Connect with us

ಅಂತರಂಗ

‘ಬಿಳಿಮಲೆ’ ಎಂಬ ಊರಿನಲ್ಲಿ ಒಂದು ದಿನ..!

Published

on

  • ಹರ್ಷಕುಮಾರ್ ಕುಗ್ವೆ

ಪ್ರೊ.ಪುರುಷೋತ್ತಮ ಬಿಳಿಮಲೆ ಸರ್ ಅವರ “ವಲಸೆ ಸಂಘರ್ಷ ಮತ್ತು ಸಮನ್ವಯ” ಸಂಶೋಧನಾ ಹೊತ್ತಗೆಯ ಬಿಡುಗಡೆ ಕಾರ್ಯಕ್ರಮ ಅವರ ಊರಾದ ಬಳಿಮಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾನೂ ಹೋಗಿ ಬಂದೆ. ಈ ಒಂದು ದಿನದ ಕಾರ್ಯಕ್ರಮ ಮತ್ತು ಜರ್ನಿ ಬಹುಕಾಲ ನೆನಪಿನಲ್ಲಿ ಉಳಿಯುವ ಅನುಭವ ನೀಡಿದವು.

ನಾವು ನಮ್ಮ ಹುಟ್ಟೂರು ಬಿಟ್ಟು ಓದು-ಉದ್ಯೋಗ ಎಂದು ಬೇರೆ ಊರುಗಳಿಗೆ ವಲಸೆ ಹೋದಾಗ ಸಾಮಾನ್ಯವಾಗಿ ಏನು ಮಾಡ್ತಿರುತ್ತೇಬೆ ಎಂದು ನಮ್ಮ ಊರುಗಳ ಜನರಿಗೆ ನಮ್ಮ ಬಗ್ಗೆ ಏನೂ ತಿಳಿದಿರುವುದಿಲ್ಲ. ಆದರೆ ಹೊರಕ್ಕೆ ಹೋಗಿ ಸ್ವಲ್ಪ ಹೆಸರುಗಳಿಸಿಕೊಂಡ ಮೇಲೆ ಊರಿನ ಜನರಿಗೆ ನಮ್ಮ ಬಗ್ಗೆ ಒಂದು ಬಗೆಯ ಅಭಿಮಾನವಿರುತ್ತದೆ. ನಮಗೂ ಅಷ್ಟೇ, ಊರಿನ ಬಗ್ಗೆ ತುಸು ಹೆಚ್ಚೇ ಅಭಿಮಾನ ಪುಳಕಗಳಿರುತ್ತವೆ. ಇಂತಹುದೇ ಒಂದು ಪುಳಕದಿಂದ ಪುರುಷೋತ್ತಮ ಬಿಳಿಮಲೆ ಸರ್ ತಮ್ಮ ಸೋದರರೊಂದಿಗೆ ಸೇರಿಕೊಂಡು ಈ ಸಮಾರಂಭ ಏರ್ಪಡಿಸಿದ್ದರು. ಅವರ ಪುಸ್ತಕವನ್ನು ದೆಹಲಿಯಲ್ಲೋ ಅಥವಾ ಬೆಂಗಳೂರಿನಲ್ಲೋ ಜೋರಾಗಿಯೇ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಳಿಮಲೆಯಲ್ಲೇ ಅವರ ಕುಟುಂಬ ವರ್ಗದವರೇ ಮುಂದೆ ನಿಂತು, ಉರಿನವರೆಲ್ಲಾ ತಮ್ಮದೇ ಕಾರ್ಯಕ್ರಮವೆಂಬಂತೆ ನಡೆಸಿದ ಅದ್ಭುತ ಕಾರ್ಯಕ್ರಮ ಅದಾಗಲು ಸಾಧ್ಯವೇ ಇರಲಿಲ್ಲ. ಒಂದು ಮದುವೆ ಕಾರ್ಯಕ್ರಮದಲ್ಲಿ ಇರಬಹುದಾದ ಸಂಭ್ರಮ, ಸಡಗರ, ಜವಾಬ್ದಾರಿ ಎಲ್ಲವೂ ಈ ಕೂಡುಕುಟುಂಬದ ಸಾಹಿತ್ಯಕ ಕಾರ್ಯಕ್ರಮದಲ್ಲಿದ್ದವು. ಮನೆಯ ಎಲ್ಲಾ ಸದಸ್ಯರೂ ಒಂದಿಲ್ಲೊಂದು ಜವಾಬ್ದಾರಿ ಹೊತ್ತು ಬಂದಿದ್ದ ಅತಿಥಿಗಳಿಗೆ ಯಾವುದಕ್ಕೂ ಕೊರತೆಯಾಗ ರೀತಿಯಲ್ಲಿ ನೋಡುತ್ತಿದ್ದರು. ಬಿಳಿ ಬಿಳಿಮಲೆ ಸರ್ ಅವರ ಬಾಳಸಂಗಾತಿ ಶೋಭನ ಮೇಡಂ ಅವರು ಪ್ರತಿಯೊಬ್ಬರನ್ನೂ ಪ್ರೀತಿ-ಕಾಳಜಿಯಿಂದ ಮಾತಾಡಿಸುತ್ತಿದ್ದರು. ಕರ್ನಾಟಕದ ದೂರ ದೂರದ ಊರುಗಳಿಂದ ಬಂದು ಈ ಕಾಡಿನ ನಡುವೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರಿಗೆ ವಿಶೇಷ ಆತಿಥ್ಯ ಮತ್ತು ವಿಶಿಷ್ಟ ಅನುಭವ ದೊರಕಿದವು.

ಕುಟುಂಬ, ಊರಿನ ಜನರು ಮತ್ತು ಸಾಹಿತ್ಯಾಸಕ್ತರನ್ನು ಒಂದೆಡೆ ಕಲೆಯುವಂತೆ ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾದಷ್ಟೂ ಒಳ್ಳೆಯ ಪರಿಣಾಮ ಪ್ರಭಾವವನ್ನು ಸಮಾಜದಲ್ಲಿ ಬೀರಬಹುದು ಎನಿಸಿತು.

ಸಮಾರಂಭದಲ್ಲಿ ಒಳ್ಳೆಯ ಊಟವಿತ್ತು. ಪಂದಿಕರಿ ಸಕತ್ ಟೇಸ್ಟಿಯಾಗಿತ್ತು. ಲೋಕೇಶ್ ಊರುಬೈಲು ಮತ್ತು ಸಂಗಡಿಗರ ಹಾಡುಗಾರಿಕೆ ಮುದ ನೀಡಿತು. ತುಳು ಪಾಡ್ದನ, ಕೋಲಾಟ ಪದ, ಅರೆಬಾಷೆಯ ಸೋಬಾನೆ ಹಾಡು, ಸಿದ್ದವೇಷದ ಹಾಡುಗಳು ತರತರದಲ್ಲಿ ರಂಜಿಸಿದವು. ಅದೇ ಹುರುಪಿನಲ್ಲಿ ಅವರ ಹಾಡಿಗೆ‌ ಹೆಜ್ಜೆಯನ್ನೂ ಹಾಕಿದೆವು.
ರಾತ್ರಿಯಲ್ಲಿ ನಾವೊಂದಷ್ಟು ಜನ ಪುರುಷೋತ್ತಮ ಸರ್ ಜೊತೆಗೂಡಿ ನಡೆಸಿದ ಕತ್ತಲ ನಡಿಗೆ, ಆ ನಡಿಗೆಯ ಹರಟೆ, ನೀರವ ಮೌನ ಮತ್ತು ಹಾಡುಗಳು ನೆನಪಲ್ಲಿ ಉಳಿಯುವಂತವು.

ಮಾತಿಗೆ ಸಿಕ್ಕಿದ ಗೆಣೆಕಾರರು

ಈ ಒಂದು ದಿನದ ವಲಸೆಯಲ್ಲಿ ಹಲವಾರು ಗೆಳೆಯರು ಮಾತಿಗೆ ಸಿಕ್ಕಿದ್ದು ಖುಶಿ ನೀಡಿತು. ವಿಶೇಷವಾಗಿ ನಮ್ಮ ಶಿವಮೊಗ್ಗದ ಪುನೀತ್ ನನಗೆ ನಮ್ಮ ಭರತ್ ದಾಸರಹಳ್ಳಿಯನ್ನೇ ನೆನಪಿಸುತ್ತಿದ್ದ.. ಇಬ್ಬರನ್ನೂ ಅಕ್ಕಪಕ್ಕ ನಿಲ್ಲಿಸಿದ್ರೆ ಯಾರು ಭರತ್, ಯಾರು ಪುನೀತ್ ಎಂದು ಕನ್ಪೂಸ್ ಆಗಬಹುದು! ಇಲ್ಲಿ ಪರಿಚಯವಾದ ನವ್ಯ ನಮ್ಮ ತರಲೆ ದೋಸ್ಸ್ ನವ್ಯಾ ಕಡಮೆಯ ತಂಗಿಯೇನೋ ಅನ್ನಿಸುವಂತಿದ್ದಳು‌. ಆದ್ರೆ ಈ ಜ್ಯೂನಿಯರ್ ನವ್ಯಾಗೆ ನವ್ಯ ಕಡಮೆಯಷ್ಟು ಚೆನ್ನಾಗಿ ಫೋಟೋ ಪೋಸ್ ಕೊಡಲು ಬರ್ತಾ ಇರಲಿಲ್ಲ ಅಷ್ಟೇ! ಈ ಜ್ಯೂನಿಯರ್ ನವ್ಯಾಳ ಅಕ್ಕನ ಹೆಸರೂ ಕಾವ್ಯ! ಇನ್ನು ಕೊಟ್ಟೂರಿನ ಚಂದದ ಗೆಳೆಯ ಕೊಟ್ರೇಶ್ ಅಂತೂ ಒಂದೇ ದಿನಕ್ಕೆ ಬಹಳ ಆತ್ಮೀಯನಾಗಿಬಿಟ್ಟ. ನಮ್ ಬಾರುಕೋಲು ರಂಗಸ್ವಾಮಿಯವರ ಜೊತೆ ತಾಸಿಗೂ ಹೆಚ್ಚು ಮಾತುಕತೆಯಾಡಿದ್ವಿ. ನಡುವೆ ಸೇರಿಕೊಂಡ ಮೈಸೂರಿನ ಅಶ್ವಥ್ ಅವರು ನಮ್ಮ ಮಾತುಕತೆಗೆ ತಾಳಮದ್ದಲೆಯ ಮೆರುಗು ನೀಡಿದರು. ಆದರೆ ನಮ್ಮ ಮಾತುಕತೆಯ ವಿಷಯ ವಸ್ತು ಚಳುವಳಿ ಹೋರಾಟ, ಪತ್ರಿಕೆ ಕೆಲಸ ಇತ್ಯಾದಿಯಾಗಿತ್ತು. ಸ್ಥಳೀಯರಾದ ಚರುಂಬು ಮತ್ತು ಡೇವಿಡ್ ಚಾರ್ಲಿಯರೊಂದಿಗೆ ಸುಮಾರು ಹೊತ್ತು ಮಾತಾಡಿದೆ.

ಸುಮಾರು ಒಂದು ದಶಕದ ನಂತರ ಸಿಕ್ಕಿ ಆತ್ಮೀಯವಾಗಿ ಮಾತಾಡಿಸಿದ ಸುಕನ್ಯಾ ಕನಾರಳ್ಳಿ ಅವರನ್ನು ಮೊದಲಿಗೆ ನಾನು ಗುರುತೇ ಹಿಡಿಯಲಾಗಲಿಲ್ಲ. “ನೀವು ವಿಜಯ ನೆಕ್ಸ್ಟ್ ನಲ್ಲಿದ್ದಾಗ ಬಂದು ನನ್ನ ಸಂದರ್ಶನ ಮಾಡಿದ್ದಿರಿ, ಲಿವಿಂಗ್ ಟುಗೆದರ್ ಕುರಿತ ಲೇಖನಕ್ಕೆ” ಎಂದು ಅವರು ಹೇಳಿದಾಗ ಟಕ್ ಅಂತ ಫ್ಲಾಶ್ ಆಯಿತು. ಆಗ “ಓ ಸುಕನ್ಯಾ ಮೇಡಂ” ಅಂದಾಗ “ಹೌದೂ” ಎಂದರು. ಹೊರಡುವಾಗ ಅವರು ಇತ್ತೀಚೆಗೆ ಅನುವಾದಿಸಿರುವ “ಬರ್ತೀಯ…ಎಷ್ಟು? ಭಾರತೀಯ ಸೂಳೆಲೋಕದ ಕಥೆಗಳು” ಎಂಬ ಪುಸ್ತಕವನ್ನು ಕೊಟ್ಟರು. ಅದನ್ನು ಅನುವಾದಿಸುವಾಗಿನ ಅವರು ಪಟ್ಟ ಯಾತನೆಯನ್ನೂ ಸಹ ಹೇಳಿದರು. ಈ ಸಮಯದಲ್ಲಿ ತಾವು ಮಾನಸಿಕ ಖಿನ್ನತೆಗೆ ಜಾರಿ anti-depressant ತೆಗೆದುಕೊಳ್ಳಬೇಕಾಯಿತು ಎಂದರು. ಈ ಪುಸ್ತಕದ ಬಗ್ಗೆ ಮೊದಲೇ ಬಿಳಿಮಲೆ ಸರ್ ಕೂಡಾ ತಿಳಿಸಿ ಓದಲೇಬೇಕಾದ, ತೀರಾ disturb ಮಾಡುವ ಪುಸ್ತಕ ಎಂದಿದ್ದು ನೆನಪಾಯಿತು.

ಆತ್ಮೀಯರಾದ ಸುಂದರ್ ಕೆನಾಜೆ ಸರ್ ಅವರೊಂದಿಗೆ ಆಡಿದ ಚುಟುಕು ಮಾತುಕತೆ ಜಾನಪದ-ಪಾಡ್ದನ ಇತ್ಯಾದಿಗಳ ಕುರಿತಾಗಿತ್ತು. ಸಕಲೇಶಪುರದಿಂದ ಬಂದಿದ್ದ ಪ್ರಸಾದ್ ರಕ್ಷಿದಿ ಸರ್ ಹೀಗೇ ಅನೇಕ ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರಾದರೂ ಈ ಸಲ ಸ್ವಲ್ಪ ಹೆಚ್ಚು ಕಾಲ ಅವರ ಮಾತನ್ನು ಕೇಳಿಸಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನು ಗಿರಿಧರ್ ಕಾರ್ಕಳ, ದಿನೇಶ್ ಕುಕ್ಕುಜಡ್ಕ, ಭರತ್ ಕುಕ್ಕುಜಡ್ಕ, ಮಹಾಂತೇಶ್ ದೊಡ್ಮನಿಯವರು, ಉಷಾ ಕಟ್ಟೇಮನೆ, ಅವರ ಮಗ ಫಲ್ಗುಣ, ಹೇಮಾ ವೆಂಕಟ್, ಸತ್ಯಾ ಮೇಡಂ, ರೇಣುಕಾ ನಿಡಗುಂದಿ, ಕಾಂಚನಾ, ಶಿವಿ ಮಲ್ಲಿಕಾರ್ಜುನ ಇವರೆಲ್ಲರೊಂದಿಗೆ ಕೊಂಚ ಕಾಲ ಹೆಜ್ಜೆ ಹಾಕುವ ಅವಕಾಶವನ್ನೂ ಬಿಳಿಮಲೆ ನೀಡಿತ್ತು.

ರಾತ್ರಿ ಬಿಳಿಮಲೆಯಲ್ಲೇ ತಂಗುವ ವಿಚಾರ ಮಾಡುತ್ತಿದ್ದೆವು. ಪಕ್ಕದ ಮನೆಯವರು ಬಂದು ಉಳಿದುಕೊಳ್ಳುವವರು ಯಾರೇ ಇದ್ದರೂ ಬನ್ನಿ, ನಮ್ಮ ಮನೆಯಲ್ಲಿ ಜಾಗ ಇದೆ ಎಂದು ಆಹ್ವಾನಿಸಿದ್ದರು. ಆದರೆ ಈ ನಡುವೆ ವೀಣಾ ಸುಳ್ಯ ಅವರು ತಮ್ಮ ಸ್ಕೂಟಿಯನ್ನು ಪಂಜದ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿರುವುದಾಗಿ ಹೇಳುತ್ತಾ, “ಅಯ್ಯೋ ನನ್ ಗಾಡಿ, ಅದರಲ್ಲಿರೋ ಡಾಕ್ಯುಮೆಂಟ್ಸ್ ಯಾರಾದರೂ ಎತ್ತಿಕೊಂಡು ಹೋದ್ರೆ ಏನು ಗತಿ” ಅಂತ ಪರದಾಡಲು ಶುರು ಮಾಡಿದ್ದರು. ಈಗ ಒತ್ತಾಯ ಮಾಡಿ ಅವರನ್ನು ಉಳಿಸಿಕೊಂಡರೂ ಅವರಿಗೆ ರಾತ್ರಿ ಇಡೀ ನಿದ್ದೆ ಬರುವುದಿಲ್ಲ ಎಂದು ಖಾತ್ರಿಯಾಗಿತ್ತು. ಹೀಗಾಗಿ ಅವರ ಜೊತೆ ನವ್ಯಾ ಕೂಡಾ ಹೊರಟರು. ಇಬ್ಬರೇ ಆಗುತ್ತಾರೆ ಎಂದು ಹರೀಶ್ ಹೊರಟರು. ಕೊನೆಗೆ ಇಡೀ ಗುಂಪು ಪಂಜಕ್ಕೇ ಹೊರಟು ನಿಂತಿತ್ತು.

ರಾತ್ರಿ ಪಂಜದಲ್ಲಿ ಬಂದು ರೂಮು ಹಿಡಿದ ಮೇಲೆ ನಾವಿದ್ದ ರೂಮಿನಲ್ಲಿ ಪುನೀತ್, ಕೊಟ್ರೇಶಿಗೆ ಬಲುಬೇಗ ನಿದ್ರಾದೇವಿ ಆಲಂಗಿಸಿಕೊಂಡಳು. ನಾನು ಮತ್ತು ಹರೀಶ್ ಬಂಡ್ಸಾಲೆ ಇಬ್ಬರು ಮಾತ್ರ ಘನಗಂಭೀರ ಮಾತುಕತೆಯಲ್ಲಿ ತೊಡಗಿದೆವು. ರಾತ್ರಿ ಹನ್ನೊಂದುವರೆ ಗಂಟೆ ಸುಮಾರಿಗೆ ಸಾಮಾಜಿಕ ಮಾಧ್ಯಮದ ಕುರಿತು ಶುರುವಾದ ಮಾತುಕತೆ ಜಗತ್ತೆಲ್ಲಾ ಸುತ್ತಿಕೊಂಡು ಬರುವಾಗ ಟೈಮ್ ಎಷ್ಟಾಗಿದೆ ಎಂದು ನೋಡಿದರೆ ಸುಮಾರು ಬೆಳಗಿನ ಜಾವ ಮೂರೂವರೆ! ಮತ್ತೆ ಬೆಳಿಗ್ಗೆ ಬೇಗ ಹೊರಡಬೇಕಿದ್ದ ಕಾರಣಕ್ಕೆ ಮಲಗಿದೆವು.

ಮರುದಿನ ಬೆಳಿಗ್ಗೆ ಕೆಲವರು ಮತ್ತೆ ಬಿಳಿಮಲೆಗೆ ಹೋದರೆ ಇನ್ನುಳಿದವರು ನಾನಾ ದಿಕ್ಕುಗಳಿಗೆ ಹೋದರು. ಹೊರಡುವ ಸಮಯದಲ್ಲಿ ಎದುರಿಗೆ ಸಿಕ್ಕಿದ ಕುಮಾರ್ ಆರ್‌ಬಿ ಸರ್ ಮತ್ತು ಪಲ್ಲವ ವೆಂಕಟೇಶ್ ಅವರು ತುಂಬಾ ಪ್ರೀತಿಯಿಂದ ಮಾತಾಡಿಸಿದರು. ನಾನು ಉಡುಪಿ ಕಡೆ ಬರುವ ದಾರಿಯಲ್ಲಿ ಸಿಗುವ ಹಳೇ ಕಾಲದ ದೇವಸ್ಥಾನಗಳು, ದೈವ (ಬೂತ) ಸ್ಥಾನಗಳು, ಜೈನ ಬಸದಿಗಳನ್ನು ಹೊಕ್ಕು ಫೋಟೋ ತೆಗೆಯುತ್ತಾ ಬಂದೆ. ಕಡಪುನಲ್ಲಿನರುವ ಕಲ್ಕುಡ ಕಲ್ಲುರ್ಟಿ ಮೂಲ ದೈವಸ್ಥಾನ, ಬುಡೇರಿಯಾದಲ್ಲಿರುವ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಕ್ಷೇತ್ರ, ವೇಣೂರಿನಲ್ಲಿರುವ ಕಲ್ಲು ಬಸದಿ, ಮುಗುಳಿ ಎಂಬಲ್ಲಿರುವ ಜೈನ ಚೈತ್ಯಾಲಯ ವಿಶೇಷವೆನಿಸಿದವು. ಕೊಯಿಲಾದಲ್ಲಿರುವ ನೂರಾರು ಎಕರೆಗಳ ಬೃಹತ್ ಜಾನುವಾರು ಸಂವರ್ಧನ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿರುವ ಮುರ್ರ ತಳಿಯ ಎಮ್ಮೆಗಳು, ಮಲೆನಾಡು ಗಿಡ್ಡ ತಳಿಯ ದನಗಳನ್ನು ನೋಡಿ ಖುಷಿಯಾಯಿತು. ಅವುಗಳ ಸಾಕಣೆಗಾಗಿ ಆಧುನಿಕ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ.

ಕಳೆದ ವಾರ ನಮ್ಮ ಮನುಜಮತ ಸಿನಿಯಾನದಿಂದ ಆಯೋಜಿಸಲಾಗಿದ್ದ ಚಿತ್ರದುರ್ಗದ ಸಿನಿಮಾ ಹಬ್ಬಕ್ಕೆ ಅನಿವಾರ್ಯವಾಗಿ ಹೋಗಲಾಗಿರಲಿಲ್ಲ. ಈ ವಾರ ಕುಪ್ಪಳ್ಳಿಯಲ್ಲಿ ನಡೆಯುತ್ತಿದ್ದ ಬೆಸಗರಹಳ್ಳಿ ರಾಮಣ್ಣ ಟ್ರಸ್ಟಿನ ಮೂರು ದಿನಗಳ ಕಮ್ಮಟಕ್ಕೂ ಹೋಗಲು ಆಸೆ ಇದ್ದರೂ ಆಗಿರಲಿಲ್ಲ. ಕೊನೆಗೆ ಬಿಳಿಮಲೆಯ ಒಂದು ದಿನದ ಪಯಣ ಹಲವಾರು ಅನುಭವಗಳನ್ನು ನೀಡಿತು. ಇಂತಹ ಬಹುಕಾಲ ನೆನಪಲ್ಲಿ ಉಳಿಯುವಂತಹ ಒಂದು ಅನುಭವಕ್ಕೆ ಅವಕಾಶ ಒದಗಿಸಿದ ಇಡೀ ಬಿಳಿಮಲೆಯ ಎಲ್ಲಾ ಕುಟಂಬಗಳಿಗೆ ಆಭಾರಿಯಾಗಿದ್ದೇನೆ.

ಬಿಳಿಮಲೆಯ ಪರಿಸರಕ್ಕೆ ಹೋಗಿ ಬಂದದ್ದು ಪುರುಷೋತ್ತಮ ಬಿಳಿಮಲೆ ಸರ್ ಅವರ ವಲಸೆ-ಸಂಘರ್ಷ ಮತ್ತು ಸಮನ್ವಯ ಪುಸ್ತಕ ಓದಲು ಒಳ್ಳೆಯ ಹಿನ್ನೆಲೆ ಒದಗಿಸಿದೆ ಎನ್ನಬಹುದು. ಈ ಪುಸ್ತಕವು ಸುಳ್ಯ ಪರಿಸರದಲ್ಲಿ ಹೆಚ್ಚಾಗಿರುವ ಅರೆಗೌಡ ಸಮುದಾಯ ಹಾಸನ ಕಡೆಯಿಂದ ಸುಮಾರು 500 ವರ್ಷಗಳ ಹಿಂದೆ ಬಂದು ಇಲ್ಲಿ ನೆಲೆ ನಿಂತ ಕುರಿತು ಹಾಗೂ ಸಮುದಾಯದ ಸಾಂಸ್ಕೃತಿಕ ವಿವರಗಳ ಕುರಿತದ್ದು. ಇಂತಹ ಜನ ಸಮುದಾಯಗಳ ವಲಸೆ, ಸಮುದಾಯಗಳ ನಡುವಿನ ಹಲವು ಮುಖಗಳ ಸಂಘರ್ಷ ಮತ್ತು ಅವು ಮಾಡಿಕೊಳ್ಳುವ ಹೊಂದಾಣಿಕೆಗಳು ನನಗಂತೂ ಬಹಳ ಆಸಕ್ತಿಯ ವಿಷಯ. ಅದರಲ್ಲೂ ಕರಾವಳಿಯ ಸಮುದಾಯಗಳನ್ನು, ಅವುಗಳ ಸಾಂಸ್ಕೃತಿಕ ವಿವರಗಳನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡ ಮೇಲಂತೂ ಈ ಆಸಕ್ತಿ ಹಲವು ಪಟ್ಟು ಹೆಚ್ಚಾಗಿದೆ. ಈ ವಿಷಯವಾಗಿ ಸಂಗ್ರಹಿಸಿಕೊಂಡು ಓದಬೇಕೆಂದುಕೊಂಡಿರುವ ಪುಸ್ತಕಗಳ ದೊಡ್ಡ ರಾಶಿಯೇ ಇದೆ. ಪುರುಷೋತ್ತಮ ಬಿಳಿಮಲೆ ಸರ್ ಅವರ ಈ ಪುಸ್ತಕ ಆದಷ್ಟು ಬೇಗ ಓದಿ ಅದರ ಬಗ್ಗೆ ಅನಿಸಿದ್ದನ್ನು ಹಂಚಿಕೊಳ್ಳುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್

Published

on

ಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ನಡುವೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಡಿಸೆಂಬರ್ 5ನೇ ತಾರೀಖು ರಾತ್ರಿ ಬಹಳ ಹೊತ್ತಿನವರೆಗೆ ಓದು ಮತ್ತು ಬರವಣಿಗೆಯಲ್ಲಿ ಮಗ್ನರಾಗಿದ್ದ ಅವರು ತಮ್ಮ ಮುಂದಿದ್ದ ಪುಸ್ತಕಗಳ ಮೇಲೆಯೇ ಕುಸಿದು ಬಿದ್ದಿದ್ದರು. ಡಿಸೆಂಬರ್ 6ರ ಬೆಳಗ್ಗೆ ನೋಡಿದಾಗ ಅವರು ನಾಲ್ಕಾರು ಗಂಟೆಗಳ ಹಿಂದೆಯೇ ಈ ಪ್ರಪಂಚವನ್ನು ತ್ಯಜಿಸಿ ಮಹಾ ಪರಿನಿಬ್ಬಾಣ ಹೊಂದಿದ್ದರು.

ನಂಬಲಸಾಧ್ಯವಾದ ಪುಸ್ತಕ ವ್ಯಾಮೋಹವನ್ನು ಹೊಂದಿದ್ದ ಡಾ. ಅಂಬೇಡ್ಕರ್ರವರು ನಿಧನರಾಗುವ ಹಿಂದಿನ ರಾತ್ರಿಯ (1956 ಡಿಸೆಂಬರ್ 5ರ ರಾತ್ರಿ) ನೈಜ ಪ್ರಸಂಗವನ್ನು ಅಂಬೇಡ್ಕರ್ರವರಿಗೆ 17 ವರ್ಷಗಳ ಕಾಲ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ನಾನಕ್ಚಂದ್ ರತ್ತು ಹೀಗೆ ದಾಖಲಿಸಿದ್ದಾರೆ: ಡಿಸೆಂಬರ್ 5ನೇ ತಾರೀಖು ಅವರು ಇಡೀ ದಿನ ಅಧ್ಯಯನದಲ್ಲಿ ಮುಳುಗಿದ್ದರು, ರಾತ್ರಿ 10 ಗಂಟೆಯ ವೇಳೆಗೆ ತುಂಬಾ ಬಳಲಿದ್ದರು. ಕೆಲಸದಾಳು ಸುಧಾಮ ಹಲವಾರು ಸಾರಿ ಊಟಕ್ಕೆ ಕರೆದಿದ್ದನು.

ಆದರೂ ಬಾಬಾಸಾಹೇಬರು ಊಟಕ್ಕೆ ಹೋಗದೆ ಅಧ್ಯಯನದಲ್ಲಿ ತಲ್ಲೀನರಾಗಿದ್ದರು. ಕೊನೆಗೂ ನಮ್ಮೆಲ್ಲರ ಬಲವಂತದಿಂದಾಗಿ ಒಲ್ಲದ ಮನಸ್ಸಿನಿಂದ (ಅಧ್ಯಯನ ನಿಲ್ಲಿಸಿ ಊಟಕ್ಕೆ ಕರೆಯುತ್ತಾರಲ್ಲ ಎಂಬ ಸಿಟ್ಟಿನಿಂದಲೂ ಸಹ) ಸುಮಾರು ರಾತ್ರಿ 10.15ರ ಸಮಯಕ್ಕೆ ತಮ್ಮ ಅಧ್ಯಯನದ ಕೊಠಡಿಯಿಂದ ಎದ್ದು ಊಟದ ಕೋಣೆಯ ಕಡೆಗೆ ಹೊರಟರು. ಡೈನಿಂಗ್ ರೂಂಗೆ ಹೋಗುವಾಗ ತಮ್ಮ ಬಹತ್ತಾದ ಲೈಬ್ರರಿಯು ಅತೀ ದೊಡ್ಡ ಮೈನ್ ಹಾಲ್ನಲ್ಲಿತ್ತು. ತಮ್ಮ ಕೈಯನ್ನು ನನ್ನ ಭುಜದ ಮೇಲಿಟ್ಟುಕೊಂಡು ತಮ್ಮ ಇನ್ನೊಂದು ಕೈಯಲ್ಲಿ ಊರುಗೋಲನ್ನಿಡಿದು, ಪುಸ್ತಕಗಳಿಂದ ತುಂಬಿಹೋಗಿದ್ದ ತಮ್ಮ ದೊಡ್ಡ ಟೇಬಲ್ನೆಡೆಗೆ ನಡೆದು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು.ಒಂದು ಚಿಕ್ಕ ಪೆಟ್ಟಿಗೆಯನ್ನು ತೆರೆದರು.

ತಮ್ಮ ಫೌಂಟನ್ ಪೆನ್ ಹೊರತೆಗೆದು ಕೆಲವು ಹಾಳೆಗಳಿಗೆ ಹುಡುಕಾಡಿದರು. ಕೆಲಸದಾಳು ಮೂರನೇ ಬಾರಿಗೆ ಬಂದ. ಅವರು ಕುರ್ಚಿಯಿಂದ ಮೇಲೆದ್ದು ಮುಂದೆ ನಡೆದರು. ಒಂದು ಕ್ಷಣ ನಿಂತು ಕೆಲವು ಪುಸ್ತಕಗಳನ್ನು ಕಪಾಟಿನಿಂದ ಹೊರ ತೆಗೆದು ನನ್ನ ಕೈಗಿತ್ತರು. ಸ್ವಲ್ಪ ಮುಂದೆ ಹೋಗಿ ಅವರು ಎರಡೂ ಕಡೆ ನೋಡಿ ಬೇರೆ ಅಲ್ಮೆರಾಗಳಿಂದ ಇನ್ನೂ ಹೆಚ್ಚು ಪುಸ್ತಕಗಳನ್ನು ತೆಗೆದುಕೊಂಡರು. ಆ ಪುಸ್ತಕಗಳನ್ನು ಹಾಸಿಗೆಯ ಹತ್ತಿರದ ತಮ್ಮ ಟೇಬಲ್ಲಿನ ಮೇಲಿಡಲು ನನಗೆ ಹೇಳಿದರು. ಊಟದ ಕೊಠಡಿಯನ್ನು ಪ್ರವೇಶಿಸುವುದಕ್ಕೆ ಮೊದಲು ಹಿಂದಕ್ಕೆ ತಿರುಗಿದರು.

ಒಂದು ಕ್ಷಣ ನಿಂತುಕೊಂಡು ತಮ್ಮ ಜೀವಿತ ಕಾಲದ ನಿಜವಾದ ಮತ್ತು ಮಹಾ ಗೆಳೆಯರಾಗಿದ್ದ ಅಲ್ಮಿರಾಗಳೊಳಗಿದ್ದ ಆ ಪುಸ್ತಕಗಳ ಮೇಲೆ ನೋಟವನ್ನು ಹರಿಸುತ್ತಾ ಊಟದ ಕೊಠಡಿಯ ಒಳಗೆ ಹೋದರು. ಅಡುಗೆ ಮನೆಯ ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಾನು ಅವರಿಗೆ ಸಹಾಯ ಮಾಡಿದೆ. ಕೆಲಸದಾಳು ಅವರಿಗೆ ಊಟ ಬಡಿಸಿದ. ಸ್ವಲ್ಪ ಅನ್ನವನ್ನು ತಿಂದು ತಟ್ಟೆಯನ್ನು ನನ್ನ ಕಡೆಗೆ ತಳ್ಳಿದರು. ”ನೀನು ತಿನ್ನು,” ಎಂದು ಹೇಳಿದರು. ತಮ್ಮ ತಲೆಯನ್ನು ನೀವಲು ನನಗೆ ಹೇಳಿದರು.

ನಾನು ಸ್ವಲ್ಪ ಹೊತ್ತು ನೀವಿದೆ. ಸ್ವಲ್ಪ ಸಮಯದ ನಂತರ ”ಚಲ್ ಕಬೀರಾ ತೇರಾ ಭವ್ಸಾಗರ್ ದೇರಾ,”ಎಂದು ಗುನುಗುತ್ತ, ಊರುಗೋಲಿನ ಸಹಾಯದಿಂದ ಮೇಲೆದ್ದರು. ನನ್ನ ಭುಜದ ಮೇಲೆ ತಮ್ಮ ತೋಳನ್ನಿರಿಸಿ ಕೆಲವು ಹೆಜ್ಜೆಗಳಷ್ಟು ನಡೆದು ನಿಂತುಕೊಂಡರು. ಲೈಬ್ರರಿಯೊಳಗಿದ್ದ ಪುಸ್ತಕಗಳನ್ನು ಮತ್ತೊಮ್ಮೆ ಮಮತೆಯಿಂದ ನೋಡಿದರು, ನಂತರ ಮಲಗುವ ಕೊಠಡಿ ಪ್ರವೇಶಿಸಿದರು.

ಆಗ ರಾತ್ರಿ ಸುಮಾರು 11-30 ಗಂಟೆ. ವಿಶ್ರಾಂತಿಯಿಲ್ಲದೆ ಹಿಂದಿನ ನಾಲ್ಕು ರಾತ್ರಿಗಳೂ ಸತತವಾಗಿ ಕೆಲಸ ಮಾಡಿದ್ದರಿಂದ ನಾನು ದಣಿದು ಹೋಗಿದ್ದೆ. ನನ್ನ ಹೆಂಡತಿ ಮಕ್ಕಳು ನನಗೋಸ್ಕರ ಆತಂಕದಿಂದ ಕಾಯುತ್ತಿರಬಹುದೆಂದು ಅರಿತಿದ್ದ ನಾನು ಮನೆಗೆ ಹೋಗಲು ಅಣಿಯಾದೆ. ಬಾಬಾ ಸಾಹೇಬರ ದಣಿದುಹೋದ ಮುಖ ಕಣ್ಣುಗಳನ್ನು ನೋಡಿ, ಅವರು ಗಾಢವಾದ ನಿದ್ರೆಗೆ ಹೋಗುತ್ತಾರೆಂದು ನಾನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ಅವರ ಗಮನವನ್ನು ಸೆಳೆಯಲೆಂದೇ ನಾನು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸ್ಥಳಾಂತರಿಸುತ್ತಾ ಟೇಬಲ್ಲನ್ನು ಅಲುಗಾಡಿಸಿದೆ.

ಅವರು ಕಣ್ಣೆತ್ತಿ ನೋಡಿದರು. ಇದರ ಸದುಪಯೋಗ ಪಡೆದುಕೊಂಡು ”ಸ್ವಾಮಿ ಈ ರಾತ್ರಿ ನಾನು ಇಲ್ಲೇ ಇರಬೇಕೆ? ಅಥವಾ ನಾನು ಮನೆಗೆ ಹೋಗಬಹುದೋ?,” ಎಂದು ನಾನು ವಿನೀತನಾಗಿ ಕೇಳಿದೆ. ”ಆಗಲಿ ನೀನು ಮನೆಗೆ ಹೋಗು ವಿಶ್ರಾಂತಿ ಪಡೆದುಕೋ, ನೀನು ಈ ಎಲ್ಲಾ ದಿನಗಳಲ್ಲೂ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀಯ,” ಎಂದು ಅವರು ಹೇಳಿದರು. ನಾನು ಇನ್ನೇನು ಮೈನ್ ಗೇಟನ್ನು ತಲುಪಿ, ನನ್ನ ಬೈಸಿಕಲ್ನೊಡನೆ ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ ಸೇವಕನು ಓಡುತ್ತಾ ಬಂದನು. ”ಸ್ವಾಮಿ, ಬಾಬಾಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ,” ಎಂದನು.

ನನ್ನ ಬೈಸಿಕಲ್ಲನ್ನು ಗೇಟಿನಲ್ಲೇ ಬಿಟ್ಟು, ಕೊಠಡಿ ಪ್ರವೇಶಿಸಿದಂತೆ ಅವರು ಪ್ರಶ್ನಾರ್ಥಕ ಕಣ್ಣುಗಳಿಂದ ಮೇಲೆ ನೋಡಿ ”ನೀನು ಮನೆಗೆ ಹೋಗುವ ಮೊದಲು ಬುದ್ಧ ಶಾಸನ ಕೌನ್ಸಿಲ್ಗೆ, ಅತ್ರೆ ಮತ್ತು ಜೋಷಿಯವರಿಗೆ ನಾನು ಹೇಳಿ ಬರೆಸಿದ್ದ ಕರಡು ಪತ್ರಗಳನ್ನೂ, ಬುದ್ಧ ಅಂಡ್ ಹಿಸ್ ಧಮ್ಮ ಗ್ರಂಥದ ಮುನ್ನುಡಿ ಮತ್ತು ಪರಿಚಯದ ಟೈಪ್ ಮಾಡಿರುವ ಪ್ರತಿಯನ್ನೂ ತೆಗೆದಿಡು ನಂತರ ನಾನು ಅವುಗಳನ್ನೊಮ್ಮೆ ಓದುತ್ತೇನೆ,” ಎಂದರು.

ಇವುಗಳನ್ನು ತಪ್ಪದೇ ಕಳುಹಿಸಬೇಕಾಗಿರುವುದರಿಂದ ಬೆಳಿಗ್ಗೆ ಬೇಗನೇ ಬರಬೇಕೆಂದು ನನ್ನನ್ನು ಕೇಳಿಕೊಂಡರು.
ನಾನು ಅವರ ಆತಂಕವನ್ನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ನಾನು ಮನೆಗೆ ಹೋಗುವುದಿಲ್ಲವೆಂದೂ ಮತ್ತು ಆ ರಾತ್ರಿ ಅಲ್ಲಿಯೇ ಉಳಿಯುವೆನೆಂದೂ ಅವರಿಗೆ ನಮ್ರವಾಗಿ ಹೇಳಿದೆ. ”ಬೇಡ, ನೀನು ಬಹಳ ದಿನಗಳು ಮನೆಗೆ ಹೋಗಿಲ್ಲ. ನಿನಗೆ ತೊಂದರೆಯುಂಟಾದದ್ದಕ್ಕೆ ನನಗೆ ಬೇಸರವಿದೆ. ಆದರೆ ನೀನು ಸಮರ್ಪಣಾ ಭಾವದಿಂದ, ಭಕ್ತಿಯಿಂದ ಮಾಡಿದ ಸೇವೆಗಾಗಿ ನಾನು ನಿನಗೆ ಕತಜ್ಞನಾಗಿದ್ದೇನೆ. ಆರಾಮವಾಗಿ ಮನೆಗೆ ಹೋಗು, ನಾನು ತುಂಬಾ ಚೆನ್ನಾಗಿದ್ದೇನೆ. ತಲೆ ಕೆಡಿಸಿಕೊಳ್ಳಬೇಡ,” ಎಂದು ಹೇಳಿದರು. ನಾನು ಅವರ ಪಾದಗಳನ್ನು ಮುಟ್ಟಿ ಪೂಜ್ಯಭಾವದಿಂದ ನಮಸ್ಕರಿಸಿ ಮನೆಗೆ ಹೊರಟೆ.

ಅದೊಂದು ನೀರಸ ರಾತ್ರಿಯಾಗಿತ್ತು. ಮಧ್ಯರಾತ್ರಿ ಮುಗಿದುಹೋಗಿತ್ತು. ಮೋಡಗಳ ಮೇಲೆ ಮೋಡಗಳು ರಾಶಿ ರಾಶಿಯಾಗಿ ಕವಿದಿದ್ದವು, ನಾನು ಹಳೆಯ ತರಕಾರಿ ಮಂಡಿ ತಲುಪಿದಾಗ ನನ್ನ ಬೈಸಿಕಲ್ನ ಮುಂದಿನ ಟೈರ್ ಪಂಕ್ಚರ್ ಆಯಿತು. ಬೈಸಿಕಲ್ಅನ್ನು ಮೂರು ಮೈಲಿಗಳಿಗೂ ಹೆಚ್ಚು ದೂರ ತಳ್ಳಿಕೊಂಡು ಹೋಗಬೇಕಾಯಿತು. ತುಂಬಾ ಹೊತ್ತು ಕಾಯ್ದು ಮಲಗಿಬಿಟ್ಟಿದ್ದ ನನ್ನ ಹೆಂಡತಿ ಮಕ್ಕಳಿಗೆ ಬೇಸರವಾಗುವಂತೆ ಬೆಳಗಿನ ಜಾವ 2 ಗಂಟೆಗೆ ಮನೆ ತಲುಪಿದೆ. ಅವಸರವಾಗಿ ಊಟ ಮಾಡಿದೆ.

ನಿದ್ರಿಸಲು ಹೋದೆ, ಬಾಬಾ ಸಾಹೇಬರ ಬಳಿ ಈ ಸಮಯದಲ್ಲಿ ಇರಬೇಕಾಗಿರುವುದರಿಂದ ನನ್ನನ್ನು ಬೇಗನೇ ಎಬ್ಬಿಸಲು ನನ್ನ ಹೆಂಡತಿಗೆ ತಿಳಿಸಿದೆ. ಬಹಳ ದಿನಗಳ ನಂತರ ಮನೆಗೆ ಬಂದಿದ್ದರಿಂದ ಅವಳು ಪ್ರಶ್ನಾರ್ಥಕ ಕಣ್ಣುಗಳಿಂದ ನನ್ನತ್ತ ನೋಡಿದಳು. ಆದರೆ ಆ ನೋಟ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಅವಳು ಚೆನ್ನಾಗಿ ಅರಿತಿದ್ದಳು. ನನಗೂ ಮಾತನಾಡುವ ಧೈರ್ಯವಾಗಲೀ ಶಕ್ತಿಯಾಗಲೀ ಇರಲಿಲ್ಲ.
ಬೆಳಿಗ್ಗೆ ಸವಿತಾ ಅಂಬೇಡ್ಕರ್ರವರು ನನ್ನನ್ನು ಕರೆತರಲು ಬಾಬಾ ಸಾಹೇಬರ ಮನೆಯ ಅಡುಗೆ ಭಟ್ಟ ಸುಧಾಮ ಮತ್ತು ಬಾಬಾ ಸಾಹೇಬರ ಕಾರು ಚಾಲಕ ಕಾಳು ರವರನ್ನು ಬಾಬಾ ಸಾಹೇಬರ ಕಾರಿನಲ್ಲಿ ನನ್ನ ಮನೆಗೆ ಕಳುಹಿಸಿದ್ದರು.

ಬಾಗಿಲ ಮುಂದೆ ನಿಂತಿದ್ದ ಇವರಿಬ್ಬರನ್ನು ಹಾಗೂ ಬಾಬಾ ಸಾಹೇಬರ ‘ಅಂಬಾಸಿಡರ್ ಕಾರನ್ನು ನೋಡಿ ಏನೋ ಅನಾಹುತವಾಗಿರಬೇಕೆಂದು ಅನ್ನಿಸಿತು. ನನ್ನ ನರಗಳಲ್ಲಿ ಆಘಾತದ ಅಲೆಗಳು ಪ್ರವಹಿಸಿದವು. ನನ್ನ ಇಡೀ ದೇಹ ಬೆವರತೊಡಗಿತು. ನನ್ನ ಕೈ ಕಾಲುಗಳು ನಡುಗತೊಡಗಿದವು. ”ಏನಾಯಿತು? ಬಾಬಾ ಸಾಹೇಬರು ಚೆನ್ನಾಗಿದ್ದಾರೆಯೇ?,” ಎಂದು ನಾನು ಅವರನ್ನು ಕೇಳಿದೆ.

ನಿಮ್ಮನ್ನು ತುರ್ತಾಗಿ ಕರೆದುಕೊಂಡು ಬರಲು ಸವಿತಾ ಮೇಡಂರವರು ನಮ್ಮನ್ನು ಕಳುಹಿಸಿದ್ದಾರೆ ಎಂದಷ್ಟೆ ಹೇಳಿದರು. ನಾನು ನಿಂತ ಹೆಜ್ಜೆಯಲ್ಲೇ ಹೊರಟೆ. ಬಾಬಾ ಸಾಹೇಬರ ಮನೆಯನ್ನು ತಲುಪಿದಾಗ ವರಾಂಡದಲ್ಲಿ ಅಳುತ್ತಾ ಕುಳಿತಿದ್ದ ಸವಿತಾರವರು ”ನಾನಕ್ಚಂದ್! ಸಾಹೇಬರು ನಮ್ಮನ್ನು ಬಿಟ್ಟು ಹೊರಟು ಹೋದರು,” ಎಂದು ಅಳುತ್ತ ಹೇಳಿದರು.

ಬಾಬಾ ಸಾಹೇಬರ ಸಾವಿನ ವಾರ್ತೆಯು ನನ್ನ ಜೀವನದ ಅತ್ಯಂತ ಆಘಾತಕರವಾದ ಅನುಭವವಾಗಿತ್ತು. ನಾನು ಹುಚ್ಚನಂತಾದೆ. ನನ್ನ ತಲೆಯನ್ನು ಬಾಗಿಲಿಗೆ ಚಚ್ಚಿಕೊಂಡೆ. ”ಅಯ್ಯೋ ಬಾಬಾ ಸಾಹೇಬ್ ನಾನಾದರೂ ಸತ್ತು ನೀವಾದರೂ ಬದುಕಬಾರದಿತ್ತೆ ಎಂದು ಅರಚಿಕೊಂಡೆ. ಬಾಬಾ ಸಾಹೇಬರ ಮಲಗುವ ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆಯೇ ಸವಿತಾರವರು ನನ್ನನ್ನು ಹಿಂಬಾಲಿಸಿದರು.

ಹಿಂದಿನ ರಾತ್ರಿ ಅವರನ್ನು ಎಲ್ಲಿ ಬೀಳ್ಕೊಟ್ಟಿದ್ದೆನೋ ಅದೇ ಹಾಸಿಗೆಯ ಮೇಲೆ ಚಿರನಿದ್ರೆಯಲ್ಲಿದ್ದ ಆ ಮಹಾಪುರುಷನನ್ನು ಕಂಡು ಸ್ಥಂಭೀಭೂತನಾದೆ. ಆ ಮಹಾಪುರುಷನ ಸುತ್ತಾ ಓಡಾಡಿದೆ, ಮಂಡಿಯೂರಿ ಬಾಬಾ ಸಾಹೇಬರ ಎರಡೂ ಪಾದಗಳ ಮೇಲೆ ನನ್ನ ತಲೆಯನ್ನಿಟ್ಟು ಗೋಳಾಡತೊಡಗಿದೆ. ಹಿಂದಿನ ರಾತ್ರಿ ಅವರು ಟೇಬಲ್ ಮೇಲೆ ಇಡಲು ಹೇಳಿದ್ದ ಹಾಸಿಗೆಯ ಹತ್ತಿರ ಬಿದ್ದಿದ್ದ ಕಾಗದಗಳತ್ತ ನೋಡಿ, ನನ್ನ ದುಃಖ ಮಿತಿಮೀರಿತು.

ಹಣಕಾಸಿನ ಮುಗ್ಗಟ್ಟು
ಡಾ. ಬಿ.ಆರ್. ಅಂಬೇಡ್ಕರ್ರವರಿಗಿದ್ದ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಅವರೇನಾದರೂ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟದೇ ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಈ ದೇಶದ ಮೊದಲ ಪ್ರಧಾನಮಂತ್ರಿಯಾಗುತ್ತಿದ್ದರು.
1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಮುಸ್ಲಿಮರಿಗಾಗಿಯೇ ಒಂದು ಪ್ರತ್ಯೇಕ ರಾಷ್ಟ್ರ ನೀಡಬೇಕೆಂದು ಮಹಮದ್ ಅಲಿ ಜಿನ್ನಾರವರ ಬೇಡಿಕೆಯಂತೆ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು ಇದೇ ರೀತಿ ಡಾ. ಅಂಬೇಡ್ಕರ್ರವರು ಮುಸ್ಲಿಮರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದ ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಅಖಂಡ ಭಾರತವನ್ನು ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜಿಸಲು ಬ್ರಿಟಿಷರು ತುದಿಗಾಲ ಮೇಲೆ ನಿಂತಿದ್ದರು. ಆಗ ದಲಿತರಿಗಾಗಿ ವಿಭಜಿಸುವ ಹೊಸ ದೇಶಕ್ಕೆ ಡಾ. ಅಂಬೇಡ್ಕರ್ರವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿಗಳಾಗಿರಬಹುದಿತ್ತು.

ಆದರೆ ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅಪ್ಪಟ ರಾಷ್ಟ್ರೀಯವಾದಿ ಡಾ. ಅಂಬೇಡ್ಕರ್ ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟ ಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದ್ದ ಹಾಗೂ ಬಹುದೊಡ್ಡ ಜ್ಞಾನಿಯಾಗಿದ್ದ ಡಾ. ಅಂಬೇಡ್ಕರ್ರವರು ತನ್ನ ಜ್ಞಾನವನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ದೊಡ್ಡ ಸಿರಿವಂತರಾಗಬಹುದಿತ್ತು. ಆದರೆ ತಮ್ಮ ಇಡೀ ಬದುಕನ್ನು ಅವರ ದುರ್ಬಲ ವರ್ಗದ ಏಳಿಗೆಗೆ ಮೀಸಲಿಟ್ಟರು. ಅವರು ಬದುಕಿರುವವರೆಗೂ ಆರ್ಥಿಕ ಮುಗ್ಗಟ್ಟನ್ನೂ ಎದುರಿಸುತ್ತಿದ್ದರು.

ಕೊನೆಗೆ ಈ ಮಹಾಪುರುಷ ನಿಧನರಾದಾಗ ಅವರ ಪಾರ್ಥೀವ ಶರೀರ ಕೊಂಡೊಯ್ಯಲೂ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಎಲ್ಲರ ಕಣ್ಣಲ್ಲಿ ನೀರು ಹರಿಸುತ್ತದೆ.ಡಾ. ಅಂಬೇಡ್ಕರ್ರವರ ಪಾರ್ಥೀವ ಶರೀರವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್ ಏರ್ಲೈನ್ಸ್ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ 5000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ಮಾಜಿ ಕಾನೂನು ಸಚಿವರೂ ಆಗಿದ್ದ ಅಂಬೇಡ್ಕರ್ರವರ ಅಲ್ಮೆರಾವನ್ನು ತೆಗೆದು ನೋಡಿದಾಗ ಅಲ್ಲಿ ಕೇವಲ 300 ರೂಪಾಯಿಗಳು ಮಾತ್ರ ಇತ್ತು.

ನಂತರ ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್ರವರಲ್ಲಿ ಉಳಿಕೆ ಹಣ ಕೇಳಿದಾಗ ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. ಟಿ.ಬಿ. ಬೋನ್ಸ್ಲೆ ಎಂಬುವರು ತನ್ನ ಅಂಬಾಸಿಡರ್ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು. ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಕೊನೆಗೆ ಅಂದಿನ ಕೇಂದ್ರ ಸರ್ಕಾರವನ್ನು ಕೋರಲಾಯಿತು.

ಆಗ ಕೇಂದ್ರ ಸರ್ಕಾರದ ವಿಮಾನಯಾನ ಖಾತೆ ಸಚಿವರು ಸದ್ಯಕ್ಕೆ ನಿಮ್ಮ ಕೈಯ್ಯಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ ಎಂದು ಹೇಳಿ ವಿಶೇಷ ವಿಮಾನ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಡಾ॥ ಅಂಬೇಡ್ಕರ್ ರವರ ನಿಕಟವರ್ತಿಗಳಾದ ಬಿ.ಕೆ. ಗಾಯಕ್ವಾಡ್ರವರು ಪಾವತಿಸಿದರು.

ಚೈತ್ಯಭೂಮಿ ಮುಂಬೈನ ಸಮುದ್ರ ತೀರದಲ್ಲಿರುವ ದಾದರ್ನಲ್ಲಿ ಡಾ. ಅಂಬೇಡ್ಕರ್ರವರ ಅಂತಿಮ ಸಂಸ್ಕಾರವು ಬೌದ್ಧಧರ್ಮದ ವಿಧಿ ವಿಧಾನಗಳಂತೆ 1956ರ ಡಿಸೆಂಬರ್ 7ರ ಸಂಜೆ 7.30ಕ್ಕೆ ನಡೆಯಿತು. ಆ ಸ್ಥಳವನ್ನು ‘ಚೈತ್ಯಭೂಮಿ’ ಎಂದು ಕರೆಯಲಾಗುತ್ತದೆ. ಆ ಸ್ಥಳದಲ್ಲಿ ಈಗ ಒಂದು ಬಹತ್ ಸ್ಮಾರಕ ನಿರ್ಮಿಸಲಾಗಿದೆ. ಆ ಸ್ಮಾರಕದೊಳಗೆ ಬಾಬಾಸಾಹೇಬರ ಚಿತಾಭಸ್ಮವನ್ನು ಇಡಲಾಗಿದೆ.

”ಬಾಬಾ ! ನಿನ್ನ ಸೇವಕ ನಾನು ರತ್ತು ಬಂದಿದ್ದೇನೆ, ನಾನು ಬಂದಿದ್ದೇನೆ… ಎದ್ದೇಳಿ ಬಾಬಾ… ನನಗೆ ಈ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಆದೇಶ ನೀಡಿ, ನನಗೆ ಕೆಲಸ ಕೊಡಿ, ನಾನು ಟೈಪ್ ಮಾಡಲು ನೀವು ರಾತ್ರಿ ಬರೆದಿರುವ ಹಾಳೆಗಳನ್ನು ನೀಡಿ ಇವುಗಳನ್ನು ಬೇಗ ಟೈಪ್ ಮಾಡಿ ಮುಗಿಸು ಎಂದು ಆಜ್ಞೆ ಮಾಡಿ,” ಎಂದು ಜೋರಾಗಿ ಹೇಳುತ್ತಾ ದುಃಖದಿಂದ ಅತ್ತುಬಿಟ್ಟೆ.

ಸಂಗ್ರಹ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಮ್ಮನ್ನು ಬಿಟ್ಟು ಬುದ್ಧನ ಬಳಿ ಹೋದರು ಬಾಬಾಸಾಹೇಬರು

Published

on

  • ರಾಣಪ್ಪ ಡಿ ಪಾಳಾ

ದಿನ ಡಿಸೆಂಬರ್ 5 ರಂದು ಬಾಬಾಸಾಹೇಬರು ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದ ಬಾಬಾಸಾಹೇಬ ಅಂಬೇಡ್ಕರ ರವರು ಆ ರಾತಿ ತುಸು ಹೆಚ್ಚು ನಿದ್ದೆ ಮಾಡಿದ್ದರು ಅವರ ಆಪ್ತ ಸಹಾಯಕ ನಾನಕ್ ಚಂದ ರತ್ತುಗೆ ಕೆಲಸ ಹೆಚ್ಚಾಗಿದ್ದ ಪಯುಕ್ತ ಆತ ರಾತ್ರಿ ಅಲ್ಲೇ ಉಳಿದುಕೊಂಡಿದ್ದ ಬೆಳಿಗ್ಗೆ ಬಾಬಾಸಾಹೇಬರು ಎದ್ದರು ನಂತರ ಆತನು ಸಿದ್ಧನಾಗಿ ಕಚೇರಿಗೆ ಹೋದ ಮಧ್ಯಾಹ್ನದ ಹೊತ್ತಿಗೆ ಬಾಬಾ ಡಾ.ಅಂಬೇಡ್ಕರ್‌ರವರ ಪತ್ನಿ ಸವಿತಾ ಅಂಬೇಡ್ಕರವರು ಮನೆಯ ಸಾಮಾನುಗಳನ್ನು ತರಲು ಮಾರುಕಟ್ಟೆಗೆ ಹೋದರು. ಅವರೊಂದಿಗೆ ಡಾ. ಮಾಧವರಾವ ಮಾಲವಣಕರ್ ಕೂಡಾ ತೆರಳಿದ ತುಸು ಹೊತ್ತಿನ ನಂತರ ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಎರಡು ಮೂರು ಬಾಲ ಶಬ್ದ ಮಾಡಿ ಯಾರಲ್ಲೀ ಎಂದು ಕೂಗಿ ಕರೆದರು.

ಅಡುಗೆ ಸಹಾಯಕ ಸುಧಾಮ ಒಂದಾಗ. ಅವನ ಸಹಾಯ ಪಡೆದು ಬಾಥ್ ರೂಮಿಗೆ ಹೋಗಿ ಬಂದರು ಸ್ವಲ್ಪ ಹೊತ್ತಿನ ನಂತರ ಚಹಾವನ್ನು ತರಸಿ ಕುಡಿದರು. ಒಂದುವರೆ ಗಂಟೆಯ ಬಳಿಕ ಅವರು ತಮ್ಮ ಪತ್ನಿಯನು ವಿಚಾರಿಸಿದರು. ಅವರೂ ಮಾರುಕಟ್ಟೆಯಿಂದ ಇನ್ನೂ ಬಂದಿರಲಿಲ್ಲ. ಅವರು ಮಲಗಿ ಏಳುವ ಹೊತ್ತಿಗೆ ಸಂಜೆಯಾಗಿತ್ತು. ರತ್ತು ಬಂದಿದ್ದ. ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರವರು ನೀಡಿದೆ ಟೈಪಿಂಗ್ ಸಾಮಗ್ರಿಯನ್ನು ಪಡೆದುಕೊಂಡು ಆತ ಹೊರ ಕೋಣೆಗೆ ಹೋದರು.

ಸಾಯಂಕಾಲ 5 ಗಂಟೆಗೆ ಇಬ್ಬರು ಜೈನ ಮುಖಂಡರು ಬಾಬಾಸಾಹೇಬರನ್ನು ಕಾಣ ಬಿ ಬಂದಿದ್ದರು. ಅವರು ಈ ಮುಂಚೆಯೆ ಬಾಬಾಸಾಹೇಬರನ್ನು ಭೇಟಿಯಾಗಲು ಅಪರ ಆಪಸಹಾಯಕ ರತ್ತುರವರಿಂದ ಪೂರ್ವಾನುಮತಿಯನ್ನು ಪಡೆದ ಪ್ರಯುಕ್ತ ಭೇಟಿಯಾಗಲು ಅವಕಾಶ ನೀಡಲಾಯಿತು ಬಂದಂತಹ ಅತಿಥಿಗಳ ಜೊತೆ ಮಾತನಾಡುತ್ತ ತಮ್ಮನ್ನು ಭೇಟಿಯಾಗಲು ಬಂದ ಉದ್ದೇಶವನ್ನು ಕೇಳಿದರು ಅವರಾಲೋಗವನ್ನು ವಿಚಾರಿಸಿದ ನಂತರ ಬೌದಥಮ ಮತ್ತು ಜೈನಧರ್ಮದ ಬಗ್ಗೆ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನವನ್ನು ಪರಿಹರಿಸಿಕೊಂಡರು.

ನಂತರ ಮಾತನಾಡುತ್ತ , ಬಾಬಾಸಾಹೇಬರನ್ನು ಕುರಿತು ನಾಳೆ ನಮ್ಮ ಜೈನ ಮುನಿಗಳು ಬರುತ್ತಾರೆ ,ಅವರು ಹಲವು ವಿದ್ವಾಂಸರೊಂದಿಗೆ ಬೌದ್ಧಧಮ್ರ ಮತ್ತು ಜೈನ ಧರ್ಮ ಇವೆರಡರಲ್ಲೂ ಇರುವ ಸಾಮಾನ್ಯ ವಿಷಯಗಳ ಬಗ್ಗೆ ಚರ್ಚಿಸಲು ಸೂಚಿಸಿದ್ದಾರೆ ,ಪ್ರಯುಕ್ತ ನಾವೊಂದು ವೇದಿಕೆಯನ್ನು ಆಯೋಜನೆ ಮಾಡಿದ್ದೇವೆ. ದಯಮಾಡಿ ತಾವು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು.

ಆಗ ಬಾಬಾಸಾಹೇಬರು ತಮ್ಮ ಆರೋಗ್ಯ ಸರಿ ಇದ್ದರೆ ಖಂಡಿತ ಬರುವುದಾಗಿ ತಿಳಿಸಿದರು. ಹೋಗುವಾಗ ಜೈನ ಮುಖಂಡರು , ಶ್ರೀನತಾಲಿಯವರು ಬರೆದಿರುವ ” ಶ್ರಮಣ ಸಂಸತಿಯ ಎರಡು ಧಾರೆಗಳು ,ಜೈನ ಮತ್ತು ಬೌದ್ಧ ” ಎಂಬ ಪುಸ್ತಕದ ಪ್ರತಿಯನ್ನು ಕಾಣಿಕೆಯಾಗಿ ನೀಡಿದರು. ಅದನ್ನು ತಮ್ಮ ಮಂಚದ ಹತ್ತಿರ ಇಡಲು ರುರವರಿಗೆ ತಿಳಿಸಿದರು , ರುರವರು ಬಾಬಾಸಾಹೇಬರ ಕಾಲನ್ನು ಅದಮುತ್ತಾ ಕುಳಿತಿದ್ದರು.

ಸವಿತಾರವರು ಮಾರುಕಟ್ಟೆಯಿಂದ ತಡವಾಗಿ ಮನೆಗೆ ಬಂದಿದ್ದು ಬಾಬಾಸಾಹೇಬರಿಗೆ ತಿಳಿಯಿತು. ಅವರ ಕೋಪ ಎಲ್ಲೆ ಮೀರಿತ್ತು. ಪತ್ನಿ ಸವಿತಾರ ಮೇಲೆ ರೇಗಾಡಿದರು ,ಯಜಮಾನಿಯ ಅಸಹಾಯಕ ಮುಖವನ್ನು ನೋಡಲಾಗದ ರತ್ತು , ತಾನೆ ಮುಂದಾಗಿ ಡಾ.ಬಾಬಾಸಾಹೇಬರಿಗೆ ಸಮಾಧಾನ ಹೇಳಲು ಹೋದ ರತ್ತುಎನ ಮೇಲೂ ಬಾಬಾಸಾಹೇಬರು ಹರಿಹಾಯ್ದರು , ಆಗ ರತ್ತು ಯಾವುದೆ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾದ. ಪೂರ್ವ ನಿರ್ಧಾರದಂತೆ ಡಾ. ಮಾಳವಾಣಕರ್ ಆ ರಾತ್ರಿ ಮುಂಬೈಗೆ ಹೊರಡಲು ರೈಲ್ವೆ ನಿಲ್ದಾಣಕ್ಕೆ ತೆರಳಿದರು.

ಅಷ್ಟೊತ್ತಿಗೆ ಬಾಬಾಸಾಹೇಬರಿಗೆ ಆಯಾಸವಾಗಿತ್ತು. ತಮ್ಮ ತಲೆಗೆ ಎಣ್ಣೆ ಹಚ್ಚಲು ರತ್ತುಗೆ ತಿಳಿಸಿದರು. ರತ್ತು ಎಣ್ಣೆ ಹಚ್ಚುತ್ತಿರುವಾಗಲೆ ಅವರು “ ಬುದ್ದಂ ಸರಣಂ ಗಚ್ಚಾಮಿ , ಧಮ್ಮಮ್ ಸರಣಂ ಗಚ್ಚಾಮಿ, ಸಂಗಮ್ ಸರಣಂ ಗಚ್ಛಾಮಿ, ಎಂದು ಸರಣ ಮತ್ತು ಪಂಚ ಶೀಲಗಳನ್ನು ಗುಣಗುತ್ತಿದ್ದರು. ಅದನ್ನು ರೇಡಿಯೋಗ್ರಾಂನಲ್ಲಿ ನುಡಿಸಲು ಹೇಳಿದರು. ಬಾಬಾಸಾಹೇಬರು ಆದರೊಂದಿಗೆ ದನಿಗೂಡಿಸಿದರು.

ರಾತ್ರಿ ಅಡುಗೆ ಸಿದ್ಧವಾಗಿದೆ ಎಂದು ಎರಡನೆ ಸಾರಿಯ ಕರೆ ಬಂದಾಗ ಅವರು ಎದ್ಧರು. ಊಟದ ಮೇಜಿನ ಬಳಿ ಹೋಗುವಾಗಲೆ , ಸ್ವಲ್ಪ ದೂರದಲ್ಲಿದ್ದ ಒಂದೆರಡು ಕಪಾಟುಗಳ ಬಳಿ ಹೋಗಿ ನಾಲ್ಕಾರು ಪುಸ್ತಕಗಳನ್ನು ಎತ್ತಿಕೊಂಡು, ರತ್ತುಗೆ ಕೊಟ್ಟು , ಅವುಗಳನ್ನು ತಾವು ಮಲಗುವ ಮಂಚದ ಪಕ್ಕದಲ್ಲಿ ಇರುವ ಟೇಬಲ್ ಮೇಲಿಡಲು ಸೂಚಿಸಿದರು.

ಬಾಬಾಸಾಹೇಬರು ಸ್ವಲ್ಪ ಊಟ ಮಾಡಿದರು , ಊಟದ ನಂತರ ಹಣೆ ಒತ್ತಲು ರತ್ತುಗೆ ಹೇಳಿದರು.ಅದಾದ ಬಳಿಕ ಅವರು ಎದ್ದು ಕಬೀರದಾಸರ “ ಚಲ್ ಕಬೀರಾ ತೆರಾ ಬವ ಸಾಗರ್ ದೇರಾ ” ಎಂಬ ದೋಹೆಯನ್ನು ಸಣ್ಣದಾಗಿ ಹಾಡಿಕೊಳ್ಳುತ್ತಾ ಮಲಗುವ ಕೋಣೆಯನ್ನು ಪ್ರವೇಶಿಸಿದರು. ಕಪಾಟುಗಳಿಂದ ತಂದಿದ್ದ ಪುಸ್ತಕಗಳನ್ನು ಅರ್ಧ ಗಂಟೆ ಕಾಲ ತಿರುವಿ ಹಾಕಿದರು.

ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಅಂದು ಮಲಗಿ ಕೊಂಡಾಗ ರಾತ್ರಿ 11 :45 ನಿಮಿಷವಾಗಿತ್ತು , ರತ್ತು ಪಕ್ಕದಲ್ಲೇ ಇದ್ದ. ಹಿಂದಿನ ದಿನ ರಾತ್ರಿ ಅವರು ತನ್ನ ಮನೆಗೆ ಹೋಗಿರಲಿಲ್ಲ . ಯಜಮಾನರಿಗೆ ನಿದ್ರೆ ಬರುವಂತೆ ಕಂಡಾಗ , ಮನೆಗೆ ಹೋಗಲು ಅನುಮತಿ ಪಡೆದು ಆತ. ಮನೆಗೆ ತೆರಳಿದ , ಅವರು ಇನ್ನೂ ತನ್ನ ಮನೆ ತಲುಪಿ ಮನೆಯೊಳಗೆ ಪ್ರವೇಶಿಸಿರಲಿಲ್ಲ , ಹಿಂದಿನಿಂದ ಸೈಕಲ್ ಮೇಲೆ ಬಂದ ಅಡುಗೆ ಭಟ್ಸ್ ಸುಧಾಮ ಯಜಮಾನರು ತಮಗೆ ಕರೆಯುತ್ತಿದ್ದಾರೆಂದು ಆಳಿಸಿದೆ. ಅವರಿಬ್ಬರೂ ಚುನಃ ತಿರುಗಿ ಮನೆಗೆ ಮರಳಿದರು.“ ಬುದ್ಧ ಮತ್ತು ಅವನ ಧಮ್ ” ಕೃತಿಗೆ

ಸಿದ್ದಪಡಿಸಿದ್ದ ಮುನ್ನುಡಿಯ ಪಕ್ಕಾ ಪ್ರತಿಯನ್ನು , ಅತ್ರೆ ಮತ್ತು ಜೋಷಿಗೆ ಬರೆದಿದ , ಹಾಗೂ ಬರ್ಮಾ ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ತಮ್ಮ ಟೇಬಲ್ ಮೇಲೆ ಇಡಲು ಬಾಬಾ ಸೂಚಿಸಿದರು. ರತ್ತು ಅವುಗಳನ್ನು ತಂದಿಟ್ಟು , ಮತ್ತೆ ಅನುಮತಿ ಪಡೆದು ತನ್ನ ಮನೆಗೆ ತೆರಳಿ ಸುಧಾಮ ಎಂದಿನಂತೆ ಟೇಬಲ್ ಮೇಲೆ ಕೆಲವೊಂದು ತಿನಿಸುಗಳನ್ನು ಮತ್ತು ಕಾಫಿ ತುಂಹಿತೆ ಪಾಸ್ ಇಟ್ಟನು. ಹಾಸಿಗೆ ಮೇಲೆ ಬಾಬಾಸಾಹೇಬರು ಮಲಗುತ್ತಲೇ ಅವರನ್ನು ಕಬಳಿಸಲು ಸಾವು ಹೊಂಚು ಹಾಕಿ ಕುಳಿತಿತ್ತು ಎಂಬುವುದು ಯಾರಿಗೂ ತಿಳಿದಿರಲಿಲ್ಲ.

6ನೇ ಡಿಸೆಂಬರ್ 1956ರ ಗುರುವಾರದಂದು ಬೆಳಗಿನ ಜಾವಾ ಎಂದಿನಂತೆ ಸವಿತಾ ಅಂಬೇಡ್ಕರ್‌ರವರು ಮುಂಚೆ ಎದ್ದರು. ಪತಿಯ ಕಡೆ ಕಣ್ಣು ಹಾಯಿಸಿದಾಗ ಅವರಿನ್ನೂ ಮಲಗಿದ್ದರು. ತೋಟದಲ್ಲಿ ಒಂದು ಸುತ್ತು ಹಾಕಿ ಬಂದು ನೋಡಿದರೆ, ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರವರು ಇನ್ನೂ ಮಲಗಿದ್ದನ್ನು ಗಮನಿಸಿ , ಅವರನ್ನು ಎಬ್ಬಿಸಲು ಅನುವಾದರು . ಕೈ ಮುಟ್ಟುತ್ತಲೆ , ತಮ್ಮ ಪತಿಯ ಜೀವ ಹೊರಟು ಹೋಗಿದೆ ಎಂಬುವುದು ಅರಿವಿಗೆ ಬಂದು ,ಅವರು ಕುಸಿದು ಬಿದ್ದರು. ಸಾವರಿಸಿಕೊಂಡು ಸುಧಾಮನ ಮೂಲಕ ರತ್ತುಗೆ ಹೇಳಿ ಕಳುಹಿಸಿದರು. ರತ್ತು ತಡ ಮಾಡದೆ ಧಾವಿಸಿ ಬಂದು ಬಾಬಾಸಾಹೇಬರ ಮುಖ ನೋಡಿ , ಯಜಮಾನಿಯ

ದುಃಖ ಕಂಡು ಅವನಿಗೆ ಕರಳು ಕಿತ್ತು ಬಂದ ಹಾಗೆ ಆಗಿ ಜೋರಾಗಿ ಅಳಲು ಆರಂಬಿಸಿದನು.ಪತ್ನಿ ಸವಿತಾರವರು ಬಾಬಾಸಾಹೇಬರ ಕೈ ಕಾಲುಗಳನ್ನು ಉಜ್ಜಿದರು ತೋಳು ಮಡಚಲು ಯತ್ನಿಸಿದರು. ಬಾಯಿಯಲ್ಲಿ ತೊಟ್ಟು ನೀರು ಹಾಕಿದರು. ಯಾವುದೂ ಪ್ರಯೋಜನವಾಗಲಿಲ್ಲ.ಭಾರತದ ಭಾಗ್ಯವಿಧಾತ ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಪ್ರಾಣ ಪಕ್ಷಿ ರಾತ್ರಿ ಮಲಗಿದಾಗಲೆ ಹಾರಿ ಹೋಗಿತ್ತು.ಕಳೆದ ಎರಡು ವರ್ಷಗಳಿಂದ ಆಶಕ್ತವಾಗಿದ್ದ ಅವರ ಹೃದಯ ಬಡಿತವನ್ನು ನಿಲ್ಲಿಸಿ ಬುದ್ದನ ಪಾದಕ್ಕೆ ಸೇರಿದರು.

ಜೈಭೀಮ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ?

Published

on

  • ವಿವೇಕಾನಂದ. ಹೆಚ್.ಕೆ.

ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ದ, ಜೈನ ಮತ್ತು ಇನ್ನೂ ಅಧೀಕೃತ ಮಾನ್ಯತೆ ಪಡೆಯದ ಬಸವ ಧರ್ಮದ ಮೂಲ ಆಶಯಗಳ ಹಿನ್ನೆಲೆಯಲ್ಲಿ..

ಬೌದ್ದ ಮತ್ತು ಜೈನ ಧರ್ಮಗಳು ಅಹಿಂಸೆ ಮತ್ತು ಸರಳತೆಯನ್ನು, ಆಸೆ ಮತ್ತು ನಿಯಂತ್ರಣಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಹಿಂಸೆಯನ್ನು ಯಾವುದೇ ರೂಪದಲ್ಲೂ ಪ್ರೋತ್ಸಾಹಿಸುವುದಿಲ್ಲ. ಧರ್ಮ ರಕ್ಷಣೆಯ ಒತ್ತಡವನ್ನು ಹೇರುವುದಿಲ್ಲ. ಬಸವ ಧರ್ಮ ಸಮ ಸಮಾಜದ, ಕಾಯಕ ತತ್ವದ ಅಡಿಯಲ್ಲಿ ಸಕಲರಲ್ಲಿ ಒಳ್ಳೆಯದನ್ನೇ ಬಯಸುವ ಆಶಯವನ್ನು ಹೊಂದಿದೆ. ದಯವೇ ಧರ್ಮ ಮೂಲ ಎನ್ನುತ್ತದೆ. ಇನ್ನು ಹಿಂಸೆಯ ಮಾತೆಲ್ಲಿ..?

ಬುದ್ದ, ಮಹಾವೀರ ಕೇಂದ್ರಿತ ಜೈನ ತೀರ್ಥಂಕರರು ಮತ್ತು ಬಸವೇಶ್ವರರು ವ್ಯಕ್ತಿ ಕೇಂದ್ರಿತ ಚಿಂತನೆಗಳ ಆಧಾರದಲ್ಲಿ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕೆಲವು ಅಂಶಗಳನ್ನು ಹೇಳಿದ್ದಾರೆ. ಅವುಗಳನ್ನು ಧರ್ಮ ಎನ್ನುವುದಕ್ಕಿಂತ ಬದುಕಿನ ಸಾರ್ಥಕತೆಯ ಮಾರ್ಗ ಸೂತ್ರಗಳು ಎನ್ನಬಹುದು.

ಒಂದು ರೀತಿಯಲ್ಲಿ ಈ ಧರ್ಮಗಳು ಅಥವಾ ವಿಚಾರಗಳು ಹಿಂದೂ ಜೀವನ ಶೈಲಿಯ ಪ್ರತಿಭಟನೆಯ ರೂಪಾಂತರಗಳು ಎಂದು ಸರಳವಾಗಿ ಹೇಳಬಹುದು.

ಕ್ರಿಶ್ಚಿಯನ್ ಧರ್ಮದಲ್ಲಿ ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ, ಸಮಾಜದ ಅತ್ಯಂತ ದುರ್ಬಲ ವರ್ಗದವರನ್ನು ಪ್ರೀತಿಸಿ – ಅವರಿಗೆ ನೆರವಾಗಿ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆ ಧರ್ಮದ ಅನುಯಾಯಿಗಳು ಅನಂತರದಲ್ಲಿ ಮತಾಂತರಕ್ಕೆ ಪ್ರೋತ್ಸಾಹಿಸಿದರು ಎಂಬುದು ನಿಜ. ಆದರೆ ಅದು ಆಸೆ ಆಮಿಷಗಳ ರೂಪದಲ್ಲಿ ಹೆಚ್ಚಾಗಿ ಕಂಡುಬರುತ್ತದೆಯೇ ಹೊರತು ಈಗಿನ ಕಾಲದಲ್ಲಿ ಹಿಂಸೆಯ ರೂಪ ಅಷ್ಟಾಗಿ ಕಾಣುವುದಿಲ್ಲ.

ಆದರೆ,
ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ಧರ್ಮದ ರಕ್ಷಣೆಗಾಗಿ ಹಿಂಸೆಯ ಪ್ರತಿಪಾದನೆ ಬೇರೆ ಬೇರೆ ರೂಪದಲ್ಲಿ ಕಂಡುಬರುತ್ತವೆ.

ಕಾನೂನಿನ ಪರಿಭಾಷೆಯಂತೆ ಧರ್ಮದ ಅರ್ಥವನ್ನು ಸಹ ಅನೇಕ ಕೋನಗಳಲ್ಲಿ ವಿಧವಿಧವಾಗಿ ಅರ್ಥೈಸಬಹುದು.
ಆದರೆ ಇಲ್ಲಿ ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಯ ಆಧಾರದಲ್ಲಿ ಇದನ್ನು ನೋಡುವ ಒಂದು ಪ್ರಯತ್ನ.

ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ, ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸುವ ಸಂದೇಶದಲ್ಲಿ ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ಕೊಲ್ಲಬೇಕಾಗುತ್ತದೆ. ಅದಕ್ಕಾಗಿ ತಂತ್ರ ಪ್ರತಿತಂತ್ರ ಹಿಂಸೆ ಸೇರಿ‌ ಯಾವುದೇ ಮಾರ್ಗವನ್ನು ಅನುಸರಿಸಬಹುದು. ಇಲ್ಲದಿದ್ದರೆ ಅಧರ್ಮ ಅನ್ಯಾಯ ಹೆಚ್ಚಾಗಿ ಇಡೀ ಸಮಾಜದ ಅಸ್ತಿತ್ವವೇ ಕುಸಿದು ಹೋಗುತ್ತದೆ. ಅಧರ್ಮಿಗಳು ಮತ್ತು ಅವರ ಬೆಂಬಲಿಗರು ಸಹ ಶಿಕ್ಷೆಗೆ ಅರ್ಹರು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ.

ಬಹುತೇಕ ಇದೇ ಅರ್ಥಕೊಡುವ ಅಂಶಗಳನ್ನು ಇಸ್ಲಾಂ ಸಹ ಪ್ರತಿಪಾದಿಸುತ್ತದೆ. ಇಲ್ಲಿ ಕೆಲವು ಗೊಂದಲಗಳು ಇವೆ ಅಥವಾ ಹುಟ್ಟುಹಾಕಲಾಗಿದೆ ಅಥವಾ ಅರ್ಥೈಸಲಾಗಿದೆ.

ಕಾಫೀರರನ್ನು ಕೊಲ್ಲಿ ಎಂದು ಹೇಳಲಾಗಿದೆಯಂತೆ. ಅಂದರೆ ಅಧರ್ಮೀಯರನ್ನು ಅಥವಾ ಧರ್ಮಕ್ಕೆ ವಿರೋಧ ಇರುವವರನ್ನು ಅಥವಾ ಅನ್ಯ ಧರ್ಮೀಯರನ್ನು ಕೊಂದು ಇಸ್ಲಾಂ ಧರ್ಮ ರಕ್ಷಿಸಿ ಎಂದು ಅರ್ಥೈಸಲಾಗುತ್ತದೆ.

ಭಗವದ್ಗೀತೆಯ ಅರ್ಥದಂತೆ ಅಧರ್ಮೀಯರನ್ನು ಕೊಂದಾದರೂ ಧರ್ಮ ರಕ್ಷಿಸಿ ಎಂಬುದು ಮೂಲ ಇಸ್ಲಾಂ ಧರ್ಮದ ಆಶಯ. ಆದರೆ ಆಧುನಿಕ ಕಾಲದ ಕೆಲವು ಭಯೋತ್ಪಾದಕ ಸಂಘಟನೆಗಳು ಮತ್ತು ಇಸ್ಲಾಂ ವಿರೋಧಿ ಗುಂಪಿನವರು ಇಡೀ ಜಗತ್ತೇ ಅಲ್ಲಾ ಎಂಬ ದೇವರ ಸೃಷಿ. ಆದ್ದರಿಂದ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಎಂದು ತಪ್ಪು ಮಾಹಿಯ ನೀಡಿ ಇಸ್ಲಾಂ ಎಂದರೆ ಹಿಂಸೆ ಎಂಬುದಾಗಿ ತಪ್ಪು ಕಲ್ಪನೆ ಮೂಡಿಸಿದ್ದಾರೆ ಎಂದೂ ಹೇಳಲಾಗುತ್ತದೆ.

ಒಟ್ಟಿನಲ್ಲಿ ಮೂಲ ಧರ್ಮ ರಚಿಸಿದವರ ಆಶಯ ಮತ್ತು ಉದ್ದೇಶ ಏನೇ ಇರಲಿ, ಇಂದಿನ ಎರಡೂ ಧರ್ಮದ ಅನುಯಾಯಿಗಳನ್ನು ಅವರ ಆಚರಣೆಗಳನ್ನು ಅವರ ಅಭಿಪ್ರಾಯಗಳನ್ನು ಅವರ ನಡವಳಿಕೆಗಳನ್ನು ನೋಡಿದಾಗ ಇಬ್ಬರಲ್ಲೂ ಶ್ರೇಷ್ಠತೆಯ ವ್ಯಸನ ಮತ್ತು ಇನ್ನೊಂದು ಧರ್ಮದ ಬಗ್ಗೆ ಅಸಹನೆ – ದ್ವೇಷ ತುಂಬಿಕೊಂಡಿರುವುದನ್ನು ಕಾಣಬಹುದು. ಅಲ್ಲದೇ ‌ಹಿಂಸೆಯನ್ನು ಮಾಡಿಯಾದರೂ ನಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ.

ಈ ಎರಡೂ ಧರ್ಮದ ತತ್ವಗಳಲ್ಲಿ ವ್ಯಕ್ತಿಯನ್ನು ಗೌಣವಾಗಿಸಿ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಆತನ ಸ್ವತಂತ್ರ ಚಿಂತನೆಗಳಿಗೆ ಕಡಿವಾಣ ಹಾಕಲಾಗಿದೆ. ಧರ್ಮದ ನೆರಳಲ್ಲಿ ಬದುಕನ್ನು ನಡೆಸಲು ಸೂಚಿಸಲಾಗಿದೆ. ಈ ಕಾರಣದಿಂದಲೇ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಜಾಸ್ತಿಯಾಗಿದೆ.

ಈ ಸಂದರ್ಭದಲ್ಲಿ ನಾವು ಮಾಡಬಹುದಾದದ್ದು ಏನು ???

ಯಾರು ಒಪ್ಪಲಿ ಅಥವಾ ಒಪ್ಪದಿರಲಿ ಈ ಕ್ಷಣದ ಈ ಧರ್ಮಗಳು ನಮ್ಮ ವಿನಾಶಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಈ ಧರ್ಮದ ಆಚರಣೆಗಳು ಮತ್ತು ನಂಬಿಕೆಗಳನ್ನು ಖಾಸಗಿ ಸಂಪ್ರದಾಯವಾಗಿ ಮನೆಯೊಳಗಿನ ವ್ಯವಹಾರದಂತೆ ಭಾವಿಸಬೇಕು. ಸಾರ್ವಜನಿಕವಾಗಿ ನಮ್ಮ ದೇಶದ ಸಂವಿಧಾನವೇ ನಿಜವಾದ ಧರ್ಮ ಎಂದು ಅದಕ್ಕೆ ನಿಷ್ಠರಾಗಿರಬೇಕು.

ಕಾಲಕ್ಕೆ ತಕ್ಕಂತೆ ಕೆಲವು ನಿಯಮಾವಳಿಗಳನ್ನು ಜನರ ಶ್ರೇಯೋಭಿವೃದ್ದಿಗಾಗಿ ತಿದ್ದುಪಡಿ ಮಾಡುತ್ತಾ, ವ್ಯಕ್ತಿಯ ಘನತೆಯನ್ನು, ಸ್ವಾತಂತ್ರ್ಯ ಸಮಾನತೆಯನ್ನು ಕಾಪಾಡುತ್ತಾ ಸಂವಿಧಾನವೇ ಧರ್ಮ ಎಂದು ಭಾವಿಸಿದಲ್ಲಿ ಆಧುನಿಕ ನಾಗರಿಕ ಸಮಾಜದ ಬದುಕು ಧರ್ಮದ ಕಾಲಕ್ಕಿಂತ ಹೆಚ್ಚು ಸಹನೀಯ ಮತ್ತು ನೆಮ್ಮದಿತ್ತ ಸಾಗುತ್ತದೆ. ಈ ವಿಷಯದಲ್ಲಿ ನೀವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಮತ್ತೊಮ್ಮೆ ಯೋಚಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending