Connect with us

ಬಹಿರಂಗ

ಮೀಸಲಾತಿ ಏಕೆ? ಮತ್ತು ಹೇಗೆ ಪ್ರಸ್ತುತ?

Published

on

ಮೀಸಲಾತಿಯನ್ನು ವಿರೋಧಿಸುವವರು ದೇಶಕ್ಕೆ ಅಪಾಯಕಾರಿ ಎನ್ನುವವರು ಇದನ್ನು ಓದಿಕೊಳ್ಳಬೇಕು.

ಆ ಶಾಲೆಯ ಸಮಾಜಶಾಸ್ತ್ರದ ಶಿಕ್ಷಕ ತುಂಬ ಬುದ್ಧಿವಂತ. ಅವನು ಕಲಿಸುವ ವಿಧಾನಗಳೇ ವಿಚಿತ್ರವಾಗಿದ್ದವು. ಆದರೆ ಅವನ ಪ್ರತಿಯೊಂದು ಪ್ರಯೋಗವೂ ಮಕ್ಕಳ ಮನಸ್ಸಿನಲ್ಲಿ ಧೃಡವಾಗಿ ನಿಲ್ಲುತ್ತಿದ್ದವು. ಒಂದು ಬಾರಿ ಆತ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಮಾಡುತ್ತಿದ್ದ.ತರಗತಿಯ ಮಕ್ಕಳು ತಮತಮಗೆ ತಿಳಿದಂತೆ ವಾದ ಮಾಡುತ್ತಿದ್ದರು.ಆಗ ಆತ ಒಂದು ಪ್ರಯೋಗ ಮಾಡುವುದಾಗಿ ಘೋಷಿಸಿದ.
ಮಕ್ಕಳೆಲ್ಲ ಉತ್ಸಾಹದಿಂದ ಕುಳಿತರು. ಶಿಕ್ಷಕ ಗ್ರಂಥಾಲಯದಿಂದ ಹಳೆಯ ಪತ್ರಿಕೆಗಳನ್ನು ತರಿಸಿದ. ಎಲ್ಲ ಮಕ್ಕಳಿಗೂ ಒಂದೊಂದು ಪುಟವನ್ನು ಹರಿದು ಕೊಟ್ಟ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಹಳೆಯ ಕಾಗದವನ್ನು ಹಿಸುಕಿ ಚೆಂಡಿನಂತೆ ಮುದ್ದೆ ಮಾಡಲು ಹೇಳಿದ. ಅವರೆಲ್ಲ ಹಾಗೆಯೇ ಮಾಡಿದರು. ನಂತರ ಆತ ಕೊಠಡಿಯ ಮೂಲೆಯಲ್ಲಿದ್ದ ಕಸದ ಬುಟ್ಟಿಯನ್ನು ತಂದು ಕಪ್ಪು ಹಲಗೆಯ ಮುಂದಿದ್ದ ಮೇಜಿನ ಮೇಲಿಟ್ಟ. ಮಕ್ಕಳು ಅವನ ಚಟುವಟಿಕೆಯನ್ನು ಗಮನಿಸುತ್ತಿದ್ದರು. ಆಮೇಲೆ ಆತ ಹೇಳಿದ, ‘ಮಕ್ಕಳೇ, ನಿಮಗೆ ಈಗೊಂದು ಸ್ಪರ್ಧೆ. ನೀವು ಈಗ ಎಲ್ಲಿ ಕುಳಿತಿದ್ದೀರೋ ಅಲ್ಲಿಂದಲೇ ನಿಮ್ಮ ಕೈಯಲ್ಲಿದ್ದ ಕಾಗದದ ಮುದ್ದೆಯನ್ನು ಈ ಕಸದ ಬುಟ್ಟಿಯಲ್ಲಿ ಎಸೆಯಬೇಕು. ನೀವು ಎಸೆದದ್ದು ಬುಟ್ಟಿಯ ಒಳಗೇ ಬೀಳಬೇಕು. ಹೊರಗೆ ಬಿದ್ದರೆ ಅಂಕವಿಲ್ಲ. ಚೆನ್ನಾಗಿ ಗುರಿಯಿಟ್ಟು ಎಸೆಯಿರಿ’.

ಮುಂದಿನ ಸಾಲಿನ ಮಕ್ಕಳು ‘ಹೋ’ ಎಂದು ಸಂಭ್ರಮಿಸಿದರೆ ಹಿಂದಿನ ಸಾಲಿನ ಮಕ್ಕಳು, ‘ಸಾರ್, ಇದು ಅನ್ಯಾಯ. ನಮಗೆ ಬುಟ್ಟಿ ಬಲು ದೂರ. ಅದಲ್ಲದೇ ನಡುವೆ ಇಷ್ಟು ಸಾಲು ಸ್ನೇಹಿತರು ಕುಳಿತಿದ್ದಾರಲ್ಲ. ಅವರನ್ನೆಲ್ಲ ದಾಟಿ ನಮ್ಮ ಕಾಗದ ಬುಟ್ಟಿ ತಲುಪುವುದು ಹೇಗೆ ಸಾಧ್ಯ?’ ಎಂದು ತಕರಾರು ಮಾಡಿದರು.

ಆದರೆ ಶಿಕ್ಷಕ ಅದಾವುದನ್ನು ಕೇಳಿಸಿಕೊಳ್ಳದೇ ಕಾಗದದ ಉಂಡೆಗಳನ್ನು ಎಸೆಯಲು ಅಪ್ಪಣೆ ಮಾಡಿದ. ಮಕ್ಕಳೆಲ್ಲ ಉತ್ಸಾಹದಿಂದ ಗುರಿಯಿಟ್ಟು ಎಸೆಯಲು ಪ್ರಯತ್ನಿಸಿದರು. ಮುಂದಿನ ಸಾಲಿನ ಬಹುತೇಕ ಮಕ್ಕಳು ಬುಟ್ಟಿಯಲ್ಲೇ ಉಂಡೆಯನ್ನು ಹಾಕಿದರು. ಅವರಲ್ಲಿಯೂ ಕೆಲವರಿಂದ ಸಾಧ್ಯವಾಗಲಿಲ್ಲ,
ಎರಡನೆಯ ಸಾಲಿನ ಕೆಲವು ಮಕ್ಕಳೂ ಯಶಸ್ವಿಯಾದರು. ಹಿಂದಿನ, ಅದರ ಹಿಂದಿನ ಸಾಲಿನ ಮಕ್ಕಳು ಮಾತ್ರ ನಿರಾಸೆಪಟ್ಟರು.
ಎಲ್ಲೋ ಒಂದಿಬ್ಬರ ಕಾಗದದ ಉಂಡೆಗಳು ಮಾತ್ರ ಬುಟ್ಟಿಯನ್ನು ಸೇರಿದವು.

‘ಈ ಪ್ರಯೋಗದ ನಂತರ ನಿಮಗೆ ಏನು ಅರ್ಥವಾಯಿತು?’ ಎಂದು ಶಿಕ್ಷಕ ಕೇಳಿದ. ಒಬ್ಬ ಹುಡುಗಿ ಹೇಳಿದಳು,‘ಸರ್, ಇದು ಸರಿಯಾದ ಪ್ರಯೋಗವಲ್ಲ. ಎಲ್ಲರಿಗೂ ಒಂದೇ ನಿಯಮ ವಿರಬೇಕಲ್ಲವೇ? ಎಲ್ಲರಿಗೂ ಸಮಾನ ಅವಕಾಶ ಇರಬೇಕಿತ್ತಲ್ಲ?. ಮುಂದಿದ್ದವರಿಗೆ ಇದು ಅನುಕೂಲವಾಗಿತ್ತು. ಹಿಂದೆ ಇದ್ದವರ ಗತಿ ಏನು ಸರ್? ಎಲ್ಲರೂ ಒಂದೇ ದೂರದಲ್ಲಿ ನಿಂತಿದ್ದರೆ ಅವರ ನಿಜವಾದ ಗುರಿ ಪರೀಕ್ಷೆಯಾಗುತ್ತಿತ್ತು’.ಶಿಕ್ಷಕ ಭಾವಪೂರಿತನಾಗಿ ಹೇಳಿದ, ‘ಮಕ್ಕಳೇ ನನ್ನ ಇಂದಿನ ಪಾಠ ಇದೇ. ನಮ್ಮ ಸಮಾಜದಲ್ಲಿ ಹೀಗೆ ಆಗಿದೆ. ಕೆಲವರು ಶತಶತಮಾನಗಳಿಂದ ಮುಂದಿನ ಸಾಲು ಹಿಡಿದು ಕುಳಿತಿದ್ದಾರೆ.

ಅವರಿಗೆ ಗುರಿ ಕಣ್ಣಮುಂದೆ ಕಾಣುತ್ತಿದೆ, ಮತ್ತು ಹತ್ತಿರವೂ ಇದೆ. ಅವರಿಗೆ ಗುರಿ ತಲುಪುವುದು ಸುಲಭ ಹಾಗೂ ಸಾಧ್ಯ. ಆದರೆ ಹಿಂದೆ, ಹಿಂದಿನ ಸಾಲಿನಲ್ಲಿ ಶತಮಾನಗಳಿಂದ ಉಳಿದೇ ಬಿಟ್ಟವರಿಗೆ ಗುರಿ ಕಾಣದಿರುವುದು ಮಾತ್ರವಲ್ಲ, ಗುರಿ ಇದೆ ಎನ್ನುವುದೂ ತಿಳಿದಿಲ್ಲ.ಎಲ್ಲರೂ ಗುರಿ ತಲುಪಬೇಕು ಎನ್ನುವ ಆಶಯವೇ ಸಮಾನತೆಯ ಸ್ಪರ್ಧೆ ಅಲ್ಲವೇ? ನೀವು ಈಗ ಶಿಕ್ಷಣ ಪಡೆದ ಮಕ್ಕಳು. ಸಮಾಜದ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತೀರಿ. ನಿಮಗೆ ಬದುಕಿನ ಗುರಿ ಕಾಣುತ್ತದೆ, ತಲುಪುವುದು ಸುಲಭವೆನ್ನಿಸುತ್ತದೆ. ಈಗ ನೀವು ದಯವಿಟ್ಟು ಹಿಂದಿನ ಸಾಲಿನಲ್ಲಿರುವ, ಶಿಕ್ಷಣ ಪಡೆಯದ, ಅವಕಾಶಗಳಿಂದ ವಂಚಿತರಾದ ಜನರ ಬಗ್ಗೆ ಯೋಚಿಸಬೇಕು. ಅವರನ್ನು ಮುಂದಿನ ಸಾಲಿಗೆ ತರುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನರ ನಡುವೆ ಸ್ಪರ್ಧೆ ಸಾಧ್ಯ. ಈ ಸಮಾನತೆಯನ್ನು ತರುವ ಪ್ರಯತ್ನ ನಿಮ್ಮದಾಗಬೇಕು. ಆಗಲೇ ಶಿಕ್ಷಣ ಪಡೆದದ್ದು ಸಾರ್ಥಕವಾಗುತ್ತದೆ’.

ಶಿಕ್ಷಕನ ಮಾತು ಮತ್ತು ಪ್ರಯೋಗ ಮಕ್ಕಳ ಹೃದಯ ತಟ್ಟಿತು. ಸಮಾನತೆಯ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಶಿಕ್ಷಣ, ಅವಕಾಶಗಳನ್ನು ಪಡೆದ ಜನ ಅದರಿಂದ ವಂಚಿತರಾದವರಿಗೆ ಸಹಾಯ ಮಾಡುವ ನಿಜವಾದ, ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಅವರು ಸಮಾಜದ ಋಣವನ್ನು ಸ್ವಲ್ಪವಾದರೂ ತೀರಿಸಿದಂತಾಗುತ್ತದೆ. ಹಾಗೆ ಇಲ್ಲದೇ ಸ್ವಾರ್ಥಿಗಳಾದರೆ ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಅವರಂಥ ದೇಶದ್ರೋಹಿಗಳು ಮತ್ತಾರೂ ಇರಲಾರರು’.

ಸ್ನೇಹಿತರೇ ಸಮಾಜದಲ್ಲಿ ಬದುಕುತ್ತಿದ್ದೇವೆ.
ಸ್ವಲ್ಪವಾದರೂ ಸಮಾಜದ ಋಣ ತೀರಿಸಲು ಬದ್ಧರಾಗೋಣ. ಸಧೃಡ ದೇಶ ಕಟ್ಟುವ ಕಾಯಕದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

KGF ನ ನಿಜ ರಕ್ತಪಾತ : ಎಲ್ಲರೂ ಓದಲೇ ಬೇಕಾದ ಲೇಖನ..!

Published

on

KGF ಎಂಬ ಸಿನೆಮಾ ಇನ್ನೇನು ತೆರೆಯ ಮೇಲೆ ಬರಲಿದೆ.ಸಿನೆಮಾದ ನಾಯಕ ಯಶ್ ಎಂಬ ಕಾರಣದಿಂದ ಅದಕ್ಕೆ ಭಾರೀ ಪ್ರಚಾರ ಮತ್ತು ನಿರೀಕ್ಷೆ ಎರಡೂ ನಡೆದಿದೆ.ಆದರೆ ಈ ಹೆಸರಿನ ಹಿಂದೆ ದಲಿತರ ರಕ್ತಸಿಕ್ತ ಅಧ್ಯಾಯ ಮತ್ತು ಚಳುವಳಿಯನ್ನು ದಿಟ್ಟವಾಗಿ ಮುನ್ನಡೆಸಿದ ಇತಿಹಾಸ ಇರುವ ವಿಚಾರ ಎಷ್ಟು ಜನರಿಗೆ ಗೊತ್ತಿದೆ?

ಸುಮಾರು ಹದಿಮೂರು ಸಾವಿರ ಅಡಿಗಳಷ್ಟು ಆಳವಿರುವ ಜಗತ್ತಿನ ಏಕೈಕ ಆಳದ ಗಣಿತೋಡಿದ ಅವರು ಎಷ್ಟು ನರಕ ಹಿಂಸೆ ಅನುಭವಿಸಿದರೋ ಯಾರಿಗೆ ಗೊತ್ತು? 1881 ರಿಂದ1930 ರ ಅವಧಿಯಲ್ಲಿ ಜಗತ್ತಿಗೆ ಮೂರುಲಕ್ಷಕ್ಕೂ ಹೆಚ್ಚು ಕಿಲೋಗ್ರಾಂ ತೂಕದ ಚಿನ್ನವನ್ನು ಸಂಪಾದಿಸಿಕೊಟ್ಟ ಅವರ ಶ್ರಮ ಬೆವರಿಗೆ ಸಿಕ್ಕ ಬೆಲೆಯೇನು ಗೊತ್ತಾ 12000 ಕಾರ್ಮಿಕರ ಬಲಿ, ಇದು ಯಾರಿಗೆ ಗೊತ್ತು?

ಹೌದು 1881 ರಲ್ಲಿ ಚಿನ್ನದ ಗಣಿಗಾರಿಕೆ ಕೆಲಸಕ್ಕೆ ಬ್ರಿಟೀಷ್ ಸರ್ಕಾರ ದಲಿತರನ್ನ ಆಯ್ಕೆ ಮಾಡಿತು, ಅದು ಮುಂದಾಲೋಚನೆ ಮಾಡಿ, ಕೇವಲ ಕೂಲಿಗಾಗಿ ಹಗಲು-ರಾತ್ರಿಯನ್ನದೆ ದುಡಿಯುತ್ತಿದ್ದ ಶ್ರಮಿಕವರ್ಗವಾಗಿತ್ತು, ಬೇರೆ ಪ್ರಭಾವಿ ಜನಾಂಗದವರಂತೆ ಯಾವ ಪಾಲನ್ನು ಅಪೇಕ್ಷಿಸದೆ ಇದ್ದ ಕಾರಣ ಅವರಿಗೆ ಇಂತಿಷ್ಟು ಕೂಲಿ ನಿಗದಿಪಡಿಸಿ, ಗಣಿಯ ಸುತ್ತ ವಸತಿ ವ್ಯೆವಸ್ತೆ ಕಲ್ಪಿಸಿ ದುಡಿಸಿಕೊಳ್ಳಲಾಗಿತ್ತು, ಅದು ಯಾವ ಮಟ್ಟದಲ್ಲಿ ಅಂದರೆ ಗಣಿ ಸುತ್ತಲಿನ ಸುಮಾರು 10-15 ಕಿ ಮೀ ಪ್ರದೇಶದಲ್ಲಿ ಬೇರೆ ಜನಾಂಗಗಳ ಪ್ರವೇಶಕ್ಕೆ ಅವಕಾಶವೇ ಇಲ್ಲದ ಮಟ್ಟಿಗೆ ನಿರ್ಭಂಧಿಸಿದ್ದರೂ, ( ಅದನ್ನು ಈಗಲೂ ಸಹ ಕೆಜಿಎಫ್ ಸುತ್ತಲೂ ನೋಡಬಹುದು ಕೋಲಾರದಲ್ಲಿ ಶೇ 85%ರಷ್ಟು ದಲಿತರೆ ವಾಸವಾಗಿರುವುದೂ ಸಹ,)

ಮೊದಮೊದಲು ಎಲ್ಲಾ ಚನ್ನಾಗಿಯೇ ಇತ್ತು, ಮೇಲ್ಪದರದ ಚಿನ್ನವನ್ನೆಲ್ಲ ತೆಗೆದಾಯಿತು, ಆದರೆ ಎರಡನೆ ಹಂತದ ಗಣಿಗಾರಿಕೆಯು ಬಹಳ ಕ್ಲಿಷ್ಟಕರವಾಗಿತ್ತು ಹೆಚ್ಚು ಹಾಳ ತೋಡಿದಂತೆಲ್ಲ ಮಣ್ಣು ಕುಸಿದು ಅಲ್ಲಿನ ಸುಮಾರು ಕಾರ್ಮಿಕರು ಅಸುನೀಗಿದರು, ಈ ಬಗ್ಗೆ ಬ್ರಿಟೀಷ್ ಅಧಿಕಾರಿಗಳು ಮುತುವರ್ಜಿವಹಿಸಿದರೂ ಸಹ ಹೆಚ್ಚು ಏನು ಮಾಡಲಾಗಲಿಲ್ಲ, 13000ಅಡಿ ಆಳದಲ್ಲಿ ಉಸಿರಾಡಲೂ ಗಾಳಿಯೂ ಇಲ್ಲದ ಪರಿಸ್ಥಿತಿಯಲ್ಲೂ ಸಹ ಸೀಮೆಎಣ್ಣೆಯ ಬತ್ತಿಗಳನ್ನು ಬಳಸಿ ಗಣಿತೋಡುತ್ತಿದ್ದರು, ಎಷ್ಟೋಭಾರಿ ಬತ್ತಿ ಕೆಟ್ಟೋದಂತಃ ಸಂಧರ್ಭದಲ್ಲಿ ಆ ಗುಹೆಗಳಿಂದ ಹೊರಬರಲು ಗೊತ್ತಾಗದೆ ಹಲವರು ಹಸುನೀಗಿದ ಉದಾಹರಣೆಗಳೆ ಹೆಚ್ಚು, ಆಗ ಜೀತದಾರರಾಗಿ ದುಡಿಯುತ್ತಿದ್ದ ಪಂಡೀತ್ ಅಯೋಧಿದಾಸರ ತಂದೆಯೂ ಸಹ ಮಣ್ಣುಕುಸಿದು ಮೃತಪಟ್ಟರು ನಂತರ ಈ ಬಗ್ಗೆ ಚಳುವಳಿಗಳು ಹುಟ್ಟಿಕೊಂಡವು ಅಯೋಧಿದಾಸರು ಇದರ ಮುಂಚೂಣಿ ನಾಯಕರಾಗಿ ನಿಂತರು.

ಆದರೆ ಕೂಲಿಯನ್ನೆ ನಂಬಿ ಬದುಕ್ಕಿದ ಶ್ರಮಿಕರನ್ನ ಎದುರಿಸಿ ದುಡಿಸಿಕೊಳ್ಳುತ್ತಿದ್ದರು, ಆಗಲೇ ಅಲ್ಲಿ ಗಣಿಯ ಮಣ್ಣು ಕುಸಿದು 1800 ಜನ ಕಾರ್ಮಿಕರು ಒಟ್ಟಿಗೆ ಮೃತಪಟ್ಟರು, ಇದು ಚಳುವಳಿಗೆ ತೀವ್ರವಾದ ವೇಗವನ್ನು ನೀಡಿದ್ದು ಎಷ್ಟರಮಟ್ಟಿಗೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೆ ಕೆಜಿಎಫ್‌ಗೆ ಭೇಟಿನೀಡಿ ಚಳುವಳಿಯಲ್ಲಿ ಭಾಗವಹಿಸಿ ಆಗಿನ ಸರ್ಕಾರಕ್ಕೆ ಹಾಗೂ ಅಲ್ಲಿನ ಆಡಳಿತ ವರ್ಗಕ್ಕೆ ತಾಕಿತು ಮಾಡಿದ್ದರು, ಕಾರ್ಮಿಕರ ಬೇಡಿಕೆಯನ್ನೆಲ್ಲ ಪೂರೈಸಿದ್ದರೂ, ( ನಿಮಗೊಂದು ವಿಚಾರ ತಿಳಿದಿರಲಿ ಭಾರತದಲ್ಲಿ 12 ಗಂಟೆ ಇದ್ದ ದುಡಿಮೆಯ ಅವಧಿಯನ್ನು ರದ್ದುಗೊಳಿಸಿ ಪ್ರಪ್ರಥಮ ಭಾರಿಗೆ ಎಂಟು ಗಂಟೆಗಳ ಅವಧಿ ಮಾತ್ರ ದುಡಿಯಬೇಕೆಂದು, ಹೆಚ್ಚಿನ ಅವಧಿ ಕೆಲಸಕ್ಕೆ ಹೆಚ್ಚು ಕೂಲಿ ಹಾಗೂ ವರ್ಷದ ಆದಾಯದ ಇಂತಿಷ್ಟು ಪ್ರಮಾಣ ಕಾರ್ಮಿಕರಿಗೆ ಬೋನಸ್ ರೂಪದಲ್ಲಿ ಕೊಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದರು, ಮೊದಲ ಕಾನೂನು ಮಂತ್ರಿಯಾದಾಗ ಸ್ವತಃ ಮುತುವರ್ಜಿವಹಿಸಿ ಇದನ್ನು ಜಾರಿಗೊಳಿಸಿದರು )

ಸ್ವತಂತ್ರ ನಂತರ ಈ ಪ್ರದೇಶ ರಾಜಕೀಯ ರೂಪ ಪಡೆದು ಚಿನ್ನದ ಅದಿರು ಮಿಶ್ರಿತ ಕಚ್ಚಾ ಮಣ್ಣಿಗಾಗೆ ಇಲ್ಲಿ ಸಾವಿರಾರು ಜೀವಗಳು ಬಲಿಯಾಗಿದ್ದಾರೆ, ತಮ್ಮ ಪ್ರಭಾವಕ್ಕಾಗಿ ಅಂಡರ್‌ವಲ್ಡ್ರ್ ಮಾಫಿಯಾಗಳು ಬೆಳೆದು ನಿಂತಿವೆ, ಅದು ಎಷ್ಟರ ಮಟ್ಟಿಗೆಂದರೆ ಅಲ್ಲಿನ ಯಾವುದೇ ಪೊಲೀಸ್ ಠಾಣೆಯಲ್ಲೂ ಸಹ ಒಬ್ಬ ಅಧಿಕಾರಿ ಆರು ತಿಂಗಳು ಪೂರೈಸಿದರೆ ದೊಡ್ಡ ಸಾಧನೆ ಎನ್ನುವಷ್ಟರ ಮಟ್ಟಿಗೆ, ಇವರ ಪ್ರಭಾವವಿದೆ, ಕತ್ತಲಾದ ನಂತರ ಇಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಊಹಿಸಲು ಅಸಾಧ್ಯವಾಗಿತ್ತು, ಅದನ್ನು ಕಣ್ಣಾರೆ ಕಂಡು ಬದುಕುಳಿದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರಾ, ಅದು ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದಂತಃ ಉಸಿರು ಕಟ್ಟುವ ವಾತಾವರಣದಲ್ಲಿ ಬದುಕಿದ ಉದಾಹರಣೆಗಳೆಷ್ಟೊ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದವರೆಷ್ಟೊ ಹಾಗೆ ತಮ್ಮ ಕಣ್ಣಮುಂದೆಯೆ ಬೆಳೆದು ನಿಂತ ಮಕ್ಕಳ ಸಾವುಕಂಡವರೆಷ್ಟೊ, ಈ ಥರಃ ಅಲ್ಲಿನ ರಕ್ತಸಿಕ್ತ ಚರಿತ್ರೆ ಈಗಲೂ ಸಹ ನಡೆಯುತ್ತಿದೆ,

ಈಗೆ ಅವರು ದುಡಿದ ಚಿನ್ನ ಇಂದು ಯಾವ ದೇವರ ಅಥವಾ ದೇವತೆಯ ಅಥವಾ ಹೆಣ್ಣು/ಗಂಡುಗಳ ಮೂರ್ತಿ ಅಥವಾ ದೇಹದ ಮೇಲಿದೆಯೋ ಯಾರಿಗೆ ಗೊತ್ತು?

ಒಟ್ಟಾರೆ ಭದ್ರಾವತಿ ಮತ್ತು ಕೆಜಿಎಫ್ ಗಳಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದವರು ದಲಿತರು ಎಂಬ ಕಾರಣಕ್ಕಾಗಿ ಮಾಧ್ಯಮಗಳು ಆಸಕ್ತಿ ತೋರಲಿಲ್ಲ, ಅದರಲ್ಲೂ ಶೇ 40% ರಿಂದ 50% ತಮಿಳು ದಲಿತರೂ ಇದ್ದಕಾರಣ ಕನ್ನಡ ಸಂಘಟನೆಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ನೋವಿನ ಮತ್ತು ವಂಚನೆಯ ಇತಿಹಾಸ ಎಷ್ಟು ಜನಕ್ಕೆ ಗೊತ್ತು.

ಜೀತಗಾರರಾಗಿ ಬದುಕಿದ್ದರೂ ಪಂಡಿತ್ ಅಯೋಧಿದಾಸ್ ರವರ ಶ್ರಮ ಮತ್ತು ಬದ್ಧತೆಯ ಕಾರಣದಿಂದ ಬಾಬಾಸಾಹೇಬರ ಪೂರ್ವದಲ್ಲೇ ಕ್ರಾಂತಿ ಹುಟ್ಟುಹಾಕಿ ಅದನ್ನು ಬೆಳೆಸಲು ಮನುವಾದಿಗಳಿಗೆ ಹೆದರದೆ ಎದೆಯೊಡ್ಡಿದ ಇತಿಹಾಸ ದಾಖಲಾಗದೇ ಇರುವುದೇಕೆ? ಸ್ವತಃ ಬಾಬಾಸಾಹೇಬರ ಭೇಟಿ ಬಳಿಕ ಅವರು ನಡೆಸಿದ ಚಳುವಳಿಯನ್ನು ನಡೆಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ ಹುಲಿಯಂತೆಯೇ ಬದುಕಿದ್ದ ಶ್ರೀ ಸಿ.ಎಮ್.ಆರ್ಮುಗಂ,ಅವರ ಬಳಿಕ RPIಯನ್ನು ಪ್ರತಿನಿಧಿಸಿದ ಕನ್ನಡಿಗರಾದ ಭಕ್ತವತ್ಸಲ,ರಾಜೇಂದ್ರ ರವರಂತಹವರನ್ನು ಕೊಟ್ಟ ಸ್ವಾಭಿಮಾನಿ ದಲಿತರ ಇತಿಹಾಸವೇಕೆ ನಮ್ಮವರಿಗೆ ತಿಳಿದಿಲ್ಲ.

ಇಂದು ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಿದ್ದವಾಗಿರುವುದರಿಂದ ಈ ಬಗ್ಗೆ ಬರೆಯಬೇಕಾಯಿತು.ಕನ್ನಡಪ್ರಭ ದಲ್ಲಿ ಬಂದಿರುವ ಕೇಶವಮೂರ್ತಿ ಯವರ ಲೇಖನ ಇದಕ್ಕೆ ಕಾರಣವಾಯಿತು. ಸಿನೆಮಾ ಇಂಥಹ ಭೀಕರ ಚರಿತ್ರೆಯನ್ನು ಹೇಳುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಜಿಎಫ್ ನ ನಿಜವಾದ ಇತಿಹಾಸವನ್ನು ನಮ್ಮವರು ದಾಖಲೆ ಮಾಡಲೇಬೇಕಿದೆ.

ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ದ್ರಾವಿಡ ಪರಂಪರೆಯ ತಮಿಳುನಾಡು ಇಂದು ಈ ಚಿತ್ರಕ್ಕೆ ಕೆಂಪುಹಾಸಿನ ಸ್ವಾಗತ ನೀಡುತ್ತಿದ್ದಾರೆಂದರೆ ಅದಕ್ಕೆ ಮುಖ್ಯಕಾರಣವೇ ಈ ಮೂಲನಿವಾಸಿಗಳ ರಕ್ತಸಿಕ್ತ ಚರಿತ್ರೆ, ನನ್ನ ದೃಷ್ಟಿಯಲ್ಲಿ ಇದೊಂದೇ ಆ ಚಿನ್ನದ ಶ್ರಮಿಕ ಪೂರ್ವಜರಿಗೆ ಸಲ್ಲಿಸಬಹುದಾದ ಸಣ್ಣಗೌರವ ಅಷ್ಟೆ,

ಇದರ ಮೇಲೂ ಯಾರಾದರು ಇದಕ್ಕೆ ಮಸಿಬಳಿಯುವ ಕೆಲಸ ಮಾಡಿದರೆ ಅದು ಕೇವಲ ಕಟ್ಟುಕಥೆ, ತಮ್ಮ ಜನಾಂಗದ ಮೇಲಿನ ಕುರುಡು ಪ್ರೀತಿ, ಹಾಗೂ ಇತಿಹಾಸಕ್ಕೆ ಮಾಡಿದ ದ್ರೋಹ, ಸಾಧ್ಯವಾದಷ್ಟು ತಲುಪಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಕಡೆಯ ಸಂದೇಶಗಳು

Published

on

ಸಂದೇಶ: ಒಂದು

ನನ್ನ ಸಂದೇಶವೆಂದರೆ ಹೋರಾಟ, ಇನ್ನೂ ಹೆಚ್ಚಿನ ಹೋರಾಟ; ತ್ಯಾಗ, ಇನ್ನೂ ಹೆಚ್ಚಿನ ತ್ಯಾಗ, ಬಲಿದಾನ! ಹೋರಾಟ, ಹೌದು ಹೋರಾಟ ಮಾತ್ರ ತ್ಯಾಗ, ಬಲಿದಾನಗಳು ತಂದೊಡ್ಡುವ ಕಷ್ಟ ನಷ್ಟ ಪರಂಪರೆಗಳನ್ನು ಪರಿಗಣಿಸದೆಯೇ ಮುನ್ನುಗ್ಗುವ ಧೀರ ಹೋರಾಟ ಮಾತ್ರ ಅವರ ವಿಮೋಚನೆ ಸಾಧಿಸಬಲ್ಲದು ಬೇರೆ ಇನ್ನಾವುದು ಕೂಡ ಅಸ್ಪøಶ್ಯರ ಬಿಡುಗಡೆಯ ಮಾರ್ಗ ತೋರಲಾರದು.

ಸಂದೇಶ: ಎರಡು

ಅಸ್ಪøಶ್ಯರೆಲ್ಲರೂ ಒಂದು ಸಾಮೂಹಿಕ ಸಂಕಲ್ಪವನ್ನು ಅಂತರ್ಗತ ಮಾಡಿಕೊಳ್ಳಬೇಕು. ಅವರು ತಮ್ಮೊಳಗಿನ ಸಮಸ್ತ ಜಡತ್ವವನ್ನು ಕೊಡಹಿ ಘನಿಷ್ಠ ಐಕ್ಯತೆಯೊಂದಿಗೆ ಎದ್ದು ನಿಂತು ಪ್ರತಿಭಟಿಸುವುದನ್ನು ಕಲಿತುಕೊಳ್ಳಬೇಕು. ಜೊತೆಗೆ ತಾವು ಕೈಗೊಂಡಿರುವ ಮಹತ್ತರ ಕಾರ್ಯದ ಪಾವಿತ್ರ್ಯದ ಬಗ್ಗೆ ದೃಢವಾದ ನಂಬಿಗೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ತಾವು ಮುಟ್ಟಬೇಕಾದ ಗುರಿಯ ಬಗ್ಗೆ ಒಂದು ಸಮಷ್ಟಿ ನಿರ್ಧಾರವನ್ನು ಸೃಷ್ಟಿಸಿಕೊಳ್ಳಬೇಕು. ಅವರ ಕಾರ್ಯ ಎಷ್ಟು ಮಹತ್ವದ್ದಾಗಿದೆಯೆಂದರೆ, ಈ ಘನೋದ್ಧೇಶ ಎಷ್ಟು ಶ್ರೇಷ್ಠವಾದುದ್ದಾಗಿದೆಯೆಂದರೆ ಸಮಸ್ತ ಅಸ್ಪøಶ್ಯರು ಒಗ್ಗೂಡಿ ಒಕ್ಕೊರಲಿನಿಂದ ಈ ಪ್ರಾರ್ಥನೆಗೆ ದ್ವನಿಗೂಡಿಸಬೇಕು
“ತನ್ನ ಜನ, ಜನಾಂಗಗಳನ್ನು ಉದ್ಧರಿಸಬಲ್ಲ ಮಹತ್ತರ ಕಾರ್ಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಜೀವಂತಿಕೆಯಿಂದ ಲವಲವಿಕೆಯಿಂದ ದುಡಿಯುವವನೆ ಧನ್ಯನು. ಗುಲಾಮಗಿರಿ ವ್ಯವಸ್ಥೆಯ ವಿರುದ್ಧ ಒಡ್ಡಲಾಗುವ ಪ್ರತಿಭಟನೆಗೆ ಶಕ್ತಿ ತುಂಬಿ ಸಂವರ್ಧಿಸಬಲ್ಲವರೇ ಧನ್ಯರು. ತಮ್ಮ ಬದುಕಿನ ಸರ್ವಸ್ವವನ್ನೇ ತನು, ಮನ, ಧನ ಮಿಗಿಲಾಗಿ ತನ್ನ ತನ್ನನ್ನೇ ಮುಡಿಪಾಗಿಟ್ಟು ತಮ್ಮ ಜನರನ್ನು ಶ್ರೇಯೋಭಿವೃದ್ಧಿಯ ಮಾರ್ಗದಲ್ಲಿ ನಡೆಸುವ ಪ್ರತಿಜ್ಞೆಗೈಯುವವರೇ ಧನ್ಯರು. ಮಾನಾಪಮಾನಗಳನ್ನು ಲೆಕ್ಕಿಸದೆ ಒಳ್ಳೆಯದೇ ಬರಲಿ, ಕೆಟ್ಟದ್ದೇ ಬರಲಿ, ಕೆಟ್ಟದ್ದೇ ಎದುರಾಗಲಿ, ಮಳೆ ಬರಲಿ, ಬಿಸಿಲಿರಲಿ ಭಯಂಕರ ಬಿರುಗಾಳಿಯೇ ದುರ್ದಾಳಿ ನಡೆಸಲಿ ಸಮಸ್ತ ಅಸ್ಪøಶ್ಯರು ಪರಿಪೂರ್ಣವಾದ ಪೌರುಷ್ಯವನ್ನು ಪುನಃ ಪಡೆದುಕೊಳ್ಳುವವರೆಗೆ ಎಲ್ಲಿಯೂ ನಿಲ್ಲದೆ ಅತುಲ ಧೈರ್ಯ ಧೀಮಂತಿಕೆಯೊಂದಿಗೆ ಮುನ್ನಡೆಯುವ ಅಚಲ ನಿರ್ಧಾರ ಕೈಗೊಳ್ಳುವವರೇ ಧನ್ಯ, ಧನ್ಯರು”

ಸಂದೇಶ: ಮೂರು

ನನ್ನನ್ನು ಕಾಡುತ್ತಿರುವ ಸಂಗತಿಗಳಾಗಲಿ, ನನ್ನನ್ನು ದುಃಖಕ್ಕೆ ದೂಡಿರುವ ವಿಷಯವಾಗಲಿ ನಿಮಗೆ ಅರ್ಥವಾಗುವುದಿಲ್ಲ. ನನಗೆ ಹಗಲಿರುಳು ಚುಚ್ಚಿ ನೋಯಿಸುತ್ತಿರುವ, ನನ್ನ ಚಿಂತೆಗೆ ಕಾರಣವಾಗಿರುವ ಮೊಟ್ಟಮೊದಲನೇ ಸಂಗತಿ ಎಂದರೆ, ನಾನು ನನ್ನ ಬದುಕಿನ ದ್ಯೇಯೋದ್ಧೇಶಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲವಲ್ಲ ಎಂಬುವುದು. ನನ್ನ ಜನರು ಇತರ ಸಮುದಾಯಗಳೊಂದಿಗೆ ಸರ್ವ ಸಮಾನತೆಯನ್ನು ಸಾಧಿಸಿಕೊಂಡು ರಾಜಕೀಯ ಅಧಿಕಾರದ ಮೂಲಕ ಆಳುವ ವರ್ಗಗಳಾಗಿ ಮೇಲೇರುವುದನ್ನು ನಾನು ನೋಡಬಯಸಿದ್ದೆ. ಆದರೆ, ನಾನೀಗ ಅನಾರೋಗ್ಯದಿಂದ ನಿತ್ರಾಣನಾಗಿದ್ದೇನೆ. ನನಗೆ ಸಾಧಿಸಲು ಸಾಧ್ಯವಾಗಿರುವುದೆಲ್ಲವೂ ಕೆಲವೇ ಕೆಲವು ಸುಶಿಕ್ಷಿತರು ಮಾತ್ರ ಬಳಸುತ್ತಿದ್ದಾರೆ. ತಮ್ಮ ಬದುಕನ್ನು ಮಾತ್ರ ಹಸನು ಮಾಡಿಕೊಂಡು, ಆನಂದಾತಿರೇಕದಲ್ಲಿ ಓಲಾಡುತ್ತಿದ್ದಾರೆ. ತಮ್ಮ ಮೋಸ ತಟವಟದ ನಡೆ-ನುಡಿಗಳ ಮೂಲಕ ನಿರುಪಯುಕ್ತ ಜನರಾಗಿ ಪರಿಣಮಿಸಿದ್ದಾರೆ. ಇವರಿಗೆ ದಮನಕ್ಕೊಳಗಾದ ತಮ್ಮ ಬಂಧು ಬಾಂಧವರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಇವರೊಳಗಿನ ಸಹಾನುಭೂತಿಯ ಸೆಲೆ ಶುಷ್ಕವಾಗಿದೆ. ಇವರೆಲ್ಲ ನನ್ನ ಕಲ್ಪನೆಯನ್ನು ಮೀರಿದ್ದಾರೆ. ವೈಯಕ್ತಿಕ ಗಳಿಕೆಗಳಿಗಾಗಿ ಹವಣಿಸುತ್ತಾ ತಮಗಾಗಿ ಮಾತ್ರ ಬದುಕುತ್ತಿದ್ದಾರೆ. ಇವರಲ್ಲಿಯ ಒಬ್ಬನೆ ಒಬ್ಬ ಕೂಡ ಸಾಮಾಜಿಕ ಕಾರ್ಯಕ್ಕೆ ತೊಡಗಲು ಸಿದ್ದನಿಲ್ಲ. ಸರ್ವರೂ ತಮ್ಮ ಸರ್ವನಾಶದ ದಾರಿಯನ್ನು ತುಳಿಯುತ್ತಿದ್ದಾರೆ. ನಾನೀಗ ನನ್ನ ಗಮನವನ್ನು ಗ್ರಾಮಾಂತರದಲ್ಲಿಯ ನಿರಕ್ಷರಕುಕ್ಷಿಗಳೆಡೆಗೆ ತಿರುಗಿಸಬಯಸಿದ್ದೆ. ಅವರೆಲ್ಲ ತಮ್ಮ ಆರ್ಥಿಕ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಇನ್ನೂ ಕಷ್ಟ ಪರಂಪರೆಗೆ ಬಲಿಯಾಗುತ್ತಲೇ ಇದ್ದಾರೆ. ಆದರೆ ನನ್ನ ಜೀವನ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ನನ್ನ ಉಳಿದ ಬದುಕು ತುಂಬಾ ಕಡಿಮೆಯಿದೆ ಎಂಬುದು ನನಗೆ ಗೊತ್ತು.
ನನ್ನ ಜೀವಮಾನ ಕಾಲದಲ್ಲಿಯೇ ದಮನಿತ ವರ್ಗಗಳೊಳಗಿಂದ ಯಾರಾದರೊಬ್ಬರು ಮುಂದೆ ಬಂದು ನಮ್ಮ ಆಂದೋಲನವನ್ನು ಮುನ್ನಡೆಸಿಕೊಂಡು ಹೋಗುವ ಭಾರವಾದ ಹೊಣೆಗೆ ಹೆಗಲು ಕೊಡಬಹುದೆಂದು ಆಶಿಸಿದ್ದೆ. ಆದರೆ ನಮ್ಮ ಈ ಸಂದರ್ಭದ ಸಮಸ್ಯೆಗೆ ಎದೆಗೊಟ್ಟು ಎದುರಿಸಬಲ್ಲ ಯಾರೊಬ್ಬರೂ ಮೇಲೆದ್ದು ಬರುವಂತೆ ಕಾಣುತ್ತಿಲ್ಲ. ನನ್ನ ಹಲವಾರು ಸ್ನೇಹಿತರಲ್ಲಿ ನನಗೆ ತುಂಬಾ ವಿಶ್ವಾಸವಿತ್ತು. ಇವರಲ್ಲಿ ಯಾರೊಬ್ಬರಾದರೂ ನನ್ನ ಅಭೀಪ್ಸೆಗೆ ಅನುಗುಣವಾಗಿ ನಡೆದುಕೊಳ್ಳಬಲ್ಲರೆಂಬ ಭರವಸೆ ಇತ್ತು. ಆದರೆ ತಮ್ಮ ಹೆಗಲೇರಲಿರುವ ಭಾರಿ ಜವಾಬ್ದಾರಿಯ ಭಾರದ ಕಿಂಚಿತ್ ಅರಿವಿಲ್ಲದೆ ಇವರೆಲ್ಲ ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮ ತಮ್ಮೊಳಗೆ ಬಡಿದಾಡುತ್ತಿದ್ದಾರೆ. ಹೊಣೆ ಹೊರಲು, ಆಂದೋಲನವನ್ನು ಯಶಸ್ವಿಯಾಗಿ ಮುಂದುವರೆಸಲು ಯಾರೂ ಅಣಿಯಾಗುತ್ತಿಲ್ಲ. ನಾನಿನ್ನು ನನ್ನ ದೇಶದ ಸೇವೆ ಮುಂದುವರೆಸಬೇಕೆಂಬ ಬಯಕೆಯ ಭಾರದ ಅಡಿಯಲ್ಲಿ ತತ್ತರಿಸುತ್ತಿದ್ದೇನೆ. ಕೊನೆಯ ಉಸಿರಿನವರೆಗೂ ದೇಶಕ್ಕೆ ನನ್ನ ಸೇವೆಯನ್ನು ಅರ್ಪಿಸಲು ಆಶಿಸುತ್ತಿದ್ದೇನೆ. ಆದರೆ ಜಾತೀಯತೆಯಿಂದ ತುಂಬಿ ತುಳುಕುತ್ತಿರುವ ಪೂರ್ವಗ್ರಹ ಪೀಡಿತ ಈ ದೇಶದಲ್ಲಿ ಹುಟ್ಟುವುದೇ ಒಂದು ಪಾಪ ಎನಿಸುತ್ತಿದೆ. ಸದ್ಯದ ವ್ಯವಸ್ಥೆಯಲ್ಲಿ ಎಲ್ಲರ ಕಿವಿಗಳು ಪ್ರಧಾನ ಮಂತ್ರಿಯ ಮಾತುಗಳಿಗೆ ಮೀಸಲಾಗಿರುವಂತೆ ತೋರುತ್ತಿವೆ. ಸದ್ಯಕ್ಕೆ ಪ್ರಧಾನ ಮಂತ್ರಿಯ ನೆಲೆ ನಿಲುವು, ಮಾತುಕತೆಗಳನ್ನು ಮನ್ನಣಿಸುವವರ ಮಾತನ್ನು ಮಾತ್ರ ಜನರ ಕಿವಿಗೊಟ್ಟು ಆಲಿಸುವ ಸ್ಥಿತಿಗೆ ಇಳಿದಿದ್ದಾರೆ. ಅವುಗಳಿಗೆ ಪರ್ಯಾಯವಾದ, ಭಿನ್ನವಾದ ಯಾವ ಮಾತುಗಳನ್ನೂ ಜನರು ಕೇಳದ ವಿಷಾಧನೀಯ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಾಸ್ತವದಲ್ಲಿ ದೇಶದ ವ್ಯವಹಾರದ ಬಗ್ಗೆ ಆಸಕ್ತಿ ಉಳಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸವಾಗಿ ಪರಿಣಮಿಸಿದೆ. ಅಬ್ಬಾ! ಈ ದೇಶ ಎಂತಹ ಅಧಃಪತನಕ್ಕೆ ಪಾತ್ರವಾಗುತ್ತಿದೆಯಲ್ಲ!
ನಾನಕ್ ಚಂದ್ ಹೋಗು ನನ್ನ ಜನರಿಗೆ ಹೇಳು. ನಾನು ಏನೆಲ್ಲ ಮಾಡಿರುವೆನೋ, ತುಸು ಮಟ್ಟಿಗಾದರೂ ಸಾಧಿಸಿರುವೆನೋ ಅದೆಲ್ಲವನ್ನು ನಾನು ಏಕಾಗಿಯಾಗಿಯೇ ಮಾಡಿದ್ದೇನೆ. ನನ್ನನ್ನು ನುಚ್ಚು ನೂರು ಮಾಡುವ ಅನೇಕ ತೊಂದರೆ ಸಂಕಟಗಳ ಒಳಗಿಂದ ಹಾಯ್ದು ಬಂದಿದ್ದೇನೆ. ಉದ್ದಕ್ಕೂ ನನ್ನ ಜನರು ನನ್ನೆಡೆಗೆ ಎಸೆದ ಬಿರು ನುಡಿಗಳು, ಎಲ್ಲ ಧಿಕ್ಕಿನಿಂದಲೂ ಬಂದ ದೂಷಣೆಗಳು ಮಾತಿಗೂ ಮೀರಿದವು. ವಿಶೇಷವಾಗಿ, ಹಿಂದೂ ಪತ್ರಿಕಾ ಮಾದ್ಯಮಗಳಿಂದ ಬಂದೆರಗಿದ ನಿಂಧನೆಯ ನುಡಿಗಳು ನನ್ನನ್ನು ನೋಯಿಸಿವೆ. ಬದುಕಿನ ಉದ್ದಕ್ಕೂ ನಾನು ಇವರೆಲ್ಲರ ವಿರುದ್ಧ ಸೆಣೆಸಿದ್ದೇನೆ. ನನ್ನ ವಿರೋಧಿಗಳನ್ನು ಎದುರಿಸಿ ನಿಂತಿದ್ದೇನೆ. ಕೆಲವೇ ಕೆಲವು ಸ್ವಾರ್ಥದ ಉದ್ಧೇಶಗಳಿಗಾಗಿ ನನ್ನನ್ನು ಮೋಸ ಮಾಡಿದ ನಮ್ಮದೇ ಹಿಡಿಯಷ್ಟು ಜನರನ್ನು ಎದುರಿಸಿದ್ದೇನೆ. ಇದರೆಲ್ಲರ ಹೊರತಾಗಿಯೂ ನನ್ನ ಜೀವದ ಕೊನೆಯ ಉಸಿರಿನವರೆಗೂ ದಮನಿತರ ಸೇವೆಯನ್ನು ಮುಂದುವರೆಸಲು ನಿರ್ಧರಿಸಿದ್ದೇನೆ. ಯಾವುದೇ ಸಂಧರ್ಭದಲ್ಲಿಯೂ ನನ್ನ ದೇಶ ಬಾಂಧವರ ಕೈ ಬಿಡದಿರಲು ತಿರ್ಮಾನಿಸಿದ್ದೇನೆ. ಬಹು ಕಷ್ಟ ಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೆ ಮುನ್ನಡೆಯಬೇಕು. ಅದರ ಮಾರ್ಗದಲ್ಲಿ ಏನೆಲ್ಲ ಎಡರುತೊಡರುಗಳು ಎದುರಾಗಬಹುದು. ಅಡ್ಡಿ ಅಡಚಣೆಗಳು ಅಡ್ಡಬರಬಹುದು. ಚ್ಯುತಿ ನ್ಯೂನ್ಯತೆಗಳಂತಹ ಕಷ್ಟಗಳು ಅದರ ಮುನ್ನಡೆಗೆ ತೊಂದರೆ ಒಡ್ಡಬಹುದು. ಇವೆಲ್ಲವನ್ನು ಮೆಟ್ಟಿ ಮೀರಿ ನಿಲ್ಲುತ್ತಾ ಮುಂದೆ ಸಾಗಬೇಕು. ನನ್ನ ಜನರು ಈ ಸಂದರ್ಭದ ಸವಾಲನ್ನು ಸ್ವೀಕರಿಸುವ ಧೀಮಂತಿಕೆ ತೋರಬೇಕು. ಒಂದು ಗೌರವಾರ್ಹವಾದ ಮರ್ಯಾದೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಅವರೆಲ್ಲ ಇದಕ್ಕೆ ಸಿದ್ಧರಾಗಬೇಕು. ಒಂದು ವೇಳೆ ನನ್ನ ಜನರು ಹಾಗೂ ನನ್ನ ಕಟ್ಟಾ ಅನುಯಾಯಿಗಳು ಈ ಆಂದೋಲನದ ರಥವನ್ನು ಮುಂದೆ ನಡೆಸುವಲ್ಲಿ ವಿಫಲರಾದರೂ ಪರವಾಗಿಲ್ಲ. ಅವರು ಮಾಡಬಹುದಾದ ಉತ್ತಮ ಕೆಲಸವೆಂದರೆ ಅದು ಎಲ್ಲಿಗೆ ಬಂದಿದೆಯೋ ಅಲ್ಲಿಯೇ ನಿಲ್ಲುವಂತಾದರೂ ನೋಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಅದು ಹಿಂದಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇದು ನನ್ನ ಸಂದೇಶ. ಹೌದು ಪ್ರಾಯಶಃ ನನ್ನೆಲ್ಲಾ ಗಾಂಭೀರ್ಯದೊಂದಿಗೆ ನೀಡಲಾಗುತ್ತಿರುವ ಕೊನೆ ಸಂದೇಶ. ನನ್ನ ಈ ಮಾತಿಗೆ ಎಲ್ಲರೂ ಕಿವಿಗೊಡುವರೆಂಬ ವಿಶ್ವಾಸ ನನಗಿದೆ. ಹೋಗು ನನ್ನ ಈ ಪರಮ ವಿಶ್ವಾಸದ ಸಂದೇಶವನ್ನು ಅವರಿಗೆ ತಿಳಿಸು. ಹೋಗು ಈ ಸಂದೇಶವನ್ನು ಅವರಿಗೆ ಮುಟ್ಟಿಸು. ಹೋಗು ಈ ಸಂದೇಶವನ್ನು ಅವರಿಗೆ ತಲುಪಿಸು.

ಪುಸ್ತಕ :ಅಂಬೇಡ್ಕರ್ ಸ್ಮೃತಿ-ಸಂಸ್ಕೃ ತಿ
ಇಂಗ್ಲಿಷ್: ನಾನಕ್ ಚಂದ್ ರತ್ತು
ಕನ್ನಡಕ್ಕೆ: ರಾಹು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಬಹಿರಂಗ

ಹರಪ್ಪ : ಡಿಎನ್ಎ ನುಡಿದ‌ ಸತ್ಯ..!

Published

on

ಇತ್ತೀಚಿನ ವರುಷಗಳಲ್ಲಿ ಆವೇಗ ಪಡೆದುಕೊಂಡಿರುವ ಡಿ ಎನ್ ಎ ಸಂಶೋಧನೆಗಳು ಮನುಷ್ಯನ ಚರಿತ್ರೆ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು, ಹಾಗೆಯೇ ಸರಿಯಾದ ತಿಳುವಳಿಕೆಗೆ ಅಧಿಕೃತತೆ ತಂದುಕೊಡಬಲ್ಲವು.

ಭಾರತದ ಇತಿಹಾಸದಲ್ಲಿ ಯಾವ ಜನಾಂಗಗಳು ಎಲ್ಲಿಂದ ಬಂದವರು ಎಲ್ಲಿದ್ದವು ಮುಂತಾದ ವಿಷಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿವೆ. ಆದರೆ ಇತ್ತೀಚಿನ ವಂಶವಾಹಿ ಶೋಧನೆಗಳು ಕೆಲವು ಕರಾರುವಾಕ್ಕಾದ ತಿಳಿವನ್ನು ನೀಡಿವೆ.

ಈ ಮನುಷ್ಯನ ಜಿನೋಮ್ ಆಧರಿಸಿದ ನಮ್ಮ ಜೀವಕೋಶದೊಳಗಿನ ಪುರಾತನ ಡಿ ಎನ್ ಎ ಮೂಲಕ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚುವ ಸಂಶೋಧನೆಗಳ ಕುರಿತು ಮಾಹಿತಿ ನೀಡುವ ಒಂದು ಹೊತ್ತಗೆ ಇದು. ಸ್ವತಃ ತಳಿ ವಿಜ್ಞಾನಿ ಆಗಿರುವ ಡೇವಿಡ್ ರೀಚ್ ಜಾಗತಿಕ ಮಟ್ಟದಲ್ಲಿ ಡಿಎನ್ ಎ ಮೂಲಕ ಮನುಷ್ಯನ ಇತಿಹಾಸದ ಬಗ್ಗೆ ಹೇಳುವ ವಿವರಗಳು ರೋಚಕವಾಗಿವೆ.

ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಲ್ಪಟ್ಡಿವೆ, ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದವರು, ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಸೇರಿಕೊಂಡರು ಹೇಗೆ, ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗೆ, ಯಾವಾಗಿನಿಂದ ಬಿಗಿದುಕೊಂಡಿತು, ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಇದರಲ್ಲಿ ಚರ್ಚಿತವಾಗಿವೆ. ಆರ್ಯರು ಭಾರತದ ಮೂಲದವರು ಎಂಬ ಪೊಳ್ಳು ವಾದಕ್ಕೆ ಈ ಡಿ ಎನ್ ಎ ಶೋಧಗಳು ಮಾರಣಾಂತಿಕ ಪೆಟ್ಟು ನೀಡಿವೆ ಎನ್ನಬಹುದು.‌ ಇಂತಹ ಹಲವು ಕುತೂಹಲಕಾರಿ ಸತ್ಯಗಳನ್ನು ಬಿಚ್ಚಿಡುವ ಪುಸ್ತಕ ‘ಹರಪ್ಪ : ಡಿಎನ್ ಎ ನುಡಿದ ಸತ್ಯ’. 

(ಪುಸ್ತಕ ಕೊಂಡು ಓದಿ ; ಪ್ರತಿಗಳಿಗಾಗಿ ‘ದಯಾನಂದ ಗೌಡ ಮೊನಂ: 9902934116’ ಗೆ ಸಂಪರ್ಕಿಸಿ.)

-ಓದು ಪ್ರಕಾಶನ

Continue Reading
Advertisement

Trending