Connect with us

ಬಹಿರಂಗ

ಕಾರ್ಮಿಕರಿಗೆ ‘ಪಿಎಫ್’ ಜಾರಿಗೊಳಿಸಿದ ಅಂಬೇಡ್ಕರ್

Published

on

ಕಾರ್ಮಿಕರಿಗೆ ಪಿಎಫ್ ಅಥವ ಭವಿಷ್ಯ ನಿಧಿ ಯೋಜನೆಯನ್ನು ಮೂಲತಃ ಜಾರಿಗೆ ತಂದಿದ್ದು ಬ್ರಿಟಿಷ್ ಸರ್ಕಾರ. ಅದರಲ್ಲೂ ಬ್ರಿಟಿಷ್ ಮಂತ್ರಿ ಮಂಡಲದಲ್ಲಿ 1942ರಿಂದ 1946ರವರೆಗೆ ಕಾರ್ಮಿಕ ಮಂತ್ರಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಎಂಬುದಿಲ್ಲಿ ಗಮನಿಸಬೇಕಾದ ವಿಷಯ. ಅಂಬೇಡ್ಕರರು ಪ್ರಥಮವಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದು ಗಣಿ ಕಾರ್ಮಿಕರಿಗೆ.

ನಂತರ ಅದನ್ನು ರೈಲ್ವೇ ನೌಕರರು ಹೀಗೆ ಇತರರಿಗೆ ಹಂತಹಂತವಾಗಿ ವಿಸ್ತರಿಸಲಾಯಿತು. ನೌಕರರಿಗೆ ತುಟ್ಟಿಭತ್ಯೆ(ಡಿಎ) ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು ಕೂಡ ಅಂಬೇಡ್ಕರರೆ. ದುರಂತವೆಂದರೆ ನಮ್ಮ ನೌಕರರು ಡಿಎ ಯಾರು ಹೆಚ್ಚು ಮಾಡುತ್ತಾರೋ ಆ ಸರ್ಕಾರ ಹೊಗಳುತ್ತಾರೆ. ಆದರೆ ಅದರ ಮೂಲಕತೃವನ್ನು ನೆನೆಯುವುದಿಲ್ಲ.

ಇಂದು ಕಾರ್ಮಿಕರ ದಿನಾಚರಣೆ. ಅದರ ಅಂತರ್ ರಾಷ್ಟ್ರೀಯ ಮಹತ್ವ ಏನಾದರೂ ಇರಲಿ. ಆದರೆ ಭಾರತದ ಕಾರ್ಮಿಕರು
ಜಾತ್ಯತೀತವಾಗಿ, ತಮ್ಮ ಜೀವತಾವಧಿಯಲ್ಲಿ ತಮ್ಮ ಅವಿರತ ಹೋರಾಟದ ನಡುವೆ ಬ್ರಿಟಿಷ್ ಕ್ಯಾಬಿನೆಟ್ ಲ್ಲಿ ಆ ಇಲಾಖೆಯ ಮಂತ್ರಿಯಾಗಿ ಸೇವೆ ಸಲ್ಲಿಸಿ, ಆಳದ ಗಣಿಗಳಿಗೆ ಖುದ್ದು ಭೇಟಿಕೊಟ್ಟು ಅಲ್ಲಿನ ಕಾರ್ಮಿಕರ ಒಟ್ಟಾರೆ ಸಮಗ್ರ ಕಾರ್ಮಿಕರ ಭವಿಷ್ದದ ದೃಷ್ಟಿಯಿಂದ ಭವಿಷ್ಯ ನಿಧಿ ಅಥವಾ ಪಿಎಫ್ ಜಾರಿಗೊಳಿಸಿದ ಬಾಬಾಸಾಹೇಬ್ ಅಂಬೇಡ್ಕರರನ್ನು ಸದಾ ನೆನೆಯಲಿ. ಆಗಷ್ಟೇ ಕಾರ್ಮಿಕ ರ ಯಾವುದೇ ಮಾದರಿಯ ಹೋರಾಟಕ್ಕೆ ಇನ್ನಷ್ಟು ಬಲ ಬರುತ್ತದೆ.

ರಘೋತ್ತಮ ಹೊಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ

Published

on

ಸಾಂದರ್ಭಿಕ ಚಿತ್ರ

ತ್ತೀಚೆಗೆ ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯದ ಪ್ರಕರಣಗಳನ್ನು ನೋಡುವಾಗ ನನ್ನ ಕಾಲೇಜು ದಿನಗಳು ಥಟ್ಟನೆ ನೆನಪಾಗುತ್ತವೆ. ಈ ವಿದ್ಯಮಾನ ಇವತ್ತಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಆದರೆ ಆಗ ಅಷ್ಟಾಗಿ ಬಯಲಿಗೆ ಬರುತ್ತಿರಲಿಲ್ಲವೇನೋ ಎಂಬುದು ನನ್ನ ಭಾವನೆ. ಅದಕ್ಕೆ ಕಾರಣಗಳು ಹತ್ತಾರು ಇರಬಹುದು.

ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ನಾನು ಸರ್ಕಾರಿ ದಂತವೈದ್ಯಕೀಯ ಕಾಲೇಜಿಗೆ ಸೇರಿದ್ದ ಆ ದಿನಗಳು. (ಅದನ್ನು ಪೂರ್ಣಗೊಳಿಸದೆ ಮುಂದೆ ನನ್ನ ದಾರಿ ನಾ ಹಿಡಿದೆ ಎಂಬುದು ನಂತರದ ಮಾತು). ಮೊದಲ ಎರಡು ವರ್ಷಗಳಲ್ಲಿ ಕೆಲವೊಂದು ಮೂಲಭೂತ ವೈದ್ಯಕೀಯ ವಿಷಯಗಳನ್ನೂ ಕಲಿಸಿಕೊಡಲಾಗುತ್ತದೆ. ಹೀಗೆ ನಾವು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ಮೂರ್ನಾಲ್ಕು ವಿಷಯಗಳನ್ನು ಮೊದಲ ವರ್ಷದಲ್ಲಿ ಕಲಿಯಬೇಕಿತ್ತು.

ಆಗ ಒಬ್ಬ ಪ್ರಾಧ್ಯಾಪಕ ತರಗತಿಯಲ್ಲಿ ಅದೆಷ್ಟು ಕೆಟ್ಟದಾಗಿ ಹೀಯಾಳಿಸಿ ಮಾತನಾಡುತ್ತಿದ್ದನೆಂದರೆ, ಆತನ ಮಾತುಗಳು ನನಗೆ ಎಂದೂ ಸಲ್ಲುತ್ತಿರಲಿಲ್ಲವಾದರೂ ಸಹ ನನ್ನಂತಹವರಿಗೆ ಬೇಸರ ತರುತ್ತಿದ್ದುದು ಮತ್ತು ಕೋಪ ಬರಿಸುತ್ತಿದ್ದುದು ನಿಜ. ನಾನು ಯಾರನ್ನೂ ಜಾತಿಯಿಂದ ಕಂಡಿಲ್ಲ, ಆದರೆ ಆತನ ವರ್ತನೆ ಮಾತ್ರ ನನಗೆ ಅವನ ಜಾತಿ ಹುಡುಕುವಂತೆ ಮಾಡಿತ್ತು. ಆತ ಬ್ರಾಹ್ಮಣರಲ್ಲೊಬ್ಬ ಮಹಾ ಬ್ರಾಹ್ಮಣ. ಅಷ್ಟೇ ಅಲ್ಲ, ಆನಂತರ ನನಗೆ ತಿಳಿದಿದ್ದು ಅವನೊಬ್ಬ ಮಹಾನ್ ಚಡ್ಡಿ ಎಂದೂ ಸಹ! ಯಾರಾದರೂ ವಿದ್ಯಾರ್ಥಿ ಅವನ ಪ್ರಶ್ನೆಗೆ ಉತ್ತರಿಸಲಿಲ್ಲವಾದರೆ, “ನಿನ್ನ ಹೆಸರೇನು? ಕೋಟಾದಲ್ಲಿ ಬಂದುಬಿಡ್ತಾರೆ, ಇಲ್ಲಿ ಏನೂ ಗೊತ್ತಿರೋದಿಲ್ಲ. ಪಿಯುಸಿಲಿ ಎಷ್ಟು ನಿನ್ನ ಪರ್ಸೆಂಟೇಜು?” ಎಂದು ಆತ ತರಗತಿಯಲ್ಲಿ ತೀರಾ ಕೆಟ್ಟ ದನಿಯಲ್ಲಿ ವ್ಯಂಗ್ಯವಾಗಿ ಛೇಡಿಸುತ್ತಿದ್ದ. ಏನೇನೋ ತನ್ನ ಕತೆ ಪುರಾಣಗಳನ್ನ ಬಡಬಡಿಸುತ್ತಿದ್ದ. ನಿಜಕ್ಕೂ ನನ್ನಂತಹವರಿಗೇ ಅವನ ನಡವಳಿಕೆ ಜಿಗುಪ್ಸೆ ಮೂಡಿಸುತ್ತಿತ್ತು. ಆದರೆ ನಾವು ಅಸಹಾಯಕರಾಗಿದ್ದೆವು. ಸಂಘಟನೆ ಏನೊಂದೂ ಇರಲಿಲ್ಲ. ಮೇಲಾಗಿ ವೃತ್ತಿ ಕೋರ್ಸ್ ನ (ಇಂಟರ್ನಲ್ಸ್, ಪ್ರಾಕ್ಟಿಕಲ್, ಹಾಳೂಮೂಳು) ಭಯ ಎಲ್ಲರಿಗೂ! ಸಂತ್ರಸ್ತರೂ ಸಹ ಒಂದೇ ಒಂದು ಸಲವೂ ಇದರ ವಿರುದ್ಧ ಸಂಘಟಿತರಾಗಿದ್ದನ್ನು ನಾ ಕಂಡಿಲ್ಲ. (ಅದಕ್ಕೆ ಕಾರಣಗಳೂ ಇಲ್ಲದಿಲ್ಲ).

ಈ ವ್ಯಕ್ತಿ ಎಷ್ಟು ಜಾತೀವಾದಿ ಎಂದರೆ, ನನಗೊಮ್ಮೆ ತೀವ್ರ ಅನಾರೋಗ್ಯದಿಂದಾಗಿ ಇಂಟರ್ನಲ್ ಪರೀಕ್ಷೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆತ ನನ್ನ ಹೆಸರನ್ನು ಪೂರ್ಣವಾಗಿ ಓದಿಕೊಂಡು, ನನ್ನ ಜಾತಿ ತಿಳಿದುಕೊಂಡು ಪುನಃ ಪರೀಕ್ಷೆ ಕೊಟ್ಟಾಗ ತಾನೇ ಕುಳಿತಿದ್ದ. ಆಗ ನನಗೆ, “ನೀನೇನು ಹೆದರಬೇಡ, ನಮ್ಮವಳೇ ನೀನು…..” ಇತ್ಯಾದಿಗಳನ್ನು ಹೇಳಿ ಸಮಾಧಾನಪಡಿಸಿದ್ದಲ್ಲದೆ ನನ್ನ ತಾಯಿಗೂ ಅಭಯ ನೀಡಿದ್ದನಂತೆ! ಇಂತಹ ಜಾತಿ ಆಧಾರಿತ ನಡವಳಿಕೆಯನ್ನು ಪ್ರಾಧ್ಯಾಪಕರಿಂದ ಎಂದೂ ನಿರೀಕ್ಷಿಸದಿದ್ದ ನಾನು ಒಂದು ರೀತಿ ಬೆಚ್ಚಿಬಿದ್ದಿದ್ದೆ. ಮರು ಉತ್ತರಿಸುವ ಮನಸ್ಸು ಇದ್ದರೂ ಅಷ್ಟು ಧೈರ್ಯ ಆಗ ನನ್ನಲ್ಲಿರಲಿಲ್ಲವೋ ಏನೋ. ಮೌನವಾಗಿ ಮನದೊಳಗೇ ನೊಂದು ಹಿಂದಿರುಗಿದ್ದೆ. ಸಾಕಷ್ಟು ಪರಿತಪಿಸಿದ್ದೆ. ಕಾಲೇಜಿನೊಳಗೆ ಜಾತಿ ಹುಡುಕಿ ಕೇಳದಿದ್ದರೂ ಫೇವರ್ ಮಾಡುವುದನ್ನು ಕಂಡು ಗಾಬರಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಯಾವ ಸಂಘಟನೆಯಲ್ಲೂ ತೊಡಗಿಕೊಂಡಿರಲಿಲ್ಲ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಮಟ್ಟದಲ್ಲಿ ಕುಳಿತವರ ಇಂತಹ ದುರ್ವರ್ತನೆಗಳು, ಜಾತಿವಾದಿ ಧೋರಣೆಗಳು ತಳ ಸಮುದಾಯಗಳ ವಿದ್ಯಾರ್ಥಿಗಳಿಗೆ ಅದೆಷ್ಟು ನೋವುಂಟು ಮಾಡಬೇಡ!? ಮಾನವೀಯತೆ ಕಲಿಸಬೇಕಾದ ವೈದ್ಯಕೀಯ ಕಾಲೇಜಿನಲ್ಲಿ ಜಾತಿ ತಾರತಮ್ಯದ ಪಾಠ ಹೇಳಿಕೊಟ್ಟು ಅಂತಹ ಕ್ರೂರ ವ್ಯವಸ್ಥೆಯನ್ನು ಪೋಷಿಸುವ ಮುಠ್ಠಾಳ ಪ್ರಾಧ್ಯಾಪಕರು! ರೋಹಿತ್ ವೇಮುಲ ಘಟನೆ ಇರಬಹುದು‌ ತದನಂತರದ ಇನ್ನಾವುದೇ ಪ್ರಕರಣವಿರಬಹುದು, ಅವುಗಳನ್ನು ಕಂಡಾಗೆಲ್ಲಾ ನನಗೆ ನನ್ನ ಅನುಭವ ನೆನಪಿಗೆ ಬಂದುಬಿಡುತ್ತದೆ. ನನ್ನ ಜಾತಿಯ ಕಾರಣದಿಂದಾಗಿಯೇ ನನಗೆ ನೆರವಾಗಲು ಆ ಪ್ರಾಧ್ಯಾಪಕ ಮುಂದಾಗಿದ್ದ, ನನಗದು ಖಂಡಿತಾ ಬೇಡವಾಗಿತ್ತು. ಇದೇ ಜಾತಿಯ ಕಾರ್ಡನ್ನು ಬಳಸಿ ತನ್ನ ವೃತ್ತಿಜೀವನದಲ್ಲಿ ಇನ್ನೆಷ್ಟು ಬ್ರಾಹ್ಮಣೇತರರನ್ನು ಆತ ಬಲಿ ಮಾಡಿರಲಿಕ್ಕಿಲ್ಲ?! ಮಿದುಳೊಳಗೆಲ್ಲಾ ಜನಿವಾರ ಸುತ್ತಿಕೊಂಡವರು, ಅಥವಾ ಇಂತಹ ಜಾತೀವಾದಿಗಳು (ಅವರವರ ಜಾತಿಗೆ ಆದ್ಯತೆ ನೀಡುವವರು) ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಈಗ ಇನ್ನೆಷ್ಟು ಸಂಖ್ಯೆಯಲ್ಲಿ ಹೆಚ್ಚಿರಬಹುದು? ಊಹಿಸಿಕೊಳ್ಳಲೂ ಭಯವಾಗುತ್ತದೆ.

ಜ್ಯೋತಿ ಅನಂತ ಸುಬ್ಬರಾವ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬುದ್ಧರ ಪ್ರಕಾರ ದಾನ ರೂಪದಲ್ಲಿ ಬಂದರೆ ಭಿಕ್ಕುಗಳೂ ಕೂಡ ಮಾಂಸ ತಿನ್ನಬಹುದು

Published

on

ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ನೀಡುತ್ತಾರೆ.

ಅಂಬೇಡ್ಕರರ ಪ್ರಕಾರ ಬುದ್ಧ ಎಂದು ಕೂಡ ಎಲ್ಲಿಯೂ ಕೂಡ ಅಹಿಂಸೆಗೆ ವ್ಯಾಖ್ಯೆ ನೀಡಿಲ್ಲ. ಅಪರೂಪಕ್ಕೆ ಅದೂ ಸಾಂದರ್ಭಿಕವಾಗಿ ಅದರ ಬಗ್ಗೆ ಬುದ್ಧ ಹೇಳುತ್ತಾರೆ ಅಷ್ಟೇ. ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ತಿಳಿಯಬರುವುದೇನೆಂದರೆ “ದಾನದ ಭಾಗವಾಗಿ ಮಾಂಸಾಹಾರ ನೀಡಿದರೆ ಬುದ್ಧ ಅದನ್ನು ಎಂದೂ ಕೂಡ ತಿರಸ್ಕರಿಸಲಿಲ್ಲ” ಎಂಬುದು. ಈ ಹಿನ್ನೆಲೆಯಲ್ಲಿ ಭಿಕ್ಕುಗಳೂ ಕೂಡ ಮಾಂಸಾಹಾರ ಸೇವಿಸಬಹುದು. ಆದರೆ ಒಂದು ಸಣ್ಣ ಕಂಡೀಷನ್ ಎಂದರೆ‌ ಅವರು ಆ ಪ್ರಾಣಿಯ ಹತ್ಯೆಯಲ್ಲಿ ಪಾಲುದಾರ ರಾಗಿರಬಾರದು ಅಷ್ಟೇ. (ನಿಜ ಹೇಳಬೇಕೆಂದರೆ, ನಮ್ಮ ಕಾರ್ಯಕ್ರಮಕ್ಕೆ ಅಂದು ಆಗಮಿಸಿದ್ದ ಇಬ್ಬರು ಬೌದ್ಧ ಭಿಕ್ಕುಗಳು
ಮಾಂಸಹಾರವನ್ನೆ ಸೇವಿಸಿದುದು). ಮತ್ತೂ ಒಂದು ವಾಸ್ತವವೆಂದರೆ ಭಿಕ್ಕುಗಳು ದಾನದ ರೂಪದಲ್ಲಿ ಬಂದ ಮಾಂಸಾಹಾರವನ್ನೂ ಸೇವಿಸಬಾರದು ಎಂದು ದೇವದತ್ತ ವಿರೋಧ ವ್ಯಕ್ತಪಡಿಸಿದಾಗ ಬುದ್ಧರು ದೇವದತ್ತನ ಆ ನಿಲುವನ್ನೇ ವಿರೋಧಿಸುತ್ತಾರೆ. ಆ ಮೂಲಕ ದಾನದ ರೂಪದಲ್ಲಿ ಮಾಂಸಾಹಾರ ಬಂದರೆ ಭಿಕ್ಕುಗಳು ಅದನ್ನು ಸೇವಿಸಬಹುದು ಎಂಬ ಅಂಶಕ್ಕೆ ಬುದ್ಧರು ಒಪ್ಪುಗೆಯ ಮುದ್ರೆ ಒತ್ತುತ್ತಾರೆ. ಅಂದಹಾಗೆ ಇದನ್ನು ಹೇಳುತ್ತಾ ಅಂಬೇಡ್ಕರರು “ಅಹಿಂಸೋ ಪರಮ ಧರ್ಮ” ಎಂಬುದು ಅತಿರೇಕದ ಸಿದ್ಧಾಂತವಾಗಿದೆ ಮತ್ತು ಅದು ಜೈನ ಧರ್ಮಕ್ಕೆ ಸೇರಿದ್ದೇ ಹೊರತು ಬೌದ್ಧ ಧರ್ಮಕ್ಕಲ್ಲ. ಬೌದ್ಧ ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪದಗಳಲ್ಲಿ ಹೇಳುತ್ತಾರೆ.

ಹಾಗಿದ್ದರೆ ಅಹಿಂಸೆ? ಅರ್ಥಾತ್ ಕೊಲ್ಲುವುದು ಅಥವಾ ಕೊಲ್ಲದಿರುವುದು? ಯಾಕೆಂದರೆ ಕೆಲವು ಕಾರಣಗಳಿಗಾಗಿಯೂ ಮನುಷ್ಯ ಮತ್ತೊಬ್ಬರನ್ನು ಕೊಲ್ಲುವ ಸಂದರ್ಭ ಬರುತ್ತದೆ. ಇದಕ್ಕೆ ಬುದ್ಧರು ನೇರ ಮಾತುಗಳಲ್ಲಿ ಹೇಳುವುದು “ಎಲ್ಲರನ್ನೂ ಪ್ರೀತಿಸು ಹೇಗೆಂದರೆ ಅವರನ್ನು ಕೊಲ್ಲುವ ಆಸೆಯೇ ನಿನಗೆ ಬರಬಾರದು” ಎಂದು! ಇದನ್ನು ಉಲ್ಲೇಖಿಸುತ್ತ ಬಾಬಾಸಾಹೇಬರು “ಇದು ಅಹಿಂಸೆಯ ಧನಾತ್ಮಕ ವ್ಯಾಖ್ಯೆಯಾಗಿದೆ” ಎನ್ನುತ್ತಾರೆ.

ಮುಂದುವರೆದು ಅಂಬೇಡ್ಕರರು ಹೇಳುವುದು, ಬುದ್ಧರು “ಕೊಲ್ಲುವುದಕ್ಕಾಗಿ ಕೊಲ್ಲು, ಅಗತ್ಯ ಇರುವುದರಿಂದ ಕೊಲ್ಲು” ಇವೆರಡರ ನಡುವಿನ ವ್ಯತ್ಯಾಸ ತಿಳಿಸಬಯಸಿದ್ದರು ಎಂದು. ಇದರರ್ಥ ಬುದ್ಧರು ಎಂದು ಕೂಡ “ಅಗತ್ಯ ಇರುವುದರಿಂದ ಕೊಲ್ಲುವುದನ್ನು ನಿಷೇಧಿಸಲಿಲ್ಲ”. ಹಾಗಿದ್ದರೆ ನಿಷೇಧಿಸಿದ್ದು? “ಕೊಲ್ಲುವುದಕ್ಕಾಗಿ ಕೊಲ್ಲು” ಎಂಬುದನ್ನು. ಇದನ್ನು ಬ್ರಾಹ್ಮಣಧರ್ಮ ಮತ್ತು ಜೈನ ಧರ್ಮಗಳಿಗೆ ಹೋಲಿಸುತ್ತ ಅಂಬೇಡ್ಕರರು ಹೇಳುವುದು “ಬ್ರಾಹ್ಮಣ ಧರ್ಮ ತನ್ನಲ್ಲಿ ‘ಕೊಲ್ಲುವುದಕ್ಕಾಗಿ ಕೊಲ್ಲು’ ಎಂಬ ಸಿದ್ಧಾಂತ ಹೊಂದಿದ್ದರೆ, ಜೈನಧರ್ಮ ‘ಕೊಲ್ಲಲೇಬಾರದು’ ಎಂಬ ಸಿದ್ಧಾಂತ ಹೊಂದಿದೆ. ಆದರೆ ಬೌದ್ಧ ಧರ್ಮ ಇವೆರಡರ ನಡುವಿನ ಮಧ್ಯಮ ಮಾರ್ಗ ಹೊಂದಿದೆ” ಎಂದು. ಈ ದಿಸೆಯಲ್ಲಿ ಬೌದ್ಧ ಧರ್ಮ ಪ್ರತಿಪಾದಿಸುವುದು “ಅಗತ್ಯ ಇರುವುದರಿಂದ ಕೊಲ್ಲು” ಸಿದ್ಧಾಂತವನ್ನು.

ಹಾಗಿದ್ದರೆ ಕೊಲ್ಲುವ ಅಗತ್ಯ ಎಲ್ಲಿದೆ? ಎಲ್ಲಾ ಕಡೆಯೂ ಇರುತ್ತದಲ್ಲವೆ? ಎಂದು ಯಾರಾದರೂ ಪ್ರಶ್ನಿಸಬಹುದು. ಅದಕ್ಕೆ ಬುದ್ಧ ಹೇಳುವುದು “ಅಂತಹ ಕೊಲ್ಲುವ ಅಗತ್ಯತೆಯನ್ನು ಸಂಬಂಧಿಸಿದ ವ್ಯಕ್ತಿ ನಿರ್ಧರಿಸಬೇಕು. ಏಕೆಂದರೆ ಮನುಷ್ಯನಿಗೆ ಪ್ರಜ್ಞೆ ಎಂಬುದೊಂದಿದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ, ಅಂದರೆ ಕೊಲ್ಲುವ ಅಗತ್ಯತೆಯ ಸಂದರ್ಭದಲ್ಲಿ ಆತ ಅದನ್ನು ನಿರ್ಧರಿಸಲು ತನ್ನ ಪ್ರಜ್ಞೆಯನ್ನು ಬಳಸಬೇಕು” ಎಂದು.

ಒಟ್ಟಾರೆ ಬುದ್ಧರ ಈ ಬೋಧನೆಗಳನ್ನೆಲ್ಲ ಉಲ್ಲೇಖಿಸುತ್ತ ಬಾಬಾಸಾಹೇಬರು ಹೇಳುವುದು, “ಬುದ್ಧ ಅಹಿಂಸೆಯನ್ನು ಮದ್ಯಮ ಮಾರ್ಗದಲ್ಲಿ ಇಟ್ಟರು.ಇದರರ್ಥ ಬುದ್ಧ ಅಹಿಂಸೆಯನ್ನು ಒಂದು ಕಾನೂನಾಗಿ ಇಡಲಿಲ್ಲ, ಬದಲಿಗೆ ಒಂದು ತತ್ವವಾಗಿ ಇಟ್ಟರು. ಅಂದಹಾಗೆ ತತ್ವವನ್ನು ವ್ಯಕ್ತಿಯೊಬ್ಬ ಸ್ವತಂತ್ರವಾಗಿ ಅಚರಿಸಬಹುದು. ಅದರಲ್ಲಿ ಕಟ್ಟುಪಾಡಿಲ್ಲ. ಆದರೆ ಕಾನೂನು ಹಾಗಲ್ಲ ಅದನ್ನು ಉಲ್ಲಂಘಿಸಲೇಬಾರದು. ಈ ನಿಟ್ಟಿನಲ್ಲಿ ಬುದ್ಧ ಅಹಿಂಸೆಯನ್ನು ಕಾನೂನಾಗಿ ಇಡದೆ ತತ್ವವಾಗಿ ಇಟ್ಟಿರುವುದರಿಂದ ಅನುಯಾಯಿಗಳು ಅದನ್ನು ಆಚರಿಸಲು ಸರ್ವ ಸ್ವತಂತ್ರರು ಮತ್ತು ಅದರಲ್ಲಿ ಅಂತಹ ನಿರ್ಬಂಧವೇನಿಲ್ಲ”.

ಒಂದಂತು ಸ್ಪಷ್ಟ, ಬುದ್ಧನೇ ಅಂತಹ ನಿರ್ಬಂಧಗಳನ್ನು ಹೇರಿಲ್ಲದಿರುವುದರಿಂದ ನಾವ್ಯಾಕೆ ಹೇರಿಕೊಳ್ಳಬೇಕು ಮಾಂಸ ತಿನ್ನಬಾರದು ಅದು ಮಾಡಬಾರದು ಇದು ಮಾಡಬಾರದು ಎಂದು? In fact ದಾನದ ರೂಪದಲ್ಲಿ ಬಂದರೆ ಭಿಕ್ಕುಗಳು ಮಾಂಸ ತಿನ್ನುವುದಕ್ಕೂ ಬುದ್ಧ ನಿಷೇಧ ಹೇರಿಲ್ಲ. ಹೀಗಿರುವಾಗ ಸಾಮಾನ್ಯ ಅನುಯಾಯಿಗಳಿಗೆ? ಆದ್ದರಿಂದ ಬೌದ್ಧ ಧರ್ಮ ಪ್ರಚಾರ ಮಾಡುವಾಗ ಮಾಂಸ ತಿನ್ನಬಾರದು, ಮದ್ಯಪಾನ ಮಾಡಬಾರದು ಎಂದು ಅನವಶ್ಯಕವಾಗಿ ಹೇಳುವುದು ಬೇಡ. ಬದಲಿಗೆ ಅದನ್ನು ಅನುಯಾಯಿಗಳಿಗೆ ಬಿಟ್ಟು ಬಿಡಬೇಕು. ಒಂದು ಕಾನೂನಾಗಿ ಅದನ್ನು ಅನುಯಾಯಿಗಳ ಮೇಲೆ ಹೇರಲು ಹೋಗಬಾರದು. ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿ ಓದದೆ, ಬುದ್ಧರ ಈ ಮಧ್ಯಮ ಮಾರ್ಗವನ್ನು ಅರ್ಥಮಾಡಿಕೊಳ್ಳದೆ ಇನ್ನೊಬ್ಬರ ಮೇಲೆ “ಮಾಂಸ ತಿನ್ನಬೇಡ, ಮದ್ಯಪಾನ ಮಾಡಬೇಡ” ಎಂದು ಕಾನೂನಿನ ರೀತಿ ಬಲವಂತ ಪಡಿಸಿದರೆ ಖಂಡಿತ ಅದು ಬೌದ್ಧ ಧರ್ಮದ ಬೆಳವಣಿಗೆಗೆ ಮಾರಕವಾಗಲಿದೆ.

ರಘೋತ್ತಮ ಹೊ.ಬ

(ಈ ಲೇಖನಕ್ಕೆ ಆಧಾರ: Buddha and his Dhamma by Babasaheb Ambedkar, Pp.346& 347)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪ್ರೀತಿಯ ವಾಲ್ಮೀಕಿ -ನಾಯಕ ಸಮುದಾಯದ ಸಹೋದರರೇ

Published

on

ಮೊದಲೇ ತಿಳಿಸಿದಂತೆ ವಾಲ್ಮೀಕಿ -ನಾಯಕ ಸಮುದಾಯವು 7.5% ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾನು ನೈತಿಕವಾಗಿ ಬೆಂಬಲಿಸುತ್ತಿದ್ದೇನೆ. ಈಗ ನಿಮ್ಮ ಮುಂದೆ ನಾನು ಮಂಡಿಸುತ್ತಿರುವ ಈ ಕೆಳಗಿನ ತಕರಾರುಗಳೆಲ್ಲವೂ ನಿಮಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಲಿ ಎಂದಷ್ಟೇ ಆಶಿಸುತ್ತೇನೆ.

ಮೊನ್ನೆ ನಡೆದ ವಾಲ್ಮೀಕಿ- ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಹಾರಾಡುತ್ತಿದ್ದವು. ಭಗವಾಧ್ವಜ ಎಂಬುದು ನಾಯಕ ಸಮುದಾಯದವರ ಪಾಲಿಗೆ ದಲಿತರ ಸ್ವಾಭಿಮಾನಿ ಹೋರಾಟದ ಲಾಂಛನವಾಗಿರುವ ನೀಲಿ ಬಾವುಟಕ್ಕಿಂತಲೂ ಮಹತ್ವವಾದದ್ದೇನು? ಭಗವಾಧ್ವಜಗಳನ್ನು ಹಾರಾಡಿಸಿಕೊಂಡು ಯಾರೇ ಬರಲಿ ಅವರು ಅಂಬೇಡ್ಕರ್ ಗೆ ವಿರೋಧಿಗಳೆಂದು ನಾವು ತಿಳಿಯಬೇಕಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಾಮಾಜಿಕ ನ್ಯಾಯದ ಮಾನದಂಡವೆಂದು ಮೀಸಲಾತಿಯನ್ನು ದೊರಕಿಸಿಕೊಟ್ಟ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಎಲ್ಲ ಪಂಗಡಗಳು ಒಂದಾಗುವುದನ್ನು ಬಿಟ್ಟು ಮೀಸಲಾತಿ ವಿರೋಧಿಗಳಾದ ಕೇಸರಿ ಪಡೆಗಳ ಹಿಂದೆ ಭಗವಾಧ್ವಜ ಹಾರಿಸುತ್ತಾ ಹೋಗುವುದು ನ್ಯಾಯವೇನು? ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್- ಕುವೆಂಪು ಮುಂತಾದ ಮಾನವತಾವಾದಿಗಳ ಜಾತ್ಯತೀತ ಹೋರಾಟದ ಹಿನ್ನೆಲೆ ತಿಳಿಯದೆ ಕೋಮುವಾದಿ ಸಂಘಿಗಳೊಂದಿಗೆ ಕೈಜೋಡಿಸುತ್ತಾ ಬರಿದೇ ಮೀಸಲಾತಿ ಫಲಾನುಭವಗಳಿಗಾಗಿ ಆಸೆಪಡುವ ಜನರು, ಅನ್ನ ಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಮಾಯಣ – ಮಹಾಭಾರತ- ಭಗವದ್ಗೀತೆ ಬೇಕೆನ್ನುತ್ತಿದ್ದಾರೆ. ಆತ್ಮಗೌರವದ ಸಂಕೇತವಾದ ನೀಲಿ ಧ್ವಜ ಬೇಕಿಲ್ಲವೆಂದು ದೂರವಿಟ್ಟಿರುವ ಇದೇ ಜನ ಹಿಂದುತ್ವದ ಹೆಸರಿನಲ್ಲಿ ಮತೀಯ ಧ್ವೇಷ ಹರಡುವ ಭಗವಾಧ್ವಜ ಹಿಡಿದುಕೊಂಡಿದ್ದಾರೆ. ಜೈ ಭೀಮ್ ಎಂದು ಭೀಮಮಂತ್ರ ಹೇಳಬೇಕಾದವರು ಜೈ ಶ್ರೀರಾಮ್ – ಜೈ ಭಜರಂಗಬಲಿ ಎಂದು ಕೂಗುತ್ತಿದ್ದಾರೆ. ಏನೆಂತಾ ವರ್ತನೆ ಇವರದು? ಈ ವರ್ತನೆ ಎಷ್ಟರಮಟ್ಟಿಗೆ ಸರಿ?.

ಮೇಲ್ಜಾತಿಗಳ ಗುಡಿಗಳಿಗೂ ಮನೆಗಳಿಗೂ ಪ್ರವೇಶಿಸುವ ಸಾಮಾಜಿಕ ಸ್ವಾತಂತ್ರ್ಯವಿರುವ ವಾಲ್ಮೀಕಿ- ನಾಯಕರಿಗೆ ಹೋಲಿಸಿ ನೋಡಿದರೆ, ಅದೇ ಮೇಲ್ಜಾತಿಯವರ ಗುಡಿಯಾಚೆಗೂ ಮನೆಯಾಚೆಗೂ ತಲೆ ತಗ್ಗಿಸಿ ಕೈಕಟ್ಟಿಕೊಂಡು ನಿಂತಿರುವ ಹೊಲೆಮಾದಿಗರಷ್ಟು ತೀವ್ರವಾದ ಸಾಮಾಜಿಕ ಶೋಷಣೆಗೀಡಾಗಿಲ್ಲವೆಂಬುದು ವಾಸ್ತವ ಸಂಗತಿ. ಸಾಮಾಜಿಕ ಬಹಿಷ್ಕಾರಕ್ಕೆ ಹೊಲೆಮಾದಿಗರು ಗುರಿಯಾಗುತ್ತಿರುವರೇ ಹೊರತು ನಾಯಕ ಜನಾಂಗದವರಲ್ಲ. ಮೀಸಲಾತಿ ಕೇಳುವ ವಾಲ್ಮೀಕಿ – ನಾಯಕರು ಸವರ್ಣೀಯರೊಂದಿಗೆ ಮಾತ್ರ ಗುರುತಿಸಿಕೊಳ್ಳುತ್ತಿದ್ದಾರೆ. ಚಪ್ಪಲಿ ಹೊಲೆಯುವ – ಸತ್ತ ಪಶುಗಳನ್ನು ಹೊತ್ತು ಸಾಗಿಸುವ – ಅರೆ ತಮಟೆ ನುಡಿಸುತ್ತಾ ತೋಟಿ ಕೆಲಸ ಮಾಡುವ – ಕಕ್ಕಸ್ಸು ಬಾಚಿ ಜಾಡಮಾಲಿ ಕೆಲಸ ಮಾಡುವ ಹೊಲೆಮಾದಿಗರನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದಾರೆ. ಸಮಾಜದ ಸೇವೆ ಮಾಡುತ್ತಾ ಕಟ್ಟಕಡೆಯವರಾಗಿ ಬದುಕುತ್ತಿರುವ ಹೊಲೆಮಾದಿಗರ ವಿರುದ್ಧ ನಾಯಕ ಸಮುದಾಯದವರು ತೋರಿಸುವ ಅಸಡ್ಡೆ -ಕೃತಘ್ನತೆ- ಶೋಷಣೆ ಮಾನವೀಯವಾದದ್ದೇ? ಅಂಬೇಡ್ಕರ್ ದೊರಕಿಸಿ ಕೊಟ್ಟಿರುವ ಮೀಸಲಾತಿಯ ಅನುಕೂಲ ಬೇಕೆಂದ ಮೇಲೆ ಅಂಬೇಡ್ಕರ್ ಅವರು ಹುಟ್ಟಿದ ಅಸ್ಪೃಶ್ಯರ ಸಮಾಜದ ಪರವಾಗಿ ನಿಲ್ಲದಿರುವ ಬಹತೇಕ ನಾಯಕರು, ಜಾತಿ ದೌರ್ಜನ್ಯ ಎಸಗುವ ಸವರ್ಣೀಯರೊಂದಿಗೆ ಮನುವಾದಿಗಳೊಂದಿಗೆ ಗುರುತಿಸಿಕೊಳ್ಳುವುದು ಸರಿಯೇನು? ಇತ್ತೀಚೆಗೆ ಏಪ್ರಿಲ್ 14 ರಂದು ಪಾವಗಡದಲ್ಲಿ ನಾಯಕ ಸಮುದಾಯದವರು ಸವರ್ಣೀಯರೊಂದಿಗೆ ಕೈಜೋಡಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ದಲಿತ ವಿರೋಧಿ ವರ್ತನೆ ಮತ್ತು ಅಸ್ಪೃಶ್ಯರ ವಿರುದ್ಧ ನಾಯಕರು ಎಸಗುತ್ತಿರುವ ದೌರ್ಜನ್ಯವನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬುವ ಸ್ವಾಮೀಜಿಯೊಬ್ಬ ಠೇಂಕಾರದಿಂದ ಮಾತಾಡುತ್ತಾ ಮನುವಾದಿಗಳ ತಾಳಕ್ಕೆ ಕುಣಿಯುವ ಭಟ್ಟಂಗಿಯಾಗಿ ವಾಲ್ಮೀಕಿ ಸಮುದಾಯದ ಯುವಕರನ್ನು ಕೋಮುವಾದಿಗಳನ್ನಾಗಿ ಪರಿವರ್ತಿಸುತ್ತಿದಾರೆ. ಮೊನ್ನೆ ದಿನ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ವಾಲ್ಮೀಕಿ – ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಈ ಸ್ವಾಮೀಜಿಯ ನೇತೃತ್ವದಲ್ಲಿ ರಾರಾಜಿಸುತ್ತಿದ್ದವು. ಅಲ್ಲಿ ದಲಿತ ಚಳವಳಿಯ ಸ್ವಾಭಿಮಾನಿ ಹೋರಾಟದ ಸಂಕೇತವಾದ ನೀಲಿ ಬಾವುಟಗಳು ಯಾಕಿರಲಿಲ್ಲ? ಕೇಸರಿ ಭಗವಾಧ್ವಜವು ಅಂಬೇಡ್ಕರ್ ವಿರೋಧಿ ಮನುವಾದಿಗಳಿಗೆ ಮಾತ್ರ ಲಾಂಛನವಾಗಿರುತ್ತದೆ. ಅಂತಹ ವಿರೋಧಿ ಶಕ್ತಿಗಳ ಜೊತೆಗೆ ಗುರುತಿಸಿಕೊಂಡಿರುವ ಸ್ವಾಮೀಜಿಯು ಒಪ್ಪುವ ಕೇಸರಿ ಬಾವುಟಗಳನ್ನೇಕೆ ನೀವು ಬಳಸಿದಿರಿ? ಇದು ಕೇಸರಿ ಬಾವುಟ ಹಿಡಿಯಲು ದಲಿತ ಯುವಕರನ್ನು ಪ್ರಚೋದಿಸುತ್ತಿರುವ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಲಿಯಾಸ್ ಕಿಟ್ಟಿಗೂ ಅನ್ವಯಿಸುವ ಪ್ರಶ್ನೆ. ಭಾರತೀಯ ದಲಿತ ಚಳುವಳಿಯ ಪ್ರಜ್ಞೆಯಾಗಲೀ ಪ್ರಜಾತಾಂತ್ರಿಕ ತಿಳಿವಳಿಕೆಯಾಗಲೀ ಇಲ್ಲದೇ ಭಗವಾಧ್ವಜ ಹಾರಿಸುವ ಸ್ವಾಮೀಜಿಗಳು ನಮ್ಮ ಪ್ರಜಾತಾಂತ್ರಿಕ ನಡಿಗೆಗೆ ಯಾವತ್ತಿಗೂ ಮಾರಕವೆಂದು ನಿಮಗೆ ಅನ್ನಿಸುತ್ತಿಲ್ಲವೇಕೆ?

ಮ್ಯಾಸಬೇಡರು ಊರನಾಯಕರಿಗಿಂತ ಹಿಂದುಳಿದಿದ್ದಾರೆ. ಮ್ಯಾಸಬೇಡರು ಇಂದಿಗೂ ಬುಡಕಟ್ಟು ಚಹರೆಗಳನ್ನು, ಪೆಟ್ಟಿಗೆ ದೇವರುಗಳನ್ನು, ನೆಲದೇವತೆಗಳ ನೆಲೆಗಳನ್ನು, ಪ್ರತ್ಯೇಕ ಭಾಷೆಯನ್ನು, ಗೋಮಾಂಸ ಸೇವನೆಯ ಮೂಲ ಆಹಾರ ಸಂಸ್ಕೃತಿಯನ್ನು, ಗುಡಿಕಟ್ಟು ಕಟ್ಟೆಮನೆ ಒಳಾಡಳಿತ ಪದ್ದತಿಯನ್ನು ಉಳಿಸಿಕೊಂಡುಬಂದಿದ್ದಾರೆ. ಹಾಗಾಗಿ ಮ್ಯಾಸಬೇಡರು ನಿಜವಾದ ಮೀಸಲಾತಿ ಫಲಾನುಭವಿಗಳಾಗಬೇಕಿದೆ. ಇವರು ಇಂದಿಗೂ ಶಿಕ್ಷಣಕ್ಕಾಗಲೀ ನಾಗರಿಕ ಬದುಕಿಗಾಗಲೀ ತೆರದುಕೊಳ್ಳದೆ ಮೀಸಲಾತಿಯೂ ಸಿಗದೆ ಒದ್ದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರಲು ಹಕ್ಕಿಪಿಕ್ಕಿ ಸೋಲಿಗ ಕಾಡುಕುರುಬ ಮಲೆಕುಡಿಯ ಜೇನುಕುರುಬ ಇರುಳಿಗ ಸಿದ್ಧಿಯರು ಮುಂತಾದವರಿಗೆ ಸಿಗಬೇಕಾದ ST ಮೀಸಲಾತಿಯ ಸಿಂಹಪಾಲು ಊರನಾಯಕರ ಪಾಲಾಗುತ್ತಿದೆ. ದೇವರ ಎತ್ತುಗಳ ಕಿಲಾರಿಗಳನ್ನು ಮತ್ತು ದೇವರ ಎತ್ತುಗಳನ್ನೇ ಪವಿತ್ರವೆಂದು ಎತ್ತಿನ ಬಾಲ ಹಿಡಿದುಕೊಂಡಿರುವ ಮ್ಯಾಸನಾಯಕರು ಮೂಲೆಗುಂಪಾಗಿದ್ದಾರೆ. 2011 ರಲ್ಲಿಯೇ ಮ್ಯಾಸಬೇಡರನ್ನು ಓಬಿಸಿ ಪಟ್ಟಿಗೆ ಸೇರಿಸಲಾಗಿದೆ.. ಇದು ಊರನಾಯಕರು ಮಾತ್ರ 7.5% ಮೀಸಲಾತಿ ದೋಚಿಕೊಳ್ಳಲು ಮಾಡಿರುವ ಹುನ್ನಾರವಾಗಿದೆ. ಈ ಪ್ರಶ್ನೆಗೆ ನಿಮ್ಮ ಉತ್ತರವೇನು?

ದಾರ್ಶನಿಕ ಕವಿ ವಾಲ್ಮೀಕಿ ಅವರಿಗಿರುವಷ್ಟು ಸ್ಥಾನಮಾನವನ್ನು ನಾಯಕ ಸಮುದಾಯದವರು, ನಮಗೆಲ್ಲರಿಗೂ ಮೀಸಲಾತಿ ತಂದುಕೊಟ್ಟ ಮಹಾನ್ ನೇತಾರನಾದ ಅಂಬೇಡ್ಕರ್ ಅವರಿಗೆ ನೀಡುತ್ತಿಲ್ಲ. ವಾಲ್ಮೀಕಿ ಒಬ್ಬ ಪುರಾಣಿಮ ಕವಿ – ಅಂಬೇಡ್ಕರ್ ಮೀಸಲಾತಿಯನ್ನು ಕೊಟ್ಟ ಸಾಮಾಜಿಕ ಹೋರಾಟಗಾರ. ಪುರಾಣ ಸಂಗತಿಗಳು ಸಮಾಜದ ಧಾರ್ಮಿಕ ನಾಡಿಯೇ ಹೊರತು ಸಂವಿಧಾನಪ್ರಣೀತ ರಾಜಕೀಯ ಶಕ್ತಿಯಲ್ಲ. ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್ – ಕುವೆಂಪು ಮುಂತಾದ ಮಾನವತಾವಾದಿ ಜಾತ್ಯತೀತ ಹೋರಾಟಗಾರು ಹಾಗೂ ಸಾಮಾಜಿಕ ನ್ಯಾಯದ ನಿಷ್ಠಾವಂತ ಪ್ರಗತಿಪರ ಹೋರಾಟಗಾರರು ನಮಗೆ ಪ್ರಧಾನವಾಗಬೇಕೇ ಹೊರತು ಪುರಾಣಿಮ ಪ್ರತಿಮಾ ನಾಯಕರಲ್ಲ. ಪುರಾಣಿಮ ಕವಿ ವಾಲ್ಮೀಕಿ ನಮ್ಮೆಲ್ಲರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವೆಂಬುದನ್ನು ಒಪ್ಪುತ್ತೇವೆ.

ಆದರೆ ಮೀಸಲಾತಿ ದೊರಕಿಸಿಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಅಂಬೇಡ್ಕರ್ ನಮಗಿಂದು ಸಾಮಾಜಿಕ ಚಳವಳಿಗಳಲ್ಲಿ ಹೆಚ್ಚು ಪ್ರಸ್ತುತ ಎಂಬುದು ನಿಮಗೇಕೆ ತಿಳಿಯುತ್ತಿಲ್ಲ? ವಾಲ್ಮೀಕಿ ಜಯಂತಿಯನ್ನು ಆಚರಿಸಲು ತೋರಿಸುವ ಉತ್ಸಾಹದ ಅರ್ಧದಷ್ಟಾದರೂ ನಾಯಕ ಸಮುದಾಯದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ತೋರಿಸುತ್ತಿಲ್ಲ ಯಾಕೆ? ಪುರಾಣಿಮ ನಾಯಕನಾದ ವಾಲ್ಮೀಕಿ ಮತ್ತು ಚಾರಿತ್ರಿಕ ಪಾಳ್ಳೇಗಾರನಾದ ಮದಕರಿನಾಯಕರ ಜಯಂತಿಗಳನ್ನು ಆಚರಿಸುವ ಇದೇ ಜನ, ಡಾ.ಅಂಬೇಡ್ಕರ್ ಅವರ ಜಯಂತಿ ಆಚರಿಸಲು ಅಥವಾ ಗೌರವ ತೋರಿಸಲು ಯಾಕೆ ಮುಂದಾಗಬಾರದು? ಪುರಾಣಿಮ ಕವಿ ವಾಲ್ಮೀಕಿಗೆ ಕೊಟ್ಟಿರುವ ಲೇಶಮಾತ್ರ ಗೌರವದ ಸ್ಥಾನವನ್ನು ಅಂಬೇಡ್ಕರ್ ಗೆ ಕೊಡದಿರುವ ಇವರು ವಾಲ್ಮೀಕಿಯಿಂದ ಮೀಸಲಾತಿ ಪಡೆದರೋ ಅಥವಾ ಅಂಬೇಡ್ಕರ್ ಅವರಿಂದ ಪಡೆದರೋ?

ಪ್ರೊ.ಕೆ.ನಾರಾಯಣಸ್ವಾಮಿ (ಕೆಎನ್ಎಸ್) ಅವರನ್ನು ಹೊರತುಪಡಿಸಿ ಅಷ್ಟೊಂದು ಬದ್ಧತೆಯಿಂದ ದಲಿತ ಚಳವಳಿಗಾಗಿ ನಾಯಕ ಸಮುದಾಯದ ಯಾವುದೇ ನೇತಾರ ಹೋರಾಟ ಮಾಡಿದ ಉದಾಹರಣೆಗಳಿಲ್ಲ ಎಂಬುದು ಕಟುಸತ್ಯ. ಒಬ್ಬ ವ್ಯಕ್ತಿಯಾಗಿ ನ್ಯಾ.ಎಲ್.ಜಿ.ಹಾವನೂರು ವರದಿ ಹೊರತುಪಡಿಸಿ, ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಒಟ್ಟಾರೆ ಮೀಸಲಾತಿ ಹೋರಾಟಗಳಿಗೆ ನಾಯಕ ಸಮುದಾಯದವರು ನೀಡಿರುವ ಕೊಡುಗೆ ಏನು? ಹಾಗೂ ಈ ಹೋರಾಟಗಳಲ್ಲಿ ಅಸ್ಪೃಶ್ಯರೊಂದಿಗೆ ಕೈಜೋಡಿಸಿ ಒಳಮೀಸಲಾತಿ ಸಮಸ್ಯೆ ನಿರ್ವಹಣೆಗೆ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ? ಇನ್ನು ಅಲೆಮಾರಿಗಳ ಪಾಡಂತೂ ಮತ್ತಷ್ಟು ಚಿಂತಾಜನಕವಾಗಿದೆ. ಇಂದಿಗೂ ಟೆಂಟು ಡೇರೆಗಳಲ್ಲಿ ಗೋಚರಿಸದವರಾಗಿ ಅನೇಕ ಅಲೆಮಾರಿ ಸಮುದಾಯಗಳು ಭಿಕ್ಷಾಟನೆ ಮಾಡಿಕೊಂಡು ಊರೂರು ಅಲೆದಾಡುತ್ತಾ ಬದುಕುತ್ತಿವೆ. ಅವರ ಬದುಕು ಹಸನಾಗಿಸುವವರು ಯಾರು?

ಮೀಸಲಾತಿಯ ಮೂಲಕ ಅನ್ನ ಕೊಟ್ಟ ತಂದೆಯನ್ನೇ ಹೊರಗಿಡಬಾರದು.ಒಳಮೀಸಲಾತಿ ವರ್ಗೀಕರಣದ ಹೋರಾಟದಲ್ಲಿ ನಾಯಕ ಸಮುದಾಯದವರ ಬೆಂಬಲವೇ ವ್ಯಕ್ತವಾಗಿಲ್ಲ. ಇಲ್ಲಿ ಪ್ರಶ್ನೆ ಇರುವುದು ಕೇವಲ ಒಳ ಮೀಸಲಾತಿಯ ವರ್ಗೀಕರಣದ ಬಗ್ಗೆಯಲ್ಲ. ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳಲ್ಲಿ ಮೀಸಲಾತಿಯ ಜನಕ ಬಾಬಾ ಸಾಹೇಬರ ಭಾವಬಿಂಬವನ್ನು ನಾಯಕ ಸಮುದಾಯದವರು ಅಸ್ಪೃಶ್ಯರಷ್ಟು ಹೃದಯ- ದಮನಿ- ನಾಡಿಗಳಲ್ಲಿ ಹರಿಯುವ ನೆತ್ತರಿನ ಪ್ರಜ್ಞೆಯಾಗಿಸಿಕೊಂಡಿಲ್ಲ ಎಂಬುದೇ ಪ್ರಶ್ನೆ. ವಾಲ್ಮೀಕಿ ಸಮುದಾಯದ ಬಂಧುಗಳೆಲ್ಲರಲ್ಲಿಯೂ ಅರಿವು ಮೂಡಿ ಶೋಷಿತ ಸಮುದಾಯಗಳ ಬೆನ್ನಿಗೆ ನಿಂತಿದ್ದೇ ಆದರೆ, ದಲಿತರ ಮೇಲೆ ಜಾತಿ ಕಾರಣಕ್ಕೆ ದೌರ್ಜನ್ಯ ಎಸಗುವ ಜಾತಿಗ್ರಸ್ತ ಮನಸುಗಳ ಎದೆ ನಡುಗುವುದಷ್ಟೇ ಅಲ್ಲದೆ ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊಮ್ಮಬಹುದು. ಮೀಸಲಾತಿ ವಿಚಾರ ಬಂದಾಗ ಮಾತ್ರ ಅಂಬೇಡ್ಕರ್ ಫೋಟೋ ಹಿಡಿಯೋದು, ಬಾಕಿಯ ವೇಳೆಯಲ್ಲಿ ಹಿಂದುತ್ವದ ಝಂಡಾ ಹಾರಿಸೋದು ಹೀಗಿದೆ ಬಹುತೇಕ ಜನರ ವರ್ತನೆ. ಕೆಲವರು ಅಂಬೇಡ್ಕರ್ ಅಂದ್ರೆ ಹೊಲಯ ಮಾದಿಗ ಸಮುದಾಯಕ್ಕೆ ಮೀಸಲು ಅಂತಾ ತಿಳಿದುಕೊಂಡಿದ್ದಾರೆ… ತಾವೂ ದಲಿತರೆಂಬುದನ್ನು ಮರೆತೇಬಿಟ್ಟಿದ್ದಾರೆ. ನೆನಪಿರಲಿ ಮೀಸಲಾತಿಗೆ ಈ ದೇಶದ ಎಲ್ಲಾ ಧರ್ಮೀಯ ಶೋಷಿತರು ಹಕ್ಕುದಾರರು. ಸಂವಿಧಾನದ ಮೂಲಕ ಆ ಹಕ್ಕನ್ನು ದೊರಕಿಸಿಕೊಟ್ಟಿರುವುದು ಅಂಬೇಡ್ಕರ್! ಅದೇ ಸಂವಿಧಾನವನ್ನು ಸುಡುತ್ತಿರುವ ವಿರೋಧಿಗಳೊಂದಿಗೆ ಗುರುತಿಸಿಕೊಳ್ಳುವುದೆಂದರೆ ಅದು ಹೆತ್ತ ತಾಯಿಯ ವಿರುದ್ಧ ಮಕ್ಕಳು ಎಸಗುವ ಮಹಾ ಪಾಪಕಾರ್ಯ!

ಇಂತಹ ವಾಸ್ತವಗಳಿಗೆ ನಾವು ಮುಖಾಮುಖಿಯಾಗಬೇಕು. ಇಲ್ಲದಿದ್ದರೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಸಾಗುವ ದ್ರೋಹಿಗಳೂ ಆತ್ಮವಂಚಕರೂ ಆಗುತ್ತೇವೆ. ಶರಣು ಶರಣಾರ್ಥಿಗಳು.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending