Connect with us

ಬಹಿರಂಗ

ಅಂಬೇಡ್ಕರ್ ಬರೆಹಗಳು ಮತ್ತು ವೈಚಾರಿಕೆ ಪ್ರಜ್ಞೆ

Published

on

ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಯಾರನ್ನು ಓದದಿದ್ದರೂ ನಡೆದೀತು ಆದರೆ ಅಂಬೇಡ್ಕರ್ ಅವರನ್ನು ಓದದಿದ್ದರೆ ನಡೆಯುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಈ ದೇಶದ ಇತಿಹಾಸ, ಸಮಾಜ, ದೇವರು-ಧರ್ಮ, ರಾಜಕಾರಣ, ತತ್ವಶಾಸ್ತ್ರ, ಆರ್ಥಿಕತೆ, ಹೀಗೆ ಬಹುಮುಖ್ಯವಾದ ಎಲ್ಲ ಮಗ್ಗಲುಗಳನ್ನು ಆಳವಾಗಿ ಅಧ್ಯಯನಮಾಡಿ ಕರಾರುವಕ್ಕಾಗಿ ತಮ್ಮ ವಿಚಾರಗಳನ್ನು ಪ್ರಬುದ್ಧವಾಗಿ ಮಂಡಿಸಿದ ಅಂಬೇಡ್ಕರ್ ಅವರಂಥ ಮತ್ತೊಬ್ಬ ವಿದ್ವಾಂಸ ಬಹುಶಃ ಭಾರತದಲ್ಲಿ ನಮಗೆ ದೊರೆಯಲಾರನೇನೊ.

ಜಾತಿಯ ಕಾರಣಕ್ಕೆ ಎಲ್ಲ ಬಗೆಯ ಸಾಮಾಜಿಕ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತನಾಗಿ, ಪಡಬಾರದ ಕಷ್ಟಗಳನ್ನೆಲ್ಲ ಪಟ್ಟು, ಎಲ್ಲ ಬಗೆಯ ದೌರ್ಜನ್ಯಗಳನ್ನು ಎದುರಿಸಿ ಬೆಳೆದ ದಲಿತ ಹುಡುಗನೊಬ್ಬ ಆ ಕಾಲದ ಎಲ್ಲ ಸೌಲಭ್ಯಗಳನ್ನು ಜಾತಿಯ ಕಾರಣದಿಂದಲೇ ಪಡೆಯುತ್ತಿದ್ದ ಯಾವೊಬ್ಬ ಸವರ್ಣಿಯನೂ ಬೆಳೆಯಲಾಗದಷ್ಟು ಎತ್ತರಕ್ಕೆ ಬೆಳೆದದ್ದು ಸಣ್ಣ ಸಂಗತಿಯೇನಲ್ಲ. ಆಧುನಿಕ ವಿದ್ಯಾಭ್ಯಾಸದ ಅತ್ಯುನ್ನತ ಪದವಿಗಳಾದ ಪಿಎಚ್.ಡಿ, ಡಿ.ಎಸ್ಸಿ.ಯಂಥವುಗಳನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ತಮ್ಮ ನಿಷ್ಠೆ, ಶ್ರದ್ಧೆ, ಪರಿಶ್ರಮಗಳಿಂದ ಕಷ್ಟಪಟ್ಟು, ಆಳವಾದ ಅಧ್ಯಯನ ಮತ್ತು ಮೊನಚು ವಿಶ್ಲೇಷಣೆಗಳಿಂದ ಗಳಿಸಿಕೊಂಡ ಅಪಾರವಾದ ಜ್ಞಾನವನ್ನು ಸಮಾಜೋದ್ಧಾರಕ್ಕಾಗಿ ಅವರಷ್ಟು ಬಳಸಿಕೊಂಡವರೂ ವಿರಳ. ಅಂಬೇಡ್ಕರ್ ಅವರ ವಿದ್ವತ್ತನ್ನು ಜಗತ್ತು ಇಂದು ಸರಿಯಾಗಿಯೇ ಗುರುತಿಸಿ ದೊಡ್ಡಮಟ್ಟದಲ್ಲಿ ಗೌರವಿಸುತ್ತಿದೆ. ಅವರ ಜನ್ಮದಿನವನ್ನು ವಿಶ್ವಸಂಸ್ಥೆ ‘ಜಾಗತಿಕ ಜ್ಞಾನದಿನ’ವನ್ನಾಗಿ ಘೋಷಿಸಿರುವುದು ಇದರ ಒಂದು ಉದಾಹರಣೆ ಮಾತ್ರ.

ಇಂತಹ ಮಹಾನ್ ಮೇಧಾವಿಗೆ ಭಾರತೀಯರಾದ ನಾವು ಏನು ಮಾಡಿದ್ದೇವೆ ಎಂಬುದನ್ನು ಕೇಳಿಕೊಂಡರೆ ಒಂದಿಷ್ಟು ನಾಚಿಕೆಯಾದೀತು. ಏಕೆಂದರೆ ಈಗಲೂ ಭಾರತದಲ್ಲಿ ಬಹುಪಾಲು ಜನರಿಗೆ ‘ಅಂಬೇಡ್ಕರ್’ ಅಂದ ತಕ್ಷಣಕ್ಕೆ ನೆನಪಿಗೆ ಬರುವುದು ಅವರ ‘ಜಾತಿ’ಯೇ ಹೊರತು ‘ಜ್ಣಾನ’ವಲ್ಲ! ಒಂದು ರಾಜ್ಯದ ಸೇನಾಕಾರ್ಯದರ್ಶಿ ಅಂತಹ ದೊಡ್ಡ ಹುದ್ದೆಯಲ್ಲಿದ್ದರೂ ದಲಿತನೆಂಬ ಕಾರಣಕ್ಕೆ ಅವರಿಗೆ ವಾಸಿಸಲು ಒಂದು ಬಾಡಿಗೆ ಮನೆ ನಮ್ಮ ದೇಶದಲ್ಲಿ ಸಿಗಲಿಲ್ಲ! ಅವರೇ ಬರೆದ ಸಂವಿಧಾನದ ಪ್ರಕಾರವೆ ನಡೆದ ಮೊದಲ ಚುನಾವಣೆಯಲ್ಲಿಯೇ ಅವರನ್ನು ಸೋಲಿಸಿದ ‘ಭವ್ಯಭಾರತ ನಮ್ಮದು!

ಅಂಬೇಡ್ಕರ್ ಅಂದರೆ ಏನು ಅವರ ವಿದ್ವತ್ತು ಯಾವ ಮಟ್ಟದ್ದು ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಏನು ಎಂಬುದು ಇಂದಿಗೂ ನಮ್ಮಲ್ಲಿ ಬಹುಜನಕ್ಕೆ ಗೊತ್ತಿಲ್ಲ. ಅವರನ್ನು ಸದಾ ತೆಗಳುವ ವರ್ಗವೊಂದುಕಡೆ ಇದ್ದರೆ ಅದಕ್ಕೆ ವಿರುದ್ಧವಾಗಿ ಅವರನ್ನು ಆರಾಧಿಸುವ ವರ್ಗವೊಂದು ಕಾಲದ ಅಗತ್ಯವಾಗಿ ಬೆಳೆದುಬಂತು. ಅವರನ್ನು ವಿರೋಧಿಸುವವರಿರಲಿ, ಆರಾಧಿಸುವವರಲ್ಲಿ ಕೂಡ ಬಹಳ ಜನ ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಳ್ಳಲಿಲ್ಲ ಎಂಬುದು ವಾಸ್ತವ ಸಂಗತಿ.

ಇದಕ್ಕೆ ಅವರ ಬರಹಗಳ ಅಲಭ್ಯತೆಯೂ ಒಂದು ದೊಡ್ಡ ಕಾರಣವಾಗಿತ್ತು. ಅಂಬೇಡ್ಕರ್ ತೀರಿಕೊಂಡ ಮೇಲೆ ಬಹಳಷ್ಟು ದೊಡ್ಡ ಲೇಖಕರ ಬೌದ್ಧಿಕ ಆಸ್ತಿಗಳಂತೆ ಅಂಬೇಡ್ಕರ್ ಅವರ ಬರೆಹಗಳು ಕೂಡ ಕುಟುಂಬದ ಆಸ್ತಿವಿವಾದಕ್ಕೆ ತುತ್ತಾದವು. ಈ ಕೊರತೆಯನ್ನು ನೀಗಿಸುವ ಪ್ರಯತ್ನವೊಂದು ಮೊಟ್ಟಮೊದಲು ಮೂವತ್ತು ವರ್ಷಗಳ ಹಿಂದೆ ಆರಂಭವಾಯಿತು. ಆದರೆ ಒಂದು ರಾಜ್ಯ ಸರ್ಕಾರದ ಸತತ ಮತ್ತು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೊನೆಗೂ ಅಂಬೇಡ್ಕರ್ ಅವರ ಬಹುಮುಖ್ಯ ಬರಹಗಳು ಸಾರ್ವಜನಿಕರಿಗೆ ದೊರೆಯುವಂತಾಯಿತು.

ಅಂತಹ ಮಹತ್ವದ ಕೆಲಸವೊಂದನ್ನು ಸುಮಾರು ನಲವತ್ತೈದು ವರ್ಷಗಳ ಹಿಂದೆ ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದದ್ದು ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ.
ಬಹುತೇಕ ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಅಲ್ಲಲ್ಲಿ ಬಿಡಿಬಿಡಿಯಾಗಿದ್ದ ಮತ್ತು ಅಳಿವಿನ ಅಂಚಿಗೆ ಸಾಗುತ್ತಿದ್ದ ಅವರ ಬರೆಹ ಮತ್ತು ಭಾಷಣಗಳನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಯೋಜನೆಯೊಂದನ್ನು1976ರಲ್ಲಿ ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಮ್ಮಿಕೊಂಡು ಅದಕ್ಕೆ ಸಂಬಂಧಿಸಿದ ವಾರಸುದಾರರಿಂದ ಅನುಮತಿ ಪಡೆದುಕೊಂಡು ಕಾರ್ಯಪ್ರವೃತ್ತವಾದದ್ದು ಭಾರತೀಯ ವೈಚಾರಿಕ ಸಾಹಿತ್ಯದ ಚರಿತ್ರೆಯಲ್ಲಿ ಒಂದು ಮಹತ್ವದ ಹೆಜ್ಜೆ ಎನ್ನಬೇಕು.

ಈ ಸಮಿತಿಯ ಪ್ರಾಮಾಣಿಕ ಪರಿಶ್ರಮದಿಂದಾಗಿ 1979ರಲ್ಲಿ ಅಂಬೇಡ್ಕರ್ ಅವರ ಬರೆಹ-ಭಾಷಣಗಳ ಮೊದಲ ಸಂಪುಟ ಹೊರಬರುವ ಮೂಲಕ ಈ ಯೋಜನೆಗೆ ಚಾಲನೆ ಸಿಕ್ಕು 1982ಮತ್ತು 1987ರಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸಂಪುಟಗಳು ಯಾವುದೇ ಸಮಸ್ಯೆಗಳು ಇಲ್ಲದೆ ಬಿಡುಗಡೆಯಾದವಾದರೂ ೧೯೮೭ರಲ್ಲಿಯೇ ಬಿಡುಗಡೆಯಾದ ನಾಲ್ಕನೇ ಸಂಪುಟ ವಿವಾದದ ಬಿರುಗಾಳಿಯನ್ನೆಬ್ಬಿಸಿತು!

‘The Riddles of Hinduism’ (ಈಗ ‘ಹಿಂದೂ ಧರ್ಮದ ಒಗಟುಗಳು’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಲಭ್ಯವಿರುವ) ಎಂಬ ಅವರ ಅತ್ಯಂತ ಮಹತ್ವದ ಪುಸ್ತಕವನ್ನು ಆ ಸಂಪುಟ ಒಳಗೊಂಡಿದ್ದು ಕೆಲವು ಸ್ವಯಂ ಘೋಷಿತ ಧಾರ್ಮಿಕ ನಾಯಕರು ಅನಗತ್ಯ ವಿವಾದವೆಬ್ಬಿಸಿದ್ದು ಈ ಗ್ರಂಥಗಳ ಹೊರಬರುವಿಕೆಗೆ ತಾತ್ಕಾಲಿಕ ತಡೆಯೊಡ್ಡಿತು. ಅಂಬೇಡ್ಕರ್ ಅವರ ಆ ಪುಸ್ತಕದಲ್ಲಿ ‘ಹಿಂದೂ ಧರ್ಮದ ಒಗಟುಗಳು’ ಎಂದು ಕರೆದು ಸಮಂಜಸ ವಿವರಣೆಗೆ ಆಹ್ವಾನ ನೀಡಲಾಗಿದ್ದ ಒಟ್ಟು ಇಪ್ಪತ್ನಾಲ್ಕು ಸವಾಲುಗಳಿದ್ದವು. ಇವುಗಳಲ್ಲಿ ಹದಿನೈದು ಒಗಟುಗಳು ಧಾರ್ಮಿಕ ವಿಷಯಕ್ಕೆ, ಐದು ಒಗಟುಗಳು ಸಾಮಾಜಿಕ ವಿಷಯಯಕ್ಕೆ ಸೇರಿದ್ದರೆ ಉಳಿದ ನಾಲ್ಕು ಒಗಟುಗಳು ರಾಜಕೀಯಕ್ಕೆ ಸಂಬಂಧಿಸಿದ್ದವು.

ಹಿಂದೂ ಧರ್ಮದ ಆಧಾರ ಗ್ರಂಥಗಳೆಂದು ಕರೆಯಲಾಗುವ, ವೇದಗಳು, ಉಪನ್ನಿಷತ್ತುಗಳು, ಪುರಾಣಗಳು, ಹಾಗೇ ಮನುವಿನ ಸಿದ್ಧಾಂತ ಇಂಥವುಗಳನ್ನು ಅಂಬೇಡ್ಕರ್ ಅವರು ಎಷ್ಟೊಂದು ಆಳವಾಗಿ ಅಧ್ಯಯನ ಮಾಡಿದ್ದರು ಎಂಬುದು ಅವರು ಸಿದ್ಧಪಡಿಸಿದ ಒಗಟುಗಳನ್ನು ನೋಡಿದರೆ ಯಾರಿಗಾದರೂ ಗೊತ್ತಾಗುತ್ತದೆ. ಅವರ ಒಗಟುಗಳನ್ನು ಬಿಡಿಸಬೇಕಾದರೆ ಅವರಿಗಿಂತ ಹೆಚ್ಚು ಅಲ್ಲದಿದ್ದರೂ ಅವರಷ್ಟಾದರೂ ಅವನ್ನು ಓದಿಕೊಳ್ಳಬೇಕಾಗುತ್ತದೆ.

ಆದರೆ ಅವರ ಸಂಖ್ಯೆ ಎಷ್ಟಿದೆ ನಮ್ಮಲ್ಲಿ? ಅವರು ಅಂದು ಕೇಳಿರುವ ಈ ಒಗಟುಗಳನ್ನು ಇದುವರೆಗೂ ಯಾವ ಮಹಾತ್ಮನಿಗೂ ಉತ್ತರಿಸಲು ಆಗಿಲ್ಲ! ಹೀಗಿರುವಾಗ ಆ ಕಾಲದಲ್ಲಿ ಅವರ ಸವಾಲುಗಳು ಕೆಲವರನ್ನು ಕೆರಳಿಸಿದ್ದರಲ್ಲಿ ಆಶ್ಚರ್ಯವಿರಲಾರದು! ಅಂಬೇಡ್ಕರ್ ಹೇಳುವುದನ್ನು ಒಪ್ಪಿಕೊಳ್ಳಲೂ ಅಗದೇ ಅವರ ವಾದವನ್ನು ಸಮಂಜಸ ಪ್ರತಿ ವಾದಗಳೊಂದಿಗೆ ಅಲ್ಲಗಳೆಯಲೂ ಆಗದೇ ಹೋದಾಗ ಅವರಿಗೆಲ್ಲ ಸಿಟ್ಟುಮಾಡಿಕೊಂಡು ವಿವಾದಮಾಡುವುದನ್ನು ಬಿಟ್ಟು ಇನ್ಯಾವ ಆಯ್ಕೆಗಳಿದ್ದವು?

ಆದರೆ ಒಳ್ಳೆಯ ಪುಸ್ತಕವೊಂದರ ಪ್ರಕಟಣೆ ಮತ್ತು ಪ್ರಚಾರವನ್ನು ಕೆಟ್ಟ ಉದ್ದೇಶದಿಂದ ತಡೆಯುವ ಪ್ರಯತ್ನಗಳು ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಂಡರೂ ಅಂತಿಮವಾಗಿ ಅವು ಕಾಣುವುದು ಸೋಲನ್ನೇ ಹೊರತು ಗೆಲುವನ್ನಲ್ಲ. ಇಲ್ಲಿಯೂ ಆದದ್ದು ಅದೇ. ಅಂಬೇಡ್ಕರ್ ಅವರ ಆಳವಾದ ಅಧ್ಯಯನ ತರ್ಕಬದ್ಧವಾದ ವಾದಗಳ ಎದುರು ಈ ಜೊಳ್ಳು ತರಲೆಗಳೆಲ್ಲ ತರಗೆಲೆಗಳಂತೆ ಹಾರಿಹೋಗಿ ಕೊನೆಗೂ ಆ ಸಂಪುಟವೂ ಸೇರಿದಂತೆ ಒಟ್ಟು ಹದಿನಾಲ್ಕು ಸಂಪುಟಗಳು ಹೊರಬಂದು ಅಂಬೇಡ್ಕರ್ ಅಂದರೆ ಏನು ಎಂಬುದು ಕೊನೆಗೂ ಜಗತ್ತಿಗೆ ಗೊತ್ತಾಗಿಬಿಟ್ಟಿತು!

ಮಹಾರಾಷ್ಟ್ರ ಸರ್ಕಾರ ಹೊರತಂದ ಅಂಬೇಡ್ಕರ್ ಅವರ ಈ ಸಮಗ್ರ ಸಾಹಿತ್ಯ ಪ್ರಕಟವಾದದ್ದು ಇಂಗ್ಲಿಷಿನಲ್ಲಿ. ಈ ‘ಇಂಗ್ಲಿಷ್ ಕಾಲುವೆ’ಯ ಮೂಲಕ ಅಂಬೇಡ್ಕರ್ ಸಾಹಿತ್ಯ ಜಗತ್ತಿನ ಎಲ್ಲಭಾಷೆಗಳ, ದೇಶಗಳ ಜನರನ್ನು ತಲುಪಲು ಸಾಧ್ಯವಾಯಿತು ಎಂಬುದು ಮಹತ್ವದ ಸಂಗತಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಷ್ಟಕ್ಕೆ ನಿಂತರೆ ಅದು ಸಾಕಾಗುತ್ತಿರಲಿಲ್ಲ. ಏಕೆಂದರೆ ಅದರೊಂದಿಗೆ ಇಂಗ್ಲಿಷ್ ಬಲ್ಲವರು ಮಾತ್ರ ಅವನ್ನು ಓದಬಹುದಾದ ಮಿತಿಯೊಂದು ನಿರ್ಮಾಣವಾಯಿತು. ಈ ಮಿತಿಯನ್ನು ಮೀರಬೇಕಾದ ಏಕೈಕ ದಾರಿಯೆಂದರೆ ಅವರ ಈ ಎಲ್ಲ ಬರೆಹ ಮತ್ತು ಭಾಷಣಗಳ ಸಂಪುಟಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವುದು. ಈ ಅವಶ್ಯಕತೆಯನ್ನು ಮೊಟ್ಟಮೊದಲು ಮನಗಂಡು ಕಾರ್ಯಪ್ರವೃತ್ತವಾದ ರಾಜ್ಯವೆಂದರೆ ಕರ್ನಾಟಕ ಎಂಬುದು ನಾವೆಲ್ಲ ಹೆಮ್ಮೆಪಡುವ ಸಂಗತಿ.

ಮಹಾರಾಷ್ಟ್ರ ಸರ್ಕಾರ ಈ ಸಂಪುಟ ತರುತ್ತಿರುವಾಗಲೇ, ಅದರಲ್ಲೂ ಈ ಯೋಜನೆಯ ನಾಲ್ಕನೇ ಸಂಪುಟ ವಿವಾದಕ್ಕೆ ಗುರಿಯಾದ ದಿನಗಳಲ್ಲಿಯೆ ಅಂದರೆ ೧೯೮೮ ರಲ್ಲಿಯೇ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರ ಅಂಬೇಡ್ಕರ್ ಅವರ ಬಹು ಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಕನ್ನಡಕ್ಕೆ ತರಲು ಮಹತ್ವದ ನಿರ್ಣಯವೊಂದನ್ನು ಕೈಗೊಂಡಿತು. ಇದಕ್ಕಾಗಿ ಹಿರಿಯ ವಿದ್ವಾಂಸ ಡಾ.ಎ.ಎಂ. ರಾಜಶೇಖರಯ್ಯ, ಕವಿ ಡಾ.ಸಿದ್ಧಲಿಂಗಯ್ಯ ಮತ್ತು ಚಿಂತಕ ದೇವನೂರು ಮಹಾದೇವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನೊಳಗೊಂಡ ನಾಲ್ಕುಜನರ ಸಮಿತಿಯೊಂದು ರಚನೆಯಾಯಿತು.

ಈ ಸಮಿತಿ ಮಾಡಿದ ಮಹತ್ವದ ಕೆಲಸವೆಂದರೆ ಅಂಬೇಡ್ಕರ್ ಅವರ ಸುಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಮಾತ್ರ ಅನುವಾದ ಮಾಡದೇ ಮಹಾರಾಷ್ಟ್ರ ಸರ್ಕಾರದ ಯೋಜನೆಯಂತೆ ಪ್ರಕಟವಾಗುತ್ತಿರುವ ಎಲ್ಲ ಸಂಪುಟಗಳನ್ನೂ ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡು ಭಾಷಾಂತರಿಸಬೇಕೆಂದು ನಿರ್ಣಯ ಮಾಡಿದ್ದು. ಈ ಸಮಿತಿಯ ನಿರ್ಣಯವನ್ನು ಗೌರವಿಸಿದ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಲೆ ಅನುಮತಿ ಕೋರಿ ಬರೆದ ಪತ್ರಕ್ಕೆ ಅಲ್ಲಿನ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿ ೧೯೮೯ರಲ್ಲಿ ಅನುಮತಿ ನೀಡಿದ್ದು ಕನ್ನಡದಲ್ಲಿ ಬಾಬಾಸಾಹೇಬರ ಕೃತಿಗಳು ವ್ಯವಸ್ಥಿತವಾಗಿ ಭಾಷಾಂತರವಾಗಿ ಬೆಳಕುಕಾಣಲು ಕಾರಣವಾಯಿತು ಎನ್ನಬೇಕು.

ಹೀಗೆ ಮೂವತ್ತು ವರ್ಷಗಳ ಹಿಂದೆ ಆರಂಭವಾದ ಈ ಅನುವಾದ ಕಾರ್ಯದಲ್ಲಿ ಕನ್ನಡದ ಅನೇಕ ವಿದ್ವಾಂಸರು ಭಾಗವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದರು. ಅಂಬೇಡ್ಕರ್ ಅವರ ಇಂಗ್ಲಿಷ್ ಭಾಷೆಯ ಪ್ರೌಢಿಮೆ, ಮತ್ತು ಕ್ಲಿಷ್ಟತೆಗಳನ್ನು ನಿವಾರಿಸಿಕೊಳ್ಳಲು, ಅನುವಾದಿತ ಕೃತಿಗಳ ಪರಿಶೀಲನೆಗಾಗಿ ಡಾ. ಆರ್. ಸಿ. ಹಿರೇಮಠ, ಡಾ. ದೇ. ಜವರೇಗೌಡ ಅವರಂಥ ಹಿರಿಯರ ನೆರವನ್ನೂ ಪಡೆಯಲಾಯಿತು. ಆರಂಭಿಕ ಹಂತದಲ್ಲಿ ಈ ಅನುವಾದಕರು, ಸಂಪಾದಕರು, ಪರೀಶೀಲಕರು ಮಾಡಿದ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾದದ್ದು.

ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಆರಂಭಿಸಿದ ಈ ಯೋಜನೆಗೆ ಮುಂದೆ ಬಂದ ಸರ್ಕಾರಗಳೂ ಸಕಾರಾತ್ಮಕ ಬೆಂಬಲ ನೀಡಿದ್ದರಿಂದ, ವೀರಪ್ಪ ಮೊಯಿಲಿ, ಎಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್‌, ಎಸ್.ಎಂ. ಕೃಷ್ಣ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗಿನ ಅವಧಿಯಲ್ಲಿ ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯದ ಬಹಳಷ್ಟು ಸಂಪುಟಗಳು ಹೊಸದಾಗಿ ಮತ್ತು ಮರುಮುದ್ರಣವಾಗಿ ಕಡಿಮೆ ಬೆಲೆಯಲ್ಲಿ ಹೊರಬಂದು ಕನ್ನಡ ಓದುಗರಿಗೆ ದೊರೆಯಲು ಸಾಧ್ಯವಾಯಿತು.

ಈ ಸಂಪುಟಗಳು ಕನ್ನಡ ಓದುಗರನ್ನು ವೈಚಾರಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಎತ್ತರಿಸುವಲ್ಲಿ ಸಫಲವಾದವೇ ಎಂಬುದು ಹೆಚ್ಚು ಚರ್ಚೆಯನ್ನು ನಿರೀಕ್ಷಿಸುವ ಅಂಶ. ಆದರೆ ಆ ಎಲ್ಲ ಸಂಪುಟಗಳು ಖರ್ಚಾದದ್ದು ನಿಜ. ಬಹಳಷ್ಟು ಸುಂದರವಾಗಿಯೂ ಪ್ರಕಟವಾಗಿದ್ದ ಬೃಹತ್ ಗಾತ್ರದ ಈ ಸಂಪುಟಗಳ ಬೆಲೆ ಅತ್ಯಂತ ಕಡಿಮೆ ಇದ್ದದ್ದರಿಂದ ಓದಲಾಗದವರೂ, ಓದಲೊಲ್ಲದವರೂ ‘ಮನೆಯಲ್ಲಿ ಇರಲಿ’ ಎಂಬ ಗೌರವದ ಭಾವನೆಯಿಂದ ಒಯ್ದದ್ದೂ ಇದೆ. ಇದರಿಂದಾಗಿ ನಿಜವಾದ ಓದುಗರಿಗೆ ಇವು ಸಿಗದಂತಾದದ್ದೂ ಇದೆ. ನಿಜವಾದ ಓದುಗರು ಈ ಸಂಪುಟಗಳ ಮರುಮುದ್ರಣಕ್ಕಾಗಿ ಒತ್ತಾಯ ತರುತ್ತಾ ಅವುಗಳನ್ನು ಪಡೆಯಲು ಜಾತಕ ಪಕ್ಷಿಗಳಂತೆ ಕಾದದ್ದಂತೂ ಸುಳ್ಳಲ್ಲ.

ಇಂತಹವರಿಗೆಲ್ಲ ಸಂತೋಷದ ಸಂಗತಿಯಾಗಿ ಕಳೆದ ಬಾರಿ ಸಿದ್ರಾಮಯ್ಯ ನೇತೃತ್ವದ ಸರ್ಕಾರ ಅಂಬೇಡ್ಕರ್ ಅವರ ಸಾಹಿತ್ಯವನ್ನು ಮರುಮುದ್ರಣ ಮಾಡಿ ಸುಲಭ ಬೆಲೆಗೆ ವಿತರಿಸುವ ನಿರ್ಣಯ ಕೈಗೊಂಡ ಫಲವಾಗಿ ಈ ಸಮಗ್ರ ಸಾಹಿತ್ಯದ ಇಪ್ಪತ್ತೆರಡು ಬೃಹತ್ ಸಂಪುಟಗಳು ಬಹಳ ಒಳ್ಳೆಯಗುಣಮಟ್ಟದ ಹಾಳೆಗಳಲ್ಲಿ ಮುದ್ರಣಗೊಂಡು ಅಷ್ಟೇ ಉತ್ತಮ ಬೈಂಡಿಂಗ್ ಒಂದಿಗೆ ಆಕರ್ಷಕವಾದ ಹೊಸ ವಿನ್ಯಾಸದಲ್ಲಿ ಹೊರಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಇವುಗಳನ್ನು ಹೊರತರುವ ಕಾರ್ಯವನ್ನು ಮಾಡಿರುವ ‘ಕುವೆಂಪು ಭಾಷಾಭಾರತಿ’ ಯ ಕಾರ್ಯ ನಿಜಕ್ಕೂ ಅಭಿನಂದನೀಯ.

ಭಾರತದ ಬಹಳಷ್ಟು ಜನ ಇಂದು ಬುದ್ಧಿವಂತರಾಗುವುದಕ್ಕಿಂತ ಭಾವಜೀವಿಗಳಾಗುತ್ತಿದ್ದಾರೆ. ಅವರನ್ನು ಕೆಲವು ಆಳುವ ಉಡಾಳರು ದಾಳಗಳನ್ನಾಗಿ ಮಾಡಿಕೊಂಡು ಅಧಿಕಾರದ ಆಟವಾಡುತ್ತಿದ್ದಾರೆ. ದೇವರ ಧರ್ಮಗಳಂತಹ ಭಾವನಾತ್ಮಕ ವಿಷಯಗಳಲ್ಲಿ ಜನರನ್ನು ಉನ್ಮಾದಗೊಳಿಸುವ ಚಟುವಟಿಕೆಗಳು ತೀವ್ರಗೊಂಡು ನಮ್ಮಜನ ನಮ್ಮ ಸಮಾಜದ ಮೂಲಗುಣವಾದ `ಸಹನೆ’ಯನ್ನು ಕಳೆದುಕೊಳ್ಳುತ್ತಿದ್ದಾರೆ. ಭಾರತವನ್ನು ಭದ್ರವಾಗಿ ಕಟ್ಟಿರುವ ಬಹುಸಂಸ್ಕೃತಿಯ ಬಂಧನ ಸಡಿಲಗೊಳ್ಳುತ್ತಿದೆ. ವಿವಿಧ ಜನಸಮುದಾಯಗಳ ನಡುವಿನ ಸೌಹಾರ್ದತೆ ದಿನದಿನಕ್ಕೂ ಕಡಿಮೆಯಾಗುತ್ತಾ ಹೋಗುತ್ತಿದ್ದು ಪರಸ್ಪರರಲ್ಲಿ ಅಸಹನೆ, ಅಪನಂಬಿಕೆಗಳು ಬೆಳೆಯುತ್ತಿವೆ.

ಇವೆಲ್ಲ ಸಮಸ್ಯೆಗಳನ್ನು ಭಾರತ ಗಂಭೀರವಾಗಿ ಎದುರಿಸುತ್ತಿದ್ದರೂ ಅವೆಲ್ಲವನ್ನೂ ಮರೆಮಾಚಿ ದೇಶ ಬಲಿಷ್ಠಗೊಳ್ಳುತ್ತಿದೆಯೆಂದೂ, ಇಡೀ ಪ್ರಪಂಚಕ್ಕೆ ಬುದ್ಧಿಹೇಳುವ ಸ್ಥಾನಕ್ಕೆ ಭಾರತ ನಡೆಯುತ್ತಿದೆಯೆಂದೂ, ಜನರನ್ನು ಮರುಳುಗೊಳಿಸಲಾಗುತ್ತಿದೆ. ಇಂತಹ ಮೋಡಿಗೊಳಗಾಗುತ್ತಿರುವ ಜನರಲ್ಲಿ ಯುವಜನತೆಯೇ ಹೆಚ್ಚಿರುವುದು ಆತಂಕದ ಸಂಗತಿಯಾಗಿದೆ.

ಇಂತಹ ಹೊತ್ತಿನಲ್ಲಿ ಭಾರತದ ಜನಸಮೂದಾಯದ ಅದರಲ್ಲಿಯೂ ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವಜನತೆಯ ವೈಚಾರಿಕೆ ಶಕ್ತಿಯನ್ನು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಯಾರದೋ ತಾಳಕ್ಕೆ ಕುಣಿಯುವ ಗೊಂಬೆಗಳಾಗದೇ ಅವರು ಸ್ವತಂತ್ರ ಆಲೋಚನಾಶಕ್ತಿಯನ್ನು ರೂಪಿಸಿಕೊಂಡರೆ ಮಾತ್ರ ಈ ದೇಶಕ್ಕೆ ಭವಿಷ್ಯ. ಈ ಭವಿಷ್ಯ ರೂಪುಗೊಳ್ಳಬೇಕಾದರೆ ನಾವೆಲ್ಲ ಅಂಬೇಡ್ಕರ್ ಅವರ ಬರೆಹಗಳನ್ನು ಓದುವುದು ಮತ್ತು ನಮ್ಮ ಯುವಸಮುದಾಯಕ್ಕೆ ಓದಿಸುವುದು ಅವಶ್ಯ. ಏಕೆಂದರೆ ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಿದಂತೆ ಅಂಬೇಡ್ಕರ್ ಅವರನ್ನು ಓದುವುದು ಅಂದರೆ ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಎಂದೇ ಅರ್ಥ.

ಡಾ. ರಾಜೇಂದ್ರ ಬುರಡಿಕಟ್ಟಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಕಾಶ್ಮೀರದ ವಿಶೇಷ ಸ್ಥಾನಮಾನದ ಅಂತ್ಯವೂ, ಅಮಿತ್ ಷಾ “ಅಭಿವೃದ್ಧಿ” ಅರ್ಥಶಾಸ್ತ್ರವೂ

Published

on

 

-ಪ್ರೊ. ಪ್ರಭಾತ್ ಪಟ್ನಾಯಕ್

ಅನು:ಕೆ.ಎಂ.ನಾಗರಾಜ್

  • ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35ಎ ವಿಧಿಗಳೇ ಆ ರಾಜ್ಯದಲ್ಲಿ ಅಭಿವೃದ್ಧಿಯಾಗದಿರಲು ಕಾರಣ ಎಂದು ಗೃಹಮಂತ್ರಿ ಅಮಿತ್ ಷಾ ಈ ವಿಧಿಗಳನ್ನು ಕೊನೆಗೊಳಿಸುವುದನ್ನು ಸಮರ್ಥಿಸಿಕೊಳ್ಳುತ್ತ ಹೇಳಿದ್ದಾರೆ. ಬಿಜೆಪಿಯ ಮುಖಂಡರುಗಳೆಲ್ಲರೂ ಈಗ ಜಪಿಸುತ್ತಿರುವ ಇದನ್ನು ದೇಶದ ಬಹಳಷ್ಟು ಮಂದಿ ನಂಬಿರುವಂತೆಯೂ ಕಾಣುತ್ತದೆ.
    ಆದರೆ ಇದು ನಿಜವಲ್ಲ, ಇದು ಕಾಶ್ಮೀರಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕಡಿತಗೊಳಿಸುತ್ತದೆ. ಜತೆಗೆ, ಇದು, ದೇಶದಲ್ಲಿ ಪಾಳೇಗಾರಿ-ವಿರೋಧಿ ಭೂಸುಧಾರಣೆಗಳಿಗೆ ಮುನ್ನುಡಿ ಬರೆದ ರಾಜ್ಯಕ್ಕೆ ಒದಗಿರುವ ಈ ದುರ್ವಿಧಿಯನ್ನೇ ಅಮಿತ್‌ ಷಾ ಹೇಳುವ “ಅಭಿವೃದ್ಧಿ” ಎನ್ನುತ್ತಾರೆ ದೇಶದ ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್.

ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಳಿಸುವ ನಡೆಯನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ರಾಜ್ಯ ಸಭೆಯಲ್ಲಿ ಗೃಹ ಮಂತ್ರಿ ಅಮಿತ್‌ ಷಾ ಕಾಶ್ಮೀರದ “ಅಭಿವೃದ್ಧಿ”ಯ ಪ್ರಶ್ನೆಯನ್ನು ತಮ್ಮ ಭಾಷಣದಲ್ಲಿ ತಂದರು. ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಗಾಢವಾಗಿ ಸಮಗ್ರಗೊಳಿಸುವುದರಿಂದ ಆ ಪ್ರದೇಶದಲ್ಲಿ ಹೂಡಿಕೆ ಹೆಚ್ಚುತ್ತದೆ ಎಂದು ವಾದಿಸಿದರು. ಕಾಶ್ಮೀರದ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಭರವಸೆಯ ಮೂಲಕ ತಮ್ಮ ಸರ್ಕಾರದ ಕ್ರಮವನ್ನು ಬೆಂಬಲಿಸುವಂತೆ ಅಮಿತ್‌ ಷಾ ವಿಶೇಷವಾಗಿ ಕಾಶ್ಮೀರದ ಯುವಕರಿಗೆ ಮನವಿ ಮಾಡಿದರು.

ಕಳೆದ 45 ವರ್ಷಗಳಲ್ಲೇ ನಿರುದ್ಯೋಗದ ಪರಿಸ್ಥಿತಿ ಅತಿ ಹೆಚ್ಚು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭಾರತದ ಉಳಿದ ಭಾಗಗಳೊಂದಿಗೆ ಕಾಶ್ಮೀರವು ಗಾಢವಾಗಿ ಬೆಸೆದುಕೊಂಡರೆ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂಬುದಾಗಿ ಹೂಡಿರುವ ದಾವೆಯು ಒಂದು ವಿಡಂಬನೆಯೇ ಸರಿ. ಆದರೂ, ಉದ್ಯೋಗಾವಕಾಶಗಳ ಬಗ್ಗೆ ಅಮಿತ್‌ ಷಾ ಅವರ ವಾದನ್ನು ಸೂಕ್ಷ್ಮವಾಗಿ ಪರಿಶೀಲಿಸೋಣ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದೆಯೋ ಅಥವಾ ಇಲ್ಲವೋ ಎಂಬುದು ಒತ್ತಟ್ಟಿಗಿರಲಿ, ಸ್ಥಳಿಯವಾಗಿ ದೊರೆಯುವ ಕಚ್ಚಾ ಪದಾರ್ಥಗಳ ಸಂಸ್ಕರಣೆಗೆ ಸಂಬಂಧವಿಲ್ಲದ ಬೃಹತ್‌ ಕೈಗಾರಿಕೆಗಳು ಕಾಶ್ಮೀರಕ್ಕೆ ಹರಿದು ಬರುತ್ತವೆ ಎನ್ನುವುದೇ ಒಂದು ಅತ್ಯಂತ ಹಾಸ್ಯಾಸ್ಪದವಾದ ಸಂಗತಿ (ಅಮಿತ್‌ ಷಾರವರೇನೋ ಬೃಹತ್‌ ಕೈಗಾರಿಕೆಗಳು ಕಾಶ್ಮೀರಕ್ಕೆ ಹರಿದು ಬರಲಿವೆ ಎಂದಿದ್ದಾರೆ). ಒಂದು ಕಾರ್ಖಾನೆಯ ಸ್ಥಾಪನೆಗೆ ಸಂಬಂಧಿತ ಸಾಗಣೆ ವೆಚ್ಚಗಳು ಕಾಶ್ಮೀರದಲ್ಲಿ ವಿಪರೀತ ದುಬಾರಿಯಾಗುತ್ತವೆ. ಮತ್ತು, ಕಾಶ್ಮೀರದಲ್ಲಿ “ಹೊರಗಿನವರು” ಭೂಮಿ ಕೊಳ್ಳುವುದನ್ನು ನಿರ್ಬಂಧಿಸುವ 35A ವಿಧಿಯನ್ನು ರದ್ದು ಮಾಡಿರುವುದರಿಂದಾಗಿ ಭೂಮಿಯ ಬೆಲೆ ಏರುತ್ತದೆ – ಭವಿಷ್ಯದಲ್ಲಿ ಇದೊಂದು “ಸಕಾರಾತ್ಮಕ” ಬೆಳವಣಿಗೆಯಾಗಲಿದೆ ಎಂಬ ಅಂಶವನ್ನು ಸ್ವತಃ ಷಾ ಹೇಳಿದರು. ಹಾಗಾಗಿ, ಯಾರಾದರೂ ಮನಬಂದಂತೆ ಬೃಹತ್‌-ಕೈಗಾರಿಕೆಗಳನ್ನು ಕಾಶ್ಮೀರದಲ್ಲಿ ತೆರೆಯುತ್ತಾರೆ ಎಂಬುದು ಕೇವಲ ಒಂದು ಅಸಂಬದ್ಧವೇ. ಅಷ್ಟೇ ಏಕೆ, ಅದೇ ರೀತಿಯಲ್ಲಿ, ಯಾರಾದರೂ ಅಲ್ಲಿ ಮನಬಂದಂತೆ ಸಣ್ಣ-ಕೈಗಾರಿಕೆಗಳನ್ನು ತೆರೆಯುತ್ತಾರೆ ಎಂಬುದೂ ಅಷ್ಟೇ ಅಸಂಬದ್ಧ ಮಾತು.

ಆದ್ದರಿಂದ, ಕಾಶ್ಮೀರ ಕಣಿವೆಯಲ್ಲಿ ಉತ್ಕೃಷ್ಟವಾಗಿ ಬೆಳೆಯಬಹುದಾದ ಚಟುವಟಿಕೆಗಳೆಂದರೆ, ಅಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಚಾ ಪದಾರ್ಥಗಳನ್ನೇ ಬಳಸುವ ಚಟುವಟಿಕೆಗಳು ಮಾತ್ರ – ಅದು ಉಣ್ಣೆ ಇರಬಹುದು, ಅಥವಾ ಹಣ್ಣುಗಳೇ ಇರಬಹುದು, ಅಥವಾ ಮರಮಟ್ಟುಗಳೇ ಇರಬಹುದು, ಅಥವಾ ಮಾಂಸವೇ ಇರಬಹುದು. ಅಂತಹ ಚಟುವಟಿಕೆಗಳು ಕಾಶ್ಮೀರ ಕಣಿವೆಯಲ್ಲಿ ಈಗಾಗಲೇ ಸಧೃಢವಾಗಿ ನೆಲೆಗೊಂಡಿವೆ. ಈ ಚಟುವಟಿಕೆಗಳಿಗೆ ಈಗ ಬೇಕಿರುವುದು ಒಂದು ಒಳ್ಳೆಯ ಉತ್ತೇಜನವಷ್ಟೇ. ಅಂತಹ ಉತ್ತೇಜನ ದೊರೆಯಬೇಕಾದರೆ ರಾಜ್ಯದಲ್ಲಿ ಸಹಾನುಭೂತಿಯುಳ್ಳ ಒಂದು ಸರ್ಕಾರ ಇರಬೇಕಾಗುತ್ತದೆಯೇ ಹೊರತು, ವಿಶೇಷ ಸ್ಥಾನಮಾನ ಕೊನೆಗೊಳಿಸುವುದಲ್ಲ ಅಥವಾ “ಹೊರಗಿನವರು” ಭೂಮಿ ಕೊಳ್ಳುವುದರ ಮೇಲೆ ಇರುವ ನಿರ್ಬಂಧವನ್ನು ರದ್ದು ಮಾಡುವುದೂ ಅಲ್ಲ.
ನಿಜ, ಕಾಶ್ಮೀರವು ಉಳಿದ ಭಾರತದೊಂದಿಗೆ ಹೆಚ್ಚಿನ ಮಟ್ಟದಲ್ಲಿ ಮುಕ್ತವಾಗಿ ತೆರೆದುಕೊಂಡರೆ ಬಹುರಾಷ್ಟ್ರೀಯ ಕಂಪೆನಿಗಳೊ ಅಥವಾ ಭಾರತದ ದೊಡ್ಡ ದೊಡ್ಡ ಉದ್ದಿಮೆಗಳೋ ಅಲ್ಲಿ ಸ್ಥಾಪನೆಯಾಗಿ, ಇಂತಹ ಚಟುವಟಿಕೆಗಳನ್ನೇ ಅಭಿವೃದ್ಧಿಪಡಿಸುವ ಮೂಲಕ ಕಣಿವೆಯ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ಯೋಚಿಸಬಹುದು. ಆದರೆ, ದೊಡ್ಡ ಬಂಡವಾಳವು, ಅದು ಭಾರತದ್ದೇ ಆಗಿರಲಿ ಅಥವಾ ವಿದೇಶದ್ದೇ ಆಗಿರಲಿ, ಸ್ಥಳೀಯ ಉತ್ಪಾದಕರು ತೊಡಗಿರುವ ಚಟುವಟಿಕೆಗಳಲ್ಲೇ ಕಾಲಿಟ್ಟಾಗ ಉದ್ಯೋಗಗಳು ಸ್ವಲ್ಪವೂ ಹೆಚ್ಚುವುದಿಲ್ಲ. ಬದಲಿಗೆ, ಸ್ಥಳೀಯ ಉತ್ಪಾದಕರ ಸ್ಥಾನವನ್ನು ಆಕ್ರಮಿಸುವುದರಿಂದ ಉದ್ಯೋಗಗಳು ಕುಗ್ಗುತ್ತವೆ. ಕಾಲಕ್ರಮದಲ್ಲಿ ಇಂತಹ ಚಟುವಟಿಕೆಗಳನ್ನು ವೃದ್ಧಿಸುವ ಅವಕಾಶಗಳಿದ್ದರೆ, ಅಂತಹ ಅವಕಾಶಗಳನ್ನು ಸ್ಥಳೀಯ ಉತ್ಪಾದಕರೇ ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರವು ಅವರಿಗೆ ಸಹಾಯ ಮಾಡಬಹುದು. ಇಂತಹ ಸ್ಥಳೀಯ ಉತ್ಪನ್ನಗಳಿಗೆ ದೊಡ್ಡ ಉದ್ದಿಮೆಗಳು ಬಂದರೆ ಕ್ರಮೇಣ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆಯೇ ಹೊರತು ಖಂಡಿತವಾಗಿಯೂ ಹೆಚ್ಚುವುದಿಲ್ಲ.

ಆದರೆ, ಅಮಿತ್‌ ಷಾ ಅವರ ಪ್ರಕಾರ ಕಾಶ್ಮೀರಿಗಳ ನಿಜವಾದ “ನಿರೀಕ್ಷೆ” ಹೊರಗಿನವರು ಭೂಮಿ ಕೊಳ್ಳಲು ಕಾಶ್ಮೀರ ಕಣಿವೆಯಲ್ಲಿ ಪ್ರವೇಶಿಸುವುದರಲ್ಲೇ ಅಡಗಿದೆ. ಹಿಮಾಚಲ ಪ್ರದೇಶ ಮತ್ತು ಇತರ ಗಡಿ ಭಾಗದ ಬೆಟ್ಟ-ಗುಡ್ಡಗಳ ರಾಜ್ಯಗಳಲ್ಲಿ ಹೊರಗಿನವರು ಭೂಮಿ ಕೊಳ್ಳುವುದರ ಮೇಲೆ ನಿರ್ಬಂಧ ಇರುವಾಗ, “ಅಭಿವೃದ್ಧಿ”ಯ ಹೆಸರಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಭೂಮಿ ಕೊಳ್ಳುವುದರ ಮೇಲೆ ಇರುವ ನಿರ್ಬಂಧವನ್ನು ತೆಗೆಯಬೇಕು ಎನ್ನುವುದು ವಿಚಿತ್ರವೇ ಸರಿ. ಕೇವಲ ಭೂಮಿ ವ್ಯವಹಾರಗಳ ಉಬ್ಬರದಿಂದ ಕಾಶ್ಮೀರ ಕಣಿವೆಯ ಅಭಿವೃದ್ಧಿಯಾಗುತ್ತದೆಯೇ?

ಒಬ್ಬ ವ್ಯಕ್ತಿಯು ಭೂಮಿ ಕೊಳ್ಳುವಾಗ, ತಾನು ಹೊಂದಿರುವ ಯಾವುದೊ ಒಂದು ಆಸ್ತಿಯನ್ನು ಇನ್ನೊಂದು ಆಸ್ತಿ (ಭೂಮಿ) ಹೊಂದುವತ್ತ ಚಲಿಸುತ್ತಾನೆ. ಭೂಮಿ ಮಾರುವವನ ಪರಿಸ್ಥಿತಿಯೂ ಅದೇ ರೀತಿಯಲ್ಲಿಯೇ ಇರುತ್ತದೆ. ಹಾಗಾದರೆ, ಆ ಯಾವುದೊ ಒಂದು ಎಂದು ಹೇಳುವ ಆಸ್ತಿ ಯಾವುದು? ಕಾಶ್ಮೀರ ಕಣಿವೆಯಲ್ಲಿ ಭೂಮಿ ಕೊಳ್ಳುವ ಹೊರಗಿನವನು ತಾನು ಹೊಂದಿರುವ ಉತ್ಪಾದಕ ಆಸ್ತಿಯಿಂದ ಭೂಮಿ ಹೊಂದುವತ್ತ ಚಲಿಸಿದರೆ, ಉಳಿದ ಭಾರತಕ್ಕೆ ಆ ವ್ಯವಹಾರವು ಒಂದು ಹಿಮ್ಮುಖ ನಡೆಯಾಗುತ್ತದೆ. ಆ ವ್ಯವಹಾರವು ಆ ರೀತಿಯದೇ ಅಲ್ಲ ಎಂದು ಭಾವಿಸಿ, ಅಮಿತ್‌ ಷಾ ಅವರ ಕಲ್ಪನೆಗೆ ಹೊಂದುವಂತಹ ಒಂದು ಉದಾಹರಣೆ ತೆಗೆದುಕೊಳ್ಳೋಣ: ಭೂಮಿ ಕೊಳ್ಳುವವನು ತಾನು ಹೊಂದಿರುವ ನಗದು ಹಣದಿಂದ ಭೂಮಿ-ಆಸ್ತಿಯತ್ತ ಚಲಿಸುತ್ತಾನೆ. ಇದು ಉಳಿದ ಭಾರತದಲ್ಲಿ ಆಗುವ ಹೂಡಿಕೆಯಲ್ಲಿ ಕಡಿತವಾಗುವುದಿಲ್ಲ ಎಂದು ಮೊದಲ ನೋಟದಲ್ಲಿ ತೋರುತ್ತದೆ. ಕಾಶ್ಮೀರ ಕಣಿವೆಯಲ್ಲಿ ಭೂಮಿ ಕೊಳ್ಳುವವನು ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಸಾಲ ಪಡೆಯುತ್ತಾನೆ, ಆತನಿಗೆ ಸಾಲ ಒದಗಿಸುವಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆಯಿಲ್ಲ ಎಂಬ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ಈಗ ಒಂದು ಪ್ರಶ್ನೆ: ಭೂಮಿ ಮಾರಿದವರು ತಮಗೆ ಬಂದ ಹಣವನ್ನು ಏನು ಮಾಡುತ್ತಾರೆ? ಈಗ ತಾನೇ ಚರ್ಚಿಸಿರುವ ಕಾರಣಗಳಿಂದಾಗಿ, ಕಾಶ್ಮೀರ ಕಣಿವೆಯಲ್ಲಿ ಭೂಮಿ ಮಾರಿದವರು, ಕಣಿವೆಯಲ್ಲೇ ಹೂಡಿಕೆ ಮಾಡುವ ಸಂಭವ ಕಡಿಮೆಯೇ, ಬಹುಷಃ ಸ್ಥಳೀಯ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಮಾಡುವ ಹೂಡಿಕೆಯನ್ನು ಹೊರತುಪಡಿಸಿದರೆ. ಆದರೆ, ಸ್ಥಳೀಯ ಸರಕುಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶಕ್ಕಾಗಿ ಹೂಡಿಕೆ ಮಾಡಲು ಹಣಕಾಸಿನ ಕೊರತೆಯಂತಹ ಯಾವುದೇ ತೊಂದರೆಯಿತ್ತು ಎಂಬುದನ್ನು ನಂಬಲು ಕಾರಣವೇ ಇಲ್ಲ. ಸ್ಥಳೀಯ ಸರಕುಗಳ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವಂತಹ ಅವಕಾಶ ಇರಬಹುದು. ಅದಕ್ಕೆ ರಾಜ್ಯ ಸರ್ಕಾರದ ಉತ್ಸಾಹಪೂರ್ಣ ಭಾಗವಹಿಸುವಿಕೆ ಇರಬೇಕಾಗುತ್ತದೆ. ಆದ್ದರಿಂದ, ಭೂಮಿ ಮಾರಿ ಕೈಯಲ್ಲಿ ಹಣ ಇಟ್ಟುಕೊಳ್ಳುವುದೇ ಉತ್ಪಾದನೆ ಹೆಚ್ಚಿಸುವತ್ತ ಕೊಂಡೊಯ್ಯುವುದಿಲ್ಲ. ಉತ್ಪಾದನೆ ಹೆಚ್ಚಿಸುವಂತಹ ಅವಕಾಶ ಇದ್ದಿದ್ದರೆ ಭೂಮಿಯ ವ್ಯಾಪಾರ ಇಲ್ಲದಿದ್ದರೂ ಹೂಡಿಕೆಯಾಗುತ್ತಿತ್ತು. ಹಾಗಾಗಿ, ಭೂಮಿ ಮಾರಿದ ಹಣವನ್ನು, ಬಹುತೇಕವಾಗಿ, ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕಾಗುತ್ತದೆ.

ಇಂತಹ ಹಣ ಬ್ಯಾಂಕ್‌ನಲ್ಲಿ ಠೇವಣಿಯಾದಾಗ ಅದು ಸಾಮಾನ್ಯವಾಗಿ ಸ್ಥಳೀಯವಾಗಿ ಸಾಲ ಕೊಡಲು ಬಳಕೆಯಾಗುವುದಿಲ್ಲ ಎಂಬುದು ಒಂದು ದಿನ ನಿತ್ಯದ ಸತ್ಯ. ಒಂದೋ ಅದು ಕಾಶ್ಮೀರದ ಹೊರಗೆ ಸಾಲ ಕೊಡಲು ಬಳಕೆಯಾಗುತ್ತದೆ ಇಲ್ಲವೇ, ಹೆಚ್ಚೆಂದರೆ, ಸ್ಥಳಿಯ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯವಾಗಿ ಬಿದ್ದಿರುತ್ತದೆ. ಆದ್ದರಿಂದ, ಇಲ್ಲಿ ಆಗಬಹುದಾದದ್ದು ಏನೆಂದರೆ, ಪುಡಿಗಾಸಿಗಾಗಿ ಅತ್ತ ಹೊರಗಿನವರಿಗೆ ಕಣಿವೆ ಭೂಮಿ ಮಾರಿ ಇದ್ದದ್ದನ್ನು ಕಳೆದುಕೊಳ್ಳುವ ಮತ್ತು ಆ ಪುಡಿಗಾಸು ಇತ್ತ ಕಣಿವೆಯಿಂದ ಸೋರಿ ಹೋಗುವ ಒಂದೇ ಒಂದು ಬದಲಾವಣೆ. ಹಾಗಾಗಿ, ಇಂತಹ ಬದಲಾವಣೆಯಿಂದಾಗಿ ಅತ್ತ ಕಿಂಚಿತ್‌ “ಅಭಿವೃದ್ಧಿ”ಯೂ ಇಲ್ಲ, ಇತ್ತ ಉದ್ಯೋಗಗಳೂ ಹೆಚ್ಚುವುದಿಲ್ಲ.
ಇನ್ನೊಂದು ಕಡೆಯಲ್ಲಿ, ಎಷ್ಟು ಭೂಮಿ ಕೈ ಬದಲಾಯಿಸಿತೊ ಅದರಲ್ಲಿ, ಈ ಬದಲಾವಣೆಗೆ ಮೊದಲು ನಡೆಯುತ್ತಿದ್ದ ಅಷ್ಟೊ ಇಷ್ಟೊ ಚಟುವಟಿಕೆಗಳು ಕೈ ಬದಲಾವಣೆಯ ಕಾರಣದಿಂದಾಗಿ ನಿಂತು ಹೋಗುತ್ತವೆ. ಏಕೆಂದರೆ, ಹೊರಗಿನ ಖರೀದಿದಾರರು ಭೂಮಿಯ ಬೆಲೆ ಏರಿದಾಗ ಮಾರುವ, ಇಲ್ಲವೇ, ಕಣಿವೆಯ ಆ ಭೂಮಿಲ್ಲಿ ತಮಗೊಂದು ಬೇಸಿಗೆ ವಿಶ್ರಾಂತಿ ಧಾಮ ನಿರ್ಮಿಸಿಕೊಳ್ಳುವ ಹವಣಿಕೆಯಲ್ಲಿರುತ್ತಾರೆ.

ಹೀಗೆ ಯಾವ ರೀತಿಯಲ್ಲಿ ನೋಡಿದರೂ, ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಳಿಸುವ ಮತ್ತು ಹೊರಗಿನವರು ಭೂಮಿ ಕೊಳ್ಳುವುದರ ಮೇಲೆ ಇದ್ದ ನಿರ್ಬಂಧವನ್ನು ರದ್ದು ಮಾಡುವ ಕ್ರಮಗಳಿದಿಂದಾಗಿ ಅಲ್ಲಿ ಉದ್ಯೋಗಾವಕಾಶಗಳು ಕಿಂಚಿತ್ತೂ ಹೆಚ್ಚುವುದಿಲ್ಲ. ಬದಲಾಗಿ, ಕಣಿವೆಯ ಭೂಮಿಯು ದಿಲ್ಲಿಯ ಅಥವಾ ಮುಂಬೈನ ಶ್ರೀಮಂತರ ಕೈಗೆ ಹಸ್ತಾಂತರವಾಗುತ್ತಿದ್ದಂತೆಯೇ ಕಣಿವೆಯಲ್ಲಿ ಉದ್ಯೋಗಾವಕಾಶಗಳು ಬಹುತೇಕ ಕುಸಿಯುತ್ತವೆ.

ವಿಶೇಷ ಸ್ಥಾನಮಾನ ರದ್ದು ಮಾಡುವ ಕ್ರಮದಿಂದ ಕಾಶ್ಮೀರದ ಅಭಿವೃದ್ಧಿ ನಿಜಕ್ಕೂ ಯಶಸ್ವಿಯಾಗುವ ಸಂಭವ ಇತ್ತು ಎನ್ನುವುದಾದರೆ, ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನ ರದ್ದು ಮಾಡುವ ಮೊದಲೇ ಇಬ್ಬರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ರಾಜ್ಯದ ರಾಜಕೀಯ ನಾಯಕರನ್ನು ಬಂಧಿಸುವುದು ಅಗತ್ಯವೆಂದು ಭಾವಿಸುತ್ತಿರಲಿಲ್ಲ. ಹಾಗಾಗಿ, ವಿಶೇಷ ಸ್ಥಾನಮಾನದ ರದ್ದತಿಯನ್ನು ಅನಿವಾರ್ಯವಾಗಿ ಹಿಂಬಾಲಿಸುವ ಹಿಂಸೆಯಿಂದಾಗಿ ಅಲ್ಲಿ ಜನರಿಗೆ ಅನ್ನ ಒದಗಿಸುವ ಪ್ರಧಾನ ಚಟುವಟಿಕೆಯಾಗಿದ್ದ ಪ್ರವಾಸೋದ್ಯಮವೂ ಬಹಳ ದಿನಗಳವರೆಗೆ ಕುಂಠಿತಗೊಳ್ಳುವುದರಿಂದ ಕಾಶ್ಮೀರಿ ಯುವಕರಿಗೆ ಉದ್ಯೋಗ ಲಭಿಸುವುದು ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈಗ “ಅಭಿವೃದ್ಧಿ”ಯ ಘೋಷಣೆ ಮೊಳಗುತ್ತಿದೆ. ಹಾಗಾದರೆ, ಕೇಂದ್ರ ಸರ್ಕಾರವು ಈಗ ಏನನ್ನು ಮಾಡಿದೆಯೋ ಅದನ್ನು ಮಾಡಿರುವುದಾದರೂ ಏಕೆ? ಸಾಮಾನ್ಯವಾದ ಒಂದು ಉತ್ತರವೆಂದರೆ, ಆದು, ಹಿಂದುತ್ವವಾದಿಗಳ ಬಹಳ ವರ್ಷಗಳ ಬೇಡಿಕೆ. ಅವರ ಕಣ್ಣು ದೇಶದ ಏಕ ಮಾತ್ರ ಮುಸ್ಲಿಂ ಬಾಹುಳ್ಯದ ರಾಜ್ಯದ ಜನ ಸಂಖ್ಯೆಯ ಸಂಯೋಜನೆಯನ್ನು ಇಸ್ರೇಲ್‌ ಪ್ಯಾಲೆಸ್ತೀನಿಯರ ಜಮೀನು ಕಬಳಿಸುತ್ತಿರುವ ರೀತಿಯಲ್ಲಿ ಬದಲಿಸುವತ್ತ ನೆಟ್ಟಿದೆ.

ಇದು ನಿಜವಿದೆಯಾದರೂ ಸಹ, ಮತ್ತೊಂದು ಸಂಭವನೀಯ ಉದ್ದೇಶವನ್ನು ನಾವು ಕಡೆಗಣಿಸುವಂತಿಲ್ಲ. ವಾಸ್ತವವಾಗಿ, ಈ ಸರ್ಕಾರವು ಹಿಂದುತ್ವ-ಕಾರ್ಪೋರೇಟ್‌ಗಳ ಒಂದು ಮೈತ್ರಿ ಕೂಟವೇ. ಹಾಗಾಗಿ, ಅದು ಕೈಗೊಳ್ಳುವ ಎಲ್ಲ ಕಾರ್ಯಗಳೂ ಕಾರ್ಪೋರೇಟ್‌ಗಳ ಹಿತಾಸಕ್ತಿಯನ್ನು ಈಡೇರಿಸುವ ಉದ್ದೇಶದಿಂದ ಕೂಡಿವೆ. ಕಾಶ್ಮೀರ ಕಣಿವೆಯ ಬಾಗಿಲನ್ನು ಕಾರ್ಪೋರೇಟ್‌ ಆಶ್ರಯದಾತರಿಗೆ ತೆರೆದಿರುವುದು ಅಲ್ಲಿ ಉತ್ಪಾದನೆ ಸಂಬಂಧಿತ ಆರ್ಥಿಕ ಚಟುವಟಿಕೆ ಹೆಚ್ಚಿಸುವುದಕ್ಕಲ್ಲ, ಬದಲಿಗೆ ರಿಯಲ್ ಎಸ್ಟೇಟ್ ಬೆಳೆಸಲಿಕ್ಕೆ ಅಥವಾ ಕೇವಲ ಭೂಮಿಯ ಬೆಲೆಗಳಲ್ಲಿ ಜೂಜುಗಾರಿಕೆಯೂ ಒಂದು ಹೆಚ್ಚುವರಿ ಉತ್ತೇಜನೆಯಾಗಿದೆ. ಇಂತಹ ರಿಯಲ್ ಎಸ್ಟೇಟ್ ಚಟುವಟಿಕೆಗಳು ಉದ್ಯೋಗಾವಕಾಶಗಳ ಮಟ್ಟವನ್ನೇನೂ ಹೆಚ್ಚಿಸುವುದಿಲ್ಲ. ಮಾರುವ ಮುನ್ನ ಆ ಭೂಮಿ ಉತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದರಂತೂ ಅದು ಉದ್ಯೋಗಾವಕಾಶವನ್ನು ಕಡಿತ ಮಾಡುತ್ತದೆ.

ಈ ರೀತಿಯಾಗಿ, ಕಣಿವೆಯ ಬಾಗಿಲನ್ನು ಕೆಲವು ಜೂಜುಕೋರ ಭೂಮಿ ವ್ಯವಹಾರಿಗಳಿಗೆ ಮತ್ತು ರಿಯಲ್ ಎಸ್ಟೇಟ್ ಮಂದಿಗೆ ತೆರೆಯುವುದರಿಂದ, ಅದರಿಂದಾಗುವ ಪರಿಸರ ಮಾಲಿನ್ಯವನ್ನು ವಿವರಿಸುವ ಅಗತ್ಯವಿಲ್ಲ, ಜತೆಗೆ, ಈ ಮಂದಿ ಕಾಶ್ಮೀರದ ಮುಖವನ್ನು ಅಂದ, ಚೆಂದದಿಂದಾಗಿಯೇ ಶಾಶ್ವತವಾಗಿ ವಿರೂಪಗೊಳಿಸುತ್ತಾರೆ. ಇದರಿಂದ ಕೆಲವು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಕಾಶ್ಮೀರದ ಅರ್ಥವ್ಯವಸ್ಥೆಯು ಜೂಜುಕೋರರ ಮತ್ತು ಭೂಗಳ್ಳ ಕದೀಮರ ಬೇಟೆಯ ತಾಣವಾಗಿ ಪರಿವರ್ತನೆಗೊಂಡು, ಇಂತಹ ಧಂಧೆಗಳಿಗೆ ಅಂಟಿಕೊಂಡಿರುವ ಕೊಲೆ ಸುಲಿಗೆ ಮುಂತಾದ ಅಪರಾಧಗಳಲ್ಲಿ ತೀವ್ರ ಉಬ್ಬರವೂ ಅನಿವಾರ್ಯವಾಗಿ ಬರುತ್ತದೆ. ಈಗಾಗಲೇ ತಾಳಲಾರದ ಮಟ್ಟದಲ್ಲಿರುವ ಭಯೋತ್ಪಾದಕರ ಹಾವಳಿ ಮತ್ತಷ್ಟು ಹೆಚ್ಚುವುದರೊಂದಿಗೆ, ಅದಕ್ಕೆ ಈ ರಿಯಲ್ ಎಸ್ಟೇಟ್ ಸಂಬಂಧಿತ ಅಪರಾಧಗಳು ತುಪ್ಪ ಸುರಿಯುತ್ತವೆ. ನಿಜ ಹೇಳಬೇಕೆಂದರೆ, ಈ ಎರಡೂ ರೀತಿಯ ಹಿಂಸಾಚಾರಗಳು ಒಂದಕ್ಕೊಂದು ಪೂರಕವಾಗುತ್ತವೆ, ಬೇರೆ ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ವ್ಯವಹಾರಗಳು ಮತ್ತು ಭಯೋತ್ಪಾದನೆಗಳು ಒಂದಕ್ಕೊಂದು ಪೂರಕವಾಗಿರುವ ರೀತಿಯಲ್ಲಿ ಇದು, ದೇಶದಲ್ಲಿ ಪಾಳೇಗಾರಿ-ವಿರೋಧಿ ಭೂಸುಧಾರಣೆಗಳಿಗೆ ಮುನ್ನುಡಿ ಬರೆದ ರಾಜ್ಯಕ್ಕೆ ಒದಗಿರುವ ಒಂದು ದುರ್ವಿಧಿ. ಆದರೆ ಅಮಿತ್‌ ಷಾ ಖಂಡಿತವಾಗಿಯೂ ಈ ದುರ್ವಿಧಿಯನ್ನೇ “ಅಭಿವೃದ್ಧಿ” ಎನ್ನುತ್ತಾರೆ!

(ಜನಶಕ್ತಿಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಲಿರುವ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಯುವ ನಾಯಕ ಚಂದ್ರಶೇಖರ್ ರಾವಣ್ ಆಜಾದ್ ನಾಳೆ ಕರ್ನಾಟಕಕ್ಕೆ : ಮುಕ್ತ ಮನಸ್ಸಿನಿಂದ ನಾವೆಲ್ಲ ಸ್ವಾಗತಿಸೋಣ

Published

on

ಳೆದ ಕೆಲವಾರು ವರ್ಷಗಳಿಂದ ಉತ್ತರ ಪ್ರದೇಶದ ಮೇಲ್ಜಾತಿ ಪರವಾದ ಹಾಗೂ ಗೂಂಡಾ ಸರ್ಕಾರದ ವಿರುದ್ಧ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಚಂದ್ರಶೇಖರ್ ರಾವಣ್ ಆಜಾದ್ ಅವರನ್ನು ಒಂದು ವರ್ಗದ ದಲಿತ ನಾಯಕತ್ವ ಬಿಜೆಪಿ ಏಜೆಂಟ್ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ. ಆದರೆ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಜಾದ್ ತಾನೇನು ಎಂಬುದನ್ನು ತನ್ನ ಕೃತಿಯಲ್ಲಿ, ಹೋರಾಟದಲ್ಲಿ ತೋರಿಸುತ್ತಿದ್ದಾರೆ.

ಸಮುದಾಯಕ್ಕಾಗಿ ನಿಸ್ವಾರ್ಥವಾದ ಹೋರಾಟ ಕಣದಲ್ಲಿ ರೂಪಿತಗೊಂಡ ಈ ಯುವ ನಾಯಕ ನಾಳೆ ಕರ್ನಾಟಕದ ನೆಲಕ್ಕೆ ಬರುತ್ತಿರುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಭೀಮ್ ಆರ್ಮಿಯ ಕುರಿತು, ಚಂದ್ರಶೇಖರ್ ರಾವಣ್ ಅವರ ಚಿಂತನೆಗಳ ಕುರಿತು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಕೆಲವು ಹೋರಾಟದ ಸ್ನೇಹಿತರು ಚಂದ್ರಶೇಖರ್ ರಾವಣ್ ಅವರು ಕರ್ನಾಟಕಕ್ಕೆ ಬರುವುದನ್ನು ತಮ್ಮ ಸಂಪರ್ಕಗಳ ಮೂಲಕ ತಡೆಯಲು ಯತ್ನಿಸಿದರಂತೆ, ಕೆಲವರು ಅವರಿಗೆ ಎಚ್ಚರಿಕೆ ಹೇಳಲು ಯುತ್ನಿಸಿದರಂತೆ! ಕಾದು ನೋಡುತ್ತಾರಂತೆ!! ಎಲ್ಲಿಗೆ ಬಂತು ಗೆಳೆಯರ ಸ್ಥಿತಿ ಎಂದು ಖೇದವಾಗುತ್ತದೆ.
ಅಂತಹ ಗೆಳೆಯರಿಗೆ ಸಣ್ಣ ಮನವಿ.
ಜಿಗ್ನೇಶ್ ಮೇವಾನಿ ಇರಲಿ ಕನ್ಹಯ್ಯ ಇರಲಿ ಚಂದ್ರಶೇಖರ್ ರಾವಣ್ ಇರಲಿ ಇವರು ಯಾರೂ ಆಡುವ ಮಕ್ಕಳಲ್ಲ. ಇವರು ತಮ್ಮ ತಮ್ಮ ಸುತ್ತ ಕಳೆದ ಹತ್ತಾರು ವರ್ಷಗಳಿಂದ ಎಲ್ಲಾ ರೀತಿಯ ಸಾಮಾಜಿಕ ರಾಜಕೀಯ – ಸಂಘರ್ಷದಲ್ಲಿ ತೊಡಗಿಕೊಂಡು, ನಾನಾ ರೀತಿಯ ಸೈದ್ಧಾಂತಿಕ ತಾತ್ವಿಕ ಸಂಘರ್ಷದ ಕುಲುಮೆಯಲ್ಲಿ ತಮ್ಮನ್ನು ತಾವು ಹದಗೊಳಿಸಿಕೊಂಡವರು. ನಾನು ನೀವು ಊಹಿಸಲೂ ಕಷ್ಟವಾದ ರೀತಿಯಲ್ಲಿ ಪ್ರಭುತ್ವಗಳನ್ನು ಎದುರು ಹಾಕಿ ಕೊಂಡಿರುವ ಮಹಾನ್ ಯುವ ತಾರೆಗಳು ಇವರು.

ಇವರು ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯಬಲ್ಲವರೇ ವಿನಃ ಒಬ್ಬರದ್ದನ್ನು ಕಾಪಿ ಹೊಡೆಯುವವರಲ್ಲ. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಮಿತಿಯಲ್ಲಿ ವಿಶೇಷ ರೀತಿಯಲ್ಲಿಯೇ ಗುರುತಿಸಿಕೊಂಡವರು. ಅವರನ್ನೆಲ್ಲ “ಯಾರೋ” ಭಾಷಣಕ್ಕೆ ಕರೆದು Divert ಮಾಡಿಬಿಡುತ್ತಾರೆ ಎಂದೋ, ಅವರ ಹೋರಾಟದ ಹಾದಿಯನ್ನೇ ಬದಲಿಸಿಬಿಡುತ್ತಾರೆ ಎಂದೋ ಯೋಚಿಸುವುದು ನೀವು ಆ ತಳಮಟ್ಟದ ಹೋರಾಟಗಾರರಿಗೆ ಮಾಡುವ ಅಪಮಾನವೇ ವಿನಃ ಬೇರೇನೂ ಅಲ್ಲ. ದಯವಿಟ್ಟು ಅಂತಹ ಕೆಲಸ ಮಾಡುವ ಮೂಲಕ , ಇಂತಹ ತಪ್ಪು ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತುವ ಮೂಲಕ ನಿಮ್ಮನ್ನು ನೀವು ಸಣ್ಣವರಾಗಿಸಿಕೊಳ್ಳಬೇಡಿ ಎಂದಷ್ಟೇ ನಿಮಗೆ ಸವಿನಯ ಪ್ರಾರ್ಥನೆ.

ಹರ್ಷಕುಮಾರ್ ಕುಗ್ವೆ

  • ಕೃಪೆ : ಫೇಸ್ ಬುಕ್ ಪೋಸ್ಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ನಾವು ಪ್ರತಿಪಾದಿಸುವ ಏಕತೆ, ವಿವಿಧತೆಯನ್ನು ಪ್ರತಿನಿಧಿಸುತ್ತದೆ : ಡಾ ಕನ್ಹಯ್ಯ ಕುಮಾರ್ ಸಂವಾದದ ಕನ್ನಡ ಅನುವಾದ, ಮಿಸ್ ಮಾಡ್ದೆ ಓದಿ..!

Published

on

  • ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ. ಡಾ.ಕನ್ಹಯ್ಯ ಕುಮಾರ್, ಬಿವಿ ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳ ಪ್ರಶ್ನೆಗೆ ಉತ್ತರಿಸುತ್ತಾ ಆಡಿದ ಮಾತುಗಳು.

ಅನುವಾದ : ಚೇತನಾ ತೀರ್ಥಹಳ್ಳಿ

ಯುವತಿಯ ಪ್ರಶ್ನೆಯ ಸಾರಾಂಶ : ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಒಮ್ಮೆಯಾದರೂ ಜೈ ಹಿಂದ್ ಜೈ ಶ್ರೀರಾಮ್ ಹೇಳಿಬಿಡಿ. ನೀವೇಕೆ ಏಕರಾಷ್ಟ್ರದ ವಿರುದ್ಧ ಇದ್ದೀರಿ, ಅದನ್ನೂ ವಿವರಿಸಿ.

ಕನ್ಹಯ್ಯ ಕುಮಾರ್ ನೀಡಿದ ಉತ್ತರ : ನೀವು ಏಕದ ಕುರಿತು ಹೇಳುತ್ತಿದ್ದೀರಿ. ಏಕೆ ‘ಏಕೈಕ’ವನ್ನು ಪ್ರಚಾರ ಮಾಡೋದಿಲ್ಲ, ಅದನ್ನೇಕೆ ಒಪ್ಪಿಕೊಳ್ಳೋದಿಲ್ಲ ಅಂತ ಕೇಳ್ತಿದ್ದೀರಿ. ಆದರೆ ನಾನೇನು ಮಾಡಲಿ? ನಾನು ಹುಟ್ಟಿದ್ದು ಇಬ್ಬರ ಸಂಯೋಗದಿಂದ. ನನ್ನ ಅಪ್ಪ ಮತ್ತು ಅಮ್ಮ ಇಬ್ಬರು ಮದುವೆಯಾಗಿದ್ದರಿಂದ ನಾನು ಹುಟ್ಟಿದೆ. ಯಾರೋ ಒಬ್ಬರಿಂದ ನಾನು ಹುಟ್ಟುವುದು ಅಸಾಧ್ಯವಿತ್ತು. ಅಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರಿದ್ದರು.

ನೀವು ಏಕರಾಷ್ಟ್ರದ ಪರಿಕಲ್ಪನೆಯನ್ನು ನಾನೇಕೆ ಬೆಂಬಲಿಸೋದಿಲ್ಲ ಅಂತ ಕೇಳ್ತಿದ್ದೀರಿ. ರಾಷ್ಟ್ರ ಯಾವತ್ತಿಗೂ ಒಂದೇ. ಭಾರತ ಇರುವುದು ಒಂದೇ, ಇದರಲ್ಲಿ ಸಂದೇಹವಿಲ್ಲ. ಆದರೆ, ಈ ಏಕಭಾರತವನ್ನು ಪ್ರತಿನಿಧಿಸುವ ಒಂದು ಸಂವಿಧಾನ ಏನಿದೆ, ಅದರಲ್ಲಿ 300ಕ್ಕಿಂತ ಹೆಚ್ಚು ವಿಧಿಗಳಿವೆ. ಮತ್ತು ನೀವು ಹೇಳುತ್ತಿರುವ ಏಕರಾಷ್ಟ್ರವನ್ನು ಪ್ರತಿನಿಧಿಸಲು ಇರುವ ಒಂದು ಸಂಸತ್ತು ಏನಿದೆ, ಅದರಲ್ಲೂ ಎರಡು ಸದನಗಳಿವೆ- ಲೋಕಸಭೆ ಮತ್ತು ರಾಜ್ಯಸಭೆ. ಮತ್ತು ಅದಕ್ಕೆ ಚುನಾಯಿತರಾಗಿ ಹೋಗುವುದು ಯಾರೋ ಒಬ್ಬರಲ್ಲ, ಪೂರಾ 545 ಸದಸ್ಯರು!
ಆದ್ದರಿಂದ ನಾವು ಪ್ರತಿಪಾದಿಸುವ ಏಕತೆ ಏನಿದೆ, ಅದು ವಿವಿಧತೆಯನ್ನು ಪ್ರತಿನಿಧಿಸುವಂಥದ್ದು. ಅಲ್ಲಿ ವೈವಿಧ್ಯತೆ ಇದೆ.

ನೀವು ಜೈ ಶ್ರೀರಾಮ್ ಘೋಷಣೆ ಕುರಿತು ಹೇಳಿದಿರಿ. ನೀವು ಖಂಡಿತವಾಗಿ ಘೋಷಣೆ ಹಾಕಿ, ಅದು ನಿಮ್ಮ ಸ್ವಾತಂತ್ರ್ಯ. ನೀವು ಜೈ ಶ್ರೀರಾಮ್ ಬೇಕಾದರೂ ಅನ್ನಿ, ಜೈ ಹನುಮಾನ್ ಬೇಕಾದರೂ ಅನ್ನಿ. ನಿಮಗೆ ಬೇಕಾದ ಘೋಷಣೆ ಕೂಗುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ, ನಿಮಗೆ ನಿಮ್ಮ ಘೋಷಣೆ ಕೂಗುವ ಸ್ವಾತಂತ್ರ್ಯ ನೀಡಿರುವ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿಬಿಡಿ.

ಇನ್ನು, ನಾನು ಜೈಶ್ರೀರಾಮ್ ಘೋಷಣೆ ಕೂಗುವ ಬಗ್ಗೆ, ನಾನು ಹುಟ್ಟಿದ್ದೇ ಮಿಥಿಲೆಯಲ್ಲಿ. ನನ್ನ ಊರು ಬೇಗುಸರಾಯ್ ಮಿಥಿಲಾ ಪ್ರಾಂತ್ಯಕ್ಕೆ ಸೇರುತ್ತದೆ. ನಿಮಗೆ ಗೊತ್ತಿರಬಹುದು, ಮಿಥಿಲೆ ಶ್ರೀರಾಮನ ಮಾವನ ಮನೆ. ನಮ್ಮ ಊರಲ್ಲಿ ಪ್ರತಿವರ್ಷ ಸೀತಾ ರಾಮರ ವಿವಾಹ ಮಹೋತ್ಸವ ನಡೆಸುತ್ತಾರೆ. ಅಯೋಧ್ಯೆಯಿಂದ ತರುಣರು ರಾಮನ ವೇಷದಲ್ಲಿ ನಮ್ಮ ಊರಿಗೆ ಮೆರವಣಿಗೆ ಬರುತ್ತಾರೆ. ನಾವು ಹೆಣ್ಣಿನ ಕಡೆಯವರು. ಅವರು ಗಂಡಿನ ಕಡೆಯವರು. ನಮ್ಮ ಪ್ರಾಂತ್ಯದಲ್ಲಿ ಬೀಗರನ್ನು ಬೈಗುಳದ ಮೂಲಕ ಸ್ವಾಗತಿಸುವ ಪದ್ಧತಿ ಇದೆ. ನಾವು ರಾಮನನ್ನು ನಿಂದಿಸುತ್ತಾ ಸ್ವಾಗತ ಕೋರುತ್ತೇವೆ. ರಾಮನನ್ನು ಹಾಸ್ಯ ಮಾಡುತ್ತೇವೆ. ಇದು ನಮ್ಮಲ್ಲಿ ಪಾರಂಪರಿಕವಾಗಿ ನಡೆದು ಬಂದ ರೂಢಿ. ಇದು ನಮ್ಮ ನೆಲದ ಸಂಸ್ಕೃತಿ. ಅದೂ ಅಲ್ಲದೆ ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವ ದೇವರನ್ನೂ ಏಕವಾಗಿ ಸ್ಮರಿಸುವುದಿಲ್ಲ. ರಾಮನನ್ನು ಸೀತಾರಾಮ ಎಂದೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಜೋಡಿಯಾಗಿ ಸ್ಮರಿಸುತ್ತಾರೆ, ಪೂಜಿಸುತ್ತಾರೆ. ಇದು ನಾನು ಬೆಳೆದ ನೆಲದ ಪರಂಪರೆ. ನನ್ನ ಪರಿಸರದ ಸಂಸ್ಕೃತಿ.

ನೀವೇನಾದರೂ ಪಿಎಚ್ಡಿ ಮಾಡುವುದಾದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅವುಗಳ ಮೇಲೆ ಸಂಶೋಧನೆ ಮಾಡಿ. ನನಗೆ ತಿಳಿದಿರುವಂತೆ ಈ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ.
ನಾನೊಮ್ಮೆ ಹಿಮಾಚಲಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ಧನ ಮೂರ್ತಿ ಇದೆ. ಅದರ ತಲೆಮೇಲೆ ಶಿವನ ಮೂರ್ತಿನ್ನು ಇರಿಸಲಾಗಿದೆ. ಈ ಮಂದಿರಕ್ಕೆ ಮೊದಲು ಹಿಂದೂ ಸಾಧು ಬರುತ್ತಾರೆ. ಪ್ರಾರ್ಥನೆ ನಡೆಸುತ್ತಾರೆ. ಅದಾದ ನಂತರ ಬೌದ್ಧ ಬಿಕ್ಖು ಬರುತ್ತಾರೆ, ಅಲ್ಲಿ ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾರೆ. ಇದು ಈ ದೇಶದ ವೈಶಿಷ್ಟ್ಯ. ಇದು ಹಿಂದೂಸ್ಥಾನದ ವೈಶಿಷ್ಟ್ಯ.
ಲಾಹೋರ್ ಜಿಲ್ಲೆಯಲ್ಲಿ ಒಂದು ರಾಮಾಯಣ ಪ್ರಚಲಿತದಲ್ಲಿದೆ. ಅದು ಲಾಹೋಲಿ ಭಾಷೆಯಲ್ಲಿದೆ.

ಆ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವುದಿಲ್ಲ, ಬದಲಿಗೆ, ಸೀತೆ ರಾವಣನ ಮಗಳು! ಮತ್ತು ರಾಮ ಸೀತೆಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಈ ಕಾರಣದಿಂದ ರಾಮ ರಾವಣರ ಯುದ್ಧ ನಡೆಯುತ್ತದೆ. ಇದು ಲಾಹೋಲಿ ರಾಮಾಯಣ ಹೇಳುವ ಕಥೆ. ಇದು ಹಿಂದೂಸ್ಥಾನದ ವೈಶಿಷ್ಟ್ಯ. ಇಂಥವನ್ನೆಲ್ಲ ಯಾರು, ಯಾಕಾಗಿ ನಿಮ್ಮ ತಲೆಯೊಳಗೆ ತುಂಬಿದ್ದಾರೋ ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಜನಿಸುವುದೇ ಒಂದು ಗೌರವದ ವಿಷಯ. ನೀವು ಹಿಮಾಚಲಕ್ಕೆ ಹೋದರೆ ನಿಮಗೆ ಸ್ವಿಟ್ಜರ್ಲೆಂಡಿಗೆ ಹೋದ ಅನುಭವವಾಗುತ್ತದೆ. ಗೋವಾ ಅಥವಾ ಮಂಗಳೂರು ಸಮುದ್ರ ತೀರಕ್ಕೆ ಬಂದರೆ, ಮಿಯಾಮಿ ಬೀಚ್’ನಲ್ಲಿ ಮಲಗಿರುವ ಅನುಭವವಾಗುತ್ತದೆ. ಈ ದೇಶದ ಮೈದಾನಗಳಲ್ಲಿ ಅಲೆದಾಡಿದರೆ, ಅವು ಅಮೆರಿಕಾದ ಹಸಿರುಮೈದಾನಗಳಿಗಿಂತ ಎಷ್ಟು ಅಗಾಧವಾಗಿದೆ ಅನ್ನೋದು ತಿಳಿಯುತ್ತದೆ. ಆದರೂ ಒಟ್ಟಾರೆಯಾಗಿ ಇದು ಒಂದು ದೇಶ. ಇದು ನಮ್ಮ ದೇಶ.

ನಿಮ್ಮ ದೇಶ ನಿಮ್ಮದು. ನಿಮ್ಮ ತಾಯಿ ನಿಮ್ಮವಳು. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದು ನಿಮ್ಮ ಖಾಸಗಿ ವಿಷಯ. ಹಾಗಂತ ಯಾರಾದರೂ ಯಾವುದೇ ಬಣ್ಣದ ಬಾವುಟ ಹಿಡಿದು ಬಂದು, ಜೈ ಶ್ರೀ ರಾಮ್ ಎಂದೋ ಇಂಕ್ವಿಲಾಬ್ ಜಿಂದಾಬಾದ್ ಎಂದೋ ಘೋಷಣೆ ಕೂಗುತ್ತಾ ಬಂದು, “ನೀನು ನಿನ್ನ ತಾಯಿಯನ್ನು ಪ್ರೀತಿಸುವುದೇ ನಿಜವಾದರೆ, ಹೇಗೆ ಪ್ರೀತಿಸುತ್ತೀಯ ತೋರಿಸು” ಅಂದರೆ, ಆಗ ನಿಮ್ಮ ಉತ್ತರ ಏನಿರುತ್ತದೆ? ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ.

ಕೃಪೆ : Arun Joladkudligi ಅವರ ಫೇಸ್ ಬುಕ್ ಪೇಜ್ ನಿಂದ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending