Connect with us

ಅಂತರಂಗ

‘ಕಾಳು ಕಡಿ ಮಾರುವವ’ ಕೊರೋನಾ ತರಲಿಲ್ಲ ; ಅವನನ್ನು ಎಚ್ಚರಿಸೋಣ ಆದರೆ, ಹೊಣೆಗಾರನಾಗಿಸುವುದು ಬೇಡ

Published

on

  • ಶಿವಕುಮಾರ್ ಮಾವಲಿ

ನಾವೆಲ್ಲರೂ ಮನೆಗಳಲ್ಲಿರುವುದೇ ಈಗ ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಪಾಲಿಸಲೇಬೇಕಂಬುದೂ ಸತ್ಯ.

ಆದರೆ …

ಸಂದರ್ಭದಲ್ಲಿ ಎಲ್ಲದಕ್ಕೂ ಕೇವಲ‌ ಜನರನ್ನೇ ಹೊಣೆ‌ ಮಾಡಲು ಸರ್ಕಾರ‌ ಮತ್ತು ಮಾಧ್ಯಮಗಳು ತುದಿಗಾಲಲ್ಲಿದ್ದಂತಿದೆ. ಪೋಲೀಸರು ಹೊಡೆಯುತ್ತಿರುವ ಚಿತ್ರಗಳನ್ನು ನೋಡಿದಾಗ ಈ ತರಕಾರಿ ಮಾರುವವರು, ಹೂವು ಮಾರುವವರೇ ಕೊರೊನಾ ವೈರಸ್ ನ್ನು ತಂದು ಈ ದೇಶಕ್ಕೆ ಹರಡಿದವರಂತೆ ಭಾಸವಾಗುತ್ತದೆ.

ಕೊರೋನಾ ತಂದವರು ಯಾರು ? ವಿಮಾನಗಳಲ್ಲಿ ಓಡಡುವ ಜನ ಯಾರು ಮತ್ತು ಅವರ ಸಂಖ್ಯೆ ಎಷ್ಟು ? ಅದರಲ್ಲಿ ಮಕ್ಕಾ ಮದೀನ ಅಂದುಕೊಂಡ ಹೋದವರೆಷ್ಟು ? ಅವರನ್ನು ನಿಯಂತ್ರಿಸಲು , ಅವರನ್ನು ಪ್ರತ್ಯೇಕಗೊಳಿಸುವ ,ನಿಗಾ ವಹಿಸುವ ದೂರದೃಷ್ಟಿ ಯಾಕೆ ನಮ್ಮ ಯಾವ ನಾಯಕರುಗಳಿಗೂ ಬರಲೇ ಇಲ್ಲ ? ಹಾಗಾದರೆ ಯಾರೆಲ್ಲ ತುರ್ತಾಗಿ ಈ ವಿದೇಶಗಳಿಂದ ಬಂದು ನಮ್ಮ ದೇಶ ಸೇರಿಕೊಳ್ಳಲಿ ಎಂದು ಹರಡುತ್ತಿದ್ದರು ? ಬೀದಿಗೆ ಇಳಿದವನಿಗೆ ಹೊಡೆದಂತೆ ವಿಮಾನ ನಿಲ್ದಾಣದಲ್ಲಿ ಟೆಸ್ಟ್ ತಪ್ಪಿಸಿಕೊಂಡು ಓಡಲೆತ್ನಿಸಿದವರ ಮೇಲೂ ಹೀಗೆ ಲಾಟಿ ಬೀಸುತ್ತಿದ್ದರೆ ? ಇಡೀ ದೇಶವನ್ನು ಲಾಕ್ ಡೌನ್ ಮಾಡುವ ಅನಿವಾರ್ಯ ಸ್ಥಿತಿ ತಲುಪುವ ತನಕ ಕಾದದ್ದು ಯಾರಿಗೆ ?

ಈಗ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಆದರೆ ಇಂಥ ಸಮಯದಲ್ಲಿ ಟಿವಿ ಚಾನೆಲ್ ಗಳು ಕೇವಲ ಜಾಗೃತಿಯನ್ನು ಮಾತ್ರ ಮೂಡಿಸುತ್ತಿಲ್ಲ .ಜೊತೆಗೆ ಭಯ ಹುಟ್ಟಿಸುತ್ತ , ಪ್ರತಿ ಸಾಮಾನ್ಯ ಮನುಷ್ಯನನ್ನೂ ಅಪರಾಧಿ ಸ್ಥಾನದಲ್ಲಿ ಇರಿಸುವಂತೆ ಮಾಡುತ್ತಿರುವುದರಿಂದ ಇದನ್ನು ನೆನಪು ಮಾಡಿಕೊಳ್ಳ ಬೇಕಾಗುತ್ತದೆ. ಜೊತೆಗೆ ಅವರು ರೋಗದ ಲಕ್ಷಣಗಳು ಕಾಣಿಸಿಕೊಂಡರೂ ಭಯ ಪಡದೆ ತಕ್ಷಣ ಏನು ಮಾಡಬೇಕು ? ಇದರಿಂದ ಗುಣಮುಖರಾಗಲು ಪ್ರಯತ್ನ ಹೇಗೆ ನಡೆದಿದೆ ಎಂಬ ಮಾಹಿತಿಯನ್ನೂ ನೀಡುವ ಕಡೆ ಗಮನ ಕೊಡಬೇಕಲ್ಲವೆ ? ಅಲ್ಲದೆ , ಸಾವು , ತಿಥಿ, ಸಮಾಧಿ , ಸ್ಮಶಾನ , ಹೊಗೆ ಹಾಕೊಸ್ಕೋತೀರ ಇಂಥ ಪದಗಳ ಪ್ರಯೋಗವನ್ನು ದಯವಿಟ್ಟು ಮಾಡಬೇಡಿ. ಇದು ಮನೆಯಲ್ಲೇ ಇರುವ ಜನರನ್ನು ಅಧೈರ್ಯಗೊಳಿಸುತ್ತದೆ. ಅಗತ್ಯ ವಸ್ತುಗಳನ್ನು ತರಲು ಹೋದಾಗಲೂ ಈ ಸೋಂಕು ಅಕಸ್ಮಾತ್ ತಗುಲಬಹುದಲ್ಲವೆ ? ಅದಕ್ಕೂ ಯಾರನ್ನು ಹೊಣೆ ಮಾಡುವುದು ? ಹಾಗಾಗಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವೂ ನಿಮ್ಮಿಂದಾಗಬೇಕಿದೆ.‌ ದಯವಿಟ್ಟು ಸುದ್ದಿಗಳನ್ನು ಓದುವಾಗ ಅರಚಾಡಬೇಡಿ.‌ ಎಲ್ಲ ವಯಸ್ಸಿನವರೂ ಈ ಸುದ್ದಿಗಳನ್ನು ನೋಡುತ್ತಿರುತ್ತಾರೆ‌ ಎಂಬುದನ್ನು ಮರೆಯದಿರಿ.

ಬೇರೆ ದೇಶಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು. ಹಾಗೆಯೇ ಆ ದೇಶಗಳು ಎಲ್ಲ ನಾಗರೀಕರನ್ನು ಸಮಾನವಾಗಿ ಕಾಣುವ ಪಾಠವನ್ನೂ ಕಲಿಯಬೇಕು ನಾವು. ವಿದೇಶಗಳಿಂದ ಬರುವವರನ್ನು ರಕ್ಷಿಸಲು , ದೊಡ್ಡ ಸಂಖ್ಯೆಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಬಗ್ಗೆ ಕಾಳಜಿ ಮರೆತು, ಈಗ ಇವರೆಲ್ಲರನ್ನು ಕಾಪಾಡಲೇಬೇಕೆಂದು ತೀರ್ಮಾನಿಸಿ, ಕಡುಬಡವರು, ನಿರ್ಗತಿಕರನ್ನು ಮರೆಯುವಷ್ಟು ಸ್ವಾರ್ಥಿಗಳಾದೆವೆ ನಾವು ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಅರಿಮೆಯ ಅರಿವಿರಲಿ-4 : ಒಳಗತ್ತಲ ಕಳ್ಳರು

Published

on

Art by Muhmmed Salah
  • ಯೋಗೇಶ್ ಮಾಸ್ಟರ್

ಅಡ್ಡಗಾಲಾಗುವ ಅರಿಮೆಗಳು

ದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ ಅದಕ್ಕೆ ಹಾಗೆ ಕುಣಿಯಲು ಕಾಲೂ ಬಾರದು, ಕೂಗಲು ದನಿಯೂ ಏರದು.

ಕೆಲವೊಮ್ಮೆ ಯಾವುದೋ ಮದುವೆಯೋ ಅಥವಾ ಅಣ್ಣಮ್ಮನ ಉತ್ಸವದಲ್ಲೋ ಗೆಳೆಯರು ಟಪ್ಪಾಂಗೋಚಿ ಸ್ಟೆಪ್ಸ್ ಹಾಕುತ್ತಿರುತ್ತಾರೆ. ಅವರೊಂದಿಗೆ ಮನಸಾರೆ ಕೂಗುತ್ತಾ ನಲಿಯುತ್ತಾ ಕುಣಿಯುವ ಎಂದು ಎನಿಸುತ್ತದೆ. ಅಲ್ಲಿ ಎಲ್ಲಾ ಆಹ್ವಾನಿಸುವವರೇ ಇರುತ್ತಾರೆ. ಆದರೆ ಕೆಲವರಿಗೋ ಕಾಲು ಮುನ್ನಡೆಯದು, ಕೈಗಳು ಮೇಲೇಳದು, ಕುಣಿಯಲಾಗದು. ಕೆಲವರು ಅದ್ಯಾವುದೋ ಸಭೆಯಲ್ಲಿ ಭಾಷಣ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಮುಖ್ಯ ಅಂಶಗಳ ಪಟ್ಟಿ ಕೈಯಲ್ಲಿರುತ್ತದೆ.

ಆದರೆ ಸಭೆಯಲ್ಲಿ, ವೇದಿಕೆಯ ಮೇಲೆ ಜನಗಳ ಮುಂದೆ ಕೈಗಳು ನಡುಗುತ್ತಿರುತ್ತವೆ, ಗಂಟಲು ಒಣಗುತ್ತದೆ, ಧ್ವನಿ ಹೊರಡದು, ಬೆವರು ತೊಟ್ಟಿಕ್ಕುತ್ತಿರುತ್ತದೆ, ಹೊಟ್ಟೆಯಲ್ಲಿ ತೊಳೆಸಿದಂತೆ ಆಗುತ್ತಿರುತ್ತದೆ, ಹೇಳಬೇಕಾದುದನ್ನು ಹೇಳದೇ ‘ಬೆಬೆಬೆಬೆ’ ಎನ್ನುತ್ತಾ ವೇದಿಕೆಯಿಂದ ಕೆಳಕ್ಕಿಳಿದರೆ ಸಾಕು ಎಂದು ಏನೋ ಒಂದಷ್ಟು ವದರಿ ಓಡಿಬಂದಿರುತ್ತಾರೆ. ಕೆಲವರು ಎಷ್ಟು ಸ್ವಾತಂತ್ರ್ಯವಿದ್ದರೂ ದೀನರಾಗಿಯೇ ವರ್ತಿಸಿದರೆ, ನಿರ್ಬಂಧವಿರುವ ಕಡೆಯಲ್ಲೂ ಕೆಲವರು ಠಾಕುಠೀಕಾಗಿ ಕಾರುಬಾರು ಮಾಡುತ್ತಿರುತ್ತಾರೆ.

ಹೀಗೆ ಹಲವು ಬಗೆಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಅವನೆಷ್ಟೇ ಚೆನ್ನಾಗಿರುವ ಉತ್ಪಾದನೆಗಳನ್ನು ಮಾಡಿದರೂ ಹಿಂಜರಿಕೆಯಲ್ಲೇ ಪ್ರಚಾರ ಮಾಡದೇ ಹಿಂದುಳಿದು ನಷ್ಟಕ್ಕೊಳಗಾಗುತ್ತಾನೆ. ಯಾವ ಗಟ್ಟಿ ಮತ್ತು ಶಕ್ತ ಉತ್ಪಾದನೆಯಲ್ಲದಿದ್ದರೂ ನಾಜೂಕಾಗಿ ಪ್ರಚಾರ ಮಾಡಿಕೊಂಡು ಗಟ್ಟಿದನಿಯಿಂದ ನೀವಿದನ್ನು ಹೊಂದಲೇ ಬೇಕು ಎಂದು ತಾಕೀತು ಮಾಡುತ್ತಾ ಮತ್ತೊಬ್ಬ ಯಶಸ್ಸನ್ನು ಕಾಣುತ್ತಾನೆ. ಇವೆಲ್ಲಾ ಏಕಾಗುತ್ತದೆ? ಅವರವರ ಹಣೆಬರಹ ಎಂದುಬಿಡಬೇಡಿ.ಅವರವರ ಮನೋಬರಹವೆನ್ನಿ.

ಟೀ ಶರ್ಟ್, ಜೀನ್ಸ್; ಎಂತದ್ದೋ ಬಟ್ಟೆ ಹಾಕಿಕೊಂಡಿರುವ ಈ ಯೋಗೇಶನನ್ನು ನೀವು ಹೊರಗೆ ನೋಡುತ್ತಿದ್ದೀರಿ. ಆದರೆ, ಬೆತ್ತಲಾಗಿರುವ ಅನೇಕಾನೇಕ ಯೋಗೇಶರು ಈ ಬಟ್ಟೆತೊಟ್ಟಿರುವ ಯೋಗೇಶನೊಳಗೆ ಇರುತ್ತಾರೆ.
ಒಬ್ಬ ವ್ಯಕ್ತಿಯ ಮನಸ್ಸಿನೊಳಗೆ, ಒಳಗತ್ತಲಿನಲ್ಲಿ ಎಂತೆಂತಹ ಅದೇ ವ್ಯಕ್ತಿಗಳು ಅಡಗಿಕೊಂಡಿರುತ್ತಾರೆ ಗೊತ್ತೋ! ಕಾಮುಕ, ಸ್ವಾರ್ಥಿ, ಕ್ರೂರಿ, ದೀನ, ಮೋಸಗಾರ, ರಸಿಕ, ಸರಸಿ, ವಿರಹಿ, ಕೊಲೆಗಾರ, ಪ್ರೇಮಿ, ಪೋಷಕ, ಕರುಣಿ, ದುಃಖಿ, ಆನಂದಿ; ಹೀಗೆ ಹಲವಾರು ವ್ಯಕ್ತಿಗಳುಅವಿಸಿಟ್ಟುಕೊಂಡಿರುತ್ತಾರೆ.

ಅವರಲ್ಲಿ ಕೆಲವರು ಬಲಿಷ್ಟರು, ಕೆಲವರು ದುರ್ಬಲರು, ಮತ್ತೆ ಕೆಲವರು ಶಿಶುಗಳು. ಅವರವರಿಗೆ ಅವರದೇ ಸ್ವಭಾವಗಳು, ಅವರವರ ಸ್ವಭಾವಕ್ಕೆ ಹೊರಗಿನ ಜಗತ್ತಿಗೆ ಕಾಣುವ ಸ್ಥೂಲವ್ಯಕ್ತಿಯನ್ನು ಆಡಿಸಲು ಯತ್ನಿಸುತ್ತಾರೆ.

ನೆನಪಿರಲಿ, ಕಣ್ಣಿಗೆ ಕಾಣದ ಮೇಲೆಲ್ಲೋ ಇರುವ ಒಬ್ಬ ಸೂತ್ರಧಾರನ ಇಚ್ಚೆಯಂತೆ ಪಾತ್ರಧಾರಿಯು ವರ್ತಿಸುವುದಲ್ಲ. ಒಳಗಿರುವ ಅನೇಕ ಸೂತ್ರಧಾರರ ಸ್ವಭಾವಕ್ಕೆ ತಕ್ಕಂತೆ ಲೋಕ ಕಾಣುವ, ಸಮಾಜದಲ್ಲಿರುವ ಒಬ್ಬ ಪಾತ್ರಧಾರಿಯು ವರ್ತಿಸುವುದು!
ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ ಎನ್ನುತ್ತಾರಲ್ಲಾ, ಈ ವಾಕ್ಯವನ್ನು ಸ್ವಲ್ಪ ಸರಿಪಡಿಸಿಕೊಳ್ಳಬೇಕು. ತಾನೊಂದು ಬಗೆದರೆ ಬೇರೊಂದು ಬಗೆವುದು ನಮ್ಮ ಅರಿಮೆಗಳು. ಇನ್‍ಸ್ಟಾಲ್ ಆಗಿರುವ ಸಾಫ್ಟ್‍ವೇರ್‍ಗಳ ಪ್ರಕಾರ ಪ್ರೊಗ್ರಾಮ್‍ಗಳು ನಡೆಯುತ್ತಿರುತ್ತವೆ. ಇನ್‍ಸ್ಟಾಲ್ ಆಗಿರುವ ನಾವು ಎಷ್ಟೋ ವಿಷಯಗಳ ಬಗ್ಗೆ ಜಾಗೃತರಾಗಿ ತೊಡಗಿಕೊಳ್ಳಲು ಬಯಸಿದರೂ ತೊಡರುಗಾಲಾಗುವವು ನಮ್ಮದೇ ‘ಮೊದಲು ಇನ್‍ಸ್ಟಾಲ್ ಆಗಿರುವ ಸಾಫ್ಟ್‍ವೇರ್‍ಗಳು’ ಅಥವಾ ಅರಿಮೆಗಳು.

ಒಳಗತ್ತಲಿನ ಕಾಮುಕ

ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಸೋಗಿನ ಮನೋಭಾವವಿದೆ. ಅದರ ಬಗ್ಗೆ ಅಭಿಪ್ರಾಯಗಳನ್ನು ಪ್ರಕಟಿಸುವಲ್ಲಿ ಅಪ್ರಮಾಣಿಕತೆ ಇದೆ. ಇನ್ನು ಆಲೋಚನೆಗಳೋ ಅನಾರೋಗ್ಯದ ಪರಮಾವಧಿಯಲ್ಲಿವೆ. ಹಾಗಾಗಿ, ಒಬ್ಬ ಸಾಮಾನ್ಯ ಭಾರತೀಯನ ಒಳಗತ್ತಲೆಯಲ್ಲಿರುವ ಕಾಮುಕನಿಗೆ ಲೈಂಗಿಕತೆಯನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಅವನಿಗೆ ಪ್ರೇಮವೆಂದರೂ ಕಾಮವೇ, ಲೈಂಗಿಕತೆ ಎಂದರೂ ಕಾಮವೇ, ದಾಂಪತ್ಯವೆಂದರೂ ಕಾಮವೇ, ಮಗುವೆಂದರೂ ಕಾಮದ ಫಲವೇ, ವ್ಯಕ್ತಿಗಳಿಬ್ಬರ ಏಕಾಂತ ಎಂದರೂ ಕಾಮವೇ, ಗಂಡು ಹೆಣ್ಣಿನ ಸ್ನೇಹವೆಂದರೂ ಕಾಮವೇ; ಹೀಗೆ ಎಲ್ಲವೂ ಕಾಮುಕತೆಯದೇ ಆಗಿರುತ್ತದೆ. ಇಲ್ಲೇ ಸಮಸ್ಯೆ ಇರುವುದು. ಪ್ರೇಮ, ಲೈಂಗಿಕತೆ, ದಾಂಪತ್ಯ, ಏಕಾಂತ, ಸ್ನೇಹ, ಮಗು; ಇವು ಯಾವುದಕ್ಕೂ ಕಾಮಕ್ಕೆ ಯಾವ ಸಂಬಂಧವೂ ಇಲ್ಲ. ಆದರೆ ವ್ಯಕ್ತಿಯ ಒಳಗತ್ತಲಲ್ಲಿರುವ ಕಾಮುಕ ಯಾವುದನ್ನಾದರೂ ಕಾಮಕ್ಕೆಳೆಸಬಹುದು. ಲೈಂಗಿಕಾಂಗಗಳಲ್ಲಿ ಕಾಮುಕತೆ ಇಲ್ಲ.

ವ್ಯಕ್ತಿಯೊಳಗಿನ ಕಾಮುಕನು ಯಾವುದನ್ನಾದರೂ ತನ್ನ ಕಾಮುಕತೆಗೆ ವಸ್ತುವನ್ನಾಗಿ ಮಾಡಿಕೊಳ್ಳಬಹುದು. ನಮ್ಮಲ್ಲಿ ಪ್ರತಿಯೊಬ್ಬರೂ ಕಾಮುಕತೆಯು ಬಳಸಿಕೊಂಡ ಲೈಂಗಿಕಕ್ರಿಯೆಯಿಂದಲೇ ಹುಟ್ಟಿರುವುದು. ಯಾರೊಬ್ಬರ ತಂದೆ ತಾಯಿ ಅದೆಷ್ಟೇ ಸಾಧು ಸಂತರಂತಹ ಜೀವನ ಮಾಡುತ್ತಿದ್ದರೂ ಅವರಿಗೆ ಮಗು ಹುಟ್ಟಿದೆ ಎಂದರೆ ಶಾರೀರಿಕವಾಗಿ ಲೈಂಗಿಕಕ್ರಿಯೆಯೂ, ಮನೋಭಾವುಕವಾಗಿ ಕಾಮುಕತೆಯೂ ಅಲ್ಲಿತ್ತು ಎಂದೇ ಅರ್ಥ.

ನಮ್ಮ ಹುಟ್ಟಿನ ಮೂಲವೇ ಲೈಂಗಿಕತೆಯೂ ಮತ್ತು ಕಾಮುಕತೆಯೂ ಆಗಿರುವುದರಿಂದ ಸಹಜವಾಗಿ, ಪ್ರಕೃತಿ ಸಹಜವಾಗಿ, ನಮ್ಮಲ್ಲಿರುವ ಮೂಲ ಪ್ರವೃತ್ತಿ ಲೈಂಗಿಕತೆಯ ಮೂಲಕ ಕಾಮುಕತೆಯ ವಾಂಛೆಯನ್ನು ಪೂರೈಸಿಕೊಳ್ಳಲು ಯತ್ನಿಸುತ್ತದೆ.

ಆದರೆ, ಸಮಾಜವು ಕಾಮುಕತೆಯನ್ನು ನಿಗ್ರಹಿಸುವ ಭರದಲ್ಲಿ ಲೈಂಗಿಕತೆಗೂ ಕಡಿವಾಣ ಹಾಕಿರುವ ಕಾರಣ ವ್ಯಕ್ತಿಗಳಲ್ಲಿ ಮನೋಲೈಂಗಿಕ ಸಂಘರ್ಷಗಳು ಉಂಟಾಗುತ್ತವೆ. ವ್ಯಕ್ತಿಗಳಲ್ಲಿನ ಬಹುಪಾಲು ಸಮಸ್ಯೆಗಳು ಮನೋಲೈಂಗಿಕ ಸಂಘರ್ಷಗಳಿಂದಲೇ ಉಂಟಾಗಿರುವುದು. ನೈಸರ್ಗಿಕವಾಗಿರುವ ಲೈಂಗಿಕತೆ ಬೇಕು, ಆದರೆ ಸಾಮಾಜಿಕವಾಗಿ ಕಾಮುಕತೆಯನ್ನು ದಮನಿಸಬೇಕು. ಹಾಗಾಗಿಯೇ ಸಂಘರ್ಷ. ಈ ಲೈಂಗಿಕತೆಯ ಮತ್ತು ಕಾಮುಕತೆಯ ನಡುವಿನ ಭಿನ್ನತೆ ಮತ್ತು ಸಂಬಂಧ ಸೂಕ್ಷ್ಮಗಳ ಅರಿವು ಇಲ್ಲದಿರುವ ಕಾರಣವು ಅರಿಮೆಗಳನ್ನು ಹೊಂದುವಂತೆ ಮಾಡುತ್ತವೆ. ಒಳಗತ್ತಲಿನ ಕಳ್ಳರು ಹೊರಗೆ ಕನ್ನ ಹಾಕುತ್ತಿರುತ್ತಾರೆ. ಆಗ ಹೊರಗೆ ಕಾಣುವ ವ್ಯಕ್ತಿಯನ್ನೇ ಕಳ್ಳ ಎನ್ನುತ್ತೀರಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಅರಿಮೆಯ ಅರಿವಿರಲಿ-3 : ಮನೋಬರಹವುಂಟು ಹಣೆಬರಹವಿಲ್ಲ

Published

on

Art by Evan Hauton
  • ಯೋಗೇಶ್ ಮಾಸ್ಟರ್

ಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ ಯಾವುದೇ ವಿಷಯ ವಸ್ತುಗಳಿಗಿಂತ ಸಂಕೀರ್ಣವಾಗಿರುವುದು, ಗೋಜುಗೋಜಲಾಗಿರುವುದು.

ವಿಪರ್ಯಾಸವೆಂದರೆ ಸಾಮಾನ್ಯವಾಗಿ ಮನುಷ್ಯ ಸರಳವಾಗಿರಬಹುದಾದ ತನ್ನ ಮನಸ್ಸನ್ನು ತಾನೇ ಸಂಕೀರ್ಣಗೊಳಿಸಿಕೊಳ್ಳುವುದು. ಸರಳ ಅಂದರೆ ಯಾವ ಮನಸ್ಸೂ ತೀರಾ ಸರಳವಾಗೇನೂ ಇದ್ದಿರುವುದಿಲ್ಲ. ಸಹಜವಾಗಿಯೇ ಕೆಲವು ಬಗೆಯ ಜಟಿಲತೆಗಳು ಮನಸ್ಸಿಗೆ ಇರುತ್ತವೆ. ಆದರೆ, ಅವನ್ನು ಗಮನಿಸಿಕೊಂಡು ಹೋಗಲಾಡಿಸಿಕೊಳ್ಳುವ ಬದಲು ಅಥವಾ ಅದನ್ನು ಪೋಷಿಸುವ ಬದಲು ಮತ್ತಷ್ಟು ಸಂಕೀರ್ಣಗೊಳಿಸಿಕೊಳ್ಳುತ್ತಾ ಹೋಗುವುದು ಮನುಷ್ಯನ ಸಾಮಾನ್ಯವಾದ ಹಣೆಬರಹ. ಕ್ಷಮಿಸಿ ಇದು ಹಣೆಬರಹವಲ್ಲ. ಮನೋಬರಹ.

ಯಾರೊಬ್ಬರ ಮನೋಬರಹದ ಆಧಾರದ ಮೇಲೆ ಹಣೆಬರಹವೆಂದು ಅದೇನು ಹೇಳುತ್ತೇವೋ ಅದು ನಿರ್ಧಾರವಾಗುವುದು. ಇಷ್ಟು ತಿಳಿಯೋಣ. ನಮ್ಮ ಕಲಿಕೆ, ಸಾಧನೆ, ವೇದನೆ, ಸಂಬಂಧಗಳು ಕೊಡುವ ನೋವು, ಮೋಸ ಹೋಗುವುದು, ವೈಫಲ್ಯ; ಇತ್ಯಾದಿಗಳನ್ನೆಲ್ಲಾ ಹಣೆ ಬರಹವೆಂದು ನಿಟ್ಟುಸುರು ಬಿಡುವರ ಬಹುಪಾಲು ವಿಷಯಗಳು ಮನೋಬರಹದ ಮೇಲೆ. ಮನಸ್ಸೆಂಬ ಕಾಲ್ಪನಿಕ ಸ್ಲೇಟಿನ ಮೇಲೆ ಏನೇನೋ ಏನೇನೋ ಬರೆದಿರುತ್ತದೆ. ಮಗುವಾಗಿದ್ದಾಗ ಖಾಲಿಸ್ಲೇಟಾಗಿರುತ್ತದೆ. ಅದರ ಮೇಲೆ ಅಮ್ಮ, ಅಪ್ಪ, ಅಜ್ಜಿ, ಕುಟುಂಬ, ಶಾಲೆ, ಸಮಾಜ, ಧರ್ಮ; ಹೀಗೇ ಎಲ್ಲರೂ ತೋಚಿದಂತೆಲ್ಲಾ ಗೀಚುತ್ತಾ ಹೋಗುತ್ತಾರೆ.

ಸಾಲದಕ್ಕೆ ಇವರೆಲ್ಲರ ಪಾಠ ಪ್ರವಚನದಿಂದಾಗಿ ನಾವೂ ನಮ್ಮದನ್ನು ಗೀಚಿಕೊಂಡುಕೊಂಡು ಹೋಗುತ್ತೇವೆ. ಇದೇ ಮನೋಬರಹ. ನಮ್ಮ ಸಾಧನೆ, ವೇದನೆ, ವೈಫಲ್ಯಗಳಿಗೆ ಬಹುಪಾಲು ಕಾರಣ ಬ್ರಹ್ಮನೆಂಬುವನ್ಯಾರೋ ಬರೆದಿರುವ ಹಣೆಬರಹವಲ್ಲ. ನಾವೂ ಮತ್ತು ನಮ್ಮವರು ಬರೆದಿರುವ ಮನೋಬರಹ. ಅಂತಹ ಬರಹಗಳೇನಕವು ಅರಿಮೆಗಳಾಗುತ್ತವೆ. ನಾವು ಬಹುಪಾಲು ಮಂದಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವವರು. ಎಡವಿದ ಕಲ್ಲನ್ನು ದೂರುವ ಜನ. ಕಲ್ಲನ್ನು ಎಡವಿದರೆ, ಈ ದರಿದ್ರದ ಕಲ್ಲು ಅಡ್ಡಬಂದು ಎಡವಿದೆ ಎನ್ನುವವರು. ಒಂದು ಮಗುವೂ ಕೂಡಾ ನಾನು ಆಡುವಾಗ ಬಿದ್ದೆ ಎನ್ನದು. ಅವನ್ಯಾರೋ ದೂಡಿದ, ತಳ್ಳಿದ. ಇವನ್ಯಾರೋ ಬೀಳಿಸಿದ ಎನ್ನುವುದು.

ಕುಡಿತ, ಸಿಗರೇಟಿನ ಚಟದಿಂದ ಚಟ್ಟ ಹತ್ತುವ ಹಂತಕ್ಕೆ ಹೋಗಿರುವ ಹುಡುಗನ ತಾಯಿ, ನಮ್ಮ ಹುಡುಗ ಒಳ್ಳೆಯವನೇ ಆದರೆ ಅವನು ಸಹವಾಸದಿಂದ ಕೆಟ್ಟ ಅಂತ ಅನ್ನುವಳು. ಅಂತಹ ತರಬೇತಿಯೇ ನಮಗೆ ಸಿಕ್ಕಿರುವುದು. ಹಾಗಾಗಿ, ನನ್ನ ವೈಫಲ್ಯಕ್ಕೆ ನಾನೇ ಕಾರಣ ಎನ್ನುವ ನಾಚಿಗೇಡಿತನದ ಮಾತಾಡದೇ ನನ್ನ ಹಣೆಬರಹ ಹಾಗಿದ್ದುದರಿಂದ ಹಾಗಾಯಿತು ಎನ್ನುವವರು ನಾವು. ಸರಿ, ಈಗ ಮನೋಬರಹಗಳು ಅರಿಮೆಗಳಾಗುವುದು ಎಂತು? ನೋಡೋಣ.

ಕಾಡುವ ಕಾಂಪ್ಲೆಕ್ಸುಗಳು

ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳಿಂದ ಸಾಮಾನ್ಯವಾಗಿ ಗ್ರಹಿಸುವ ವಿಷಯಗಳೂ ಮತ್ತು ಮತ್ತೊಂದು ಇಂದ್ರಿಯವಾದ ಮನಸ್ಸಿನ ಆಲೋಚನಾ ಕ್ರಮಗಳನ್ನು ವಿರೂಪಗೊಳಿಸಿ, ಅಸ್ವಾಭಾವಿಕವಾದ ವರ್ತನೆಗಳನ್ನು ಪ್ರಕಟಗೊಳಿಸುವುದನ್ನೇ ಮಾನಸಿಕ ಜಟಿಲತೆಗಳೆಂದು ಅಥವಾ ಕಾಂಪ್ಲೆಕ್ಸ್‍ಗಳೆಂದು ಕರೆಯಹುದು. ಅರಿಮೆ ಎಂದೂ ಇದನ್ನು ಕರೆಯಬಹುದು. ಯಾವುದು ಅಪ್ರಜ್ಞಾಪೂರ್ವಕವಾಗಿ ನಮ್ಮ ಮನಸ್ಸಿನಾಳದಲ್ಲಿರುತ್ತದೆಯೋ ಅದನ್ನು ಅರಿಮೆ ಎನ್ನಬಹುದು. ಉದಾಹರಣೆಗೆ ಮಾತೃಭಾಷೆಯನ್ನೇ ತೆಗೆದುಕೊಂಡರೆ, ಅದು ವಾತಾವರಣದ ಪ್ರಭಾವದಿಂದ ರೂಪುಗೊಂಡಿರುವಂತಹ ಅರಿಮೆ. ನುಡಿಯರಿಮೆ. ಭಾವುಕವಾದಾಗ, ಆಳವಾದ ಮನಸ್ಸಿನಲ್ಲಿ ಆಲೋಚನೆಗಳು ಮೂಡುವಾಗ, ಸಿದ್ಧತೆ ಇಲ್ಲದೇ ಅಭಿವ್ಯಕ್ತಿಸುವಾಗ ಸಾಮಾನ್ಯವಾಗಿ ತಮ್ಮ ತಾಯ್ನುಡಿಯೇ ಮೇಲ್ಗೈ ಸಾಧಿಸುತ್ತದೆ. ಅದೇ ರೀತಿ ಭಾಷೆಯ ಉಚ್ಚಾರಣೆಯೂ ಕೂಡಾ. ಇದನ್ನು ಉಲಿಯರಿಮೆ ಎನ್ನಬಹುದೇನೋ.

ಯಾವುದೇ ವ್ಯಕ್ತಿಗೆ ತನ್ನ ತಾಯ್ನುಡಿಯ ಉಚ್ಚಾರಣೆ ಅಥವಾ ಪ್ರಾದೇಶಿಕ ಶೈಲಿಯ ಉಚ್ಚಾರಣೆ ಅಂತರ್ಗತವಾಗಿದ್ದು ಅವನಿಗೆ ಅರಿವಿಲ್ಲದಂತೆಯೇ ಆತನ ಮಾತುಗಳಲ್ಲಿ ಇಣುಕುತ್ತಿರುತ್ತದೆ. ಇದೇ ರೀತಿ ಅರಿಮೆಗಳು ಮನಸ್ಸಿಗೆ ಸಂಬಂಧಪಟ್ಟಂತೆಯೂ ಇವೆ. ಸಕಾರತ್ಮವಾಗಿದ್ದರೆ ಸಂತೋಷ. ನಕಾರಾತ್ಮಕವಾಗಿದ್ದರೆ ಸಮಸ್ಯೆ. ಈಗ ಇಲ್ಲಿ ಚರ್ಚಿಸುತ್ತಿರುವ ಮಾನಸಿಕ ಅರಿಮೆಗಳ ಪ್ರಭಾವವು ನಕಾರಾತ್ಮಕವೇ ಆಗಿರುವುದರಿಂದ ಅವುಗಳನ್ನು ಸಮಸ್ಯೆಗಳೆಂದೇ ಪರಿಗಣಿಸಬೇಕಾಗುತ್ತದೆ. ಈ ಕಾಡುವ ಕಾಂಪ್ಲೆಕ್ಸ್‍ಗಳು ಅಥವಾ ಅರಿಮೆಗಳು ವ್ಯಕ್ತಿಯ ಆಳವಾದ ಮನಸ್ಸಿನಲ್ಲಿ ಬೇರುಬಿಟ್ಟಿರುತ್ತದೆ.

ಜಟಿಲತೆಗಳಿಂದ ಕೂಡಿರುವ ಈ ಮಾನಸಿಕ ಅರಿಮೆಯು ವ್ಯಕ್ತಿಯು ಇನ್ನೊಬ್ಬರಿಗೆ ಹೇಗೆ ಕಾಣಿಸುತ್ತಾನೆ, ಇನ್ನೊಬ್ಬರ ಜೊತೆ ಹೇಗೆ ವರ್ತಿಸುತ್ತಾನೆ ಎಂಬುದನ್ನು ವಿನ್ಯಾಸಗೊಳಿಸುವುದರಿಂದ ಒಬ್ಬ ವ್ಯಕ್ತಿಯ ಜೀವನದಲ್ಲಿ ಇವು ಬಹಳ ಪ್ರಭಾವಶಾಲಿಯಾಗಿರುತ್ತವೆ. ಒಬ್ಬನ ಸಾಧನೆ, ವೈಫಲ್ಯಗಳನ್ನು ನಿರ್ಧರಿಸುವಲ್ಲಿಯೂ ಈ ಅರಿಮೆಗಳು ಪಾತ್ರವನ್ನು ವಹಿಸುತ್ತವೆ.

ಇವುಗಳು ವ್ಯಕ್ತಿಗಳಲ್ಲಿ ಮೂಡುವುದಾದರೂ ಹೇಗೆ? ಹೀಗೇ ಅಂತ ನಿರ್ಧಿಷ್ಟವಾಗಿ ಹೇಳಕ್ಕೆ ಆಗಲ್ಲ. ಕೆಲವು ಸಲ ಹುಟ್ಟಿದಾಗಿನಿಂದಲೇ ಬಂದುತ್ತವೆ. ಕೆಲವೊಂದು ಸಲ ವ್ಯಕ್ತಿ ವಾಸಿಸುವ ವಾತಾವರಣವು ಅವನ್ನು ರೂಪಿಸುತ್ತದೆ. ಏನೇ ಆದರೂ ಮಗುವಿನ ಬಾಲ್ಯದಲ್ಲಿಯೇ ಇವನ್ನು ಗುರುತಿಸಲು ಸಾಧ್ಯ. ಹೇಗೆ ಮಗುವಿಗೆ ಹೇಳಿಕೊಡುತ್ತಾ ನಾವು ಕಲಿಯುತ್ತಾ ಹೋಗುತ್ತೇವೆಯೋ, ಹಾಗೇ ಮಗುವಿನ ಮಾನಸಿಕ ಸ್ಥಿತಿಗಳನ್ನು ಅಧ್ಯಯನ ಮಾಡುತ್ತಾ, ಅವಲೋಕಿಸುತ್ತಾ ನಮ್ಮದನ್ನು ನಾವೂ ನೋಡಿಕೊಳ್ಳಬಹುದು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಅರಿಮೆಯ ಅರಿವಿರಲಿ – 2 : ಚಿತ್ರಗನ್ನಡಿ ದ್ವಂದ್ವ

Published

on

Art by jen shearer
  • ಯೋಗೇಶ್ ಮಾಸ್ಟರ್

ಮುಗ್ಧರು ಮತ್ತು ಮೂರ್ಖರು; ಈ ಇಬ್ಬರೂ ಸಾಮಾನ್ಯವಾಗಿ ದ್ವಂದ್ವದಿಂದ ಬೇಗ ಪಾರಾಗುತ್ತಾರೆ. ಸಾಮಾನ್ಯವಾಗಿ ಅವರಿಗೆ ದ್ವಂದ್ವವೇ ಆಗದು. ಮೊದಲು ಮೊಸರನ್ನ ತಿನ್ನಲಾ ಅಥವಾ ಪುಳಿಯೋಗರೆ ತಿನ್ನಲಾ? ಮಟನ್ ಕೈಮಾ ತಿನ್ನಲಾ ಅಥವಾ ಚಿಕನ್ ಕಬಾಬ್ ತಿನ್ನಲಾ? ಚೆನ್ನಾಗಿರುವುದು ಹಳದೀ ಬಟ್ಟೆಯೋ ಅಥವಾ ಹಸಿರು ಬಟ್ಟೆಯೋ? ಮೈಸೂರಿಗೆ ರೈಲಿನಲ್ಲಿ ಹೋಗುವುದು ಒಳ್ಳೆಯದೋ ಅಥವಾ ಬಸ್ಸಿನಲ್ಲೋ? ಅವರಿಗೆ ಇಂತಹ ಮಾದರಿಗಳ ದ್ವಂದ್ವವೇ ಅತ್ಯಂತ ತಲೆ ತಿನ್ನುವುದು. ಯಾವುದೋ ಒಂದು ಎನ್ನುವ ಜಾಯಮಾನದವರಲ್ಲ ಅವರು. ಅದೆಷ್ಟು ತಲೆಕೆಡಿಸಿಕೊಳ್ಳುತ್ತಾರೆಂದರೆ ಆ ಕೆಲಸದ ಸಾಧಕ ಬಾಧಕಗಳನ್ನೆಲ್ಲಾ ಚರ್ಚೆ ಮಾಡಿ ಕೊನೆಗೆ ಮೊದಲು ಪುಳಿಯೋಗರೆ ತಿಂದು ನಂತರ ಮೊಸರನ್ನ ತಿಂದು ಮುಗಿಸುತ್ತಾರೆ. ಚಿತ್ರಗನ್ನಡಿ ಸಂಘರ್ಷವೆಂದರೆ ಇದಲ್ಲ.

ತಮ್ಮ ಬಗ್ಗೆ ತಾವು ಏನೋ ಅಂದುಕೊಂಡಿರುವಾಗ, ಅದರಂತೆ ಕಾಣುತ್ತಿದ್ದೇವೆ ಎಂದು ತಾವು ಭಾವಿಸಿರುವಾಗ, ಅಥವಾ ಕಾಣಬೇಕು ಎಂದು ಪ್ರಯತ್ನಿಸುತ್ತಿರುವಾಗ ಇತರರು ಬೇರೆಯೇ ಲಕ್ಷಣದಿಂದ ಗುರುತಿಸಿದಾಗ ಆಗುವ ದ್ವಂದ್ವ ಚಿತ್ರಗನ್ನಡಿ ದ್ವಂದ್ವ. ದ್ವಂದ್ವವು ಪಕ್ವ ಮನಸ್ಸಿನ ಹಲವು ಲಕ್ಷಣಗಳಲ್ಲಿ ಒಂದು. ಅದು ಆರೋಗ್ಯಕರ ಮನಸ್ಸು ಹೌದೋ ಅಲ್ಲವೋ ಹೇಳಲಾಗದು. ಆರೋಗ್ಯದ ಸ್ಥಿತಿಗೆ ದಾರಿಯಾಗಬಹುದು.

ಸದಾ ಚಟುವಟಿಕೆಯಿಂದಲೇ ಇರುವ ಮನಸ್ಸು ತಾನು ದ್ವಂದ್ವರಹಿತವಾಗಿದ್ದಾಗ ಸಂತೃಪ್ತವಾಗುತ್ತದೆ. ಇನ್ನೂ ಮುಂದುವರಿದ ಸಂದರ್ಭದಲ್ಲಿ ಇದೇ ಮನಸ್ಸು ದ್ವಂದ್ವರಹಿತವಾದಾಗ ಶಾಂತವಾಗುತ್ತದೆ. ಶಾಂತತೆ ಆರೋಗ್ಯಕರ ಮನಸ್ಸಿನ ಮಾನದಂಡ.
ಮನಸ್ಸನ್ನು ಹೇಗೋ ಅದೂ ಇದೂ ಮಾಡಿ ತೃಪ್ತಿಪಡಿಸಬಹುದು. ಆದರೆ ಸುಲಭವಾಗಿ ಅದನ್ನು ಶಾಂತಗೊಳಿಸಲಾಗದು. ಶಾಂತಿ ಬೇಕು ಎಂದರೆ ಧ್ಯಾನ, ಪ್ರಾರ್ಥನೆ ಎಂದೆಲ್ಲಾ ಹೇಳಿಕೊಂಡು ಬುದ್ಧ, ಮಹಾವೀರ, ಯೇಸು, ಪತಂಜಲಿಯಂತಹ ಪ್ರತಿಮೆಗಳ ಕಡೆ ನೋಡಲಾರಂಭಿಸುತ್ತಾರೆ.

ಯಾರದೇ ಚಿತ್ರಪಟಗಳನ್ನು ತಂದಿರೋ ಕೆಟ್ಟಿರಿ. ನಿಮಗೆ ಖಂಡಿತ ಬೇಕಾಗಿರುವುದು, ಅವರೆಷ್ಟೇ ಮಹಾತ್ಮರಾಗಿರಲಿ, ಯಾರದೇ ಚಿತ್ರಪಟಗಲ್ಲ. ಕನ್ನಡಿ. ನಿಮ್ಮನ್ನು ನಿಮ್ಮಂತೆಯೇ ತೋರಿಸುವ ಕನ್ನಡಿ. ಅದೊಂದು ಸಿಕ್ಕರೆ ಅರಿಮೆಯನ್ನು ನೀಗಿ ಅರಿವಿನ ಕಡೆಗೆ ಸಾಗಲು ಸಾಧ್ಯ. ಆದ್ದರಿಂದ ಇಲ್ಲಿ ಶಾಂತಿ ಎಂದರೆ ತುಂಬಾ ಆಧ್ಯಾತ್ಮಿಕವಾಗಿ, ತಾತ್ವಿಕವಾಗೆಲ್ಲಾ ಯೋಚಿಸುವುದು ಬೇಡ. ಶಾಂತಿ ಎಂದರೆ ತಿಳಿ ಎಂದಷ್ಟೇ ತಿಳಿಯುವ. ಬಗ್ಗಡದ ನೀರು, ತಿಳಿಯಾದ ನೀರು; ಈ ತಿಳಿ ಇಲ್ಲಿ ಹೇಳುತ್ತಿರುವುದು.

ಸರಿ, ತಿಳಿಯಾದ ಮನಸ್ಸೆಂಬುದಿದೆಯೇ? ಇಲ್ಲ. ಏಕೆಂದರೆ ಮನಸ್ಸೆಂಬುದು ಘನ, ದ್ರವ, ಅನಿಲವ್ಯಾವುದೂ ಅಲ್ಲ. ಆದರೆ ಪ್ರಕೃತಿಯಲ್ಲಿ ಮನುಷ್ಯ ಇತರ ಪ್ರಾಣಿಗಳಿಂದ ತನ್ನನ್ನು ಬೇರ್ಪಡಿಸಿಕೊಳ್ಳಲು ಸಾಧ್ಯವಾಗಿದ್ದು ಮನಸ್ಸು ಎಂಬ ಉಪಕರಣವನ್ನು ಸಮರ್ಥವಾಗಿ ಬಳಸಲು ಸಾಧ್ಯವಾದ್ದರಿಂದ. ಆದರೆ ಮನಸ್ಸು ಬರಿಯ ಉಪಕರಣ ಮಾತ್ರವೇ ಆಗಿದ್ದರೆ ತಲೆ ನೋವಿರುತ್ತಿರಲಿಲ್ಲ. ಮಾಡಬೇಕು ಎಂದು ನಿರ್ದೇಶನ ಕೊಡುವುದೂ ಅದೇ, ಮಾಡಬಾರದು ಎಂದು ನಿರ್ಬಂಧಿಸುವುದೂ ಅದೇ. ಆಸೆ ಪಡುವುದೂ ಅದೇ.

ನಿರಾಸೆಗೊಳಗಾದಾಗ ನರಳುವುದೂ ಅದೇ. ಹೀಗೆ ಒಳಗೆ ಹೊರಗೆ, ತಿಳಿದು, ತಿಳಿಯದೇ, ಬೇಕೆನ್ನುವುದು, ಬೇಡವೆನ್ನುವುದು, ಬೇಕೆನ್ನುತ್ತಾ ಮಾಡದಿರುವುದು, ಬೇಡವೆನ್ನುತ್ತಾ ಮಾಡುವುದು; ಹೀಗೆ ಎಲ್ಲವೂ ತಾನೇ ಆಗಿರುವುದರಿಂದ ಇದರ ರಚನೆ, ವ್ಯವಹಾರ, ಕ್ರಿಯೆ, ಪ್ರತಿಕ್ರಿಯೆ ಎಲ್ಲವೂ ಸಂಕೀರ್ಣಮಯ. ಸಂಕೀರ್ಣವಾಗಿರುವ ಮನಸ್ಸನ್ನು ಒಟ್ಟೊಟ್ಟಿಗೆ ಗ್ರಹಿಸಲು ಹೋದರೆ ಗೋಜಲುಗೋಜಲಾಗಿ ಗೊಂದಲಗಳಾಗುವುದು.

ಸಾಲದಕ್ಕೆ ಒಬ್ಬ ವ್ಯಕ್ತಿಯ ಮನಸ್ಸು ಎಂಬುದಕ್ಕೆ ಭೌತಿಕವಾದ ಅಸ್ತಿತ್ವವಿಲ್ಲ. ಅದರ ಚಟುವಟಿಕೆಗಳು ಮಾತ್ರ ಪ್ರದರ್ಶನದಲ್ಲಿರುತ್ತವೆ. ಅದರ ಚಟುವಟಿಕೆಗಳಿಗೆ ಒಂದು ಇಚ್ಛೆಯ ಮೂಲವಿರುತ್ತದೆ. ಆ ಇಚ್ಛೆಯು ಒಂದೋ ಎರಡೋ ಪ್ರಭಾವಗಳಿಂದ ರೂಪುಗೊಂಡಿರುವುದಿಲ್ಲ. ಮನಸ್ಸಿನ ಬಗ್ಗೆ ಏನೇ ಹೇಳಿದರೂ ಎಲ್ಲವೂ ಗೋಜಲುಗೋಜಲೇ, ಗೊಂದಲಮಯವೇ. ಒಟ್ಟಾರೆ ಅದರ ರಚನೆಯೂ ಸಂಕೀರ್ಣ. ತಿಳಿಯುವುದೂ ಸಂಕೀರ್ಣ. ಅದು ಸಂಕೀರ್ಣ ಎಂದು ತಿಳಿಯುವುದೇ ತಿಳುವಳಿಕೆಯ ಮೊದಲ ಹೆಜ್ಜೆ.

ಈಗ ನಿಧಾನವಾಗಿ ಗಮನಿಸುವ. ಒಂದು ಚಿತ್ರಪಟವನ್ನು ನೋಡಿದಿರಿ. ಅಲ್ಲಿ ನೀವು ಸುಂದರವಾದ ಹೆಣ್ಣಿನ ಚಿತ್ರವನ್ನು ನೋಡಲು ಬಯಸಿದ್ದೀರಿ. ಆದರೆ ಅದೋ ವಾಸ್ತವದಲ್ಲಿ ಒಬ್ಬ ವೃದ್ಧನ ಚಿತ್ರ.ನಿಮ್ಮ ಬಯಕೆಯನ್ನೇ ಅಲ್ಲಿ ಬಿಂಬವಾಗಿಸಬೇಕೆಂದರೆ, ವೃದ್ಧನ ಚಿತ್ರವನ್ನು ಅಳಿಸಬೇಕು. ನೇರವಾಗಿ ಅಳಿಸುತ್ತೀರೋ, ಮಾನಸಿಕವಾಗಿ ಅಳಿಸುತ್ತೀರೋ, ಹೇಗೋ ಅಲ್ಲಿಂದ ವೃದ್ಧನ ಚಿತ್ರ ತೆಗೆದುಹಾಕಿ ಸುಂದರಿಯ ಚಿತ್ರವನ್ನು ಮೂಡಿಸಬೇಕು. ಆಗಲೇ ನಿಮಗೆ ತೃಪ್ತಿ. ಹಾಗೆ ಮಾಡಲು ನಿಮಗೆ ಶ್ರಮಬೇಕು. ನಿಮ್ಮ ಪ್ರಯತ್ನವು ಸಫಲವಾಗುವುದೋ ಇಲ್ಲವೋ. ಅದನ್ನೂ ಹೇಳಲಾಗದು. ಸರಿ, ಇದಕ್ಕೆ ಪರಿಹಾರವೇನು? ನೋಡಲು ಬಯಸಿದ್ದೇನೋ ಸುಂದರಿಯ ಚಿತ್ರ. ಆದರೆ ಇರುವುದು ವೃದ್ಧನ ಚಿತ್ರ. ಈಗ ನಾನು ವೃದ್ಧನ ಚಿತ್ರವನ್ನೇ ನೋಡುತ್ತೇನೆ. ಅದರಲ್ಲಿರುವ ಸೌಂದರ್ಯವನ್ನು ಗುರುತಿಸುತ್ತೇನೆ. ಖುಷಿಪಡುತ್ತೇನೆ. ಅಲ್ಲಿಗೆ ಮನಸ್ಸಿಗೆ ಶಾಂತಿ. ತೃಪ್ತಿಗೂ ಮತ್ತು ಶಾಂತಿಗೂ ಇರುವ ವ್ಯತ್ಯಾಸವೇ ಇದು. ನಮ್ಮ ಕಾಮನೆಯಂತೆ ಮನಸ್ಸನ್ನು ತೃಪ್ತಿಪಡಿಸಿಕೊಳ್ಳಲು ಹೋದಷ್ಟು ಅದು ಕ್ಷೋಭೆಗೊಳ್ಳುತ್ತದೆ. ವಾಸ್ತವವನ್ನು ಸ್ವೀಕರಿಸಿ ಶಾಂತಿಗೊಳಿಸಿಕೊಳ್ಳಲು ಹೋದಾಗ ಅದು ನಿರಾಳವಾಗುತ್ತದೆ.

ಅರಿಮೆಯಿಂದ ಕ್ಷೋಭೆ. ಅರಿವಿನಿಂದ ಶಾಂತಿ. ಬಗ್ಗಡವು ಬರ್ಬರವಾಗಿದ್ದರೆ ತಿಳಿಯು ತಿಳುವಳಿಕೆಗೆ ದಾರಿಯಾಗುತ್ತದೆ. ಸಂಕೀರ್ಣವು ಗೊಂದಲಮಯವಾಗಿದ್ದರೆ, ಸರಳತೆಯು ಸಂಯಮದಲ್ಲಿರುತ್ತದೆ. ಅದಕ್ಕಾಗಿಯೇ ಅರಿಮೆಯನ್ನು ಅರಿಯಬೇಕು. ಇಂಗ್ಲೀಷಲ್ಲಿ ಕಾಂಪ್ಲೆಕ್ಸ್ ಎನ್ನುತ್ತೇವೆ. ಸಾಮಾನ್ಯವಾಗಿ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಅಂದರೆ ಕೀಳರಿಮೆ, ಸುಪೀರಿಯಾರಿಟಿ ಕಾಂಪ್ಲೆಕ್ಸ್ ಅಂದರೆ ಮೇಲರಿಮೆ ಎಂದೆಲ್ಲಾ ತಿಳಿದಿದ್ದೇವೆ. ಆದರೆ ನಮ್ಮಲ್ಲಿ ಎಷ್ಟೆಷ್ಟೋ ಕಾಂಪ್ಲೆಕ್ಸ್ ಗಳಿವೆ. ಬಗೆಗಳೋ ಹಲವು, ವಿನ್ಯಾಸಗಳೋ ವಿಚಿತ್ರ. ಇನ್ನು ಅವುಗಳ ಸಂರಚನೆಯನ್ನು ಅಷ್ಟು ಸುಲಭವಾಗಿ ವಿವರಿಸಲಾಗದು. ಆದರೂ ತಿಳಿಯುವ ಮನಸ್ಸನ್ನು ತಿಳಿಗೊಳಿಸಿಕೊಂಡರೆ ತಿಳಿಯಲು ಸಾಧ್ಯ. ಚಿತ್ರವೆಂಬ ಅರಿಮೆಯಿಂದ ಕನ್ನಡಿಯೆಂಬ ಅರಿವಿಗೆ ಹೊರಳುವುದಕ್ಕೆ ಎಲ್ಲಾ ಕಾಡುವ ಕಾಂಪ್ಲೆಕ್ಸುಗಳ ಗಮನಿಸೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending