Connect with us

ಅಂತರಂಗ

ಬ್ರಾಹ್ಮಣ್ಯದ ಅಂತರಂಗ – ಪಶ್ಚಾತ್ತಾಪ ಮತ್ತು ದಲಿತ ಕ್ಷಮೆ

Published

on

  • ವಿವೇಕಾನಂದ. ಹೆಚ್.ಕೆ

ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳವು. ಚಳಿಗೆ ದೇಹ ನಡುಗುತ್ತಿತ್ತು. ಆದರೂ ಬೇಗ ಎದ್ದು ಕೊರೆಯುವ ತಣ್ಣೀರನ್ನೇ ಸ್ನಾನ ಮಾಡಿ 4/30 ಕ್ಕೆಲ್ಲಾ ಮನೆ ಬಿಟ್ಟು ಅಪ್ಪನೊಂದಿಗೆ ಮಡಿಯುಟ್ಟು ಪೂಜೆ ಸಾಮಾನುಗಳೊಂದಿಗೆ ಊರಿನಿಂದ 5/6 ಕಿಲೋಮೀಟರ್ ದೂರದಲ್ಲಿ ದಟ್ಟ ಮರಗಳ ಮಧ್ಯದ ಹಾದಿಯಲ್ಲಿದ್ದ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ನೆಡದೇ ಹೋಗುತ್ತಿದ್ದೆವು.

ಆ ದೇವಸ್ಥಾನದ ಒಬ್ಬರೇ ಅರ್ಚಕರು ಅಪ್ಪ. ಅಪ್ಪನಿಗೆ ಸಹಾಯಕ ನಾನು. ನಾನಾಗ ಏಳನೇ ತರಗತಿ ಓದುತ್ತಿದ್ದೆ. ಆ ದೇವಸ್ಥಾನದ ಮಂಗಳಾರತಿಯ ದಕ್ಷಿಣೆ ಹಣ ಮತ್ತು ಊರಿನವರು ಕೊಡುತ್ತಿದ್ದ ಧವಸ ಧಾನ್ಯಗಳು ಮತ್ತು ಅಪರೂಪಕ್ಕೆ ನಡೆಯುತ್ತಿದ್ದ ಮದುವೆಯ ಪೌರೋಹಿತ್ಯದ ಗೌರವ ಧನವೇ ನಮ್ಮ ಮನೆಯ ಆದಾಯ.

ಆಗ ಈಗಿನಂತೆ ಗೃಹ ಪ್ರವೇಶ, ನಾಮಕರಣ, ಸತ್ಯನಾರಾಯಣ ಪೂಜೆ ಇರಲಿಲ್ಲ. ಬಡತನ ಬರಗಾಲದ ದಿನಗಳವು. ನಮ್ಮದು ಬಯಲು ಸೀಮೆಯ ಹಳ್ಳಿ. ಹೊಸ ಮನೆ ಕಟ್ಟುತ್ತಿದ್ದುದು ಅಪರೂಪ. ನಾಮಕರಣ ಸಹ ಉಚಿತವಾಗಿ ಹೆಸರು ಬಲ ನೋಡಿ ಹೇಳಿದರೆ ಅವರ ಮನೆಯಲ್ಲಿಯೇ ತೊಟ್ಟಿಲು ಕಟ್ಟಿ ಮಾಡಿಕೊಳ್ಳುತ್ತಿದ್ದರು. ಅಪ್ಪ ಸಹ ಊರಿನ ಒಬ್ಬರೇ ಅರ್ಚಕರಾದುದರಿಂದ ಯಾರನ್ನೂ ಹಣಕ್ಕಾಗಿ ಒತ್ತಾಯ ಅಥವಾ ನಿಷ್ಠುರ ಮಾಡಿಕೊಳ್ಳುತ್ತಿರಲಿಲ್ಲ. ಹಣಕ್ಕಿಂತ ಅವರಿಗೆ ಗೌರವ ಮರ್ಯಾದೆ ಪ್ರಾಣಕ್ಕಿಂತ ಹೆಚ್ಚು ಎಂದೇ ಭಾವಿಸಿದ್ದರು.

5 ಗಂಟೆಗೆ ದೇವಸ್ಥಾನ ತಲುಪುತ್ತಿದ್ದೆವು. ಅದು ಸ್ವಲ್ಪ ವಿಶಾಲವಾದ ಕಲ್ಲಿನ ಕಟ್ಟಡ. ಅಲ್ಲಲ್ಲಿ ಬಿಲ್ವಪತ್ರೆಯ ಮರಗಳಿದ್ದವು. ಪಕ್ಕದಲ್ಲಿಯೇ ಒಂದು ಸಣ್ಣ ಕಲ್ಯಾಣಿ. ಅಪ್ಪ ದೇವರ ವಿಗ್ರಹ, ಲಿಂಗ, ನಂದಿ, ಒಳ ಪ್ರಾಂಗಣ ಮತ್ತು ಸುತ್ತಲಿನ ಜಾಗವನ್ನು ಕಲ್ಯಾಣಿ ನೀರಿನಿಂದ ಶುಚಿಗೊಳಿಸಿ ಪೂಜೆಗೆ ಸಿದ್ದ ಮಾಡಿಕೊಳ್ಳುತ್ತಿದ್ದರು. ನಾನು ಭಕ್ತಾದಿಗಳು ಕುಳಿತುಕೊಳ್ಳುವ ಮತ್ತು ಹೊರಾಂಗಣವನ್ನು ಕಸ ಗುಡಿಸಿ ಸ್ವಚ್ಛಗೊಳಿಸುತ್ತಿದ್ದೆ.

ಸುಮಾರು 5/30 ಕ್ಕೆಲ್ಲಾ ಜನ ಒಬ್ಬೊಬ್ಬರಾಗಿ ಹೂವು ಹಣ್ಣು ಕಡ್ಡಿ ಕರ್ಪೂರ ಅರಿಶಿನ ಕುಂಕುಮ ಸಮೇತ ಮಕ್ಕಳೊಂದಿಗೆ ಬರುತ್ತಿದ್ದರು. ಸೋಮವಾರದಂದು ವಿಶೇಷ ಪೂಜೆ. ಅಂದು ಮಂಗಳ ವಾದ್ಯಗಳು ಮತ್ತು ಊರಿನ ಶ್ರೀಮಂತರ ಮನೆಯ ರುಚಿಕಟ್ಟಾದ ಪ್ರಸಾದ ವಿನಿಯೋಗ ನಡೆಯುತ್ತಿತ್ತು.
ಜೊತೆಗೆ ಭಕ್ತರು ನೀಡುತ್ತಿದ್ದ ಬಾಳೆಹಣ್ಣು ಮತ್ತು ತೆಂಗಿನಕಾಯಿಯ ಸ್ವಲ್ಪ ಭಾಗವನ್ನು ನಾನು ಒಂದು ತಪ್ಪಲೆಯಲ್ಲಿ ನೀಟಾಗಿ ಕತ್ತರಿಸಿ ಮನೆಯಿಂದ ತಂದ ಹಾಲು ಸಕ್ಕರೆ/ಬೆಲ್ಲ ಏಲಕ್ಕಿ ಬೆರಸಿ ಮಾಡುತ್ತಿದ್ದ ರಸಾಯನ ಎಲ್ಲರಿಗೂ ಬಹಳ ಇಷ್ಟವಾಗಿತ್ತಿತ್ತು. ಪೂಜೆ ಅಭಿಷೇಕ ನೈವೇದ್ಯದ ನಂತರ ಅದನ್ನು ಜನರಿಗೆ ಸಣ್ಣಗೆ ಕತ್ತರಿಸಿದ ಬಾಳೆ ಎಲೆಯಲ್ಲಿ ಪ್ರಸಾದ ಹಂಚುವ ಜವಾಬ್ದಾರಿ ನನ್ನದಾಗಿತ್ತು. ಆ ಸಮಯದಲ್ಲಿ ಅಪ್ಪ ಹೂ ಮತ್ತು ತೀರ್ಥ ಕೊಡುತ್ತಾ ಕೆಲವು ವಿಶೇಷ ಸಂದರ್ಭಗಳಲ್ಲಿ ಅರ್ಚನೆ ಮಾಡುತ್ತಿದ್ದರು.

ಆಗ ಜನರ ಭಯ ಭಕ್ತಿ, ನನ್ನಂತ ಸಣ್ಣವನಿಗೂ ಅವರು ಪಾದ ಮುಟ್ಟಿ ನಮಸ್ಕರಿಸುತ್ತಿದ್ದುದು ನನ್ನಲ್ಲಿ ಹೆಮ್ಮೆ ಮೂಡಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತಿತ್ತು. 8 ಗಂಟೆಯ ಒಳಗೆ ಪೂಜೆ ಮುಗಿಸಿ 8/30 ರ ಒಳಗೆ ಎಲ್ಲವನ್ನೂ ಸ್ವಲ್ಪ ಮಾತ್ರ ಸ್ವಚ್ಛಗೊಳಿಸಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದೆವು. ನಾನು ಬೇಗ ತಿಂಡಿ ತಿಂದು ಮನೆಯ ಬಳಿಯೇ ಇದ್ದ 10 ಗಂಟೆಗೆ ಪ್ರಾರಂಭವಾಗುತ್ತಿದ್ದ ಶಾಲೆಗೆ ಹೋಗುತ್ತಿದ್ದೆ.
ಮತ್ತೆ ಸಂಜೆ 5 ಕ್ಕೆ ದೇವಸ್ಥಾನಕ್ಕೆ ಹೊರಟು ಬೆಳಗಿನಂತೆ ಎಲ್ಲಾ ಕೆಲಸ ಮುಗಿಸಿ ರಾತ್ರಿ ಸುಮಾರು 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದೆವು.

ಆಗಿನ ನಮ್ಮ ಊರಿನಲ್ಲಿ ಕುರುಬರ ಪೇಟೆ, ನಾಯಕರ ಹಟ್ಟಿ, ಹೊಲೆಯರ ಬೀದಿ, ಮಾದಿಗರ ಕೇರಿ, ಸಾಬರ ಗಲ್ಲಿ, ಗೌಡರ ಪಾಳ್ಯ, ಲಿಂಗಾಯಿತರ ಮಠಬೀದಿ, ತಿಗಳರ ಪೇಟೆ, ಗೊಲ್ಲರ ಹಟ್ಟಿ ಹೀಗೆ ಬೇರೆ ಬೇರೆ ಹೆಸರುಗಳ ಸ್ಥಳಗಳಿದ್ದವು. ನಾವು ಇದ್ದ ಜಾಗವನ್ನು ಅಗ್ರಹಾರ ಎಂದು ಕರೆಯುತ್ತಿದ್ದರು.

ಆಗ ನನ್ನನ್ನು ಊರಿನ ಜನ
ಚಿಕ್ಕ ಸ್ವಾಮಿ, ಮರಿಸ್ವಾಮಿ, ಪುಟ್ಟ ಬುದ್ದಿ, ಅಯ್ನೋರು, ಮರಿ ಪೂಜಾರಿ, ಸಣ್ಣ ಭಟ್ಟ, ಕಿರಿ ಜೋಯಿಸ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು ಮತ್ತು ನನ್ನ ವಯಸ್ಸಿಗೆ ಮೀರಿ ದೊಡ್ಡವನು ಎಂಬಷ್ಟು ಗೌರವ ಕೊಡುತ್ತಿದ್ದರು. ಶಾಲೆಯ ಓದಿನಲ್ಲೂ ನಾನು ಎಲ್ಲರಿಗಿಂತ ಮುಂದೆ. ಆಗ ನನಗೆ ನಾನು ಇತರರಿಗಿಂತ ಉತ್ತಮ ಸ್ಥಾನವನ್ನು ಹೊಂದಿದ್ದೇನೆ, ಇಡೀ ಊರಿನ ಗೌರವವನ್ನು ಹೊಂದಿದ ಶ್ರೇಷ್ಠ ವ್ಯಕ್ತಿ ಅನಿಸುತ್ತಿತ್ತು.

ಕಾಲಚಕ್ರ ಉರುಳಿದಂತೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದೆ. ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ನಲ್ಲಿ ಅತಿ ಹೆಚ್ಚು ಅಂಕ ಪಡೆದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಅಮೆರಿಕಾದ ಟೆಕ್ಸಾಸ್‌ನ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ.
ಕೆಲವು ವರ್ಷಗಳ ಪ್ರಾಮಾಣಿಕ ಮತ್ತು ದಕ್ಷ ಸೇವೆಯ ನಂತರ ಈಗ ಅಲ್ಲಿನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನಾಗಿದ್ದೇನೆ. ಆದರೆ ಈಗಲೂ ಭಾರತದ ಪೌರತ್ವವನ್ನೇ ಹೊಂದಿದ್ದೇನೆ.

ಅಪ್ಪ ಇತ್ತೀಚೆಗಷ್ಟೇ ತೀರಿಕೊಂಡರು. ಅಮ್ಮ ಬಹಳ ಹಿಂದೆಯೇ ನಮ್ಮನ್ನು ಅಗಲಿದ್ದರು. ನಾವು ಇದ್ದ ಮನೆ ಮತ್ತು ಆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಚಿಕ್ಕಪ್ಪ ಮತ್ತು ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಗೆಳೆಯರೆ,
ಸುಮಾರು ‌50 ವರ್ಷಗಳ ನನ್ನ ಸುದೀರ್ಘ ಬದುಕಿನ ಅನುಭವದಲ್ಲಿ ನನ್ನೆರಡು ಮಾತುಗಳು.
” ಹೌದು, ನಾನೊಬ್ಬ ಬ್ರಾಹ್ಮಣ. ಭಾರತೀಯ ಸಮಾಜದ ವರ್ಣಾಶ್ರಮ ವ್ಯವಸ್ಥೆಯ ಮೇಲಿನ ಸ್ಥಾನದಲ್ಲಿರುವವನು. ಹಾಗೆಯೇ ಅದೇ ವ್ಯವಸ್ಥೆಯಲ್ಲಿ ಮುಟ್ಟಿಸಿಕೊಳ್ಳದ ಒಂದು ಅಸ್ಪೃಶ್ಯ ವರ್ಗವೊಂದು ಅಸ್ತಿತ್ವದಲ್ಲಿದೆ.

ಆಫೀಸಿನ ಕೆಲಸದ ಮೇಲೆ ನ್ಯೂಯಾರ್ಕ್ ಪ್ರವಾಸದಲ್ಲಿರುವ ನಾನು ಮೊಟ್ಟಮೊದಲ ಬಾರಿಗೆ ಅಲ್ಲಿನ Statue of liberty ನೋಡುತ್ತಿದ್ದಾಗ ಭಾವ ತೀವ್ರತೆಗೆ ಒಳಗಾಗಿ, ಕಳೆದ ತಿಂಗಳಷ್ಟೇ ನಾನು ಓದಿದ್ದ
” Un touchables of India ” A tragedy behind Indian social structure even today ,
ಎಂಬ ಅನಾಮಧೇಯ ಲೇಖಕನ ಪುಸ್ತಕ ಮತ್ತು ನನ್ನ ಬಾಲ್ಯದಲ್ಲಿ ನನ್ನೂರಿನ ಅಸ್ಪೃಶ್ಯತೆ ಹಾಗೂ ಈಗಲೂ ಆಗಾಗ ಭಾರತದಿಂದ ವರದಿಯಾಗುತ್ತಿರುವ ಅಸ್ಪೃಶ್ಯರ ಮೇಲಿನ ದೌರ್ಜನ್ಯ, ಭಾರತದ ಈಗಿನ ಸಾಮಾಜಿಕ ವ್ಯವಸ್ಥೆ ನೆನಪಾಗಿ ನನ್ನ ಸುತ್ತಲಿನ ಜನರ ಇರುವಿಕೆಯನ್ನು ಮರೆತು ಜೋರಾಗಿ ದುಃಖದಿಂದ ಉಮ್ಮಳಿಸುತ್ತಿದ್ದೇನೆ. ನಾನೊಬ್ಬ ಸಾಮಾನ್ಯ ವ್ಯಕ್ತಿ. ನನ್ನೊಬ್ಬನಿಂದ ಈ ಬೃಹತ್ ಜಾತಿ ವ್ಯವಸ್ಥೆಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ವೈಯಕ್ತಿಕವಾಗಿ ಆತ್ಮಸಾಕ್ಷಿಯಿಂದ ಹೇಳುತ್ತೇನೆ.

” ಅಸ್ಪೃಶ್ಯರೇ/ದಲಿತ ವರ್ಗದವರೇ, ಕಾರಣ, ಸಂದರ್ಭ, ಉದ್ದೇಶ, ಅರ್ಥ ಏನೇ ಇರಲಿ, ಅಸ್ಪೃಶ್ಯತೆ ಎಂಬ ಒಂದು ಜನಾಂಗವನ್ನು ಸೃಷ್ಟಿಸಿದ, ಆ ಮೃಗೀಯ ಭಾವನೆಯೊಂದಿಗೆ ಒಂದು ಸಮುದಾಯವನ್ನು ಹುಟ್ಟುಹಾಕಿದ ಮತ್ತು ಅದನ್ನು ಈಗಲೂ ಪಾಲಿಸುತ್ತಿರುವ ಕಾರಣಕ್ಕಾಗಿ ಜಾತಿಯಿಂದ ಬ್ರಾಹ್ಮಣನಾದ ನಾನು ನಿಮ್ಮಲ್ಲಿ ಪರಿಪರಿಯಾಗಿ ಕ್ಷಮೆ ಕೇಳುತ್ತೇನೆ. ಇಂತಹ ಒಂದು ವ್ಯವಸ್ಥೆಯ ಭಾಗವಾಗಿದ್ದಕ್ಕಾಗಿ ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಮತ್ತು ಪಶ್ಚಾತ್ತಾಪ ಪಡುತ್ತಿದ್ದೇನೆ.
ನಿಮ್ಮೆಲ್ಲರ ಮುಂದೆ ಸಾರ್ವಜನಿಕವಾಗಿ ಪ್ರಮಾಣ ಮಾಡುತ್ತೇನೆ. ” ಇನ್ನೆಂದಿಗೂ ನಾನು ಯಾವ ಕಾರಣಕ್ಕೂ ನನ್ನ ಜಾತಿಯನ್ನು ಉಳಿಸಿಕೊಳ್ಳದೆ ಇಡೀ ಕುಟುಂಬದ ಸಮೇತ ಭಾರತದ ಸುಪ್ರೀಂಕೋರ್ಟ್ ನಲ್ಲಿ ಕಾನೂನಿನ ರೀತಿಯಲ್ಲಿ ನನ್ನ ಜಾತಿ ಭಾರತೀಯ ಎಂದು ಘೋಷಿಸಿಕೊಳ್ಳುತ್ತೇನೆ. ನನ್ನ ಮುಂದಿನ ವಂಶ ಭಾರತೀಯ ಜನಾಂಗವಾಗಿಯೇ ಗುರುತಿಸಲ್ಪಡಬೇಕು ಎಂದು ಆಶಿಸುತ್ತೇನೆ. ಜಾತಿಯ ಶ್ರೇಷ್ಠತೆಗಿಂತ ಮನುಷ್ಯ ಶ್ರೇಷ್ಠತೆಯನ್ನು ಬೆಂಬಲಿಸುತ್ತೇನೆ. ಇಡೀ ಭಾರತೀಯ ಸಮುದಾಯ ಇದನ್ನೇ ಅನುಸರಿಸಲಿ ಎಂಬ ಬಯಕೆಯೊಂದಿಗೆ …….. ” ಮತ್ತೊಮ್ಮೆ ಕ್ಷಮಾಪಣೆ ಕೇಳುತ್ತಾ….

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕಪ್ಪು-ಬಿಳಿ ಅಮೆರಿಕನ್ನರ ನಡುವಿನ ಅಸಮಾನತೆ

Published

on

  • ನಾಗರಾಜ ನಂಜುಂಡಯ್ಯ

1983 ರಿಂದ 2016 ರ ನಡುವೆ, ಕಪ್ಪು ಅಮೆರಿಕನ್ನರ ಕುಟುಂಬದ ಸರಾಸರಿ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ. ಆದರೆ, ಇದೇ ಸಮಯದಲ್ಲಿ ಬಿಳಿ ಅಮೆರಿಕನ್ ಕುಟುಂಬದ ಸರಾಸರಿ ಸಂಪತ್ತು, ಶೇ.33 ರಷ್ಟು ಹೆಚ್ಚಾಗಿದೆ. 2017ರಲ್ಲಿ ಪ್ಯೂ (ಪಿ.ಇ.ಡಬ್ಲ್ಯೂ) ಅಧ್ಯಯನ ಸರಾಸರಿ ಬಿಳಿಯ ಕುಟುಂಬಗಳ ಆದಾಯ ಕರಿಯ ಕುಟುಂಬಗಳ ಆದಾಯದ 10 ಪಟ್ಟು ಎಂದಿದೆ. ಈ ಹಿನ್ನೆಲೆಯಲ್ಲಿ ಗುಲಾಮಗಿರಿ ಪ್ರಾರಂಭವಾಗಿ 400 ವರ್ಷಗಳ ಆಚರಣೆಯ ಸುತ್ತ ಈ ಕುರಿತು ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ. 2014ರಲ್ಲೇ 250 ವರ್ಷಗಳ ಗುಲಾಮಗಿರಿಗೆ ಕರಿಯರಿಗೆ ಪರಿಹಾರ ಒದಗಿಸಬೇಕು ಎಂದು ವಾದಿಸುವ ತಾ ನೆಹಿಸಿ ಕೋಟ್ಸ್ ಎನ್ನುವವರ ವರದಿ ಪ್ರಕಟವಾಯಿತು. ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಕೊರಿ ಬುಕರ್ ಕರಿಯರಿಗೆ ಪರಿಹಾರ ಒದಗಿಸುವ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿದ್ದಾರೆ. ಇತರ ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಎಲಿಜಬೆತ್ ವಾರೆನ್ ಮತ್ತು ಬರ್ನಿ ಸ್ಯಾಂಡರ್ಸ್ ಅದನ್ನು ಬೆಂಬಲಿಸಿ, ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.

ನಾನೂರು ವರ್ಷಗಳ ಹಿಂದೆ, ಅಂದರೆ, 1619ರ ಆಗಸ್ಟ್ ತಿಂಗಳಲ್ಲಿ 20 ಸೆರೆಯಾಳುಗಳನ್ನು ಹೊತ್ತ ಹಡಗು ಆಫ್ರ್ರಿಕಾದಿಂದ ವರ್ಜೀನಿಯಾದ ಹಡಗುದಾಣದಲ್ಲಿ ಬಂದು ನಿಂತಿತು. ಮುಂದೆ ಇದೇ ಅಮೆರಿಕಾದ ಗುಲಾಮಗಿರಿಯ ಉಗಮಕ್ಕೆ ಕಾರಣವಾಯಿತು. ಆದರೆ, 1620 ರಲ್ಲಿ “ಮೇ” ಫ್ಲವರ್” ಹಡಗಿನಲ್ಲಿ, ಬಂದಿಳಿದ 102 ಪ್ರಯಾಣಿಕರ ಆಗಮನವನ್ನೇ ಈಗಲೂ ಯುಎಸ್ ನ ಗುಲಾಮಗಿರಿ ಪದ್ದತಿಯ ಆರಂಭವೆಂದೇ ಬಹಳಷ್ಟು ಅಮೆರಿಕನ್ನರಿಗೆ ಪರಿಚಯಿಸಲಾಗಿದೆ. ಆದರೆ, ಇದಕ್ಕೆ ಒಂದು ವರ್ಷದ ಹಿಂದೆಯೇ 20 ಆಪ್ರಿಕನ್ನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ತಂದು, ಅಂದು ಅಮೆರಿಕಾವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷರಿಗೆ ಒಪ್ಪಿಸಿದ್ದೇ ಗುಲಾಮ ಪದ್ದತಿಗೆ ಮೂಲ ಕಾರಣವಾಯಿತು ಎಂಬುದು ವಾಸ್ತವತೆ.

ಅಮೆರಿಕಾದ ಬಂಡವಾಳಶಾಹಿ ಆರ್ಥಿಕತೆಯ ಸೃಷ್ಟಿಗೆ ಗುಲಾಮರ ಶ್ರಮವೇ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಾಗಲಾರದು. ಇಂದು ಅಮೆರಿಕಾವು ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಬೆಳೆಯಲು ಮತ್ತು ಉಳಿಯಲು ಅವಕಾಶ ಮಾಡಿಕೊಟ್ಟಿದ್ದೆ ಈ ಗುಲಾಮರ ಶ್ರಮ. ಆದರೆ, ಈ ಆಫ್ರಿಕನ್ ಗುಲಾಮ ಕಾರ್ಮಿಕರಿಗೆ ಅವರ ಪಾಲಿನ ಸಂಪತ್ತನ್ನು ಮಾತ್ರ ಸೂಕ್ತವಾಗಿ ಇಲ್ಲಿಯವರೆವಿಗೂ ಪಾವತಿಸಲೇ ಇಲ್ಲವೆಂಬುದು ಕೂಡ ಅಷ್ಟೆ ಸತ್ಯ. ಆದಾಗ್ಯೂ, ಅಮೆರಿಕದ ಆರ್ಥಿಕತೆ, ಈಗಲೂ ಹೆಚ್ಚಾಗಿ ಇವರ ಕೆಲಸದ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿದೆ ಎಂಬುದು ವಾಸ್ತವ.

ಪ್ರಸ್ತುತ ಸಂಪತ್ತಿನ ವಿಭಜನೆಯಲ್ಲಿ ಅಪಾರ ಜನಾಂಗೀಯ ಅಸಮಾನತೆಯನ್ನು ಕಾಣಬಹುದು. ಕಳೆದ ನಾಲ್ಕು ವರ್ಷಗಳಿಂದೀಚೆಗೆ ಈ ಸಂಪತ್ತಿನ ಜನಾಂಗೀಯ ವ್ಯತ್ಯಾಸ ಮತ್ತಷ್ಟು ಹೆಚ್ಚಾಗಿರುವುದು ಮತ್ತು ಅದರ ಮುಂದುವರಿದ ಪ್ರವೃತ್ತಿಗಳು ಅಸಮಾನತೆಯ ಅಂತರದ ವಿಸ್ತರಣೆಯನ್ನು ಇನ್ನೂ ಪ್ರತಿಬಿಂಬಿಸುತ್ತಲೇ ಇವೆ.

ಶೇ.37 ಕರಿಯ ಕುಟುಂಬಗಳ ಸಂಪತ್ತು ನಕಾರಾತ್ಮಕ !

ಜನವರಿ 15, 2019 ರಂದು ಡಾ. ಮಾರ್ಟಿನ್ ಲೂಥರ್ ಕಿಂಗ್( ಜೂನಿಯರ್)ರವರ 90 ನೇ ಜನ್ಮ ದಿನದ ಪ್ರಯುಕ್ತ “ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್” ನಡೆಸಿದ ಒಂದು ಸಮೀಕ್ಷೆಯ ವರದಿಯು ” ಅಮೆರಿಕದ ಸಂಪತ್ತು ಬಿಳಿ ಅಮೆರಿಕನ್ನರ ಕುಟುಂಬಗಳಲ್ಲಿ ಹೇಗೆ ಹೆಚ್ಚು ಸಾಂದ್ರೀಕರಿಸಿದೆ ಮತ್ತು ಕಪ್ಪು ಆಪ್ರಿಕನ್ ಕುಟುಂಬಗಳ ಸಂಪತ್ತಿನ ಪಾಲನ್ನು ಹೇಗೆ ವಂಚಿಸಲಾಗಿದೆ” ಎಂಬ ವಾಸ್ತವ ಚಿತ್ರಣವನ್ನು ಹೊರ ಹಾಕಿದೆ.

ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ಕರಿಯರ ಮಾನವೀಯ ಹಕ್ಕುಗಳಿಗಾಗಿ ಜೀವನ ಪಯರ್ಂತ ಹೋರಾಟ ನಡೆಸಿದವರು. ಕೊನೆಗೆ ಇವರು ಕೊಲ್ಲಲ್ಪಟ್ಟರು. ಕರಿಯರ ವಿರುದ್ದ ಕ್ರೌರ್ಯಕ್ಕೆ ಮಾರ್ಟಿನ್ನರ ಕೊಲೆ ಕನ್ನಡಿ ಹಿಡಿದ ಹಾಗೆ.

ವಸಾಹತುಶಾಹಿಯಿಂದ ವಿಮುಕ್ತಿಗೊಂಡು ಯು.ಎಸ್. ಹೊಸದಾಗಿ ಸ್ಥಾಪನೆಯಾದ ನಂತರ, ಸುಮಾರು 250 ವರ್ಷಗಳ ಕಾಲ ಅವ್ಯಾಹತವಾಗಿ ನಡೆದಿದ್ದ ಗುಲಾಮಗಿರಿಯು ಅಧಿಕೃತವಾಗಿ 1865ರಲ್ಲಿ ಕೊನೆಗೊಂಡಿತು. ಆದರೆ ಕರಿಯರ ವಿರುದ್ಧ ಅಸಮಾನತೆಯ ಆಚರಣೆಯ ಕ್ರೌರ್ಯಗಳನ್ನು – ಜಿಮ್ ಕ್ರೌ ಕಾನೂನು, ರೆಡ್ ಲೈನಿಂಗ್ ಹಾಗೂ ವ್ಯಾಪಕ ಬಂಧÀನಗಳು – ಮುಂತಾದ ಅನೇಕ ಸಾರ್ವಜನಿಕ ನೀತಿಗಳ ಮೂಲಕ ಮುಂದುವರಿಸಲಾಯಿತು.

1983 ರಿಂದ 2016 ರ ನಡುವೆ, ಕಪ್ಪು ಅಮೆರಿಕನ್ನರ ಕುಟುಂಬದ ಸರಾಸರಿ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ. ಆದರೆ, ಇದೇ ಸಮಯದಲ್ಲಿ ಬಿಳಿ ಅಮೆರಿಕನ್ ಕುಟುಂಬದ ಸರಾಸರಿ ಸಂಪತ್ತು, ಶೇ.33 ರಷ್ಟು ಹೆಚ್ಚಾಗಿರುವುದನ್ನು ಈ ವರದಿ ದಾಖಲಿಸಿದೆ. ಇದು ಆಪ್ರಿಕನ್ ಅಮೆರಿಕನ್ ರಿಂದ ಮತ್ತು ಇತರೆ ದೇಶಗಳಿಂದ ವಲಸೆ ಬಂದು ನೆಲೆಸಿರುವ ಬಡ ಕಾರ್ಮಿಕರ ಶ್ರಮದಿಂದ ಯುಎಸ್ ನ ಆರ್ಥಿಕ ಅಭಿವೃದ್ಧಿ ವೃದ್ದಿಯಾಗುತ್ತಿರುವುದನ್ನು ಪ್ರತಿ ಬಿಂಬಿಸುತ್ತದೆ ಎಂದು ವರದಿಯು ಪ್ರಸ್ತಾಪಿಸಿದೆ. ಕಪ್ಪು ಅಮೆರಿಕನ್ನರ ಸಂಪತ್ತು ಕುಸಿಯುತ್ತಿರುವ ಈ ವರ್ಷಗಳಲ್ಲೇ, ಒಂದು ಕೋಟಿ ಡಾಲರುಗಳಿಗಿಂತ ಹೆಚ್ಚು ಸಂಪತ್ತು ಇರುವ ಕುಟುಂಬಗಳ ಸಂಖ್ಯೆ 8.56 ಪಟ್ಟು ಹೆಚ್ಚಳವಾಗಿದೆ. ಇದರ ಪರಿಣಾಮದಿಂದಾಗಿ, ಇನ್ನೊಂದು ತುದಿಯಲ್ಲಿ ಈಗ ಶೇ.37 ರಷ್ಟು ಕಪ್ಪು ಕುಟುಂಬಗಳ ಸರಾಸರಿ ಸಂಪತ್ತು ಶೂನ್ಯ ಅಥವಾ ನಕಾರಾತ್ಮಕವಾಗಿದೆ (ಅಂದರೆ ಅವರ ಆಸ್ತಿಗಿಂತ ಹೆಚ್ಚು ಸಾಲ ಇದೆ) ಎನ್ನಲಾಗಿದೆ. ಶೇ.15 ರಷ್ಟು ಬಿಳಿ ಅಮೆರಿಕನ್ನರ ಕುಟಂಬಗಳು ಮಾತ್ರ ಈ ಸ್ಥಿತಿಯಲ್ಲಿವೆ.

ಸಂಪತ್ತಿನ ಈ ವಿಷಮ ಜನಾಂಗೀಯ ವಿಭಜನೆಯು ಎಲ್ಲಾ ಅಮೆರಿಕನ್ನರ ಮೇಲೆ ಹಾಗೂ ಒಟ್ಟಾರೆ ಯಾಗಿ ಅಮೆರಿಕಾದ ಆರ್ಥಿಕತೆಯ ಮೇಲೆಯೂ ಗಾಡವಾದ ದುಷ್ಪರಿಣಾಮ ಬೀರಿದೆ. ಕಪ್ಪು ಜನಸಂಖ್ಯೆ ಹೆಚ್ಚಾದಂತೆ ಅಮೆರಿಕದ ಕುಟುಂಬಗಳ ಸರಾಸರಿ ಸಂಪತ್ತು ಕೂಡ ಕುಸಿದಿದೆ. 1983ರಲ್ಲಿ 84,111 ಡಾಲರ್ ಇದ್ದ ಸರಾಸರಿ ಸಂಪತ್ತು 2016ರಲ್ಲಿ 81,704 ಡಾಲರಿಗೆ ಕುಸಿದಿದೆ. 1983ರಲ್ಲಿ 6 ಅಮೆರಿಕನ್ ಕುಟುಂಬಗಳಲ್ಲಿ 1 ಕುಟುಂಬ ನಕಾರಾತ್ಮಕ ಸಂಪತ್ತು ಅನುಭವಿಸುತ್ತಿದ್ದು, 2016ರಲ್ಲಿ 5 ಕುಟುಂಬಗಳಲ್ಲಿ 1 ಕುಟುಂಬ ಆ ಸ್ಥಿತಿಯಲ್ಲಿದೆ. ಹಾಗೆಯೇ, ಕರಿಯರ ಸಂಪತ್ತಿನ ಸವೆತದ ಸುತ್ತ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳು ಕರಿಯರ ಸೋಮಾರಿತನ, ಶಿಕ್ಷಣದಲ್ಲಿ ಹಿಂದುಳಿದಿರುವಿಕೆ ಮತ್ತು ನಿರಾಸಕ್ತಿ, ಕೆಲಸದ ಮತ್ತು ಇತರ ನೈತಿಕತೆಯ ಅಭಾವದ ಸುತ್ತ ಗಿರಕಿ ಹೊಡೆಯುತ್ತವೆ. ಅಂದರೆ ಜಗತ್ತಿನ ಎಲ್ಲೆಡೆಗೆ ಆಗುವಂತೆ ದಮನಿತರ ಶೋಚನೀಯ ಪರಿಸ್ಥಿತಿಗೆ ಅವರೇ ಕಾರಣ ಎನ್ನುವ ಸಾಮಾನ್ಯ ಉಳ್ಳವರ ಕಥನ. ಇದು ಮಿಥ್ಯೆ ಎಂದು ಹಲವು ಅಧ್ಯಯನಗಳು ತೋರಿಸುತ್ತವೆ. ಕಾಲೇಜು ಶಿಕ್ಷಣ ಪಡೆದ ಕರಿಯ ಕುಟುಂಬಗಳು ಹೈಸ್ಕೂಲ್ ಶಿಕ್ಷಣ ಪಡೆದ ಬಿಳಿಯ ಕುಟುಂಬಗಳಿಗಿಂತ ಕಡಿಮೆ ಸರಾಸರಿ ಸಂಪತ್ತು ಹೊಂದಿವೆ. ಏಕ-ಪೋಷಕ ಬಿಳಿ ಕುಟುಂಬಗಳು, ಕರಿಯ ದ್ವಿ-ಪೋಷಕ ಕುಟುಂಬಕ್ಕಿಂತ ಎರಡು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.

ಒಟ್ಟಾರೆಯಾಗಿ, ಕರಿಯ-ಬಿಳಿಯ ಕುಟುಂಬಗಳ ಸಂಪತ್ತಿನ ಅಂತರ ಕರಿಯರ ವೈಯಕ್ತಿಕ ಗುಣಲಕ್ಷಣಗಳಿಂದಾಗಿ ಅಲ್ಲ. ಗುಲಾಮಗಿರಿ ಪ್ರಾರಂಭವಾಗಿ 400 ವರ್ಷಗಳಲ್ಲಿ ಕರಿಯ ಅಮೆರಿಕನ್ನರಿಗೆ ಸಂಪನ್ಮೂಲಗಳನ್ನು ನಿರಂತರವಾಗಿ ನಿರಾಕರಿಸಿರುವುದು ಕಾರಣ ಎಂದು ಈ ವರದಿಯಲ್ಲಿ ಗುರುತಿಸಿಲಾಗಿದೆ. ಮೊದಲ ಗುಲಾಮರನ್ನು ಆಪ್ರಿಕಾದಿಂದ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಬಂದದ್ದು, ಅವರಿಂದ ಅಮ್ಯೂಲ್ಯವಾದ ಶ್ರಮವನ್ನು ಉಚಿತವಾಗಿ ಮಾಡಿಸಿಕೊಳ್ಳಲೆಂದೆ’ ಎಂದು ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ ತನ್ನ ವರದಿಯಲ್ಲಿ ಒತ್ತಿ ಹೇಳಿದೆ. ಉದ್ಯೋಗ, ಆದಾಯ, ಮನೆ ಮಾಲಿಕತ್ವ, ಷೇರ್ ಮಾಲಿಕತ್ವ, ಉದ್ಯಮ ಶೀಲತೆ ಮತ್ತು ಇತರೆ ಎಲ್ಲಾ ಆರ್ಥಿಕ ಸೂಚಕಗಳು ಸಂಪತ್ತಿನ ವಿಷಮ ಜನಾಂಗೀಯ ವಿಭಜನೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಈ ಜನಾಂಗೀಯ ವಿಭಜನೆಯನ್ನು ನಿಜವಾದ ಅರ್ಥದಲ್ಲಿ ನಿವಾರಿಸಲು, ಐತಿಹಾಸಿಕವಾಗಿ ಬಿಳಿ ಅಮೆರಿಕನ್ ಸಮುದಾಯಗಳು ಸ್ವಾಧೀನ ಪಡಿಸಿಕೊಂಡಿರುವ ಬೃಹತ್ ಸಂಪತ್ತಿನ್ನಷ್ಟೇ ದೊಡ್ಡ ಪ್ರಮಾಣದಲ್ಲಿ ಕರಿಯ ಸಮುದಾಯಗಳಿಗೆ ಪರಿಹಾರ ಒದಗಿಸಬೇಕು ಅಥವಾ ಸಂಪತ್ತಿನ ವರ್ಗಾವಣೆ/ಹೂಡಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಆಮೂಲಾಗ್ರ ಸಂರಚನಾತ್ಮಕ ಬದಲಾವಣೆಯ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ದೃಢವಾದ ರಾಜಕೀಯ ಇಚ್ಛಾಶÀಕ್ತಿ ಇರಬೇಕಾಗುತ್ತದೆ. ಆಗ ಮಾತ್ರ ಆಫ್ರಿಕನ್ ಅಮೆರಿಕನ್ ರಿಗೆ ಅಂತಿಮವಾಗಿ ನ್ಯಾಯ ಒದಗಿಸಲು ಸಾಧ್ಯ. 400 ವರ್ಷಗಳ ಗುಲಾಮಗಿರಿಯ ಪರಿಣಾಮಗಳನ್ನು ತಾತ್ಕಾಲಿಕ ಬ್ಯಾಂಡ್-ಏಡ್ ಗಳು ನಿವಾರಿಸಲು ಸಾಧ್ಯವಿಲ್ಲ, ಎಂದು ವರದಿ ಹೇಳುತ್ತದೆ. “ಈ ದೇಶದಲ್ಲಿ ಅಮೆರಿಕನ್ನರು ಎಂದರೆ ಬಿಳಿಯರು ಮಾತ್ರ, ಉಳಿದವರು ಗುಲಾಮರು ಅಷ್ಟೇ” ಎಂಬ ಪ್ರಸಿದ್ಧ ಕರಿಯ ಲೇಖಕಿ ಟೋನಿ ಮಾರಿಸನ್ ಅವರ ಮಾತು ಸದ್ಯಕ್ಕಂತೂ ಸತ್ಯವೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಗುಲಾಮಗಿರಿಯ ಪ್ರಾರಂಭವಾಗಿ 400 ವರ್ಷಗಳ ಆಚರಣೆಯ ಸುತ್ತ ಈ ಕುರಿತು ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ. 2014ರಲ್ಲೇ 250 ವರ್ಷಗಳ ಗುಲಾಮಗಿರಿಗೆ ಕರಿಯರಿಗೆ ಪರಿಹಾರ ಒದಗಿಸಬೇಕು ಎಂದು ವಾದಿಸುವ ತಾ ನೆಹಿಸಿ ಕೋಟ್ಸ್ ಎನ್ನುವವರ ವರದಿ ಪ್ರಕಟವಾಯಿತು. 2017ರಲ್ಲಿ ಪ್ಯೂ (ಪಿ.ಇ.ಡಬ್ಲ್ಯೂ) ಅಧ್ಯಯನ ಸರಾಸರಿ ಬಿಳಿಯ ಕುಟುಂಬಗಳ ಆದಾಯ ಕರಿಯ ಕುಟುಂಬಗಳ ಆದಾಯದ 10 ಪಟ್ಟು ಎಂದಿದೆ. ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಕೊರಿ ಬುಕರ್ ಕರಿಯರಿಗೆ ಪರಿಹಾರ ಒದಗಿಸುವ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿದ್ದಾರೆ. ಇತರ ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಎಲಿಜಬೆತ್ ವಾರೆನ್ ಮತ್ತು ಬರ್ನಿ ಸ್ಯಾಂಡರ್ಸ್ ಅದನ್ನು ಬೆಂಬಲಿಸಿ, ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.

ಅಮೆರಿಕದ ಗುಲಾಮಗಿರಿಯ ಸ್ಥೂಲ ಚರಿತ್ರೆ

1619 : ವರ್ಜೀನಿಯಾಕ್ಕೆ 20 ಆಫ್ರಿಕರನ್ನು ಹೊತ್ತ ಹಡಗಿನ ಆಗಮನ; ಡಚ್ ವ್ಯಾಪಾರಿಯಿಂದ ಅವರನ್ನು ಗುಲಾಮರಾಗಿ ಮಾರಾಟ; ಗುಲಾಮಗಿರಿಯ ಆರಂಭ.

1619-1810 : ಆಫ್ರಿಕನ್ನರನ್ನು ಅಪಹರಿಸಿ ಅಟ್ಲಾಂಟಿಕ್ ಸಾಗರದ ಮೇಲೆ ಹಡಗಿನಲ್ಲಿ ಸಾಗಾಣಿಕೆ ಮಾಡಿ ಗುಲಾಮರಾಗಿ ಅಮೆರಿಕದಲ್ಲಿ ಮಾರಾಟ ಮಾಡುವ ವಾಪಾರ ಮುಂದುವರೆಯಿತು. 1700 ರಲ್ಲಿ ಹತ್ತು ಸಾವಿರದಷ್ಟಿದ್ದ ಗುಲಾಮರ ಸಂಖ್ಯೆ, 1760 ಹೊತ್ತಿಗೆ 2 ಲಕ್ಷಕ್ಕೆ ಹತ್ತಿರವಾಗಿ, 1810ರ ಹೊತ್ತಿಗೆ 3 ಲಕ್ಷ ದಾಟಿತ್ತು.

1661 : ಮೇರಿಲ್ಯಾಂಡಿನಲ್ಲಿ ಕರಿಯ ಗುಲಾಮರು ಮತ್ತು ಬಿಳಿಯರ ನಡುವೆ ಮದುವೆ ನಿಷೇಧಿಸುವ ಮೊದಲ ಕಾನೂನು: ಮುಂದೆ ಇಂತಹ ಕಾನೂನುಗಳು ಹೆಚ್ಚಿನ ಉತ್ತರ ಅಮೆರಿಕದ ಬ್ರ್ರಿಟಿಷ್ ವಸಾಹತುಗಳಲ್ಲಿ ಬಂದವು.

1960ರಲ್ಲೂ ಇನ್ನೂ ಯು.ಎಸ್. ನ 20 ರಾಜ್ಯಗಳಲ್ಲಿ ಇಂತಹ ಕಾನೂನುಗಳು ಇದ್ದವು. 2000ದಲ್ಲಿ ಅಲಬಾಮಾ ಇಂತಹ ಕಾನೂನು ತೆಗೆದು ಹಾಕಿದ ಕೊನೆಯ ರಾಜ್ಯವಾಯಿತು.

1776-1790 : ‘ಮಾನವರೆಲ್ಲ ಹುಟ್ಟಿನಿಂದ ಸಮಾನರು’ ಎಂದ ಅಮೆರಿಕನ್ ಸ್ವಾತಂತ್ರ್ಯ ಘೋಷಣೆ ಕರಿಯ ಗುಲಾಮರಿಗೆ ¯ಗಾವಾಗಲಿಲ್ಲ. ಗುಲಾಮರ ಸಾಗಾಣಿಕೆ ಮುಂದುವರೆಯಿತು, ಅದರಲ್ಲೂ ವಿಶೇಷವಾಗಿ ದಕ್ಷಿಣದ ಹತ್ತಿ ಬೆಳೆಯುವ ಪ್ರಾಂತ್ಯಗಳಲ್ಲಿ ದೊಡ್ಡ ಸಂಖ್ಯೆಯ ಕರಿಯ ಗುಲಾಮರನ್ನು ನೆಲೆಸಲಾಯಿತು. 1790 ಜನಗಣತಿಯ ಪ್ರಕಾರ ಇಂತಹ 3 ಪ್ರಾಂತ್ಯಗ¼ಲ್ಲಿ ಕರಿಯ ಗುಲಾಮರ ಸಂಖ್ಯೆ 18 ಲಕ್ಷ ದಾಟಿತ್ತು. ಆ ಪ್ರಾಂತ್ಯಗಳ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿತ್ತು.

1808 : 18ನೇ ಶತಮಾನದಲ್ಲಿ ಬ್ರಿಟಿಷರು ನಡೆಸಿದ ವ್ಯಾಪಕ ಆಫ್ರಿಕನ್ ಗುಲಾಮರ ವ್ಯಾಪಾರದಲ್ಲಿ 6 ಲಕ್ಷ ಕರಿಯರನ್ನು ಅಮೆರಿಕಾಕ್ಕೆ ಸಾಗಿಸಲಾಯತು. 1808ರಲ್ಲಿ ಗುಲಾಮರ ವ್ಯಾಪಾರವನ್ನು (ಗುಲಾಮಗಿರಿಯನ್ನಲ್ಲ, ಗುಲಾಮರ ವ್ಯಾಪಾರವನ್ನು ಮಾತ್ರ) ನಿಷೇಧಿಸುವ ವರೆಗೆ ಅದು ಭಾರಿ ಪ್ರಮಾಣದಲ್ಲಿ ಮುಂದುವರೆಯಿತು.

1860 : ಕರಿಯ ಗುಲಾಮರು ಮತ್ತು ಅವರ ಸಂತತಿಯೆಲ್ಲಾ ಸೇರಿ 1860ರ ಜನಗಣತಿಯ ಹೊತ್ತಿಗೆ ಕರಿಯರ ಸಂಖ್ಯೆ 40 ಲಕ್ಷಕ್ಕೆ (ಒಟ್ಟು ಜನಸಂಖ್ಯೆಯ ಶೇ. 13) ಏರಿತ್ತು.

1865-68 : ಅಮೆರಿಕದ ಆಂತರಿಕ ಯುದ್ಧದಲ್ಲಿ ಗುಲಾಮಗಿರಿ ಸಹ ಒಂದು ವಿಷಯವಾಗಿತ್ತು. ಆದರೆ ಅದೇ ಮುಖ್ಯವಾಗಿರಲಿಲ್ಲ. ದಕ್ಷಿಣದ ಪ್ರಾಂತ್ಯಗಳ ಪ್ರತ್ಯೇಕತೆ ಮುಖ್ಯ ವಿಷಯವಾಗಿತ್ತು. ಆದರೆ ಯುದ್ಧ ನಂತರ ಕರಿಯರ ಮೇಲಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಯಿತು. ಅಮೆರಿಕದಲ್ಲಿ ಆಗ ನೆಲೆಸಿದ್ದ ಮತ್ತು ಅಲ್ಲೇ ಹುಟ್ಟಿದ್ದ ಕರಿಯರಿಗೆ ನಾಗರಿಕ ಹಕ್ಕು ಕೊಡಲಾಯಿತು.

1870–1964 : ಜಿಮ್ ಕ್ರೋ ಕಾನೂನುಗಳು ಎಂದು ಕರೆಯಲಾಗುವ ಕಾನೂನುಗಳು ಹೆಚ್ಚಿನ ದಕ್ಷಿಣದ ಪ್ರಾಂತ್ಯಗಳಲ್ಲಿ ಜಾರಿಗೆ ಬಂತು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕರಿಯರು ಮತ್ತು ಬಿಳಿಯರು ಒಟ್ಟಿಗೆ ಇರುವಂತಿಲ್ಲ ಎಂಬುದು ಈ ಕಾನೂನುಗಳ ಸಾರಾಂಶ. ಇದರ ಪ್ರಕಾರವೇ ಸಾರ್ವಜನಿಕ ಸಾರಿಗೆಯಲ್ಲಿ, ಹೊಟೆಲುಗಳಲ್ಲಿ ಎಲ್ಲೆಲ್ಲೂ ಕರಿಯರನ್ನು ಪ್ರತ್ಯೇಕಿಸಲಾಗಿತ್ತು. ಇಂತಹ ಒಂದಲ್ಲ ಒಂದು ಕಾನೂನು ಒಂದಲ್ಲ ಒಂದು ಪ್ರಾಂತ್ಯದಲ್ಲಿ 1964ರವರೆಗೂ ಜಾರಿಯಲ್ಲಿದ್ದವು. 1958ರಲ್ಲಷ್ಟೇ ಯು.ಎಸ್. ಮಿಲಿಟರಿಯಲ್ಲಿ ಕರಿಯರ ಪ್ರತ್ಯೇಕ ಘಟಕಗಳನ್ನು ವಿಸರ್ಜಿಸಲಾಯಿತು. ಹಲವು ದಕ್ಷಿಣದ ಪ್ರಾಂತ್ಯಗಳಲ್ಲಿ ಒಂದಲ್ಲ ಒಂದು ಕಾರಣ ಕೊಟ್ಟು ಕರಿಯರ ಮತದಾನದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿತ್ತು. ಈಗಲೂ ಅದು ಕೆಲವು ಪ್ರಾಂತ್ಯಗಳಲ್ಲಿ ಹೊಸ ರೂಪಗಳಲ್ಲಿ ಮುಂದುವರೆದಿದೆ.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಅಕ್ಷರ ಮೋಡಿಗಾರನ ಹುಟ್ಟುಹಬ್ಬದ ಸಂದರ್ಭದಲ್ಲಿ

Published

on

  • ವಿವೇಕಾನಂದ. ಹೆಚ್.ಕೆ

(ಸೆಪ್ಟೆಂಬರ್ 8 ರಂದು ಪೂರ್ಣ ಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬ)

ನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಹಾಗೆಯೇ ನನಗೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರು ಸಹ ಅದೇರೀತಿ ಓದುಗರಲ್ಲಿ ಮೋಡಿ ಮಾಡಿದ್ದಾರೆ. ಇದು ಇಬ್ಬರ ನಡವಿನ ಹೋಲಿಕೆಯಲ್ಲ. ಇಬ್ಬರದೂ ಬೇರೆ ಬೇರೆ ಕ್ಷೇತ್ರ. ಜನಾಕರ್ಷಣೆಯ ದೃಷ್ಟಿಯಿಂದ ಮಾತ್ರ ಹೇಳಿದ್ದು.

ಕನ್ನಡ ಸಾಹಿತ್ಯದಲ್ಲಿ ಆಗಿನ ಸಂದರ್ಭದಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದ, ಸ್ವತಃ ಉತ್ತಮ ಬರಹಗಾರರಾಗಿದ್ದರೂ ಲಂಕೇಶ್ ಅವರು ತೇಜಸ್ವಿ ಬರಹಗಳ ಬಗ್ಗೆ ಬರೆಯುತ್ತಾ, ಅವರ ಬರಹದ ಬಗ್ಗೆ ನನಗೆ ಈಗಲೂ ಅಸೂಯೆ ಕಾಡುತ್ತದೆ. ಹಾಗೆ ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ ಎಂಬ ಅರ್ಥದಲ್ಲಿ ಅವರನ್ನು ಹೊಗಳುತ್ತಾರೆ. ಸಾಹಿತ್ಯದ ಸಹಜತೆ ಕಾಪಾಡುತ್ತಾ, ಬದುಕಿನ ಸ್ವಾಭಾವಿಕತೆಯನ್ನು ತನ್ನ ನಡವಳಿಕೆಯಾಗಿ ರೂಪಿಸಿಕೊಂಡು ಅದನ್ನು ಅಕ್ಷರಗಳಿಗೆ ಇಳಿಸಿ ಸಾಮಾನ್ಯ ಓದುಗರ ಮನದಲ್ಲಿ ಮನೆ ಮಾಡಿದ ಅಪರೂಪದ ಬರಹಗಾರ ತೇಜಸ್ವಿ.

ಹುಚ್ಚು ಕನಸುಗಳನ್ನು ಕಾಣುತ್ತಾ, ಹುಚ್ಚುಚ್ಚಾಗಿ ಬದುಕುತ್ತಾ, ಹುಚ್ಚು ಕುತೂಹಲವನ್ನು ಸರಿಯಾದ ಭಾಷೆಯ ಕ್ರಮದಲ್ಲಿ ಬರೆದು ಹುಚ್ಚಿನ ಅಮಲಿನಲ್ಲಿ ಬದುಕಿನ ಸವಿಯನ್ನು ಉಂಡು ಮತ್ತು ಓದುಗರಿಗೆ ಉಣಬಡಿಸಿದ ಅದ್ಬುತ ಬರಹಗಾರ. ಬೇರೆಯವರಿಗೆ ಅವರ ನಡವಳಿಕೆ ಹುಚ್ಚುತನದಂತೆ ಭಾಸವಾದರೂ ಇತರರನ್ನು ಅವರು ಹುಚ್ಚರಂತೆ ಕಂಡಿರಬೇಕು.
ಹಾಡಿನ ಮಾಂತ್ರಿಕ, ಸಂಗೀತ ಮಾಂತ್ರಿಕ,
ಮಾತಿನ ಮಾಂತ್ರಿಕ, ಕಲೆಯ ಮಾಂತ್ರಿಕ,
ಕ್ರೀಡಾ ಮಾಂತ್ರಿಕ ಎಂಬಂತೆ ಸಾಹಿತ್ಯದ ಮಾಂತ್ರಿಕ ತೇಜಸ್ವಿ.

ಜಾನ್ ಕೀಟ್ಸ್, ವರ್ಡ್ಸ್‌ವರ್ತ್ ಮುಂತಾದ ಪಾಶ್ಚಿಮಾತ್ಯ ‌ಅದ್ಭುತ ಸಾಹಿತಿಗಳಂತೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಪ್ರೀತಿ ಸಂಘರ್ಷ ಒಡನಾಟಗಳ ಕುರಿತು, ಪ್ರಾಣಿ ಪಕ್ಷಿ ಕೀಟಗಳ ಚಲನವಲನಗಳ ಅತ್ಯಂತ ಆಸಕ್ತಿ ಮತ್ತು ಕುತೂಹಲಕಾರಿ ನಿರೂಪಣೆಯನ್ನು, ವಿದೇಶಿ ಸಾಹಿತ್ಯದ ಅತ್ಯುತ್ತಮ ಸಾಹಸ ರೋಮಾಂಚಕಾರಿ ಮಾಹಿತಿಯ ಸಾಹಿತ್ಯವನ್ನು ಕನ್ನಡದ ಸೊಗಡಿನ ಸಾಮಾನ್ಯ ಜನರಿಗೆ ಮನಮುಟ್ಟುವ ಅನುವಾದವನ್ನು, ವೈಚಾರಿಕ ಪ್ರಜ್ಞೆ, ವ್ಯವಸ್ಥೆಯ ಬಂಡಾಯ, ಸಮಾಜವಾದಿ ಚಿಂತನೆಯ ಅನೇಕ ಕಥನಗಳನ್ನು, ಕನ್ನಡದ ಉಳಿವು, ರೈತ ಶೋಷಣೆ ಮತ್ತು ಅದಕ್ಕಾಗಿ ಚಳವಳಿ ರೂಪಿಸುವ ಹೋರಾಟಗಳನ್ನು, ತತ್ವಜ್ಞಾನಿಯಂತೆ ಮನುಷ್ಯನ ಮಾನಸಿಕ ತಾಕಲಾಟಗಳು ಮತ್ತು ಸಾಮಾಜಿಕ ಜೀವನದಲ್ಲಿ ಧಾರ್ಮಿಕ ಸಂಘರ್ಷಗಳ ಬಗ್ಗೆಯೂ ಸೇರಿದಂತೆ ಎಲ್ಲವನ್ನೂ ಅಕ್ಷರ ರೂಪಕ್ಕೆ ಇಳಿಸಿ ಜನರ ಚಿಂತನೆ ಮಂಥನಗಳಿಗೆ ಕಾರಣರಾಗಿದ್ದರು.

ಹಾಗೆಂದು ಅವರ ಸಾಹಿತ್ಯ ಎಲ್ಲಕ್ಕಿಂತ ಶ್ರೇಷ್ಠ ಎಂದು ಅರ್ಥವಲ್ಲ. ಆದರೆ ಬರಹಗಾರನ ಬದುಕಿನ ಪ್ರಾಮಾಣಿಕತೆ, ಅನುಭವಗಳ ದಾಖಲಾತಿಯ ನಿಷ್ಠೆ, ಮುಖವಾಡವಿಲ್ಲದ ಸಹಜತೆಯ ಕಾರಣದಿಂದ ಅತ್ಯಂತ ಆಪ್ತವಾಗುತ್ತದೆ. ಹಾಸ್ಯ ವ್ಯಂಗ್ಯ ಲೇವಡಿಗಳು ಪ್ರತಿ ವಿಷಯದಲ್ಲು ನಗು ಉಕ್ಕಿಸಿದರು ಇದು ನಿಜ ಎಂದು ನಮ್ಮ ಮನಸ್ಸಿಗೆ ಅನಿಸುತ್ತದೆ. ಅಷ್ಟೊಂದು ಸಹಜತೆ ಅವರ ಬರಹಗಳಲ್ಲಿ ಮೂಡಿ ಬಂದಿದೆ.

ತೇಜಸ್ವಿಯವರ ಮತ್ತೊಂದು ವಿಶೇಷತೆಯೆಂದರೆ ಪಂಥಗಳ ಆಚೆ ಎಲ್ಲಾ ವರ್ಗದವರನ್ನು ತಲುಪಿದ್ದು. ಗಂಭೀರ ಸಾಹಿತ್ಯ ಹೊರತುಪಡಿಸಿ ಸಾಹಿತ್ಯಾಸಕ್ತಿಯ ಬಹುತೇಕರು ಮತ್ತು ಸಾಮಾನ್ಯ ಓದುಗರ ಆಯ್ಕೆಯಲ್ಲಿ ತೇಜಸ್ವಿಯವರ ಒಂದಾದರು ಕೃತಿ ಇದ್ದೇ ಇರುತ್ತದೆ. ಅಲ್ಲದೆ, ಅಧಿಕಾರ ದಾಹವಿಲ್ಲದ, ಆಡಂಬರ ಪ್ರದರ್ಶನವಿಲ್ಲದ, ಕೃತಕತೆಯ ವಿಡಂಬನೆ ಹಾಗು ಅವರ ಮಾತಿನ ಶೈಲಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಡು ನೆನಪಾದಾಗ ಕಾಡುವ ತೇಜಸ್ವಿ…….

ಈ ಅಕ್ಷರ ಮೋಡಿಗಾರನ ಹುಟ್ಟುಹಬ್ಬದ ಸಂದರ್ಭದಲ್ಲಿ …

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಭಾವ ಸಂಗಮ ಸಮಾಗಮ : ನೆನಪೇ ಸಂಭ್ರಮ

Published

on

ಅಬ್ಬಾ ಪ್ರತಿದಿನದ ಜಂಜಾಟ, ಯಾಂತ್ರಿಕ ಜೀವನ, ಎಲ್ಲವನ್ನೂ ಮರೆತು ಕುಟುಂಬದವರೆಲ್ಲರೂ ಒಂದಾಗುವ ಸೇರುವ ಸಮಾಗಮವೆ, ಸಾಹಿತ್ಯ ಸಮಾಗಮ. ಈ ಸಂಗಮಕ್ಕೆ ನನ್ನನ್ನೂ ರಾಜೇಂದ್ರ ಪಾಟೀಲ್ ಭಾವಸಂಗಮದ ಸಂಚಾಲಕರು ಮೂರು ತಿಂಗಳ ಹಿಂದೆ ಸೇರಿಸಿದರು. ಮೊದಮೊದಲು ಸಂಗಮಕ್ಕೆ ಸೇರಿದಾಗ ಕೊಂಚ ಅಳುಕಿತ್ತು.

ಏಕೆಂದರೆ ಈ ಸಂಗಮದಲ್ಲಿ ಎಲ್ಲರೂ ಪದಗಳ ಜೊತೆಗೆ ಆಟವಾಡುವ ಸಾಹಿತಿಗಳು, ಕಲ್ಪನಾ ಲೋಕದಲ್ಲಿ ಮುಳುಗಿರುವ ಕವಿ, ಕವಯಿತ್ರಿಯರು, ತಪ್ಪುಗಳನ್ನು ತಿದ್ದಿ, ಕಲ್ಲನ್ನು ಶಿಲ್ಪಿ ಮಾಡುವ ಶಿಲ್ಪಿಕಾರಂತಿರುವ ಶಿಕ್ಷಕ-ಶಿಕ್ಷಕಿಯರು, ನ್ಯಾಯ ದೇವತೆಯ ಪುತ್ರರು, ಸದಾಕಾಲ ನ್ಯಾಯವನ್ನು ಎತ್ತಿ ಹಿಡಿಯುವಂತಹ ವಕೀಲರು, ಶಿಸ್ತಿನ ಸೀಪಾಯಿಗಳಂತೆ ಸಮವಸ್ತ್ರ ತೊಟ್ಟು ಕೈಯಲ್ಲೊಂದು ಲಾಠಿ ಹಿಡಿಯುವ ಆರಕ್ಷಕರು, ಸಮಾಜವನ್ನು ಒಂದು ನಿರ್ದಿಷ್ಟ ದಾರಿಯತ್ತ ಕೈಹಿಡಿದು ಸದಾಕಾಲ ಸಮಾಜದ ಅಭಿವದ್ಧಿಗಾಗಿ ದುಡಿಯುವ ವಿವಿಧ ರಾಜ್ಯಮಟ್ಟ, ಜೀಲ್ಲಾಮಟ್ಟ, ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಹಿರಿಯ ಪರ್ತಕರ್ತರು, ಆಕಾಶವಾಣಿ ಹಾಗೂ ದೂರವಾಣಿಯ ವರದಿಗಾರರು, ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೆ ರಿತಿಯಲ್ಲಿ ವಿಶಾಲವಾದ ಜಗತ್ತಿಗೆ ಕಾಲಿಡುತ್ತಿರುವ ಭಾವಿ ಪತ್ರಕರ್ತರು, ಹೀಗೆ ಅನೇಕ ವಿಭಿನ್ನ ಮನಸ್ಸುಗಳ ಸಮಾಗಮವೆ ಈ ಭಾವ ಸಂಗಮವಾಗಿತ್ತು.

‘ಭಾವ ಸಂಗಮ’ ವಾಟ್ಸ್ ಗ್ರೂಪ್ ಸಂಯೋಜನೆಗೆ ಕಾರಣ ಹಾಗೂ ಮೂಲ
ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಕಲೆ ಇತ್ಯಾದಿ ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳವರನ್ನು, ಪ್ರತಿಭಾನ್ವಿತರನ್ನು, ಉದಯೋನ್ಮುಖರನ್ನು, ಹಾಗೂ ಸಹೃದಯದವರನ್ನು ಎಲ್ಲರನ್ನು ಒಂದೇ ಕಡೆಗೆ ಸೇರಿಸುವುದಾಗಿದೆ. ಇವರೆಲ್ಲರ ಸಾಹಿತಿಕ ಬರವಣಿಗೆಗಳನ್ನು ಪ್ರತಿಭೆಗಳನ್ನು ಎಲ್ಲರೂ ನೋಡಿ ಆನಂದಿಸಬೇಕು ಎಂದುಕೊಂಡೆ. ಹಿರಿಯರು ಆಶೀರ್ವಾದಿಸಬೇಕು, ಕಿರಿಯರು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಬೇಕು. ಈ ಎಲ್ಲಾ ಉದ್ದೇಶದಿಂದ ಭಾವ ಸಂಗಮ ಆರಂಭಿಸಲಾಗಿದೆ ಎಂದು ಭಾವಸಂಗಮದ ವಾಟ್ಸ್ಆ್ಯಪ್ ಗ್ರೂಪ್‍ನ ಸಂಚಾಲಕರಾದ ರಾಜೇಂದ್ರ ಪಾಟೀಲ ಅವರು ತಿಳಿಸುತ್ತಾರೆ.

ಇದು ಮೂಲತಃ ಸಾಮಾಜಿಕ ಜಾಲತಾಣವಾದ ಫೇಸ್ಬುಕ್‍ನಲ್ಲಿಯೇ 2009ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಆಗ ಇದರ ಕ್ರಯಾ ಚಟುವಟಿಕೆಗಳು ಅಷ್ಟೊಂದು ತಿವ್ರವಾಗಿರಲಿಲ್ಲ. ನಂತರ 2015ರ ಜುಲೈ 10ರಂದು ನನ್ನ ಕೈಗೆ ಸ್ಮಾರ್ಟ ಫೋನ್ ಬಂತು. ಆ ದಿನವೆ ನನ್ನ ಜನ್ಮದಿನವಿತ್ತು. ಅಂದೆ ನಾನು ಭಾವ ಸಂಗಮ ಎನ್ನುವ ವಾಟ್ಸಾಪ್ ಗ್ರೂಪ್ ಸೃಷ್ಟಿಸಿದೆ ಎಂದು ರಾಜೇಂದ್ರ ಪಾಟೀಲ( ಉಮಾತನಯರಾಜ) ಅವರು ಹೇಳುತ್ತಾರೆ.

ಭಾವ ಸಂಗಮದ ಸಂಪೂರ್ಣ ಪಕ್ಷಿನೋಟ ಇಲ್ಲಿದೆ

ಆಗಷ್ಟೇ ಅನೇಕರು ವಾಟ್ಸಾಪ್ ನಲ್ಲಿ ಪ್ರವೇಶ ಪಡೆದಿದ್ದರು. ಭಾವ ಸಂಗಮ ತಯಾರಿಕೆಗಾಗಿ ಮೊದಲಿಗೆ 65ಜನರು ಸಿಕ್ಕರು, ಇದೆ ವಿಷಯವಾಗಿ ಬಾದಾಮಿಯ ಗೆಳೆಯ ವೆಂಕಟೇಶ ಇನಾಮದಾರ ಹಾಗೂ ನಾವು ಚರ್ಚೆ ಮಾಡಿದೆವು, ನಾವೆಲ್ಲಾ ಸಹೃಯಗಳು ಒಂದೆಡೆಗೆ ಸೇರೋಣ, ಸಮಾವೇಶ ಮಾಡೋಣ, ನಮ್ಮ ಪ್ರತಿಭೆಗಳನ್ನು ತೋರಿಸೊಣ, ಅದೊಂದು ವಿಭಿನ್ನವಾದ ಕೌಟುಂಬಿಕ ಕಾರ್ಯಕ್ರಮ ಮಾಡೋಣ ಎನ್ನುವ ಚರ್ಚೆ ಮಾಡಲಾಯಿತು. ಈ ಚರ್ಚೆಯ ಹಿನ್ನೆಲೆಯಲ್ಲಿ 2015ರ ನ.8 ರಂದು ಬಾದಾಮಿಯ ಮಹಾಕೂಟದಲ್ಲಿ ನಿಸರ್ಗದತ್ತವಾಗಿ ನಯನ ಮನೋಹರವಾಗಿ ಮೊದಲ ಸಮಾಗಮವನ್ನು ಅನೌಪಚಾರಿಕವಾಗಿ ಅರಳಿಮರದ ಕೆಳಗೆ ಟೇಬಲ್, ಕುರ್ಚಿ, ಮೈಕ್ ಯಾವುದೇ ಸೌಲಬ್ಯಗಳಿಲ್ಲದೆ ಜಮಖಾನಿ ಹಾಸಿ ಕೂತುಕೊಂಡು ಸರಳತೆಯಿಂದ ಕಾರ್ಯಕ್ರಮವನ್ನು ನಡೆಸಿದ್ದೆವು. ಇದರಲ್ಲಿ ಕೆಲವರು, ಸಂಗೀತ ಹಾಡಿದರು, ಕವಿತೆಗಳನ್ನು ಹೇಳಿದರು, ಕವನ ವಾಚನ ಮಾಡಿದರು. ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ರೀತಿಯಲ್ಲಿ ‘ಭಾವ ಸಂಗಮ’ ಮೊದಲ ವರ್ಷದಲ್ಲಿ ಬುನಾದಿ ಹಾಕಿತು ಎಂದು ರಾಜೆಂದ್ರ ಪಾಟೀಲ ಸ್ಮರಿಸಿಕೊಳ್ಳುತ್ತಾರೆ.

ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಆಹ್ವಾನ ನೀಡಿರಲಿಲ್ಲ. ಇದಕ್ಕೆ ಕೇವಲ ಸಾಹಿತ್ಯ ಆಸಕ್ತರು, ಕವಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮದ ನೆನಪಿನ ಸ್ಮರಣಿಕೆಗಳನ್ನು ವಿತರಿಸುವಲ್ಲಿ ವೆಂಕಟೇಶ್ ಇನಾಮದಾರ ಅವರು ಸಹಾಯ ಮಾಡಿದರು. ಅದೇ ರೀತಿ ಊಟ ಜವಬ್ದಾರಿಯನ್ನು ಸಹ ಇನಾಮದಾರ ಹಾಗೂ ಅವರ ಸ್ನೇಹಿತರ ಬಳಗದವರೆ ಜವಾಬ್ದಾರಿ ವಹಿಸಿಕೊಂಡಿದ್ದರು. ಒಟ್ಟಾರೆಯಾಗಿ ಮೊದಲ ವರ್ಷದಲ್ಲಿ ಕಾರ್ಯಕ್ರಮ ಅದ್ಬುತವಾಗಿ ನಡೆಯಿತು ಎಂದು ಸಂಚಾಲಕರು ಹರ್ಷ ವ್ಯಕ್ತ ಪಡಿಸುತ್ತಾರೆ.

ನಂತರದ ವರ್ಷದಲ್ಲಿ ಭಾವ ಸಂಗಮದ ಸದಸ್ಯರ ಸಂಖ್ಯೆ ಹಾಗೂ ಆಸಕ್ತರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಇದರಲ್ಲಿ ಸಾಹಿತಿಗಳು, ಯುವ ಕವಿಗಳು, ಬರಹಗಾರರು ಇದ್ದಾರೆ. ಹಿರಿಯರು ಇದ್ದಾರೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. 2017ರ ಆ.13ರಂದು ಧಾರವಾಡದ ಆಲೂರು ವೆಂಕಟರಾಯರ ಸಭಾಂಗಣದಲ್ಲಿ ದ್ವೀತಿಯ ವರ್ಷರದ ಸಮಾಗಮ ನಡೆಯಿತು. ಇದಕ್ಕೆ ಸುನಿಲ್ ಕುಲಕರ್ಣಿ ಮತ್ತು ಅವರ ಸಾಕಾರ ತಂಡದ ಸದಸ್ಯರು ತುಂಬಾ ಸಹಕಾರ ನೀಡಿದರು. ಆಗ ಸದಸ್ಯರ ಸಂಖ್ಯೆ 165. ನನ್ನ ನೀರಿಕ್ಷೆಗೂ ಮೀರಿ ಭಾವ ಸಂಗಮದಲ್ಲಿ ಕಾರ್ಯಕ್ರಮಗಳು ನಡೆದವು ಎಂದು ರಾಜೇಂದ್ರ ಪಾಟೀಲರು ( ರಾಪಾ) ನೆನಪಿಸಿಕೊಂಡರು.

2018 ಆಗಷ್ಟ್.26ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ತೃತೀಯ ವರ್ಷದ ಭಾವ ಸಂಗಮದ ಸಮಾಗಮವನ್ನು ಆಯೋಜನೆಯನ್ನು ಮಾಡಲಾಗಿತ್ತು.ಬೆಂಗಳೂರಿನವರಾದ ಸಾಹಿತಿಗಳು ಹಾಗೂ ಸಂಗಮದ ಸದಸ್ಯರಾದ ವಿಜಯಲಕ್ಷ್ಮೀ ಸತ್ಯಮೂರ್ತಿ, ಶ್ರೀಕಾಂತ ಪತ್ರೆಮರ, ರಾ.ಸು.ವೆಂಕಟೇಶ, ಮಾನಸಾ ಕೆ.ಕೆ, ಜಯಶ್ರೀ ಗುಡಿ, ಹಾಗೂ ಶಂಕರ ಹೂಗಾರ ಹೀಗೆ ಬೆಂಗಳೂರಿನ ಅನೇಕ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಗಾರ ಅವರು ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು, ಜೊತೆಗೆ ಕನ್ನಡ ಹೋರಾಟಗಾರ ಮಾಯಣ್ಣ , ಚಂದ್ರಶೇಖರ ಪಾಟೀಲ, ಎಂ.ತಿಮ್ಮಯ್ಯ, ಕನ್ನಡ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಉಪಸ್ಥಿತರಿದ್ದು ಭಾವ ಸಂಗಮ ಸಮಾಗಮಕ್ಕೆ ವಿಶೇಷ ಮೆರುಗನ್ನು ತಂದರು. ಅನೇಕ ಬರಹಗಾರರು, ಕಲಾವಿದರು, ಸಂಗೀತಗಾರರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 185ಕ್ಕೂ ಹೆಚ್ಚು ಜನ ಸದಸ್ಯರಿದ್ದರು ಎಂದು ಅವರು ಮಹಿಳಾ ವಿವಿಯ ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ ವರದಿಗಾರರಿಗೆ ರಾಪಾ ಅವರು ತಿಳಿಸಿದರು.

ಭಾವ ಸಂಗಮಕ್ಕಿಗ ನಾಲ್ಕನೇ ವಸಂತ ತುಂಬಿದೆ. ಈ ಸಂಗಮದ ಸಮಾಗಮ ಎಲ್ಲಿ ಎಂಬ ಪ್ರಶ್ನೆ ಮೂಡಿದಾಗ ಶಿವಮೊಗ್ಗದಲ್ಲಿ ಎನ್ನುವ ಉತ್ತರ ದೊರೆಯಿತು. ಸಂಪೂರ್ಣ ಉಸ್ತುವಾರಿಯನ್ನು ವಿಜಯ ಆರ್ ಬಾಯರಿ, ಹರೀಶ ಬೇದ್ರೆ, ಶೀಲಾ ಸುರೇಶ, ವೆಂಕಟೇಶ ಇನಾಮದಾರ ಅವರು ವಹಿಸಿಕೊಂಡಿದ್ದರು. ಡಾ.ಜಿ.ಎಸ್.ಸರೋಜಾ‌, ಏಕನಾಥ‌ ಬೊಂಗಾಳೆ, ಸರಸ್ವತಿ ಟಿ‌ಎನ್‌, ಸಹನಾ‌ಚೇತನ, ರಂಜಿನಿ ದತ್ತಾತ್ರಿ, ಕೈಜೋಡಿಸಿದರು. ವ ಶಿವಮೊಗ್ಗದ ಕನ್ನಡ ಸಭಾಂಗಣದಲ್ಲಿ ಭಾನುವಾರ ಆ.18ರಂದು ನಡೆಯಿತು.

ಈ ನಾಲ್ಕನೇ ವಾರ್ಷಿಕೋತ್ಸವದ ಸಮಾಗಮದ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ವಿಜಯಾ. ಶ್ರೀಧರ ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸುಮಾ ಕಳಸಾಪೂರ ಹಾಗೂ ನೂರಸಮದ್ ಅಬ್ಬಲಗೆರೆ ಅವರು ಮಾತನಾಡಿದರು. ಕಾರ್ಯಕ್ರದ ಅತಿಥಿಗಳನ್ನು ಹರೀಶ ಬೇದ್ರೆ ಅವರು ಸ್ವಾಗತಿಸಿದರು. ರಾಜೇಂದ್ರ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. 50 ಕವಿಗಳು ಪಾಲ್ಗೊಂಡಿದ್ದ ಕವಿಗೋಷ್ಠಿಯನ್ನು ಎ.ಎನ್.ರಮೇಶ್ ನಿರೂಪಿಸಿದರು. ಡಾ.ಪ್ರಕಾಶ ಕಾಡೆಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಗೆ ಎಲ್.ಎಸ್‌.ಶಾಸ್ತ್ರಿ ಮುಖ್ಯ ಅತಿಥಿಗಳಾಗಿದ್ದರು. ಅನನ್ಯ ಐತಾಳ ಮತ್ತು ಗೆಳತಿಯರ ಪ್ರಾರ್ಥನೆ, ಸಹನಾಚೇತನ ತಂಡದವರ ಸ್ವಾಗತ ನೃತ್ಯ ಕಣ್ಮನ ಸೆಳೆಯಿತು.

ಅಂಕಣದ ಹುಟ್ಟು ಗುಟ್ಟು

ನಾವು ದಿನಪತ್ರಿಕೆಗಳಲ್ಲಿ ಅನೇಕ ಸಾಹಿತಿಗಳ ಅಂಕಣಗಳನ್ನು ಓದುತ್ತೇವೆ. ಅದೇರೀತಿ ನಾವೇಕೆ ಈ ಸಾಮಾಜಿಕ ಜಾಲತಾಣದಲ್ಲಿ ಅಂಕಣ ಬರವಣಿಗೆಯನ್ನು ಜಾರಿ ಮಾಡಬಹುದಲ್ಲಾ ಎಂದು ಯೋಚಿಸಿ ಸದಸ್ಯರ ಜೊತೆಗೆ ಚರ್ಚೆ ಮಾಡಲಾಯಿತು. ಅದೇ ವರ್ಷದಲ್ಲಿ ಅಂದರೆ 2018ರ ಜುಲೈ 10ರಂದು ‘ವಸುಧೈವ ಕುಟುಂಬಕಂ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ‘ಮಾಲತಿ ಮುದುಕವಿ’ಯವರು ಅಂಕಣ ಬರೆದುವುದರ ಜೊತೆಗೆ ಹೊಸಕಲ್ಪನೆಯೊಂದಿಗೆ ಅಡಿಗಲ್ಲು ಹಾಕಿದರು. ಇವರ ನಂತರ ‘ವಿಜಯಲಕ್ಷ್ಮಿ ಸತ್ಯಮೂರ್ತಿ’ ಅವರು ‘ಸಂಚಯ’ ಎಂಬ ಶೀರ್ಷಿಕೆಯ ಅಂಕಣ ಬರೆದರು. ಇವರಂತು ಸಂಪೂರ್ಣವಾಗಿ ಒಂದು ವರ್ಷಗಳ ಕಾಲ (53ವಾರ) ನಿರಂತರವಾಗಿ ಸಂಚಿಕೆಗಳ ಅಂಕಣ ಬರೆದರು. ಇದುವರೆಗೂ ಸುಮಾರು 25ಜನ ಲೇಖಕ, ಲೇಖಕಿಯರು ಅಂಕಣಗಳನ್ನು ಬರೆಯುತ್ತಿದ್ದಾರೆ.

ಸದ್ಯದ ದಿನಗಳಲ್ಲಿ ಭಾವ ಸಂಗಮದ ಸದಸ್ಯರೆಲ್ಲರಲ್ಲಿಯು ಕಿರಣ ಹಿರಿಸಾವೆ ಅವರು ಬರೆಯುವ ಮಂಗಳವಾರದ ‘ಚಚ್ಚೌಕದ ಬಾವಿ’ ಎನ್ನುವ ಅಂಕಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ಜಯಂತಿ ಚಂದ್ರಶೇಖರ ಅವರ ಮಂಗಳಾಕ್ಷತೆ ಅಂಕಣ ಗಮನ ಸೆಳೆಯುತ್ತಿದೆ. ಸೋಮವಾರದ ಯದ್ಭಾವಂ ತದ್ಭವತಿ, ಬುಧವಾರದ ತುಂಗೆ ತಪ್ಪಲಿನ ತಂಬೆಲರು, ಗುರುವಾರದ ಪರಿಕ್ರಮ, ಶುಕ್ರವಾರದ ನೆಲದ ಸುಗಂಧ ಅಂಕಣಗಳು ಭಾವ ಸಂಗಮದ‌ ಮೆರುಗು ಹೆಚ್ಚಿಸಿವೆ. ಪ್ರತಿದಿನಾಲೂ ಮಧ್ಯಾಹ್ನ ಮೂರರಿಂದ ಸಂಜೆ ಆರರ ವರೆಗೆ ಅಂಕಣದ ಸಮಯ ಈ ಸಮಯದಲ್ಲಿ ಬೇರೆ ವಿಷಯಗಳ ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಾರೆ ರಾಪಾ ಸರ್ ಅವರು.

ವಿಭಿನ್ನ ಅನುಭವ

ಅಬ್ಬ ಭಾವ ಸಂಗಮಕ್ಕೆ ಪ್ರತಿದಿನ ಹೊಸ ಸದಸ್ಯರ ಆಗಮನ. ಕೆಲವು ಸದಸ್ಯರು ತಮ್ಮ ಪ್ರತ್ಯೇಕವಾಗಿರುವ ಜೀವನದಲ್ಲಿ ನಡೆಯುವ ವಿಶೇಷ ಘಟನೆಗಳನ್ನು ಹಂಚಿಕೊಳ್ಳುವುದು, ಪೋಟೋಗಳನ್ನು ಹಾಕುವುದು, ಪ್ರತಿದಿನ ಬೆಳಗ್ಗಿನ ಜಾವ ಸುಮಾರು ನಾಲ್ಕು ಗಂಟೆಗೆ ಶುಭನುಡಿಯೊಂದಿಗೆ ಸಂಗಮದ ಭಾಗಿಲು ತೆಗೆಯುವುದು. ಈ ಶುಭನುಡಿಯ ಬೆನ್ನಲ್ಲೆ ಒಂದಾದ ಒಂದರಂತೆ ಉತ್ತರ ಕನ್ನಡ ಜಿಲ್ಲೆಯವರು ಪಕೃತಿಯ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಾ ಅದಕ್ಕೆ ತಕ್ಕಂತೆ ಒಂದು ಸಾಲಿನಲ್ಲಿಯೆ ಕವಿತೆ, ಕವನಗಳು, ಗಜಲ್‍ಗಳನ್ನು ಹಾಕುವುದು. ಓದುಗರು ಎಲ್ಲದಕ್ಕೂ ಪದಗಳ ಗುಂಪಿನ ವಿಮರ್ಶೆ ಮಾಡುವುದೆ ಚೆಂದ. ಇದರ ಜೊತೆಗೆ ವೆಂಕಟೇಶ ಇನಾಮದಾರ ಅವರ ವ್ಯಂಗ್ಯಚಿತ್ರಗಳ ಪ್ರಭಾವ ಅದಕ್ಕೆ ತಕ್ಕಂತೆ ನಗೆ ಚುಟುಕುಗಳನ್ನು ಹಾರಿಸುವುದು. ಮಧ್ಯಾಹ್ನ ಮೂರರಿಂದ ಆರರ ನಡುವೆ ಅಂಕಣ ಅಂಕಣಕಾರು ಓದುಗರ ಅಭಿಪ್ರಾಯಕ್ಕೆ ಕಾಯುವುದು. ಕೆಲವು ಅಂಕಣಕಾರರ ಅಂಕಣಕ್ಕಾಗಿ ಕಾಯುವುದು. ಆ ಅಂಕಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುವುದು ನಿಜಕ್ಕೂ ವಿಶೇಷ‌.

ಇಂಡಿ ತಾಲ್ಲೂಕಿನ ಅಥರ್ಗಾದಿಂದ ಶಿವಮೊಗ್ಗದತ್ತ ವಿಜಯಪುರ ಸಾಹಿತಿಗಳೊಂದಿಗೆ ಒಂದು ಸುತ್ತು

ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ನಾನು ಕಾಂಚನಾ. ಬಸವರಾಜ. ಪೂಜಾರಿ. ಕರ್ನಾಟಕ ರಾಜ್ಯದ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವೀತಿಯ ವರ್ಷದಲ್ಲಿ ಓದುತ್ತಿದ್ದೆನೆ. ನನ್ನ ಒಂದು ಲೇಖನಿಯಿಂದ ಸಂಚಾಲಕರು ಈ ಭಾವ ಸಂಗಮಕ್ಕೆ ಸೇರಿಸಿದರು. ಮೊದಲು ಸ್ವಲ್ಪ ದಿನಗಳ ಕಾಲ ನಾನು ಭಾವಸಂಗಮದ ಕಾರ್ಯ ಚಟುವಟಿಕೆಗಳನ್ನು ಗಮನಿಸಿದೆ. ಕೆಲವು ವಿಷಯಗಳ ಕುರಿತು ನೇರವಾಗಿ ಸಂಚಾಲಕರ ಜೊತೆಗೆ ಮಾತನಾಡಿ ನನ್ನ ಅನುಮಾನಗಳನ್ನು ಬಗೆಹರಿಸಿಕೊಂಡೆ. ನಂತರದಲ್ಲಿ ನಾನು ಕ್ರಮೆಣವಾಗಿ ಕವಿತೆ, ಕವನ, ಅಂಕಣಗಳಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಲು ಆರಂಭ ಮಾಡಿದೆ. ಇದರ ಜೊತೆಗೆ ನಾನು ಬರೆದ ಲೇಖನಿಗಳು ಈಗಾಗಲೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಮತ್ತೊಮ್ಮೆ ಎಲ್ಲವನ್ನು ಸಂಗಮದಲ್ಲಿ ಹಾಕಿದೆ. ಮೊದಲಿಗೆ ಯಾರು ಪ್ರತಿಕ್ರಿಯೆ ನೀಡಲಿಲ್ಲ. ಆಗ ನನಗೆ ಕೊಂಚ ಅಳುಕು ಉಂಟಾಯಿತು. ಎರಡು ದಿನಗಳ ನಂತರದಲ್ಲಿ ಸದಸ್ಯರೊಬ್ಬರು ನನ್ನ ಲೇಖನ ಚೆನ್ನಾಗಿದೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದರು. ಅದನ್ನು ಓದಿದ ನನಗೆ ಸ್ವಲ್ಪ ಸಮಾಧಾನವಾಯಿತು.

ಅದಾದ ನಂತರದಲ್ಲಿ ನಾನು ಆಗೊಂದು ಈಗೊಂದು ಲೇಖನಗಳನ್ನು ಬರೆದು ಹಾಕಲು ಪ್ರಾರಂಭ ಮಾಡಿದೆ. ಹಾಗೂ ಅಂಕಣಗಳನ್ನು ಗಮನಿಸುತ್ತಾ ಹೋದೆ. ಇದರಲ್ಲಿ ಬರುವ ಅಂಕಣಗಳನ್ನು ಓದಲು ಸಮಯ ಹೊಂದಿಸಿಕೊಳ್ಳುತ್ತಿದ್ದೆ. ಅದಕ್ಕೆ ತಕ್ಕನಾಗಿ ವಿಮರ್ಶೆಯನ್ನು ಸಹ ಮಾಡುವೆ.
ನನಗೆ ತಿಳಿದಿರುವ ಪ್ರಕಾರ ಭಾವ ಸಂಗಮ ನಾಲ್ಕನೇ ಸಮಾಗಮ ಕಾರ್ಯಕ್ರಮದ ಕುರಿತಾಗಿ ಮೂರು ತಿಂಗಳುಗಳಿಂದನೆ ಮುಂಚಿತವಾಗಿ ತಯಾರಿ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ, ಅಥವಾ ಬರುವುದಿಲ್ಲ ಎನ್ನುವುದರ ಕುರಿತು ಸ್ವಲ್ಪ ದೊಡ್ಡ ಮಟ್ಟದಲ್ಲಿಯೆ ಚರ್ಚೆಗಳು ನಡೆದವು. ನನಗಂತು ಅನೇಕರು ಕಾರ್ಯಕ್ರಮಕ್ಕೆ ಬರುವಂತೆ ಒತ್ತಾಯ ಮಾಡಿದರು.ರಾಪಾ ಅವರು ಗುಂಪಿನಲ್ಲಿಯೇ ಪ್ರೀತಿಯಿಂದ ಬೈದರು. ಟಿ. ಎನ್. ಶಿವಕುಮಾರಅವರು ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಿದರು. ಆಗ ನಾನು ನೋಡಿದರಾಯಿತು ಎಂದುಕೊಂಡೆ. ಆದರೆ ಸಂಗಮದಲ್ಲಿ ನಡೆಯುವ ಸಂಭಾಷಣೆ ನೋಡಿದಾಗ ನನ್ನಲ್ಲೆ ಗೊಂದಲಗಳು ಶುರುವಾದವು. ಒಂದು ದಿನ ರಾಪಾ ಅವರು ನನ್ನ ಅಪ್ಪನ ಜೊತೆಗೆ ಮತನಾಡಿದರು.

ಅಲ್ಲಿಯವರೆಗೂ ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಿರಲಿಲ್ಲ. ಅದಾದ ಮೇಲೆ ಮನೆಯಲ್ಲಿ ಹೇಳಿದೆ. ಅಪ್ಪನು ಏನು ಹೇಳಲಿಲ್ಲ ಸುಮ್ಮನಿದ್ದರು. ನಾನು ಸುಮ್ಮನಾದೆ. ಕಾರ್ಯಕ್ರಮಕ್ಕೆ ಇನ್ನೇನು ಒಂದು ವಾರ ಉಳಿದಿತ್ತು. ಆಗ ನಾನು ಕೂಡಾ ಶಿವಮೊಗ್ಗಕ್ಕೆ ಬರುತ್ತೇನೆ ಎಂದು ಸಂದೇಶ ಹಾಕಿದಾಗ ಸಂಚಾಲಕರು ಸಂತಸ ಪಟ್ಟರು. ನಂತರ ಮುರುಗೇಶ ಸಂಗಮ ಅವರು ಕರೆ ಮಾಡಿ ಬರುತ್ತಿರಾ ಎಂದು ವಿಚಾರಿಸಿದರು. ಆಗಲೂ ಸಹ ಗೊಂದಲದಲ್ಲಿಯೇ ಒಪ್ಪಿಗೆ ಸೂಚಿಸಿದೆ.

2019 ಆ. 17 ರಂದು ಸಂಜೆ ಸುಮಾರು ಸಂಜೆ 7 ಕ್ಕೆ ಬಸವನಬಾಗೇವಾಡಿಯ ಸಾಹಿತಿ ಡಾ. ಮುರುಗೇಶ ಸಂಗಮ ಅವರ ಬಳಗದೊಂದಿಗೆ ವಿಜಯಪುರದಿಂದ ಪಯಣ ಬೆಳೆಸಿದೆ. ಬಳಗದವರನ್ನು ನೋಡಿದ ನನಗೆ ಮನಸಿನ ಒಂದು ಮುಲೆಯಲ್ಲಿ ಮತ್ತಷ್ಟು ಅಳಕು ಶುರುವಾಯಿತು. ಇದೇನಪ್ಪ ಎಲ್ಲರೂ ಹಿರಿಯರಿದ್ದಾರೆ. ನಾನು ಹೇಗೆ ಇವರ ಜೊತೆಗೆ ಹೊಂದಿಕೊಳ್ಳೊದು? ಏನು ಮಾತಾಡೊದು? ಅಂತ ಯೋಚಿಸುತ್ತದೆ. ಅಷ್ಟರಲ್ಲಿ ಮುರುಗೇಶ ಅವರು ಎಲ್ಲರ ಪರಿಚಯ ಮಾಡಿಸಿದರು. ಸ್ವಲ್ಪ ಮುಜುಗರ ತೋರೆದು ಪರಸ್ಪರ ಮಾತನಾಡಲು ಆರಂಬಿಸಿದೆವು. ನಂತರ ರಸ್ತೆಯ ಮಧ್ಯೆದಲ್ಲಿ ಒಂದು ಕಡೆಗೆ ಎಲ್ಲರೂ ಸೇಲ್ಫಿಗೆ ಫೋಸ್ ಕೊಟ್ಟೆವು. ಅದನ್ನು ಸಂಗಮದಲ್ಲಿಯೂ ಹಾಕಿದೆವು.

ರಾತ್ರಿ ಸುಮಾರು 10 ಗಂಟೆಯಷ್ಟೊತ್ತಿಗೆ ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ರಾತ್ರಿ ವೇಳೆಯಾಗಿದ್ದರಿಂದ ಒಂದು ಪೇಟ್ರೋಲ್ ಬಂಕ್ ಹತ್ತಿರ ಹೋಟೆಲ್ ನಲ್ಲಿ ಊಟಕ್ಕೆ ಗಾಡಿಯನ್ನು ನಿಲ್ಲಿಸಿದೆವು. ನಾನು ಸುಮಾರು 10ಗಂಟೆಗಳ ಕಾಲ ಮಾತಿನ ಮಲುಕು, ಹಳೆ ಹಾಡುಗಳನ್ನು ಗೊನಗುವುದು, ಚಲಿಸುವ ಗಾಡಿಯಲ್ಲಿಯೇ ನನ್ನದೊಂದಿಷ್ಟು ತುಂಟಾಟದ ವಿಡಿಯೋಗಳನ್ನು ಮಾಡುವುದು. ಕಿಡಕಿಯ ಪಕ್ಕದಲ್ಲಿ ಕುಳಿತು ತಣ್ಣನೆಯ ತಂಪಾದ ಗಾಳಿಯಲ್ಲಿ ರಸ್ತೆಯ ಉದ್ದಕ್ಕೂ ಬರೆದಿರುವ ಫಲಕಗಳನ್ನು ಓದುತ್ತಾ ಹೋಗುವುದೆ ಖುಷಿಯ ವಿಚಾರ. ಇದರ ಮಧ್ಯ ನಾನು ಸಂಗಾತಿಯನ್ನು ಸಹ ಕರೆದುಕೊಂಡು ಹೋಗಿದ್ದೆ. ಇದ್ಯಾರಪ್ಪ! ಇವರ ಮತ್ತೊಬ್ಬ ಸಂಗಾತಿ ಅಂತಿರಾ? ಅದು ಮತ್ಯಾರು ಅಲ್ಲಾ, ನನ್ನ ಲ್ಯಾಪ್‍ಟಾಪ್ ಹಾಗೂ ಪುಸ್ತಕಗಳೆ ನನ್ನ ಸಂಗಾತಿಗಳು. ರಾತ್ರಿಯಿಡಿ ಮಲಗಲಿಲ್ಲ.

ಸುಮಾರು ಬೆಳಗಿನ ಜಾವ ಚುಮುಚುಮು ಚಳಿಗೆ ಟೀ ಕುಡಿವ ಆಸೆ ನನ್ನಲ್ಲಿ ಹೆಚ್ಚಾಗುತ್ತಿತ್ತು. ಇದರ ಜೊತೆಗೆ ಮಲೆನಾಡಿನ ಸೌಂದರ್ಯವನ್ನು ಸವಿಯುತ್ತಿದೆ. ಮೊದಲೆ ನಾವು ಉತ್ತರ ಕರ್ನಾಟಕದವರು ನೋಡಿ ನಮಗೆಲ್ಲ ನಿಸರ್ಗದ ಸೌಂದರ್ಯ ಎಲ್ಲಾವು ಅಪರೂಪಕ್ಕೆ ಸಿಗುತ್ತೆ. ಅಂಥಹುದರಲ್ಲಿ ಸೌಂದರ್ಯದ ಸವಿ ಸವಿಯದೆ ಹೋದರೆ ತಪ್ಪಾಗುತ್ತದೆ. ಇದೆ ರೀತಿಯಲ್ಲಿ ನೈಸರ್ಗದ ಸೌಂದರ್ಯವನ್ನು ಸವಿತ್ತಾ, ಮಾತು, ಹರಟೆ, ಮಾಡುತ್ತಾ ಸುಮಾರು 10ಗಂಟೆಗಳ ಕಾಲ ಪ್ರಯಾಣ ಮಾಡಲಾಯಿತು. ಬೆಳಗಿನ ಜಾವ ಐದುವರೆಗೆ ಶ್ರೀಕಾಂತ .ಪತ್ರೆಮರ ಅವರ ಸೋದರಿಯ ಮನೆ ತಲುಪಿದವು. ಅಲ್ಲಿಯೇ ನಮ್ಮ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡೆವು, ನಂತರ ಅವರ ತಂಗಿಯವರು ಮಾಡಿದ ಉಪ್ಪಿಟ್ಟು ಚಹಾ ಸೂಪರ್ ಆಗಿತ್ತು. ನಂತರ ಎಲ್ಲರೂ ಸೇರಿ ಸಭಾಂಗಣಕ್ಕೆ ತೆರಳಿದವು. ಅನೇಕರು ಎಲ್ಲಿ ನಮ್ಮನ್ನು ಸ್ವಾಗತಿಕೊಂಡರು. ಕಲವರು ಮಾತನಾಡಿಸಿದರು. ನನ್ನಗೆ ತುಂಬಾ ಸಂತೋಷವಾಯಿತು, ಆದರು ಸಹ ನಾನು ಮೊದಲೆ ಹೇಳಿದ ಹಾಗೆ ಕೊಚ ಅಳುಕು ಮುಂದುವರೆದೆ ಇತ್ತು. ಇದೇ ಕಾರಣದಿಂದಾಗಿ ನಾನು ಸ್ವಲ್ಪ ದೂರದಲ್ಲಿಯೆ ಇದ್ದು ಹಾಡು ಕೇಳುತ್ತಾ ಅಲ್ಲಿರುವ ಹೂಗಳ ಚಿತ್ರಿಕರಣ ಮಾಡುತ್ತಿದ್ದೆ.

ಅಷ್ಟರಲ್ಲಿಯೇ ರಾಜೇಂದ್ರ ಪಾಟೀಲ‌ ಸರ್ ಆಗಮನವಾಯಿತು. ನಂತರದಲ್ಲಿ ವಿಜಯಮ್ಮ, ರಾಸು ವೆಂಕಟೇಶ, ಜಯಂತಿ ಅಮ್ಮ, ತ.ನಾ.ಶಿ ಹೀಗೆ ಅನೇಕರ ದಂಡು ತಂಡೋಪ ತಂಡದಲ್ಲಿ ಬಂದರು. ಇವರಲ್ಲ ನನ್ನನ್ನು ಮಾತನಾಡಿಸಿ ನನ್ನಲ್ಲಿದ ಭಯವನ್ನು ಹೋಗಲಾಡಿಸಿದರು. ಎಲ್ಲರೂ ಸೇರಿ ತಿಂಡಿ ಮಾಡಿದವು. ನಂತರ ವಿಜಯಮ್ಮಾ ನಡಗೆರೆ, ಶ್ರೀವಲ್ಲಭ, ವೆಂಕಟೇಶ ಇನಾಮದಾರ, ತ.ನಾ.ಶಿ ಅನೇಕ ಜೊತೆಗೆ ಸ್ವಲ್ಪ ತರಲೆ, ತುಂಟಾಟ ಮಾಡುತ್ತಾ, ಸ್ವಲ್ಪ ಕಾಲು ಏಳೆದು ಏಳೆಸಿಕೊಂಡೆ. ಇವರೆಲ್ಲರೂ ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣದ ಹೀಗೆ ಅನೇಕ ವಿಷಯಗಳ ಬಗ್ಗೆ ತಮ್ಮ ಅನುಭಮಗಳನ್ನು ಹಂಚಿಕೊಂಡು ಸಲಹೆಗಳನ್ನು ನೀಡಿದರು. ಈ ಸುಂದರ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಸುಂದರ ಸಮಾಗಮ ಮುಗಿಸಿಕೊಂಡೆ ಮನೆಗೆ ಬಂದಿದ್ದು ಮರುದಿನ
ಬೆಳಗಿನ ಜಾವ ಆರು ಗಂಟೆಗೆ.
ಧನ್ಯವಾದಗಳು.

ಕಾಂಚನಾ ಪೂಜಾರಿ
86609 89900

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending