Connect with us

ಬಹಿರಂಗ

ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯ..!

Published

on

ಭಾರತದ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಮಾನವೀಯ ಅಸ್ಪೃಶ್ಯತೆಯಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯಗಳು ಸಮಾನ ದುಃಖಿಗಳು. ಇಂದಿಗೂ ಶೂದ್ರ ಮತ್ತು ಹಿಂದೂ ಮೇಲ್ಜಾತಿಗಳು ಈ ಎರಡು ಸಮುದಾಯಗಳಿಗೆ ಸೇರಿದ ಜನರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಪಶ್ಚಿಮದ ದೇಶಗಳಲ್ಲಿ ಜನಾಂಗೀಯ ಬೇಧಕ್ಕೆ ಕಪ್ಪು ಜನರು ಹೇಗೆ ಗುರಿಯಾಗುತ್ತಿದ್ದಾರೆಯೋ ಅದೇ ರೀತಿ ನಮ್ಮಲ್ಲಿ ದಲಿತ ಜಾತಿಗಳಿಗೆ ಸೇರಿದ ಜನರು ದಿನ ನಿತ್ಯ ನಾನಾ ರೀತಿಯಲ್ಲಿ ಗುರಿಯಾಗುತ್ತಿದ್ದಾರೆ.

ಆದರೆ ಕೆಲವು ಸಂದರ್ಭಗಳಲ್ಲಿ ಈ ಎರಡು ದಲಿತ ಸಮುದಾಯಗಳು ಪರಸ್ಪರ ಸಂಘರ್ಷ ನಡೆಸುತ್ತವೆ. ಬ್ರಾಹ್ಮಣೀಯ ಜಾತಿ ವ್ಯವಸ್ಥೆಯ ಸಮರ್ಥನೆಗಾಗಿ ಕೆಲವರು ಈ ಸಮುದಾಯಗಳ ಸಂಘರ್ಷವನ್ನು ಉದಾಹರಣೆ ನೀಡುವುದೂ ಇದೆ. “ಬರೀ ಬ್ರಾಹ್ಮಣರು ತಾರತಮ್ಯ ಮಾಡುವುದಲ್ಲ, ಹೊಲೆಯರು ಮಾದಿಗರೂ ಸಹ ಕಿತ್ತಾಡುತ್ತಾರೆ ನೋಡಿ, ಜಾತಿ ತಾರತಮ್ಯ ಬಹಳ ಬಲವಾಗಿ ದಲಿತರಲ್ಲಿಯೇ ಇದೆ” ಎಂದು ಅವರು ವಾದಿಸುತ್ತಾರೆ.

ಮೊನ್ನೆ ಮೈಸೂರಿನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯದ ಕುರಿತು ಮಾಜಿ ಸಚಿವ, ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಈ ಎಡಗೈ-ಬಲಗೈ ಸಮುದಾಯಗಳಿಗೆ ಸೇರಿದ ಕೆಲವರು ಪರಸ್ಪರ ಕಿತ್ತಾಡುತ್ತಿದ್ದಾರೆ. ಇದನ್ನು ವಿವೇಕ ಕಳೆದುಕೊಂಡ ನಡೆ ಎನ್ನದೇ ವಿಧಿಯಿಲ್ಲ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದ ಕುರಿತು ನ್ಯಾಯಮೂರ್ತಿ ಸದಾಶಿವ ವರದಿಯನ್ನು ಬಹಿರಂಗಪಡಿಸಿ, ಅದರ ಕುರಿತು ಮುಕ್ತ ಚರ್ಚೆಗೆ ಅವಕಾಶವಾಗಿ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಎಡಗೈ ಬಲಗೈ ದಲಿತರು, ದಲಿತೇತರರು ಎಲ್ಲರೂ ಸಮಾಜದ ಹಿತದೃಷ್ಟಿಯಿಂದ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಇದು ಕೇವಲ ಪರಿಶಿಷ್ಟ ಜಾತಿಯ ಸಮಸ್ಯೆ ಅಲ್ಲ. ಇದು ಇಡೀ ಸಮಾಜಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಆಗಿರುವುದರಿಂದ ಈ ಬಗ್ಗೆ ಎಲ್ಲಾ ಪ್ರಜ್ಞಾವಂತರೂ ಆಲೋಚಿಸಬೇಕಾಗಿದೆ.

ಇಲ್ಲಿ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಿರುವ ಒಂದು ವಿಷಯವೆಂದರೆ ದಲಿತ ಸಮುದಾಯ ಎಡಗೈ ಬಲಗೈ ಎಂದು ವಿಭಜನೆಗೊಂಡಿದ್ದು ಯಾಕೆ ಎಂದು. ‘ಅವರವರೇ ಕಚ್ಚಾಡುತ್ತಾರೆ’ ಎಂದು ದೂರದಲ್ಲಿ ನಿಂತು ಬೊಟ್ಟು ಮಾಡುವ ಸಮಾಜದ ಪಾತ್ರ ಇದರಲ್ಲಿ ಇಲ್ಲವೇ? ಖಂಡಿತಾ ಇದೆ. ವಾಸ್ತವದಲ್ಲಿ ಹೊಲೆಯರು ಮತ್ತು ಮಾದಿಗರು ಎಡಗೈ ಮತ್ತು ಬಲಗೈ ಎಂದು ವಿಂಗಡಣೆಯಾದ್ದು ಆ ಜಾತಿಗಳ ಸ್ವಂತ ಇಚ್ಛೆಯಿಂದ ಆಗಿರಲಿಲ್ಲ. ಈ ಎಡಗೈ-ಬಲಗೈ ಜಾತಿ ವಿಭಜನೆಗೆ ದೊಡ್ಡ ಇತಿಹಾಸವೇ ಇದೆ. ಇದು ಕೇವಲ ಕರ್ನಾಟಕದಲ್ಲಿ ನಡೆದ ವಿದ್ಯಮಾನವಲ್ಲ ಹಾಗೂ ಕೇವಲ ಹೊಲೆಯ- ಮಾದಿಗರಿಗೆ ಮಾತ್ರ ಸಂಬಂಧಿಸಿದ ವಿದ್ಯಮಾನವೂ ಆಗಿರಲಿಲ್ಲ. ಚರಿತ್ರೆಯ ಗತಿಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಸಂಭವಿಸಿದ ಜಾತಿ ವಿಂಗಡಣೆ ಇದಾಗಿತ್ತು. ಈ ವಿಂಗಡಣೆ ಮೂಲದಲ್ಲಿ ಯಾವಾಗ ಮತ್ತು ಹೇಗಾಯಿತು, ಏಕಾಯಿತು ಎಂಬ ಬಗ್ಗೆ ಖಚಿತ ಆಧಾರಗಳು ಸಿಕ್ಕಿಲ್ಲವಾದರೂ 11ನೇ ಶತಮಾನದಲ್ಲಿ ದಕ್ಷಿಣ ಭಾರತ ಆಳುತ್ತಿದ್ದ ಚೋಳರ ಕಾಲದಿಂದಲೂ ಎಡಗೈ-ಬಲಗೈ ವಿಭಜನೆಯ ಕುರಿತು ದಾಖಲೆಗಳು ಲಭ್ಯ ಇವೆ.

ಒಂದು ಅಧ್ಯಯನದ ಪ್ರಕಾರ ಕೃಷಿ ಆಧಾರಿತ ಜಾತಿಗಳು ಬಲಗೈ ಸಮೂಹದಲ್ಲಿಯೂ ಕರಕುಶಲ ಕರ್ಮಿ- ವ್ಯಾಪಾರಿ ಸಮುದಾಯಗಳು ಎಡಗೈ ಸಮೂಹದಲ್ಲಿಯೂ ಇದ್ದವು. ಇವುಗಳಿಗೆ ಕರ್ನಾಟಕದಲ್ಲಿ ಪಣಕಟ್ಟುಗಳು ಎಂದು ಕರೆಯಲಾಗುತ್ತಿತ್ತು. ಮೈಸೂರು ಗೆಝೆಟಿಯರ್ನಲ್ಲಿ ದಾಖಲಾಗಿರುವ ಪ್ರಕಾರ ಬಲಗೈ ಪಣಕಟ್ಟಿನಲ್ಲಿ 18 ಜಾತಿಗಳಿದ್ದು ಬಣಜಿಗ, ಒಕ್ಕಲಿಗ, ಗಾಣಿಗ, ಕುರುಬ ಮುಂತಾದ ಜಾತಿಗಳಿದ್ದವು. ಹಾಗೆಯೇ ಪಾಂಚಾಳ/ವಿಶ್ವಕರ್ಮ, ಅಕ್ಕಸಾಲಿಗ, ದೇವಾಂಗ, ಬೇಡ ಮೊದಲಾದ 14 ಜಾತಿಗಳು ಎಡಗೈ ಪಣಕಟ್ಟಿನಲ್ಲಿದ್ದವು. ಈ ಜಾತಿಗಳ ಉಪಜಾತಿಗಳೆಲ್ಲ ಸೇರಿ 98 ಜಾತಿಗಳಿದ್ದವು ಎನ್ನಲಾಗುತ್ತದೆ. ಪ್ರಮುಖ ವ್ಯಾಪಾರಿ ಸಮುದಾಯವಾಗಿದ್ದ ಜೈನ ಸಮುದಾಯ 13ನೇ ಶತಮಾನದವರೆಗೂ ಬಲಗೈ ಭಾಗವಾಗಿದ್ದು ನಂತರ ವಿಜಯನಗರದ ಅರಸರ ಕಾಲದಲ್ಲಿ ಎಡಗೈಗೆ ವರ್ಗಾವಣೆಯಾಯಿತು. ಈ ಪಣಕಟ್ಟುಗಳ ಇತಿಹಾಸ ನೋಡಿದರೆ ಮೊದಲಿನಿಂದಲೂ ಎರಡೂ ಪಣಕಟ್ಟುಗಳು ಪ್ರತ್ಯೇಕ ಚಿನ್ಹೆಗಳು, ಪ್ರತ್ಯೇಕ ನಡಾವಳಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡಿವೆ. ಪರಸ್ಪರ ಪಣಕಟ್ಟುಗಳ ನಡುವೆ ತೀವ್ರತರದ ಸಂಘರ್ಷಗಳು ನಡೆದಿವೆ. 19ನೆಯ ಶತಮಾನದಲ್ಲಿ ಈ ಸಂಘರ್ಷಗಳು ನಡೆದಾಗ ಬ್ರಿಟಿಷರು ಹಳ್ಳಿಗಳನ್ನೇ ಎರಡು ಗುಂಪುಗಳಿಗೆ ವಿಭಜನೆ ಮಾಡಿದ್ದೂ ಇದೆ.

ಈ ಎಡಗೈ-ಬಲಗೈ ಪಣಕಟ್ಟುಗಳು ನಮ್ಮ ಸಮಾಜದ ಜಾತಿ ವ್ಯವಸ್ಥೆಯ ತಳಹದಿಯ ಮೇಲೆ ರೂಪುಗೊಂಡಿದ್ದ ವೃತ್ತಿ ಆಧಾರಿತ ವಿಭಜಿತ ಕೂಟಗಳಾಗಿದ್ದವು. ಈ ವಿಭಜನೆಯಲ್ಲಿ “ಅಸ್ಪೃಶ್ಯ ಸಮುದಾಯಗಳು” ಎಂದು ಪರಿಗಣಿಸಲಾಗಿದ್ದ ಹೊಲೆಯ ಸಮುದಾಯ ಬಲಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಮಾದಿಗ ಸಮುದಾಯ ಎಡಗೈ ಪಣಕಟ್ಟಿನ ಅತ್ಯಂತ ಕೆಳಸ್ತರದಲ್ಲಿಯೂ ಇಡಲ್ಪಟ್ಟಿದ್ದವು. ಮುಖ್ಯವಾಗಿ ಇಡೀ ಪಣಕಟ್ಟಿನ ನಿರ್ದೇಶನ ಮುಂದುವರಿದ ಜಾತಿಗಳಿಂದಲೇ ನಡೆಯುತ್ತಿತ್ತು. ಹೊಲೆಯ ಸಮುದಾಯಕ್ಕೆ ಬಲಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಮಾದಿಗ ಸಮುದಾಯಕ್ಕೆ ಎಡಗೈ ಪಣಕಟ್ಟಿನ ರಕ್ಷಣೆಯ ಹೊಣೆಯನ್ನೂ ಹೊರಿಸಲಾಗಿತ್ತು. ಎರಡೂ ಪಣಕಟ್ಟುಗಳ ನಡುವೆ ಸಂಘರ್ಷ ಎದುರಾದರೆ ಹೊಡೆದಾಟ ಮಾತ್ರ ಹೊಲೆಯ ಮಾದಿಗರ ನಡುವೆ ನಡೆಯುತ್ತಿತ್ತು. ಇವೆರಡೂ ಜಾತಿಗಳ ನಡುವೆ ದ್ವೇಷವನ್ನು ಶಾಶ್ವತಗೊಳಿಸಲು ಹೊಲೆಯನ ಪತ್ನಿಯಾದವಳು ಎಡಗೈ ಗುಂಪಿನಲ್ಲಿಯೂ ಮಾದಿಗನ ಪತ್ನಿಯಾದವಳು ಬಲಗೈ ಗುಂಪಿನಲ್ಲಿಯೂ ಸೇರಿಸಲಾಗಿದ್ದ ಬಗ್ಗೆ ಸಿಂದ್ ಮಾದಿಗರ ಸಂಸ್ಕೃತಿ ಕೃತಿಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.

ಈ ಪಣಕಟ್ಟುಗಳ ಭಾಗವಾಗಿ ಬ್ರಾಹ್ಮಣ ಜಾತಿ ಇರಲಿಲ್ಲ. ಆದರೆ ಬಹುತೇಕ ರಾಜಮನೆತನಗಳನ್ನು ಬ್ರಾಹ್ಮಣ ಪುರೋಹಿತರೇ ನಿಯಂತ್ರಿಸುತ್ತಿದ್ದುದರಿಂದ ಈ ಪಣಕಟ್ಟುಗಳ ನಡಾವಳಿಗಳನ್ನು ಬ್ರಾಹ್ಮಣರು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದುದಾಗಿ ಕಂಡು ಬರುತ್ತದೆ.
ರಾಜಶಾಹಿ ವ್ಯವಸ್ಥೆಯ ಅವಸಾನದೊಂದಿಗೆ 20ನೆ ಶತಮಾನದಲ್ಲಿ ಸೊ ಕಾಲ್ಡ್ ಮೇಲ್ಜಾತಿಗಳ ನಡುವೆ ಪಣಕಟ್ಟು ಬೇಧ ಕೊನೆಗೊಂಡಿತು. ಆದರೆ ಶತಮಾನಗಳವರೆಗೆ ಈ ಪಣಕಟ್ಟುಗಳ ಭಾಗವಾಗಿ ಕಾಲಾಳುಗಳಾಗಿ ಪರಸ್ಪರ ಹೊಡೆದಾಡಿಕೊಂಡು ಬಂದಿದ್ದ ಹೊಲೆಯ-ಮಾದಿಗ ಸಮುದಾಯಗಳು ಶಾಶ್ವತ ದ್ವೇಶ ಸಾಧಿಸುವಂತಾಯಿತು.

ಹೀಗಾಗಿ ನಾವಿಂದು ಕಾಣುತ್ತಿರುವ ಹೊಲೆಯ-ಮಾದಿಗರ ನಡುವಿನ ಎಡಗೈ-ಬಲಗೈ ದ್ವೇಷ ಆ ಜಾತಿಗಳೇ ಸೃಷ್ಟಿಸಿಕೊಂಡಿರುವುದಲ್ಲ. ಸಮಾಜದ ಗತಿಯಲ್ಲಿ ಆ ಜಾತಿಗಳ ಮೇಲೆ ಒಂದರ್ಥದಲ್ಲಿ ಹೇರಲಾದ ದ್ವೇಶ ಇದು.
ಇಂದು ನಾವು ಬಾಬಾಸಾಹೇಬ್ ಅಂಬೇಡ್ಕರ್ ಜಾತಿ ತಾರತಮ್ಯ ಅಳಿಯಬೇಕು ಎಂದು ಬಯಸಿ ಬದುಕಿನುದ್ದಕ್ಕೂ ಪಡಬಾರದ ಪಾಡು ಪಟ್ಟು ನಡೆಸಿದ ಹೋರಾಟ, ಸಾಂವಿಧಾನಿಕ ಪ್ರಯತ್ನಗಳು, ಸಮತೆಯ ಬದುಕಿಗೆ ದಾರಿದೀಪವಾಗುವ ಅವರ ಚಿಂತನೆಗಳ ಬೆಳಕಿನಿಂದ ಒಂದಷ್ಟು ಪಡೆದುಕೊಂಡಿದ್ದೇವೆ. ದಲಿತರು ಮಾತ್ರವಲ್ಲ ಇಡೀ ಬಾಬಾಸಾಹೇಬರ ಜೀವನ ಹೋರಾಟದಿಂದ ಪ್ರಯೋಜನ ದೇಶವೇ ಪಡೆದುಕೊಂಡಿದೆ. ಸಮಾನತೆ ಆಶಯ ಹೊಂದಿರುವ ಸಂವಿಧಾನದ ಮೂಲಕ ಭಾರತೀಯರು ಬದುಕು ರೂಪಿಸಿಕೊಳ್ಳುತ್ತಿದ್ದೇವೆ.

ಹೀಗಿರುವಾಗ ಅಸಮಾನತೆಯ ಸಮಾಜದಲ್ಲಿ ಸೃಷ್ಟಿಯಾದ ಈ ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳನ್ನು ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ ನಿವಾರಿಸಿಕೊಳ್ಳಬೇಕಿದೆ. ಇದಾಗಬೇಕೆಂದರೆ ಮೊದಲು ಎಡಗೈ-ಬಲಗೈ, ಸ್ಪೃಶ್ಯ-ಅಸ್ಪೃಶ್ಯ ತಾರತಮ್ಯಗಳು ಇವೆ ಹಾಗೂ ಬಲಗೈನಿಂದ ಎಡಗೈನವರೂ, ಸ್ಪೃಶ್ಯ ಜಾತಿಗಳಿಂದ ಅಸ್ಪೃಶ್ಯ ಜಾತಿಗಳು ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಂತರ ಇದನ್ನು ಪರಿಹರಿಸಲು ಸದಾಶಿವ ವರದಿ ಯೋಗ್ಯವೇ ಎಂದು ಯೋಚಿಸಬಹುದು.

ಹರ್ಷ ಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ದೇಹವನ್ನೇ ವಿಷವಾಗಿಸುವ ದ್ವೇಷ

Published

on

  • ವಿವೇಕಾನಂದ. ಹೆಚ್.ಕೆ

ನಸ್ಸನ್ನೇ ಘಾಸಿಗೊಳಿಸುವ ಅಸೂಯೆ.ವ್ಯಕ್ತಿತ್ವವನ್ನೇ ನಾಶ ಪಡಿಸುವ ಆಕ್ರೋಶ. ಪಾಕಿಸ್ತಾನ ಹಾಳಾಗಿದ್ದು ಏಕೆ ಗೊತ್ತೆ?ಅದು ಒಂದು ಧರ್ಮದ ಆಧಾರದಲ್ಲಿ ದೇಶವನ್ನು ಸ್ಥಾಪಿಸಿಕೊಂಡಿದ್ದರಿಂದ. ಧರ್ಮ ಯಾವಾಗಲೂ ಬದಲಾವಣೆಯ ಮತ್ತು ಪ್ರಗತಿಯ ವಿರೋಧಿ.
ಸ್ವತಂತ್ರ ಚಿಂತನೆಗಿಂತ ಗುಲಾಮಗಿರಿಯ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ.ಅದರ ಪರಿಣಾಮ ನಿಂತ ನೀರು ಕೊಳೆಯಲಾರಂಬಿಸಿದೆ.

ಎರಡನೆಯದಾಗಿ,
ಹಿಂದು ಧರ್ಮವನ್ನು, ಅದರ ಜನರನ್ನು, ಅವರು ವಾಸಿಸುವ ಭಾರತವನ್ನು ಅತಿಯಾಗಿ ದ್ವೇಷಿಸಲಾರಂಭಿಸಿತು. ಅದರ ಎಲ್ಲಾ ಕಾರ್ಯಚಟುವಟಿಕೆಗಳು ಭಾರತದ ವಿರೋಧಿ ನೀತಿಯಾಗಿಯೇ ರೂಪಿಸಲ್ಪಟ್ಟಿತು. ಎಲ್ಲವೂ ನಕಾರಾತ್ಮಕ ಚಿಂತನೆ. ಪರಿಣಾಮ ಆಧೋಗತಿ.

ಮೂರನೆಯದಾಗಿ,
ತನ್ನ ಭೂಪ್ರದೇಶವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕಿಂತ ತನ್ನದಲ್ಲದ ಆದರೆ ತನ್ನ ಧರ್ಮದವರು ಹೆಚ್ಚಾಗಿದ್ದಾರೆ ಎಂಬ ಕಾರಣದಿಂದ ಕಾಶ್ಮೀರದ ಸ್ವತಂತ್ರ ಹೋರಾಟಕ್ಕೆ ಅಸೂಯೆಯಿಂದ ಪ್ರೋತ್ಸಾಹ ನೀಡಿದ್ದು. ಅದೂ ಯುದ್ಧದ ಮುಖಾಂತರ, ಭಯೋತ್ಪಾದನೆಯ ಮುಖಾಂತರ ಮತ್ತು ಸಾಧ್ಯವಿರುವ ಎಲ್ಲಾ ದುಷ್ಟ ಮಾರ್ಗಗಳ ಮೂಲಕ ಭಾರತವನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತಾ ಅಪಾರ ಹಣ ಮತ್ತು ಶ್ರಮವನ್ನು ಕಳೆದುಕೊಂಡಿತು. ಅತ್ಯಂತ ಅಮಾನವೀಯ ಭಯೋತ್ಪಾದನೆಯನ್ನು ಹುಟ್ಟುಹಾಕಿತು. ಅಂತರರಾಷ್ಟ್ರೀಯವಾಗಿಯೂ ಕೆಟ್ಟ ಹೆಸರು ಪಡೆಯಿತು. ಪರಿಣಾಮ ವಿನಾಶ.

ಇದು ಅದರ ವ್ಯಾಪಾರ ವ್ಯವಹಾರ ಕ್ರೀಡೆ ಸಿನಿಮಾ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಹರಡಿ ಈಗ‌ ಕೆಲವು ಮಾಧ್ಯಮಗಳು ವರ್ಷಿಸುವಂತೆ ಭಿಕ್ಷೆ ಬೇಡುವ ಸ್ಥಿತಿ ತಲುಪಿದೆ. ಇದು ಸಹಜವೇ ಅಲ್ಲವೇ ? ನೋಡಿ, ದ್ವೇಷ ಅಸೂಯೆ ಜೊತೆಗೆ ಧರ್ಮದ ಅಮಲು ಸೇರಿದರೆ ವ್ಯಕ್ತಿ ಅಥವಾ ದೇಶ ಹೇಗೆ ಅಧಃಪತನದತ್ತ ಸಾಗುತ್ತದೆ ಎಂದು.

ಹಾಂ,..ಎಚ್ಚರ…,ಪಾಕಿಸ್ತಾನ ಮಾಡಿದ ತಪ್ಪುಗಳನ್ನೇ ಭಾರತವೂ ಇತ್ತೀಚಿನ ವರ್ಷಗಳಲ್ಲಿ ಮಾಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ ?ಇಲ್ಲ ಎನ್ನವುದಾದರೆ ನೀವು ಸಹ ಅದೇ ರೀತಿ ದ್ವೇಷ ಅಸೂಯೆ ಧರ್ಮದ ಅಮಲಿನಲ್ಲಿ ಇರುವಿರಿ ಎಂದು ಭಾವಿಸಬೇಕಾಗುತ್ತದೆ.ಬಹಳಷ್ಟು ಜನ ಭಾರತದ ಅಭಿವೃದ್ಧಿ ಎಂದರೆ ಪಾಕಿಸ್ತಾನ ಚೀನಾವನ್ನು ವಿರೋಧಿಸುವುದು, ಮುಸ್ಲಿಮರನ್ನು ಭಯೋತ್ಪಾದಕರು ಎಂದು ಜರಿಯುವುದು, ಸೈನ್ಯಿಕ ಶಕ್ತಿಗೆ ಅವಶ್ಯತೆಗಿಂತ ಹೆಚ್ಚು ಮಹತ್ವ ನೀಡುವುದು ಎಂಬ ಭ್ರಮೆಗೆ ಒಳಗಾಗಿದ್ದಾರೆ.

ಇದು ಎಷ್ಟರಮಟ್ಟಿಗೆ ಇದೆ ಎಂದರೆ…ದೀಪಾವಳಿ ಹಬ್ಬದ ಪಟಾಕಿ ನಮ್ಮ ಪರಿಸರಕ್ಕೆ ಹಾನಿ ಎಂದರೆ ರಂಜಾನ್ ಕ್ರಿಸ್ಮಸ್ ನ್ಯೂ ಇಯರ್ ನಿಮಗೆ ಕಾಣುವುದಿಲ್ಲವೇ ಎನ್ನುತ್ತಾರೆ.ಪ್ರಾಣಿ ಹಿಂಸೆಯ ಕೆಲವು ಸಾಂಪ್ರದಾಯಿಕ ಕ್ರೀಡೆಗಳ ಬಗ್ಗೆ ವಿರೋಧಿಸಿದರೆ ಬಕ್ರೀದ್ ಬಕ್ರೀದ್ ಬಕ್ರೀದ್.ಮಹಿಳೆಯರ ದೇವಸ್ಥಾನ ಪ್ರವೇಶದ ವಿಷಯದಲ್ಲಿ ಸ್ವಾತಂತ್ರ್ಯ ಸಮಾನತೆಯ ಬಗ್ಗೆ ಮಾತನಾಡಿದರೆ ಮುಸ್ಲಿಂ ಮುಸ್ಲಿಂ ಮುಸ್ಲಿಂ.

ಭಾರತದ ಹಿಂದೂ ಜೀವನಶೈಲಿಯ ಮೂಡನಂಬಿಕೆಯ ಬಗ್ಗೆ ಹೇಳಿದರೆ ಇಸ್ಲಾಂ ಇಸ್ಲಾಂ ಇಸ್ಲಾಂ. ಭಾರತದ ಕೆಲವು ಶೋಷಿತ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಸ್ತಾಪಿಸಿದರೆ ಪಾಕಿಸ್ತಾನದ ಟೆರರಿಸ್ಟ್ ಟೆರರಿಸ್ಟ್ ಟೆರರಿಸ್ಟ್.

ಹೀಗೆ ಸಾಲು ಸಾಲು ಅಭಿಪ್ರಾಯಗಳು ಎಲ್ಲಾ ವಿಷಯಗಳಲ್ಲೂ ಬರುತ್ತದೆ. ಮುಖ್ಯ ವಿಷಯ ಬಿಟ್ಟು ನಮ್ಮ ಬಹುತೇಕ ಅನಿಸಿಕೆಗಳು ಇಸ್ಲಾಂ ಮತ್ತು ಪಾಕಿಸ್ತಾನದ ಸುತ್ತಲೇ ತಿರುಗುತ್ತಿವೆ ಎಂದಾಯಿತು. ನಮ್ಮ ಬದಲಾವಣೆ ಅಥವಾ ಆತ್ಮಾವಲೋಕನಕ್ಕಿಂತ ಪಾಕಿಸ್ತಾನದ ಮೇಲಿನ ದ್ವೇಷವೇ ಹೆಚ್ಚಾಗಿದೆ.

ಅಷ್ಟೇ ಅಲ್ಲ ಆಂತರಿಕವಾಗಿಯೂ ಭಾರತದ ಒಳಗಡೆ ವಿವಿಧ ವರ್ಗ ಪಂಗಡಗಳ ನಡುವೆ ಸಾಕಷ್ಟು ದ್ವೇಷ ಅಸೂಯೆಗಳು ಹೊಗೆಯಾಡುತ್ತಿದೆ.

ವೈಚಾರಿಕ ಪ್ರಜ್ಞೆಯ ಪ್ರಗತಿಪರ ಚಿಂತನೆಯ ಶೋಷಿತ ವರ್ಗದ ಜಾಗೃತ ಮನಸ್ಥಿತಿಯ ಜನರು ಸಾರಾಸಗಟಾಗಿ ಇಡೀ ವೇದ ಉಪನಿಷತ್ತು ರಾಮಾಯಣ ಮಹಾಭಾರತ ಭಗವದ್ಗೀತೆ ಸೇರಿ ಎಲ್ಲವನ್ನೂ ತಿರಸ್ಕರಿಸುವ ಮಟ್ಟಕ್ಕೆ ದ್ವೇಷಿಸುತ್ತಾರೆ. ಕನಿಷ್ಠ ಅವುಗಳಲ್ಲಿ ಇರಬಹುದಾದ ಒಳ್ಳೆಯ ಅಂಶಗಳನ್ನು ಸಹ ಪರಿಶೀಲಿಸುವ ತಾಳ್ಮೆ ಮಾಯವಾಗಿದೆ. ತಲಾತಲಾಂತರದ ದ್ವೇಷ ಈಗ ಹೆಡೆ ಎತ್ತಿದೆ.

ಇದೇ ರೀತಿ ಇನ್ನೊಂದು ವರ್ಗ ಎಲ್ಲಾ ಸಂಪ್ರದಾಯಗಳನ್ನು ಅತ್ಯಂತ ಶ್ರೇಷ್ಠ ಎಂದು ಭಾವಿಸಿ ಅದನ್ನು ವಿರೋಧಿಸುವ ಎಲ್ಲರನ್ನೂ ಧರ್ಮ ವಿರೋಧಿಗಳು ದೇಶ ವಿರೋಧಿಸಗಳು ಎಂಬಂತೆ ಕಠಿಣ ಶಬ್ದಗಳಲ್ಲಿ ನಿಂದಿಸುತ್ತಾರೆ. ನಮ್ಮದೇ ಜನಗಳು ಪಡೆಯುವ ಮೀಸಲಾತಿ ಅವಕಾಶಗಳನ್ನು ಅಸೂಯೆಯಿಂದ ವಿರೋಧಿಸುತ್ತಾರೆ.

ಭಾರತದ ಪರಿಸ್ಥಿತಿ ಹಾಳಾಗಲು ಇಷ್ಟು ಸಾಕಲ್ಲವೇ..,ಆರ್ಥಿಕ ಕುಸಿತದಿಂದ ಕಂಗಾಲಾಗಿರುವ, ಜಾತಿ ವ್ಯವಸ್ಥೆಯ ಕಾರಣದಿಂದ ದೇಶಾಭಿಮಾನವೇ ಕಡಿಮೆಯಾಗಿರುವ,ಭ್ರಷ್ಟಾಚಾರದಿಂದ ಆಡಳಿತದ ಮೇಲೆ ನಂಬಿಕೆಯೇ ಇಲ್ಲದಿರುವ, ಪ್ರಕೃತಿಯ ವಿಕೋಪದ ಕಾರಣದಿಂದ ಬಹಳಷ್ಟು ಜನರು ನಿರ್ಗತಿರಾಗುತ್ತಿರುವ, ನಿರುದ್ಯೋಗಿಗಳಾಗುತ್ತಿರುವ ಭಾರತವನ್ನು ಮೇಲ್ದರ್ಜೆಗೆ ಏರಿಸುವ ವಿಷಯಗಳ ಕುರಿತು ಚಿಂತಿಸದೆ ಪಕ್ಕದ ಧರ್ಮ ದೇಶವನ್ನು ದೂಷಿಸುತ್ತಾ ಕುಳಿತರೆ ಭಾರತದ ಅಭಿವೃದ್ಧಿ ಸಾಧ್ಯವೇ ?
ಜಾತಿ ವ್ಯವಸ್ಥೆ ಇರುವವರಿಗು ಸಾಮಾಜಿಕ ನ್ಯಾಯ ಸಿಗುವುದೇ ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮೀರಿ ಈ ದ್ವೇಷ ಅಸೂಯೆಗಳು ನಮ್ಮನ್ನು ಆಕ್ರಮಿಸಿದೆ.ಹೇಗೆ ಕಾಶ್ಮೀರ – ಯುದ್ಧ – ಚಂದ್ರಯಾನ ಮುಂತಾದ ವಿಷಯಗಳು ನಮ್ಮನ್ನು ಭಾವನಾತ್ಮಕವಾಗಿ ಜೋಡಿಸಿದೆಯೋ ಹಾಗೆಯೇ ಜಾತಿ ಭಾಷೆ ಪ್ರಾಂತ್ಯ ಸಂಪ್ರದಾಯ ಮತ್ತು ವೈಚಾರಿಕತೆ ನಮ್ಮನ್ನು ಭಾವನಾತ್ಮಕವಾಗಿ ಬೇರ್ಪಡಿಸಿದೆ ಎಂಬ ಸೂಕ್ಷ್ಮ ಅಂಶಗಳನ್ನು ಸಹ ಗಮನಿಸಬೇಕಿದೆ.

ನಮ್ಮ ಜನಗಳನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇರುವವರನ್ನು ಈ ಬಗ್ಗೆ ಜಾಗೃತಗೊಳಿಸಬೇಕಿದೆ. ಇಲ್ಲದಿದ್ದರೆ ಭಾರತ ವಿಶ್ವ ಗುರು ಎಂದು ಕನಸು ಕಾಣುತ್ತಿದ್ದರೆ ಮತ್ತೊಂದು ಪಾಕಿಸ್ತಾನವಾಗುವ ಅಪಾಯಕ್ಕೆ ‌ಸಿಲುಕಬಹುದು.

ಭಾರತ ಪ್ರೀತಿಯ ನೆಲ. ವಿಶ್ವಾಸದ ಜನ,
ಸಹಕಾರದ ಸಮಾಜ, ಆಧ್ಯಾತ್ಮದ ತವರೂರು. ಅದೇ ನಮ್ಮ ಶಕ್ತಿ. ನೆನಪಿಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ವಿಜಯ ಕರ್ನಾಟಕದ ಈ ವರದಿಗಾರನ ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ

Published

on

  • ಹರ್ಷಕುಮಾರ್ ಕುಗ್ವೆ

ಒಂದು ಮುಖ್ಯ ಸುದ್ದಿಯನ್ನು ವರದಿ ಮಾಡುವಾಗ ತನಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕನಿಷ್ಠ ಅಧ್ಯಯನ ಮಾಡಿಯಾದರೂ ಆ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ವರದಿ ಮಾಡಬೇಕಲ್ಲವೇ? ವಿಜ್ಞಾನಿಗಳು ಹೇಳಿರುವ ವಿಷಯಗಳನ್ನು ತಮಗೆ ಬೇಕಾದ ಹಾಗೆ ತಿರುಚಿ ವರದಿ ಮಾಡಿರುವ ಪರಿಯನ್ನು ಇಲ್ಲಿ ನೋಡಿ.

ಮೊನ್ನೆ ಮತ್ತು ನೆನ್ನೆ ವಿಜ್ಞಾನಿಗಳು ರಾಖಿಗರಿ ಪಳೆಯುಳಿಕೆ ಕುರಿತ ಅತ್ಯಂತ ಮಹತ್ವದ ಮಾಹಿತಿಯನ್ನು ಪ್ರಕಟಿಸಿದರು. ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿದ್ದು ದಕ್ಷಿಣ ಏಷಿಯನ್ನರು ಎಂಬ ಸಂಗತಿ ಅದು. ಈ ದಕ್ಷಿಣ ಏಷಿಯನ್ನರು ಎಂದರೆ ಯಾರು ಎಂಬುದನ್ನು ಸಹ ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ. ಈ ದಕ್ಷಿಣ ಏಷಿಯನ್ನರಲ್ಲಿ ಆರ್ಯರು ಇರಲಿಲ್ಲ ಎಂಬ ಸಂಗತಿಯನ್ನು ಸಹ ವಿಜ್ಞಾನಿಗಳು ತಮ್ಮ ಅಧ್ಯಯನದ ಮೂಲಕ ತಿಳಿಸಿದ್ದಾರೆ. ಆದರೆ ವಿಜಯ ಕರ್ನಾಟದ ಈ  ವರದಿಗಾರ “ದಕ್ಷಿಣ ಏಷಿಯಾದ ಮೂಲ ನಿವಾಸಿಗಳೇ ಆರ್ಯರು” ಎಂದು ಬರೆದಿದ್ದಾನೆ.

ಇದೇ ವರದಿಗಾರ “ಹರಪ್ಪ ನಾಗರಿಕತೆಯ ಜಿನೋಮ್ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳು ಅಥವಾ ಇರಾನಿ ಕೃಷಿಕ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ” ಎಂದು ವಿಜ್ಞಾನಿಗಳು ಹೇಳಿದ್ದನ್ನು ಸರಿಯಾಗಿ ದಾಖಲಿಸಿದ್ದಾನೆ. ಆದರೆ ಇವನಿಗೆ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳೇ ಆರ್ಯರು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಕಳೆದ ಕೆಲವಾರು ವರ್ಷಗಳಿಂದ ಮನುಷ್ಯನ ಜಿನೋಮ್ ಕುರಿತು ಸಂಶೋಧನೆ ನಡೆಸುತ್ತಿರುವ ಸ್ಟೆಪ್ ಮೂಲದ ಆರ್ಯರಿಗೆ R1a1 ಎಂಬ ಸಂಕೇತವನ್ನೂ ನೀಡಿದ್ದಾರೆ. ಹಾಗೂ ಈ ಆರ್ಯರು ಭಾರತಕ್ಕೆ ವಲಸೆ ಬಂದಿದ್ದು ಸಿಂಧೂ ನದಿ ನಾಗರಿಕತೆಯ ಅವಸಾನದ ಸಮಯದಲ್ಲಿ ಎಂದೂ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಆರ್ಯರು ಭಾರತಕ್ಕೆ ಕುರ್ಗನ್ ಸಂಸ್ಕೃತಿ ಅಥವಾ ಯೂರೇಷಿಯಾದ ಪಾಂಟಿಕ್ ಸ್ಟೆಪ್ ಹುಲ್ಲುಗಾವಲಿನಲ್ಲಿ ವಿಕಾಸಗೊಂಡ ಯಾಮ್ನಾಯ ಸಂಸ್ಕೃತಿಯನ್ನು ತಂದವರು; ಭಾರತದ ಜನಸಂಖ್ಯೆಯಲ್ಲಿ ಕೆಲವು ಬ್ರಾಹ್ಮಣ ಪಂಗಡಗಳು ಈ ಸಂಸ್ಕೃತಿಯನ್ನು ಈಗಲೂ ಉಳಿಸಿಕೊಂಡಿದ್ದಾರೆ ಎಂಬ ಸಂಗತಿಯನ್ನು ಪ್ರಖ್ಯಾತ ತಳಿ ವಿಜ್ಞಾನಿ ಡೇವಿಡ್ ರೀಚ್ ಅವರೇ ತಿಳಿಸಿದ್ದಾರೆ.

ವಂಶವಾಹಿಗಳ ಅಧ್ಯಯನದ ಮೂಲಕ ವಿಜ್ಞಾನಿಗಳು ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಆರ್ಯರ ಪಾತ್ರವೇ ಇಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ಸಿಂಧೂ ನದಿ ನಾಗರಿಕತೆಯಲ್ಲಿ ಆರ್ಯರ ಪಾತ್ರ ಇತ್ತು ಎಂಬಂತೆ ತಿರುಚಿ ಬರೆಯು ಪತ್ರಕರ್ತರ ಉದ್ದೇಶವಾದರೂ ಏನಾಗಿರಬಹುದು?

ಹೆಚ್ಚಿನ ಮಾಹಿತಿಗೆ ಇದನ್ನೂ ಓದಿ

https://kannada.truthindia.news/2019/09/06/scientists-finally-reveal-rakhigarhi-findings/

ಓದು ಪ್ರಕಾಶನ ಪ್ರಕಟಿಸಿದ ಪುಸ್ತಕ ‘ಹರಪ್ಪ‌ ಡಿ ಎನ್ ಎ ನುಡಿದ ಸತ್ಯ’

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪ್ರವಾಹ ಬಂತು, ಬದುಕೇ ಮುಳುಗೋಯ್ತು; ಮುಂದೇನು..?

Published

on

“ಹೊಲಿ ಹೋಯ್ತು.ಮನಿ ಹೋಯ್ತು. ಆಕಳು ವಾದ್ವು, ಪಾತ್ರೆ ಪಗಡೆ ವಾದ್ವು. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಓಟಿನ ಕಾರ್ಡ್ ವಾದ್ವು.ನಮ್ ಬದುಕೇ ಹೋಂಟೋತ್ರಿ.

ನಮ್ನ ಯಾರು ಕೇಳ್ವಂಗಿಲ್ರಿ,
ಸಾಯೋದೆ ಗತಿರ್ರೀ ನಮ್ಗೆ.”ಪ್ರವಾಹ ಪೀಡಿತ ಜನಗಳ ದಿನನಿತ್ಯದ ಗೋಳಾಟ ನರಳಾಟ ಪರದಾಟ. ಹೇಗೆ ಸಮಾಧಾನ ಮಾಡುವುದು ಇವರನ್ನು..!‌ಅವರ ಜೊತೆ ಸೇರಿ ನಾವು ಅಳುವುದೇ..?

ಮಾಧ್ಯಮಗಳು ಮಾಡುವಂತೆ ಅವರ ನೆನಪುಗಳನ್ನು ಮತ್ತೆ ಮತ್ತೆ ಕೆದಕಿ, ಅಳಿಸಿ ದುಃಖದ ಹಿನ್ನೆಲೆ ಸಂಗೀತ ನೀಡಿ ಮತ್ತಷ್ಟು ನೋವು ನೀಡುವುದೇ..?ರಾಜಕಾರಣಿಗಳು ಅಧಿಕಾರಿಗಳು ಮಾಡುವಂತೆ ನೆಪಮಾತ್ರಕ್ಕೆ ಅವರ ಕಷ್ಟ ಕೇಳಿ ಹುಸಿ ಭರವಸೆ ಕೊಟ್ಟು ಕೈ ತೊಳೆದುಕೊಳ್ಳುವುದೇ..?

ಸ್ವಯಂ ಸೇವಕರಂತೆ ಒಂದಷ್ಟು ಕೈಲಾಗುವ ಸಹಾಯ ಮಾಡಿ ವಾಪಸ್ಸಾಗುವುದೇ.ಒಂದಷ್ಟು ಪರಿಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಕೆಲವರಿಗೆ ತಲುಪಿಸಿ ಬರುವುದೆ.ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾ ಗೊಣಗಾಡುವುದೇ.

ನಮ್ಮ ರಾಜ್ಯದ ಮಟ್ಟಿಗೆ ‌ಈಗ ಆಗಿರುವ ಅನಾಹುತವನ್ನು ಒಂದು ಹಂತದವರೆಗೆ ಅಂದರೆ ತೊಂದರೆ ಸಿಲುಕಿರುವ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಷ್ಟು ಸಂಪನ್ಮೂಲಗಳು ಖಂಡಿತ ಸರ್ಕಾರದ ಬಳಿ ಇದೆ ಮತ್ತು ರಾಜ್ಯದ ಜನರು ದಾನ ರೂಪದಲ್ಲಿ ಕೊಡುವಷ್ಟು ಒಳ್ಳೆಯ ಮನಸ್ಥಿತಿ ಹೊಂದಿದ್ದಾರೆ.

ಇಷ್ಟು ಅನುಕೂಲ ಇದ್ದರೂ ನಿಜವಾದ ಸಂತ್ರಸ್ತರಿಗೆ ಇನ್ನೂ ಅದರ ಪ್ರಯೋಜನ ದೊರೆಯುತ್ತಿಲ್ಲ. ಇದೇ ನಿಜವಾದ ಸಮಸ್ಯೆ. ಅದನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಒದಗಿಸಬೇಕಾದ ಅಗತ್ಯವಿದೆ. ಸರ್ಕಾರ ನಡೆಸಲು ನೀತಿ ನಿಯಮಗಳು ಅತ್ಯಂತ ಅವಶ್ಯ. ಆದರೆ ಕೆಲವೊಮ್ಮೆ ಅದೇ ನೀತಿ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಇದೆ.

ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಜನರ ಬಳಿ ದಾಖಲೆಗಳು ಇರುವುದಿಲ್ಲ. ದಾಖಲೆಗಳಿಲ್ಲದೆ ಪರಿಹಾರ ಸಿಗುವುದಿಲ್ಲ. ಇದರ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದರೆ ದುರುಪಯೋಗವಾಗುತ್ತದೆ. ಕೊಡದಿದ್ದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಇದು ಮಧ್ಯವರ್ತಿಗಳ ಲಾಭಕ್ಕೆ ಕಾರಣವಾಗುತ್ತದೆ.

ಇಡೀ ವ್ಯವಸ್ಥೆ ಕೆಟ್ಟು, ಪ್ರತಿಯೊಬ್ಬರಲ್ಲೂ ತಮ್ಮ ಹಿತಾಸಕ್ತಿಯ ಸ್ವಾರ್ಥ ಹೆಚ್ಚಾಗಿ, ಹಣದ ಮೋಹ ಎಲ್ಲರನ್ನೂ ಆಕ್ರಮಿಸಿ, ಮನಸ್ಸುಗಳಲ್ಲಿ ಅನುಮಾನದ ಬೀಜ ಮೊಳೆತಿರುವಾಗ ಯಾವ ಪರಿಹಾರಗಳು, ಕಾನೂನುಗಳು, ಸಲಹೆಗಳು ಉತ್ತಮ ಪರಿಣಾಮ ಬೀರಲು ಸಾಧ್ಯವಿಲ್ಲ.

ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಅಕ್ರಮಗಳು ನಡೆಯುತ್ತಲೇ ಇರುತ್ತದೆ. ಅದನ್ನು ಪತ್ತೆ ಹಚ್ಚುವ, ವರದಿ ಮಾಡುವ, ತನಿಖೆ ಮಾಡುವ, ಕ್ರಮ ಕೈಗೊಳ್ಳುವ ವಿಷಯಗಳು ಹವ್ಯಾಸವಾಗಿ ಗೀಳಿನಂತೆ ಇವು ಮಾತ್ರ ಪ್ರಾಮುಖ್ಯತೆ ಪಡೆಯುತ್ತವೆ. ಜನರಿಗೆ ಪರಿಹಾರ ಮಾತ್ರ ಸರಿಯಾಗಿ ಸಿಗುವುದೇ ಇಲ್ಲ.ಕೊನೆಗೆ ನಮ್ಮ ವ್ಯವಸ್ಥೆಯೇ ಹೀಗೆ ಏನು ಮಾಡುವುದು ಎಂಬ ಸಿನಿಕತನದೊಂದಿಗೆ ಎಲ್ಲವೂ ಹಾಗೆಯೇ ಮುಕ್ತಾಯವಾಗುತ್ತದೆ.

ಸರ್ಕಾರಗಳಾಗಲಿ, ಹೋರಾಟಗಾರರಾಗಲಿ, ಸ್ವಯಂ ಸೇವಕರಾಗಲಿ, ದಾನಿಗಳಾಗಲಿ, ಮಠಗಳಾಗಲಿ ಅಥವಾ ಬೇರೆ ಯಾವುದೇ ಸಾಮಾಜಿಕ ಕಳಕಳಿಯ ಜಾಗೃತ ಸಂಸ್ಥೆಗಳಾಗಲಿ ನಿಜವಾದ ಕೆಲಸ ಮಾಡಬೇಕಾಗಿರುವುದು ವ್ಯವಸ್ಥೆಯ ಶುದ್ದೀಕರಣ, ಜನರ ಮನಸ್ಸುಗಳ ವಿಶಾಲೀಕರಣ, ಮಾನವೀಯ ನಡವಳಿಕೆಯ ಸರಿಯಾದ ವರ್ತನೀಕರಣ.

ಇದು ಆಗದೆ ನಾವು ಯಾವುದೇ ಸಂಕಷ್ಟಗಳನ್ನು ಎದುರಿಸಿ ನಿಲ್ಲುವುದು ಅಸಾಧ್ಯ. ಕೇವಲ ಆ ಕ್ಷಣದ ಒಂದು ಸಣ್ಣ ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ಮಾತ್ರ ಮಾಡಬಹುದು. ಶಾಶ್ವತ ಪರಿಹಾರ ಗಗನ ಕುಸುವೇ ಆಗಿದೆ.

ಆದ್ದರಿಂದ ಎಲ್ಲರೂ ಕೇವಲ ಜನರ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಜೊತೆಗೆ ನಮ್ಮ ನಮ್ಮ ಮನಸ್ಸುಗಳ ಆತ್ಮಾವಲೋಕನ ಮಾಡಿಕೊಂಡು ಸಂತ್ರಸ್ತರಿಗೆ ನಿಜವಾದ ಶಾಶ್ವತ ಪರಿಹಾರ ದೊರೆಯುವಂತಾಗಿ ಅವರಿಗೆ ಈ ನೆಲದ, ಈ ಬದುಕಿನ ಬಗ್ಗೆ ಗೌರವ, ಅಭಿಮಾನ, ಭರವಸೆ ಮೂಡುವಂತಾಗಲಿ.
ಒಂದಷ್ಟು ಹಣ, ವಸ್ತುಗಳು, ದವಸ ಧಾನ್ಯಗಳು ಕೇವಲ ತಾತ್ಕಾಲಿಕ ಪರಿಹಾರ ಎಂಬುದನ್ನು ಮರೆಯದಿರೋಣ.

ವಿವೇಕಾನಂದ. ಹೆಚ್.ಕೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending