Connect with us

ಬಹಿರಂಗ

ಮಹಿಷ ಅಸುರನಲ್ಲ, ಅವನು ‘ಮಹಿಷ ಮಂಡಲ’ದ ಒಬ್ಬ ನಾಯಕ..!

Published

on

ಫೋಟೋ : ನವ್ಯ ಕಡಮೆ
  • ಹರ್ಷಕುಮಾರ್ ಕುಗ್ವೆ

ಹಿಷಾಸುರ ಎಂದು ಹೇಳುವಾಗ ಅದರಲ್ಲಿರುವ “ಅಸುರ” ಎಂಬ ಪದದ ಬಗ್ಗೆ ದ್ರಾವಿಡ ಯುವ ಚಿಂತಕರು ಎಚ್ಚರ ವಹಿಸುವ ಅಗತ್ಯವಿದೆ. ಕೆಲವು ಸ್ನೇಹಿತರು “ಅಸುರ” ಎಂಬ ಪದವನ್ನು ತಮ್ಮ ಸರ್ ನೇಮ್ ಆಗಿ ಇಟ್ಟುಕೊಂಡಿರುವವರನ್ನೂ ನೋಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಮಾತ್ರವಲ್ಲ ವೈದಿಕಶಾಹಿಗಳು ತೆಗೆದ ಗುಂಡಿಯಲ್ಲಿ ನಾವು ಬೀಳುವ ಪರಿ. ಮಹಿಷ ಮಂಡಲದ ಮಹಿಷನಿಗೆ “ಅಸುರ” ಎಂದು ಕರೆದಿದ್ದು ವೈದಿಕರು.

ಯಾಕೆಂದರೆ ಮಹಿಷಾಸುರನ ಕುರಿತು ಪುರಾಣ ಬರೆದಿದ್ದು ಅವರೇ. ಆದರೆ ಮೂಲತಃ ಮಹಿಷ ಎಂಬುವವ ವ್ಯಕ್ತಿ ಮಹಿಷ ಮಂಡಲದ ಒಬ್ಬ ನಾಯಕ ಎಂದು ಅವನ ಕುರಿತಾದ ಆಚರಣೆಗಳು, ದ್ರಾವಿಡ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಸಂಗತಿಗಳು ಸಾರಿ ಹೇಳುತ್ತವೆ. ಎಮ್ಮೆಯನ್ನು ಸಂಕೇತಿಸುವ ಮಹಿಶನ ಸಮುದಾಯ ಆದಿಮ ದ್ರಾವಿಡ ಪಶುಪಾಲಕ ಸಮುದಾಯವೇ ಇರಬೇಕು. ಇಂದಿನ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳ ಬಹುಭಾಗವನ್ನು ವ್ಯಾಪಿಸಿಕೊಂಡಿದ್ದ ಮಹಿಷಮಂಡಲ ಪಶುಪಾಲಕ ದ್ರಾವಿಡ/ದಲಿತ ಸಮುದಾಯಗಳ ಪ್ರಾಭಾವದಲ್ಲಿದ್ದ ಕಾಲವಾಗಿದ್ದಿರಬಹುದು.

ಅದೇ ಸಮಯದಲ್ಲಿ ಮಾತೃ ಪ್ರಧಾನ ದ್ರಾವಿಡ ಬುಡಕಟ್ಟುಗಳೂ ಇದ್ದವು. ಈ ಸಮುದಾಯಗಳ ನಡುವೆ ಸಂಘರ್ಷವೂ ಸಹಜವಾಗಿ ನಡೆದಿರಬಹುದು. ಆದರೆ ನಂತರದಲ್ಲಿ ಈ ಪ್ರದೇಶಗಳಿಗೆ ಬಂದ ವೈದಿಕಶಾಹಿ ಪುರಾಣಗಳನ್ನು ಕಟ್ಟುವಾಗ ತನ್ನ ಹಿತಾಸಕ್ತಿಗೆ ತಕ್ಕಂತೆ ಮಹಿಷನನ್ನು ಅಸುರನೆಂದೂ, ಚಾಮುಂಡಿಯನ್ನು ವೈದಿಕ ದೇವತೆಯೆಂದೂ ಚಿತ್ರಿಸಿದ್ದಾರೆ. ಪುರಾತನ ವೈದಿಕ ಸಾಹಿತ್ಯದಲ್ಲಿ ಮಾತೃ ದೇವತೆಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುಷ್ಟು ಅತಿ ವಿರಳ. ಕಾಲಕ್ರಮೇಣ ಎಲ್ಲಾ ದ್ರಾವಿಡ ಮಾತೃಬುಡಕಟ್ಟುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ವೈದಿಕಶಾಗಿ ಆ ಸಮುದಾಯಗಳ ಮಾತೃದೇವತೆಗಳನ್ನು ಬ್ರಾಹ್ಮಣೀಕರಿಸಿಕೊಂಡ ದೊಡ್ಡ ಚರಿತ್ರೆಯೇ ಇದೆ. ಎಲ್ಲಮ್ಮ ರೇಣುಕೆಯಾದದ್ದು. ಮಾರಮ್ಮ ಬ್ರಾಹ್ಮಣರ ಹೆಣ್ಣಾದದ್ದು ಉದಾಹರಣೆಗಳು.

ಇಂದು ನಾವು ವಾಗ್ವಾದದಲ್ಲಿ ತೊಡಗಿರುವುದು ವೈದಿಕರು ರಚಿಸಿರುವ ಸ್ವಹಿತಾಸಕ್ತಿಯ ಪುರಾಣದ ಆಧಾರದಲ್ಲಿಯೇ ವಿನಃ ವಾಸ್ತವಿಕ ಸಾಮಾಜಿಕ ಸಂಗತಿಗಳ ಆಧಾರದಲ್ಲಿ ಅಲ್ಲ. ವೈದಿಕರ ಪಠ್ಯಗಳ ಮೂಲಕ ನಮ್ಮ ಸಾಮಾಜಿಕ ಸಂಗತಿಗಳನ್ನು ಬಿಡಿಸುವ ಕೆಲಸವಾಗಬೇಕಿದೆ. ಇದಕ್ಕೆ ಅಕ್ಷರಶಃ ಪುರಾಣ ಕತೆಗಳನ್ನು ವ್ಯಕ್ತಿಗಳಾಗಿ ನೋಡಿದರೆ ನಾವು ಯಾವುದೇ ಖಚಿತ ತೀರ್ಮಾನಕ್ಕೆ ಬರುವುದು ಅಸಾಧ್ಯವೆನಿಸುತ್ತದೆ.

ನಾನು ಮಹಾರಾಷ್ಟ್ರ-ಆಂಧ್ರಗಳ ಕಡೆಯಿಂದ ಕರ್ನಾಟಕಕ್ಕೆ ನೂರು ವರ್ಷಗಳ ಹಿಂದೆ ವಲಸೆ ಬಂದಿರುವ ಮಾಂಗ್ ಗಾರುಡಿ ಅಲೆಮಾರಿ ಸಮುದಾಯದ ಅಧ್ಯಯನ ನಡೆಸುವಾಗ ಒಂದು ಕುತೂಹಲಕಾರಿ ಸಂಗತಿ ಕಂಡೆ. ಅದೇನೆಂದರೆ ಈ ಮಾಂಗ್ ಗಾರುಡಿ ಜನರು ಎಲ್ಲೇ ಹೋಗಿ ನೆಲೆಸಲಿ ಅಲ್ಲಿ ಅವರ ತಮ್ಮ ವಿವಿಧ ಮಾತೃ ದೈವಗಳ ಜೊತೆಗೆ ಒಬ್ಬ ಗಂಡುದೈವವನ್ನೂ ಇಡುತ್ತಾರೆ. ಬಹುತೇಕ ಕಡೆಗಳಲ್ಲಿ ಈ ದೈವಗಳೆಲ್ಲ ಗುಂಡಗಿನ ಕಲ್ಲುಗಳಷ್ಠೇ. ಈ ಗಂಡು ದೈವದ ಹೆಸರು ಮಶೋಬಾ. ಯಾರು ಈ ಮಶೋಭಾ ಎಂದು ಕೊಂಚ ಕೆದಕಿದಾಗ ಮಹಾರಾಷ್ಟ್ರದಲ್ಲಿ ಮಶೋಬಾ ದೇವಸ್ಥಾನವೇ ಇರುವುದು ಕಂಡು ಬಂತು. ಮಾತ್ರವಲ್ಲ ಮಶೋಬಾನಿಗೆ ಪ್ರತಿ ವರ್ಷ ಜಾತ್ರೆಯೂ ಆಗುತ್ತದೆ. ಮಶೋಭಾ ಬೇರಾರೂ ಅಲ್ಲದೇ ಮಹಿಷ ಮಂಡಲದ ಮಹಿಷನೇ ಎಂದು ಡಿಡಿ ಕೋಸಾಂಬಿಯವರೂ ದಾಖಲಿಸಿದ್ದಾರೆ.

ಮಾಂಗ್ ಜನರು ಮಶೋಬಾ ಅಥವಾ ಮಹಿಶ ತಮ್ಮ ಮಾತೃ ದೇವತೆ ಮರಗುಬಾಯಿಯ ಸೋದರನೆಂದೇ ತಿಳಿದಿದ್ದಾರೆ. ಹಾಗಾಗಿಯೇ ಮರಗುಬಾಯಿಯ ಗುಡಿ ಇದ್ದಲ್ಲೆಲ್ಲ ಮಶೋಬಾನೂ ಇರುತ್ತಾನೆ. ಆದಿಮ ದಲಿತ ಸಮುದಾಯಗಳು ಪಶುಪಾಲನೆ ಮತ್ತು ಕೃಷಿ ಎರಡರಲ್ಲೂ ತೊಡಗಿದ್ದನ್ನು ಈ ಎರಡು ದೈವಗಳು ಸಂಕೇತಿಸುವುದಿಲ್ಲವೇ? ಇವುಗಳ ನಡುವಿನ ಕಲಹವನ್ನೇ ವೈದಿಕರು ವಕ್ರಗೊಳಿಸಿ ಪುರಾಣ ರಚಿಸಿರಬಾರದೇಕೆ? ವೈದಿಕ ಪುರಾಣಗಳು ಮಹಿಶನನ್ನು “ಅಸುರ” ಎಂದು ಕರೆದಿದ್ದರೂ ನಮ್ಮ ಬುಡಕಟ್ಟು ದಲಿತರು ಅವನನ್ನು ತಮ್ಮ ದೈವ ಎಂದು ಪೂಜಿಸುವುದು ಏನನ್ನು ಸೂಚಿಸುತ್ತದೆ?
ಇನ್ನು ಈ ಅಸುರ ಎಂಬ ಪರಿಕಲ್ಪನೆ ಅಪ್ಪಟ ವೈದಿಕ ಮೂಲದ್ದು. ಈ ಪದವೂ ವೈದಿಕರದ್ದೇ.

ಹರಪ್ಪ ನಾಗರಿಕತೆಯ ಕಾಲದಲ್ಲಿ ಈ ಸುರ- ಅಸುರ- ದೇವ- ದೇವತೆಗಳ ಕಲ್ಪನೆಗಳು ದ್ರಾವಿಡ ಜನರಿಗೆ ಇರಲಿಲ್ಲ. ಹೆಚ್ಚೆಂದರೆ ನಿಸರ್ಗದ ವಿವಿಧ ಅಂಶಗಳನ್ನು ಇಲ್ಲವೇ ಪೂರ್ವಿಕ ಪಿತೃಗಳನ್ನು ನೆನೆಯುತ್ತಿದ್ದರು. ಮಾತೆಯರೇ ಮಾನಿನಿಯರಾಗಿದ್ದರು. ಕ್ರಿ.ಪೂ 1700ರ ಸುಮಾರಿಗೆ ಋಗ್ವೇದಿ ಆರ್ಯರು ಭಾರಕ್ಕೆ ಕಾಲಿಟ್ಟ ಮೇಲೆಯೇ ಅಸುರ-ದೇವ ಮುಂತಾದ ಪರಕಲ್ಪನೆಗಳು ಬಂದಿದ್ದು.
ಇನ್ನೂ ಯೂರೇಶಿಯಾದಿಂದ ಭಾರತದ ಕಡೆಗೆ ಹೊರಡುವ ಮೊದಲೇ ಒಂದಾಗಿದ್ದ ವೈದಿಕರು ಮತ್ತು ಜೊರಾಷ್ಟ್ರಿಯನ್ನರು (ಪಾರ್ಸಿ ಧರ್ಮೀಯರು) ಒಟ್ಟಾಗಿದ್ದಾಲೇ ಈ ಆರ್ಯ- ಅಸುರ- ಇತ್ಯಾದಿ ಪದಗಳನ್ನು ಬಳಸುತ್ತಿದ್ದರು. ನಂತರವ ಇವರಿಬ್ಬರ ನಡುವೆ ದಾಯಾದಿ ಕಲಹ ಏರ್ಪಡುತ್ತದೆ. ನಂತರ ಪಾರ್ಸಿಗಳು ಪೂಜಿಸುವ ದೇವರು ಅಹುರ ಮಜ್ದಾ ಋಉಗ್ವೇದಿ ಆರ್ಯರಿಗೆ “ಅಸುರ”ನಾಗುತ್ತಾನೆ. ಹಾಗೆಯೇ ಆರ್ಯರು ಪೂಜಿಸುವ ದೇವ (ದೇಏವ) ಪಾರ್ಸಿಗಳಿಗೆ ದುಷ್ಟ ನಾಗುತ್ತಾನೆ.

ಋಗ್ವೇದವನ್ನೂ ಮತ್ತು ಪಾರ್ಸಿಗಳ ಧರ್ಮ ಗ್ರಂಥವಾದ ಜೆಂಡ್ ಅವೆಸ್ತಾ (ಕ್ರಿ.ಪೂ 2500ರ ಸುಮಾರಿಗೆ ರಚಿತವಾದದ್ದು) ಎರಡನ್ನೂ ಹೋಲಿಸಿ ಎರಡಲ್ಲಿ ದೇವ ಮತ್ತು ಅಸುರ ಎಂಬ ಪದ ಬಳಕೆ ಹೇಗೆ ಆಗಿದೆ ಎಂಬುದನ್ನು ಗಮನಿಸಿದಾಗ ಈ ಮೇಲಿನ ಸಂಗತಿ ತಿಳಿದು ಬರುತ್ತದೆ. ಬಹಳ ಮುಖ್ಯವಾಗಿ ಋಗ್ವೇದದ ಮೊದಲ ಭಾಗಗಳಳು ಮತ್ತು ಪಾರ್ಸಿಗಳ ಅವೆಸ್ತಾ ಎರಡೂ ಒಂದೇ ಭೂಗೋಳಿಕ ಪ್ರದೇಶದಲ್ಲಿ ರಚನೆಯಾಗಿರುವುದು ಎನ್ನುವುದಕ್ಕೆ ಅವುಗಳಲ್ಲಿ ಹೇರಳವಾದ ಉದಾಹರಣೆಗಳಿವೆ. ಈ ಕುರಿತು ಹೆಚ್ಚಿನ ವಿವರ ಮತ್ತು ಆಳವಾದ ವಿಶ್ಲೇಶಣೆಗೆ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಪತಿ ಕೋಲಾರ ಅವರು ಪ್ರಾಜಾವಾಣಿಗೆ ಬರೆದಿದ್ದ “ಧರ್ಮಸಂಕಟ ಸೃಷ್ಟಿಸಿರುವ ಮಾದಕ ಸೋಮ” ಎಂಬ ಲೇಖನವನ್ನು ಓದಿ. ಹಾಗೂ ಪ್ರಖ್ಯಾತ ಇತಿಹಾಸಕಾರ ರಾಜೇಶ್ ಕೊಚ್ಚಾರ್ ಅವರು ವೈದಿಕ ಸಂಸ್ಕೃತಿ ಕುರಿತು ಬರೆದ ಗ್ರಂಥದಲ್ಲಿ ಆರ್ಯ ವೈದಿಕರ ಋಗ್ವೇದ ಮತ್ತು ಪಾರ್ಸಿಗಳ ಜೆಂಡ್ ಅವೆಸ್ತಾಗಳಲ್ಲಿ ಅಡಕವಾಗಿರುವ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

(ಇಲ್ಲಿರುವ ಫೋಟೋಗಳು ಒಂದು ಮೈಸೂರಿನ ಮಹಿಷನಾದರೆ ಮಿಕ್ಕಿದ್ದು ಮಾಂಗ್ ಜನರ ಆರಾಧ್ಯ ದೈವ ಮಶೋಬ (ಮಹಿಷ)ನವು. ಫೋಟೋ ತೆಗೆದವರು ನವ್ಯ ಕಡಮೆ (Navya Kadame))

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಸಂವಿಧಾನ ರಚನೆಗೆ ಅವಕಾಶ ದೊರೆತಾಗ..!

Published

on

  • ರಘೋತ್ತಮ ಹೊ.ಬ

1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ ದಿನ ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡ ಒಂದು ನಿರ್ಣಯವನ್ನು ಮಂಡಿಸಿದರು.

ಆ ನಿರ್ಣಯದ ಮೇಲೆ ಚರ್ಚೆಯೂ ಪ್ರಾರಂಭವಾಯಿತು. ಹಾಗೆ ಚರ್ಚೆಯು ನಡೆಯುತ್ತಿರಬೇಕಾದರೆ ಡಿಸೆಂಬರ್ 16 ರಂದು ಸದಸ್ಯರಾದ ಎಂ.ಆರ್.ಜಯಕರ್ ಎಂಬುವವರು ಸಂವಿಧಾನದ ಈ ನಿರ್ಣಯದ ಮೇಲಿನ ಚರ್ಚೆಯನ್ನು ಸಭೆಯನ್ನು ಬಹಿಷ್ಕರಿಸಿದ್ದ ಮುಸ್ಲಿಂ ಲೀಗ್ ಪಾಲ್ಗೊಳ್ಳುವವರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು ಮತ್ತು ಜಯಕರ್ ರವರು ಹೀಗೆ ಹೇಳುತ್ತಲೇ ಇಡೀ ಸಂವಿಧಾನ ಸಭೆಯೇ ಗೊಂದಲಕ್ಕೆ ದೂಡಲ್ಪಟ್ಟಿತು. ಒಂದರ್ಥದಲ್ಲಿ ಕೋಲಾಹಲವುಂಟಾಗಿ ಒಟ್ಟಾರೆ ಸಂವಿಧಾನ ರಚನಾ ಪ್ರಕ್ರಿಯೆಯೇ ನೆನೆಗುದಿಗೆ ಬೀಳುತ್ತದೆಯೇನೋ ಎಂಬ ಆತಂಕ ಸದಸ್ಯರನ್ನು ಕಾಡಿತು.

ಆದರೆ ಮಾರನೇ ದಿನ ಅಂದರೆ ಡಿಸೆಂಬರ್ 17 ರಂದು ಸಭೆ ಸೇರುತ್ತಲೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ರವರು ಅಂಬೇಡ್ಕರರನ್ನು ಮಾತನಾಡಲು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ರಾಜೇಂದ್ರ ಪ್ರಸಾದ್ ರ ಈ ಆಹ್ವಾನ ಸ್ವತಃ ಅಂಬೇಡ್ಕರರಿಗೂ ಅಚ್ಚರಿ ತಂದಿತ್ತು.

ಏಕೆಂದರೆ ಸಭೆಯಲ್ಲಿ ಅವರಿಗಿಂತಲೂ ಹಿರಿಯ ಇನ್ನೂ 20 ರಿಂದ 22 ಮಂದಿ ಸರದಿಯಲ್ಲಿ ಬಹಳ ಮುಂದಿದ್ದರು. ಅವರ ನಂತರವೇ ನನಗೆ ಅವಕಾಶ ಬರುವುದೆಂದು ಅಂಬೇಡ್ಕರರು ಅಂದುಕೊಂಡಿದ್ದರು. ಆದರೆ ಹೀಗೆ ದಿಢೀರನೆ ಮಾತನಾಡಲು ಕರೆದಾಗ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪಾತ್ರವಹಿಸಲು ಆಹ್ವಾನವಿತ್ತಾಗ ಅಂಬೇಡ್ಕರರು ಜಯಕರ್ ರಿಂದ ಉಂಟಾಗಿದ್ದ ಗೊಂದಲವನ್ನು ತಮ್ಮ ಅದ್ಭುತ ವಾಗ್ಝರಿಯ ಮೂಲಕ ತಹಬಂದಿಗೆ ತಂದರು. ಒಂದು ಸ್ಪಷ್ಟ ದಿಕ್ಕಿನಲ್ಲಿ ಇಡೀ ಸಂವಿಧಾನ ರಚನೆ ಸಾಗುವಂತೆ ಮಾರ್ಗ ತೋರಿದರು. In fact ತಾವೇ ಆ ಸಂವಿಧಾನದ ಶಿಲ್ಪಿಯೂ ಆದರು!

ಯಾಕೆ ಈ ಘಟನೆಯನ್ನು ಉಲ್ಲೇಖಿಸಬೇಕಾಯಿತೆಂದರೆ ಅವಕಾಶಗಳು ನಮಗೆ ದಿಢೀರ್ ಎಂದು ದೊರೆಯಬಹುದು, ಹೇಗಾದರೂ ಸಿಗಬಹುದು. ಆದರೆ ಅದನ್ನು ಅಂಬೇಡ್ಕರರಂತೆ ಬಳಸಿಕೊಳ್ಳುವುದಿದೆಯಲ್ಲ ಅದು ಟ್ಯಾಲೆಂಟ್‌. ಈ ನಿಟ್ಟಿನಲ್ಲಿ ಅಂಬೇಡ್ಕರರ ಬದುಕಿನ ಅವಕಾಶದ ಈ ಘಟನೆ ಮತ್ತು ಅದನ್ನು ಅವರು ಉಪಯೋಗಿಸಿಕೊಂಡ ರೀತಿ ಆದರ್ಶನೀಯ, ಪ್ರತಿಯೊಬ್ಬರೂ ಅರಿಯಬೇಕಾದುದು ನೋಡಿ ಕಲಿಯಬೇಕಾದುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಯಾರು ನೀನು? ನಿನ್ನ ಜಾತಿ ಯಾವುದು? : ಡಾ. ಬಿ.ಆರ್.ಅಂಬೇಡ್ಕರ್

Published

on

  • ಡಾ.ಬಿ.ಆರ್.ಅಂಬೇಡ್ಕರ್

ಭಾರತದಲ್ಲಿ ಒಬ್ಬ ಮುಸ್ಲಿಮನನ್ನೋ, ಸಿಖ್ಖನನ್ನೋ ನೀನು ಯಾರು? ಎಂದು ಕೇಳಿನೋಡಿ. ತಕ್ಷಣವೇ ಅವರು ತಾನು ಮುಸ್ಲಿಮನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ಅಲ್ಲಿಗದು ಮುಗಿದು ಹೋಗುತ್ತದೆ. ತನಗೆ ಒಳಜಾತಿಯೊಂದಿದ್ದರೂ ಯಾವ ಮುಸಲ್ಮಾನನು ಅದನ್ನು ತಿಳಿಸುವುದಿಲ್ಲ.

ತಾನು ಮುಸ್ಲಿಮನೆಂದು ಅವನು ಹೇಳಿದರೆ, “ನೀನು ಶಿಯಾ ಅಥವಾ ಸುನ್ನಿ, ಶೇಖ್ ಅಥವಾ ಸೈಯದ್, ಖಟಕ್ ಅಥವಾ ಪಿಂಜಾರ…. ಇವುಗಳಲ್ಲಿ ಯಾವುದಕ್ಕೆ ಸೇರಿದವನು?” ಎಂದು ಯಾರೊಬ್ಬರು ಯಾವ ಮುಸಲ್ಮಾನನಿಗೂ ಕೇಳುವುದಿಲ್ಲ. ಅದೇ ರೀತಿ ಒಬ್ಬ ಸಿಖ್ಖನಿಗೆ “ಜಾಟ್, ರೋಡ್, ಮಜಬಿ, ರಾಮದಾಸಿ… ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು?” ಎಂದು ಯಾರೊಬ್ಬರೂ ಕೇಳುವುದಿಲ್ಲ.

ಆದರೆ…
ಒಬ್ಬನು ತಾನು ‘ಹಿಂದೂ’ ಧರ್ಮಕ್ಕೆ ಸೇರಿದವನು ಎಂದು ಹೇಳಿದ ಮಾತ್ರಕ್ಕೆ ಯಾವ ಹಿಂದೂವು ಸುಮ್ಮನಾಗುವುದಿಲ್ಲ. ಅವನ ಎರಡನೇ ಪ್ರಶ್ನೆ ಸಿದ್ಧಗೊಂಡಿರುತ್ತದೆ: “ನಿನ್ನ ಜಾತಿ ಯಾವುದು?” ಹಾಗೇ ನೋಡಿದರೆ ಈ ಎರಡನೇ ಪ್ರಶ್ನೆಯೇ ಹಿಂದೂ ಒಬ್ಬನ ನಿಜವಾದ ಪ್ರಶ್ನೆ. ನೀವು ‘ಹಿಂದೂ’ ಧರ್ಮಕ್ಕೆ ಸೇರಿದವರು ಎಂದಷ್ಟೇ ಹೇಳಿದರೆ ಸಾಲದು, ಜಾತಿ ಉಪಜಾತಿಗಳೆಲ್ಲ ತಿಳಿಸಲೇಬೇಕು. ಈ ಜಾತಿ ಉಪಜಾತಿಗಳೇ ಹಿಂದೂ ಧರ್ಮದಲ್ಲಿ ನಿಮ್ಮ ಸ್ಥಾನ ಏನು ಎಂಬುದನ್ನು ನಿರ್ಧರಿಸುವುದು.

ಮುಸ್ಲಿಮರಲ್ಲಿಲ್ಲದ, ಸಿಖ್ಖರಲ್ಲಿಲ್ಲದ, ಕ್ರೈಸ್ತರಲ್ಲಿಲ್ಲದ ಈ ಜಾತಿ ಹಿಂದೂಗಳಿಗೇಕೆ ಇಷ್ಟು ಮುಖ್ಯವಾಯಿತು?

(ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-1, ಭಾರತದಲ್ಲಿ ಜಾತಿಗಳು, ಜಾತಿ ಪದ್ಧತಿಯ ಒಂದು ಸಮರ್ಥನೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ : ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ‘ದೇವಿಂದರ್ ಸಿಂಗ್’ ಕಳಿಸಿದ ಆ ವ್ಯಕ್ತಿಯೂ ಇದ್ದ..!

Published

on

Kashmir DSP Devindar singh
  • ಹರ್ಷಕುಮಾರ ಕುಗ್ವೆ

2001 ರಲ್ಲಿ ಸಂಸತ್ ಭವನದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಒಬ್ಬ ಶನಿವಾರ ಜಮ್ಮು ಪೊಲೀಸರಿಗೆ ಇನ್ನೂ ಮೂವರು ಹಿಜ್ಬುಲ್ ಭಯೋತ್ಪಾದಕರ ಜೊತೆಯಲ್ಲಿ ಸಿಕ್ಕಿಬಿದ್ದಿದ್ದಾ‌ನೆ.‌ ಅವನ ಹೆಸರು ದೇವಿಂದರ್ ಸಿಂಗ್. ಈತ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಹಾಲಿ DYSPಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ.

ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೆ ಏರಿಸಲಾಗಿರುವ ಅಫ್ಜಲ್ ಗುರು 2004 ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಕುರಿತು ವಿವರವಾಗಿ ತಿಳಿಸಿದ್ದ. ಅಫ್ಜಲ್ ಗುರು ಪ್ರಕಾರ 2001ರಲ್ಲಿ ಸಂಸತ್ತಿನ ಮೇಲೆ ನಡೆಸಿದ ದಾಳಿಗೆ ಮೊದಲು ಅಫ್ಜಲ್ ಗುರುವನ್ನು ಬಂಧಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿಲಾಗಿತ್ತು.

ಹಾಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಆಫೀಸರುಗಳಲ್ಲಿ ದೇವಿಂದರ್ ಸಿಂಗ್ ಕೂಡಾ ಇದ್ದ. ಮಾತ್ರವಲ್ಲ ಅಫ್ಜಲ್ ಗುರುವನ್ನು ಬಿಡುವುದಾದರೆ 10 ಲಕ್ಷ ರೂಪಾಯಿ ಕೊಡಬೇಕು ಎಂದು ತಾಕೀತು ಮಾಡಿದ್ದರು. ತನ್ನ ಹೆಂಡತಿಯ ಬಂಗಾರವನ್ನು ಮಾರಿ ಅಫ್ಜಲ್ ಗುರು 8 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದ. ಕೆಲವೇ ದಿನಗಳ ಹಿಂದೆ ಕೊಂಡಿದ್ದ 24 ಸಾವಿರ ರೂಪಾಯಿಯ ಬೈಕನ್ನುವಶಪಡಿಸಿಕೊಂಡಿದ್ದರು.

ಕೊನೆಗೆ ಮತ್ತೊಬ್ಬ ಪೊಲೀಸ್ ಅಫೀಸರನ ಬಾವನಾದ ಅಲ್ತಾಫ್ ಹುಸೇನನ ಮಕ್ಕಳಿಗೆ ಟ್ಯೂಶನ್ ಹೇಳಿಕೊಡುವಂತೆ ಅಫ್ಜಲ್ ಗುರುವಿಗೆ ಹೇಳಲಾಗಿತ್ತು. ಕೊನೆಗೆ 2001 ರಲ್ಲಿ ಅದೇ ಅಲ್ತಾಫನೇ ಅಫ್ಜಲ್ ಗುರುವನ್ನು ದೇವಿಂದರ್ ಸಿಂಗ್ ಬಳಿಗೆ ಕೊಂಡೊಯ್ದಿದ್ದ. ಅಗ ದೇವಿಂದರ್ ಸಿಂಗ್ ಅಫ್ಜಲ್ ಗುರುವಿಗೆ ತನಗೆ ಒಂದು ಸಣ್ಣ ಸಹಾಯ ಮಾಡಲು ಕೇಳಿಕೊಂಡ.

ಒಬ್ಬ ವ್ಯಕ್ತಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವನಿಗೆ ಕೆಲ ದಿನಗಳ ಕಾಲ ಊಟ, ವಸತಿ ವ್ಯವಸ್ಥೆ ಮಾಡಲು ಹೇಳಿದ್ದ. ಅಫ್ಜಲ್ ಗುರು ಅದೇ ರೀತಿ ಮಾಡಿದ್ದ. ಆದರೆ ಆತ ಯಾರು, ದೇವಿಂದರ್ ಸಿಂಗ್ ಅವನನ್ನು ಯಾಕೆ ತನ್ನ ಬಳಿ ಬಿಟ್ಟಿದ್ದಾನೆ ಎಂದು ಅಫ್ಜಲ್ ಗುರುಗೆ ಗೊತ್ತಿರಲಿಲ್ಲ. ಅವನಾಡುವ ಭಾಷೆ ನೋಡಿದಾಗ ಅವನು ಕಾಶ್ಮೀರಿಯೂ ಆಗಿರಲಿಲ್ಲ.‌ 2001 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ ನಡೆದು ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ದೇವಿಂದರ್ ಸಿಂಗ್ ಕಳಿಸಿದ ಆ ವ್ಯಕ್ತಿಯೂ ಇದ್ದ..!

ಅಫ್ಜಲ್ ಗುರು ಹೇಳಿದ್ದ ವಿಷಯಗಳ ಕುರಿತಾಗಿ 2006 ರಲ್ಲಿ ದೇವಿಂದರ್ ಸಿಂಗ್ ನನ್ನು ಪರ್ವೆಝ್ ಬುಕಾರಿ ಎಂಬ ಪತ್ರಕರ್ತ ಪ್ರಶ್ನಿಸಿದಾಗ ದೇವಿಂದರ್ ಸಿಂಗ್ ತಾನು ಅಫ್ಜಲ್ ಗುರುನನ್ನು ಹಿಂಸಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದ.

ಈಗ ಅದೇ ದೇವಿಂದರ್ ಸಿಂಗ್ ಹಿಜ್ಬುಲ್ ಮುಜಾಹಿದೀನ್ ನ ಮೂವರು ಉಗ್ರರನ್ನು ತನ್ನದೇ ಪೊಲೀಸ್ ಇಲಾಖೆಯ ಕಣ್ತಪ್ಪಿಸಿ ವೇಗವಾಗಿ ಕಾರಿನಲ್ಲಿ‌ ಸಾಗಿಸುತ್ತಿರುವಾಗ ಡೆಪ್ಯುಟಿ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಜನರಲ್ ಅತುಲ್ ಗೋಯೆಲ್ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.‌ ಉಗ್ರರು ಹೋಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ. ಉಗ್ರರನ್ನು ಸಾಗಿಸುತ್ತಿದ್ದ DySP ದೇವಿಂದರ್ ಸಿಂಗ್ ನನ್ನು ನೋಡಿದ್ದೇ ಅತುಲ್ ಗೋಯೆಲ್ ಅವನ ಕಪಾಳಕ್ಕೆ ಎರಡು ಬಿಟ್ಟಿದ್ದಾರೆ…‌

ಈಗ RAW, CIBಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೊನ್ನೆ ಭಾನುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪೊಲೀಸ್ ಅಧಿಕಾರಿಗಳು ದೇವಿಂದರ್ ಸಿಂಗ್ ನನ್ನು ಉಗ್ರರಲ್ಲಿ ಒಬ್ಬ ಎಂದು ಪರಿಗಣಿಸಿಯೇ ತನಿಖೆ ನಡೆಸಲಾಗುವುದು ಎಂದಿದ್ದಾರೆ.

1990ರ ದಶಕದಿಂದ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಇರುವ ದೇವಿಂದರ್ ಸಿಂಗ್ ಗೂ ಸಂಸತ್ ಮೇಲಿನ ದಾಳಿಗೂ ಏನು ಸಂಬಂಧ?

ಚುನಾವಣಾ ಸಮಯದಲ್ಲಿ ನಡೆದ ಪುಲ್ವಾಮಾ ದಾಳಿಗೂ ದೇವಿಂದರ್ ಸಿಂಗ್‌ಗೂ ಏನಾದರೂ ಸಂಬಂಧ ಇತ್ತೇ?

ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡ ದೆಹಲಿಯ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿಯವರನ್ನು ಸಂಸತ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿ ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ಆದರೆ ಕೊನೆಗೆ ನ್ಯಾಯಾಲಯದ ವಿಚಾರಣೆ ನಂತರದಲ್ಲಿ ಗಿಲಾನಿಯವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದರು.

ಅವರು ಅಫ್ಜಲ್ ಗುರುವಿನ ಮುಗ್ಧತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುನನ್ನು ಸಿಕ್ಕಿಸಲಾಗಿದೆ ಎಂದು ಗಿಲಾನಿ ಹೇಳಿದ್ದರು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಗಿಲಾನಿಯವರ ಮಾತು ಮಹತ್ವ ಪಡೆಯುತ್ತಿದೆ.

2013 ರಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡುವಾಗ ಸುಪ್ರೀಂ ಕೋರ್ಟು “Public Conscience” ತೃಪ್ತಿಪಡಿಸುವ ದೃಷ್ಟಿಯಿಂದ ಅಫ್ಜಲ್ ಗುರು ಗೆ ಮರಣ ದಂಡನೆ ನೀಡಬೇಕು ಎಂದು ತೀರ್ಪು ನೀಡಿತ್ತೇ ವಿನಃ ತನಿಖಾ ಸಂಸ್ಥೆಗಳು ಸೂಕ್ತ ಸಾಕ್ಷಾಧಾರ ನೀಡಲು ವಿಫಲವಾಗಿದ್ದವು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಅಫ್ಜಲ್ ಗುರು ಎಸಗಿದ್ದ ಅಪರಾಧವನ್ನು ಸಾಬೀತು ಮಾಡುವ ಸೂಕ್ತ ಸಾಕ್ಷ್ಯ ದೊರೆಯಬಹುದು. ಸಿಗಲಿ ಎಂದು ಆಶಿಸೋಣ.

ದೇವಿಂದರ್ ಸಿಂಗ್ ನಂತಹ ಹಿರಿಯ ಪೊಲೀಸ್ ಅಧಿಕಾರಿಯೇ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಕೈಗೂಡಿಸಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿರುವಾಗ ನಮ್ಮ ದೇಶ ಎಷ್ಟು ಸುರಕ್ಷಿತವಾಗಿರಲು ಸಾಧ್ಯ?

ಗಡಿಯಲ್ಲಿ ನಿಂತು ಪ್ರಾಣ ಕೊಡುತ್ತಿರುವ ನಮ್ಮ ಸಹೋದರರಿಗೆ ದ್ರೋಹ ಎಸಗುತ್ತಿರುವ ಇಂತಹ ಅಧಿಕಾರಿಗಳ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಇಂಚಿಂಚೂ ತನಿಖೆಯಾಗಲಿ… ಸತ್ಯ ಹೊರಬರಲಿ.

ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ

https://www.indiatimes.com/amp/news/india/what-is-parliament-attack-convict-afzal-gurus-connection-with-kashmir-dsp-davinder-singh-504265.html

https://thewire.in/security/ajit-doval-davinder-singh-terrorism/amp/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending