಾದ ಎರಡೂ ಮತಪತ್ರಗಳನ್ನು ತನ್ನಿಷ್ಟದ ಒಂದೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕಿದರೂ ಅದರಲ್ಲಿ ಒಂದು ಮತ ಕುಲಗೆಡುತ್ತಿತ್ತು ಈ ನಿಟ್ಟಿನಲ್ಲಿ ಇದನ್ನು ‘ಹಾಗೆ ಮಾಡುವುದು ಅಕ್ರಮ’ ಎಂದು ಅಂದಿನ ಜನಪ್ರತಿನಿಧಿ ಕಾಯಿದೆ ಸ್ಪಷ್ಟವಾಗೇ ಘೋಷಿಸಿತ್ತು. ಇದಲ್ಲದೆ ಮತದಾರ ತನಗೆ ಕೇವಲ ಒಂದು ಓಟು ಹಾಕುವ ಮಾತ್ರ ಇಚ್ಚೆ ಇದೆ, ಇನ್ನೊಂದು ಓಟು ಹಾಕುವ ಇಚ್ಚೆ ಇಲ್ಲ ಎಂದರೆ ಆತ ತನ್ನಿಷ್ಟದ ಆ ಒಂದು ಓಟನ್ನು ಮಾತ್ರ ಹಾಕಿ ಉಳಿದ ಒಂದು ಮತಪತ್ರವನ್ನು ವಾಪಸ್ ಮತಗಟ್ಟೆಯ ಅಧಿಕಾರಿಗೆ ನೀಡುವ ಅವಕಾಶವೂ ದ್ವಿಸದಸ್ಯ ಆ ಕ್ಷೇತ್ರದಲ್ಲಿ ಇತ್ತು.

ಈ ಪ್ರಕಾರ ಅಂಬೇಡ್ಕರರು ಸ್ಪರ್ಧಿಸಿದ್ದ ಬಾಂಬೆ ನಗರ ಉತ್ತರ ಆ ಕ್ಷೇತ್ರಕ್ಕೆ 1952 ಜನವರಿ 3 ರಂದು ಚುನಾವಣೆ ನಡೆದು ಜನವರಿ 7ರಂದು ಮತಎಣಿಕೆ ಪ್ರಾರಂಭವಾಗಿ ಜನವರಿ 11ಕ್ಕೆ ಎಣಿಕೆ ಮುಕ್ತಾಯವಾಯಿತು. ಫಲಿತಾಂಶವನ್ನು ಕ್ರಮಸಂಖ್ಯೆ, ಪಡೆದ ಮತಗಳು ಮತ್ತು ಆ ಅಭ್ಯರ್ಥಿಗಳ ಮತಪೆಟ್ಟಿಗೆಗಳಲ್ಲಿ ಬಿದ್ದ ಬೇರೆ ಅಭ್ಯರ್ಥಿಗಳ ಮತಗಳು ಅರ್ಥಾತ್ ಕುಲಗೆಟ್ಟ ಮತಗಳ ಪ್ರಕಾರ ಪಟ್ಟಿಮಾಡಿ ದಾಖಲಿಸುವುದಾದರೆ..

ಅಭ್ಯರ್ಥಿ ಪಡೆದ ಮತ @ ಕುಲಗೆಟ್ಟ ಮತ

1. ಡಾ.ಅಂಬೇಡ್ಕರ್ * 1,23,576 @ 2921
2. ಅಶೋಕ್ ಆರ್.ಮೆಹ್ತಾ * 1,39,741 @ 5,597
3. ಎಸ್.ಎ.ಡಾಂಗೆ * 96,755 @ 39,165
4. ಗೋಪಾಲ್ ವಿ.ದೇಶ್‍ಮುಖ್ * 40,786 @ 6,634
5. ವಿಠಲ್ ಬಿ.ಗಾಂಧಿ * 1,49,138 @ 10,881
6. ಕೇಶವ ಬಿ.ಜೋಶಿ * 15,195 @ 1,168
7. ನಾರಾಯಣ್ ಎಸ್.ಕಜ್ರೋಳ್ಕರ್ * 1,38,137 @ 6,892
8. ನೀಲಕಾಂತ್ ಬಿ.ಪಾರುಯೇಕರ್ * 12,560 @ 1,025

ಈ ಪಟ್ಟಿಯ ಪ್ರಕಾರ ಎರಡು ಸ್ಥಾನ ಇದ್ದ ಈ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಅತಿ ಹೆಚ್ಚು ಮತ ಪಡೆದ(1,49,138) ವಿಠಲ್ ಬಿ.ಗಾಂಧಿ ಆಯ್ಕೆಯಾದರೆ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ನಾರಾಯಣ್ ಎಸ್.ಕಜ್ರೋಳ್ಕರ್ 1,38,137 ಮತ ಪಡೆದು ಆಯ್ಕೆಯಾದರು. 1,23,576 ಮತ ಪಡೆದ ಅಂಬೇಡ್ಕರರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಜ್ರೋಳ್ಕರ್ ವಿರುದ್ಧ 14,561 ಮತಗಳ ಅಂತರದಿಂದ ಸೋತರೆ ಸಾಮಾನ್ಯ ಕ್ಷೇತ್ರದಲ್ಲಿ ಅಂಬೇಡ್ಕರರ ಎಸ್‍ಸಿಎಫ್(ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್) ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ಆರ್.ಮೆಹ್ತಾ 1,39,741 ಮತ ಪಡೆದು ಅದೇ ಕಾಂಗ್ರೆಸ್‍ನ ವಿಠಲ್ ಬಿ.ಗಾಂಧಿಯವರ ಎದುರು 9,397 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಅಂದಹಾಗೆ ಇಲ್ಲಿ ವ್ಯಾಪಕವಾಗಿ ದಾಖಲಿಸಲ್ಪಟ್ಟ ಕುಲಗೆಟ್ಟ ಮತಗಳು? ಅಂಬೇಡ್ಕರರು ಸೋತಿದ್ದೇ ಅಥವಾ ಸೋಲಿಸಲ್ಪಟ್ಟಿದ್ದೇ ಕುಲಗೆಡಿಸಲ್ಪಟ್ಟ ಈ ಮತಗಳ ಕಾರಣಕ್ಕಾಗಿ! ಸೋತ ನಂತರ ಸ್ವತಃ ಅಂಬೇಡ್ಕರರು ಈ ಸಂಬಂಧ 1952 ಏಪ್ರಿಲ್ 21ರಂದು ಅಂದಿನ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಾರೆ ಮತ್ತು ತಮ್ಮ ಆ ದೂರಿನಲ್ಲಿ ಬಾಬಾಸಾಹೇಬರು ಅತಿ ಹೆಚ್ಚು ಕುಲಗೆಟ್ಟ ಮತಗಳನ್ನು ‘ಪಡೆದ’ ಕಮ್ಯೂನಿಸ್ಟ್ ಪಕ್ಷದ ನಾಯಕ ಶ್ರೀಪಾದ ಅಮೃತ ಡಾಂಗೆ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಾಲ್ ವಿ.ದೇಶ್‍ಮುಖ್, ಈ ಇಬ್ಬರೂ ಅಭ್ಯರ್ಥಿಗಳು ನಡೆಸಿದ ಅಕ್ರಮಗಳನ್ನು ಹೂಡಿದ ವಾಮಮಾರ್ಗಗಳನ್ನು ಹೇಳುತ್ತಾ ಹೋಗುತ್ತಾರೆ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.411).

ಅಂಬೇಡ್ಕರರ ಆ ದೂರಿನ ಮುಖ್ಯಾಂಶಗಳನ್ನು ಪ್ರಸ್ತಾಪಿಸುವುದಾದರೆ, ಮೊದಲೇ ಹೇಳಿದ ಹಾಗೆ ಒಬ್ಬ ಮತದಾರ ತನ್ನ ಎರಡೂ ಓಟುಗಳನ್ನು ಒಬ್ಬನೇ ಅಭ್ಯರ್ಥಿಯ ಮತಪೆಟ್ಟಿಗೆಗೆ ಹಾಕುವುದು ತಪ್ಪು, ಅದು ಕುಲಗೆಡುತ್ತದೆ. ಆದರೆ ಆಶ್ಚರ್ಯವೆಂದರೆ ಹಾಗೆ ಮತಗಳನ್ನು ಕುಲಗೆಡಿಸಲೆಂದೇ ಮೇಲ್ಕಂಡ ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಭರಪೂರ ಪ್ರಚಾರ ನಡೆಸಿದ್ದರು. ಹೀಗೆ ಮತಗಳನ್ನು ಕುಲಗೆಡಿಸುವುದರಿಂದ ತಾವು ಗೆಲ್ಲಲಾಗುವುದಿಲ್ಲ ಎಂದು ಈ ಇಬ್ಬರೂ ಅಭ್ಯರ್ಥಿಗಳಿಗೂ ಗೊತ್ತಿತ್ತು. ಆದರೆ ಅವರ ಅಂತಹ ನಡೆಯ ಒಟ್ಟಾರೆ ಉದ್ದೇಶ? ಅಂಬೇಡ್ಕರರನ್ನು ಸೋಲಿಸುವುದಾಗಿತ್ತು!

ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 39,165 ಕುಲಗೆಟ್ಟ ಮತಗಳನ್ನು ಪಡೆದ ಕಮ್ಯೂನಿಸ್ಟ್ ನಾಯಕ ಎಸ್.ಎ.ಡಾಂಗೆ ಪ್ರಚಾರದ ಸಮಯದಲ್ಲಿ ಹೊರಡಿಸಿದ್ದ ಒಂದು ಕರಪತ್ರದಲ್ಲಿ ಕಣದಲ್ಲಿರುವ ಪ್ರಚಂಡ ಅಭ್ಯರ್ಥಿ ತಾನಾಗಿದ್ದು ಮತದಾರರು ‘ತಮ್ಮೆರಡು ಓಟುಗಳನ್ನು’ ನನಗೇ ನೀಡಬೇಕು ಎಂದು ಆಗ್ರಹಿಸಿದ್ದರು! ಅಲ್ಲದೆ ಅದೇ ಡಾಂಗೆಯವರು ತಮ್ಮ ಪಕ್ಷ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಯುಗಾಂತರ’ ಎಂಬ ಮರಾಠಿ ವಾರಪತ್ರಿಕೆಯಲ್ಲಿ ಹೊರಡಿಸಿದ್ದ ಜಾಹೀರಾತಿನಲ್ಲಿ ‘ಮತದಾರರು ತಮ್ಮ ಎರಡೂ ಓಟುಗಳನ್ನು’ ತಮ್ಮ ಒಂದೇ ಡಬ್ಬಕ್ಕೆ ಹಾಕಬೇಕು ಎಂದು ತಮ್ಮ ಗುರುತಾದ ‘ಇಂಜಿನ್’ ಚಿತ್ರ ಸಮೇತ ಕೋರಿದ್ದರು! ಡಾಂಗೆಯವರ ಒಟ್ಟಾರೆ ಉದ್ದೇಶ ಸ್ಪಷ್ಟ ಇತ್ತು ಅಂದರೆ ಅದು ತನಗೆ ಲಾಭವಾಗಬೇಕು ಎಂದಲ್ಲ, ಬದಲಿಗೆ ಅಂಬೇಡ್ಕರರಿಗೆ ನಷ್ಟವಾಗಬೇಕು ಎಂದು!

ಈ ಸಂಬಂಧ ಕರಪತ್ರವೊಂದರಲ್ಲಿ ಕುದ್ದು ಅಂಬೇಡ್ಕರರ ಹೆಸರನ್ನೇ ಉಲ್ಲೇಖಿಸಿದ್ದ ಸದರಿ ಡಾಂಗೆ “ಪರಿಶಿಷ್ಟ ಜಾತಿಗೆ ಸೇರಿದ್ದ ಅಂಬೇಡ್ಕರರು ದ್ವಿಸದಸ್ಯ ಈ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೀಗೆ ಎರಡೂ ಸ್ಥಾನಗಳ ಅಭ್ಯರ್ಥಿಯಾಗುವ ಅವಕಾಶ ಹೊಂದಿದ್ದಾರೆ. ಆದುದರಿಂದ ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಪರಿಶಿಷ್ಟಜಾತಿಯ ಅಂಬೇಡ್ಕರರಿಗೆ ಓಟು ಕೊಟ್ಟರೆ ಅದು ಪರಿಶಿಷ್ಟರ ಮತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಮತದಾರರು ತಮ್ಮ ಎರಡೂ ಮತಗಳನ್ನು ನನ್ನ ‘ಇಂಜಿನ್’ ಗುರುತಿಗೇ ನೀಡಿ”!

ಅಬ್ಬಾ! ಎಂತಹ ತಂತ್ರ! ಸಾಮಾನ್ಯ ಕ್ಷೇತ್ರ ಆಗಿದ್ದ ಆ ಬಾಂಬೆ ಉತ್ತರ ಕ್ಷೇತ್ರದಿಂದ ಅಂಬೇಡ್ಕರ್ ಕೇವಲ ಪರಿಶಿಷ್ಟರ ಓಟುಗಳಿಂದ ಮಾತ್ರ ಗೆಲ್ಲಬೇಕಂತೆ, ಪರಿಶಿಷ್ಟಜಾತಿಗೆ ಸೇರಿಲ್ಲದ ಮತದಾರರು ಅಂಬೇಡ್ಕರರಿಗೆ ಮತ ಹಾಕಿದರೆ ಅದು ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡಂತೆಯಂತೆ. ಆ ಕಾರಣಕ್ಕಾಗಿ ಮತದಾರ ಎರಡೂ ಓಟುಗಳನ್ನು ಒಬ್ಬ ವ್ಯಕ್ತಿಯ ಡಬ್ಬಕ್ಕೇ ಹಾಕಿ ತನ್ನ ಮತವನ್ನು ಕುಲಗೆಡಿಸಿಕೊಳ್ಳಬೇಕಂತೆ! ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಡಾಂಗೆಯವರು ತಮ್ಮ ಕುಯುಕ್ತಿಯ ಇಂಥ ನಡೆಯಿಂದ ಮತದಾರರನ್ನು ಎಷ್ಟು ದಿಕ್ಕುತಪ್ಪಿಸುವುದು ಸಾಧ್ಯವೋ ಅಷ್ಟೂ ದಿಕ್ಕುತಪ್ಪಿಸಿದರು ತನ್ಮೂಲಕ ಅಂಬೇಡ್ಕರರು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು! ಹೇಗೆಂದರೆ ಕುಲಗೆಟ್ಟ ಒಟ್ಟು ಮತಗಳು 74,333. ಅದರಲ್ಲಿ ಡಾಂಗೆಯವರ ಇಂತಹ ಅಪಪ್ರಚಾರದಿಂದ ಬರೋಬ್ಬರಿ ಅವರೊಬ್ಬರಿಗೇ ಬಿದ್ದ ಕುಲಗೆಟ್ಟ ಮತಗಳೇ 39,165! ಅಂದಹಾಗೆ ಅಂಬೇಡ್ಕರ್ ಸೋತದ್ದು? 14,561 ಮತಗಳಿಂದ! ಈ ಹಿನ್ನೆಲೆಯಲ್ಲಿ ಅಂಬೇಡ್ಕರರ ಸೋಲಿನ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು ಮತ ಕುಲಗೆಡಿಸುವಲ್ಲಿ ಡಾಂಗೆ ಯಶಸ್ವಿಯಾಗಿದ್ದರು. ಡಾಂಗೆಯವರ ಇಂತಹ ಹೀನ ತಂತ್ರವನ್ನು ತಮ್ಮ ಆ ಚುನಾವಣಾ ದೂರಿನಲ್ಲಿ ಅಂಬೇಡ್ಕರರು ಸಾಕ್ಷಿ ಸಮೇತ, ಅಂದರೆ ಕರಪತ್ರ ಪ್ರತಿ, ಪೇಪರ್ ಕಟಿಂಗ್‍ಗಳನ್ನು ಲಗತ್ತಿಸುವುದರ ಜೊತೆ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಅರುಹಿದ್ದರು.

ಮುಂದುವರಿದು ಅಂಬೇಡ್ಕರರು ಮತ್ತೋರ್ವ ಅಭ್ಯರ್ಥಿಯ ಅಪಪ್ರಚಾರವನ್ನು ಸಾಕ್ಷಿ ಸಮೇತ ದಾಖಲಿಸಿದ್ದರು. ಅದು ಪಕ್ಷೇತರ ಅಭ್ಯರ್ಥಿ ಹಿಂದುತ್ವವಾದಿ ಗೋಪಾಲ್ ವಿ.ದೇಶ್‍ಮುಖ್‍ರವರಿಗೆ ಸಂಬಂಧಿಸಿದ್ದು. ಸದರಿ ದೇಶ್‍ಮುಖ್ ‘ವಿವಿಧ ವೃತ್ತಾ’ ಎಂಬ ಪತ್ರಿಕೆಯಲ್ಲಿ ಡಿಸೆಂಬರ್ 31, 1951ರಲ್ಲಿ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ “ಬಾಂಬೆ ಉತ್ತರ ಕ್ಷೇತ್ರವು ದ್ವಿಸದಸ್ಯ ಸಾಮಾನ್ಯ ಕ್ಷೇತ್ರವಾಗಿದ್ದು ಇಲ್ಲಿ ಎರಡೂ ಸ್ಥಾನಗಳನ್ನು ಪರಿಶಿಷ್ಟರೇ ಗೆಲ್ಲುವಂತಹ ತಂತ್ರವನ್ನು ಅಂಬೇಡ್ಕರರು ರೂಪಿಸಿದ್ದಾರೆ. ಆ ಕಾರಣದಿಂದ ಮತದಾರರು ಅಂಬೇಡ್ಕರರ ಇಂತಹ ತಂತ್ರವನ್ನು ಸೋಲಿಸಲು ತಮ್ಮ ಎರಡೂ ಓಟುಗಳನ್ನು ಅಂಬೇಡ್ಕರರನ್ನು ಹೊರತು ಪಡಿಸಿ ಇತರರಿಗೆ ನೀಡಿ. ಆ ಮೂಲಕ ಪರಿಶಿಷ್ಟೇತರರೂ ಆಯ್ಕೆಯಾಗುವಂತೆ ಮಾಡಿ” ಎಂದಿದ್ದರು. ಮುಂದುವರಿದು ಅದೇ ದೇಶ್‍ಮುಖ್ ಅದೇ ‘ವಿವಿಧ ವೃತ್ತಾ’ ಪತ್ರಿಕೆಯಲ್ಲಿ “ಮತದಾರನೋರ್ವ ಹಿಂದೂ ಅಭ್ಯರ್ಥಿಯ ಪೆಟ್ಟಿಗೆಯಲ್ಲಿ ಮಾತ್ರ ತನ್ನ ಎರಡೂ ಮತಗಳನ್ನು ಹಾಕಬೇಕು ಮತ್ತು ಅದು ಯಾವುದೇ ರೀತಿಯಲ್ಲೂ ಕಾನೂನಿಗೆ ವಿರುದ್ಧವಲ್ಲ” ಎಂಬ ಹೇಳಿಕೆ ನೀಡಿ ಕೋಮುಭಾವವನ್ನು ಬಹಿರಂಗವಾಗೇ ಬಡಿದೆಬ್ಬಿಸಿದ್ದರು! (ಇಲ್ಲಿ ದೇಶ್‍ಮುಖ್‍ರ ‘ಹಿಂದೂ ಅಭ್ಯರ್ಥಿಗೆ ಮಾತ್ರ’ ಎಂಬ ಪದವನ್ನು ಗಮನಿಸಬೇಕು! ಅಂದರೆ ಅಂಬೇಡ್ಕರರು ಒಟ್ಟಾರೆ ಪರಿಶಿಷ್ಟರು ಹಿಂದೂಗಳಲ್ಲ ಎಂಬುದು ಆ ಕಾಲದಲ್ಲೇ 1952ರಲ್ಲೇ ಸ್ಪಷ್ಟ.) ಈ ಸಂಬಂಧ ದೇಶ್‍ಮುಖ್‍ರ ಇಂತಹ ಕೋಮುಭಾವದ ಪತ್ರಿಕಾ ಹೇಳಿಕೆಯ ವರದಿಯ ತುಣುಕನ್ನೂ ಸಹ ಅಂಬೇಡ್ಕರರು ತಮ್ಮ ಆ ಚುನಾವಣಾ ತಕರಾರು ಅರ್ಜಿಯ ಜೊತೆ ಲಗತ್ತಿಸಿದ್ದರು.

ಒಟ್ಟಾರೆ ಹೇಳುವುದಾದರೆ ಕಮ್ಯೂನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆ, ಹಿಂದುತ್ವವಾದಿ ನಾಯಕ ಗೋಪಾಲ್ .ವಿ.ದೇಶ್‍ಮುಖ್ ಇಬ್ಬರೂ “ವಯಕ್ತಿಕವಾಗಿ ಅವರಿಬ್ಬರಿಗು ಯಾವುದೇ ಲಾಭವಾಗದಿದ್ದರೂ ಅಂಬೇಡ್ಕರರ ಗೆಲುವಿನ ಸಂಭವವನ್ನು ತಪ್ಪಿಸುವ ಏಕೈಕ ಉದ್ದೇಶ ಇಟ್ಟುಕೊಂಡು ಎರಡೂ ಓಟುಗಳನ್ನು ತಮಗೆ ಹಾಕಿ” ಎಂಬ ಚುನಾವಣಾ ಹೀನ ತಂತ್ರ ಹೆಣೆದು, ಮತದಾರರನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾದರು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ತಮ್ಮ ಆ ಚುನಾವಣಾ ದೂರಿನಲ್ಲಿ ಸದರಿ ಬಾಂಬೆ ಸಿಟಿ ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಈ ಇಬ್ಬರು ಅಭ್ಯರ್ಥಿಗಳ ಇಂತಹ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಅನೂರ್ಜಿತಗೊಳಿಸಿ ಮರುಚುನಾವಣೆ ನಡೆಸಬೇಕು ಎಂದು ಕೋರಿದರು.

ಅಂತೆಯೇ ಅಂಬೇಡ್ಕರರು ಸಲ್ಲಿಸಿದ ಆ ಚುನಾವಣಾ ದೂರಿನ ವಿಚಾರಣೆ ಶ್ರೀ ಎನ್.ಜೆ.ವಾಡಿಯಾ, ಶ್ರೀ ಎಂ.ಕೆ.ಲಲ್ಕಾಕ, ಶ್ರೀ ಜಿ.ಪಿ.ಮುರುಡೇಶ್ವರ್ ರವರನ್ನೊಳಗೊಂಡ ಚುನಾವಣಾ ಟ್ರಿಬ್ಯೂನಲ್‍ನಲ್ಲಿ ನಡೆಯುತ್ತದೆ ಮತ್ತು ಸ್ವತಃ ಅಂಬೇಡ್ಕರರೇ ಆ ಟ್ರಿಬ್ಯೂನಲ್ ಮುಂದೆ ವಿಚಾರಣೆಗೆ ಹಾಜರಾಗಿ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(2)ರ ಅಡಿಯಲ್ಲಿ ಚುನಾವಣೆಯಲ್ಲಿ ಮತದಾರರ ಮೇಲೆ ‘ಅಕ್ರಮ ಪ್ರಭಾವ’ ಬೀರಿದ ಆ ಇಬ್ಬರು ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ, ಸೆಕ್ಷನ್ 100ರ ಪ್ರಕಾರ “ಭಾರಿ ಅಕ್ರಮದ ಆಧಾರದಲ್ಲಿ ಸದರಿ ಚುನಾವಣೆಯನ್ನು ರದ್ದುಪಡಿಸುವಂತೆ””ಪ್ರಬಲ ವಾದ ಮಂಡಿಸುತ್ತಾರೆ. ಅಂದಹಾಗೆ ಜನಪ್ರತಿನಿಧಿ ಕಾಯ್ದೆ ಅಂದಿನ ನಿಯಮ 25(1)ರ ಪ್ರಕಾರವೇ ‘ಮತದಾರನೊಬ್ಬ ತನ್ನ ಎರಡೂ ಮತವನ್ನೂ ಒಂದೇ ಬ್ಯಾಲಟ್ ಬಾಕ್ಸ್‍ನಲ್ಲಿ ಹಾಕುವುದು ಕಾನೂನಿಗೆ ವಿರುದ್ಧ’.

ಹೀಗಿರುವಾಗ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಕಾನೂನಿಗೆ ವಿರುದ್ಧವಾದ ಇಂತಹ ಕ್ರಿಯೆ ನಡೆಸಿ ಎಂದು ಮತದಾರರಿಗೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಗಳ ಮೂಲಕ ಆಗ್ರಹಿಸುತ್ತಾರೆ ಎಂದರೆ ಇದು ಚುನಾವಣಾ ಅಕ್ರಮದ ಉದ್ದೇಶಪೂರ್ವಕ ಆಚರಣೆಯಲ್ಲದೆ ಮತ್ತೇನು? ಮತ್ತು ಅದು ನ್ಯಾಯಬದ್ಧ ಚುನಾವಣೆ ಹೇಗಾಗುತ್ತದೆ? ಮುಂದುವರಿದು ಅಂಬೇಡ್ಕರರು “ನಾನು ನನ್ನ ಸ್ಥಾನವನ್ನು 13000 ಓಟುಗಳಿಂದ ಕಳೆದುಕೊಂಡೆ. ಡಾ.ದೇಶ್‍ಮುಖ್ ಮತ್ತು ಶ್ರೀ ಡಾಂಗೆ ಇಂತಹ ನೀಚ ತಂತ್ರಗೈಯದಿದ್ದರೆ ಕೇವಲ ಶ್ರೀ ಡಾಂಗೆಯವರು ಕುಲಗೆಡಿಸಿದ ಆ 39000 ಓಟುಗಳಲ್ಲೇ ಖಂಡಿತ ನಾನು ಬಹುಸಂಖ್ಯೆಯ ಓಟುಗಳನ್ನು ಪಡೆಯುತ್ತಿದ್ದೆ. (ಆ ಮೂಲಕ ಆಯ್ಕೆಯಾಗುತ್ತಿದ್ದೆ). ಈ ನಿಟ್ಟಿನಲ್ಲಿ ಮತದಾರರ ಮೇಲೆ ಹೀಗೆ ಶ್ರೀ ಡಾಂಗೆ ಮತ್ತು ಶ್ರೀ ದೇಶ್‍ಮುಖ್ ಅಕ್ರಮ ಪ್ರಭಾವ ಬೀರಿದ್ದಕ್ಕೆ ಸಾಕ್ಷಿಯಾಗಿ ಭಾರೀ ಸಂಖ್ಯೆಯ ಕುಲಗೆಟ್ಟ ಮತಗಳು(73,333) ನ್ಯಾಯಾಲಯದ ಮುಂದಿದೆ.

ನ್ಯಾಯಾಲಯ ಈ ವ್ಯಾಪಕ ಅಕ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದರ ಆಧಾರದ ಮೇಲೆ ಬಾಂಬೆ ನಗರ ಉತ್ತರ ಆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಭ್ರಷ್ಟ ಆಚರಣೆಗಳು ನಡೆದಿರುವುದರಿಂದ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 100ರ ಅಡಿಯಲ್ಲಿ ಆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು” ಎಂದು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ನಿಖರ ವಾದ ಮಂಡಿಸುತ್ತಾರೆ.

ಅಂಬೇಡ್ಕರರ ಈ ವಾದಕ್ಕೇ ಜಯ ಸಿಕ್ಕಿತೆ? ಖಂಡಿತ ಇಲ್ಲ. ಎಲ್ಲ ಚುನಾವಣಾ ವಿಚಾರಣೆಗಳಂತೆ ಇದೂ ಕೂಡ ‘ಹಿಯರಿಂಗ್ ಮುಂದಕ್ಕೆ’ ಎಂಬಂತೆ ಮುಂದೆ ಹೋಯಿತು. ಅಂಬೇಡ್ಕರರಿಗೆ ನ್ಯಾಯ ಧಕ್ಕಲಿಲ್ಲ. ಆದರೆ ಸತ್ಯ? ಅಂದರೆ ಅಂಬೇಡ್ಕರರನ್ನು ಈ ದೇಶದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ತಂತ್ರಗೈದು ಸೋಲಿಸಿದ ಸತ್ಯ? ಅವರೇ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ರೂಪದಲ್ಲಿ ಸದ್ಯ ನಮ್ಮ ಮುಂದೆ ಇದೆ. ಖಂಡಿತ, ಹೆಂಡ, ಬಾಡು, ದುಡ್ಡಿಗೆ ಚುನಾವಣೆ ಗೆಲ್ಲುತ್ತಿರುವ ಈ ಕಾಲದಲ್ಲಿ, ಹಾಗೆಯೇ ವಿವಿಧ ಜಾತಿಗಳನ್ನು ಎತ್ತಿಕಟ್ಟಿ, ಅಭ್ಯರ್ಥಿಗಳ ಮೂಲಕ ನಾನಾ ಅಪಪ್ರಚಾರ ನಡೆಸುವ ಈ ಕಾಲದಲ್ಲಿ ಅಂಬೇಡ್ಕರರ ಅಂದಿನ ಸೋಲು ಕೂಡ ಅಂತಹ ‘ಕಾಲದ’ ಕಹಿ ವಾಸ್ತವವಾಗುತ್ತದೆ.

ಯಾಕೆಂದರೆ ‘ವಿಕಿಪಿಡಿಯಾ ಅಂತರ್ಜಾಲ’ ತಾಣದಲ್ಲಿ ದಾಖಲಾಗಿರುವಂತೆ 1952ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯ ಅತಿ ಪ್ರಮುಖ ಸೋಲು ಡಾ.ಅಂಬೇಡ್ಕರರದ್ದು! ಇಲ್ಲಿ ಪ್ರತ್ಯೇಕ ಮತದಾನ ಪದ್ಧತಿಯ ಅನಿವಾರ್ಯತೆಯನ್ನು ಕೂಡ ದಾಖಲಿಸಬೇಕಾಗುತ್ತದೆ. 1932ರಲ್ಲಿ ಅಂಬೇಡ್ಕರರು ಒತ್ತಾಯಿಸಿದ ಈ ಮತದಾನ ಪದ್ಧತಿ ಜಾರಿಯಾಗಿದಿದ್ದರೆ 1952ರಲ್ಲಿ ಅವರು ಖಂಡಿತ ಸೋಲುತ್ತಿರಲಿಲ್ಲ. ಜಿ.ವಿ.ದೇಶ್‍ಮುಖ್‍ರಂಥ ಹಿಂದೂ ಕೋಮುವಾದಿ ಅದೆಷ್ಟೇ ಕೋಮು ಪ್ರಚೋದನೆ ನಡೆಸಿದ್ದರೂ ‘ಪ್ರತ್ಯೇಕ ಮತದಾನ’ದ ಪರಿಶಿಷ್ಟರೇ ಪರಿಶಿಷ್ಟರಿಗೆ ಮಾತ್ರ ಮತ ಹಾಕುವ ಆ ಪದ್ಧತಿಯಲ್ಲಿ ಬಾಬಾಸಾಹೇಬರು ಸ್ಪಷ್ಟವಾಗಿ ಆಯ್ಕೆಯಾಗಿರುತ್ತಿದ್ದರು. ಆದರೆ ಅಂಬೇಡ್ಕರರ ಆ ಮಹತ್ವದ ಬೇಡಿಕೆಯನ್ನು ಮಹಾತ್ಮ ಗಾಂಧಿ ‘ಅರ್ಥಮಾಡಿಕೊಂಡು’ ಜಾರಿಯಾಗದಂತೆ ತಡೆದರು. ಆ ಮೂಲಕ ಅಂಬೇಡ್ಕರರ ಸೋಲಿಗೆ 1932ರಲ್ಲೇ ಗಾಂಧಿ ಮುನ್ನುಡಿ ಬರೆದಿದ್ದರು.

ಒಟ್ಟಾರೆ ಗಾಂಧಿಯವರ ಮುನ್ನುಡಿ ಮತ್ತು ಅದಕ್ಕೆ ಪೂರಕವಾಗಿ ಡಾಂಗೆ ಮತ್ತು ದೇಶ್‍ಮುಖ್‍ರ ಇಂತಹ ಚುನಾವಣಾ ಅಕ್ರಮದ ಬೆನ್ನುಡಿ ಈ ದೇಶದ ಜನರಿಗೆ ಓಟುಹಾಕುವ ಹಕ್ಕುಗಳಿಸಿಕೊಟ್ಟ ‘ಭಾರತದ ಪ್ರಜಾಪ್ರಭುತ್ವದ ಪಿತ’ ಅಂಬೇಡ್ಕರರ ಸೋಲಿಗೆ ಕಾರಣವಾದವು ಎಂಬುದು ಪ್ರಜಾಪ್ರಭುತ್ವದ ವ್ಯಂಗ್ಯವೆನಿಸಿದರೂ ಘಟಿಸಿರುವುದಂತೂ ಸತ್ಯ.

 –ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending