Connect with us
http://www.suddidina.com/category/political-news

ಬಹಿರಂಗ

ಬೆತ್ತಲೆ ಸೇವೆ ವಿರೋಧಿಸಿದ ಆ ದಿನಗಳು

Published

on

ಲೇಖನಗಳ ಸಂಗ್ರಹ : ಶಿವಾನಂದ‌ ಕುಗ್ವೆ

20-03-1986 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ‘ಬೆತ್ತಲೆ ಸೇವೆ ವಿರೋಧಿಸಿದ ಡಿಎಸ್ ಎಸ್ ಕಾರ್ಯಕರ್ತರ ಮೇಲೆ ಭಕ್ತರು ಹಲ್ಲೆ ನಡೆಸಿದರು. ರಕ್ಷಣೆಗೆ ಬಂದಿದ್ದ ಮಹಿಳಾ ಪೋಲೀಸರನ್ನೂ ಬೆತ್ತೆಲೆಗೊಳಿಸಿದ್ದರು. ಭಕ್ತರನ್ನು ಹುರಿದುಂಬಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಯಿತು. ನೂರಾರು ಕಾರ್ಯಕರ್ತರು ಅಂದು ಭಕ್ತರ ಆಕ್ರೋಶದಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದೇ ಹೆಚ್ಚು. ಅಂದು ಪೆಟ್ಟು ತಿಂದವರು ಇಂದೂ ಅನೇಕರಿದ್ದಾರೆ.

ಅಂದಿನ ಗಲಭೆಗೆ ಕಾರಣಕರ್ತರಾಗಿದ್ದವರು

  • 1. ಚಂದ್ರಗುತ್ತಿ ರೇಣುಕಾಂಬ ಧರ್ಮದತ್ತಿ ಸಂಸ್ಥೆಯ ಸದಸ್ಯರು (ಇವರ ಲಾಭದ ಮೂಲ ಬೆತ್ತಲೆ ಸೇವೆ ಜಾತ್ರೆಯಾಗಿತ್ತು)
  • 2. ಜೋಗಮ್ಮಗಳು (ಇವರ ಹೊಟ್ಟೆಪಾಡು ಜಾತ್ರೆಯ ಮೇಲೆ ನಿಂತಿತ್ತು)
  • 3. ವಿಶ್ವ ಹಿಂದೂ ಪರಿಷತ್ತು (ತಳ ಸಮುದಾಯಗಳು ಘನತೆಯಿಂದ ಬದುಕಬಾರದು ಎಂಬುದೇ ಇವರ ಅಜೆಂಡಾ)

ಅಂದು ಹೋರಾಟದ ಮುಂಚೂಣಿಯಲ್ಲಿದ್ದ ಬಿ.ಕೃಷ್ಣಪ್ಪ ‘ಬೆತ್ತಲೆ ಸೇವೆಗೆ ಜಯವಾಗಲಿ‘ ಎಂದು ಮೈಕ್ ಹಿಡಿದು ಕೂಗುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಳ್ಳುತ್ತಾರೆ. ವಿಚಾರಿಸಿದಾಗ ಅವನು ತನ್ನ ಹೆಸರು ಕೃಷ್ಣರಾವ್, ತಾನು ಸಾಗರದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯ ಎಂದು ಹೇಳುತ್ತಾನೆ. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದ ಪಿ.ವಿ.ಕೃಷ್ಣಭಟ್ ಎಂಬಾತ ಕೂಡಾ ಭಕ್ತರನ್ನು ಹೋರಾಟಗಾರರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದ. ಹೋರಾಟದಿಂದಾಗಿ ಬೆತ್ತಲೆ ಸೇವೆ ನಿಷೇಧಗೊಂಡಿತು. ಇಂದು ನನ್ನ ಸಮುದಾಯದ ಹಾಗೂ ಸಾಗರ, ಸೊರಬ ಶಿಕಾರಿಪುರ ಮುಂತಾದ ಕಡೆಗಳ ತಳ ಸಮುದಾಯಗಳ ಸಾವಿರಾರು ಹೆಣ್ಮಕ್ಕಳ ಮಾನ ಉಳಿಯಿತು. ಸಮಾಜದ ಮೇಲ್ವರ್ಗದ ಜನರೆದುರು ಬೆತ್ತಲೆ ಯಾಗಿ ಅವರ ವಿಕೃತ ಖುಷಿಗೆ ಈಡಾಗುವುದು ತಪ್ಪಿತು. ಬೆತ್ತಲೆ ಸೇವೆ ಸಂಪ್ರದಾಯವಲ್ಲವೇ, ಪರಂಪರೆ ಅಲ್ಲವೇ? ಖಂಡಿತಾ ಹೌದು. ಅದನ್ನು ಹುಟ್ಟು ಹಾಕಿದವರೂ ವೈದಿಕರೇನೂ ಆಗಿರಲಿಕ್ಕಿಲ್ಲ. ಆದರೆ ಆಧುನಿಕ ಕಾಲಘಟ್ಟದಲ್ಲಿ ಇದೇ ಸಂಪ್ರದಾಯ, ಪರಂಪರೆ ನಮ್ಮ ಹೆಣ್ಮಕ್ಕಳ ಘನತೆಗೆ ಕುತ್ತು ತಂದಾಗ ಅದನ್ನು ವಿರೋಧಿಸಲೇಬೇಕಾಯಿತು.

ಅಂದ ಹಾಗೆ ಬೆತ್ತಲೆ ಸೇವೆ ಪದ್ಧತಿಯ ವಿರುದ್ಧ ಮೊದಲು ಜನಜಾಗೃತಿ ನಡೆಸಿ, ನಂತರ ಅದನ್ನು ಬಿ.ಕೃಷ್ಣಪ್ಪನವರ ಗಮನಕ್ಕೆ ತಂದಿದ್ದು ಅಂದರೆ ಸಾಗರದ ಡಿಎಸ್ ಎಸ್ ಸಂಚಾಲಕರಾಗಿದ್ದ ಶಿವಾನಂದ ಕುಗ್ವೆ. ಅವರು ನನ್ನ ಅಪ್ಪ ಎನ್ನುವುದು ನನಗೆ ಹೆಮ್ಮೆ. ನಮ್ಮ ಊರಿನ ಹಾಗೂ ಸುತ್ತಮುತ್ತಲಿನ ಅನೇಕ ಹೆಣ್ಣು ಮಕ್ಕಳು ಜೋಗತಿಯರಿಂದ ಬ್ರೈನ್ ವಾಶ್ ಆಗಿ ತಾವೂ ಜೋಗತಿಯರಾಗಿ ತಿರುಗತೊಡಗಿದಾಗ, ಹಾಗೂ ಅನೇಕ ದಲಿತ ಶೂದ್ರ ಹೆಣ್ಮಕ್ಕಳನ್ನು ಸ್ವಂತ ತಂದೆ ತಾಯಿಗಳೇ ಬಸವಿಯರಾಗಿ ಮಾಡುವ, ಬೆತ್ತಲೆ ಪೂಜೆ ಮಾಡಲು ಒತ್ತಾಯ ಮಾಡತೊಡಗಿದ್ದನ್ನು ಕಂಡು ಸಾಗರದ ಡಿಎಸ್ ಎಸ್ ಘಟಕ ಹಳ್ಳಿಗಳಲ್ಲಿ ವೈಚಾರಿಕ ಜಾಗೃತಿ ಅಭಿಯಾನ ನಡೆಸಿತ್ತು. ನಂತರ ಶಿವಮೊಗ್ಗದ ಡಿಎಸ್ ಎಸ್ ಮುಖಂಡರಾಗಿದ್ದ ರಾಚಪ್ಪ ಅವರೂ ಜೊತೆಯಾದರು.ಮುಂದೆ ಕೃಷ್ಣಪ್ಪನವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಚಳುವಳಿ ನಡೆದಿದ್ದು, ಅದಕ್ಕೆ ಕೆಲವರು ಹಲವರು ಬೆಂಬಲಿಸಿದ್ದು, ಕೆಲವರು ತಟಸ್ಥ ನೀತಿ ಅನುಸರಿಸಿದ್ದು, ಅನಂತ ಮೂರ್ತಿಯಂತವರು ಸಹ ಬೆತ್ತಲೆ ಸೇವೆಗೆ ವಿರೋಧ ಏಕೆ ಕೂಡದು ಎಂದೆಲ್ಲಾ ಬರೆದಿದ್ದು ಈಗ ಇತಿಹಾಸ.

ಶಬರಿ ಮಲೆಯಲ್ಲಿ ಮಹಿಳೆಯರ ಘನತೆಯನ್ನು ರಕ್ಷಿಸುವ ಒಂದು ನ್ಯಾಯಾಲಯದ ತೀರ್ಪಿಗೆ ಬರುತ್ತಿರುವ ನಾಯರ್ ಗಳ ಹಾಗೂ ಸಂಘ ಪರಿವಾರದ ಕುಮ್ಮಕ್ಕಿನ ವಿರೋಧ ನೋಡಿದಾಗ ಮೇಲಿನ ವಿಷಯ ಪ್ರಸ್ತುತ ಎನಿಸಿ ಬರೆದೆ.

ಹರ್ಷಕುಮಾರ್ ಕುಗ್ವೆ
ಪತ್ರಕರ್ತರು
ಉಡುಪಿ

ಬಹಿರಂಗ

‘ಚುನಾವಣಾ ಬಾಂಡು’ ಎಂಬ ಕುಟಿಲ ಯೋಜನೆಯನ್ನು ರದ್ದು ಮಾಡಬೇಕು, ಈಗಲೇ..!

Published

on

  • ನಿಧಿ ನೀಡಿಕೆ ಕಾನೂನುಬದ್ಧವಾಗಿರುವ ವರೆಗೆ ರಾಜಕೀಯ ಪಕ್ಷಗಳಿಗೆ ಯಾರು ನಿಧಿ ನೀಡುತ್ತಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂಬ ಒಂದು ದಂಗುಬಡಿಸುವ ಹೇಳಿಕೆಯನ್ನು ಸರಕಾರದ ಪರವಾಗಿ ಅಟಾರ್ನಿ ಜನರಲ್ ನೀಡಿದ್ದಾರೆ. ತದ್ವಿರುದ್ಧವಾಗಿ, ಸುಪ್ರಿಂ ಕೋರ್ಟ್ ಜನತೆಗೆ ತಿಳಿಯುವ ಹಕ್ಕು ಇದೆ ಎಂಬ ನಿಲುವನ್ನು ಘೋಷಿಸಿದೆ. ಹೀಗಿರುವಾಗ, ಅದು ಒಂದು ಅಂತಿಮ ತೀರ್ಪು ಕೊಡುವ ವರೆಗೆ ಈ ಯೋಜನೆಗೆ ತಡೆಯಾಜ್ಞೆಯನ್ನಾದರೂ ಕೊಡಬಹುದಿತ್ತು.

ಮಾರ್ಚ್ 2018 ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡುಗಳ ಯೋಜನೆ ಕಾರ್ಪೊರೇಟ್ ನಿಧಿಗಳನ್ನು, ಕಮಿಶನ್ ಲಂಚಗಳನ್ನು ಮತ್ತು ಕಪ್ಪು ಹಣವನ್ನು ಆಳುವ ಪಕ್ಷದ ಖಜಾನೆಗೆ ಎಳೆದುಕೊಳ್ಳುವ ಒಂದು ಭಂಡ ಮತ್ತು ಅಪಾರದರ್ಶಕ ವಿಧಾನ.

ಆದ್ದರಿಂದಲೇ, ಸಿಪಿಐ(ಎಂ), ಈ ಯೋಜನೆಯನ್ನು ಮತ್ತು ಅದಕ್ಕಾಗಿ ಮಾಡಿದ ತಿದ್ದುಪಡಿಗಳನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್-ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ) ಕೂಡ ಈ ಯೋಜನೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದೆ. ಚುನಾವಣಾ ಬಾಂಡುಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವ ಏಕೈಕ ಪಕ್ಷ ಸಿಪಿಐ(ಎಂ).

ಈ ಯೋಜನೆಯಲ್ಲಿ ಅನಾಮಧೇಯ ದಾನಿಗಳು ಒಂದು ರಾಜಕೀಯ ಪಕ್ಷಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಇದಕ್ಕಾಗಿ ನಿಯೋಜಿತವಾದ ಖಾತೆಗಳ ಮೂಲಕ ಎಷ್ಟು ಬೇಕಾದರೂ ಹಣವನ್ನು ಕೊಡಬಹುದು. ಇದಕ್ಕಾಗಿ, ಜನತಾ ಪ್ರಾತಿನಿಧ್ಯ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಕಂಪನಿಗಳ ಕಾಯ್ದೆ ಮತ್ತು ಆರ್‌ಬಿಐ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಕಂಪನಿಗಳು ಮೂರು ವರ್ಷಗಳ ನಿವ್ವಳ ಲಾಭದ 7.5% ದ ವರೆಗಿನ ಮೊತ್ತವನ್ನು ಮಾತ್ರ ದೇಣಿಗೆಯಾಗಿ ಕೊಡಬಹುದು ಎಂದಿದ್ದ ಮಿತಿಯನ್ನು ತೆಗೆಯಲಾಯಿತು. ಇನ್ನೂ ಅಪಾಯಕಾರಿ ಸಂಗತಿಯೆಂದರೆ, ಭಾರತದಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅನುವಾಗುವಂತೆಯೂ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು.

ಅರುಣ್ ಜೇಟ್ಲಿ ತರ್ಕಗಳು

ದಾನಿ ಯಾರೆಂಬುದು ಎಸ್‌ಬಿಐಗೆ ಗೊತ್ತಿರುತ್ತದೆ. ಇದು ಸರಕಾರೀ ಒಡೆತನ್ ಬ್ಯಾಂಕ್ ಆಗಿರುವುದರಿಂದಾಗಿ, ಅದರ ಮೂಲಕ ಸರಕಾರಕ್ಕೂ ಗೊತ್ತಾಗುತ್ತದೆ. ಆದ್ದರಿಂದ ಕಾರ್ಪೊರೇಟ್‌ಗಳು ಮತ್ತು ದೊಡ್ಡ ದೇಣಿಗೆದಾರರು ಪ್ರತಿಪಕ್ಷಕ್ಕಿಂತ ಆಳುವ ಪಕ್ಷಕ್ಕೇ ದೇಣಿಗೆ ಕೊಡಲು ಮುಂದೆ ಬರುತ್ತಾರೆ. ದಾನಿಗಳ ಹೆಸರನ್ನು ಸಾರ್ವಜನಿಕಗೊಳಿಸುವುದಿಲ್ಲವಾದ್ದರಿಂದ, ಅವರು ಈಗ ಯಾವುಧೇ ಭಯವಿಲ್ಲದೆ ಯಾರಿಗಾದರೂ ದೇಣಿಗೆ ಕೊಡಬಹುದು ಎಂಬ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ತರ್ಕಕ್ಕೆ ತದ್ವಿರುದ್ಧವಾಗಿ, ಸರಕಾರಕ್ಕೆ ದಾನಿಯ ಹೆಸರು ಗೊತ್ತಾಗುವುದರಿಂದಾಗಿ, ಈ ಬಾಂಡ್‌ಗಳು ಮುಖ್ಯವಾಗಿ ಆಳುವ ಪಕ್ಷಕ್ಕೇ ಬರುವುದನ್ನು ಖಾತ್ರಿ ಮಾಡಿಕೊಂಡಂತಾಗಿದೆ.

ಇದರ ಫಲಿತಾಂಶ ನಿರೀಕ್ಷಿಸಿದಂತೆಯೇ ಇದೆ. ನವಂಬರ್ 2018ರ ವರೆಗೆ ಎಸ್‌ಬಿಐ ಕೊಟ್ಟಿರುವ ಬಾಂಡುಗಳಲ್ಲಿ 95%ವನ್ನು ಬಿಜೆಪಿ ಪಡೆದಿದೆ. ಚುನಾವಣೆಗಳ ಪ್ರಕಟಣೆಯ ನಂತರ ನೀಡಲಾರಂಭಿಸಿರುವ ಚುನಾವಣಾ ಬಾಂಡುಗಳಲ್ಲೂ ಇದು ಮುಂದುವರೆಯಲಿದೆ.

ಅರುಣ್ ಜೇಟ್ಲಿಯವರ ಇನ್ನೊಂದು ತರ್ಕ, ಇದರಿಂದಾಗಿ ರಾಜಕೀಯ ನಿಧಿ ನೀಡಿಕೆ ಕಾನೂನುಬದ್ಧ ರೀತಿಗಳಲ್ಲಿ ಬರುವಂತಾಗುತ್ತದೆ ಎಂಬುದು ಕೂಡ ಸರಿಯಲ್ಲ ಎಂಬುದು ಸಾಬೀತಾಗಿದೆ. ಏಕೆಂದರೆ ಈ ಚುನಾವಣೆಗಳಲ್ಲಿ ಅಪಾರ ಮೊತ್ತಗಳನ್ನು ನಗದಿನ ಮೂಲಕವೇ ನಿಯೋಜಿಸಲಾಗುತ್ತಿದೆ. ಎಪ್ರಿಲ್ 1 ರ ವರೆಗೆ ಚುನಾವಣಾ ಆಯೋಗದ ಅಧಿಕಾರಿಗಳು 1,400 ಕೋಟಿ ರೂ.ಗಳಷ್ಟು ನಗದನ್ನು ವಶಪಡಿಸಿಕೊಂಡಿದ್ದಾರೆ. ಇದು ಚುನಾವಣೆಗಳಲ್ಲಿ ಹರಿದಾಡುತ್ತಿರುವ ಕಪ್ಪು ಹಣದ ಒಂದು ಸಣ್ಣ ಭಾಗವಷ್ಟೇ.

ಸುಪ್ರಿಂ ಕೋರ್ಟ್, ಅರ್ಜಿಗಳನ್ನು ಹಾಕಿದ ಸುಮಾರು ಒಂದು ವರ್ಷದ ನಂತರ, ಒಂದು ಮಧ್ಯಂತರ ಆದೇಶ ನೀಡಿ, ರಾಜಕೀಯ ಪಕ್ಷಗಳು ತಾವು ಪಡೆದಿರುವ ಚುನಾವಣಾ ಬಾಂಡುಗಳು, ಮತ್ತು ಅವನ್ನು ಯಾರಿಂದ ಪಡೆಯಲಾಯಿತು ಎಂಬುದರ ವಿವರಗಳನ್ನು ಸೀಲಾದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಹೇಳಿದೆ. ನ್ಯಾಯಾಲಯ ಈ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸುವ ತಡೆಯಾಜ್ಞೆಯನ್ನು ಕೊಟ್ಟಿಲ್ಲ. ಪಕ್ಷಗಳು ನೀಡುವ ವಿವರಗಳನ್ನು ಚುನಾವಣಾ ಆಯೋಗ ತಿಳಿಸಬೇಕು ಎಂದು ಕೂಡ ಹೇಳಿಲ್ಲ. ಬಾಂಡುಗಳನ್ನು ನೀಡುವ ಅವಧಿಯನ್ನು ಮೇ ತಿಂಗಳಲ್ಲಿ 10 ದಿನಗಳಿಂದ ೫ ದಿನಗಳಿಗೆ ಇಳಿಸಿದೆಯಷ್ಟೇ. ನ್ಯಾಯಾಲಯ, ಮೇ ೩೦ರಂದು, ಚುನಾವಣೆಗಳು ಮುಗಿದು ಹೋದ ನಂತರ ಈ ಕೇಸಿನ ಮುಂದಿನ ವಿಚಾರಣೆಯನ್ನು ಮಾಡುತ್ತದೆ.

ಅರೆಮನಸ್ಸಿನ ಮತ್ತು ನಿರಾಶಾದಾಯಕ ಆದೇಶ

ಇದೊಂದು ಅರೆಮನಸ್ಸಿನ ಮತ್ತು ನಿರಾಶಾದಾಯಕ ಆದೇಶ. ಏಕೆಂದರೆ, ಅದು ಮೂರು ದಿನಗಳ ಕಾಲ ಎಲ್ಲ ಕಡೆಗಳಿಂದ ತರ್ಕಗಳನ್ನು ಆಲಿಸಿತು. ಚುನಾವಣಾ ಆಯೋಗ ನ್ಯಾಯಲಯದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾಯ್ದೆಗಳಲ್ಲಿನ ಬದಲಾವಣೆಗಳು ರಾಜಕೀಯ ಪಕ್ಷಗಳ ರಾಜಕೀಯ ಹಣಕಾಸು/ನಿಧಿ ನೀಡಿಕೆಯ ಪಾರದರ್ಶಕತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂದು ಹೇಳಿದೆ. ಬಾಂಡುಗಳ ಮೂಲವನ್ನು ವರದಿ ಮಾಡದಿರುವುದು, ಎಂದರೆ, ರಾಜಕೀಯ ಪಕ್ಷ ಸರಕಾರೀ ಕಂಪನಿಗಳಿಂದ ಮತ್ತು ವಿದೇಶಿ ಮೂಲಗಳಿಂದ ದೇಣಿಗೆಗಳನ್ನು ತಗೊಂಡಿದೆಯೋ ಎಂಬುದನ್ನು ದೃಢಪಡಿಸಲಾಗುವುದಿಲ್ಲ ಎಂದಾಗುತ್ತದೆ ಎಂದೂ ಆಯೋಗ ಹೇಳಿದೆ.

ಅಟಾರ್ನಿ ಜನರಲ್ ಅವರು ನಿಧಿ ನೀಡಿಕೆ ಕಾನೂನುಬದ್ಧವಾಗಿರುವ ವರೆಗೆ ರಾಜಕೀಯ ಪಕ್ಷಗಳಿಗೆ ಯಾರು ನಿಧಿ ನೀಡುತ್ತಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂಬ ಒಂದು ದಂಗುಬಡಿಸುವ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಜನತೆಗೆ ತಿಳಿಯುವ ಹಕ್ಕು ಇದೆ ಎಂಬ ನಿಲುವನ್ನು ನ್ಯಾಯಾಲಯ ಘೋಷಿಸಿರುವಾಗ, ಅದು ಒಂದು ಅಂತಿಮ ತೀರ್ಪು ಕೊಡುವ ವರೆಗೆ ಈ ಯೋಜನೆಗೆ ತಡೆಯಾಜ್ಞೆಯನ್ನಾದರೂ ಕೊಡಬಹುದಿತ್ತು.

ಈ ನಡುವೆ ಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಬಾಂಡುಗಳ ಮೂಲಕ ನಿಧಿ ನೀಡಿಕೆಯಲ್ಲಿ ಭಾರೀ ಹೆಚ್ಚಳ ಕಾಣಬಂದಿದೆ. ಒಂದು ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಗೆ ಎಸ್‌ಬಿಐ ನೀಡಿರುವ ಉತ್ತರದ ಪ್ರಕಾರ, ಇಡೀ 2018ಕ್ಕೆ ಹೋಲಿಸಿದರೆ, 2019ರ ಮೊದಲ ಮೂರು ತಿಂಗಳಲ್ಲೇ ಚುನಾವಣಾ ಬಾಂಡ್‌ಗಳಿಗೆ 62% ಹೆಚ್ಚು ಹಣ ಬಂದಿದೆ. 2018ರಲ್ಲಿ ಒಟ್ಟು 1,056.73 ಕೋಟಿ ರೂ.ಗಳ ಮೊತ್ತದ ಚುನಾವಣಾ ಬಾಂಡುಗಳನ್ನು ಕೊಡಲಾಗಿದ್ದರೆ, ಈ ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲೇ ನೀಡಿರುವ ಬಾಂಡುಗಳ ಮೊತ್ತ 1,716 ಕೋಟಿ ರೂ.ಗಳು. ನಿಜವಾದ ಚುನಾವಣಾ ತಿಂಗಳುಗಳಾದ ಎಪ್ರಿಲ್ ಮತ್ತು ಮೇ ನಲ್ಲಿ ಇದು ಇನ್ನೂ ಹೆಚ್ಚುತ್ತದೆ ಎಂದು ನಿರೀಕ್ಷಿಸಬಹುದು. ಸುಪ್ರಿಂ ಕೋರ್ಟ್ ಈ ಯೋಜನೆಗೆ ತಡೆಯಾಜ್ಞೆ ನೀಡುವ ಮೂಲಕ ಈ ಹರಿವನ್ನಾದರೂ ನಿಲ್ಲಿಸಬಹುದಾಗಿತ್ತು.

ಆಳುವ ಪಕ್ಷಕ್ಕೆ ದೊಡ್ಡ ಕಾರ್ಪೊರೇಟ್‌ಗಳ ಮತ್ತು ಕಾನೂನುಬಾಹಿರವಾದ ಹಣ ನೀಡಿಕೆಯನ್ನು ಕಾನೂನುಬದ್ದಗೊಳಿಸುವ ಈ ಕುಟಿಲ ಯೋಜನೆಯನ್ನು ಸುಪ್ರಿಂ ಕೊರ್ಟ್ ಕೊನೆಗೊಳಿಸುತ್ತದೆ ಎಂದು ಆಶಿಸಬೇಕಾಗಿದೆ.

(ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಪ್ರಕಾಶ ಕಾರಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಸ್ವಾಭಿಮಾನ v/s ಜೀತಗಾರಿಕೆ

Published

on

ಸ್ವಾಭಿಮಾನ ಅಥವಾ ಆತ್ಮಗೌರವ ಅಥವಾ ಸ್ವಂತಿಕೆ… ಹೀಗೆ ಹೇಗೆ ಬೇಕಾದರೂ ಕರೆಯಿರಿ ಅದು ಮಾನವ ಜೀವನದ ಬಹುದೊಡ್ಡ ಅಂಗ ಅಥವಾ ಅಂಶ. ಅದು ಹೇಗಿರುತ್ತದೆ? ಯಾವ ರೂಪದಲ್ಲಿ ಇರುತ್ತದೆ? ಬಹುಶಃ ಅದನ್ನು ಪದಗಳಲ್ಲಿ ಹೇಳುವುದು, ವರ್ಣಿಸುವುದು ಅಸಾಧ್ಯ. ಬದಲಿಗೆ ಬದುಕಿ ತೋರಬೇಕಷ್ಟೆ. ಬದುಕು ಎಂದಾಕ್ಷಣ ಸ್ವಾಭಿಮಾನ ಎಂಬ ಆ ಅಂಶ ಸಂದರ್ಭದ ರೂಪದಲ್ಲಿ ಎದುರಾಗುತ್ತದೆ, ಕಾಲದ ನಿರಂತರ ಪರೀಕ್ಷೆಯಲ್ಲಿ ಅದು ಮತ್ತೆ ಮತ್ತೆ ಎದುರು ಬರುತ್ತದೆ.

ಉದಾಹರಣೆಗೆ ಒಬ್ಬ ಮಹಿಳೆಗೆ ಒಬ್ಬ ಪುರುಷನ ಎದುರು ಸ್ವಾಭಿಮಾನ ಮತ್ತು ಸ್ವಾವಲಂಬನೆ ಸರಿದೂಗಿಸಕೊಳ್ಳುವುದು ಅಥವಾ ಕಾಪಾಡಿಕೊಳ್ಳುವುದು ಕಷ್ಟವಾದರೆ, ಒಬ್ಬ ಬಡವನಿಗೆ ಸಿರಿವಂತನ ಎದುರು ಅದೇ ಸ್ವಾಭಿಮಾನ ಸರಿದೂಗಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ಕಷ್ಟ. ಅಂದಹಾಗೆ ಸ್ವಾಭಾವಿಕವಾಗಿ ಅಲ್ಲಿ ಸಂಘರ್ಷದ ವಾತಾವರಣ ಏರ್ಪಡುತ್ತದೆ ಮತ್ತು ಅಂತಹ ಸಂಘರ್ಷದ ವಾತಾವರಣವನ್ನು ಪರಸ್ಪರರು ನಿಭಾಯಿಸುವುದರ ಮೂಲಕ ಪರಸ್ಪರರ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬಹುದು. ವಾಸ್ತವವೆಂದರೆ ಹೀಗೆಯೇ ಶೋಷಿತ ಸಮುದಾಯಗಳು ಮತ್ತು ಮೇಲ್ವರ್ಗಗಳ ನಡುವೆ ಕೂಡ ಇಂತಹ ಸ್ವಾಭಿಮಾನದ ಪ್ರಶ್ನೆ ಬರುತ್ತದೆ ಎಂಬುದು.

ನಿಜ, ಸ್ವಾಭಿಮಾನದ ಪ್ರಶ್ನೆ ಎದುರಾದಾಗ ಅಲ್ಲಿ ಮತ್ತದೆ ಸಂಘರ್ಷದ ಪ್ರಶ್ನೆ ಕೂಡ ಎದುರಾಗುತ್ತದೆ. “ನಿನ್ನನ್ನು ಮುಟ್ಟಿಸಿಕೊಳ್ಳುವುದಿಲ್ಲ, ನೀನು ಆಚೆ ನಿಲ್ಲು, ನೀನು ದೇವಸ್ಥಾನ ಪ್ರವೇಶಿಸಬೇಡ, ನೀನು ನಮ್ಮ ಬೀದಿ ಪ್ರವೇಶಿಸಬೇಡ, ನೀನು ನಮ್ಮ ಬೀದಿಯ ಕೀಳು ಕೆಲಸಗಳನ್ನು ಮಾಡಲೆಂದೇ ಇರುವುದು, ನೀನು ನಮ್ಮ ಜಮೀನಿನಲ್ಲಿ ಜೀತಮಾಡಲೆಂದೇ ಇರುವುದು…” ಇತ್ಯಾದಿ ಸಂದರ್ಭಗಳು ಶೋಷಿತ ಸಮುದಾಯಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲವು ಸಂದರ್ಭಗಳು. ಹಾಗಂತ ಇಲ್ಲಿ ಸ್ವಾಭಿಮಾನ ಅಡ ಇಡಬೇಕೆ? ಖಂಡಿತ ಸಲ್ಲದು. ಇದನ್ನೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಹೇಳಿದ್ದು “ಸ್ವಾಭಿಮಾನ ಇಲ್ಲದ ಮನುಷ್ಯನ ಬಾಳು ಜೀವಂತ ಶವದಂತೆ” ಎಂದು. ಅರ್ಥಾತ್ ಸ್ವಾಭಿಮಾನ ಗಳಿಸಿಕೊಳ್ಳಲು ಶೋಷಿತ ಸಮುದಾಯಗಳು ನಿರಂತರ ಯತ್ನಿಸಬೇಕು ಎಂಬುದು ಅಂಬೇಡ್ಕರರ ಆಶಯ.

ಈ ಸಂದರ್ಭದಲ್ಲಿ ಇಲ್ಲಿ ಮತ್ತದೇ ಅಂದರೆ ಸಂಘರ್ಷದ ಪ್ರಶ್ನೆ ಬರುತ್ತದೆ. ಏಕೆಂದರೆ ಶೋಷಿತ ಸಮುದಾಯಗಳಿಗೆ ಬಡತನ ಇರುತ್ತದೆ, ಸ್ವಾವಲಂಬನೆಗಾಗಿ ಉದ್ಯೊÃಗ ಇರುವುದಿಲ್ಲ, ಜಮೀನು ಇರುವುದಿಲ್ಲ. ಹಾಗೆಯೇ ಆತನಿಗೆ ಆತನ ಮಾನ-ಪ್ರಾಣದ ಪ್ರಶ್ನೆ ಎದುರಾಗುತ್ತದೆ. ತನ್ನ ಮನೆಯ ಹೆಣ್ಣು ಮಕ್ಕಳ ಮಾನದ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ತನ್ನ ಬಡತನದ ಕಾರಣಕ್ಕಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು, ಉದ್ಯೊÃಗ ಇಲ್ಲದ ಕಾರಣಕ್ಕಾಗಿ ಅವರ ಮುಂದೆ ಕೈಚಾಚಬೇಕಾಗಬಹುದು. ಹಾಗೆಯೇ ತನ್ನ ಮನೆಯ ಹೆಣ್ಣು ಮಕ್ಕಳ ರಕ್ಷಣೆಗಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು.

ಖಂಡಿತ, ಇಂತಹ ಕೈಚಾಚುವಿಕೆಯ ಸಂದರ್ಭ ಬರುತ್ತದೆ ಎಂಬ ಕಾರಣಕ್ಕಾಗಿಯೇ ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಿಸಿದ್ದು. ಬಜೆಟ್‌ನಲ್ಲಿ ಸರ್ಕಾರ ಇವರಿಗೋಸ್ಕರ ಸಾಕಷ್ಟು ಅನುದಾನ ಮೀಸಲಿಡುವ ಪದ್ಧತಿ ಜಾರಿಗೆ ತಂದದ್ದು. ಹಾಗೆಯೇ ಇವರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ, ಸಂಘರ್ಷದ ವಾತಾವರಣ ಮೂಡುತ್ತದೆ, ರಕ್ಷಣೆ ಸಿಗಲಿ ಎಂಬ ಕಾರಣಕ್ಕಾಗಿಯೇ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ರೂಪಿಸುವಿಕೆಗೆ ಸಂವಿಧಾನದಲ್ಲಿ ಅವಕಾಶ ನೀಡಿದ್ದು.

ಅಂದಹಾಗೆ ಇಂತಹ ಸಾರ್ವಜನಿಕ ಅವಕಾಶಗಳನ್ನು ನೀಡಿಸುವುದರಷ್ಟರಲ್ಲಿಯೇ ಅಂಬೇಡ್ಕರ್‌ರವರು ತೃಪ್ತಿ ಹೊಂದಿದರೇ? ಊಹ್ಞೂಂ, ಸ್ವತಃ ಅವರೇ ಸ್ವಾಭಿಮಾನದ ಸಂಕೇತವಾಗಿ ಬದುಕಿದರು. ಉದಾಹರಣೆಗೆ ಯಾವ ಸಮಾಜ ಕನಿಷ್ಠ ಶಿಕ್ಷಣ ಪಡೆಯಲು ಪರದಾಡುತ್ತಿತ್ತೋ ಅಂತಹ ಸಮಾಜದ ಮುಂದೆ ಅಂಬೇಡ್ಕರ್‌ರವರು ಸ್ವತಃ ಸಾಲು ಸಾಲು ಪದವಿಗಳನ್ನು ಪಡೆದರು, ಮಾದರಿಯಾದರು. ಹಾಗೆಯೇ ಯಾವ ಸಮಾಜ ಬರೀ ಹರಿದ, ಚಿಂದಿಯಾದ ಕೊಳಕು ಬಟ್ಟೆಗಳನ್ನು ಧರಿಸಿ ಸಮಾಜದ ಮುಂದೆ ತನ್ನನ್ನು ತಾನಿರುವುದೇ ಹೀಗೆ ಎಂದು ಬಿಂಬಿಸಿಕೊಂಡಿತ್ತೊ ಅಥವಾ ಸಮಾಜ ಹಾಗೆ ಬಿಂಬಿಸಿತ್ತೊ ಅದಕ್ಕೆ ವಿರುದ್ಧವಾಗಿ ಅಂಬೇಡ್ಕರ್‌ರವರು ಸದಾ ಗರಿ ಗರಿ ಕೋಟು ಧರಿಸಿದರು. ಮಾದರಿಯಾದರು. ಹಾಗೆಯೇ ಯಾವ ಸಮಾಜ ತನ್ನ ನಡುವಿನ ಮೇಲ್ವರ್ಗದವರನ್ನು ಸದಾ “ಬುದ್ಧಿ, ಸ್ವಾಮಿ” ಎಂದು ಉಚ್ಛಾರಣೆಯಲ್ಲಿಯೂ ಜೀತಗಾರಿಕೆ ತೋರುತ್ತಿತ್ತೊ, ಸ್ವಾಭಿಮಾನ ಮರೆಯುತ್ತಿತ್ತೊ ಅಂತಹ ಉಚ್ಛಾರಣೆಯ ಜೀತಗಾರಿಕೆಯ ನಡುವೆ ಅಂಬೇಡ್ಕರ್‌ರವರು “ಮಿಸ್ಟರ್, ಸರ್” ಎಂಬ ಪದ ಬಳಸಿದರು. ಉದಾಹರಣೆಗೆ 1932ರಲ್ಲಿ ಅಂದರೆ ಸುಮಾರು 90 ವರ್ಷಗಳ ಹಿಂದೆಯೇ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್‌ರವರು ಸ್ವತಃ ಮಹಾತ್ಮ ಗಾಂಧಿಯವರನ್ನು “ಮಿಸ್ಟರ್ ಗಾಂಧಿ” ಎಂದು ಉಚ್ಛರಿಸಿರುವುದನ್ನು ಅವರ ಬರಹಗಳು ಮತ್ತು ಭಾಷಣಗಳಲ್ಲಿ ನಾವು ಈಗಲೂ ಕಾಣಬಹುದು. ಈ ನಿಟ್ಟಿನಲ್ಲಿ ಹೇಳುವುದಾದರೆ ಅದು ಉಚ್ಛಾರಣೆಯಲ್ಲಿಯೂ ಸ್ವಾಭಿಮಾನದ ಸಂಕೇತಿಸುವಿಕೆಗೆ ಶೋಷಿತ ಸಮುದಾಯಗಳಿಗೆ ಅಕ್ಷರಶಃ ಮಾದರಿಯಾಗುತ್ತದೆ.

ಹಾಗಿದ್ದರೆ ಅಂಬೇಡ್ಕರ್‌ರವರು ಹೀಗೆಲ್ಲ ಕಾನೂನಾತ್ಮಕ ಮತ್ತು ವಯಕ್ತಿಕ ಬದುಕಿನ ಮೂಲಕ ನಮಗೆ ಸ್ವಾಭಿಮಾನದ ದಾರಿ ತೋರಿಸಿದರು ಎಂದಾಕ್ಷಣ ಸ್ವಾಭಿಮಾನ ಸಿಕ್ಕಿಯೇ ಬಿಟ್ಟಿತು ಎಂದರ್ಥವೇ? ಖಂಡಿತ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಂಬೇಡ್ಕರ್‌ರವರು ಹಿಂದೂ ಧರ್ಮದಲ್ಲಿಯೇ ಶೋಷಿತ ಸಮುದಾಯದ ವ್ಯಕ್ತಿಯೋರ್ವ ಉಳಿದರೆ ಆತನ ಮುಂದೆ ಮತ್ತದೇ ಸ್ವಾಭಿಮಾನದ ಸಂಘರ್ಷದ ಸಂದರ್ಭ ಎದುರಾಗುತ್ತದೆ ಎಂದು ಮತಾಂತರದ ಮತ್ತೊಂದು ಹಾದಿ ತೋರಿದರು.

ಮತಾಂತರ, ಅದೊಂದು ಈಗಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದ ಬದಲಾವಣೆಯಷ್ಟೆ ಹೊರತು ಇನ್ನೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಿಯೆಯಲ್ಲ. ಈ ನಿಟ್ಟಿನಲ್ಲಿ ಸ್ವತಃ ಅಂಬೇಡ್ಕರ್‌ರವರು ಬೌದ್ಧ ಧರ್ಮಕ್ಕೆ ತಮ್ಮ 10 ಲಕ್ಷ ಅನುಯಾಯಿಗಳೊಡನೆ ಅ ಕಾಲದಲ್ಲೆ ಮತಾಂತರ ಹೊಂದಿದರು. ಎಲ್ಲಿ ಸ್ವಾಭಿಮಾನವಿಲ್ಲವೋ ಅಲ್ಲಿ ನನ್ನ ಚಪ್ಪಲಿಯನ್ನೂ ಸಹ ಬಿಡುವುದಿಲ್ಲ ಎಂದು ವ್ಯವಸ್ಥೆಗೆ ಸಾರಿ ಹೇಳಿದರು ಮತ್ತು ಹಾಗೆ ಬದುಕಿ ತೋರಿಸಿದರೂ ಕೂಡ. ಅಕ್ಷರಶಃ ಅಂಬೇಡ್ಕರ್‌ರವರು ಅನುಸರಿಸಿದ ಈ ಬೌದ್ಧ ಧರ್ಮದೆಡೆಗಿನ ಮತಾಂತರದ ಹಾದಿ ಕೂಡ ಪ್ರಸ್ತುತದ ಶೋಷಿತ ಸಮುದಾಯಗಳ ಸ್ವಾಭಿಮಾನದ ತಾಕಲಾಟಕ್ಕೆ ಖಂಡಿತ ಉತ್ತರವಾಗುತ್ತದೆ.

ಈ ನಡುವೆ ಬಾಬಾಸಾಹೇಬ್ ಅಂಬೇಡ್ಕರ್‌ರವರ ಬದುಕು ಎಂದಾಕ್ಷಣ ಅಲ್ಲಿ ರಾಜಕೀಯ ಬದುಕಿನ ಪ್ರಶ್ನೆಯೂ ಬರುತ್ತದೆ. ಅಲ್ಲಿಯೂ ಅಷ್ಟೆ ಅಂಬೇಡ್ಕರ್‌ರವರು ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡಿ ಬದುಕಿದರೇ ವಿನಹ ಆಗ ಅಸ್ತಿತ್ವದಲ್ಲಿದ್ದ ಇತರೆ ರಾಜಕೀಯ ಪಕ್ಷಗಳನ್ನು ಅವರು ಸೇರಲಿಲ್ಲ. ಮತ್ತೆ ಹೇಳುವುದಾದರೆ ಇಲ್ಲಿಯೂ ಅವರಿಗೆ ಎದುರಾದದ್ದು ಮತ್ತದೇ ಸ್ವಾಭಿಮಾನದ ಪ್ರಶ್ನೆ.

ಹೀಗಿರುವಾಗ, ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗೆ ಒದಗಿಸಿಕೊಟ್ಟ ಹಕ್ಕುಗಳು ಮತ್ತು ಅವರು ಬದುಕಿದ ರೀತಿ ಹೀಗಿರುವಾಗ ಅಂದರೆ ಸ್ವಾಭಿಮಾನದ ದಿಟ್ಟ ಮಾರ್ಗವಾಗಿರುವಾಗ ಶೋಷಿತ ಸಮುದಾಯಗಳು ಪ್ರಸ್ತುತ ಹೇಗೆ ಬದುಕಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸ್ವಾಭಿಮಾನದ ನಡೆಗಳಿಗೆ ವಿರುದ್ಧವಾಗಿ ರಾಜಿಯಾಗಬೇಕೆ? ಆತ್ಮಗೌರವ ಮಾರಿಕೊಳ್ಳಬೇಕೆ? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಅಕ್ಷರಶಃ ಹೇಳುವುದಾದರೆ ಶೋಷಿತ ಸಮುದಾಯಗಳು ಸ್ವಾಭಿಮಾನಕ್ಕೆ, ಸ್ವಾಭಿಮಾನ ಉಳಿಸಿಕೊಳ್ಳುವ ದಿಕ್ಕಿನಲ್ಲಿ ಎಂದಿಗೂ ರಾಜಿಯಾಗಬಾರದು ಎಂಬುದು.

ಹಾಗಿದ್ದರೆ ಸಂಘರ್ಷ? ಉತ್ತರ: ಸಂಘರ್ಷದ ವಾತಾವರಣದಿಂದ ದೂರ ಸರಿಯಬೇಕಷ್ಟೆ. ಉದಾಹರಣೆಗೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳಿಗಾಗಿ ಪ್ರತ್ಯೇಕ ಹಳ್ಳಿಗಳ ವ್ಯವಸ್ಥೆ ಮಾಡಬೇಕು ಎಂದಿದ್ದರು. ಇದರರ್ಥ ಹಿಂದೂಗಳೊಡಗಿನ ಸಂಘರ್ಷದಿಂದ ಮುಕ್ತರಾಗುವುದೇ ಆಗಿತ್ತು. ಹಾಗೆಯೇ ಅಸಮಾನ ಸಾಮಾಜಿಕ ವಾತಾವರಣದಿಂದ ಹೊರಬರಲು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿ ತಮ್ಮಿಷ್ಟ ಬಂದ ಉದ್ಯೋಗ ಅನುಸರಿಸುವುದು… ಇದೂ ಕೂಡ ಸ್ವಾಭಿಮಾನದ ಮಾರ್ಗವಾಗಿದೆ. ಹಾಗೆಯೇ ಧಾರ್ಮಿಕ ಸ್ವಾಭಿಮಾನಕ್ಕೆ ಧಕ್ಕೆ. ಮೊದಲೇ ಹೇಳಿದ ಹಾಗೆ ಇದಕ್ಕೂ ಕೂಡ ಅಂಬೇಡ್ಕರರು ತೋರಿದ ಬೌದ್ಧ ಧರ್ಮದ ಪರಿಹಾರವಿದೆ. ಇನ್ನು ರಾಜಕಾರಣ, ಅಲ್ಲಿಯೂ ಕೂಡ ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡುವ ಪರಿಹಾರವಿದೆ. ಇನ್ನು ಶಿಕ್ಷಣ, ಉದ್ಯೋಗ, ಉತ್ತಮ ಬದುಕು, ಉತ್ತಮ ಮಾತುಕತೆಯ(ಮೇಲ್ವರ್ಗದವರೊಡನೆ) ಶೈಲಿ, ಉತ್ತಮ ಆರೋಗ್ಯ… ಇವೆಲ್ಲವೂ ಕೂಡ ಸ್ವಾಭಿಮಾನದ ಬದುಕಿನ ವಿವಿಧ ಮಾದರಿಗಳಾಗಿವೆ. ಅಂಬೇಡ್ಕರರು ಬದುಕಿದ ರೀತಿಗಳಾಗಿವೆ.

ಹಾಗಿದ್ದರೆ ಇಂತಹ ಸ್ವಾಭಿಮಾನ ಮತ್ತು ಅದಕ್ಕೆ ವಿರುದ್ಧವಾದ ಪರಿಕಲ್ಪನೆಯಾದ ಜೀತಗಾರಿಕೆ ಅರ್ಥಾತ್ ಗುಲಾಮಗಿರಿಯ ಬದುಕು ಇವುಗಳ ನಡುವೆ ಅಂತಹ ವ್ಯತ್ಯಾಸವೇನಿದೆ ಎಂಬ ಪ್ರಶ್ನೆ ಬರುತ್ತದೆ. ಉತ್ತರವೇನೆಂದರೆ ಅವೆರಡರ ಅಂದರೆ ಸ್ವಾಭಿಮಾನ ಮತ್ತು ಜೀತಗಾರಿಕೆಯ ನಡುವಿನ ಅಂತರ ತುಂಬಾ ತೆಳುವಾದದ್ದು ಎಂಬುದು. ಹಾಗಿದ್ದರೆ ಅದರ ವ್ಯಾಖ್ಯಾನ? ಖಂಡಿತ, ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಬದುಕುವ ರೀತಿಯ ಮೇಲೆ ಅದು ನಿರ್ಧರಿತವಾಗುತ್ತದೆ. ಅಂದರೆ ಹೆಜ್ಜೆ ಹೆಜ್ಜೆಗೂ ಶೋಷಿತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ತಾನು ಜೀತಗಾರಿಕೆಗೆ ಬೀಳುವುದಿಲ್ಲ ಅಥವಾ ತನ್ನ ಸಮುದಾಯವನ್ನು ಬೀಳಿಸುವುದಿಲ್ಲ, ಬದಲಿಗೆ ಸ್ವಾಭಿಮಾನದಿಂದ ಬದುಕುತ್ತೇನೆ, ಆ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂಬ ಪ್ರಜ್ಞೆ ಇರಬೇಕು. ನಿಜ ಇದು ಕಷ್ಟದ ಹಾದಿ. ಆದರೆ ಅನಿವಾರ್ಯದ ಹಾದಿ ಕೂಡ ಇದಾಗಿದೆ. ಹಾಗೆಯೇ ಇದು ಬರೀ ಸಿದ್ಧಾಂತವಲ್ಲ. ಬದಲಿಗೆ ನಿರಂತರ ಪ್ರಾಯೋಗಿಕವಾದುದು. ಹಾಗೆ ಇದು ಯಾರೋ ಒಬ್ಬರಿಗೆ ಅಥವಾ ಶೋಷಿತ ಸಮುದಾಯಗಳೊಳಗೆ ಬರುವ ಯಾವುದೋ ಒಂದು ಉಪಜಾತಿಗೆ ಅನ್ವಯವಾಗುತ್ತದೆಯೆಂಬಂತೆಯಲ್ಲ. ಬದಲಿಗೆ ಎಲ್ಲಾ ಉಪಜಾತಿಗಳಿಗೆ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಇದು ಅನ್ವಯವಾಗುತ್ತದೆ.ಉದಾಹರಣೆಗೆ ಮಲ ಹೊರುವ, ಶೌಚಾಲಯ ಶುಚಿಗೊಳಿಸುವ ವೃತ್ತಿಯಲ್ಲಿ ಅಂತಹ ಸ್ವಾಭಿಮಾನದ ಅಂಶವೇನಿದೆ? ಖಂಡಿತ ಇಲ್ಲ. ಪರಿಹಾರ ಅಂತಹ ವೃತ್ತಿಗಳನ್ನು ಮಾಡುವುದನ್ನು ಕೈಬಿಡುವುದೇ ಆಗಿದೆ.

ಆದ್ದರಿಂದ ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಇಂತಹ ಪಾಠ ಕಲಿಯಬೇಕಿದೆ. ಆ ಮೂಲಕ ಸಮಾನತೆಯ ಬದುಕಿನೆಡೆಗೆ ದಿಟ್ಟ ಹೆಜ್ಜೆ ಇಡಬೇಕಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಯುದ್ಧದಾಹಿ ಕೋದಂಡ ರಾಮ ನಮ್ಮ ರಾಮನಲ್ಲ..!

Published

on

ರಾಮನು ಸೀತಾ ಸ್ವಯಂವರದಲ್ಲಿ ಶಿವಧನಸ್ಸನ್ನು ಎದೆಯ ಮೇಲೇರಿಸಿಕೊಂಡು ಮುರಿಯುವ ಮೂಲಕ ಸೀತೆಯನ್ನು ಗೆದ್ದುಕೊಂಡು ಶಿವ ಸಂಸ್ಕೃತಿಯ ಮೇಲೆ ಬಲವಾದ ಪ್ರಹಾರ ನೀಡಿ ಆರ್ಯ ಸಂಸ್ಕೃತಿಯ ಸೌಧವನ್ನು ಕಟ್ಟಲು ಮುಂದಾದವನು. ಶಿವಧನಸ್ಸನ್ನು ಮುರಿಯುವುದೆಂದರೆ ಶಿವಸಂಸ್ಕೃತಿಯ ಮೂಲದ ಸೀತೆಯ ಪ್ರೀತಿಯನ್ನು ಪಡೆಯುವ ಬದಲಾಗಿ ಅವಳ ದೇಹದ ಮೇಲೆ ಪುರುಷನ ಹಕ್ಕು ಸ್ಥಾಪಿಸುವುದೆಂದೇ ಅರ್ಥ. ರಾವಣನು ಸೀತೆಯ ದೇಹದ ಮೇಲೆ ಯಾವುದೇ ಹಕ್ಕು ಸ್ಥಾಪಿಸದಿದ್ದರೂ ಅವಳಾಗಿಯೇ ರಾವಣನ ಚಿತ್ರವನ್ನು ಬರೆದು ತನ್ನ ಹೃದಯದಲ್ಲಿ ಅಚ್ಚೊತ್ತಿಕೊಂಡವಳು ಸೀತೆ. ಮಹಿಳಾ ಪ್ರಧಾನವಾದ ಸಂಸ್ಕೃತಿಯನ್ನು ನಾಶಮಾಡಿ ಪುರುಷ ಪ್ರಧಾನ ಬೀಜಗಳ ಬಿತ್ತನೆ ಪ್ರಾರಂಭವಾದದ್ದು ರಾಮನಿಂದಲೇ ಅನ್ನಿಸುತ್ತಿದೆ.

ಪುರುಷ ನಿರ್ಮಿತವಾದ ಲಕ್ಷ್ಮಣರೇಖೆಯನ್ನು ದಾಟಿ ರಾವಣನೊಂದಿಗೆ ಹೋಗುವುದೆಂದರೆ ಸೀತೆಯಲ್ಲಿರುವ ದ್ರಾವಿಡ ಪ್ರಧಾನ ಮಾತೃ ಸಂಸ್ಕೃತಿಯ ಲಕ್ಷಣದ ಪ್ರತೀಕವಾಗಿ ಕಾಣಿಸುತ್ತದೆ. ಸೀತೆಯನ್ನು ಅರಸಿ ಹೊರಟ ರಾಮನು ತಲುಪುವುದು ಅಶೋಕ ವನವನ್ನು. ಅಶೋಕ ಎಂಬುದು ಬೌದ್ಧ ನಾಯಕನ ಹೆಸರು. ಭಾರತ ದೇಶವನ್ನು ಮಸ್ಕಿ ಶಾಸನದಲ್ಲಿ ‘ಜಂಬೂದ್ವೀಪ’ ಎಂದು ಕರೆದಿರುವ ದೇವನಾಂಪ್ರಿಯ ಅಶೋಕ ಒಬ್ಬ ಬೌದ್ಧ ದೊರೆ. ರಾಮನು ತಲುಪುವ ಅಶೋಕ ವನವು, ಸಾಮ್ರಾಟ ಅಶೋಕನಿಗೂ ಪೂರ್ವದಲ್ಲಿದ್ದ, ಅಷ್ಟೇ ಏಕೆ ರಾವಣನಿಗೂ ಪೂರ್ವದಲ್ಲಿದ್ದ ಬೌದ್ಧ ನಾಯಕನಾದ ಅಶೋಕನ ಹೆಸರಿನದ್ದಾಗಿರಲು ಸಾಧ್ಯವಿದೆ. ಆ ಅಶೋಕನ ಧರ್ಮ ಬೌದ್ಧ ಧರ್ಮವೇ ಆಗಿದ್ದು ಅವನು ನಿಸರ್ಗದ ನಡುವೆ ಶಿವನನ್ನು ನಿಸರ್ಗದ ನಿರ್ಗುಣ ತತ್ವದಲ್ಲಿ ಉಪಾಸನೆ ಮಾಡುವವನಾಗಿದ್ದಾನೆ.

ರಾಮನ ರಾಜ್ಯದಲ್ಲಿ ಶಂಭೂಕ ಮುನಿಯನ್ನು ಹತ್ಯೆಗಯ್ಯುವಂತಹ ಜಾತಿ – ವರ್ಣ ಪದ್ದತಿ ಇದ್ದರೆ ರಾವಣನ ರಾಜ್ಯದಲ್ಲಿ ಜಾತಿ – ವರ್ಣ ಪದ್ಧತಿ ಇರುವುದಿಲ್ಲ. ಬುದ್ಧನ ಧಮ್ಮದಲ್ಲಿಯೂ ಜಾತಿ- ವರ್ಣ ಪದ್ದತಿ ಇರುವುದಿಲ್ಲ. ಬುದ್ಧನ ಸಮಾಜದಲ್ಲಿ ಜಾತಿವರ್ಣಗಳ ವಿಷಬೀಜವನ್ನು ಬಿತ್ತಿ ದ್ವಿಜ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದವರೇ ವೈದಿಕಶಾಹಿ ಆರ್ಯರು. ಅದನ್ನು ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಕೈಗೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ. ಇದೇ ಆರ್ಯರು ರಾವಣನ ಲಂಕೆಯಲ್ಲಿಯೂ ಜಾತಿ- ವರ್ಣಗಳೆಂಬ ವಿಷಬೀಜವನ್ನು ಬಿತ್ತಲು ಹೋದರು. ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಲಂಕೆಯಲ್ಲಿಯೂ ಕೈಗೊಳ್ಳುವ ಮೂಲಕ ಲಂಕೆಯ ಕಾಡು ಜನರಿಗೆ ಮತ್ತು ಜೀವಮಂಡಲಕ್ಕೆ ಅನೇಕ ರೀತಿಯಲ್ಲಿ ಕೇಡುಗಳನ್ನು ತಂದೊಡ್ಡಿದರು.

ಇಂತಹ ಶಿವಸಂಸ್ಕೃತಿ ವಿರೋಧಿ ವಿಷಕಾರಕ ಆರ್ಯ ನಾಯಕರಿಗೂ ಲಂಕೆಯ ಮೂಲ ನಿವಾಸಿಗಳಿಗೂ ದೊಡ್ಡ ಸಂಘರ್ಷವೇ ನಡೆಯಿತು. ಈ ಸಂಘರ್ಷದಲ್ಲಿ ರಾವಣನ ಮಗನಾದ ಮೇಘನಾದನು ಆರ್ಯ ಪ್ರಧಾನ ನಾಯಕನಾದ ಇಂದ್ರನನ್ನು ಕೊಂದು ‘ಇಂದ್ರಜಿತ್’ ಎಂದು ಬಿರುದಾಂಕಿತನಾದ. ಹೀಗಾಗಿ ಶಿವ ಸಂಸ್ಕೃತಿಯ ಪ್ರಧಾನ ನೆಲೆ ದಕ್ಷಿಣವೇ ಆಗಿದ್ದು ದಕ್ಷಿಣ ಭಾರತದಲ್ಲಿ ಪ್ರಧಾನವಾಗಿ ಶೈವಾರಾಧಕರು ಸಾಂಧ್ರವಾಗಿ ನೆಲೆಸಿದ್ದಾರೆ. ಉಪಾಸನಾ ಪ್ರಜ್ಞೆಯ ಕೇಂದ್ರದಲ್ಲಿರಬೇಕಾದದ್ದು ಸಕಲ ಜೀವಮಂಡಲದ ಸಂರಕ್ಷಕನೂ ಅರ್ಧನಾರೀಶ್ವರ ಸಮಾನತಾಭಾವದ ಮಹಿಳಾಪರ ಶಿವನೇ ಹೊರತು, ಯಜ್ಞ ಯಾಗ ಹೋಮ ಹವನಗಳ ಆಚರಣೆಗಳಿಂದ ಪ್ರಕೃತಿಗೂ ಜೀವಮಂಡಲಕ್ಕೂ ವಿಜ್ಞಗಳನ್ನುಂಟುಮಾಡುವ ಜೀವವಿರೋಧಿಯೂ ಮತ್ತು ಗರ್ಭವತಿ ಸೀತೆಯನ್ನು ಕಾಡಿಗಟ್ಟಿದ ಅಥವಾ ಹೆಣ್ಣನ್ನು ಬೆಂಕಿಗೆ ನೂಕಿದ ಮಹಿಳಾ ವಿರೋಧಿಯೂ ಆದ ರಾಮನಲ್ಲ.

ಇವೊತ್ತು ನಾವೆಲ್ಲರೂ ತಿಳಿಯಬೇಕಾದ ಸಂಗತಿಯೆಂದರೆ, ದಕ್ಷಿಣ ಏಷ್ಯಾದ ಸಾಕ್ರೆಟಿಸ್‌ ಎಂದು ವಿಶ್ವಸಂಸ್ಥೆಯಿಂದಲೇ ಕರೆಸಿಕೊಂಡ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು “ತುಂಬಿದ ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಅಟ್ಟಿದ, ಸೂರ್ಪನಖಿಯ ಮೂಗು ಮುಂದಲೆ ಮೊಲೆಗಳನ್ನು ತನ್ನ ಸಹೋದರ ಲಕ್ಷ್ಮಣನಿಂದಲೇ ಕತ್ತರಿಸಿ ಮಹಿಳೆಯನ್ನು ಅವಮಾನಪಡಿಸಿದ ಶ್ರೀರಾಮನನ್ನು ಸ್ತ್ರೀಕುಲ ಯಾವೊತ್ತಿಗೂ ಕ್ಷಮಿಸಬಾರದು” ಎಂದು ಕರೆ ನೀಡಿದ್ದರು. ಮಹಿಳೆಯರು ರಾಮನಿಗಿಂತಲೂ ರಾವಣನು ಸ್ತ್ರೀಪರ ಎಂಬುದನ್ನು ಗ್ರಹಿಸುವ ಅಗತ್ಯವಿದೆ.

ಕೋಲಾರ ಜಿಲ್ಲೆಯ ವಕ್ಕಲೇರಿ ಗ್ರಾಮದಲ್ಲಿ ರಾವಣನ ಗುಡಿ ಇದೆ. ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಜನ ರಾವಣೋತ್ಸವ ಜಾತ್ರೆ ನಡೆಸುತ್ತಾ ಬಂದಿದ್ದಾರೆ. ಚಾಮರಾಜನಗರ ಜಿಲ್ಲೆಯ ತಲಕಾಡಿನ ಸಮೀಪ ರಾವಣಿ ಎಂಬ ಊರು ಇದೆ.ಈ ಭಾಗದಲ್ಲಿ ರಾವಣನ ದೇವಾಲಯಗಳಿದ್ದು, ಇಲ್ಲಿನ ದಲಿತರು ಮತ್ತಿತರ ತಳಜಾತಿಗಳಿಗೆ ರಾವಣನು ಆರಾಧನೆಯ ವ್ಯಕ್ತಿಯಾಗಿರುವನೇ ಹೊರತು ರಾಮನಲ್ಲ. ಈ ಸೀಮೆಯ ದಲಿತರು ಮದುವೆ ಸಂಬಂಧ ಬೆಳೆಸುವಾಗ ” ನಮ್ಮದು ರಾವಣನ ಕುಲ. ಸಿಲೋನ್ ತಳ” ಎಂದು ಪರಸ್ಪರ ಪರಿಚಯ ಹೇಳಿಕೊಳ್ಳುತ್ತಾರೆ.

ಗಾಂಧೀಜಿಯವರ ಎದೆಯ ಉಸಿರಾಗಿದ್ದವನು ಜನಪದರ ರಾಮ.‌ ಜನಪದರ ರಾಮನು ಆರ್ಯರು ಚಿತ್ರಿಸಿರುವಂತೆ ಯುದ್ಧ ಪಿಪಾಸುವಾಗಿಲ್ಲ. ಸ್ತ್ರೀ ಮತ್ತು ಜೀವ ವಿರೋಧಿ ಅವನಲ್ಲ. ರಾಮ ಲಕ್ಷ್ಮಣ ಸೀತೆ ಸದಾ ಅನ್ಯೋನ್ಯವಾಗಿದ್ದು ಜೊತೆ ಬಿಟ್ಟಗಲದೆ ಸರ್ವೋದಯವನ್ನು ಬಯಸುವ ರಾಮನೇ ಗಾಂಧೀಜಿಯ ಎದೆಯೊಳಗಿದ್ದ ರಾಮ. ಆದರೆ ಆರ್ಯರ ರಾಮ ಸದಾ ಯುದ್ಧಾಸ್ತ್ರವನ್ನು ಎದೆಗೇರಿಸಿ ಶತೃ ಸಂಹಾರಕ್ಕಾಗಿ ಏಕಾಂಗಿ ರಣಾಗ್ರಣಿಯಂತೆ ನಿಂತಿರುತ್ತಾನೆ. ಈಗಲೂ ದುಡಿಮೆಗಾರ ಜನವರ್ಗಗಳು ಮತ್ತು ಜೀವಪರ ಮನಸ್ಸುಗಳಲ್ಲಿ ಮಿಡಿಯುತ್ತಿರುವುದು ಸೀತಾ ಲಕ್ಷ್ಮಣ ಹನುಮಂತ ಸಮೇತನಾದ ಜನಪದರ ಜನಪರ ರಾಮನೇ ಹೊರತು, ಯುದ್ಧದಾಹಿ ಏಕಾಂಗಿ ಕೋದಂಡ ರಾಮನಲ್ಲ ಎಂಬುದನ್ನು ಮರೆಯದಿರೋಣ.

ಡಾ.ವಡ್ಡಗೆರೆ ನಾಗರಾಜಯ್ಯ
8722724174

Continue Reading
Advertisement

Trending