Connect with us

ಬಹಿರಂಗ

ಬ್ರಾಹ್ಮಣ, ಪೌರೋಹಿತ್ಯ ಮತ್ತು ವೃತ್ತಿ ದುರುಪಯೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ತಪ್ಪದೆ ಓದಿ

Published

on

ಜೀವನಾಂತ್ಯದವರೆಗೆ ಬ್ರಾಹ್ಮಣರಾಗಿಯೇ ಉಳಿಯಲು ಬಯಸದಂತಹ ಬ್ರಾಹ್ಮಣರು ಅನೇಕರಿದ್ದಾರೆಂಬುದು ವಸ್ತುಸ್ಥಿತಿ. ಆ ಮಾತು ಹಾಗಿರಲಿ, ತಮ್ಮ ಕುಲಪರಂಪರಾಗತ ವೃತ್ತಿಯಾದ ಪೌರೋಹಿತ್ಯ ಅಥವಾ ಪೂಜಾರಿತನಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಬ್ರಾಹ್ಮಣರ ವಿಷಯವಾಗಿ ಏನನ್ನೋಣ? ಇದು ಪ್ರಾಚೀನ ಕಾಲದಿಂದ ನಡೆದುಬಂದ ತಮ್ಮ ಕುಲವೃತ್ತಿಯೆಂಬ ಶ್ರದ್ದೆಯಿಂದ ಅದನ್ನು ಅವರು ನಡೆಸುವರೆ? ಅಥವಾ ಧನಲಾಭದ ದುರಾಸೆಯಿಂದ ಆ ವೃತ್ತಿಗೆ ಅಂಟಿಕೊಂಡಿರುವರೇ? ಇಂತಹ ಪ್ರಶ್ನೆಗಳನ್ನು ಮಹಾತ್ಮರು ವಿಚಾರಿಸುವುದಕ್ಕೆ ಹೋಗುವುದಿಲ್ಲ. ಧಾರಾಳವಾಗಿ ಕೊಟ್ಟ ದಾನದಿಂದ ಜೀವಿಸುತ್ತಾ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನಕ್ಕೆ ಬೀರುತ್ತಾ ಇರುವ ನಿಜವಾದ ಬ್ರಾಹ್ಮಣರು ಇದ್ದಾರೆಂಬುದು ಮಹಾತ್ಮರಿಗೆ ತೃಪ್ತಿಕರವಾಗಿದೆ.

ಜನಕ್ಕೆ ಆಧ್ಯಾತ್ಮಿಕ ಸಂಪತ್ತನ್ನು ಒಯ್ದು ಮುಟ್ಟಿಸುವ ಕಾರ್ಯದಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣನ ಇನ್ನೊಂದು ಚಿತ್ರಣವನ್ನು ನಾವು ಕೊಡಬಲ್ಲೆವು. ಬ್ರಾಹ್ಮಣನು ಪ್ರೇಮದೇವತೆಯಾದ ವಿಷ್ಣುವಿಗೆ ಪೂಜಾರಿಯಾಗಬಲ್ಲನು.ಪ್ರಳಯದೇವತೆಯಾದ ಶಂಕರನಿಗೂ ಅವನು ಪೂಜಾರಿಯಾಗಬಲ್ಲನು. ಜಗತ್ತಿಗೆ ಪ್ರೇಮದ ಸಂದೇಶವನ್ನು ಬೀರಿದ ಮಹಾಗುರು ಬುದ್ಧನಿಗೂ ಅವನು ಪೂಜಾರಿಯಾಗಬಲ್ಲನು. ಪ್ರತಿದಿನ ಪಶುಬಲಿಯನ್ನು ಬೇಡುವ ಕಾಳಿದೇವಿಗೂ ಅವನು ಪೂಜಾರಿ, ಕ್ಷತ್ರಿಯ ದೇವನಾದ ರಾಮನಿಗೆ ಅವನು ಪೂಜಾರಿ, ಕ್ಷತ್ರಿಯರ ನಾಶಕ್ಕೆ ಅವತಾರವೆತ್ತಿದ ಪರಶುರಾಮನಿಗೂ ಅವನು ಪೂಜಾರಿ, ಸೃಷ್ಟಿಕರ್ತನಾದ ಬ್ರಹ್ಮದೇವರಿಗೂ ಅವನು ಪೂಜಾರಿಯಾಗುತ್ತಾನೆ. ಬ್ರಹ್ಮನಿಗೆ ವಿರೋಧಿಯಾದ ಅಲ್ಲಾ ದೇವರಿಗೆ ಕೂಡ ಇವನು ಪೂಜಾರಿಯಾಗಬಲ್ಲನು, ಇದು ಸತ್ಯದ ಚಿತ್ರಣವಲ್ಲವೆಂದು ಯಾರೂ ಹೇಳಲಾರರು.

ಪರಸ್ಪರ ವಿರುದ್ಧ ಗುಣಗಳುಳ್ಳ ವಿವಿಧ ದೇವತೆಗಳಿಗೆಲ್ಲಾ ನಿಷ್ಠೆ ತೋರುವವನಾದರೆ ಆ ಮನುಷ್ಯ ಪ್ರಾಮಾಣಿಕ ಭಕ್ತನೆಂದು ಹೇಳಲಾಗದು. ಇದು ತಮ್ಮ ಧರ್ಮದಲ್ಲಿರುವ ಔದಾರ್ಯ ಭಾವನೆಗೆ ಸಹಿಷ್ಣುತಾ ಭಾವಕ್ಕೆ ಸಾಕ್ಷಿಯೆಂದು ಹಿಂದೂಗಳು ನಂಬುತ್ತಾರೆ. ಇದು ಸಹಿಷ್ಣುತೆಯಾಗಿರದೆ ಎಲ್ಲ ದೇವರ ಬಗೆಗೆ ತಾಳಿರುವ ಉಪೇಕ್ಷೆ ಅಥವಾ ಅಶಕ್ತನು ತೋರುವ ಉದಾಸೀನ ಪ್ರವೃತ್ತಿ ಆಗಿರಬಹುದು .ಈ ಎರಡು ಮನೋವೃತ್ತಿಗಳು ಹೊರನೋಟಕ್ಕೆ ಒಂದೇ ಎಂಬಂತೆ ತೋರಬಹುದು. ಆದರೆ ಪರೀಕ್ಷಿಸಿ ನೋಡಿದಾಗ ಅವೆರಡರಲ್ಲಿ ಮೂಲಭೂತವಾದ ಭೇದವನ್ನು ಕಾಣಬಹುದು. ಅನೇಕ ದೇವತೆಗಳಿಗೆ ಪೂಜೆ ಸಲ್ಲಿಸುವುದು ಸಹಿಷ್ಣುತೆಗೆ ಅಥವಾ ಉದಾರ ಭಾವನೆಗೆ ನಿದರ್ಶನವೆಂದು ಹೇಳಲಾಗುತ್ತದೆ.

ಸಂದರ್ಭಕ್ಕೆ ತಕ್ಕಂತೆ ಅನುಕೂಲಸಿಂಧುವನ್ನಾಶ್ರಯಿಸುವ ವಂಚಕ ವೃತ್ತಿಗೂ ಇದು ನಿದರ್ಶನವಾಗಬಹುದಲ್ಲವೆ? ಈ ಸಹಿಷ್ಣುತೆ ಕೇವಲ ಕಪಟಾಚರಣೆಯೆಂದು ನನಗೆ ಖಾತ್ರಿಯಾಗಿದೆ. ತನಗೆ ಲಾಭಕರವಾಗುವಂತಿದ್ದರೆ ಯಾವ ದೇವರನ್ನಾದರೂ ಪೂಜಿಸಲು, ಯಾವ ದೇವರಿಗಾದರೂ ಭಕ್ತನಾಗಲು ಸಿದ್ದನಾಗುವಂತಹ ಮನುಷ್ಯನಲ್ಲಿ ಅದೆಂತಹ ಆಧ್ಯಾತ್ಮಿಕ ಸಂಪತ್ತು ತುಂಬಿದ್ದೀತು? ಇಂತಹವರಲ್ಲಿ ಆಧ್ಯಾತ್ಮಿಕ ಸಂಪತ್ತಿಲ್ಲವೆಂಬುದಷ್ಟೇ ಅಲ್ಲ, ಶ್ರದ್ದೆಯಿಲ್ಲದೆ , ನಿಷ್ಠೆಯಿಲ್ಲದೆ, ತಂದೆಯಿಂದ ಮಗನಿಗೆ ಪರಂಪರಾಗತವಾಗಿ ಬಂದ ಯಾಂತ್ರಿಕ ವೃತ್ತಿಯೆಂದು ಅದನ್ನು ಪಾಲಿಸುತ್ತಾ ಬರುವುದು ಸದ್ಗುಣವಲ್ಲ. ಸಚ್ಚಾರಿತ್ರವೂ ಅಲ್ಲ ; ಅದು ಧರ್ಮದ ಸೇವೆಯಾಗಿರುವ ಒಂದು ಉದಾತ್ತ ವೃತ್ತಿಯ ದುರುಪಯೋಗವೇ ಆಗಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

“ಸುರರು ಮತ್ತು ಅಸುರರು ಇಬ್ಬರೂ ಒಂದೇ ತಂದೆಯ ಮಕ್ಕಳು” : ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ ಕಶ್ಯಪ ಎಂಬ ಒಬ್ಬನೇ ಸಾಮಾನ್ಯ ತಂದೆಯ ವಂಶಜರು. ಇದರ ಹಿಂದಿರುವ ಕತೆ ಎಂದರೆ, ದಕ್ಷ ಪ್ರಜಾಪತಿಗೆ 60 ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ 13 ಮಂದಿಯನ್ನು ಕಷ್ಯಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಷ್ಯಪನ ಆ 13 ಮಂದಿ ಹೆಂಡತಿಯರಲ್ಲಿ ದಿತಿ ಮತ್ತು ಅದಿತಿ ಕೂಡ ಇಬ್ಬರಾಗಿದ್ದರು. ದಿತಿಗೆ ಹುಟ್ಟಿದ ಮಕ್ಕಳನ್ನು ಅಸುರರು ಎಂದು ಕರೆಯಲಾಗುತ್ತಿತ್ತು. ಅದಿತಿಗೆ ಹುಟ್ಟಿದ ಮಕ್ಕಳನ್ನು ಸುರರು ಅಥವಾ ದೇವಾ(Devas)ರುಗಳು ಎಂದು ಕರೆಯಲಾಗುತ್ತಿತ್ತು. ಅಂದಹಾಗೆ ಈ ಇಬ್ಬರೂ (ಸುರರು ಮತ್ತು ಅಸುರರು) ಈ ಪ್ರಪಂಚದ ಸಾರ್ವಭೌಮತ್ವಕ್ಕಾಗಿ ಬಹಳ ದೀರ್ಘ ಮತ್ತು ರಕ್ತಪಾತದ ಯುದ್ಧ ನಡೆಸಿದರು. ಅನುಮಾನವೇ ಬೇಡ ಇದು ಪುರಾಣ. ಈ ಪುರಾಣವನ್ನು ಇತಿಹಾಸ ಎನ್ನುವುದು ಅತಿಶಯೋಕ್ತಿಯೆನಿಸಿದರೂ ಆಗಲೂ ಇದು ಇತಿಹಾಸವಾಗಿದೆ”. (ಬಾಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.419)

ಅಂಬೇಡ್ಕರರು ಪ್ರಸ್ತಾಪಿಸುವ ಈ ಪುರಾಣ ಕಂ ಇತಿಹಾಸದ ಪ್ರಕಾರ ಅಸುರರು ಮತ್ತು ಸುರರು ಇಬ್ಬರೂ ಒಂದೇ ತಂದೆಯ ಆದರೆ ಇಬ್ಬರು ಬೇರೆ ಬೇರೆ ತಾಯಿಯ ಮಕ್ಕಳು. ಅರ್ಥಾತ್‌ ಇಬ್ಬರೂ ಅಣ್ಣ ತಮ್ಮಂದಿರು. ಹೀಗಿರುವಾಗ ಇಲ್ಲಿ ಸುರರ ಸ್ವಂತ ಸೋದರರಾದ ಅಸುರರನ್ನು ಶೋಷಿತ ಸಮುದಾಯಗಳು ಆದರ್ಶವಾಗಿ ತೆಗೆದುಕೊಳ್ಳುವುದು ಹೇಗೆ? ಈ ಕಾರಣಕ್ಕಾಗಿ ಈ ಅಸುರರು ಮತ್ತು ಸುರರ ಗೋಜಲಾದರೂ ನಮಗೆ ಏಕೆ? ಸುಮ್ಮನೆ ಗೌತಮ ಬುದ್ಧರ ಬಳಿ ತೆರಳಿದರೆ ಸಾಕಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು

Published

on

  • ಹ.ರಾ.ಮಹಿಶ

ಸೇಫ್ ಝೋನ್ ನಲ್ಲಿ ದೂರದಿಂದ ನಿಂತು‌ ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ‌ ಮೈ ಹೊಳಪು, ಮತ್ತು‌ ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!

ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು‌ ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!

ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!

“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!

ಛೆ…

ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ‌ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು‌ ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….

ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ‌ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?

ಮತ್ತು 1955 ರಲ್ಲಿ‌ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?

ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…

ಅಕಸ್ಮಾತ್ ‌ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.

ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending