Connect with us

ಬಹಿರಂಗ

ಗಾಂಧೀಜಿ, ಜಾತಿ ಮತ್ತು ವರ್ಣ : ಡಾ.ಬಿ.ಆರ್. ಅಂಬೇಡ್ಕರ್ ಸ್ಪಷ್ಟನೆ ಹೀಗಿದೆ..!

Published

on

ಜಾತಿಯನ್ನು ಅಲ್ಲಗಳೆದು ವರ್ಣದಲ್ಲಿ ಮಾತ್ರ ಶ್ರದ್ಧೆ ತಾಳಿರುವುದರಿಂದ ಮಹಾತ್ಮರು ಪ್ರಗತಿ ಸಾಧಿಸಿದ್ದಾರೆಂದು ತೋರಬಹುದು. ಒಂದು ಕಾಲಕ್ಕೆ ಈ ಮಹಾತ್ಮರು ಕಟ್ಟಾ ಸನಾತನ ಹಿಂದೂವಾಗಿದ್ದರೆಂಬುದು ಸತ್ಯ. ವೇದ, ಉಪನಿಷತ್ತು, ಪುರಾಣಗಳು, ಹೀಗೆ ಹಿಂದೂ ಧರ್ಮಗ್ರಂಥಗಳೆಂದು ಯಾವಯಾವುದಕ್ಕೆ ಹೆಸರಿದೆಯೋ ಅಂತಹ ಎಲ್ಲವುಗಳಲ್ಲಿಯೂ ಅವರಿಗೆ ನಂಬಿಕೆಯಿತ್ತು. ಅದರಿಂದಾಗಿ ಅವತಾರಗಳನ್ನೂ, ಪುನರ್ಜನ್ಮಗಳನ್ನೂ ಅವರು ನಂಬಿದ್ದರು. ಜಾತಿಪದ್ಧತಿಯಲ್ಲಿ ಶ್ರದ್ಧೆಯಿಟ್ಟುಕೊಂಡು ಸಂಪ್ರದಾಯಶೀಲರಂತೆ ಜೋರಾಗಿ ಅದನ್ನು ಸಮರ್ಥಿಸುತ್ತಿದ್ದರು.

ಬೇರೆ ಜಾತಿಯವರೊಡನೆ ಊಟ, ಜಲಪಾನ, ಮದುವೆಗಳ ಬೇಡಿಕೆಗಳನ್ನು ಖಂಡಿಸುತ್ತಿದ್ದರು. ಅಂತರ್ಜಾತೀಯ ಭೋಜನ ನಿಷೇಧವು ಸಂಕಲ್ಪ ಬಲದ ಸಂವರ್ಧನೆಗೂ ಕೆಲವು ಸಾಮಾಜಿಕ ಸದ್ಗುಣ ರಕ್ಷಣೆಗೂ ಸಹಾಯಕಾರಿಯೆಂದು ವಾದಿಸುತ್ತಿದ್ದರು. ಈ ಡಂಭಾಚಾರದ ಹುಚ್ಚು ವಿವರಗಳನ್ನೆಲ್ಲ ಈಗ ಅವರು ಖಂಡಿಸಿರುವುದು ಒಳ್ಳೆಯದು. ಜಾತಿಪದ್ಧತಿಯು ಆಧ್ಯಾತ್ಮಿಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಆತಂಕಕಾರಿಯೆಂದು ಅವರು ಒಪ್ಪಿರುವುದೂ ಒಳ್ಳೆಯದೆ. ಅವರ ಮಗ ಅಂತರ್ಜಾತೀಯ ವಿವಾಹ ಮಾಡಿಕೊಂಡಿದ್ದು ಈ ಪರಿವರ್ತನೆಗೆ ಸಂಬಂಧಿಸಿಯೋ ಏನೋ. ಆದರೆ ಮಹಾತ್ಮರು ನಿಜವಾಗಿಯೂ ಪ್ರಗತಿ ಹೊಂದಿದ್ದಾರೆಯೇ ? ಮಹಾತ್ಮರು ಎತ್ತಿ ಹಿಡಿಯುವ ಈ ವರ್ಣವೆಂತಹುದು ? ಸ್ವಾಮಿ ದಯಾನಂದ ಸರಸ್ವತಿ ಹಾಗೂ ಅವರ ಅನುಯಾಯಿಗಳಾದ ಆರ್ಯ ಸಮಾಜಿಗಳು ಬೋಧಿಸುವ ವೈದಿಕ ವರ್ಣವೆ ? ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿ ಅಥವಾ ಸಾಮರ್ಥ್ಯಕ್ಕೆ ಅನುಗುಣವಾದ ವೃತ್ತಿಯನ್ನು ಅನುಸರಿಸಬೇಕೆಂಬುದು ವೈದಿಕ ವರ್ಣದ ಮುಖ್ಯ ತತ್ವ, ನೈಸರ್ಗಿಕ ಪ್ರವೃತ್ತಿಗೆ ಅನುಕೂಲವಾಗಲಿ ಬಿಡಲಿ, ಪರಂಪರಾಗತವಾದ ಕುಲವೃತ್ತಿಯನ್ನೇ ಅನುಸರಿಸಬೇಕೆಂಬುದು ಮಹಾತ್ಮರ ವರ್ಣಕ್ಕಿರುವ ಮುಖ್ಯ ತತ್ವ , ಮಹಾತ್ಮರ ಮೇರೆಗೆ ವರ್ಣ ಮತ್ತು ಜಾತಿ ಇವೆರಡರ ಅಂತರವೇನು ? ಏನೂ ಇದ್ದಂತೆ ತೋರುವುದಿಲ್ಲ.

ಮಹಾತ್ಮರು ನೀಡುವ ವ್ಯಾಖ್ಯೆಯ ಮೇರೆಗೆ ವರ್ಣವೆಂಬುದು ಜಾತಿಯ ಇನ್ನೊಂದು ಹೆಸರಾಗುತ್ತದೆ . ಹೀಗಿರುವುದರಿಂದ ಮಹಾತ್ಮರು ಪ್ರಗತಿ ಹೊಂದುವುದಕ್ಕೆ ಬದಲಾಗಿ ಹಿಂಚಲನೆಯನ್ನು ಹೊಂದಿದ್ದಾರೆ. ವೈದಿಕ ವರ್ಣಕ್ಕೆ ಇದ್ದ ಉದಾತ್ತ ಕಲ್ಪನೆಯನ್ನು ವಿರೂಪಗೊಳಿಸಿ ಮಹಾತ್ಮರು ತಮ್ಮ ಅರ್ಥವಿವರಣೆಯಿಂದ ಅದನ್ನು ಹಾಸ್ಯಾಸ್ಪದವಾಗುವಂತೆ ಮಾಡಿದ್ದಾರೆ. ವರ್ಣವ್ಯವಸ್ಥೆಯನ್ನು ನಾನು ತಿರಸ್ಕರಿಸುತ್ತಿದ್ದು ಅದಕ್ಕೆ ಕಾರಣಗಳೇನೆಂದು ನನ್ನ ಉಪನ್ಯಾಸದಲ್ಲಿ
ವಿವರಿಸಿದ್ದೇನೆ. ಹಾಗಿದ್ದರೂ ಕೂಡ, ಸ್ವಾಮಿ ದಯಾನಂದರೇ ಮೊದಲಾದವರು ವೈದಿಕ ವರ್ಣಕ್ಕೆ ನೀಡುವ ಅರ್ಥ ವಿವರಣೆ ಸಮಂಜಸವೂ ಆಕ್ಷೇಪರಹಿತವೂ ಆಗಿದೆಯೆಂದು ನಾನು ಒಪ್ಪಲೇಬೇಕು. ಸಮಾಜದಲ್ಲಿ ವ್ಯಕ್ತಿಯ ಸ್ಥಾನವನ್ನು ಗೊತ್ತುಪಡಿಸುವಾಗ ಅವನ ಜನ್ಮವನ್ನೇ ಆಧಾರವಾಗಿ ಹಿಡಿಯಲು ಅದು ಅವಕಾಶವೀಯುತ್ತಿರಲಿಲ್ಲ. ವ್ಯಕ್ತಿಯ ಯೋಗ್ಯತೆಯನ್ನಷ್ಟೆ ಅದು ಮನ್ನಿಸುತ್ತಿತ್ತು. ಮಹಾತ್ಮರು ವರ್ಣಕ್ಕೆ ಕೊಡುವ ಅರ್ಥವಿವರಣೆ ವೈದಿಕ ವರ್ಣದ ವಿಪರ್ಯಾಸವಾಗಿದ್ದು ಅಸಹ್ಯವೂ ಆಗಿದೆ. ವರ್ಣ ಮತ್ತು ಜಾತಿ ಎರಡೂ ಸಂಪೂರ್ಣವಾಗಿ ಭಿನ್ನ ಪರಿಕಲ್ಪನೆಗಳು. ವರ್ಣವು ವ್ಯಕ್ತಿಯ ಯೋಗ್ಯತೆಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ, ಜಾತಿಯು ವ್ಯಕ್ತಿಯ ಜನ್ಮವನ್ನು ಆಧರಿಸುತ್ತದೆ. ಇವೆರಡೂ ಭಿನ್ನವೆಂಬುದಷ್ಟೇ ಅಲ್ಲ, ಪರಸ್ಪರ ವಿರುದ್ಧವೂ ಆಗಿದೆ.

ಪ್ರತಿಯೊಬ್ಬರೂ ತಮ್ಮತಮ್ಮ ಕುಲವೃತ್ತಿಯನ್ನು ಅನುಸರಿಸಬೇಕೆಂಬುದರಲ್ಲಿ ಮಹಾತ್ಮರಿಗೆ ನಂಬಿಕೆಯಿರುವುದಾದರೆ ಅವರು ಜಾತಿ ಪದ್ಧತಿಯ ಪ್ರಚಾರವನ್ನೇ ಮಾಡುತ್ತಿದ್ದಾರೆಂದಾಯಿತು. ಮತ್ತು ಅದನ್ನು ವರ್ಣವ್ಯವಸ್ಥೆಯೆಂದು ಅವರು ಹೇಳುತ್ತಿರುವುದು ಸುಳ್ಳು ಮಾತ್ರವಲ್ಲದೆ, ಗೊಂದಲಗೆಟ್ಟ ವಿಚಾರವನ್ನು ಇನ್ನಷ್ಟು ಗೊಂದಲಗೆಡಿಸಿದಂತಾಗಿದೆ. ಅವರ ಈ ಗೊಂದಲಗೆಟ್ಟ ವಿಚಾರಕ್ಕೆ ಕಾರಣವೇನೆಂದರೆ ವರ್ಣ ಯಾವುದು ಹಾಗೂ ಜಾತಿ ಯಾವುದು ಎಂಬುದರ ಸ್ಪಷ್ಟ ಹಾಗೂ ಖಚಿತ ಜ್ಞಾನ ಅವರಿಗಿಲ್ಲ : ಹಿಂದೂಧರ್ಮದ ರಕ್ಷಣೆಗೆ ಅವುಗಳಲ್ಲಿ ಯಾವುದು ಅವಶ್ಯಕವೆಂಬ ನಿಶ್ಚಿಅವರಲ್ಲಿಲ್ಲ. ಜಾತಿ ಹಿಂದೂಧರ್ಮದ ತತ್ವವಲ್ಲವೆಂದು ಅವರು ಹೇಳಿದ್ದಾರೆ. ( ಈ ಅಭಿಪ್ರಾಯವನ್ನು ಕೂಡ ಬದಲಿಸುವುದಕ್ಕೆ ಒಂದು ರಹಸ್ಯ ಕಾರಣ ಅವರಿಗೆ ಕಂಡುಬರಲಿಕ್ಕಿಲ್ಲವೆಂದು ಹಾರೈಸೋಣ ).

ಹಾಗಾದರೆ ವರ್ಣವೆಂಬುದು ಹಿಂದೂಧರ್ಮದ ಮೂಲ ತತ್ವವೇ ? ಇದಕ್ಕೆ ಸ್ಪಷ್ಟ ಉತ್ತರ ಸಾಧ್ಯವಿಲ್ಲ . ‘ ಡಾಕ್ಟರ್ ಅಂಬೇಡ್ಕರ್ ಅವರ ದೋಷಾರೋಪಣೆ ‘ ಎಂಬ ಅವರ ಲೇಖನವನ್ನೋದಿದವರು ‘ ಇಲ್ಲ ‘ ಎಂದೇ ಉತ್ತರಿಸುವರು. ವರ್ಣವು ಹಿಂದೂ ಧರ್ಮದ ಸಾರಭೂತವಾದ ಅಂಗವೆಂದು ಈ ಲೇಖನದಲ್ಲಿ ಅವರು ಹೇಳಿಲ್ಲ. ಅದಕ್ಕೆ ಬದಲಾಗಿ ಅವರು ಹೇಳಿರುವುದು ಹೀಗೆ : “ ಹಿಂದೂಧರ್ಮದ ಮೂಲ ತತ್ವವೆಂದರೆ ಸತ್ಯಸ್ವರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ಮತ್ತು ಮಾನವ ಕುಟುಂಬದ ಧರ್ಮ ಅಹಿಂಸೆಯೆಂಬುದು”. ಆದರೆ ಶ್ರೀ ಸಂತರಾಮರಿಗೆ ಉತ್ತರವಾಗಿ ಬರೆದ ಲೇಖನವನ್ನು ಓದಿದವರು ‘ ಹೌದು ‘ ಎನ್ನುವರು. ಆ ಲೇಖನದಲ್ಲಿ ಅವರು ಹೀಗೆಂದಿದ್ದಾರೆ : “ ಕುರಾನ್‌ನನ್ನು ಒಪ್ಪದವನು ಮುಸಲ್ಮಾನನಾಗಿ ಉಳಿಯುವುದು ಸಾಧ್ಯವೆ ? ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯುವುದು ಸಾಧ್ಯವೆ ? ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋ ನಾನರಿಯೆ”.

ನುಣುಚಿಕೊಳ್ಳುವಂತೆ ಈ ಬಗೆಯ ಸಂದಿಗ್ಧ ಮಾತುಗಳೇಕೆ ? ಮಹಾತ್ಮರು ಯಾರ ಕೈಗೂ ಸಿಕ್ಕದಂತೆ ಪ್ರಯತ್ನಿಸುವುದೇಕೆ ? ಯಾರನ್ನು ಮೆಚ್ಚಿಸಬಯಸುತ್ತಾರೆ ? ಈ ಸಂತರಿಗೆ ಸತ್ಯ ಹೊಳೆದಿಲ್ಲವೆ ? ಅಥವಾ ಸಂತನ ಕಾಣೆಗೆ ರಾಜಕಾರಣಿ ಅಡ್ಡವಾಗಿ ನಿಂತಿದ್ದಾನೆಯೆ ? ಮಹಾತ್ಮರಿಗೆ ಉಂಟಾಗಿರುವ ಈ ಗೊಂದಲಗೇಡು ಬಹುಶಃ ಎರಡು ಕಾರಣಗಳಿಂದ ಎಂದು ತೋರುತ್ತದೆ.

ಮೊದಲನೆಯದು ಮಹಾತ್ಮರ ಸ್ವಭಾವ. ಪ್ರತಿಯೊಂದು ವಿಷಯದಲ್ಲಿ ಅವರಿಗೆ ಮಗುವಿನ ಮುಗ್ಧತೆಯಿರುತ್ತದೆ ; ಆತ್ಮವಂಚನೆ ಮಾಡಿಕೊಳ್ಳುವ ಮಗುವಿನ ಸ್ವಭಾವ ಇರುತ್ತದೆ. ಮಗುವಿನಂತೆ ಅವರು ತಮಗೆ ನಂಬಬೇಕೆಂದು ಅನ್ನಿಸಿದ್ದನ್ನು ನಂಬಿಬಿಡುತ್ತಾರೆ. ಜಾತಿಯಲ್ಲಿಯ ನಂಬಿಕೆಯನ್ನು ಬಿಟ್ಟಂತೆ ವರ್ಣದಲ್ಲಿಯ ನಂಬಿಕೆಯನ್ನು ಬಿಡಬೇಕೆಂದು ಅನ್ನಿಸುವವರೆಗೆ ಮಹಾತ್ಮರು ಅದನ್ನು ತೊರೆಯಲಾರರು. ಅಲ್ಲಿಯವರೆಗೆ ನಾವು ಕಾಯಬೇಕು.

ಎರಡನೆಯ ಕಾರಣವೆಂದರೆ
ಮಹಾತ್ಮರು ಆಡಬಯಸಿದ ದ್ವಿಪಾತ್ರ , ಮಹಾತ್ಮಾ ಮತ್ತು ರಾಜಕಾರಣಿ ಎರಡೂ ಆಗಬೇಕೆನ್ನುತ್ತಾರೆ. ಮಹಾತ್ಮರಾಗಿ ನಿಂತು ರಾಜಕಾರಣಿಯನ್ನು ಆಧ್ಯಾತ್ಮಿಕ ಪ್ರಭಾವಕ್ಕೆ ಒಳಪಡಿಸಲು ಅವರು ಪ್ರಯತ್ನಿಸುತ್ತಾ ಇರಬಹುದು. ಅದರಲ್ಲಿ ಅವರಿಗೆ ಸಿದ್ದಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ ರಾಜಕಾರಣ ಅವರನ್ನು ನಿಶ್ಚಿತವಾಗಿಯೂ ವ್ಯವಹಾರ ಕುಶಲಿಯಾಗಿ ಮಾರ್ಪಡಿಸಿದೆ. ಸಮಾಜವು ಸಮಗ್ರ ಸತ್ಯವನ್ನು ನುಡಿಯಲಾಗದು. ಸಮಗ್ರ ಸತ್ಯವನ್ನು ಆಡುತ್ತಿದ್ದರೆ ತನ್ನ ರಾಜಕಾರಣಕ್ಕೆ ಅದು ಲೇಸಲ್ಲ . ರಾಜಕಾರಣಿ ಇದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಜಾತಿ , ವರ್ಣವನ್ನು ಮಹಾತ್ಮರು ಯವಾಗಲೂ ಸಮರ್ಥಿಸುವುದೇಕೆಂದು ಈಗ ತಿಳಿಯಿತಲ್ಲವೆ ? ಅವುಗಳನ್ನು ವಿರೋಧಿಸಿದರೆ ರಾಜಕಾರಣದಲ್ಲಿ ತಮಗೆ ಸ್ಥಾನ ಉಳಿಯದು. ಅದೇನೇ ಇರಲಿ , ವರ್ಣದ ಹೆಸರಿನಿಂದ ಜಾತಿಯನ್ನು ಸಮರ್ಥಿಸುವಲ್ಲಿ ಆತ್ಮವಂಚನೆಯ ಜೊತೆಗೆ ಪರಮವಂಚನೆಯನ್ನೂ ಮಾಡುತ್ತಿದ್ದೀರೆಂದು ಮಹಾತ್ಮರಿಗೆ ನಾವು ಹೇಳಲೇಬೇಕಾಗಿದೆ .

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ -1

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ದಲಿತರ ಆಂದೋಲನಕ್ಕಾಗಿ ‘ಅಂಬೇಡ್ಕರ್’

Published

on

ಲಿತರ ಆಂದೋಲನಕ್ಕಾಗಿ ನಿಲ್ಲುವ ‘ ಅಂಬೇಡ್ಕರ್’ರನ್ನು ದುರ್ದೈವವಶಾತ್ ಅವರ ಸುತ್ತ ಆವರಿಸಿರುವ ಪಂಥವಾದೀ ದೃಷ್ಟಿಕೋನಗಳಿಂದ ದೂರ ಮಾಡಬೇಕಾಗುತ್ತದೆ. ಮುಖ್ಯವಾಗಿ ಅಂಬೇಡ್ಕರರು ಒಬ್ಬ ಮೂರ್ತಿಭಂಜಕರಾಗಿದ್ದರು.

ಆದ್ದರಿಂದ ಪಂಥವಾದಿ ದೃಷ್ಟಿಕೋನದ ಮೂರ್ತಿಗಳನ್ನು ಒಡೆಯಲು ನಮಗೆ ಅವರೇ ಸ್ಪೂರ್ತಿ ನೀಡಬೇಕು. ಪ್ರತಿಗಾಮಿಗಳು ಹಾಗೂ ಸ್ವಹಿತಾಸಕ್ತಿಯ ಜನರು ಸೃಷ್ಟಿಸಿರುವ ಮೂರ್ತಿಗಳನ್ನು ಇಂದು ದಲಿತರು ನಿರ್ನಾಮ ಮಾಡಬೇಕಾಗಿದೆ. ಅಂಬೇಡ್ಕರರ ಪುನರ್ ವ್ಯಾಖ್ಯಾನದ ಯೋಜನೆಯು ಕೊಪ್ಪಲುಗಳಿಗೆ ತರಬೇಕಾಗಿದೆ. ಅವರು ನಿಜವಾಗಿಯೂ ಸಲ್ಲುವ ಗ್ರಾಮಾಂತರದ ದಲಿತ ಜನಕೋಟಿಯೆಡೆಗೆ ಅವರನ್ನು ತಿರುಗಿ ಒಯ್ಯಬೇಕಾಗಿದೆ.

ಅಂಬೇಡ್ಕರರ ಒಂದು ಮಹಾನ್ ಗುಣವೆಂದರೆ, ಅವರ ಅಸಂಪ್ರದಾಯಿಕ ನಿಲುವು, ಕರ್ಮಠತನ, ಕಂದಾಚಾರಗಳ ಬಗ್ಗೆ ಅವರಲ್ಲಿದ್ದ ತಿರಸ್ಕಾರದ ಭಾವ. ಯಾರೋ ಅಧಿಕಾರವಾಣಿಯಿಂದ ಹೇಳಿದ್ದಾರೆಂದು ಅವರು ಎಂದೂ, ಯಾವುದನ್ನೂ ಸ್ವೀಕರಿಸಿಲ್ಲ, ಎಲ್ಲಾ ತರದ ಮೋಸ ವಂಚನೆ ತಟವಟ ಕಂಡರೆ ಅವರು ಕಿಡಿಕಾರುತ್ತಿದ್ದರು.

ಯಾವುದೇ ಸಮಸ್ಯೆ ಇರಲಿ, ಅದನ್ನು ಒಬ್ಬ ವಿದ್ಯಾರ್ಥಿಯ ನಿಷ್ಠೆ ಮತ್ತು ಸಂಶೋಧಕನ ಬೌದ್ಧಿಕ ಪ್ರಾಮಾಣಿಕತೆಯಿಂದ ಕೈಗೆತ್ತಿಕೊಳ್ಳುತ್ತಿದ್ದರು. ಸಿದ್ಧಾಂತಗಳು ಕಾಲ-ದೇಶಬದ್ಧವಾಗಿರುತ್ತವೆ ಎಂಬ ದೃಷ್ಟಿ ಅವರದಾಗಿತ್ತು. ಯಾವುದೂ ಚಿರವಲ್ಲ ; ನಿತ್ಯ ಸತ್ಯವಲ್ಲ. ಆದ್ದರಿಂದ ಯಾರೋಬ್ಬರೂ ತನ್ನ ಕಾಲದ ಆಚೆಗೆ ತಮ್ಮ ಪ್ರಸ್ತುತೆಯನ್ನು ಬಯಸಬಾರದು, ನಿರೀಕ್ಷಿಸಲೂ ಬಾರದು-ಎಂಬ ನಿಲುವು ಅವರದು. ಆದ್ದರಿಂದ ಅವರ ಮುಕ್ತತೆಯಿಂದ, ಬದಲಾಗುತ್ತಿರುವ ಈ ಕಾಲದ ತಮ್ಮ ಅನುಭವಗಳಿಗೆ ಅನುಗುಣವಾಗಿ ಚಿಂತಿಸಬೇಕು.

ಈ ದೃಷ್ಟಿಯಿಂದ ನಾವು ಕೆಲವು ಸಂಗತಿಗಳನ್ನು ನೋಡಲು ಇಲ್ಲಿ ಚರ್ಚಿಸಬೇಕಾಗಿದೆ. ಅವುಗಳ ಬಗ್ಗೆ ನಮಗೆ ಲಭಿಸುವ ಸ್ಪಷ್ಟತೆ ನಮ್ಮ ಚಿಂತನೆಯ ಕೆಲಸಕ್ಕೆ ಸಾರ್ಥಕ ಕಾಣಿಕೆ ನೀಡಬಲ್ಲದು.

(ಮುಂದುವರಿಯುವುದು)

ಮೂಲ, ಇಂಗ್ಲಿಷ್ : ಆನಂದ ತೇಲ್ ತುಂಬ್ಡೆ
ಕನ್ನಡಕ್ಕೆ : ರಾಹು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಬಹಿರಂಗ

“ಕೆರೆಯ ನೀರು ಕುಡಿದರೆ ನಾವೇನೂ ಅಮರರಾಗುವುದಿಲ್ಲ” : ಡಾ.ಬಿ.ಆರ್. ಅಂಬೇಡ್ಕರ್

Published

on

1927- ಮಹಾಡ್: ಶಾಂತಿಯುತ ಹೋರಾಟಕ್ಕೆ ಕರೆ

ಹಾಡ್‌ನ ಸವರ್ಣೀಯರು ಚೌಡರ್ ಕೆರೆಯ ನೀರನ್ನು ಅಸ್ಪೃಶ್ಯರು ಬಳಸದಂತೆ ನಿರ್ಬಂಧಿಸಿರುವುದು ಅಸ್ಪೃಶ್ಯರು ಮುಟ್ಟುವುದರಿಂದ ನೀರು ಅಪವಿತ್ರಗೊಳ್ಳುವುದೆಂದಾಗಲೀ, ನೀರು ಆವಿಯಾಗಿ ಮಾಯವಾಗಿಬಿಡುವುದೆಂದಾಗಲೀ ಅಲ್ಲ. ಪುರಾಣ ಗ್ರಂಥಗಳು ಯಾರನ್ನು ಕೀಳು ಎಂದು ಘೋಷಿಸಿವೆಯೋ ಅವರು ನೀರನ್ನು ಮುಟ್ಟಿ ನಾವೂ ನಿಮ್ಮ ಸಮಾನರು ಎಂದು ಘೋಷಿಸಿಕೊಳ್ಳುವುದು ಅವರಿಗಿಷ್ಟವಿಲ್ಲ.

ಸ್ನೇಹಿತರೆ, ಇಷ್ಟರಿಂದಲೇ ನಮ್ಮ ಹೋರಾಟದ ಮಹತ್ವ ಅರ್ಥವಾಗುತ್ತದೆ. ಮಹಾಡ್ ಸತ್ಯಾಗ್ರಹ ಸಮಿತಿ ನಿಮ್ಮನ್ನು ಕೆರೆಯ ನೀರು ಕುಡಿಯಲೆಂದು ಆಹ್ವಾನಿಸಿದೆ ಎಂದು ಭಾವಿಸಬೇಡಿ. ಕೆರೆಯ ನೀರು ಕುಡಿದರೆ ನಾವೇನೂ ಅಮರರಾಗುವುದಿಲ್ಲ. ಇದನ್ನು ಕುಡಿಯದೆಯೂ ಇಷ್ಟು ವರ್ಷ ಬದುಕಿದ್ದೇವೆ. ಚೌಡರ್ ಕೆರೆಗೆ ಅದರ ನೀರು ಕುಡಿಯಲೆಂದಷ್ಟೇ ಹೋಗುತ್ತಿರುವುದಲ್ಲ. ನಾವೂ ಸಹಾ ಉಳಿದವರಂತೇ ಮನುಷ್ಯರು ಎಂದು ಸಾಬೀತುಪಡಿಸಲು ಅಲ್ಲಿ ಹೋಗುತ್ತಿದ್ದೇವೆ. ಈ ಸಭೆಯನ್ನು ಸಮಾನತೆ ಆಶಯವನ್ನು ಕಟ್ಟಿಬೆಳೆಸುವ ಸಲುವಾಗಿ ಕರೆಯಲಾಗಿದೆ ಎಂದು ಸ್ಪಷ್ಟಪಡಿಸುತ್ತೇನೆ. ಭಾರತದ ಇತಿಹಾಸದಲ್ಲಿಯೇ ಎಂದೂ ಈ ರೀತಿಯ ಸಭೆ ನಡೆದಿಲ್ಲವೆಂದೇ ಭಾವಿಸಿದ್ದೇನೆ.

ಈ ಸಭೆಯನ್ನು ಹಿಂದೂ ಸಮಾಜವನ್ನು ಪುನರ್‌ವ್ಯವಸ್ಥೆಗೊಳಿಸುವ ದೃಷ್ಟಿಯಿಂದ ಕರೆಯಲಾಗಿದೆ. ಜಾತಿಹಿಡಿತದಲ್ಲಿ ಸಿಕ್ಕಿರುವ ಹಿಂದೂ ಸಮಾಜವನ್ನು ಆ ಚೌಕಟ್ಟಿನಿಂದ ಬಿಡಿಸಲು ಹೊಡೆದ ಮೊಳೆಗಳನ್ನು ಕಿತ್ತೆಳೆಯಬೇಕಾಗಿದೆ. ಅಂತರ್ಜಾತಿ ವಿವಾಹದಿಂದ ಹಿಡಿದು ಅಂತರ್ಜಾತಿ ಸಾಮಾಜಿಕ ನಿರ್ಬಂಧಗಳ ತನಕ ಎಲ್ಲ ಅಡ್ಡಗೋಡೆಗಳನ್ನು ಕಿತ್ತುಹಾಕಿ ಹಿಂದೂ ಸಮಾಜವೆಂದರೆ ಒಂದೇ ಜಾತಿಯೆಂಬಂತೆ ಮಾಡಬೇಕಾಗಿದೆ. ಹಾಗಲ್ಲದಿದ್ದರೆ ಅಸ್ಪೃಶ್ಯತೆಯ ನಿವಾರಣೆ ಸಾಧ್ಯವಿಲ್ಲ. ಸಮಾನತೆಯನ್ನು ತರುವುದೂ ಸಾಧ್ಯವಿಲ್ಲ.

ನೆನಪಿರಲಿ, ಸಾಮಾಜಿಕ ನಿರ್ಬಂಧ ಮತ್ತು ಅಂತರ್‌ಭೋಜನ ನಿರ್ಬಂಧಗಳು ಹೋಗಿಬಿಟ್ಟರೆ ಅಸ್ಪೃಶ್ಯತೆ ಮಾಯವಾಗುವುದಿಲ್ಲ. ಆ ಎರಡರಿಂದ ಬಿಡುಗಡೆ ಪಡೆದರೆ ಮನೆಯ ಹೊರಗಿನ ಅಸ್ಪೃಶ್ಯತೆ ಸ್ವಲ್ಪ ಮಟ್ಟಿಗೆ ಮಾಯವಾಗಬಹುದು. ಆದರೆ ಮನೆಯೊಳಗಿನ ಅಸ್ಪೃಶ್ಯತೆ ಹಾಗೇ ಉಳಿಯುತ್ತದೆ. ಮನೆಯೊಳಗೂ ಹೊರಗೂ ಅಸ್ಪೃಶ್ಯತೆಯನ್ನು ನಿವಾರಿಸಬೇಕಾಗಿದ್ದರೆ ಅಂತರ್ಜಾತಿ ವಿವಾಹ ನಿರ್ಬಂಧವನ್ನು ಮುರಿದುಹಾಕಬೇಕು. ಮತ್ಯಾವುದರಿಂದಲೂ ಇದನ್ನು ಸಾಧಿಸಲು ಸಾಧ್ಯವಿಲ್ಲ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅಂತರ್ಜಾತಿ ವಿವಾಹ ನಿರ್ಬಂಧ ಮುರಿಯುವುದರಿಂದ ನಿಜವಾದ ಸಮಾನತೆ ಹುಟ್ಟಬಹುದು. ಪ್ರತ್ಯೇಕತೆಯನ್ನು ಅದರ ಮೂಲದಲ್ಲೇ ನಾಶ ಮಾಡಿದರೆ ಉಳಿದದ್ದು ತಂತಾನೇ ನಾಶವಾಗಬಹುದು. ಅಂತರ್ಜಾತಿ ವಿವಾಹ ನಿಷೇಧ ಮುರಿಯುವ ಒಂದು ಕ್ರಿಯೆಯಿಂದ ಸಾಮಾಜಿಕ ನಿರ್ಬಂಧ, ನೀರಿನ ಬಳಕೆ ನಿರ್ಬಂಧ ಮತ್ತು ಅಂತರ್ಭೋಜನ ನಿರ್ಬಂಧಗಳನ್ನು ತಡೆಯಬಹುದು. ನನ್ನ ದೃಷ್ಟಿಯಲ್ಲಿ ಅಸ್ಪೃಶ್ಯತೆ ನಿಷೇಧಕ್ಕಿರುವ ನಿಜವಾದ ದಾರಿ ಅಂತರ್ಜಾತಿ ವಿವಾಹ. ಇದು ಸಮಾನತೆಯನ್ನು ತರಬಲ್ಲದು. ಮನೆಯಲ್ಲಿ ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಬೇಕು; ಇಲ್ಲದಿದ್ದರೆ ಅಸ್ಪೃಶ್ಯತೆ ಬೇರು ಸಮೇತ ನಾಶವಾಗುವುದಿಲ್ಲ. ಆದರೆ ಈ ಕೆಲಸ ಶುರು ಮಾಡುವವರಾರು?

ಜಾತಿಪದ್ಧತಿ ಇರುವತನಕ ಬ್ರಾಹ್ಮಣರು ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾರೆ. ಯಾರೇ ಆದರೂ ತನ್ನ ಕೈಯಲ್ಲಿರುವ ಅಧಿಕಾರವನ್ನು ಸುಲಭದಲ್ಲಿ ಬಿಟ್ಟುಕೊಡಲಾರರು. ಶತಮಾನಗಳಿಂದ ಬ್ರಾಹ್ಮಣರು ಉಳಿದ ಜಾತಿಗಳ ಮೇಲೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಅದನ್ನು ಬಿಟ್ಟುಕೊಟ್ಟು ಉಳಿದವರೆಲ್ಲ ತನ್ನ ಸಮಾನರು ಎಂದು ಅವರೆಂದೂ ಹೇಳಲಾರರು. ಜಪಾನಿನ ಸಮುರಾಯ್‌ಗಳಂತೆ ಬ್ರಾಹ್ಮಣರು ದೇಶಭಕ್ತರಲ್ಲ. ಸಮುರಾಯ್‌ಗಳಂತೆ ಸಮಾನತೆಯನ್ನು ಆಧರಿಸಿದ ರಾಷ್ಟ್ರೀಯ ಸಮಗ್ರತೆಗಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ತ್ಯಾಗ ಮಾಡುವವರೂ ಅಲ್ಲ. ಅವರಷ್ಟೇ ಅಲ್ಲ, ಉಳಿದ ಹಿಂದೂ ಜಾತಿಗಳೂ ಈ ಕೆಲಸ ಕೈಗೆತ್ತಿಕೊಳ್ಳುವಂತೆ ಕಾಣುತ್ತಿಲ್ಲ.

ಆದ್ದರಿಂದ ಅಸ್ಪೃಶ್ಯತೆ ನಿವಾರಣೆ ಮತ್ತು ಸಮಾನತೆಯನ್ನು ನೆಲೆಗೊಳಿಸುವ ಕೆಲಸ ನಮ್ಮಿಂದಲೇ ಆಗಬೇಕಾಗಿದೆ. ಉಳಿದವರು ಇದನ್ನು ಮಾಡಲಾರರು. ಈ ಗುರಿಯನ್ನು ಸಾಧಿಸುವುದೇ ನಮ್ಮ ಬದುಕಿನ ಉದ್ದೇಶ ಎಂದು ಪ್ರಾಮಾಣಿಕವಾಗಿ ಭಾವಿಸಿದರೆ ಜೀವನಕ್ಕೆ ನಿಜವಾದ ಅರ್ಥ ಸಿಗುತ್ತದೆ. ನಮ್ಮನ್ನು ಕಾಯುತ್ತಿರುವ ಈ ಮೌಲ್ಯವನ್ನು ಸ್ವೀಕರಿಸೋಣ.

ನಮ್ಮ ಉನ್ನತಿಗಾಗಿ ಈ ಹೋರಾಟ. ಆದ್ದರಿಂದ ನಮ್ಮ ಏಳ್ಗೆಗೆ ತಡೆಯಾಗಿರುವ ಎಲ್ಲವನ್ನು ನಿವಾರಿಸಿ ಈ ಹೋರಾಟಕ್ಕೆ ತೊಡಗೋಣ. ಯಾವ ದಿಕ್ಕಿಗೇ ಹೋದರೂ ಅಸ್ಪೃಶ್ಯತೆ ಹೇಗೆ ನಮ್ಮ ಅಸ್ತಿತ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿದೆ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಒಂದುಕಾಲದಲ್ಲಿ ನಮ್ಮ ಜನ ಸೈನ್ಯದ ನೆಪದಲ್ಲಿ ಒಂದಾಗಿದ್ದರು. ಅದೇ ಉದ್ಯೋಗವಾಗಿತ್ತು. ಅನ್ನದಾತನಾಗಿತ್ತು. ನಮ್ಮ ಜೊತೆಗಿದ್ದ ಬೇರೆ ವರ್ಗಗಳು ಈಗ ಸೈನ್ಯ, ಪೋಲಿಸ್, ನ್ಯಾಯಾಲಯ, ಕಚೇರಿ ಎಲ್ಲ ಕಡೆಯೂ ಜೀವನ ನಿರ್ವಹಣೆಯ ಉದ್ಯೋಗ ಗಳಿಸಿಕೊಂಡಿದ್ದರೆ ಅಸ್ಪೃಶ್ಯರನ್ನು ಮಾತ್ರ ಆ ಎಲ್ಲ ಕಡೆಯಿಂದ ಹೊರಗಿರಿಸಲಾಗಿದೆ.

ಕಾನೂನು ಈ ಉದ್ಯೋಗಗಳಿಂದ ನಮ್ಮನ್ನು ದೂರವಿಟ್ಟಿಲ್ಲ. ಅದನ್ನು ಕಾನೂನು ಅನುಮತಿಸಿದೆ. ಆದರೆ ನಮ್ಮನ್ನು ಉಳಿದ ಹಿಂದೂಗಳು ಅಸ್ಪೃಶ್ಯರನ್ನಾಗಿ, ಕೀಳಾಗಿ ಕಾಣುವುದರಿಂದ ಸರ್ಕಾರಿ ಕೆಲಸಗಳು ಸಿಗುತ್ತಿಲ್ಲ. ಯಾವುದೇ ವ್ಯಾಪಾರ ವ್ಯವಹಾರ ಶುರುಮಾಡಲಾಗುತ್ತಿಲ್ಲ. ವ್ಯಾಪಾರ ಶುರುವಿಗೆ ನಮ್ಮ ಬಳಿ ಮೂಲಧನವಿಲ್ಲ ಎಂದು ಒಪ್ಪಿಕೊಂಡರೂ ನಿಜವಾದ ಕಷ್ಟ ಇರುವುದು ಜನರು ನಮ್ಮನ್ನು ಅಸ್ಪೃಶ್ಯರೆಂದು ಪರಿಗಣಿಸಿ ನಮ್ಮಿಂದ ಸಾಮಾನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ.

ಒಟ್ಟಾರೆ ಹೇಳಬೇಕೆಂದರೆ ಅಸ್ಪೃಶ್ಯತೆ ಒಂದು ಸರಳ ವಿಷಯವಲ್ಲ. ನಮ್ಮ ಬಡತನ, ಕೀಳರಿಮೆ ಎಲ್ಲದರ ತಾಯಿ ಅದು. ನಮ್ಮ ಇಂದಿನ ಸ್ಥಿತಿಯ ಕಾರಣ ಅದು. ಅದರಿಂದ ಹೊರಬಂದು ಎದ್ದುನಿಲ್ಲಬೇಕಾದರೆ ನಾವು ಈ ಹೋರಾಟವನ್ನು ಕೈಗೆತ್ತಿಕೊಳ್ಳಲೇಬೇಕು. ಮತ್ಯಾವುದರಿಂದಲೂ ನಮಗೆ ರಕ್ಷಣೆಯಿಲ್ಲ. ಇದು ನಮ್ಮ ಲಾಭಕ್ಕಾಗಿ ಮಾತ್ರವಲ್ಲ, ಸಮಗ್ರ ದೇಶದ ಹಿತಕ್ಕಾಗಿ ನಾವು ಕೈಗೆತ್ತಿಕೊಳ್ಳಬೇಕಾಗಿರುವ ಕೆಲಸ.

ನಿಜವಾದ ಸಾಮಾಜಿಕ ಕ್ರಾಂತಿಗಾಗಿ ನಮ್ಮ ಪ್ರಯತ್ನ ಶುರುವಾಗಿದೆ. ಸಿಹಿಮಾತುಗಳಾಡಿ ನಮ್ಮನ್ನು ಸುಮ್ಮನಾಗಿಸಬಯಸುವವರ ಮಾತುಗಳಿಂದ ಯಾರೂ ಮೋಸ ಹೋಗದಿರಲಿ. ಧೃಢವಿಶ್ವಾಸವೊಂದೇ ಈ ಚಳುವಳಿಯ ಮೂಲಸೆಲೆ, ಅದನ್ನು ಮುನ್ನಡೆಸುವ ಶಕ್ತಿ. ಯಾರೂ ಇದನ್ನು ತಡೆಯಲಾರರು. ಇಂದು ಶುರುವಾಗಿರುವ ಸಾಮಾಜಿಕ ಕ್ರಾಂತಿ ಶಾಂತಿಯುತವಾಗಿ ತನ್ನ ಗುರಿ ಮುಟ್ಟಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಶಾಂತಿಯುತವಾಗಿ ಈ ಕ್ರಾಂತಿ ಮುಂದುವರೆಯುವುದು ಬಿಡುವುದು ನಮಗಿಂತ ಹೆಚ್ಚು ನಮ್ಮ ವಿರೋಧಿಗಳನ್ನವಲಂಬಿಸಿದೆ. ಹಿಂಸೆಯೋ, ಶಾಂತಿಯುತ ಕೊನೆಯೋ – ಅದು ಸವರ್ಣೀಯ ಹಿಂದೂಗಳ ನಡವಳಿಕೆಯನ್ನು ಸಂಪೂರ್ಣ ಅವಲಂಬಿಸಿದೆ. ನಮ್ಮ ವಿರೋಧಿಗಳಿಗೆ ಹೇಳುತ್ತಿದ್ದೇವೆ: ನಮ್ಮನ್ನು ತಡೆಯಬೇಡಿ. ಆ ಸಂಪ್ರದಾಯ, ಪುರಾಣಗಳನ್ನು ಅತ್ತ ಬಿಸಾಡಿ. ನ್ಯಾಯದಂತೆ ನಡೆಯಿರಿ. ನಾವು ಶಾಂತಿಯುತವಾಗಿ ಮುಂದುವರೆಯುತ್ತೇವೆಂದು ನಿಮಗೆ ಭರವಸೆ ಕೊಡುತ್ತೇವೆ.

-ಡಾ.ಬಿ.ಆರ್. ಅಂಬೇಡ್ಕರ್

(ಮಹಾಡ್ ಕೆರೆ ನೀರು ಹೋರಾಟದ ಮುನ್ನ ಮಾಡಿದ ಭಾಷಣದ ಸಂಗ್ರಹ ರೂಪ.
-ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ: ರಾಮಚಂದ್ರ ಗುಹಾ
-ಪಾಯ್ಸನ್ಡ್ ಬ್ರೆಡ್: ಟ್ರಾನ್ಸ್‌ಲೇಷನ್ಸ್ ಫ್ರಂ ಮಾಡರ್ನ್ ಮರಾಠಿ ದಲಿತ್ ಲಿಟರೇಚರ್. ಸಂ:ಅರ್ಜುನ್ ದಾಂಗ್ಳೆ.
-ಮೂಲ: ಚಾಂಗ್‌ದೇವ್ ಖೈರ್‌ಮೋಡೆ ಬರಹಕ್ಕಿಳಿಸಿದ ಭಾಷಣ. -ಇಂಗ್ಲಿಷ್ ಅನುವಾದ: ರಮೇಶ್ಚಂದ್ರ ಸರ್ಕಾರ್,
-ಕನ್ನಡಕ್ಕೆ – ಡಾ. ಎಚ್.ಎಸ್. ಅನುಪಮ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಬಹಿರಂಗ

ಜಾತಿ ವ್ಯವಸ್ಥೆ ಮತ್ತು ಭಾಷಾವಾರು ‌ಪ್ರಾಂತ್ಯ : ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಿಷ್ಟು..!

Published

on

ಜಾತಿ ವ್ಯವಸ್ಥೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಪಂಜಾಬದ ಪೆಪ್ಪುದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಜಾಟರು ಎಲ್ಲ ಕಡೆಗೆ ಪ್ರಬಲ ಇದ್ದಾರೆ. ಹರಿಜನರು ಜಾಟರ ಅಧೀನರಾಗಿದ್ದು, ಅವರನ್ನು ಅವಲಂಬಿಸಿರುತ್ತಾರೆ.

ಆಂಧ್ರದ ಉದಾಹರಣೆ ತೆಗೆದುಕೊಳ್ಳಿ. ಈ ಭಾಷಾವಾರು ಪ್ರದೇಶದಲ್ಲಿ ಎರಡು – ಮೂರು ಪ್ರಮುಖ ಜಾತಿಗಳಿರುತ್ತವೆ. ಒಂದೊಂದು ಭಾಗದಲ್ಲಿ ಒಂದೊಂದು ಪ್ರಮುಖ ಇರುತ್ತವೆ. ರೆಡ್ಡಿ, ಕಮ್ಮ ಇಲ್ಲವೆ ಕಾಮ ಜಾತಿಯವರು. ಎಲ್ಲ ಭೂಮಿ, ಎಲ್ಲ ಕಾರ್ಯಾಲಯ, ಎಲ್ಲಿ ವ್ಯಾಪಾರವನ್ನು ಇವರೇ ಹಿಡಿದಿರುತ್ತಾರೆ. ಎಲ್ಲ ಹರಿಜನರು ಅವರ ಅಧೀನರಾಗಿದ್ದು, ಅವರನ್ನು ಅವಲಂಬಿಸಿ ಜೀವಿಸುತ್ತಾರೆ. ಮಹಾರಾಷ್ಟ್ರದ ಉದಾಹರಣೆ ತೆಗೆದುಕೊಳ್ಳಿ, ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಯಲ್ಲಿ ಮರಾಠರು ಅಧಿಕ ಸಂಖ್ಯೆಯಲ್ಲಿರುತ್ತಾರೆ.

ಬ್ರಾಹ್ಮಣರು, ಗುಜಾರರು, ಕೋಳಿಗಳು ಮತ್ತು ಹರಿಜನರು ಮರಾಠರಿಗೆ ಅಧೀನರಾಗಿದ್ದು, ಅವರೊಂದಿಗೆ ಸಹಕರಿಸುತ್ತಾರೆ ಬ್ರಾಹ್ಮಣರು ಮತ್ತು ಬನಿಯಾರು ಯಾರ ಭೀತಿಯೂ ಇರದೆ ಜೀವಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾಗಿರುತ್ತದೆ. ಗಾಂಧೀಜಿಯ ಹತ್ಯೆಯಾದ ಬಳಿಕ ಮರಾಠರು ಬ್ರಾಹ್ಮಣ ಮತ್ತು ಬನಿಯಾರನ್ನು ಚೆನ್ನಾಗಿ ಥಳಿಸಿದ ಪರಿಣಾಮವಾಗಿ, ಸುರಕ್ಷಿತ ಸ್ಥಳಗಳೆಂದು ಪಟ್ಟಣ ಸೇರಿದ್ದಾರೆ. ಬಡ ಹರಿಜನರು ಮತ್ತು ಕೋಳಿಗಳು ಮತ್ತು ಮಾಲಿಗಳು ಮಾತ್ರ ಬಹುಸಂಖ್ಯೆಯ ಮರಾಠರ ಪೀಡೆಯನ್ನು ಅನುಭವಿಸುತ್ತ ಅಲ್ಲೇ ಉಳಿದಿದ್ದಾರೆ.

ಈ ಜಾತಿ ವ್ಯವಸ್ಥೆಯನ್ನು ಮರೆಯುವುದು ಅಪಾಯಕರ. ಭಾಷಾವಾರು ಪ್ರಾಂತದಲ್ಲಿ ಅಲ್ಪಸಂಖ್ಯಾತರ ಸಮಾಜಗಳಿಗೆ ಯಾವ ಭವಿಷ್ಯ ಇರುತ್ತದೆ ? ( ವಿಧಾನ ಸಭೆ ಮತ್ತು ಲೋಕ ಸಭೆಗಳಿಗೆ ಶಾಸಕಾಂಗಕ್ಕೆ ಚುನಾಯಿತರಾಗುವ ಸಾಧ್ಯತೆ ಇರುತ್ತದೆಯೆ ? ರಾಜ್ಯ ಸರಕಾರದ ಸೇವೆಯಲ್ಲಿ ಸ್ಥಳ ದೊರಕಿಸಲು ಅವರಿಗೆ ಶಕ್ಯವಿರುತ್ತದೆಯೆ ? ಅವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಕಡೆಗೆ ಸರಕಾರದ ಗಮನ ಹರಿಯುವುದೆಂದು ನಿರೀಕ್ಷಿಸಬಹುದೆ ? ಇಂಥ ಸ್ಥಿತಿಯಲ್ಲಿ, ಭಾಷಾವಾರು ಪ್ರಾಂತಗಳನ್ನು ನಿರ್ಮಿಸುವುದೆಂದರೆ ಬಹುಸಂಖ್ಯೆಯ ಸಮಾಜದವರ ಕೈಗೆ ಸ್ವರಾಜ್ಯವನ್ನು ಕೊಡುವುದೆಂದು ಅರ್ಥ, ಗಾಂಧೀಜಿ ಅವರು ದೊರಕಿಸಿದ ಸ್ವರಾಜ್ಯಕ್ಕೆ ಎಂಥ ದುರ್ದೆಶೆ ? ಸಮಸ್ಯೆಯ ಈ ಮುಖಕಾಣಿಸದಿದ್ದವರಿಗೆ, ಭಾಷಾವಾರು ಪ್ರಾಂತದ ಬದಲು ಜಾಟ ಪ್ರಾಂತ, ರೆಡ್ಡಿ ಪ್ರಾಂತ, ಮರಾಠ ಪ್ರಾಂತ ಎಂದರೆ ಹೆಚ್ಚು ಅರ್ಥವಾಗುತ್ತದೆ.

ಗಮನಾರ್ಹ ಮೂರನೆಯ ಸಮಸ್ಯೆ ಎಂದರೆ – ಭಾಷಾವಾರು ಪ್ರಾಂತ ರಚಿಸುವುದೆಂದರೆ ಒಂದು ಭಾಷೆಯನ್ನು ಆಡುವ ಜನರನ್ನೆಲ್ಲ ಒಂದೇ ರಾಜ್ಯದಲ್ಲಿ ಸಂಘಟಿಸುವುದೇ ಆಗಿದೆ. ಮರಾಠರನ್ನೆಲ್ಲ ಒಂದೇ ಮಹಾರಾಷ್ಟ್ರದಲ್ಲಿ ಕೂಡಿಸಬೇಕೆ ? ಆಂಧ್ರಪ್ರದೇಶವನ್ನೆಲ್ಲ ಒಂದೇ ಆಂಧ್ರ ರಾಜ್ಯದಲ್ಲಿ ಸೇರಿಸಬೇಕೆ ? ಒಂದು ಭಾಷೆ ಆಡುವವರನ್ನು ಒಂದೆಡೆ ಸೇರಿಸುವ ಸಮಸ್ಯೆ ಹೊಸರಾಜ್ಯಗಳಿಗಷ್ಟೇ ಸಂಬಂಧಿಸಿದುದಲ್ಲ.ಈಗ ಅಸ್ತಿತ್ವದಲ್ಲಿರುವ ಭಾಷಾವಾರು ಪ್ರಾಂತಗಳಾದ ಉತ್ತರ ಪ್ರದೇಶ , ಬಿಹಾರ ಮತ್ತು ಪಶ್ಚಿಮ ಬಂಗಾಳಗಳಿಗೂ ಸಂಬಂಧಿಸಿರುತ್ತದೆ. ಹಿಂದೀ ಮಾತನಾಡುವವರನ್ನೆಲ್ಲ ಉತ್ತರ ಪ್ರದೇಶದಲ್ಲಿರುವಂತೆ ಒಂದೇ ಪ್ರಾಂತದಲ್ಲಿ ಏಕೆ ಸೇರಿಸಬೇಕು.

ಮೌಲ್ಯ ಚಕ್ರಾಧಿಪತ್ಯದ ವಿಚ್ಛಿದ್ರತೆಯ ನಂತರ ಭರತಖಂಡದ ಪರಿಸ್ಥಿತಿ ಏನಾಯಿತೋ ಅದೇ ಪರಿಸ್ಥಿತಿ ಏಕತ್ರೀಕರಣದ ಫಲವಾಗಿ ಸಂಭವಿಸುವ ಪ್ರತ್ಯೇಕತಾ ಪ್ರಜ್ಞೆಯಿಂದ ಈ ರಾಷ್ಟ್ರಕ್ಕೊದಗುತ್ತದೆ. ವಿಧಿ ಈ ರಾಷ್ಟ್ರದ ಭವಿಷ್ಯವನ್ನು ಆ ಕಡೆಗೆ ನೂಕುತ್ತಿದೆಯೆ ? ಹಾಗೆಂದರೆ ಭಾಷಾವಾರು ಪ್ರಾಂತ ರಚನೆಗೆ ಸಮರ್ಥನೆ ಇಲ್ಲವೆಂದಲ್ಲ. ಭಾಷಾವಾರು ಪ್ರಾಂತದ ಹೆಸರಿನಲ್ಲಿ ಬಹುಸಂಖ್ಯಾತ ಜಾತಿಯವರಿಂದ ಅಧಿಕಾರದ ದುರುಪಯೋಗ ಆಗದಂತೆ ನಿರ್ಬಂಧ ಮತ್ತು ಸಮಯದಂಡಿಗಳು ಇರಬೇಕೆಂಬುದು ಇದರ ಅರ್ಥ.

ಡಾ.ಬಿ.ಆರ್. ಅಂಬೇಡ್ಕರ್
(ಬರಹಗಳ ಸಂಗ್ರಹದಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending