Connect with us

ಬಹಿರಂಗ

ಮನುಸ್ಮೃತಿ ಯಾಕೆ ಬೇಡ : ಡಾ.ಬಿ.ಆರ್.ಅಂಬೇಡ್ಕರ್ ಹೇಳಿರೋದಿಷ್ಟು..!

Published

on

ಹಿಂದೂಗಳನ್ನು ತರ್ಕದಿಂದ ಮನವೊಲಿಸಿ , ತರ್ಕವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ ? ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ, ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ ? ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು ಶಾಸನಗಳನ್ನು ಮನುಸ್ಮೃತಿ ವಿಧಿಸಿದೆ . “ ವೇದ, ಶೃತಿಃ, ಸದಾಚಾರಃ ಸ್ವಸ್ಯಚಃ ಪ್ರಿಯಮಾತ್ಮಾನಃ ”, ತರ್ಕ ಮಾಡುವ ಬುದ್ಧಿಗೆ ಇಲ್ಲಿ ಆಸ್ಪದವೇ ಇಲ್ಲ.

ಸದಾಚಾರ ಇವುಗಳನ್ನುಳಿದ ಬೇರೆ ಯಾವುದನ್ನೂ ಹಿಂದೂವು ಅನುಸರಿಸಕೂಡದು. ಮೊದಲನೆಯದಾಗಿ, ವೇದಗಳಲ್ಲಿ ಅಥವಾ ಸೃತಿಗಳಲ್ಲಿ ಹೇಳಿರುವ ಮಾತುಗಳನ್ನು ಅರ್ಥ ಮಾಡುವಾಗ ಸಂಶಯ ಹುಟ್ಟಿಕೊಂಡರೆ ಹೇಗೆ ? ಈ ವಿಷಯದಲ್ಲಿ ಮನುವಿನ ಅಭಿಪ್ರಾಯ ಸ್ಪಷ್ಟವಾಗಿದೆ. ಮನು ಹೇಳುತ್ತಾನೆ ,

ಯೋ ವ ಮನೈತ ತೇ ಮೂಲೇ ಹೇತು ಶಾಸ್ತಾಶ್ರ ಯಾದ್ವಿಜಃ |
ಸ ಸಾಧುಭಿರ್ಬಹಿಷ್ಕಾರ್ಯೊ ನಾಸ್ತಿಕೋ ವೇದನಿಂದಕಃಃ||

ಈ ವಿಧಿಯ ಮೇರೆಗೆ ವೇದ, ಸೃತಿಗಳ ಅರ್ಥ ವಿವರಣೆಯಲ್ಲಿ ಸ್ವತಂತ್ರ ಬುದ್ಧಿಯಿಂದ ತರ್ಕ ಹೂಡುವುದು ನಿಷಿದ್ಧ. ಹೀಗಿರುವುದರಿಂದ ವೇದಗಳಲ್ಲಿ, ಸ್ಮೃತಿಗಳಲ್ಲಿ ಹೇಳಿರುವ ವಿಷಯಕ್ಕೆ ಸುಮ್ಮನೆ ತಲೆದೂಗಬೇಕು ; ತರ್ಕಿಸಕೂಡದು. ವೇದಗಳ ಉಕ್ತಿಗೂ ಸತಿಗಳ ಉಕ್ತಿಗೂ ಪರಸ್ಪರ ವಿರೋಧ ಕಂಡುಬಂದಿತೆನ್ನಿ, ಆ ಪ್ರಸಂಗದಲ್ಲಿ ಕೂಡ ಸ್ವಂತ ಬುದ್ದಿಯಿಂದ ವಿಚಾರ ಮಾಡುವಂತಿಲ್ಲ. ಎರಡು ಸ್ಮೃತಿಗಳ ಪರಸ್ಪರ ವಿರೋಧವಾದ ಮಾತುಗಳನ್ನು ಹೇಳಿದ್ದರೆ ಅವೆರಡೂ ಸಮಾನವಾದ ಶಾಸನಗಳೇ. ಅವೆರಡರಲ್ಲಿ ಯಾವುದನ್ನು ಅನುಸರಿಸಿದರೂ ದೋಷವಿಲ್ಲ . ಬುದ್ಧಿಶಕ್ತಿಯಿಂದ ತೂಗಿನೋಡಿ ಯಾವುದು ಸರಿಯೆಂದು ನಿರ್ಧರಿಸುವ ಪ್ರಯತ್ನ ಮಾಡಕೂಡದು. ಮನು ಸ್ಪಷ್ಟವಾಗಿ ಸಾರುತ್ತಾನೆ ,

ಶ್ರುತಿಧಂ ತು ಯತ್ರ ಸ್ಯಾತ್ತತ್ರ ಧರ್ಮಾವುಬೇ ಸೃತೌಜ||

ಶ್ರುತಿ ಹಾಗೂ ಸ್ಮತಿ ಇವೆರಡರಲ್ಲಿ ಪರಸ್ಪರ ವಿರೋಧ ಕಂಡರೆ ಶ್ರುತಿಯ ಮಾತೇ ಪ್ರಮಾಣ . ಆದರೆ ಇಲ್ಲಿ ಕೂಡ ಇವೆರಡರಲ್ಲಿ ಯಾವುದು ಬುದ್ದಿ ಸಮ್ಮತವೆಂದು ನೋಡಲು ಪ್ರಯತ್ನಿಸಕೂಡದು. ಇದನ್ನು ಮನುವೇ ಹೀಗೆ ಹೇಳಿದ್ದಾರೆ.

ಯಾ ವೇದಬಾಹ್ಯಾಃ ಸ್ಮೃತಯೋ ಯಾಶ್ಚ ಕಾಶ್ಚ ಕುದೃಷ್ಟಃ | |
ಸರ್ವಾಯ್ತಾ ನಿಷ್ಪಲಾಃ ಪ್ರೇತ್ಯ ತಮೋನಿಷಾ ಹಿ ತಂ ಸೃತಾಃ |

ಎರಡು ಸೃತಿಗಳಲ್ಲಿ ವಿರೋಧ ಕಂಡರೆ ಮನುಸ್ಮೃತಿಯೇ ಪ್ರಮಾಣ. ಇಲ್ಲಿ ಕೂಡ ಸ್ವತಂತ್ರವಾಗಿ ತರ್ಕಿಸಕೂಡದು. ಬೃಹಸ್ಪತಿ ಈ ಕೆಳಗಿನಂತೆ ಹೇಳಿದ್ದಾನೆ.

ವೇದಾಯತ್ಯೋಪನಿಬಂಧೃತ್ವಾತ್ ಪ್ರಮಾಣ್ಯಂ ಹಿ ಮನೋಸ್ಕೃತಂ |
ಮರ್ನ್ವಥವಿಪರೀತಾ ತು ಯಾ ಸ್ಮತಿಃ ಸಾರ ನ ಶಸ್ಯತೇ||

ಶ್ರುತಿ ಮತ್ತು ಸೃತಿಗಳು ಹೇಳಿಬಿಟ್ಟ ಮೇಲೆ ಮುಗಿದು ಹೋಯಿತು. ಹಿಂದೂವಾದವನು ತನ್ನ ಬುದ್ಧಿಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಮಹಾಭಾರತದಲ್ಲಿ ಕೂಡ ಇದೇ ಮಾತನ್ನು ಹೇಳಲಾಗಿದೆ.

ಪುರಾಣಂ ಮಾನವೋ ಧರ್ಮಃ ಸಾಂಗೋ ವೇದಶ್ಚಿಕಿತಂ | ಆಜ್ಞಾಸಿದ್ಧಾನಿ ಚತ್ವಾತಿ ನ ಹಂತವ್ಯಾನಿ ಹೇತುಭಿಃ | |

ಜಾತಿ ಮತ್ತು ವರ್ಣ ಇವೆರಡನ್ನೂ ಕುರಿತು
ವೇದಗಳಲ್ಲಿಯೂ ಸ್ಪತಿಗಳಲ್ಲಿಯೂ ವಿಧಿನಿಷೇಧಗಳನ್ನು ಹೇಳಿರುವುದರಿಂದ ಹಿಂದೂವಾದವನಿಗೆ ಸ್ವತಂತ್ರ ವಿಚಾರಶಕ್ತಿಯ ಅವಕಾಶವೇ ಇಲ್ಲ. ರೈಲ್ವೆ ಪ್ರವಾಸ ಮತ್ತು ವಿದೇಶ ಯಾತ್ರೆಗಳಂತಹ ಪ್ರಸಂಗಗಳಲ್ಲಿ ಜಾತಿ ನಿಯಮಗಳನ್ನು ಮುರಿಯಬೇಕಾಗಿ‌ ಬಂದರೂ ಮತ್ತೆ ಜಾತಿ ನಿಯಮಗಳಿಗೆ ನಿಷ್ಠೆ ತೋರುವ ಹಿಂದೂಗಳನ್ನು ಕಂಡು ಹಿಂದೂಗಳಲ್ಲದವರು ನಗುತ್ತಿರಬಹುದು. ಹಿಂದೂಗಳ ವಿಚಾರಶಕ್ತಿಗೆ ತೊಡಿಸಿದ ಇನ್ನೊಂದು ಸಂಕೋಲೆಯನ್ನು ಈ ಸಂಗತಿ ಪ್ರಕಟಿಸುತ್ತದೆ.

ಮನುಷ್ಯನ ಜೀವನ ಕೇವಲ ಅಭ್ಯಾಸಬಲದಿಂದ, ವಿಚಾರ ಮಾಡುವ ಅವಶ್ಯಕತೆಯಿಲ್ಲದೆಯೆ ಸಾಮಾನ್ಯವಾಗಿ ಸಾಗುತ್ತದೆ. ಯಾವುದೋ ಒಂದು ನಿರ್ದಿಷ್ಟವಾದ ನಂಬಿಕೆ ಅಥವಾ ತಿಳುವಳಿಕೆ ಸರಿಯೋ ತಪ್ಪೋ ಎಂಬುದನ್ನು ಸಾಧಕಬಾಧಕ ಪ್ರಮಾಣಗಳಿಂದ ಪರಿಶೀಲಿಸಿ ನೋಡಿ, ಆಳವಾಗಿ ಚಿಂತಿಸಿ ನಿರ್ಣಯಕ್ಕೆ ಬರುವ ಪ್ರಸಂಗ ತೀರ ಅಪರೂಪ. ಒಂದು ಸಂಕಟಕಾಲ ಅಥವಾ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ವಿಚಾರಶಕ್ತಿ ಈ ಕ್ರಿಯೆಯಲ್ಲಿ ತೊಡಗಬಹುದು. ರೈಲ್ವೆ ಪ್ರವಾಸವಾಗಲಿ, ವಿದೇಶ ಪ್ರಯಾಣವಾಗಲಿ ಹಿಂದೂವಿನ ಜೀವನದಲ್ಲಿ ಒಂದು ದಿವ್ಯ ಪರೀಕ್ಷೆಯ ಸಂದರ್ಭವೇ ಆಗುತ್ತದೆ ; ಎಲ್ಲಾ ಕಾಲದಲ್ಲಿ ಪಾಲಿಸಲಾಗದಿದ್ದರೆ ಜಾತಿ ನಿಯಮಗಳನ್ನು ಪಾಲಿಸುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಹಿಂದೂವಿಗೆ ಬರಬೇಕಷ್ಟೆ. ಆದರೆ ಆ ಪ್ರಶ್ನೆ ಅವನಿಗೆ ಬರುವುದೇ ಇಲ್ಲ.

ಒಂದು ಹೆಜ್ಜೆಯಲ್ಲಿ ಜಾತಿಯನ್ನು ಉಲ್ಲಂಘಿಸುತ್ತಾನೆ , ಮುಂದಿನ ಹೆಜ್ಜೆಯಲ್ಲಿ ಏನೂ ಆಗಿಲ್ಲವೆಂಬಂತೆ ಜಾತಿಯ ನಿಯಮವನ್ನು ಪಾಲಿಸುತ್ತಾನೆ . ಈ ವಿಚಿತ್ರವಾದ ನಡವಳಿಕೆಗೆ ಉತ್ತರ ಶಾಸ್ತ್ರಗಳ ಶಾಸನದಲ್ಲಿದೆ . “ ಸಾಧ್ಯವಾದಷ್ಟು ಮಟ್ಟಿಗೆ ಜಾತಿ ನಿಯಮಗಳನ್ನು ಪಾಲಿಸು , ಮೀರಬೇಕಾಗಿ ಬಂದರೆ ಪ್ರಾಯಶ್ಚಿತ್ತದಿಂದ ಶುದ್ದಿ ಮಾಡಿಕೊ ” ಎಂದು ಶಾಸ್ತ್ರಗಳು ಹೇಳುತ್ತವೆ . ಈ ಪ್ರಾಯಶ್ಚಿತ್ತ ವಿಧಾನದಿಂದ ಜಾತಿಪದ್ಧತಿ ನಿರಾತಂಕವಾಗಿ ಮುಂದುವರಿಯಲು ಅನುಕೂಲವಾಗಿದೆ . ವಿಚಾರ ಮಾಡುವ ಅವಕಾಶವನ್ನು ತಪ್ಪಿಸಿ ಜಾತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗಿದೆ . ಜಾತಿ ಹಾಗೂ ಅಸ್ಪಶ್ಯತೆಗಳ ನಿರ್ಮೂಲನೆಗಾಗಿ ಹಲವಾರು ಜನರು ಈ ಮೊದಲೇ ಪ್ರಯತ್ನಿಸಿದ್ದುಂಟು. ಇಂಥವರಲ್ಲಿ ರಾಮಾನುಜ, ಕಬೀರ ಮೊದಲಾದವರನ್ನು ಮುಖ್ಯವಾಗಿ ಹೆಸರಿಸಬಹುದು. ಈ ಸುಧಾರಕರ ಪ್ರಯತ್ನಗಳನ್ನು ವಿವರಿಸಿ , ಅವರನ್ನು ಅನುಸರಿಸಿರೆಂದು ಹಿಂದೂಗಳಿಗೆ ಹೇಳಬಲ್ಲಿರಾ ? ಶ್ರುತಿ , ಸ್ಮೃತಿಗಳ ಜೊತೆಗೆ ಸದಾಚಾರವೆಂಬುದನ್ನೂ ಶಾಸನಗಳ ಸಾಲಿನಲ್ಲಿ ಮನು ಸೇರಿಸಿದ್ದಾನೆ . ಶಾಸ್ತ್ರಗಳಿಗಿಂತ ಸದಾಚಾರವೇ ಹೆಚ್ಚಿನದೆಂದೂ ಹೇಳಲಾಗಿದೆ.

ಯದ್ಯದಾಚರ್ಯತೇ ಯೇನ ಧರ್ಮ್ಮಂ ವಾ ಧರ್ಮ್ಮಮೇವ ವಾ | ದೇಶಾಚರಣಂ ನಿತ್ಯಂ ಚರಿತ್ರಂ ತದ್ದಿ ಕೀರ್ತಿತಮ್ | |

ಈ ಮಾತಿನ ಮೇರೆಗೆ, ಧರ್ಮವಾಗಿರಲಿ, ಅಧರ್ಮವಾಗಿರಲಿ, ಶಾಸ್ತಾನುಸಾರವಾಗಿರಲಿ, ಶಾಸ್ತ್ರ ವಿರುದ್ದವೇ ಆಗಿರಲಿ , ಸದಾಚಾರವನ್ನೇ ಪಾಲಿಸತಕ್ಕದ್ದು. ಆದರೆ ಸದಾಚಾರವೆಂದರೇನು ? ಒಳ್ಳೆಯ ನಡತೆ, ಸರಿಯಾದ ನಡತೆಯೆಂದಾಗಲೀ ಸಜ್ಜನರ ನಡತೆಯೆಂದಾಗಲೀ ಭಾವಿಸಿದರೆ ತಪ್ಪು, ಸದಾಚಾರದ ಅರ್ಥ ಹಾಗಲ್ಲ . ಒಳ್ಳೆಯದೂ , ಪುರಾತನ ಕಾಲದಿಂದ ನಡೆದುಬಂದ ಆಚಾರವೇ ಸದಾಚಾರ, ಕೆಳಗಿನ ಶ್ಲೋಕ ಇದನ್ನು ಸ್ಪಷ್ಟಪಡಿಸುತ್ತದೆ :

ಯಸ್ಕನ್ ದೇಶೇ ಯ ಆಚಾರಃ ಪಾರಂಪರ್ಯ ಕ್ರಮಾಗತಃ | ವರ್ಣಾನಾಂ ಕಿಲ ಸರ್ವೆಷಾಂ ಸ ಸದಾಚಾರ ಉಚ್ಯತೇ |

ಸದಾಚಾರವೆಂದರೆ ಒಳೆಯ ಆಚಾರವೆಂಬ ಅಥವಾ ಸಜ್ಜನರ ಆಚಾರವೆಂಬ ಗ್ರಹಿಕೆಯಿಂದ, ಸಜ್ಜನರನ್ನೇ ಅನುಕರಿಸಿಯಾರೆಂಬ ಭೀತಿಯಿಂದಲೋ ಏನೋ ಸ್ಪತಿಗಳು ಸ್ಪಷ್ಟವಾಗಿ ಹೀಗೆ ವಿಧಿಸುತ್ತವೆ “ ಶ್ರುತಿ, ಸೃತಿ, ಸದಾಚಾರಗಳಿಗೆ ವ್ಯತಿರಿಕ್ತವಾದ ನಡತೆ ದೇವತೆಗಳಿಂದಾದರೂ ಅದು ಆಚರಣೆ ಯೋಗ್ಯವಲ್ಲ. ಇದು ಅತಿ ವಿಚಿತ್ರವೆನಿಸಬಹುದು, ಅಬದ್ದ ಎನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿದೆ. ‘ ನ ದೇವಚರಿತಂ ಚರೇತ್‌ ‘ ಎಂಬುದು ಶಾಸ್ತ್ರಗಳು ವಿಧಿಸಿದ ಶಾಸನ , ಬುದ್ಧಿಶಕ್ತಿ ಮತ್ತು ನೀತಿ ಇವೆರಡು ಸುಧಾರಕನ ಬತ್ತಳಿಕೆಯಲ್ಲಿರುವ ಮಹಾಸ್ತ್ರ ಗಳು. ಇವೆರಡನ್ನೂ ಕಿತ್ತುಕೊಂಡುಬಿಟ್ಟರೆ ಅವನೇನು ಮಾಡಬಲ್ಲ ? ಬುದ್ದಿಯ ಉಪಯೋಗ ಮಾಡಲು ಜನರಿಗೆ ಸ್ವಾತಂತ್ರ್ಯವೇ ಇಲ್ಲವೆಂದರೆ ನೀವು ಜಾತಿಯನ್ನು ನಾಶ ಪಡಿಸುವುದು ಹೇಗೆ ? ಜಾತಿಯೆಂಬುದು ನೀತಿ ಸಮ್ಮತವೋ ಅಲ್ಲವೋ ಎನ್ನುವುದನ್ನು ವಿಚಾರಿಸುವ ಸ್ವಾತಂತ್ರ್ಯ ಜನರಿಗೆ ಇಲ್ಲವೆಂದರೆ ನೀವು ಜಾತಿಯನ್ನು ಉಚ್ಚಾಟಿಸುವುದೆಂತು ? ಜಾತಿ ಕಟ್ಟಿಕೊಂಡ ಕೋಟೆ ದುರ್ಭೇದ್ಯವಾಗಿದೆ.

ಬುದ್ದಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಇನ್ನೂ ಒಂದು ಮಾತನ್ನು ನೆನಪಿಡಿ. ಈ ದುರ್ಗದ ಒಳಗಡೆ ಬುದ್ದಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿಯನ್ನು ರಕ್ಷಿಸಲು ನಿಂತ ಸೈನ್ಯವಾಗಿದೆ. ಹೀಗಿರುವುದರಿಂದಲೇ ನಾನು ಹೇಳುತ್ತೇನೆ ಹಿಂದೂಗಳಲ್ಲಿಯ ಜಾತಿಗಳನ್ನು ಹೊಡೆದಟ್ಟುವುದು ಅಸಾಧ್ಯವಾದುದು. ಈ ಕೋಟೆಯಲ್ಲಿ ಒಂದು ತೂತು ಮಾಡುವುದಕ್ಕೆ ಒಂದು ಸುದೀರ್ಘ ಯುಗವೇ ಬೇಕಾದೀತು. ಈ ಕಾರ್ಯಕ್ಕೆ ದೀರ್ಘಾವಧಿಯೇ ಬೇಕಾಗಲಿ, ಅಲ್ಪಾವಧಿಯೇ ಸಾಕಾಗಲಿ ನೀವು ಮರೆಯದಿರಬೇಕಾದ ಒಂದು ಮಾತಿದೆ. ವೈಚಾರಿಕತೆಯನ್ನು ನಿರಾಕರಿಸುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು, ನೀತಿಗೂ ಬುದ್ದಿಗೂ ಅವಕಾಶವೀಯದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ನೀವು ಅನುಸರಿಸದೆ ಇರಬೇಕು. ಶ್ರುತಿ ಮತ್ತು ಸ್ಮೃತಿಗಳ ವಿಷಯಗಳು ಸಂಕುಚಿತವಾದವು. ಬೇರೆ ಉಪಾಯವೇ ಇಲ್ಲ. ಇದು ಈ ವಿಷಯದಲ್ಲಿ ನನ್ನ ಖಚಿತವಾದ ಅಭಿಪ್ರಾಯ .

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಹಿಂದೂ ಧರ್ಮದ ಪ್ರಗತಿಪರ ಮನಸ್ಸುಗಳ ಬೆಳವಣಿಗೆಯನ್ನು ಜಾತಿಮೀರಿ ಬೆಂಬಲಿಸೋಣ

Published

on

  • ರಘೋತ್ತಮ ಹೊ.ಬ

ನ್ನಯ್ಯಕುಮಾರನ ಭಾಷಣ ಮತ್ತು ಬೆಳವಣಿಗೆ ಬಗ್ಗೆ ಒಂದು ಸಣ್ಣ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಆತನ ಜಾತಿ ಭೂಮಿಹಾರ ಜಾತಿ ಬಗ್ಗೆ ಕೆಲವು ದಲಿತ ಯುವಕರು ಚರ್ಚೆ ನಡೆಸುತ್ತಿದ್ದಾರೆ. ಖಂಡಿತ, ಸದರಿ ಜಾತಿ ದೌರ್ಜನ್ಯ ಮಾಡಿರಬಹುದು. ಆದರೆ ಆ ಜಾತಿಯ ಎಲ್ಲಾ ಗುಣಗಳನ್ನು ಕನ್ನಯ್ಯರಂತಹವರಿಗೆ ಆರೋಪಿಸುವುದು ಥರವಲ್ಲ. ನಿಜ, ದಿ.ಗೌರಿ ಲಂಕೇಶ್ ರವರೊಡನೆ ಇಂತಹದ್ದೆ ಮಾದರಿಯ ಚರ್ಚೆಗಳಲ್ಲಿ ಹಿಂದೆ ನಾನೂ ಕೂಡ ಪಾಲ್ಗೊಂಡಿದ್ದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಬರಹಗಳನ್ನು ಓದಿದ ನಂತರ ನನ್ನ ಆ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡೆ. ಯಾಕೆಂದರೆ ತಮ್ಮ ‘ರಾನಡೆ, ಗಾಂಧಿ, ಜಿನ್ನಾ’ ಎಂಬ ಕೃತಿಯಲ್ಲಿ ಅಂಬೇಡ್ಕರರು ಸಮಸ್ಯೆಗಳ ನಡುವೆಯೂ ಹಿಂದೂ ಧರ್ಮ ಬದುಕಲಿಕ್ಕೆ ಒಂದಷ್ಟು ಸಹನೀಯವಾಗಿದೆ ಎಂದರೆ ಅದಕ್ಕೆ ಎಂ.ಜಿ.ರಾನಡೆಯವರಂತಹ ಮನಸ್ಸುಗಳೇ ಕಾರಣ ಎನ್ನುತ್ತಾರೆ. ಆದ್ದರಿಂದ ಅಂಬೇಡ್ಕರರ ಈ ಅಭಿಪ್ರಾಯದ ಪ್ರಕಾರ ನಾವು ಪ್ರಗತಿಪರ, ಬುದ್ಧಿಜೀವಿ ಒಂದಷ್ಟು ವ್ಯಕ್ತಿಗಳ ಬೆಳವಣಿಗೆಯನ್ನು, ಚಿಂತನೆಗಳನ್ನು ಒಪ್ಪಿಕೊಳ್ಳಬೇಕಿದೆ.

ಯಾಕೆಂದರೆ ಕೋಮುವಾದದ ವಿಜೃಂಭಣೆಯ, ಅಸಮಾನತೆಯನ್ನೂ ಸಾಮರಸ್ಯದ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತಹ ಇಂತಹ ಕೆಟ್ಟ ವಾತಾವರಣದಲ್ಲಿ ನಾವು ಸಮಾನತೆಯನ್ನು ಪ್ರತಿಪಾದಿಸುವ ಒಂದಷ್ಟು ಮನಸ್ಸುಗಳನ್ನು ದೇಶದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಬೆಂಬಲಿಸದೆಹೋದರೆ ಜನತೆ ತೊಂದರೆಗೆ ಸಿಲುಕಲಿದ್ದಾರೆ. ಹಾಗೆಯೇ ಭಾರತ ವೈವಿದ್ಯಮಯ ಜಾತಿ-ಪಂಥ- ವರ್ಗ-ಸಿದ್ಧಾಂತಗಳ ನಾಡು. ಈ ನಿಟ್ಟಿನಲ್ಲಿ ಇಲ್ಲಿ ಒಂದು ಜಾತಿಯ ಒಬ್ಬ ಪ್ರತಿಗಾಮಿಯಾದರೆ ಅದೇ ಜಾತಿಯ ಮತ್ತೊಬ್ಬ ಪ್ರಗತಿಪರ ಆಗಬಾರದು ಎಂಬ ನಿಯಮವೇನು ಇಲ್ಲ. ಯಾಕೆಂದರೆ ಚಿಂತನೆ ಅದು ವಯಕ್ತಿಕ. ವ್ಯಕ್ತಿ ವೈಭಿನ್ಯತೆಯನ್ನು ಅದು ಅವಲಂಬಿಸಿರುತ್ತದೆ, ಆತ ಕಲಿಯುವ ಓದುವ ಪುಸ್ತಕಗಳನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಸಂಬಂಧಿತ ಜಾತಿಯನ್ನು ಆತನ ವ್ಯಕ್ತಿತ್ವಕ್ಕೆ ಆರೋಪಿಸುವುದು ತಪ್ಪು. ಹೀಗೆ ಆರೋಪಿಸುವುದರ ಮೂಲಕ ನಾವೇ ಪ್ರತಿಗಾಮಿಗಳನ್ನು ಒಂದೆಡೆ ಹೆಚ್ಚಿಸುವ ಕ್ರಿಯೆಯಲ್ಲಿ ತೊಡಗಿದಂತಾಗುತ್ತದೆಯೇ ಹೊರತು ಇದರಿಂದ ಮತ್ತೇನು ಪ್ರಯೋಜನವಾಗದು.

ಹಾಗೆಯೇ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳನ್ನು ಅಷ್ಟೆ. ಒಂದು ದ್ವೀಪದ ರೀತಿ ನಾವು ಅದನ್ನು ಮಾಡಬಾರದು. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅದು ಒಂದು ವ್ಯಕ್ತಿಯಲ್ಲ, ಅದೊಂದು ಮಾನವ ಪರ ಚಿಂತನೆ, ಜೀವಪರ ಬೋಧನೆ. ಎಲ್ಲಾ ಶೋಷಿತರ ವಿಮೋಚನೆಗೂ ಅದು ಮದ್ದಾಗಲಿದೆ. ಈ ನಿಟ್ಟಿನಲ್ಲಿ ಅದನ್ನು ಹೀಗೆಯೇ ಇರಬೇಕು, ಅದನ್ನು ದಲಿತರೇ ಅಥವಾ ಅವರ ಬೆಂಬಲದ ಒಂದು ಪಕ್ಷವೇ ಮಾತಾಡಬೇಕು ಇತರರು ಮಾತಾಡಬಾರದು ಎಂಬ ಹಟ ತಪ್ಪು. ಬದಲಿಗೆ ಮಾನವಪರ ಚಿಂತನೆಗಳನ್ನು ಎಲ್ಲರೂ ವಿಶೇಷವಾಗಿ ಪ್ರಗತಿಪರರು ಬಳಸಿಕೊಳ್ಳಲು, ಮಾತಾಡಲು ಮುಕ್ತ ಅವಕಾಶ ಹೊಂದಿದ್ದಾರೆ ಎಂಬುದನ್ನು ಅವರ ಅನುಯಾಯಿಗಳು ಅರಿಯಬೇಕು. ಆಗಷ್ಟೆ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳು ಜಾತಿ ಮೀರಿ ಬೆಳೆಯುತ್ತದೆ. ಹಾಗೆಯೇ ಪ್ರಗತಿಪರ ಮನಸ್ಸುಗಳು ಹೆಚ್ಚು ಹೆಚ್ಚು ಬೆಳೆಯಲಿವೆ ಭಾರತ ಜಾತಿ ಮುಕ್ತ ವಾತಾವರಣದಲ್ಲಿ ಮಿಂದು ಏಳಲಿದೆ.

ಈ ನಿಟ್ಟಿನಲ್ಲಿ ಕನ್ನಯ್ಯಕುಮಾರ್ ಇರಲಿ ಮತ್ಯಾರೇ ಇರಲಿ ಅವರು ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಮಾತಾಡಿದರೆ ದಲಿತರು ಅವರನ್ನು ಬೆಂಬಲಿಸಲಿ. ಪ್ರಗತಿಪರ ಎಲ್ಲರನ್ನೂ ಅಂತಹ ಮನಸ್ಸುಗಳನ್ನೂ ಮಾತಾಡುವವರನ್ನು ಬರೆಯುವವರನ್ನು ದಲಿತರು ಬೆಂಬಲಿಸಲಿ. ಆ ಮೂಲಕ ಎಲ್ಲರಿಗೂ ಜಾತಿಮೀರಿ ವೈಚಾರಿಕ ಚಿಂತನೆಗಳನ್ನು ಮಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಎಲ್ಲರೂ ವಿಶೇಷವಾಗಿ ಕೆಲ ದಲಿತ ಯುವಕರು ಅರಿಯಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪತ್ರಿಕಾ ಸ್ವಾತಂತ್ರ್ಯ ಎಷ್ಟು ಮುಖ್ಯ..?

Published

on

  • ವಿವೇಕಾನಂದ ಹೆಚ್.ಕೆ

ನಾವು ಪತ್ರಿಕೆ ಟಿವಿ ಮಾಧ್ಯಮಗಳ ತಿಕ್ಕಲುತನ, ವಿವೇಚನಾರಹಿತ ವರದಿಗಳು, ವೈಯಕ್ತಿಕ ನಿಂದನೆ, ವಿಕೃತ ಸುದ್ದಿಗಳು, ಸಮಾಜ ವಿರೋಧಿ ಚಟುವಟಿಕೆಗಳು, ಮೌಡ್ಯ ಬಿತ್ತನೆ, ಬ್ರೇಕಿಂಗ್ ನ್ಯೂಸ್ ಎಂಬ ಭ್ರಮೆಗಳು ಎಲ್ಲವನ್ನೂ ಕಠಿಣ ಶಬ್ದಗಳಲ್ಲಿ ಟೀಕಿಸೋಣ, ಸಾಧ್ಯವಾದರೆ ಪ್ರತಿಭಟಿಸೋಣ, ಬಹಿಷ್ಕರಿಸೋಣ, ಮಾನನಷ್ಟ ಮೊಕದ್ದಮೆ ಹೂಡೋಣ ಆದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ.

ಪೋಲೀಸರು ಭ್ರಷ್ಟರಾಗಿದ್ದಾರೆ ಎಂದ ಮಾತ್ರಕ್ಕೆ ಪೋಲೀಸ್ ವ್ಯವಸ್ಥೆಯನ್ನು ನಿಷೇಧಿಸಲು ಸಾಧ್ಯವೇ ? ಹಾಗೆಯೇ ಆಸ್ಪತ್ರೆ, ಶಿಕ್ಷಣ, ಚುನಾವಣೆ ನ್ಯಾಯಾಲಯ ಸರಿಯಿಲ್ಲ ಅದರಿಂದ ತೊಂದರೆಯಾಗುತ್ತಿದೆ ಎಂದು ಆ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾಧ್ಯವೇ ? ಆ ವ್ಯವಸ್ಥೆ ಅದರ ಲೋಪಗಳನ್ನು ಸರಿ ಪಡಿಸಬೇಕೆ ಹೊರತು ನಿಷೇಧ ನಮ್ಮ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದುರ್ಬಲರ ಶೋಷಣೆ ಮತ್ತಷ್ಟು ಹೆಚ್ಚುತ್ತದೆ.

ಕರ್ನಾಟಕ ಸರ್ಕಾರದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಛಾಯಾಚಿತ್ರ ಪತ್ರಕರ್ತರ ನಿಷೇಧ ಮತ್ತು ವಿಧಾನಸಭಾ ಕಾರ್ಯಕಲಾಪಗಳ ನೇರ ಪ್ರಸಾರದ ದೃಶ್ಯಗಳನ್ನು ಚಿತ್ರೀಕರಿಸಲು ಖಾಸಗಿ ವಾಹಿನಿಯವರಿಗೆ ನಿಷೇಧ ಅಥವಾ ಈ ರೀತಿಯ ಇನ್ಯಾವುದೇ ರೂಪದ ನಿಷೇಧ ಅತ್ಯಂತ ಕೆಟ್ಟ ಮತ್ತು ದುರಹಂಕಾರಿ ಕ್ರಮವಾಗುತ್ತದೆ. ಈ ರೀತಿಯ ಕ್ರಮವನ್ನು ಹಿಂದಿನ ಸರ್ಕಾರಗಳು ಕೂಡ ತರಲು ಪ್ರಯತ್ನಿಸಿದ್ದವು. ಆದರೆ ಈಗ ಅದು ಜಾರಿಗೆ ಬಂದಿದೆ.

ಕಾರಣಗಳು ಏನೇ ಇರಲಿ ವಿಧಾನಸೌಧ ಮತ್ತು ಸರ್ಕಾರಿ ಆಡಳಿತ ಯಾರದೇ ಖಾಸಗಿ ಆಸ್ತಿಯಲ್ಲ ಅಥವಾ ಯಾವುದೇ ಮುಚ್ಚುಮರೆಯಿಂದ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಯಾವುದೇ ಕೋನದಿಂದ ನೋಡಿದರು ಅಲ್ಲಿನ ವ್ಯವಹಾರಗಳು ಬಹುತೇಕ ಜನರಿಂದ ಮರೆಮಾಚುವ ಕೆಲಸಗಳು ನಡೆಯಬಾರದು. ರಕ್ಷಣೆಗೆ ಸಂಬಂಧಿಸಿದ ಸರ್ಕಾರದ ಗೌಪ್ಯ ಮಾಹಿತಿ ಹೊರತುಪಡಿಸಿ ಎಲ್ಲವೂ ಪಾರದರ್ಶಕವಾಗಿಯೇ ನಡೆಯಬೇಕು.

ಅಂತಹ ಸ್ಥಳದಲ್ಲಿ ಗೌಪ್ಯತೆ ಕಾಪಾಡಬೇಕು ಎಂದು ಪ್ರಯತ್ನಿಸಿದರೆ ಏನೋ ಅವ್ಯವಹಾರ ನಡೆಯುತ್ತದೆ ಎಂದೇ ಭಾವಿಸಬೇಕಾಗುತ್ತದೆ.ಯಾವುದೇ ಆಡಳಿತ ವ್ಯವಸ್ಥೆ ಇರಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲದಿದ್ದರೆ ಅದೊಂದು ಭೀಕರ ದುರಾಡಳಿತ ಮುನ್ಸೂಚನೆ ಎಂಬುದನ್ನು ಮರೆಯದಿರೋಣ. ಎಷ್ಟೋ ಅನ್ಯಾಯಗಳು ಮಾಧ್ಯಮ ಇದೆ,
ಅದರ ಮುಖಾಂತರ ಸಾರ್ವಜನಿಕರಿಗೆ ತಿಳಿಯುತ್ತದೆ ಎಂಬ ಕಾರಣದಿಂದ ಕಡಿಮೆಯಾಗಿದೆ. ಆದ್ದರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಎಲ್ಲರೂ ಬೆಂಬಲಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending