Connect with us

ಅಂತರಂಗ

ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್

Published

on

ಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ನಡುವೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಡಿಸೆಂಬರ್ 5ನೇ ತಾರೀಖು ರಾತ್ರಿ ಬಹಳ ಹೊತ್ತಿನವರೆಗೆ ಓದು ಮತ್ತು ಬರವಣಿಗೆಯಲ್ಲಿ ಮಗ್ನರಾಗಿದ್ದ ಅವರು ತಮ್ಮ ಮುಂದಿದ್ದ ಪುಸ್ತಕಗಳ ಮೇಲೆಯೇ ಕುಸಿದು ಬಿದ್ದಿದ್ದರು. ಡಿಸೆಂಬರ್ 6ರ ಬೆಳಗ್ಗೆ ನೋಡಿದಾಗ ಅವರು ನಾಲ್ಕಾರು ಗಂಟೆಗಳ ಹಿಂದೆಯೇ ಈ ಪ್ರಪಂಚವನ್ನು ತ್ಯಜಿಸಿ ಮಹಾ ಪರಿನಿಬ್ಬಾಣ ಹೊಂದಿದ್ದರು.

ನಂಬಲಸಾಧ್ಯವಾದ ಪುಸ್ತಕ ವ್ಯಾಮೋಹವನ್ನು ಹೊಂದಿದ್ದ ಡಾ. ಅಂಬೇಡ್ಕರ್ರವರು ನಿಧನರಾಗುವ ಹಿಂದಿನ ರಾತ್ರಿಯ (1956 ಡಿಸೆಂಬರ್ 5ರ ರಾತ್ರಿ) ನೈಜ ಪ್ರಸಂಗವನ್ನು ಅಂಬೇಡ್ಕರ್ರವರಿಗೆ 17 ವರ್ಷಗಳ ಕಾಲ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ನಾನಕ್ಚಂದ್ ರತ್ತು ಹೀಗೆ ದಾಖಲಿಸಿದ್ದಾರೆ: ಡಿಸೆಂಬರ್ 5ನೇ ತಾರೀಖು ಅವರು ಇಡೀ ದಿನ ಅಧ್ಯಯನದಲ್ಲಿ ಮುಳುಗಿದ್ದರು, ರಾತ್ರಿ 10 ಗಂಟೆಯ ವೇಳೆಗೆ ತುಂಬಾ ಬಳಲಿದ್ದರು. ಕೆಲಸದಾಳು ಸುಧಾಮ ಹಲವಾರು ಸಾರಿ ಊಟಕ್ಕೆ ಕರೆದಿದ್ದನು.

ಆದರೂ ಬಾಬಾಸಾಹೇಬರು ಊಟಕ್ಕೆ ಹೋಗದೆ ಅಧ್ಯಯನದಲ್ಲಿ ತಲ್ಲೀನರಾಗಿದ್ದರು. ಕೊನೆಗೂ ನಮ್ಮೆಲ್ಲರ ಬಲವಂತದಿಂದಾಗಿ ಒಲ್ಲದ ಮನಸ್ಸಿನಿಂದ (ಅಧ್ಯಯನ ನಿಲ್ಲಿಸಿ ಊಟಕ್ಕೆ ಕರೆಯುತ್ತಾರಲ್ಲ ಎಂಬ ಸಿಟ್ಟಿನಿಂದಲೂ ಸಹ) ಸುಮಾರು ರಾತ್ರಿ 10.15ರ ಸಮಯಕ್ಕೆ ತಮ್ಮ ಅಧ್ಯಯನದ ಕೊಠಡಿಯಿಂದ ಎದ್ದು ಊಟದ ಕೋಣೆಯ ಕಡೆಗೆ ಹೊರಟರು. ಡೈನಿಂಗ್ ರೂಂಗೆ ಹೋಗುವಾಗ ತಮ್ಮ ಬಹತ್ತಾದ ಲೈಬ್ರರಿಯು ಅತೀ ದೊಡ್ಡ ಮೈನ್ ಹಾಲ್ನಲ್ಲಿತ್ತು. ತಮ್ಮ ಕೈಯನ್ನು ನನ್ನ ಭುಜದ ಮೇಲಿಟ್ಟುಕೊಂಡು ತಮ್ಮ ಇನ್ನೊಂದು ಕೈಯಲ್ಲಿ ಊರುಗೋಲನ್ನಿಡಿದು, ಪುಸ್ತಕಗಳಿಂದ ತುಂಬಿಹೋಗಿದ್ದ ತಮ್ಮ ದೊಡ್ಡ ಟೇಬಲ್ನೆಡೆಗೆ ನಡೆದು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು.ಒಂದು ಚಿಕ್ಕ ಪೆಟ್ಟಿಗೆಯನ್ನು ತೆರೆದರು.

ತಮ್ಮ ಫೌಂಟನ್ ಪೆನ್ ಹೊರತೆಗೆದು ಕೆಲವು ಹಾಳೆಗಳಿಗೆ ಹುಡುಕಾಡಿದರು. ಕೆಲಸದಾಳು ಮೂರನೇ ಬಾರಿಗೆ ಬಂದ. ಅವರು ಕುರ್ಚಿಯಿಂದ ಮೇಲೆದ್ದು ಮುಂದೆ ನಡೆದರು. ಒಂದು ಕ್ಷಣ ನಿಂತು ಕೆಲವು ಪುಸ್ತಕಗಳನ್ನು ಕಪಾಟಿನಿಂದ ಹೊರ ತೆಗೆದು ನನ್ನ ಕೈಗಿತ್ತರು. ಸ್ವಲ್ಪ ಮುಂದೆ ಹೋಗಿ ಅವರು ಎರಡೂ ಕಡೆ ನೋಡಿ ಬೇರೆ ಅಲ್ಮೆರಾಗಳಿಂದ ಇನ್ನೂ ಹೆಚ್ಚು ಪುಸ್ತಕಗಳನ್ನು ತೆಗೆದುಕೊಂಡರು. ಆ ಪುಸ್ತಕಗಳನ್ನು ಹಾಸಿಗೆಯ ಹತ್ತಿರದ ತಮ್ಮ ಟೇಬಲ್ಲಿನ ಮೇಲಿಡಲು ನನಗೆ ಹೇಳಿದರು. ಊಟದ ಕೊಠಡಿಯನ್ನು ಪ್ರವೇಶಿಸುವುದಕ್ಕೆ ಮೊದಲು ಹಿಂದಕ್ಕೆ ತಿರುಗಿದರು.

ಒಂದು ಕ್ಷಣ ನಿಂತುಕೊಂಡು ತಮ್ಮ ಜೀವಿತ ಕಾಲದ ನಿಜವಾದ ಮತ್ತು ಮಹಾ ಗೆಳೆಯರಾಗಿದ್ದ ಅಲ್ಮಿರಾಗಳೊಳಗಿದ್ದ ಆ ಪುಸ್ತಕಗಳ ಮೇಲೆ ನೋಟವನ್ನು ಹರಿಸುತ್ತಾ ಊಟದ ಕೊಠಡಿಯ ಒಳಗೆ ಹೋದರು. ಅಡುಗೆ ಮನೆಯ ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಾನು ಅವರಿಗೆ ಸಹಾಯ ಮಾಡಿದೆ. ಕೆಲಸದಾಳು ಅವರಿಗೆ ಊಟ ಬಡಿಸಿದ. ಸ್ವಲ್ಪ ಅನ್ನವನ್ನು ತಿಂದು ತಟ್ಟೆಯನ್ನು ನನ್ನ ಕಡೆಗೆ ತಳ್ಳಿದರು. ”ನೀನು ತಿನ್ನು,” ಎಂದು ಹೇಳಿದರು. ತಮ್ಮ ತಲೆಯನ್ನು ನೀವಲು ನನಗೆ ಹೇಳಿದರು.

ನಾನು ಸ್ವಲ್ಪ ಹೊತ್ತು ನೀವಿದೆ. ಸ್ವಲ್ಪ ಸಮಯದ ನಂತರ ”ಚಲ್ ಕಬೀರಾ ತೇರಾ ಭವ್ಸಾಗರ್ ದೇರಾ,”ಎಂದು ಗುನುಗುತ್ತ, ಊರುಗೋಲಿನ ಸಹಾಯದಿಂದ ಮೇಲೆದ್ದರು. ನನ್ನ ಭುಜದ ಮೇಲೆ ತಮ್ಮ ತೋಳನ್ನಿರಿಸಿ ಕೆಲವು ಹೆಜ್ಜೆಗಳಷ್ಟು ನಡೆದು ನಿಂತುಕೊಂಡರು. ಲೈಬ್ರರಿಯೊಳಗಿದ್ದ ಪುಸ್ತಕಗಳನ್ನು ಮತ್ತೊಮ್ಮೆ ಮಮತೆಯಿಂದ ನೋಡಿದರು, ನಂತರ ಮಲಗುವ ಕೊಠಡಿ ಪ್ರವೇಶಿಸಿದರು.

ಆಗ ರಾತ್ರಿ ಸುಮಾರು 11-30 ಗಂಟೆ. ವಿಶ್ರಾಂತಿಯಿಲ್ಲದೆ ಹಿಂದಿನ ನಾಲ್ಕು ರಾತ್ರಿಗಳೂ ಸತತವಾಗಿ ಕೆಲಸ ಮಾಡಿದ್ದರಿಂದ ನಾನು ದಣಿದು ಹೋಗಿದ್ದೆ. ನನ್ನ ಹೆಂಡತಿ ಮಕ್ಕಳು ನನಗೋಸ್ಕರ ಆತಂಕದಿಂದ ಕಾಯುತ್ತಿರಬಹುದೆಂದು ಅರಿತಿದ್ದ ನಾನು ಮನೆಗೆ ಹೋಗಲು ಅಣಿಯಾದೆ. ಬಾಬಾ ಸಾಹೇಬರ ದಣಿದುಹೋದ ಮುಖ ಕಣ್ಣುಗಳನ್ನು ನೋಡಿ, ಅವರು ಗಾಢವಾದ ನಿದ್ರೆಗೆ ಹೋಗುತ್ತಾರೆಂದು ನಾನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ಅವರ ಗಮನವನ್ನು ಸೆಳೆಯಲೆಂದೇ ನಾನು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸ್ಥಳಾಂತರಿಸುತ್ತಾ ಟೇಬಲ್ಲನ್ನು ಅಲುಗಾಡಿಸಿದೆ.

ಅವರು ಕಣ್ಣೆತ್ತಿ ನೋಡಿದರು. ಇದರ ಸದುಪಯೋಗ ಪಡೆದುಕೊಂಡು ”ಸ್ವಾಮಿ ಈ ರಾತ್ರಿ ನಾನು ಇಲ್ಲೇ ಇರಬೇಕೆ? ಅಥವಾ ನಾನು ಮನೆಗೆ ಹೋಗಬಹುದೋ?,” ಎಂದು ನಾನು ವಿನೀತನಾಗಿ ಕೇಳಿದೆ. ”ಆಗಲಿ ನೀನು ಮನೆಗೆ ಹೋಗು ವಿಶ್ರಾಂತಿ ಪಡೆದುಕೋ, ನೀನು ಈ ಎಲ್ಲಾ ದಿನಗಳಲ್ಲೂ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀಯ,” ಎಂದು ಅವರು ಹೇಳಿದರು. ನಾನು ಇನ್ನೇನು ಮೈನ್ ಗೇಟನ್ನು ತಲುಪಿ, ನನ್ನ ಬೈಸಿಕಲ್ನೊಡನೆ ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ ಸೇವಕನು ಓಡುತ್ತಾ ಬಂದನು. ”ಸ್ವಾಮಿ, ಬಾಬಾಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ,” ಎಂದನು.

ನನ್ನ ಬೈಸಿಕಲ್ಲನ್ನು ಗೇಟಿನಲ್ಲೇ ಬಿಟ್ಟು, ಕೊಠಡಿ ಪ್ರವೇಶಿಸಿದಂತೆ ಅವರು ಪ್ರಶ್ನಾರ್ಥಕ ಕಣ್ಣುಗಳಿಂದ ಮೇಲೆ ನೋಡಿ ”ನೀನು ಮನೆಗೆ ಹೋಗುವ ಮೊದಲು ಬುದ್ಧ ಶಾಸನ ಕೌನ್ಸಿಲ್ಗೆ, ಅತ್ರೆ ಮತ್ತು ಜೋಷಿಯವರಿಗೆ ನಾನು ಹೇಳಿ ಬರೆಸಿದ್ದ ಕರಡು ಪತ್ರಗಳನ್ನೂ, ಬುದ್ಧ ಅಂಡ್ ಹಿಸ್ ಧಮ್ಮ ಗ್ರಂಥದ ಮುನ್ನುಡಿ ಮತ್ತು ಪರಿಚಯದ ಟೈಪ್ ಮಾಡಿರುವ ಪ್ರತಿಯನ್ನೂ ತೆಗೆದಿಡು ನಂತರ ನಾನು ಅವುಗಳನ್ನೊಮ್ಮೆ ಓದುತ್ತೇನೆ,” ಎಂದರು.

ಇವುಗಳನ್ನು ತಪ್ಪದೇ ಕಳುಹಿಸಬೇಕಾಗಿರುವುದರಿಂದ ಬೆಳಿಗ್ಗೆ ಬೇಗನೇ ಬರಬೇಕೆಂದು ನನ್ನನ್ನು ಕೇಳಿಕೊಂಡರು.
ನಾನು ಅವರ ಆತಂಕವನ್ನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ನಾನು ಮನೆಗೆ ಹೋಗುವುದಿಲ್ಲವೆಂದೂ ಮತ್ತು ಆ ರಾತ್ರಿ ಅಲ್ಲಿಯೇ ಉಳಿಯುವೆನೆಂದೂ ಅವರಿಗೆ ನಮ್ರವಾಗಿ ಹೇಳಿದೆ. ”ಬೇಡ, ನೀನು ಬಹಳ ದಿನಗಳು ಮನೆಗೆ ಹೋಗಿಲ್ಲ. ನಿನಗೆ ತೊಂದರೆಯುಂಟಾದದ್ದಕ್ಕೆ ನನಗೆ ಬೇಸರವಿದೆ. ಆದರೆ ನೀನು ಸಮರ್ಪಣಾ ಭಾವದಿಂದ, ಭಕ್ತಿಯಿಂದ ಮಾಡಿದ ಸೇವೆಗಾಗಿ ನಾನು ನಿನಗೆ ಕತಜ್ಞನಾಗಿದ್ದೇನೆ. ಆರಾಮವಾಗಿ ಮನೆಗೆ ಹೋಗು, ನಾನು ತುಂಬಾ ಚೆನ್ನಾಗಿದ್ದೇನೆ. ತಲೆ ಕೆಡಿಸಿಕೊಳ್ಳಬೇಡ,” ಎಂದು ಹೇಳಿದರು. ನಾನು ಅವರ ಪಾದಗಳನ್ನು ಮುಟ್ಟಿ ಪೂಜ್ಯಭಾವದಿಂದ ನಮಸ್ಕರಿಸಿ ಮನೆಗೆ ಹೊರಟೆ.

ಅದೊಂದು ನೀರಸ ರಾತ್ರಿಯಾಗಿತ್ತು. ಮಧ್ಯರಾತ್ರಿ ಮುಗಿದುಹೋಗಿತ್ತು. ಮೋಡಗಳ ಮೇಲೆ ಮೋಡಗಳು ರಾಶಿ ರಾಶಿಯಾಗಿ ಕವಿದಿದ್ದವು, ನಾನು ಹಳೆಯ ತರಕಾರಿ ಮಂಡಿ ತಲುಪಿದಾಗ ನನ್ನ ಬೈಸಿಕಲ್ನ ಮುಂದಿನ ಟೈರ್ ಪಂಕ್ಚರ್ ಆಯಿತು. ಬೈಸಿಕಲ್ಅನ್ನು ಮೂರು ಮೈಲಿಗಳಿಗೂ ಹೆಚ್ಚು ದೂರ ತಳ್ಳಿಕೊಂಡು ಹೋಗಬೇಕಾಯಿತು. ತುಂಬಾ ಹೊತ್ತು ಕಾಯ್ದು ಮಲಗಿಬಿಟ್ಟಿದ್ದ ನನ್ನ ಹೆಂಡತಿ ಮಕ್ಕಳಿಗೆ ಬೇಸರವಾಗುವಂತೆ ಬೆಳಗಿನ ಜಾವ 2 ಗಂಟೆಗೆ ಮನೆ ತಲುಪಿದೆ. ಅವಸರವಾಗಿ ಊಟ ಮಾಡಿದೆ.

ನಿದ್ರಿಸಲು ಹೋದೆ, ಬಾಬಾ ಸಾಹೇಬರ ಬಳಿ ಈ ಸಮಯದಲ್ಲಿ ಇರಬೇಕಾಗಿರುವುದರಿಂದ ನನ್ನನ್ನು ಬೇಗನೇ ಎಬ್ಬಿಸಲು ನನ್ನ ಹೆಂಡತಿಗೆ ತಿಳಿಸಿದೆ. ಬಹಳ ದಿನಗಳ ನಂತರ ಮನೆಗೆ ಬಂದಿದ್ದರಿಂದ ಅವಳು ಪ್ರಶ್ನಾರ್ಥಕ ಕಣ್ಣುಗಳಿಂದ ನನ್ನತ್ತ ನೋಡಿದಳು. ಆದರೆ ಆ ನೋಟ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಅವಳು ಚೆನ್ನಾಗಿ ಅರಿತಿದ್ದಳು. ನನಗೂ ಮಾತನಾಡುವ ಧೈರ್ಯವಾಗಲೀ ಶಕ್ತಿಯಾಗಲೀ ಇರಲಿಲ್ಲ.
ಬೆಳಿಗ್ಗೆ ಸವಿತಾ ಅಂಬೇಡ್ಕರ್ರವರು ನನ್ನನ್ನು ಕರೆತರಲು ಬಾಬಾ ಸಾಹೇಬರ ಮನೆಯ ಅಡುಗೆ ಭಟ್ಟ ಸುಧಾಮ ಮತ್ತು ಬಾಬಾ ಸಾಹೇಬರ ಕಾರು ಚಾಲಕ ಕಾಳು ರವರನ್ನು ಬಾಬಾ ಸಾಹೇಬರ ಕಾರಿನಲ್ಲಿ ನನ್ನ ಮನೆಗೆ ಕಳುಹಿಸಿದ್ದರು.

ಬಾಗಿಲ ಮುಂದೆ ನಿಂತಿದ್ದ ಇವರಿಬ್ಬರನ್ನು ಹಾಗೂ ಬಾಬಾ ಸಾಹೇಬರ ‘ಅಂಬಾಸಿಡರ್ ಕಾರನ್ನು ನೋಡಿ ಏನೋ ಅನಾಹುತವಾಗಿರಬೇಕೆಂದು ಅನ್ನಿಸಿತು. ನನ್ನ ನರಗಳಲ್ಲಿ ಆಘಾತದ ಅಲೆಗಳು ಪ್ರವಹಿಸಿದವು. ನನ್ನ ಇಡೀ ದೇಹ ಬೆವರತೊಡಗಿತು. ನನ್ನ ಕೈ ಕಾಲುಗಳು ನಡುಗತೊಡಗಿದವು. ”ಏನಾಯಿತು? ಬಾಬಾ ಸಾಹೇಬರು ಚೆನ್ನಾಗಿದ್ದಾರೆಯೇ?,” ಎಂದು ನಾನು ಅವರನ್ನು ಕೇಳಿದೆ.

ನಿಮ್ಮನ್ನು ತುರ್ತಾಗಿ ಕರೆದುಕೊಂಡು ಬರಲು ಸವಿತಾ ಮೇಡಂರವರು ನಮ್ಮನ್ನು ಕಳುಹಿಸಿದ್ದಾರೆ ಎಂದಷ್ಟೆ ಹೇಳಿದರು. ನಾನು ನಿಂತ ಹೆಜ್ಜೆಯಲ್ಲೇ ಹೊರಟೆ. ಬಾಬಾ ಸಾಹೇಬರ ಮನೆಯನ್ನು ತಲುಪಿದಾಗ ವರಾಂಡದಲ್ಲಿ ಅಳುತ್ತಾ ಕುಳಿತಿದ್ದ ಸವಿತಾರವರು ”ನಾನಕ್ಚಂದ್! ಸಾಹೇಬರು ನಮ್ಮನ್ನು ಬಿಟ್ಟು ಹೊರಟು ಹೋದರು,” ಎಂದು ಅಳುತ್ತ ಹೇಳಿದರು.

ಬಾಬಾ ಸಾಹೇಬರ ಸಾವಿನ ವಾರ್ತೆಯು ನನ್ನ ಜೀವನದ ಅತ್ಯಂತ ಆಘಾತಕರವಾದ ಅನುಭವವಾಗಿತ್ತು. ನಾನು ಹುಚ್ಚನಂತಾದೆ. ನನ್ನ ತಲೆಯನ್ನು ಬಾಗಿಲಿಗೆ ಚಚ್ಚಿಕೊಂಡೆ. ”ಅಯ್ಯೋ ಬಾಬಾ ಸಾಹೇಬ್ ನಾನಾದರೂ ಸತ್ತು ನೀವಾದರೂ ಬದುಕಬಾರದಿತ್ತೆ ಎಂದು ಅರಚಿಕೊಂಡೆ. ಬಾಬಾ ಸಾಹೇಬರ ಮಲಗುವ ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆಯೇ ಸವಿತಾರವರು ನನ್ನನ್ನು ಹಿಂಬಾಲಿಸಿದರು.

ಹಿಂದಿನ ರಾತ್ರಿ ಅವರನ್ನು ಎಲ್ಲಿ ಬೀಳ್ಕೊಟ್ಟಿದ್ದೆನೋ ಅದೇ ಹಾಸಿಗೆಯ ಮೇಲೆ ಚಿರನಿದ್ರೆಯಲ್ಲಿದ್ದ ಆ ಮಹಾಪುರುಷನನ್ನು ಕಂಡು ಸ್ಥಂಭೀಭೂತನಾದೆ. ಆ ಮಹಾಪುರುಷನ ಸುತ್ತಾ ಓಡಾಡಿದೆ, ಮಂಡಿಯೂರಿ ಬಾಬಾ ಸಾಹೇಬರ ಎರಡೂ ಪಾದಗಳ ಮೇಲೆ ನನ್ನ ತಲೆಯನ್ನಿಟ್ಟು ಗೋಳಾಡತೊಡಗಿದೆ. ಹಿಂದಿನ ರಾತ್ರಿ ಅವರು ಟೇಬಲ್ ಮೇಲೆ ಇಡಲು ಹೇಳಿದ್ದ ಹಾಸಿಗೆಯ ಹತ್ತಿರ ಬಿದ್ದಿದ್ದ ಕಾಗದಗಳತ್ತ ನೋಡಿ, ನನ್ನ ದುಃಖ ಮಿತಿಮೀರಿತು.

ಹಣಕಾಸಿನ ಮುಗ್ಗಟ್ಟು
ಡಾ. ಬಿ.ಆರ್. ಅಂಬೇಡ್ಕರ್ರವರಿಗಿದ್ದ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಅವರೇನಾದರೂ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟದೇ ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಈ ದೇಶದ ಮೊದಲ ಪ್ರಧಾನಮಂತ್ರಿಯಾಗುತ್ತಿದ್ದರು.
1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಮುಸ್ಲಿಮರಿಗಾಗಿಯೇ ಒಂದು ಪ್ರತ್ಯೇಕ ರಾಷ್ಟ್ರ ನೀಡಬೇಕೆಂದು ಮಹಮದ್ ಅಲಿ ಜಿನ್ನಾರವರ ಬೇಡಿಕೆಯಂತೆ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು ಇದೇ ರೀತಿ ಡಾ. ಅಂಬೇಡ್ಕರ್ರವರು ಮುಸ್ಲಿಮರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದ ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಅಖಂಡ ಭಾರತವನ್ನು ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜಿಸಲು ಬ್ರಿಟಿಷರು ತುದಿಗಾಲ ಮೇಲೆ ನಿಂತಿದ್ದರು. ಆಗ ದಲಿತರಿಗಾಗಿ ವಿಭಜಿಸುವ ಹೊಸ ದೇಶಕ್ಕೆ ಡಾ. ಅಂಬೇಡ್ಕರ್ರವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿಗಳಾಗಿರಬಹುದಿತ್ತು.

ಆದರೆ ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅಪ್ಪಟ ರಾಷ್ಟ್ರೀಯವಾದಿ ಡಾ. ಅಂಬೇಡ್ಕರ್ ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟ ಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದ್ದ ಹಾಗೂ ಬಹುದೊಡ್ಡ ಜ್ಞಾನಿಯಾಗಿದ್ದ ಡಾ. ಅಂಬೇಡ್ಕರ್ರವರು ತನ್ನ ಜ್ಞಾನವನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ದೊಡ್ಡ ಸಿರಿವಂತರಾಗಬಹುದಿತ್ತು. ಆದರೆ ತಮ್ಮ ಇಡೀ ಬದುಕನ್ನು ಅವರ ದುರ್ಬಲ ವರ್ಗದ ಏಳಿಗೆಗೆ ಮೀಸಲಿಟ್ಟರು. ಅವರು ಬದುಕಿರುವವರೆಗೂ ಆರ್ಥಿಕ ಮುಗ್ಗಟ್ಟನ್ನೂ ಎದುರಿಸುತ್ತಿದ್ದರು.

ಕೊನೆಗೆ ಈ ಮಹಾಪುರುಷ ನಿಧನರಾದಾಗ ಅವರ ಪಾರ್ಥೀವ ಶರೀರ ಕೊಂಡೊಯ್ಯಲೂ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಎಲ್ಲರ ಕಣ್ಣಲ್ಲಿ ನೀರು ಹರಿಸುತ್ತದೆ.ಡಾ. ಅಂಬೇಡ್ಕರ್ರವರ ಪಾರ್ಥೀವ ಶರೀರವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್ ಏರ್ಲೈನ್ಸ್ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ 5000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ಮಾಜಿ ಕಾನೂನು ಸಚಿವರೂ ಆಗಿದ್ದ ಅಂಬೇಡ್ಕರ್ರವರ ಅಲ್ಮೆರಾವನ್ನು ತೆಗೆದು ನೋಡಿದಾಗ ಅಲ್ಲಿ ಕೇವಲ 300 ರೂಪಾಯಿಗಳು ಮಾತ್ರ ಇತ್ತು.

ನಂತರ ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್ರವರಲ್ಲಿ ಉಳಿಕೆ ಹಣ ಕೇಳಿದಾಗ ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. ಟಿ.ಬಿ. ಬೋನ್ಸ್ಲೆ ಎಂಬುವರು ತನ್ನ ಅಂಬಾಸಿಡರ್ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು. ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಕೊನೆಗೆ ಅಂದಿನ ಕೇಂದ್ರ ಸರ್ಕಾರವನ್ನು ಕೋರಲಾಯಿತು.

ಆಗ ಕೇಂದ್ರ ಸರ್ಕಾರದ ವಿಮಾನಯಾನ ಖಾತೆ ಸಚಿವರು ಸದ್ಯಕ್ಕೆ ನಿಮ್ಮ ಕೈಯ್ಯಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ ಎಂದು ಹೇಳಿ ವಿಶೇಷ ವಿಮಾನ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಡಾ॥ ಅಂಬೇಡ್ಕರ್ ರವರ ನಿಕಟವರ್ತಿಗಳಾದ ಬಿ.ಕೆ. ಗಾಯಕ್ವಾಡ್ರವರು ಪಾವತಿಸಿದರು.

ಚೈತ್ಯಭೂಮಿ ಮುಂಬೈನ ಸಮುದ್ರ ತೀರದಲ್ಲಿರುವ ದಾದರ್ನಲ್ಲಿ ಡಾ. ಅಂಬೇಡ್ಕರ್ರವರ ಅಂತಿಮ ಸಂಸ್ಕಾರವು ಬೌದ್ಧಧರ್ಮದ ವಿಧಿ ವಿಧಾನಗಳಂತೆ 1956ರ ಡಿಸೆಂಬರ್ 7ರ ಸಂಜೆ 7.30ಕ್ಕೆ ನಡೆಯಿತು. ಆ ಸ್ಥಳವನ್ನು ‘ಚೈತ್ಯಭೂಮಿ’ ಎಂದು ಕರೆಯಲಾಗುತ್ತದೆ. ಆ ಸ್ಥಳದಲ್ಲಿ ಈಗ ಒಂದು ಬಹತ್ ಸ್ಮಾರಕ ನಿರ್ಮಿಸಲಾಗಿದೆ. ಆ ಸ್ಮಾರಕದೊಳಗೆ ಬಾಬಾಸಾಹೇಬರ ಚಿತಾಭಸ್ಮವನ್ನು ಇಡಲಾಗಿದೆ.

”ಬಾಬಾ ! ನಿನ್ನ ಸೇವಕ ನಾನು ರತ್ತು ಬಂದಿದ್ದೇನೆ, ನಾನು ಬಂದಿದ್ದೇನೆ… ಎದ್ದೇಳಿ ಬಾಬಾ… ನನಗೆ ಈ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಆದೇಶ ನೀಡಿ, ನನಗೆ ಕೆಲಸ ಕೊಡಿ, ನಾನು ಟೈಪ್ ಮಾಡಲು ನೀವು ರಾತ್ರಿ ಬರೆದಿರುವ ಹಾಳೆಗಳನ್ನು ನೀಡಿ ಇವುಗಳನ್ನು ಬೇಗ ಟೈಪ್ ಮಾಡಿ ಮುಗಿಸು ಎಂದು ಆಜ್ಞೆ ಮಾಡಿ,” ಎಂದು ಜೋರಾಗಿ ಹೇಳುತ್ತಾ ದುಃಖದಿಂದ ಅತ್ತುಬಿಟ್ಟೆ.

ಸಂಗ್ರಹ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಶಿವಾಜಿ – ಟಿಪ್ಪು,ಛತ್ರಪತಿ – ಮೈಸೂರು ಹುಲಿ; ಸಾಮ್ಯತೆ -ಭಿನ್ನತೆ ಇತಿಹಾಸದ ಪುಟಗಳಿಂದ..!

Published

on

  • ವಿವೇಕಾನಂದ. ಹೆಚ್.ಕೆ.

ಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು ವ್ಯಾಪಾರಸ್ಥರು ಮೊದಲು ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಅದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ಗಳ ಬಳಿ ಬ್ಯಾಂಕ್ ಸ್ಟೇಟ್ ಮೆಂಟ್ ನಿಂದ ಹಿಡಿದು ಎಲ್ಲಾ ಕಾಗದ ಪತ್ರಗಳನ್ನು ಅವರ ಬಳಿ ನೀಡುತ್ತಿದ್ದರು. ಅದನ್ನು ಸಿಎಗಳ ಸಹಾಯಕರು ತೆರಿಗೆ ಇಲಾಖೆ ಮೊದಲೇ ಸಿದ್ದಪಡಿಸಿದ ನಮೂನೆಯಲ್ಲಿ ಕಂಪ್ಯೂಟರ್ ಸಹಾಯದಿಂದ ಎಲ್ಲವನ್ನೂ ಭರ್ತಿ ಮಾಡುತ್ತಿದ್ದರು.

ಕೆಲವು ತೀರಾ ಶಿಸ್ತುಬದ್ಧ ಮತ್ತು ನೇರ ವ್ಯವಹಾರಸ್ಥರನ್ನು ಬಿಟ್ಟರೆ ಉಳಿದವರೆಲ್ಲ ಹಣದ ಕೊಡು ಕೊಳ್ಳುವ ವ್ಯವಹಾರದಲ್ಲಿ ನಗದು ಅಥವಾ ಚೆಕ್ ಅಥವಾ ಕಪ್ಪು ಇದ್ಯಾವದನ್ನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೇಗೋ ಆ ತಕ್ಷಣದ ಸಮಸ್ಯೆ ಬಗೆಹರಿದರೆ ಸಾಕು ಎನ್ನುವ ಮನೋಭಾವದವರೇ ಹೆಚ್ಚಾಗಿದ್ದರು.

ಆಗ ಇನ್ನೂ ನೋಟ್ ಬ್ಯಾನ್, ಜಿಎಸ್ಟಿ, ಡಿಜಿಟಲೀಕರಣ ಜಾರಿಯಾಗಿರಲಿಲ್ಲ.
ಎಲ್ಲಾ ಲೆಕ್ಕಗಳ ಎನ್ಟ್ರಿ ಆದ ಮೇಲೆ ಕಂಪನಿಯ ಜವಾಬ್ದಾರಿಯುತ ವ್ಯಕ್ತಿ ಆಡಿಟರ್ ಬಳಿ ಚರ್ಚಿಸುತ್ತಾನೆ. ಆಗ ಅನೇಕ ಬಾರಿ ಲೆಕ್ಕದ ಪುಸ್ತಕದಲ್ಲಿ ತುಂಬಾ ಲಾಭಾಂಶ ಅಥವಾ ತುಂಬಾ ನಷ್ಟ ತೋರಿಸುತ್ತಿತ್ತು. ಕಾರಣ ವ್ಯವಹಾರದ ಬಹುಪಾಲು ಅವಶ್ಯಕತೆಗೆ ಅನುಗುಣವಾಗಿ ನಗದು ರೂಪದಲ್ಲಿ ಇರುತ್ತಿತ್ತು. ಅದು ದಾಖಲೆಯಲ್ಲಿ ಬರುತ್ತಿರಲಿಲ್ಲ.

ಆಗ ಆಡಿಟರ್ ಆ ವ್ಯಕ್ತಿಯ ಬಳಿ ಕೆಲವು ಆಪ್ಷನ್ ಗಳನ್ನು ಕೊಡುತ್ತಿದ್ದರು. ನಷ್ಟ ತೋರಿಸಿದರೆ ಆಗುವ ಅನುಕೂಲ ಅನಾನುಕೂಲಗಳು ಮತ್ತು ಲಾಭಾಂಶ ತೋರಿಸಿದರೆ ಆಗುವ ಅನುಕೂಲ ಅನಾನುಕೂಲಗಳು ಹಾಗು ಎಷ್ಟು ಲಾಭಾಂಶ ತೋರಿಸಬೇಕು ಅದಕ್ಕೆ ಎಷ್ಟು ಆದಾಯ ತೆರಿಗೆ ಕಟ್ಟಬೇಕು ಎಲ್ಲವನ್ನೂ ತಿಳಿಸುತ್ತಿದ್ದರು. ಆಗ ಮಾಲೀಕ ಒಪ್ಪುವ ಹಣಕ್ಕೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ.

ಅಂದರೆ ಕೂಡುವುದು, ಕಳೆಯುವುದು, ಭಾಗಿಸುವುದು, ಸಾಲ ಪಡೆದಂತೆ ತೋರಿಸುವುದು, ಮುಂಗಡ ಪಡೆದಂತೆ ಮಾಡುವುದು, ಕೃಷಿ ಆದಾಯ ಅಥವಾ ಪತಿ ಪತ್ನಿ ಮಕ್ಕಳ ಹೆಸರಿನಲ್ಲಿ ಉಪ ಕಸುಬು ತೋರಿಸುವುದು ಹೀಗೆ ನಾನಾ ರೀತಿಯ ಅವಕಾಶವನ್ನು ಉಪಯೋಗಿಸಿಕೊಂಡು ಲೆಕ್ಕ ಸರಿ ಮಾಡುತ್ತಾರೆ.

ಕೆಲವು ಲಕ್ಷಗಳ ಆದಾಯವನ್ನು ಸಾಮಾನ್ಯವಾಗಿ ತೆರಿಗೆ ಅಧಿಕಾರಿಗಳು ಹೆಚ್ಚು ತಪಾಸಣೆ ಮಾಡುತ್ತಿರಲಿಲ್ಲ. ನಂತರವೂ ಕೆಲವು ತೊಂದರೆ ಇದ್ದರೆ ಆಡಿಟರ್ ಗಳು ಅಡ್ಜೆಸ್ಟ್ ಮಾಡುತ್ತಿದ್ದರು. ಕೂಲಂಕಷ ಪರಿಶೀಲನೆಯಲ್ಲಿ ಮಾತ್ರ ತಪ್ಪು ಸಿಗುತ್ತಿತ್ತು.

ಡಿಟೋ ಈ ಟಿಪ್ಪು ಮತ್ತು ಶಿವಾಜಿ ಇತಿಹಾಸವನ್ನು ಬಹುತೇಕ ಪಕ್ಷಪಾತಿಗಳು ಆಡಿಟರ್ ಲೆಕ್ಕದಂತೆ ಕೂಡಿ ಕಳೆದು ಭಾಗಿಸಿ ತಮಗೆ ಅನುಕೂಲಕರ ಅಂಶಗಳನ್ನು ಎತ್ತಿಕೊಂಡು ಒಂದು ಅಭಿಪ್ರಾಯ ರೂಪಿಸುತ್ತಿದ್ದಾರೆ ಮತ್ತು ಬರಹಗಳಲ್ಲಿ ಹರಿಯ ಬಿಡುತ್ತಿದ್ದಾರೆ ಅಲ್ಲದೆ ಅದಕ್ಕೆ ಇವರಿಬ್ಬರ ವ್ಯಕ್ತಿತ್ವಗಳು ಸಹ ಸಾಕಷ್ಟು ಅವಕಾಶ ಒದಗಿಸಿವೆ.

ಇಬ್ಬರೂ ಪ್ರಾಂತ್ಯಗಳ ಅಧಿಪತ್ಯಕ್ಕಾಗಿ ಸಂಘರ್ಷಮಯ ವಾತಾವರಣದಲ್ಲಿ ಹೋರಾಡಿದವರು, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳ ನಡುವಿನ ಹೋರಾಟ ಸಹ ಅಂದಿನ ದಿನಗಳಲ್ಲಿ ತಾರಕಕ್ಕೇರಿತ್ತು.

ಆಗಿನ್ನೂ ಭಾರತ ಒಂದು ಒಕ್ಕೂಟ ವ್ಯವಸ್ಥೆಯಾಗಿರಲಿಲ್ಲ. ಹಿಂದೂ ಜೀವನಶೈಲಿಯೇ ಇಲ್ಲಿನ ಜೀವನವಿಧಾನವಾಗಿತ್ತು. ಆಗ ಪರ್ಷಿಯನ್ ಅರಬ್ ಮುಂತಾದ ಇಸ್ಲಾಂ ಧರ್ಮದ ರಾಜರ ದಾಳಿಯಿಂದಾಗಿ ಅವರು ಸಹ ಕೆಲವು ಪ್ರಾಂತ್ಯಗಳನ್ನು ಆಕ್ರಮಿಸಿ ಆಡಳಿತ ನಡೆಸುತ್ತಿದ್ದರು. ಆಗಲೂ ಒಂದಷ್ಟು ಘರ್ಷಣೆಗಳು ನಡೆಯುತ್ತಲೇ ಇದ್ದವು.

ಕ್ರಮೇಣ ಬ್ರಿಟೀಷರು ಸೇರಿ ಫ್ರೆಂಚರು ಡಚ್ಚರು ಪೋರ್ಚುಗೀಸರು ಇಲ್ಲಿಗೆ ವ್ಯಾಪಾರಕ್ಕಾಗಿ ಬಂದು ಆಕ್ರಮಣ ಮಾಡಿದರು.ಆಗ ತ್ರಿಕೋನ ಸಂಘರ್ಷವೂ ಪ್ರಾರಂಭವಾಯಿತು.ಶಿವಾಜಿ ಮುಸ್ಲಿಂ ದೊರೆಗಳ ವಿರುದ್ಧ, ಟಿಪ್ಪು ಬ್ರಿಟಿಷ್ ಮತ್ತು ಹಿಂದೂ ರಾಜರುಗಳ ವಿರುದ್ಧ ಹೆಚ್ಚಾಗಿ ಹೋರಾಡಿದವರು.

ನಾವು ಆಗಿನ ಇತಿಹಾಸವನ್ನು ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ, ಬಿಜೆಪಿ ಕಾಂಗ್ರೆಸ್ ಚುನಾವಣಾ ರಾಜಕೀಯ, ಸಾಮಾಜಿಕ ಜಾಲತಾಣಗಳ ಚರ್ಚೆ, ಬಲಪಂಥ ಎಡಪಂಥ ಮುಂತಾದ ದೃಷ್ಟಿಯಿಂದ ನೋಡಲು ಹೋಗಬಾರದು.

ಅಂದಿನ ಪರಿಸ್ಥಿತಿಯಲ್ಲಿ ಟಿಪ್ಪು ‌ಶಿವಾಜಿ ಮುಂತಾದವರಿಗೆ ತಮ್ಮ ಪ್ರಾಂತ್ಯ ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಯಾವುದೇ ಸಿದ್ದಾಂತ ತತ್ವ ಅವರಿಗೆ ಬೇಕಿರಲಿಲ್ಲ. ತಮ್ಮ ರಾಜ್ಯದ ಉಳಿವಿಗಾಗಿ ಹಿಂದೂ ರಾಜರೋ ಮುಸ್ಲಿಮರೋ ಡಚ್ಚರೋ ಎಂಬುದಕ್ಕಿಂತ ಶತ್ರುವಿನ ಶತ್ರು ನಮ್ಮ ಮಿತ್ರ ಎಂಬುದಷ್ಟೇ ಅವರ ಆಧ್ಯತೆಯಾಗಿತ್ತು. ಟಿಪ್ಪು ಅಥವಾ ಶಿವಾಜಿಯನ್ನು ಯಾವುದೇ ಸಂವಿಧಾನಾತ್ಮಕ ಕಾನೂನು ಕಟ್ಟಿ ಹಾಕುವ ಸ್ಥಿತಿಯಲ್ಲಿ ಇರಲಿಲ್ಲ.

ತಂತ್ರವೋ ಕುತಂತ್ರವೋ ಮೋಸವೋ ತಾಯಿನಾಡೋ ಒಟ್ಟಿನಲ್ಲಿ ತಮ್ಮ ರಾಜ್ಯದ ರಕ್ಷಣೆ ಮಾಡಿಕೊಳ್ಳಬೇಕಿತ್ತು. ಆಗ ತಮ್ಮ ವಿರೋಧಿಗಳನ್ನು ಮುಲಾಜಿಲ್ಲದೆ ಹತ್ಯೆ ಮಾಡಿದ್ದಾರೆ. ಹಾಗೆಯೇ ತಮ್ಮ ಬೆಂಬಲಿಗರಿಗೆ ಒಳಿತನ್ನೂ ಮಾಡಿದ್ದಾರೆ. ಈಗ ನಾವು ಅದನ್ನು ವಿಮರ್ಶೆಗೆ ಒಳಪಡಿಸಿದರೆ ವಿವಿಧ ಅರ್ಥಗಳು ಮೂಡುತ್ತವೆ.

ಎಷ್ಟೋ ಬಾರಿ ಹಿಂದೂ ಹಿಂದೂ, ಹಿಂದೂ ಮುಸ್ಲಿಂ,ಮುಸ್ಲಿಂ ಮುಸ್ಲಿಂ, ಹಿಂದೂ ಮುಸ್ಲಿಂ, ಮುಸ್ಲಿಂ ಬ್ರಿಟಿಷ್ ಹೀಗೆ ಒಡನಾಟ ಮತ್ತು ಕಚ್ಚಾಟ ಇತಿಹಾಸದಲ್ಲಿ ದಾಖಲಾಗಿದೆ. ಇಲ್ಲಿ ತಮ್ಮ ರಾಜ್ಯಗಳ ಸ್ವ ಹಿತಾಸಕ್ತಿ ಮಾತ್ರ ಮುಖ್ಯವಾಗಿರುತ್ತದೆ.

ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಹಾಜಿ ಮಸ್ತಾನ್, ಕರಿಂಲಾಲ್, ವರದರಾಜನ್ ಮೊದಲಿಯಾರ್ ಮುಂತಾದ ಭೂಗತ ಪಾತಕಿಗಳು ತಮ್ಮ ಹಿಡಿತಕ್ಕಾಗಿ ಕೊಲೆಗಳನ್ನು ಮಾಡಿ ತದನಂತರ ಜನಪ್ರಿಯತೆ ಗಳಿಸಲು‌ ತಾನು ಹಿಂದೂ ಡಾನ್, ತಾನು ಮುಸ್ಲಿಂ ಡಾನ್ ಮುಂತಾದ ಹೆಸರುಗಳಿಂದ ಕರೆದುಕೊಳ್ಳುವುದಿಲ್ಲವೇ ಹಾಗೆ ಶಿವಾಜಿ ಟಿಪ್ಪು ಸುಲ್ತಾನ್ ಗಳನ್ನು ಅವರವರ ಬೆಂಬಲಿಗರು ಮತ್ತು ವಿರೋಧಿಗಳು ವರ್ಣಿಸುತ್ತಾರೆ.

ಇದು ಪಕ್ಷ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಬಂದ ನಂತರ ಇತಿಹಾಸವನ್ನು ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಮತಗಳ ದೃಷ್ಟಿಯಿಂದ ನೋಡುವ ಪರಿಪಾಠ ಪ್ರಾರಂಭವಾಗಿದೆ. ಟಿಪ್ಪು ಮತ್ತು ಶಿವಾಜಿ ಮಹಾನ್ ದೇಶಭಕ್ತರೂ ಅಲ್ಲ ಅಥವಾ ‌ದೇಶವಿರೋಧಿಗಳು ಅಲ್ಲ. ತಮ್ಮ ಕಾಲದಲ್ಲಿ ರಾಜ್ಯದ ಹಿತಾಸಕ್ತಿಕಾಗಿ ಧೈರ್ಯದಿಂದ ಶೌರ್ಯದಿಂದ ತಂತ್ರದಿಂದ ಹೋರಾಡಿದ ಒಳಿತು ಕೆಡಕುಗಳು ಎರಡನ್ನೂ ನಿಭಾಯಿಸಿದ ಸ್ಪೂರ್ತಿದಾಯಕ ವೀರರು ಎಂದು ಕರೆಯಬಹುದು.

ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡದೆ ಕೆಲವು ನಿರ್ದಿಷ್ಟ ಘಟನೆಗಳನ್ನು ತಮ್ಮ ತಮ್ಮ ಧರ್ಮದ ಪಕ್ಷದ ಪರವಾಗಿ ತಿರುಚುವುದು ಒಂದು ಚಾಳಿಯಾಗಿದೆ. ಅದು ಅಪಾಯಕಾರಿ.ಇತಿಹಾಸ ಒಂದು ಪಾಠವಾಗಬೇಕೆ ಹೊರತು ರಾಜಕೀಯ ಅಸ್ತ್ರವಾಗಬಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹಾಲಾಯಣ – ಇದು ನನ್ನ ರಾಮಾಯಣ

Published

on

  • ಗಣೇಶ್ ಪ್ರಸಾದ್ ಯಾನಗಹಳ್ಳಿ

ಹಾಲು ನನ್ನನ್ನು ಗೋಳುಹೊಯ್ದುಕೊಂಡಷ್ಟು ಬೇರೆ ಯಾರು ಗೋಳಾಡಿಸಿಲ್ಲ. ಅಮ್ಮ ಮನೆಯಲ್ಲಿದ್ದರೆ ಸುಮ್ಮನೆ ಇರುತ್ತದೆ. ಕಾಫಿ, ಟೀ ಯಾವುದಕ್ಕೆ ಹಾಕಿದರೂ ಏನೂ ತಂಟೆ ಮಾಡುವುದಿಲ್ಲ. ರಾತ್ರಿ ಒಮ್ಮೆ ಕಾಯಿಸಿಟ್ಟರೂ ಸಾಕು ಬೆಳಿಗ್ಗೆ ಮತ್ತೆ ಕಾಫಿಗೆ ರೆಡಿ ಎಂದು ಹಲ್ಲುಕಿರಿಯುತ್ತದೆ. ಅಮ್ಮನಿಲ್ಲ ಎಂದರೆ ಇದು ನನಗೆ ಕೇರ್ ಮಾಡುವುದೇ ಇಲ್ಲ.

ನಾನು ಬೆಳಿಗ್ಗೆ ತಂದು ಕಾಯಿಸಿಟ್ಟರೆ ಸಂಜೆಗೆಲ್ಲಾ ತನ್ನ ಗಟ್ಟಿತನವನ್ನು ಮುದ್ದೆ ಮಾಡಿಕೊಂಡು ಪಾತ್ರೆಯಲ್ಲೇ ಈಜುತ್ತಿರುತ್ತದೆ.(ಒಡೆದು ಹೋಗುತ್ತದೆ) ಮತ್ತೆ ಸಂಜೆಗೆ ಹಾಲು ತರಬೇಕು, ಇದು ಬೆಳಿಗ್ಗೆ ಆಗುವಷ್ಟರಲ್ಲಿ ಅದೇ ಅವತಾರದಲ್ಲಿ ಈಜಾಡಿಕೊಂಡು, ಮಲಗಿರುವ ನನ್ನ ಕೋಪವನ್ನು ಮೆಟ್ಟಿ ಏಳಿಸಿ ಗುಂಡನ(ನಾಯಿಗೆ ಅಮ್ಮ ಇಟ್ಟಿರುವ ಹೆಸರು) ಬಾಯಿಗೆ ಆಹಾರವಾಗುತ್ತದೆ. ಈ ನಾಯಿಯೂ ಹಾಲು ಒಡೆಯಲಿ ಎಂದೇ ಹಾರೈಸುತ್ತಿರುತ್ತದೋ ಏನೋ, ಇಲ್ಲದಿದ್ದರೇ ಒಂದೇ ಲೋಟ ಹಾಕುತ್ತೀನಲ್ಲ ಅನ್ನೋ ಸಿಟ್ಟಿಗೆ.

ಇತ್ತಿಚಿಗೆ ಹಾಲು ಬೇಗ ಒಡೆದು ಹೋಗದಂತೆ ಅದನ್ನು ಕಾಪಾಡುವುದನ್ನು ಕಲಿತಿದ್ದೇನೆ. ಅದು ಸಹಾ ನನ್ನಂತೆ ಹೊಸದೊಂದಷ್ಟು ಐಡಿಯಾಗಳ ಕಲಿತಿದೆ. ಹಾಲನ್ನು ಕಾಯಲು ಇಟ್ಟು ಅದರ ಮುಂದೆ ಎಷ್ಟು ಹೊತ್ತು ನಿಂತಿದ್ದಿರೂ ಉಸಿರು ಬಿಗಿ ಹಿಡಿದುಕೊಂಡು ಪಾತ್ರೆಯಲ್ಲಿಯೇ ಅಲುಗಾಡದೇ ಕುಳಿತಿರುತ್ತದೆ. ಮೆಸೆಜ್ ಬಂದರೆ ಅಥವಾ ಹೊರಗೆ ಯಾರೋ ಕೂಗಿದರೂ ಎಂದು ತಿರುಗಿದರೂ ಸಾಕು. ಬಿಗಿಹಿಡಿದಿದ್ದ ಉಸಿರನ್ನೆಲ್ಲಾ ಒಮ್ಮೆಗೆ ಬಿಟ್ಟು ಪಾತ್ರೆಯಿಂದ ಆಚೆಗೆ ಹಾರಿ ಸ್ಟೌ ಮತ್ತು ನೆಲವನ್ನೆಲ್ಲಾ ತೋಯಿಸಿಬಿಡುತ್ತದೆ.

ಮತ್ತೆಲ್ಲವನ್ನು ಒಮ್ಮೆ ಹಾಲಿಗೆ ಬೈದುಕೊಳ್ಳುತ್ತಾ ಒರೆಸಿ ಮತ್ತೆ ಕಾಫಿ ಅಥವಾ ಟೀ ಮಾಡಲು ಸ್ಟೌ ಹಚ್ಚಲು ತೊಡಗಿದರೆ ಅದು ಹತ್ತುವುದೇ ಇಲ್ಲ. ಉಕ್ಕಿಹರಿದ ಹಾಲು ಸ್ಟೌನ ರಂಧ್ರದೊಳಗೆಲ್ಲ ಜಮಾಯಿಸಿ ನನ್ನನ್ನು ಅಣಕಿಸುತ್ತಿರುತ್ತದೆ. ಮತ್ತಷ್ಟು ಕೋಪ ಮಾಡಿಕೊಂಡು ಇನ್ಮಂದೆ ಹಾಲು ತರುವುದೇ ಇಲ್ಲ ಎಂದು ನಿರ್ಧರಿಸಿದರೆ, ಬಾಯಿ ಸುಮ್ಮನಿರದೇ ಕಾಫೀ ಬೇಕು ಎಂದು ಬೊಂಬಡ ಹೊಡೆಯಲು ಶುರು ಮಾಡುತ್ತದೆ. ಹಾಲು ತಂದರೆ ಅದು ಮಾತ್ರ ದಿನವೂ ನಿಯತ್ತಿನಿಂದ ತನ್ನ ಏಳೇಳು ಜನುಮದ ಹಗೆಯನ್ನು ಸಾಧಿಸಿಯೇ ತೀರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ

Published

on

ಸಾಂದರ್ಭಿಕ ಚಿತ್ರ
  • ವಿವೇಕಾನಂದ. ಹೆಚ್.ಕೆ.

ಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ’,         ಮುಂತಾದ ಕೆಲವು ಪದಗಳನ್ನು ಶಾಲೆಯ ಪುಟ್ಟ ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ – ನೋಡಿ ನಗು ಬಂದಿತು. ಅವರ ಮುಗ್ದತೆ ಖುಷಿ ನೀಡಿತು. ಮಕ್ಕಳ ಉಚ್ಚಾರಣೆಯ ತಪ್ಪುಗಳೇ ಒಂದು ನಿಷ್ಕಲ್ಮಶ ನಗುವನ್ನು ಮನದಲ್ಲಿ ಮೂಡಿಸಿತು.ಮಕ್ಕಳು ಈ ರೀತಿಯ ತಪ್ಪು ಮಾಡಿದರೆ ಅದೇ ಚೆಂದ. ನನ್ನಂತ ಕತ್ತೆಗಳು ತಪ್ಪು ಮಾಡಿದರೆ ಅದು ಅಸಹ್ಯ.

ಆದರೆ ಆ ಮಗುವಿನ ತಪ್ಪನ್ನು ಮಹಾ ಅಪರಾಧ ಎಂಬಂತೆ ಬಿಂಬಿಸುವುದು, ತುಂಬಾ ದಡ್ಡ ಎಂದು ಭಾವಿಸುವುದು, ತಪ್ಪಾಗಿ ಉಚ್ಚರಿಸಿದ್ದಕ್ಕೆ ಹೊಡೆಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯಬಿಟ್ಟು ಮಗುವನ್ನು ಮೂದಲಿಸಿ ಅದರ ಆತ್ಮವಿಶ್ವಾಸ ಕುಂದಿಸುವುದು ಅಕ್ಷಮ್ಯ ಅಪರಾಧ ಮತ್ತು ಅಮಾನವೀಯ ವರ್ತನೆ. ಅದರಲ್ಲೂ ಮಕ್ಕಳಿಗೆ ತಪ್ಪನ್ನು ತಿದ್ದಿ ಮತ್ತೆ ಮತ್ತೆ ತಾಳ್ಮೆಯಿಂದ ಕಲಿಸಬೇಕಾದ ಶಿಕ್ಷಕರೇ ಹೀಗೆ ಅಪಹಾಸ್ಯ ಮಾಡಿದರೆ ಅದು ದೊಡ್ಡ ತಪ್ಪಾಗುತ್ತದೆ.

ಮಕ್ಕಳು ಬಿಡಿ ದೊಡ್ಡವರ ತಪ್ಪುಗಳೇ ಪ್ರತಿ ದಿನವೂ ನಡೆಯುತ್ತಲೇ ಇರುತ್ತದೆ. ನಾನಾಗ ಕಿರುತೆರೆಯ ಧಾರಾವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರಗಳನ್ನು ನಿರಂತರವಾಗಿ ಮಾಡುತ್ತಿದ್ದೆ. ಅನೇಕ ಜನ ಪರಿಚಯದ ಡಾಕ್ಟರುಗಳು, ಇಂಜಿನಿಯರುಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ‌ಸೇರಿ ಕೆಲವರು ನಟಿಸುವ ಅವಕಾಶಗಳನ್ನು ಕೇಳುತ್ತಿದ್ದರು. ಆಗ ಅವರಿಗೆ ಕೆಲವು ಚಿಕ್ಕ ಪಾತ್ರಗಳನ್ನು ಕೊಡುತ್ತಿದ್ದೆವು.

ಅಂತಹ ವಿದ್ಯಾವಂತರುಗಳೇ ನಾಲ್ಕು ಐದು ವಾಕ್ಯಗಳನ್ನು ಒಟ್ಟಿಗೆ ಹೇಳಲು 30/40 ಟೇಕ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗ ಧಾರವಾಹಿಗಳಿಗೆ ಡಬ್ಬಿಂಗ್ ಮಾಡುವುದು ಸ್ವಲ್ಪ ಹೆಚ್ಚು ದುಬಾರಿ ಆಗಿದ್ದುದರಿಂದ ನೇರ ಧ್ವನಿಮುದ್ರಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೆವು.

ಒಬ್ಬ ವ್ಯಕ್ತಿಯಂತು ” ನಮ್ಮ ಅಪ್ಪನಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತದೆ ” ಎಂದು ಹೇಳಲು ಐದು ಗಂಟೆಯಷ್ಟು ಸಮಯ ವ್ಯರ್ಥ ಮಾಡಿದರು. ರಿಹರ್ಸಲ್ ಸಮಯದಲ್ಲಿ ಸರಿಯಾಗಿ ಹೇಳುತ್ತಿದ್ದ ಅವರು ಟೇಕ್ ಸಮಯದಲ್ಲಿ ಲೈಟ್ಸ್ – ಸೌಂಡ್ – ಕ್ಯಾಮರಾ – ಆಕ್ಷನ್ ಎಂದು ಹೇಳುತ್ತಿದ್ದಂತೆ ” ಅಪ್ಪನ ತುದಿಯಲ್ಲಿ…. ಅಪ್ಪನ ತುದಿಯಲ್ಲಿ…. ” ಎಂದು ತೊದಲುತ್ತಿದ್ದರು. ಆಗ ಸಹಜವಾಗಿ ಅಲ್ಲಿದ್ದ ತಾಂತ್ರಿಕ ಸಿಬ್ಬಂದಿ ನಗುತ್ತಿದ್ದರು. ಇದು ಆ ವ್ಯಕ್ತಿಯ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಿಸಿ ಮತ್ತೂ ತಪ್ಪು ಹೇಳುತ್ತಿದ್ದರು.

ಈಗಲೂ ಎಷ್ಟೋ ಜನರಿಗೆ ಅ ಕಾರ ಹ ಕಾರ, ಸ ಕಾರ ಶ ಕಾರ, ಸಂಕ್ರಾಂತಿ ಶಂಕ್ರಾಂತಿ, ಪುದಿನ ಸೊಪ್ಪು ಕುದಿನ ಸೊಪ್ಪು ಮುಂತಾದ ಅನೇಕ ದಿನನಿತ್ಯದ ತಪ್ಪುಗಳು ನಮ್ಮ ನಡುವೆಯೇ ಆಗುತ್ತಿರುತ್ತದೆ. ಆದ್ದರಿಂದ ಆ ಪುಟ್ಟ ಮಗುವಿನ ಮುಗ್ಧ ಕಪ್ಪೆಲುಬು ಉಚ್ಚಾರಣೆಯನ್ನು ಒಂದು ಮುಗ್ಧ ನಗುವಿನಿಂದ ಸ್ವೀಕರಿಸಿಬೇಕೆ ಹೊರತು ಅದನ್ನು ತಪ್ಪು ಎಂದು ಭಾವಿಸಿದಲ್ಲಿ ನಾವು ಅಮಾನವೀಯ ಮನಸ್ಥಿತಿಯ ವ್ಯಕ್ತಿಗಳು ಎಂದೇ ನಮ್ಮನ್ನು ಕರೆದುಕೊಳ್ಳಬೇಕು.

ಕನ್ನಡದಲ್ಲಿ ಸದಾ ಬರೆಯುವ ನಾನು ಹೊಗಳು ಭಟರು ಎಂಬುದನ್ನು ಭಟ್ಟರು ಎಂದೂ, ಆಗುಹೋಗುಗಳನ್ನು ಹಾಗುಹೋಗುಗಳು ಎಂದೂ ಬರೆಯುತ್ತಿದ್ದೆ. ಗೆಳೆಯರು ತಪ್ಪು ತಿದ್ದಿದಾಗ ನನಗೂ ನನ್ನ ಬಗ್ಗೆ ನಗು ಬಂತು.ಯಾವಾಗಲೂ ಸಹಜ ತಪ್ಪುಗಳು ಸ್ವೀಕಾರಾರ್ಹ,
ಉದ್ದೇಶಪೂರ್ವಕ ತಪ್ಪುಗಳು ಶಿಕ್ಷಾರ್ಹ. ಒಂದು ವಾಸ್ತವ ಉದಾಹರಣೆಯೊಂದಿಗೆ ಇದನ್ನು ಮುಗಿಸುತ್ತಿದ್ದೇನೆ.

ಒಂದು ವೇಳೆ ನಾವು ದಾರಿಯಲ್ಲಿ ಹೋಗುವಾಗ ನಮ್ಮ ಎದುರಿಗೆ ಯಾರಾದರೂ ಎಡವಿ ಬಿದ್ದಾಗ ನಮಗೆ ಅರಿವಿಲ್ಲದೆ ನಮ್ಮಲ್ಲಿ ಒಂದು ನಗು ಮೂಡಿದರೆ ಅದು ಸಹಜ. ಆದರೆ ಕೆಲವು ಕ್ಷಣದ ನಂತರವೂ ಆ ವ್ಯಕ್ತಿಯನ್ನು ನೋಡಿ ನಾವು ಗಹಗಹಿಸಿ ನಗುತ್ತಿದ್ದರೆ ಅದು ಕ್ಷಮಿಸಲು ಸಾಧ್ಯವಾಗದ ತಪ್ಪು ಮತ್ತು ಅಮಾನವೀಯ ಹಾಗು ವಿಕೃತ ಮನಸ್ಸು ಅದನ್ನು ಬದಲಾಯಿಸಿಕೊಳ್ಳಬೇಕು.

ಹಾಗೆಯೇ, ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಗು ಎಡವಿ ಬಿದ್ದವರನ್ನು ನೋಡಿ ಜೋರಾಗಿ ನಕ್ಕರೂ ಅದು ದೊಡ್ಡ ತಪ್ಪಲ್ಲ. ಕ್ಷಮೆಗೆ ಅರ್ಹ. ಆದರೆ ಆ ಸಮಯದಲ್ಲಿ ಮಕ್ಕಳಿಗೆ ಒಂದು ಪ್ರೀತಿ ಪೂರ್ವಕ ತಿಳಿವಳಿಕೆ ನೀಡಬೇಕು. ” ನೀನು ಬಿದ್ದಾಗ ಯಾರಾದರೂ ನಕ್ಕರೆ ನಿನಗೆ ಕೋಪ ಬರುವುದಿಲ್ಲವೇ ಆದ್ದರಿಂದ ನಗಬಾರದು ” ಎಂದು ಅರ್ಥಮಾಡಿಸಬೇಕು. ಮುಂದೆ ಮಗು ದೊಡ್ಡದಾದ ಮೇಲೆ ನೆನಪಿಸಿಕೊಳ್ಳಬಹುದು.

ಮಕ್ಕಳನ್ನು ಮಕ್ಕಳಂತೆ ನೋಡಿ, ನೀವು ದೊಡ್ಡವರಾಗಿದ್ದರೂ….!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending